ಕೊಡಿಯಾಲಬೈಲ್ : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಸಹಯೋಗದಲ್ಲಿ ಶಶಿರಾಜ್ ರಾವ್ ಕಾವೂರು ಬರೆದ ‘ಪರಶುರಾಮ’ ಮತ್ತು ‘ಛತ್ರಪತಿ ಶಿವಾಜಿ’ ನಾಟಕ ಕೃತಿಗಳು ಸಂತ ಅಲೋಶಿಯಸ್ ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 14-02-2024ರಂದು ಲೋಕಾರ್ಪಣೆಗೊಂಡವು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೇಶ್ವರ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ “ಪುಸ್ತಕಗಳಿಗಿಂತಲೂ ನಾಟಕ ಸಮಾಜದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ ಮತ್ತು ಆತಂಕ ದೂರ ಮಾಡಿ ಸಮಾಜ ಜಾಗೃತಗೊಳಿಸುತ್ತದೆ. ಪರಶುರಾಮ ಹಾಗೂ ಶಿವಾಜಿ ವೀರ ಪುರುಷರಾಗಿದ್ದು, ಅಂತಹವರ ಜೀವನದ ಕುರಿತ ನಾಟಕಗಳು ಇಂದಿಗೆ ಪ್ರಸ್ತುತ” ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, “ಕರಾವಳಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಅನೇಕ ಕೃತಿಗಳನ್ನು ಕರಾವಳಿಯಲ್ಲಿ ಪ್ರಕಟಗೊಳಿಸಲಾಗಿದೆ. ಇಂದಿನ ದಿನದಲ್ಲಿ ಪುಸ್ತಕ ಪ್ರಕಟಿಸುವುದು ಕ್ಲಿಷ್ಟಕರವಾಗಿದ್ದು, ಓದುಗರು, ಕೃತಿಕಾರರು ಹಾಗೂ ಪ್ರಕಟಕರು ಜತೆಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಇದನ್ನು ನಿವಾರಿಸಬಹುದು. ಕರಾವಳಿಯಲ್ಲಿ ಇದು ಸಾಧ್ಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, “ಕರಾವಳಿಗೆ ನಾಟಕದ ಕೊಡುಗೆ ಅಪಾರ. ಇಲ್ಲಿನ ನಾಟಕಕಾರರು ಸಂಶೋಧನ ಪ್ರವೃತ್ತಿ ಹೊಂದಿದ್ದಾರೆ. ನಾಟಕಗಳ ಬಗ್ಗೆ ಅಪಾರ ಆಸಕ್ತಿಯೊಂದಿಗೆ ಪಾತ್ರಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದು, ಶಿವಾಜಿ, ಪರಶುರಾಮ ನಾಟಕಗಳು ಇದರಿಂದ ಹೊರತಾಗಿಲ್ಲ” ಎಂದರು.
ಯಕ್ಷ ರಂಗಾಯಣದ ನಿಕಟಪೂರ್ವ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ‘ಪರಶುರಾಮ’ ಕೃತಿ ಹಾಗೂ ಡಾ. ನಾ. ದಾಮೋದರ ಶೆಟ್ಟಿ ‘ಛತ್ರಪತಿ ಶಿವಾಜಿ’ ಕೃತಿಯನ್ನು ಪರಿಚಯಿಸಿದರು. ಶಶಿರಾಜ್ ರಾವ್ ಕಾವೂರು ಸ್ವಾಗತಿಸಿ, ಸಂತ ಅಲೋಶಿಯಸ್ ಕಾಲೇಜಿನ ಮಾನವ ಸಂಪನ್ಮೂಲ ಅಧಿಕಾರಿ ದಿನೇಶ್ ವಂದಿಸಿ, ಕುದ್ರೋಳಿ ಗಣೇಶ್ ನಿರೂಪಿಸಿದರು. ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಅಲ್ವಿನ್ ಡೇಸಾ, ಕೆನರಾ ಕಾಲೇಜಿನ ಡೀನ್ ಗೋಪಾಲ ಕೃಷ್ಣ ಶೆಟ್ಟಿ ಮತ್ತಿತರರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೆಗಾಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಇವರಿಂದ ಮೈಂಡ್ ಮ್ಯಾಜಿಕ್ ಮತ್ತು ಮೂಡಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯದ ಡಾ. ಜೀವನ್‌ರಾಮ್ ಸುಳ್ಯ ನಿರ್ದೇಶನದಲ್ಲಿ ‘ಏಕಾದಶಾನನ’ ಎಂಬ ಕಿರು ನಾಟಕ ಪ್ರದರ್ಶನಗೊಂಡವು. ಇದೇ ಸಂದರ್ಭದಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ನಡೆದ ‘ಪುಸ್ತಕ ಪ್ರೀತಿ’ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ 9ನೇ ತರಗತಿಯ ಪ್ರದ್ಯುಮ್ನ – ಪ್ರಥಮ ಬಹುಮಾನ, 9ನೇ ತರಗತಿ ಸಮೀಕ್ಷಾ – ದ್ವಿತೀಯ ಬಹುಮಾನ ಹಾಗೂ 8ನೇ ತರಗತಿ ಚಿನ್ಮಯಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ.