ಮಂಗಳೂರು : ಕಲ್ಲಚ್ಚು ಪ್ರಕಾಶನ ಹಾಗೂ ಡಯಟ್ ಮಂಗಳೂರು ಆಶ್ರಯದಲ್ಲಿ ಸಾಹಿತಿ ಮನೋಜ್ ಕುಮಾರ್ ಶಿಬಾರ್ಲ ಇವರ ‘ಕಾಲು ಸಾವಿರ’ ಚುಟುಕುಗಳ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 22 ಏಪ್ರಿಲ್ 2025ರ ಮಂಗಳವಾರದಂದು ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಇಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಸಂಘಟಕ ಹಾಗೂ ಸಾಹಿತಿ ಶಾಂತಾರಾಮ ಶೆಟ್ಟಿ ಮಾತನಾಡಿ “ಸಾಹಿತಿಯಾದವರು ಪದಗಳ ಬಳಕೆಯ ಬಗ್ಗೆ ಎಚ್ಚರ ವಹಿಸಬೇಕು. ತಪ್ಪುಗಳು ನಡೆದಲ್ಲಿ ಸಾಹಿತ್ಯವೇ ಅನರ್ಥವಾಗುತ್ತದೆ. ಬರೆಯುವ ಸಾಹಿತ್ಯದಲ್ಲಿ ಸಾಲುಗಳಿಗಿಂತ ಸೋಲ್(ಆತ್ಮ) ಮುಖ್ಯವಾಗಿದೆ. ಬರೆದದ್ದೆಲ್ಲ ಕವನವಾಗಲು ಸಾಧ್ಯವಿಲ್ಲ. ಬರವಣಿಗೆಗೆ ಸ್ವಜ್ಞಾನ ಅನುಭವ ಅಗತ್ಯ. ಸಾಹಿತ್ಯ ಬರೆಯುವ ಮೊದಲು ಓದುವ ಹವ್ಯಾಸ ಹೊಂದಿರಬೇಕು. ಹತ್ತು ಕೃತಿಗಳನ್ನು ಓದಿ ಅರ್ಥೈಸಿದ ಬಳಿಕ ಒಂದು ಕೃತಿ ಬರೆಯುವ ಪ್ರಯತ್ನ ಮಾಡಬೇಕು. ಓದುಗನನ್ನು ಮನದಟ್ಟು ಮಾಡುವಂತೆ ಬರೆಯುವುದೇ ಸಾಹಿತ್ಯ. ಪ್ರತೀ ಸಾಲಿನಲ್ಲೂ ಹೊಸತನದೊಂದಿಗೆ ಭಿನ್ನ ಅರ್ಥ ಹಾಗೂ ಸಂದೇಶ ನೀಡುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನಿಸಬೇಕಾಗಿದೆ” ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮೀ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಡಾ ಈ ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಶಿಬಾರ್ಲ ಪ್ರಸ್ತಾವಿಕವಾಗಿ ಮಾತನಾಡಿ, ಸಾಹಿತಿ ವ. ಉಮೇಶ ಕಾರಂತ ಕೃತಿ ಪರಿಚಯ ಮಾಡಿದರು. ಸಾಹಿತಿ ನಳಿನಾಕ್ಷಿ ಉದಯರಾಜ್, ದ. ಕ. ಚು. ಸಾ. ಪ. ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿ, ಹಿರಿಯ ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಉಪಸ್ಥಿತರಿದ್ದರು.ಸಾಹಿತಿ ಹಾಗೂ ಪ್ರಕಾಶಕರಾದ ಮಹೇಶ್ ಆರ್. ನಾಯಕ್ ಸ್ವಾಗತಿಸಿ, ಸಾಹಿತಿ ವಿಜಯಲಕ್ಷ್ಮೀ ಕಟೀಲು ವಂದಿಸಿದರು. ಎನ್. ಸುಬ್ರಾಯ ಭಟ್ ಗೋಷ್ಠಿ ನಿರ್ವಹಿಸಿದರು.