ಕಾಸರಗೋಡು : ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಎರಡು ಹೊಸ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 11 ನವೆಂಬರ್ 2024ರ ಸೋಮವಾರ ಸಂಜೆ ಎದುರ್ತೋಡಿನ ‘ಸೀ ಕ್ಯೂಬ್’ ಇಲ್ಲಿ ನಡೆಯಿತು.
ಪ್ರಸನ್ನಾ ಅವರ ಹನ್ನೊಂದನೇ ಕೃತಿ ‘ಬಾನಂಚಿನ ಹೊಸಗಾನ’ ಪುಸ್ತಕವನ್ನು ಭಾರತೀಯ ಭೂ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ ಇ. ವಿ. ಹಾಗೂ ಹನ್ನೆರಡನೇ ಕೃತಿ ‘ಪೋಗದೆ ಇರೆಲೋ ರಂಗ…’ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಲೋಕಾರ್ಪಣೆಗೊಳಿಸಿದರು.
ಸರಳ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ “ಕಾಸರಗೋಡು ಎಂದಿಗೂ ಕನ್ನಡದ ಕಂಪನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಅನೇಕ ಘಟಾನುಘಟಿಗಳು ಕನ್ನಡಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಯಾವತ್ತೂ ಕಾರ್ಯಕ್ರಮಗಳು ಹೃದಯಕ್ಕೆ ಹತ್ತಿರವಾಗಿ, ಮನಸ್ಸಿಗೆ ಸಂತೋಷ ನೀಡುವಂತಿರಬೇಕು. ಇಂತಹ ಸನ್ನಿವೇಶದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳುತಿರುವುದು ಸಂತಸ ತಂದಿದೆ. ಪ್ರಸನ್ನಾ ವಿ. ಚೆಕ್ಕೆಮನೆ ಬಹಳ ಆಸಕ್ತಿಯಿಂದ ಕೃತಿಯನ್ನು ರಚಿಸಿದ್ದಾರೆ. ಇವರ ಸಾಧನೆ ಎಲ್ಲರೂ ಮೆಚ್ಚುವಂತಾಗಿದೆ.” ಎಂದರು.
ಮುಖ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ ಪ್ರಕಾಶ್ ಇಳಂತಿಲ ಮಾತನಾಡಿ “ಸೃಜನಶೀಲವಾದಂತಹ ಮನಸ್ಸಿನೊಂದಿಗೆ ಸಾಹಿತ್ಯವನ್ನು ಮೆಚ್ಚುವ ಕೃತಿಗಾರರ ಸಾಧನೆ ಸಾರ್ಥಕತೆಯನ್ನು ಕಂಡಿದೆ. ಇವರ ಕೃತಿ ಸಾಹಿತ್ಯ ಆಸಕ್ತಿ ಇಲ್ಲದವರನ್ನೂ ಅತ್ತ ಆಕರ್ಷಿಸುವಂತಹ ಬರಹವಾಗಿದೆ.” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆಯನ್ನು ರಮಾ ಎಚ್. ಭಟ್ ಹಾಗೂ ಶುಭಾ ನಿರ್ವಹಿಸಿದರು. ಮಾನಸ ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದಲ್ಲಿ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ, ತಂತ್ರಿವರ್ಯ ಶಂಕರನಾರಾಯಣ ಶರ್ಮಾ ಗೋಸಾಡ, ಗಂಗಾಧರ್ ತೆಕ್ಕೆ ಮೂಲೆ, ವೆಂಕಟಕೃಷ್ಣ ಭಟ್, ರಮಾ, ಶುಭ, ರಾಜಶ್ರೀ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.