ಕುಂದಾಪುರ : ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯದ ಮೇಲಿನ ಅಪಾರ ಒಲವು, ಕನ್ನಡ ಭಾಷೆಯ ಬಗೆಗಿನ ಅಚಲ ಅಭಿಮಾನ ಹಾಗೂ ಸೃಜನಶೀಲ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸುತ್ತಿರುವ ಪ್ರತಿಭಾವಂತ ಯುವ ಕವಿ ಸೃಜನ್ ಎನ್. ಗಾಣಿಗ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದಬಾರಂದಾಡಿಯವರು. ಪ್ರಸ್ತುತ ಪ್ರಥಮ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಓದಿನಲ್ಲಿಯೂ ಪ್ರತಿಭಾವಂತರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆಯತ್ತ ಹೆಜ್ಜೆಯಿಡುತ್ತಿದ್ದಾರೆ. ಬಾಲ್ಯದಿಂದಲೇ ಕವನ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಸೃಜನ್ ಅವರು, ಹಟ್ಟಿಅಂಗಡಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿಯೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ತಮ್ಮ ಸಾಹಿತ್ಯಿಕ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಕೇವಲ ಅಕ್ಷರಗಳನ್ನು ಪೋಣಿಸುವುದಷ್ಟೇ ಅಲ್ಲದೆ, ಭಾವನೆಗಳಿಗೆ ಕಾವ್ಯದ ರೂಪ ನೀಡಿ ಓದುಗರ ಹೃದಯವನ್ನು ತಲುಪಬೇಕೆಂಬ ಆಶಯ ಹೊಂದಿರುವ ಸೃಜನ್ ಅವರ ಸಾಹಿತ್ಯ ಪಯಣಕ್ಕೆ ಇದೀಗ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗುತ್ತಿದೆ. ಅವರು ರಚಿಸಿರುವ ಚೊಚ್ಚಲ ಕವನ ಸಂಕಲನ ‘ಮನದಂಗಳದ ಮಲ್ಲಿಗೆ’ ಪುಸ್ತಕವು ದಿನಾಂಕ 29 ನವೆಂಬರ್ 2026ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಸಾಹಿತ್ಯಿಕ ಸಮಾರಂಭದ ಅಧ್ಯಕ್ಷತೆಯನ್ನು ನರೇಂದ್ರ ಕೋಟ ಅವರು ವಹಿಸಲಿದ್ದು, ರಾಮ ದೇವಾಡಿಗ, ಗಣೇಶ್ ಚಲ್ಲೆಮಕ್ಕಿ ಹಾಗೂ ಡಾ. ಪಾರ್ವತಿ ಐತಾಳ್ ಇವರು ಕೃತಿಯನ್ನು ಬಿಡುಗಡೆಗೊಳಿಸಿ ಅನಾವರಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾಡಿನ ಹಲವು ಗಣ್ಯ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದು ಯುವ ಕವಿಯ ಸಾಹಿತ್ಯ ಸಾಧನೆಗೆ ಪ್ರೋತ್ಸಾಹ ನೀಡಲಿದ್ದಾರೆ. ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯದ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿರುವ ಸೃಜನ್ ಎನ್. ಗಾಣಿಗ ಇವರ ಈ ಚೊಚ್ಚಲ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಭರವಸೆಯಾಗಿ ಮೂಡಿಬರಲಿ. ‘ಮನದಂಗಳದ ಮಲ್ಲಿಗೆ’ ಕೇವಲ ಪುಸ್ತಕವಾಗಿ ಉಳಿಯದೆ, ಪ್ರತಿಯೊಬ್ಬ ಓದುಗರ ಮನದಂಗಳದಲ್ಲಿ ಭಾವನೆಗಳ ಕಂಪನ್ನು ಹರಡಿ, ಅಕ್ಷರಗಳ ಮೂಲಕ ಹೃದಯಗಳನ್ನು ಬೆಸೆಯುವ ಸುಂದರ ಕೃತಿಯಾಗಲಿ ಎಂಬುದು ಸಾಹಿತ್ಯಾಭಿಮಾನಿಗಳ ಹಾರೈಕೆ.

