ತೀರ್ಥಹಳ್ಳಿ : ಲೇಖಕ ಕಡಿದಾಳ್ ಪ್ರಕಾಶ್ ಇವರು ಬರೆದಿರುವ ‘ನನ್ನೂರಿನ ಶ್ರೀಸಾಮಾನ್ಯರು’ ಕೃತಿಯು ದಿನಾಂಕ 03 ಮೇ 2025ರಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಜರಗಿದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಪದ್ಮಶ್ರೀ ಪುರಸ್ಕೃತ ಹಾಗೂ ಸ್ವರ್ಣಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಕೃತಿ ಬಿಡುಗಡೆಗೊಳಿಸಿ “ಈ ಕೃತಿಯಲ್ಲಿ ಶ್ರೀಸಾಮಾನ್ಯರ ಕುರಿತ ನೋಟವನ್ನು ಬದಲಿಸುವ ಮತ್ತು ವಿಸ್ತರಿಸುವ ಸೊಗಸಾದ ಚಿತ್ರಣವಿದೆ. ಶ್ರೀಸಾಮಾನ್ಯರಲ್ಲೂ ಅಸಾಮಾನ್ಯ ಗುಣ ವಿಶೇಷಣಗಳಿರುವುದು ಚೆನ್ನಾಗಿ ಮೂಡಿಬಂದಿದೆ” ಎಂದರು.
ಇದೇ ವೇದಿಕೆಯಲ್ಲಿ ‘ನಾ ಕಂಡಂತೆ ತೇಜಸ್ವಿ – ಶಾಮಣ್ಣ’ ಕೃತಿಯ ಪರಿಷ್ಕೃತ ಆವೃತ್ತಿ (3ನೇ ಮುದ್ರಣ)ಯನ್ನು ಲೇಖಕ – ಪ್ರಕಾಶಕ ಜಿ.ಎನ್. ಮೋಹನ್ ಇವರು ಬಿಡುಗಡೆಗೊಳಿಸಿ “ಕಿಟಕಿಗಳ ಮೂಲಕ ತಮ್ಮ ತಮ್ಮ ತೇಜಸ್ವಿಯನ್ನು ಕಾಣುವುದಕ್ಕೆ ಎಲ್ಲರಿಗೂ ಈ ಕೃತಿ ಸಹಾಯವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ‘ಕಟ್ಟುವ ಹಾದಿಯಲ್ಲಿ… ಕುವೆಂಪು ಪ್ರತಿಷ್ಟಾನ: ಉಗಮ-ವಿಕಾಸ’ ಕೃತಿಯ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು ವಹಿಸಿದ್ದರು. ಅರವಿಂದ್ ಪ್ರಾರ್ಥಿಸಿ, ಕಡಿದಾಳ್ ಪ್ರಕಾಶ್ ಸ್ವಾಗತಿಸಿ, ಸಸಿತೋಟ ದಯಾನಂದ್ ವಂದಿಸಿ, ಡಾ. ಬಿ.ಆರ್. ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.