ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಕಾದಂಬರಿ ಡಾ. ಬಿ. ಜನಾರ್ದನ ಭಟ್ ಅವರ ‘ಬೂಬರಾಜ ಸಾಮ್ರಾಜ್ಯ’. ಅವರ ಇತರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಸಾಂಸ್ಕೃತಿಕ-ಐತಿಹಾಸಿಕ ವಿವರಗಳೊಂದಿಗೆ ಕಲ್ಪನೆಯನ್ನೂ ಬೆಸೆದು ವಾಸ್ತವವಾದಿ ಶೈಲಿಯಲ್ಲಿ ಕಥೆಯನ್ನು ಅವರು ಹೆಣೆದಿದ್ದಾರೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸಿಕೊಂಡು ಹೋಗುವ ಒಂದು ಕಥಾನಕ ಇಲ್ಲಿದೆ.
ಕಾದಂಬರಿಯ ಹೊರಕವಚದಲ್ಲಿ ಕರಾವಳಿಯ ಬೂಬಾವರ ಎಂಬ ಒಂದು ಹಳ್ಳಿಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಕೊಳಕು ರಾಜಕೀಯದ ಸುಳಿಯೊಳಗೆ ಸಿಕ್ಕಿ ನಲುಗುವ ಕೃಷ್ಣಚಂದ್ರ ಎಂಬ ಒಬ್ಬ ಪ್ರಾಮಾಣಿಕ, ಕರ್ತವ್ಯನಿಷ್ಠ, ಇತಿಹಾಸ ಉಪನ್ಯಾಸಕನ ಸುತ್ತ ನಡೆಯುವ ಕಥೆಯಿದೆ. ಆತ ಓರ್ವ ಸಾಹಿತಿಯೂ ಹೌದು. ಪಿ.ಹೆಚ್.ಡಿ.ಗಾಗಿ ಸಂಶೋಧನೆ ನಡೆಸುವ ತಯಾರಿಯಲ್ಲಿದ್ದಾನೆ. ಬೂಬಾವರದ ಇತಿಹಾಸದಲ್ಲಿ ಪ್ರಾಚೀನ ಕಾಲದಲ್ಲಿ ಭೂವರಾಹ ಪಾಂಡ್ಯನೆಂಬ ರಾಜನ ಆಡಳಿತವಿತ್ತು ಮತ್ತು ಅವರು ವಿದೇಶಿಯರಿಗೆ ಗುಲಾಮರ ಮತ್ತು ವೇಶ್ಯೆಯರ ಸಾಗಾಣಿಕೆಯನ್ನು ಮಾಡುತ್ತಿದ್ದರು ಎಂಬ ವಿಚಾರ ತಿಳಿದು ಅದೇ ವಿಷಯವನ್ನು ತನ್ನ ಅಧ್ಯಯನಕ್ಕಾಗಿ ಆಯ್ದುಕೊಳ್ಳುತ್ತಾನೆ. ಬೂಬಾವರದಲ್ಲಿದ್ದ ಗೇಟ್ ಭಾರತಿ ಎಂಬ ವೇಶ್ಯಾ ಕುಟುಂಬಕ್ಕೆ ಸೇರಿದವಳು ಎನ್ನಲಾದ ಹೆಣ್ಣು ಮದುವೆಯಾಗಿ ನಂತರ ಡೈವೋರ್ಸ್ ಪಡೆದು ಗಂಡನಿಂದ ಜೀವನಾಂಶ ಪಡೆಯಲು ಪ್ರಯತ್ನಿಸುತ್ತಿರುವ ಪ್ರಕರಣವನ್ನೂ ಅವನು ಅಧ್ಯಯನ ಮಾಡುತ್ತಾನೆ. ಕಾಲೇಜಿನ ಪ್ರಿನ್ಸಿಪಾಲರು ಬೇರೆಡೆಯಿಂದ ಸಸ್ಪೆಂಡ್ ಆಗಿ ಅಲ್ಲಿಗೆ ಬಂದವರು. ಕೃಷ್ಣಚಂದ್ರನಿಗೆ ಸುಮ್ಮಸುಮ್ಮನೆ ಕಿರುಕುಳ ಕೊಡುತ್ತಲೇ ಇರುತ್ತಾರೆ. ಕೆಲಸಕ್ಕೆ ಬಾರದ ಕೆಲವು ಉಪನ್ಯಾಸಕರು ಅವರಿಗೆ ಸಾಥ್ ನೀಡುತ್ತಿರುತ್ತಾರೆ. ಇದರ ನಡುವೆ ಕೃಷ್ಣಚಂದ್ರನಿಗೆ ಬೂಬಾವರದ ದೇವರಾಜ ರಾಯರೆಂಬ ವಿದ್ವಾಂಸರು ಸಂಶೋಧನೆಗೆ ಬೇಕು ಬೇಕಾದ ಎಲ್ಲ ಸಹಾಯ ಮಾಡುತ್ತಾರೆ. ಅವರ ಗ್ರಂಥಸಂಗ್ರಹದಲ್ಲಿ ಸಿಗುವ ಶತಮಾನಗಳಷ್ಟು ಹಳೆಯ ತುಳು ಲಿಪಿಯಲ್ಲಿ ತಾಳೆಗರಿ ಗ್ರಂಥದಲ್ಲಿದ್ದ ‘ಪಾಂಡ್ಯ ಪ್ರತಿಷ್ಠಾಪನಾ ಕಾವ್ಯ’ವನ್ನು ಇಬ್ಬರೂ ಸೇರಿ ಕನ್ನಡಕ್ಕೆ ಅನುವಾದಿಸುವುದರ ಮೂಲಕ ಕೃಷ್ಣಚಂದ್ರನ ಸಂಶೋಧನೆ ಗರಿಗೆದರುತ್ತದೆ.
ಕಾದಂಬರಿಯ ಮಧ್ಯಭಾಗದಿಂದ ನಮಗೆ ಭೂವರಾಹ ಪಾಂಡ್ಯನ ಕಾಲದ ಕಥೆ ಸಿಗುತ್ತದೆ. ಬುದ್ಧಿವಂತನೂ ಆಡಳಿತ ಮುತ್ಸದ್ದಿಯೂ ಆದ ರಾಜನ ಕೈಕೆಳಗೆ ರಾಜ್ಯದಲ್ಲಿ ಸುಭಿಕ್ಷ ನೆಲೆಸಿದೆ. ಆದರೆ ಒಂದು ದಿನ ಚಂದ್ರಭಾಗಿ ಎಂಬ ಎಳೆಹರೆಯದ ಚೆಲುವೆ, ತನ್ನ ಅಪ್ರತಿಮ ಸೌಂದರ್ಯದಿಂದ ಯುವ ಮನಸ್ಸುಗಳಿಗೆ ಲಗ್ಗೆಯಿಟ್ಟವಳು, ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕೈಗೆ ಸಿಕ್ಕಿದ ಮಾವಿನಹಣ್ಣನ್ನು ತಿನ್ನುತ್ತಾಳೆ. ಅದು ರಾಜನ ಕಾವಲು ಮರದಿಂದ ಬಿದ್ದ ಹಣ್ಣು. ಅದನ್ನು ತಿಂದವರಿಗೆ ಮರಣದಂಡನೆ ಎಂಬ ವಿಧಿಯಿದೆ. ಯಾರೋ ಅವಳು ಸಿಗದೆ ನಿರಾಶರಾದವರು ಬೇಕೆಂದೇ ಈ ಸಂಚು ಹೂಡಿರುತ್ತಾರೆ. ಪರಿಣಾಮವಾಗಿ ರಾಜಭಟರು ಅವಳನ್ನು ಸೆರೆಹಿಡಿದು ಕೊಂಡುಹೋಗುತ್ತಾರೆ. ತಿಳಿಯದೆ ಮಾಡಿದ ತಪ್ಪು ಎಂದು ಅವಳನ್ನು ರಾಜ ಕ್ಷಮಿಸಬಹುದಿತ್ತು. ಅದರೆ 45 ವರ್ಷ ಪ್ರಾಯದ ರಾಜನಲ್ಲೂ ಅವಳ ಬಗೆಗೆ ಇದ್ದ ಮೋಹ ಮತ್ತು