ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನ ಕನ್ನಡ ಉಪನ್ಯಾಸಕ, ಯುವ ಬರಹಗಾರ, ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕ, ನಿರೂಪಕ ಪ್ರದೀಪ್ ಡಿ.ಎಮ್. ಹಾವಂಜೆ ಇವರ ಸಣ್ಣ ಕಥಾ ಸಂಕಲನ ‘ಮುಂಡ್ರು’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 07-05-2024ರಂದು ಕಟೀಲು ಪ್ರಥಮ ದರ್ಜೆ ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ವಿ. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ವಿದ್ಯಾರ್ಥಿನಿ ಲಾವಣ್ಯ ಮತ್ತು ಶ್ರೇಯ ಇವರ ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು. ಪೂಜ್ಯ ವೇದಮೂರ್ತಿ ಶ್ರೀ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿ ಕಟೀಲು ವಿದ್ಯಾ ಸಂಸ್ಥೆ ಕನ್ನಡ-ಸಾಹಿತ್ಯ ಕಲೆಗಳಿಗೆ ನೀಡುತ್ತಿರುವ ಕಾಳಜಿ, ಸಹಕಾರ ಬಗ್ಗೆ ಹಾಗೂ ನುಡಿ ಹಬ್ಬದ ಸಂಭ್ರಮವನ್ನು ತಿಳಿಸಿ, ಉಪನ್ಯಾಸಕ ಪ್ರದೀಪ್ ಹಾವಂಜೆಯವರ ಸಣ್ಣ ಕಥಾ ಸಂಕಲನ ‘ಮುಂಡ್ರು’ ಇದು ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನವಾಗಲೆಂದು ಆಶಿಸಿ ಶುಭ ಹಾರೈಸಿದರು.
ನಂತರ ಹಿರಿಯ ಸಾಹಿತಿ ಶ್ರೀ ಮುರುಳೀಧರ ಉಪಾಧ್ಯಾಯ, ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ದೇವು ಹನೆಹಳ್ಳಿ, ಕ್ರೀಡಾ ಭಾರತಿಯ ಅಧ್ಯಕ್ಷರು, ನಿವೃತ್ತ ಶಿಕ್ಷಕರಾರ ಶ್ರೀ ಕಾರಿಯಪ್ಪ ರೈ ಅವರನ್ನು, ಪ್ರದೀಪ್ ಡಿ.ಎಮ್. ಹಾವಂಜೆ, ಶ್ರೀಮತಿ ಚೈತ್ರ ಎಸ್.ಎಸ್., ಪುಟಾಣಿ ಆದ್ಯಾ ಅವರನ್ನು ಶ್ರೀ ದೇವಿಯ ಶೇಷವಸ್ತ್ರ ಮತ್ತು ಸ್ಮರಣಿಕೆಯೊಂದಿಗೆ ಗೌರವಿಸಿದರು.
ಹಿರಿಯ ಸಾಹಿತಿ ನಿವೃತ್ತ ಕನ್ನಡ ಪ್ರೊಫೆಸರ್ ಶ್ರೀ ಮುರುಳೀಧರ ಉಪಾಧ್ಯಾಯರು ಕೃತಿ ಬಿಡುಗಡೆಗೊಳಿಸಿ ‘ಮುಂಡ್ರು’ ಸಣ್ಣ ಕಥಾ ಸಂಕಲನದ ಕೃತಿ ವಿಮರ್ಶೆ ಮಾಡುತ್ತಾ ಉಪನ್ಯಾಸಕ ಪ್ರದೀಪ್ ಅವರ ಮೂಲ ಆಶಯವನ್ನು ತಿಳಿಸುತ್ತಾ ಕಥೆಯ ಸಾಮಾಜಿಕ ಬದ್ಧತೆಯನ್ನು ಹಾಗೂ ಕಥಾ ಸಂಕಲನದ ಉಳಿದ ಕಥೆಗಳಾದ ಸೀತಕ್ಕ, ಕಂಡು ಕಾಣದವರು, ವಯಸ್ಸು-ಮನಸ್ಸು, ಕಥೆಯ ಆಶಯವನ್ನು ತಿಳಿಸಿದರು. ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸ ಪ್ರಶ್ನೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನವನ್ನು ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೇಖಕ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಶ್ರೀ ದೇವು ಹನೆಹಳ್ಳಿಯವರು ವಿದ್ಯಾರ್ಥಿಗಳ ಅಮೂಲ್ಯವಾದ ಜೀವನದ ಬಗ್ಗೆ ತಿಳಿಸಿ, ಭಾವನಾತ್ಮಕ ಜೀವನಕ್ಕೆ ಬೆಲೆಯನ್ನು ನೀಡಬೇಕಾಗಿದೆ. ಬರೆಯುವ ಓದುವ ಸಂಸ್ಕೃತಿ ನಮ್ಮೆಲ್ಲರ ನೋವು ಒತ್ತಡಗಳನ್ನು ನಿವಾರಿಸುವ ಶಕ್ತಿ ಸಾಮಾರ್ಥ್ಯ ಹೊಂದಿದ್ದು, ಜೀವ-ಜೀವನ ಅಮೂಲ್ಯವಾದದ್ದು ಎಂದು ತಿಳಿಸುತ್ತಾ ‘ಮುಂಡ್ರು’ ಕಥಾ ಸಂಕಲನದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ, ಕ್ರೀಡಾ ಭಾರತೀ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈ ಅವರು ವಿದ್ಯಾಸಂಸ್ಥೆಯ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಆಸಕ್ತಿಯನ್ನು ಮತ್ತು ಕ್ರೀಡಾ ಭಾರತೀಯ ಕಾರ್ಯಕ್ರಮದ ಬಗ್ಗೆ ತಿಳಿಸಿ ಹೇಳಿದರು. ಪ್ರದೀಪ್ ಹಾವಂಜೆಯವರ ಸಾಹಿತ್ಯ ಕಲೆ ಶಿಕ್ಷಕ ವೃತ್ತಿಯ ಬಗ್ಗೆ ಕಳೆದ ಎಳು ವರುಷಗಳಲ್ಲಿ ಸಹೋದ್ಯೋಗಿಯಾಗಿ ಅವರನ್ನು ಕಂಡ ಬಗ್ಗೆ ವಿವರಿಸಿದರು. ‘ಮುಂಡ್ರು’ ಸಣ್ಣ ಕಥಾ ಸಂಕಲನದ ಮುಖಪುಟವನ್ನು ಚಿತ್ರಿಸಿದ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಚಿತ್ರಕಲಾ ಶಿಕ್ಷಕ ಶ್ರೀ ಉಮೇಶ್ ನೆಂತಿಕಲ್ಲು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪ್ರತಿಸ್ಪಂದನೆಯೊಂದಿಗೆ ಮಾತಿಗಿಳಿದ ಕನ್ನಡ ಉಪನ್ಯಾಸಕ, ಕೃತಿಯ ಕರ್ತೃ ಪ್ರದೀಪ್ ಡಿ.ಎಮ್. ಹಾವಂಜೆಯವರು ‘ಮುಂಡ್ರು’ ಸಣ್ಣ ಕಥಾಸಂಕಲನ ಬರೆಯಲು ಪ್ರೇರಣೆಯಾದ ಘಟನೆಗಳನ್ನು ವಿವರಿಸಿದರು. ಕನ್ನಡ ಸಾಹಿತ್ಯ ಕಲೆಗಳ ಬಗ್ಗೆ ಹೇಳುತ್ತಾ ಕಟೀಲು ವಿದ್ಯಾ ಸಂಸ್ಥೆಯಲ್ಲಿ ನಡೆಸುವ ಭ್ರಮರ ಇಂಚರ ನುಡಿ ಹಬ್ಬ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು. ಕನ್ನಡ ಸಾಹಿತ್ಯ ಕವನ, ಕಥೆ, ಪ್ರಬಂಧ, ಗಾಯನ, ಭಾಷಣ, ಲೇಖನವನ್ನು ಬರೆದು ಯುವ ಬರಹಗಾರರ ಹಾದಿಯಲ್ಲಿ ಸಾಗುತ್ತಿರುವ ಒಟ್ಟು ಇಪ್ಪತ್ತು ವಿದ್ಯಾರ್ಥಿಗಳನ್ನು ಹಿರಿಯ ಸಾಹಿತಿ ಹಾಗೂ ಗಣ್ಯರ ಮೂಲಕ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲರಾದ ಡಾ. ವಿಜಯ್ ವಿ. ಅವರು ಕಥಾ ಸಂಕಲನ ಬಿಡುಗಡೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು. ಹೂವಿನ ಗಿಡವನ್ನು ಸ್ಮರಣಿಕೆಯಾಗಿ ವಿತರಣೆ ಮಾಡಲಾಯಿತು. ವಿದ್ಯಾರ್ಥಿನಿ ದಿಶಾ ಶೆಟ್ಟಿ ಹಾಗೂ ರಂಜನಾ ಭಟ್ ಇವರು ಸಾಹಿತಿ ಮತ್ತು ಲೇಖಕರನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಕಟೀಲು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಚಂದ್ರಶೇಖರ್ ಭಟ್, ಸಮಾಜಸೇವಕ ಶ್ರೀ ಶೇಖರ್ ಹಾವಂಜೆ, ಇಂಗ್ಲೀಷ್ ಉಪನ್ಯಾಸಕ ಶ್ರೀ ಪೊನ್ನಣ್ಣ, ಶ್ರೀಮತಿ ಮಾಲತಿ ಮೇಡಂ, ಉಪನ್ಯಾಸಕ ರೋಹಿತ್ ಕಡಬ, ವಾಣಿಜ್ಯ ವಿಭಾಗದ ಉಪನ್ಯಾಸಕರುಗಳು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪ್ರದೀಪ್ ಹಾವಂಜೆಯವರ ಕುಟುಂಬಸ್ಥರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್. ಹಾವಂಜೆ ಸ್ವಾಗತಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಪದ್ಮನಾಭ ಮರಾಠೆ ನಿರೂಪಿಸಿ, ವಂದಿಸಿದರು. ಶಿಕ್ಷಕೇತರ ಸಿಬ್ಬಂದಿಗಳಾದ ಶ್ರೀ ಲೋಕಯ್ಯಾ ಸಹಕರಿಸಿದರು.