ಮಡಿಕೇರಿ : ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 81ನೇ ಪುಸ್ತಕ ಹಾಗೂ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದಿರುವ 6ನೇ ಪುಸ್ತಕ ‘ಪೂ ಬಳ್ಳಿ’ ಕೃತಿಯ ಬಿಡುಗಡೆ ಕಾರ್ಯಕ್ರಮವು ದಿನಾಂಕ 19-01-2024ರಂದು ನಡೆಯಿತು.
ಕೃತಿ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡುತ್ತಾ, “ಜ್ಞಾನ ಸಂಪಾದನೆ ಮತ್ತು ಸಂಸ್ಕೃತಿಯ ಉಳಿವಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿಶಿಷ್ಟವಾಗಿರುವ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ಅನೇಕರು ಕೊಡವ ಪುಸ್ತಕವನ್ನು ಹೊರತರುತ್ತಿದ್ದಾರೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಪೂರ್ವಜರು ನೀಡಿರುವ ಸಂದೇಶವನ್ನು ಲೇಖಕಿ ತಮ್ಮ ‘ಪೂ ಬಳ್ಳಿ’ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಂತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, “ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ, ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಎಲ್ಲರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ಬರೆಯುವುದೇ ಉತ್ತಮ ಸಾಹಿತ್ಯ. ಎಲ್ಲರ ಜೀವನಕ್ಕೂ ಅನ್ವಯವಾಗುವ ರೀತಿಯ ಬರಹಗಳು ಹೆಚ್ಚು ಹೆಚ್ಚು ರಚನೆಯಾಗಬೇಕು. ವಿಸ್ತಾರವಾದ ವಿಚಾರವನ್ನು ಚುಟುಕಾಗಿ ಕವನದಲ್ಲಿ ವಿವರಿಸುವ ಪ್ರಯತ್ನವನ್ನು ‘ಪೂ ಬಳ್ಳಿ’ ಪುಸ್ತಕದ ಲೇಖಕಿ ಫ್ಯಾನ್ಸಿ ಮುತ್ತಣ್ಣ ಮಾಡಿದ್ದಾರೆ. ಸಾಂಸಾರಿಕ ವಿಚಾರವನ್ನು ವಿನೋದವಾಗಿ ವಿವರಿಸಿದ್ದಾರೆ. ಇದು ಓದುಗರಿಗೆ ಸಂತೋಷವನ್ನು ನೀಡುತ್ತದೆ. ಯಾವುದೇ ಲಾಭದ ನಿರೀಕ್ಷೆಗಳಿಲ್ಲದೆ ದಾಖಲೆಯ 81 ಪುಸ್ತಕಗಳನ್ನು ಹೊರ ತರುವ ಮೂಲಕ ಸಾಹಿತ್ಯಾಭಿಮಾನವನ್ನು ಮೆರೆಯುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನ ಸಿಗಲಿ. ಬರೆಯುವ ಹವ್ಯಾಸ ಹೊಂದಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪುಸ್ತಕಗಳನ್ನು ಹೊರ ತಂದು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೂ ಅಯ್ಯಪ್ಪ ಕಾರಣಕರ್ತರಾಗುತ್ತಿದ್ದಾರೆ. ಸಾಹಿತ್ಯಕ್ಕಾಗಿ ದುಡಿಯುವವರಿಗೆ ಅಕಾಡೆಮಿಯಲ್ಲಿ ಸ್ಥಾನಮಾನ ಸಿಗಬೇಕು” ಎಂದರು.
‘ಪೂ ಬಳ್ಳಿ’ ಪುಸ್ತಕದ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, “ಬರಹಗಾರರನ್ನು ಪ್ರೋತ್ಸಾಹಿಸಿ, ಮುಖ್ಯ ವಾಹಿನಿಗೆ ತಂದಾಗ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಇದು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟ ಅವರು, ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ ಕೊಡವ ಮಕ್ಕಡ ಕೂಟ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಸಾಹಿತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, “ಬರಹಗಾರರಿಗೆ ತಾವು ಬರೆದ ಬರಹ ಪುಸ್ತಕದ ರೂಪದಲ್ಲಿ ಹೊರಬರಬೇಕೆನ್ನುವುದು ಕನಸುಗಳಿರುತ್ತದೆ. ಉತ್ಸಾಹಿ ಬರಹಗಾರರನ್ನು ಗುರುತಿಸಿ ಕೊಡವ ಮಕ್ಕಡ ಕೂಟ ಪ್ರೋತ್ಸಾಹಿಸುತ್ತಾ ಬಂದಿರುವುದರಿಂದ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ಸಿಗುವಂತಾಗಲಿ” ಎಂದು ಹಾರೈಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ “ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೂಟ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 80 ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ 81ನೇ ಪುಸ್ತಕ, ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಬರೆದಿರುವ ‘ಪೂ ಬಳ್ಳಿ’ ಕೊಡವ ಪುಸ್ತಕ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸಲಾಗುವುದು” ಎಂದರು. ವ್ಯಾಲಿ ಡ್ಯೂ ಕೊಡವ ಕಲ್ಬರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣರ ಕೊಡವ ಭಾಷೆಯ ‘ಪಾರು’ ಕಾದಂಬರಿ, ‘ಬದ್ಕ್ರ ನಡೆ’ ಲೇಖನ ಸಂಗ್ರಹ ಪುಸ್ತಕ, ಕನ್ನಡದ ‘ಕಾಡಿದ ನೆನಪುಗಳು’, ‘ಕಾಡು ಹಕ್ಕಿಯ ಹಾಡು’, ‘ಕನವರಿಕೆ’ ಎನ್ನುವ ಕಥೆ ಕವನ ಸಂಕಲನ ಈಗಾಗಲೇ ಬಿಡುಗಡೆಗೊಂಡಿದ್ದು, ‘ಪೂ ಬಳ್ಳಿ’ ಆರನೇ ಪುಸ್ತಕವಾಗಿದೆ.