ಅದನ್ನು ಹೇಳಿಕೊಳ್ಳಲಾಗದ ಹತಾಶೆಯಿಂದ ಅವನು ಅವಳನ್ನು ಮರಣದಂಡನೆಗೆ ಗುರಿಯಾಗಿಸುತ್ತಾನೆ. ಚಂದ್ರಭಾಗಿಗಾಗಿ ಇಡೀ ರಾಜ್ಯವೇ ಮರುಗುತ್ತದೆ. ಅವಳ ಅಣ್ಣಂದಿರು ಮತ್ತು ಬಂಧು-ಬಳಗದವರು ಸೇಡು ತೀರಿಸಿಕೊಳ್ಳಲು ಮಾಡಿದ ಪ್ರಯತ್ನದಲ್ಲಿ ರಾಜನೇ ತಲೆದಂಡ ತೆರಬೇಕಾಗುತ್ತದೆ. ಬೂಬರಾಜನ ಮರಣಾನಂತರ ರಾಜ್ಯದ ಪರಿಸ್ಥಿತಿ ತೀರಾ ಹದಗೆಡುತ್ತದೆ. ಅವನ ಉತ್ತರಾಧಿಕಾರಿ, ಯಾವ ಕೆಲಸಕ್ಕೂ ಬಾರದ ಪಸುಮುಸುಂಟು ಪಾಂಡ್ಯನ ಕಾಲದಲ್ಲಿ ರಾಜ್ಯವು ಪಕ್ಕದ ಚೇರ ರಾಜನ ವಶವಾಗುತ್ತದೆ. ಹೀಗೆ ಪಾಂಡ್ಯರಾಜ್ಯದ ಅಧಃಪತನವಾಗುತ್ತದೆ. ಆದರೆ ಚೇರರಾಜ ನಾರ್ಮುಡಿ ಚೇರನು ತರುವ ಕೆಲವು ಸುಧಾರಣೆಗಳು-ಉದಾಹರಣೆಗೆ ವೇಶ್ಯಾವಾಟಿಕೆಯ ಉಚ್ಛಾಟನೆ ಅವನ ಆಡಳಿತ ಉತ್ತಮವಾಗಿತ್ತೆಂದು ಸೂಚಿಸುತ್ತದೆ.
ಕೃಷ್ಣಚಂದ್ರನಿಗೆ ಇಷ್ಟು ಕಥೆ ‘ಪಾಂಡ್ಯ ಪ್ರತಿಷ್ಠಾಪನಾ ಕಾವ್ಯ’ದಲ್ಲಿ ಸಿಗುತ್ತದೆ. ಮುಂದಿನ ಕಥೆಯಾದ ಭೂವರಾಹ ಪಾಂಡ್ಯ ಮತ್ತು ಚಂದ್ರಭಾಗಿ ಆ ಊರಿನ ದೈವಗಳಾಗಿ ಈಗಲೂ ಪೂಜಿಸಲ್ಪಡುವ ಭಾಗವನ್ನು ದೇವರಾಜರ ಸಹಾಯದಿಂದ ಅವನು ಪಡೆಯುತ್ತಾನೆ. ಆ ದೈವಗಳ ಗುಡಿಗಳಿಗೂ ಅವನು ಭೇಟಿ ನೀಡುತ್ತಾನೆ.
ಕೃಷ್ಣಚಂದ್ರನು ಇಷ್ಟೆಲ್ಲಾ ಅಧ್ಯಯನ ನಡೆಸುತ್ತಿರುವ ವೇಳೆ ಅವನ ಹೆಂಡತಿ ಸುಮಿತ್ರಾ ಹೆರಿಗೆಗೆಂದು ತವರು ಮನೆಗೆ ಹೋಗಿರುತ್ತಾಳೆ. ಆಗ ಅವನಿಗೆ ಸದಾ ಕಿರುಕುಳಕೊಡುತ್ತಿದ್ದ ಉಪನ್ಯಾಸಕರು ಇನ್ನೊಂದು ಸಂಚು ಹೂಡುತ್ತಾರೆ. ಅವನ ಕೈಯಿಂದ ನೋಟ್ಸ್ ತೆಗೆದುಕೊಳ್ಳಲೆಂದು ಸಂಜೆಯ ಹೊತ್ತು ಅವನ ಮನೆಗೆ ಬರುವ ಪ್ರತಿಭಾವಂತ ವಿದ್ಯಾರ್ಥಿನಿ ಸನ್ನಿಧಿಯೊಂದಿಗೆ ಅವನು ಅನೈತಿಕ ಸಂಬಂಧ ಬೆಳೆಸಿದ್ದಾನೆಂದು ಸುಳ್ಳು ಕಥೆ ಕಟ್ಟಿ ಮೊಬೈಲ್ ತಂತ್ರಗಳನ್ನು ಬಳಸಿ ಅಪಪ್ರಚಾರ ಮಾಡಿ ಅವನ ತೇಜೋವಧೆ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ನೊಂದುಕೊಳ್ಳುವ ಸನ್ನಿಧಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಕೃಷ್ಣಚಂದ್ರನ ಪರವಾಗಿ ನಿಲ್ಲುವ ಮೇಲಾಧಿಕಾರಿ ಕುಂಜತ್ತೂರರ ಬೆಂಬಲದಿಂದ ಎಲ್ಲವೂ ಸುಖಾಂತ್ಯವಾಗಿ ತಪ್ಪಿತಸ್ಥರನ್ನು ಪೋಲೀಸ್ ಅರೆಸ್ಟ್ ಮಾಡುತ್ತಾರೆ. ಕೃಷ್ಣಚಂದ್ರನ ಸಂಶೋಧನಾ ಕಾರ್ಯಕ್ಕೆ ಇಷ್ಟೆಲ್ಲಾ ಅಡೆತಡೆಯುಂಟಾದುದಕ್ಕೆ ದೈವಗಳ ಮುನಿಸು ಕಾರಣವಾಗಿರಬಹುದೇ ಎಂಬ ಭಯದಿಂದ ಸುಮಿತ್ರಾ ಗಂಡನ ಕೈಯಲ್ಲಿ ಬೂಬರಾಜ ದೈವದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಪ್ರಶ್ನೆಯನ್ನು ಕೇಳಲು ಪ್ರೇರೆಪಿಸುತ್ತಾಳೆ. ಹಾಗೆ ಜಾತ್ರೆಗೆ ಹೋಗಿ ದೈವದ ಒಪ್ಪಿಗೆಯನ್ನು ಪಡೆದ ವಿಚಾರವನ್ನು ಕೊನೆಯ ವಾಕ್ಯದಲ್ಲಿ ಸೂಚ್ಯವಾಗಿ ಹೇಳುವ ಮೂಲಕ ಸಂಶೋಧನೆಯನ್ನು ಸುಗಮವಾಗಿ ನಡೆಸಲು ಅವಕಾಶವಾಗುವಲ್ಲಿಗೆ ಕಾದಂಬರಿ ಮುಗಿಯುತ್ತದೆ.
ಕಾದಂಬರಿಯ ರಚನಾ ತಂತ್ರವನ್ನು ಲೇಖಕರು ಬಹಳ ಜಾಣ್ಮೆಯಿಂದ ಹೆಣೆದಿದ್ದಾರೆ. ಒಳಗಿನ ಹೂರಣವು ಕಾದಂಬರಿಯ ಮೈಗೆ ಸಮೃದ್ಧವಾದ ಒಂದು ಗಟ್ಟಿತನವನ್ನು ಕೊಡುತ್ತದೆ. ಬೂಬರಾಜನ ಕಾಲದಲ್ಲಿ ನಿರಪರಾಧಿ ಹುಡುಗಿ ಚಂದ್ರಭಾಗಿಗೆ ವಿಧಿಸಿದ ಮರಣದಂಡನೆ ಮತ್ತು ಅವನ ಮರಣಾನಂತರ ರಾಜ್ಯದಲ್ಲಿ ಹುಟ್ಟಿಕೊಳ್ಳುವ ಅರಾಜಕ ಸ್ಥಿತಿಯನ್ನು ಕಾಲೇಜಿನಲ್ಲಿ ನಡೆಯುವ ರಾಜಕೀಯಕ್ಕೆ ಹೋಲಿಸಬಹುದಾಗಿದೆ. ಬೂಬರಾಜ ಸಾಮ್ರಾಜ್ಯದ ಧರ್ಮಸೂಕ್ಷ್ಮಗಳು ಮತ್ತು ವರ್ತಮಾನದ ಸಾಂವಿಧಾನಿಕ ಕಾನೂನು ಹೋರಾಟಗಳ ನಡುವೆಯೂ ಹೋಲಿಕೆಯಿದೆ.
