ಧಾರವಾಡ : ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ, ಸಂತೋಷ ಲಾಡ ಫೌಂಡೇಶನ್ ಹಾಗೂ ಶರ್ವಿಲ್ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಯುವಲೇಖಕ ಶ್ರೀ ಕರಣ್ ಲಾಡ ಇವರ ‘ಗ್ಲಿಚ್ ಇನ್ ದ ಸಿಮುಲೇಶನ್’ ಗ್ರಂಥದ ಕನ್ನಡ ಅನುವಾದ ‘ಪ್ರತ್ಯನುಕರಣೆಯ ನ್ಯೂನತೆಗಳು’ ಎಂಬ ಕೃತಿಯ ಬಿಡುಗಡೆ ಸಮಾರಂಭವನ್ನು ದಿನಾಂಕ 11 ಸೆಪ್ಟೆಂಬರ್ 2024ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ದಿವ್ಯಸನ್ನಿಧಾನವನ್ನು ಪರಮಪೂಜ್ಯ ಶ್ರೀ ತೋಂಟದ ನಿಜಗುಣಪ್ರಭು ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಪುಸ್ತಕವನ್ನು ಡಾ. ವೀರಣ್ಣ ರಾಜೂರ ಇವರು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕ ಪರಿಚಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಪಿ. ರಮೇಶ ಇವರು ನಿರ್ವಹಿಸಲಿದ್ದು, ಮೂಲ ಲೇಖಕ ಶ್ರೀ ಕರಣ್ ಲಾಡ ಇವರೊಂದಿಗೆ ಅನುವಾದಕರಾದ ಡಾ. ವಿನಾಯಕ ನಾಯಕ ಮತ್ತು ಡಾ. ಲೋಹಿತ ನಾಯ್ಕರ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂತೋಷ ಲಾಡ ಫೌಂಡೇಶನ್ ಸಂಸ್ಥಾಪಕರಾದ ಮಾನ್ಯಶ್ರೀ ಸಂತೋಷ ಲಾಡ ವಹಿಸಿಕೊಳ್ಳಲಿದ್ದಾರೆ.
ಶ್ರೀ ಕರಣ್ ಲಾಡ ಇವರು 17 ವರ್ಷದ ಹದಿಹರೆಯದ ತರುಣನಿದ್ದು, ಬೆಂಗಳೂರಿನ ವಿದ್ಯಾಲಯವೊಂದರಲ್ಲಿ ಬಿ.ಎ. ಪ್ರಥಮ ವರ್ಷದ ತರಗತಿಯಲ್ಲಿ ಓದುತ್ತಿದ್ದಾರೆ. ಈ ಎಳೆಯ ವಯಸ್ಸಿನಲ್ಲಿ ತತ್ವಜ್ಞಾನದ ಬಗೆಗೆ ಇರುವ ಅವರಲ್ಲಿನ ಆಸಕ್ತಿ ಸೋಜಿಗವನ್ನುಂಟುಮಾಡುತ್ತದೆ. ಈ ಸ್ಫೂರ್ತಿ ಅವರಿಗೆ ದೊರಕಿದ್ದು ಜರ್ಮನ್ ದೇಶದ ತತ್ವಜ್ಞಾನಿ ಫ್ರೆಡ್ರಿಕ್ನೀಟ್ಸೆ ಅವರಿಂದ, ಕರಣ್ ಆಸಕ್ತಿಗಳು ವಿಭಿನ್ನವಾಗಿವೆ. ಪ್ರಮುಖವಾಗಿ ಫುಟ್ಬಾಲ್, ದೈಹಿಕ ಅರ್ಹತೆ, ಸಿನಿಮಾ, ವೈಚಾರಿಕ ಸಾಹಿತ್ಯ ಹಾಗೂ ತತ್ವಜ್ಞಾನದ ಕುರಿತ ಬರವಣಿಗೆ ಹೀಗೆ ಬಹುಮುಖ ಆಯಾಮಗಳಲ್ಲಿ ಅವರ ಚೈತನ್ಯ ಕಾರ್ಯಮಾಡುತ್ತದೆ.
ಪ್ರಸ್ತುತ ಕೃತಿಯಲ್ಲಿ ಹದಿನೇಳರ ಹರೆಯದ ಯುವಕ ಜೀವನದ ಗಂಭೀರ ಪ್ರಶ್ನೆಗಳಿಗೆ ಉತ್ತರ ಹುಡುಕುವ ತಡಕಾಟವಿದೆ. ಕೆಲವು ಮೂಲಭೂತ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ತತ್ವಜ್ಞಾನದ ಹಿನ್ನಲೆಯಲ್ಲಿ ತನ್ನದೇ ಆದ ಉತ್ತರಗಳನ್ನು ಹುಡುಕಿಕೊಳ್ಳುವ ಯತ್ನ ಮಾಡುತ್ತಲಿರುವುದು ಪ್ರಶಂಸಾರ್ಹವಾದುದಷ್ಟೇ ಅಲ್ಲ, ಸೋಜಿಗವು ಆಗಿದೆ. ಈ ಯುವ ಲೇಖಕರು ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ, ಸಂಶಯಗಳಿಗೆ, ಸವಾಲುಗಳಿಗೆ ತನ್ನದೇ ಆದ ರೀತಿಯಲ್ಲಿ ಸ್ಪಂದಿಸುತ್ತ, ಪ್ರತಿಕ್ರಿಯಿಸುತ್ತ ತನ್ನ ವಿಚಾರಗಳನ್ನು ಮಂಡಿಸುತ್ತಿರುವ ಪರಿ ಖುಷಿಯೊಂದಿಗೆ ಮೆಚ್ಚುಗೆಯನ್ನು ಉಂಟುಮಾಡುತ್ತದೆ.
ಅವರು ವ್ಯಕ್ತಪಡಿಸುವ ಅನೇಕ ವಿಚಾರಗಳೊಂದಿಗೆ ನಮ್ಮ ಸಹಮತಿ ಇರದಿದ್ದರೂ ಕೂಡಾ, ಒಬ್ಬ ಜಿಜ್ಞಾಸುವಿನ ಪಾಮಾಣಿಕ ಕಳಕಳಿಯ ಪ್ರಯತ್ನ ಯಾವುದೇ ವಯಸ್ಸಿನ ಓದುಗರನ್ನು ತೀವ್ರವಾದ ಚಿಂತನೆಗೆ ಈಡು ಮಾಡುತ್ತದೆಂಬುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ “ಗ್ಲಿಚ್ ಇನ್ ದ ಸಿಮುಲೇಶನ್” ಎಂಬ ಕೃತಿಯನ್ನು ಶ್ರೇಷ್ಠ ಅನುವಾದಕರು, ಪ್ರಾಧ್ಯಾಪಕರು ಆಗಿರುವ ಡಾ. ವಿನಾಯಕ ನಾಯಕ ಹಾಗೂ ಕಾನೂನು ತಜ್ಞ ಡಾ. ಲೋಹಿತ ನಾಯ್ಕರ ಇವರು ಅನುವಾದಿಸಿದ್ದಾರೆ.