ಶಾಂತರಸರ ಜನ್ಮ ಶತಾಬ್ದಿ ಆಚರಿಸುವ ಹೊತ್ತಿನಲ್ಲಿಯೇ ‘ಸಂಗಾತ ಪುಸ್ತಕ’ವು ಎಚ್.ಎಸ್. ಮುಕ್ತಾಯಕ್ಕ ಇವರ ‘ಅಪ್ಪ ನಾನು ಕಂಡಂತೆ’ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯನ್ನು ನಾವೆಲ್ಲರೂ ಓದುವಂತಾಗಬೇಕು. ಇದು ಶಾಂತರಸರಿಗೆ ನಾವು ನಿಜವಾಗಿಯೂ ಸಲ್ಲಿಸುವ ಗೌರವದ ಬಗೆಯೂ ಆಗಿದೆ.
ಈ ಕೃತಿಯಲ್ಲಿ ಮುಕ್ತಾಯಕ್ಕನವರು ಶಾಂತರಸರ ನೆನಪುಗಳನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ನಾವು ಈವರೆಗೂ ಶಾಂತರಸರ ಕವಿತೆ, ಬರಹ, ಭಾಷಣಗಳ ಮೂಲಕ ಅವರ ವ್ಯಕ್ತಿತ್ವವನ್ನು ಗಮನಿಸಿದ್ದೇವೆ. ಆದರೆ ಮುಕ್ತಾಯಕ್ಕನವರು ಮಾತ್ರ ಬರೆಯಬಹುದಾದ, ನಮಗೆ ಅಪರಿಚಿತವಾದ ಅಪರೂಪದ ನೂರಾರು ಖಾಸಗಿ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಅವು ಖಾಸಗಿ ನೆನಪುಗಳಾಗಿದ್ದರೂ ಶಾಂತರಸರ ಸಾಹಿತ್ಯಕ ವ್ಯಕ್ತಿತ್ವ ನಿರ್ಮಾಣಗೊಂಡ ಬಗೆ, ಆ ಕಾಲಘಟ್ಟದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಗಳ ಜನ ಜೀವನ, ಕುಟುಂಬ ಸಂರಚನೆ, ಸಾಮಾಜಿಕ ಚಿತ್ರಣಗಳ ಜೊತೆಗೆ ಆ ಕಾಲದ ಒಂದು ಮನೋಭಿತ್ತಿಯನ್ನು ನಮ್ಮ ಗ್ರಹಿಕೆಗೆ ನಿಲುಕುವ ಹಾಗೆ ಮಾಡುತ್ತವೆ.
ಮುಕ್ತಾಯಕ್ಕನವರು ಗಜಲ್ ಗಳನ್ನು ಆರ್ಧವಾಗಿ, ತೀವ್ರವಾಗಿ ಬರೆಯುವದು ಅದನ್ನು ಓದಿದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಗದ್ಯವನ್ನು ಕೂಡ ಅಷ್ಟೇ ಸೊಗಸಾಗಿ ಬರೆಯಬಲ್ಲರು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಅವರ ಇಲ್ಲಿನ ಬರಹಗಳಿಗೆ ಮಾಂತ್ರಿಕ ಗುಣವಿದೆ. ಒಂದು ಲಯವಿದೆ. ರೂಪಕಗಳು ಸಹಜವಾಗಿ ಹೂ ಅರಳಿದಂತಿವೆ. ತಮ್ಮ ಅನುಭವಗಳು ಎಲ್ಲೂ ಮುಕ್ಕಾಗದಂತೆ ಚಿತ್ರಿಸುವ ಕುಶರಿತನವಿದೆ. ಗದ್ಯಕಾವ್ಯದಂತೆ ನಮ್ಮನ್ನು ಓದಿಸಿಕೊಳ್ಳುತ್ತವೆ. ಆವರಿಸಿಕೊಳ್ಳುತ್ತವೆ. ಹನಿಗಣ್ಣಾಗಿಸುತ್ತವೆ. ಏಕಕಾಲದಲ್ಲಿ ವಿಷಾದವನ್ನೂ, ಕಚಗುಳಿಯನ್ನೂ, ಜೀವನದ ಹೊಸದೇ ನೋಟ, ಕಾಣ್ಕೆಯ ದರ್ಶನವನ್ನೂ ಮಾಡಿಸುತ್ತವೆ.
ಅಪ್ಪ ನಾನು ಕಂಡಂತೆ
(ಶಾಂತರಸರ ನೆನಪುಗಳು)
ಲೇಖಕರು : ಎಚ್.ಎಸ್. ಮುಕ್ತಾಯಕ್ಕ
ಬೆಲೆ : 250 ರೂ.
ಸಂಪರ್ಕ : 9341757653