ನಾಡಿನ ಜನತೆಯು ಶಾಶ್ವತವಾಗಿ ಪೂಜಿಸುವ ದೈವವಾಗಲು ಬೂಬರಾಜನ ಅರ್ಹತೆ ಏನು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಯಾಕೆಂದರೆ ಅವನು ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ಪ್ರಜಾಪರಿಪಾಲಕನಾಗಿದ್ದರೂ ಒಬ್ಬ ನಿರಪರಾಧಿ ಕನ್ಯೆಯ ಹತ್ಯೆಗೆ ಕಾರಣನಾದವನು. ಅಲ್ಲದೆ ಅಲ್ಲಿ ಅವನ ಸ್ವಾರ್ಥವೂ ಇರುತ್ತದೆ. ಆದರೆ ಬಹುಶಃ ಆ ತಪ್ಪು ಅವನ ತಲೆದಂಡದ ಮೂಲಕ ಪರಿಹಾರವಾಗುವುದರಿಂದ ಅವನು ಪರಿಶುದ್ಧನಾಗುವುದಾಗಿರಬಹುದು.
ವರ್ತಮಾನದ ಕಥೆಯು ಐತಿಹಾಸಿಕ ವಿಚಾರಗಳ ಜತೆಗೆ ಬೆಸೆಯುವಂತೆ ಮಾಡುವಲ್ಲಿ ಲೇಖಕರ ಕೌಶಲವು ಮನೋಜ್ಞವಾಗಿ ಬಳಕೆಯಾಗಿದೆ. ಇತಿಹಾಸಕ್ಕೆ ಸಂಬಂಧ ಪಟ್ಟ ವಿಚಾರಗಳಿಗೆ ಹೊಂದಿಕೆಯಾಗುವಂತೆ ಕಲ್ಪನೆಯನ್ನು ಜೋಡಿಸುವಾಗ ಎಲ್ಲವೂ ನಿಜವೇ ಅನ್ನಿಸುವಂತೆ ಮಾಡಬೇಕಾದರೆ ಲೇಖಕರು ಎಣಿಕೆಗೆ ನಿಲುಕುವ ವಿವರಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಈ ಎಚ್ಚರಿಕೆಯನ್ನು ಲೇಖಕರು ಕಾದಂಬರಿಯುದ್ದಕ್ಕೂ ವಹಿಸಿದ್ದಾರೆ. ವರ್ತಮಾನದ ಚಿತ್ರಣ ಕೊಡುವುದು ಕಷ್ಟವಲ್ಲ. ಆದರೆ ಇತಿಹಾಸದಲ್ಲಿ ಆಗಿಹೋದ ಮತ್ತು ಇವತ್ತು ಯಾವ ಕುರುಹುಗಳನ್ನೂ ಬಿಡದೆ ಬದಲಾಗಿರುವ ಆ ಸ್ಥಳದ ಉದ್ದಗಲ ವಿಸ್ತಾರ, ವಿನ್ಯಾಸಗಳ ನಕ್ಷೆಯನ್ನು ಕಲ್ಪನೆಯಿಂದಲೇ ಬಿಡಿಸುವುದು (ಈ ನಕ್ಷೆಯು ಚಿತ್ರರೂಪದಲ್ಲಿ ಪುಸ್ತಕದ ಆರಂಭದಲ್ಲಿ ಇದೆ), ಆ ಕಾಲದ ಬದುಕಿನ ಸಾಂಸ್ಕೃತಿಕ ವಿವರಗಳನ್ನು ಕೊಡುವುದು, ಸಮುದ್ರದಲ್ಲಿ ನಾವೆಗಳ ಮೂಲಕ ವಿದೇಶಿಯರಾದ ಯವನರೊಂದಿಗೂ, ಅರಬರೊಂದಿಗೂ ಸರಕು ಸಾಗಾಣಿಕೆಯ ಮೂಲಕ ವ್ಯಾಪಾರ ನಡೆಸುವುದು, ಯುದ್ಧ ತಂತ್ರಗಳ ವರ್ಣನೆ- ಹೀಗೆ ಹಲವು ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ನೀಡುವಲ್ಲಿ ಲೇಖಕರ ಅನನ್ಯ ಚಿತ್ರಕ ಶಕ್ತಿ ಸಮರ್ಥವಾಗಿ ಕೆಲಸ ಮಾಡಿದೆ.
ಪುಸ್ತಕ ವಿಮರ್ಶಕರು : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಕೃತಿಯ ಹೆಸರು : ಬೂಬರಾಜ ಸಾಮ್ರಾಜ್ಯ (ಕಾದಂಬರಿ)
ಲೇಖಕರು : ಬಿ. ಜನಾರ್ದನ ಭಟ್
ಪ್ರ : ಅಂಕಿತ ಪುಸ್ತಕ, ಬೆಂಗಳೂರು
ಪ್ರ.ವರ್ಷ : 2020