ಕುಮಾರಸ್ವಾಮಿ ತೆಕ್ಕುಂಜ ಇವರು ಈಗಾಗಲೇ ತಮ್ಮ ಕಥೆ-ಕಾದಂಬರಿ-ಪ್ರಬಂಧ ಸಂಕಲನಗಳ ಮೂಲಕ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಈಗ ಅವರ ‘ಬದುಕು ಮಾಯೆಯ ಮಾಟ’ ಎಂಬ ಒಂದು ಕಾದಂಬರಿ ಪ್ರಕಟವಾಗಿದೆ. ಮುಂಬಯಿ ಬದುಕಿನ ಅನುಭವವುಳ್ಳ ಇವರು ತಮ್ಮ ಈ ಹಿಂದಿನ ಕಥಾಸಂಕಲನ ‘ವಡಾಪಾವ್’ನಲ್ಲಿ ಮಾಡಿದಂತೆ ಇಲ್ಲಿಯೂ ನಮ್ಮನ್ನು ಮುಂಬಯಿಯ ಗಲ್ಲಿಗಳಲ್ಲಿ ಸುತ್ತಿಸುತ್ತಾರೆ.
ಇದು ಒಂದು ಸಾಮಾಜಿಕ ಕಾದಂಬರಿ. ಕಥಾನಾಯಕಿ ಪುಷ್ಪಾ ಕರಾವಳಿ ಜಿಲ್ಲೆಯ ಮುಂಡಕ್ಕೂರು ಎಂಬ ಹಳ್ಳಿಯಲ್ಲಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದವಳು. ಇಬ್ಬರು ತಮ್ಮಂದಿರಿದ್ದರೂ ಅಪ್ಪನಿಗೆ ಮಗಳೇ ಅಚ್ಚುಮೆಚ್ಚು. ಮಗಳ ಕಡೆಗೆ ಅಪ್ಪನ ಗಮನ ಕಡಿಮೆಯಾದದ್ದಕ್ಕೋ ಏನೋ ಪುಷ್ಪಾ ಓದಿನಲ್ಲಿ ಬುದ್ಧಿವಂತಳಾಗಿದ್ದರೂ ಹದಿವಯಸ್ಸಿನಲ್ಲೇ ಸಿಕ್ಕ ಸಿಕ್ಕ ಗಂಡು ಮಕ್ಕಳ ಹಿಂದೆ ಹೋಗಿ ಯೌವನದ ತೀಟೆಯನ್ನು ತೀರಿಸಿಕೊಳ್ಳುತ್ತ ಜಾರುತ್ತ ಹೋಗುತ್ತಾಳೆ. ಅವಳು ಗರ್ಭ ತೆಗೆಸಿಕೊಂಡ ಸುದ್ದಿ ಊರಲ್ಲಿ ಹರಡುವ ಮುನ್ನವೇ ಎಚ್ಚರಗೊಂಡ ಅಮ್ಮ ಅವಳ ಕೈಗೆ ಒಂದಷ್ಟು ಹಣ ಕೊಟ್ಟು ‘ಮನೆ ಬಿಟ್ಟು ಎಲ್ಲಾದರೂ ಹೋಗು’ ಎಂದು ಸಿಟ್ಟಿನಿಂದ ಹೇಳುತ್ತಾಳೆ. ಸ್ವಾಭಿಮಾನಿ ಪುಷ್ಪಾ ಮರುದಿನವೇ ತನ್ನ ರಹಸ್ಯಗಳ ಬಗ್ಗೆ ತಿಳಿದಿದ್ದ ನಾರಾಯಣ ಎಂಬವನೊಡನೆ ತಪ್ಪಿಸಿಕೊಂಡು ಮುಂಬಯಿಗೆ ಹೋಗುತ್ತಾಳೆ. ಅಲ್ಲಿಂದ ಅವಳ ‘ಒಣವಾಸ’ ಆರಂಭವಾಗುತ್ತದೆ.
ಬಯಸಿದ ಹೆಣ್ಣು ಜತೆಗೆ ಬಂದಾಗ ನಾರಾಯಣ ಸಿಕ್ಕಿದ್ದೇ ಅವಕಾಶವೆಂದು ಅವಳ ಮೇಲೆ ಲೈಂಗಿಕ ಅತ್ಯಾಚಾರ ಮಾಡುವುದು, ಮುಂಬಯಿನ ಜನಜಂಗುಳಿಯಲ್ಲಿ ದಿಕ್ಕುತಪ್ಪುವಂತಾದರೂ ಹೇಗೋ ಅವನಿಂದ ತಪ್ಪಿಸಕೊಂಡು ಸಾರಿಕಾ ಎಂಬ ಹೆಣ್ಣಿನ ಸಹಾಯದಿಂದ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರುವುದು, ಹೆಸರು ಬದಲಾಯಿಸಿ ಪೂಜಾ ಆಗುವುದು, ಅಲ್ಲಿಗೆ ಹೊಂದಿಕೊಳ್ಳುವಷ್ಟರಲ್ಲಿ ಅಕ್ರಮವಾಗಿ ಅಲ್ಲಿ ಠಿಕಾಣಿ ಹೂಡಿದ್ದ ಬಾರ್, ಹೆದ್ದಾರಿ ನಿರ್ಮಾಣದ ವೇಳೆ ನೆಲಸಮವಾಗುವುದು, ಹೇಮಾ ಎಂಬವಳ ಜತೆ ಸೇರಿ ಇನ್ನೊಂದು ಬಾರ್ ಸೇರುವುದು, ಅಲ್ಲಿಗೆ ಶ್ರೀಧರ್ ಅನ್ನುವ ಶ್ರೀಮಂತ ವ್ಯಕ್ತಿ ಗಿರಾಕಿಯಾಗಿ ಬರುವುದು, ಅವರಿಬ್ಬರ ನಡುವೆ ಪ್ರೀತಿ ಹುಟ್ಟಿ ಆತ ಅವಳಿಗೆ ತನ್ನ ಕಂಪೆನಿಯಲ್ಲೇ ಕೆಲಸ ಕೊಟ್ಟು ಅವಳನ್ನು ಉಪಪತ್ನಿಯನ್ನಾಗಿ ಮಾಡಿಕೊಳ್ಳುವುದು, ನಂತರ ಒಂದು ಹೆಣ್ಣುಮಗುವನ್ನು ಊರಿನ ಕಡೆಯ ಅನಾಥಾಶ್ರಮದಿಂದ ದತ್ತು ತೆಗೆದುಕೊಂಡು ಸಾಕುವುದು-ಹೀಗೆ ಪುಷ್ಪಳ ಜೀವನ ಒಂದು ನೆಲೆ ಕಂಡುಕೊಳ್ಳುವ ಹೊತ್ತಿಗೆ ತಮ್ಮ ಜಯಂತನ ಜತೆಗೆ ಪುನಃ ಸಂಪರ್ಕವೇರ್ಪಡುತ್ತದೆ. ಇದ್ದಕ್ಕಿದ್ದಂತೆ ಅಮ್ಮನ ಸಾವಿನ ಸುದ್ದಿ ಬಂದಾಗ ಉತ್ತರಕ್ರಿಯೆಗೆಂದು ಅವಳು ಊರಿಗೆ ಹೋಗುತ್ತಾಳೆ. ಆದರೆ ತಮ್ಮಂದಿರು ಮತ್ತು ಕುಟುಂಬದವರೆಲ್ಲರೂ ಅವಳನ್ನು ಹೊರಗಿನವಳಂತೆ ಕಂಡು ದೂರವಿರಿಸಿದಾಗ ಸಂಬಂಧಗಳ ನಶ್ವರತೆ ಬಗ್ಗೆ ಎಣಿಸಿ ಪುಷ್ಪಾ ನೊಂದುಕೊಳ್ಳುತ್ತಾಳೆ. ಕೊನೆಯಲ್ಲಿ ಮಗಳು ಸೋನಾಲಿಗೆ ತನ್ನ ನಿಜವಾದ ತಂದೆ ತಾಯಿ ಯಾರೆಂಬ ಜಿಜ್ಞಾಸೆ ಹುಟ್ಟಿ ಹುಡುಕಾಟಕ್ಕೆ ಪುಷ್ಪಾಳೇ ಮುಂದಾಗುತ್ತಾಳೆ. ಆಗ ಪಕ್ಕದ ಊರಿನವರೇ ಆದ ಶ್ರೀಧರರಾಯರ ತಮ್ಮನ ಹದಿಹರೆಯದ ತೆವಲಿಗೆ ಬಡ ಹೆಣ್ಣೊಬ್ಬಳು ಬಲಿಯಾಗಿ ಹುಟ್ಟಿದ ಮಗುವೇ ಸೋನಾಲಿ ಎಂದು ಗೊತ್ತಾದಾಗ ಅದನ್ನು ಮಗಳಿಗೆ ತಿಳಿಸುವುದು ಬೇಡವೆಂದು ಪುಷ್ಪಾ ನಿರ್ಧರಿಸುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.
ಹಳ್ಳಿಯ ಮಂದಿಯಲ್ಲಿ ಮುಗ್ಧತೆಯಿದೆ ಮತ್ತು ನಗರದ ಬದುಕಿನಲ್ಲಿರುವುದು ಕೃತ್ರಿಮತೆ ಮಾತ್ರ ಅನ್ನುವ ಸಾಮಾನ್ಯ ನಂಬಿಕೆಯನ್ನು ಕಾದಂಬರಿ ಅಲ್ಲಗಳೆಯುತ್ತದೆ. ಪುಷ್ಪಾ ತನ್ನ ಅಸಹಾಯಕ ಸ್ಥಿತಿಯಲ್ಲಿ ಊರು ಬಿಟ್ಟು ಹೋಗಿದ್ದಾದರೂ ಅವಳಿಗೆ ವಿನಾಕಾರಣ ‘ಓಡಿಹೋದವಳು’ ಎಂದು ಹಣೆಪಟ್ಟಿ ಹಚ್ಚಿ ದೂರಮಾಡಿದವರು ಹಳ್ಳಿಯವರು. ಸಂಪ್ರದಾಯಕ್ಕೆ ಅಂಟಿಕೊಂಡ ಅವರು ಅವಳನ್ನೆಂದಿಗೂ ಕ್ಷಮಿಸುವುದಿಲ್ಲ. ಮಾನವೀಯ ನೆಲೆಯಿಂದ ಅವರೆಂದಿಗೂ ಆಲೋಚಿಸಲಾರರು. ಆದರೆ ನಗರದಲ್ಲಿ ಅವಳ ಹಿನ್ನೆಲೆಯನ್ನು ಲೆಕ್ಕಿಸದೆ ಭೇಟಿಯಾದ ಎಲ್ಲರಿಂದಲೂ ಹೆಜ್ಜೆಹೆಜ್ಜೆಗೂ ಅವಳಿಗೆ ಸಹಾಯ ಸಿಗುತ್ತದೆ. ನಗರ ಬದುಕಿನಲ್ಲಿ ಜಂಜಾಟಗಳು ಹೆಚ್ಚಾದರೂ ಹಳ್ಳಿಯಂತೆ ಅಲ್ಲಿ ಇನ್ನೊಬ್ಬರ ಬದುಕಿನಲ್ಲಿ ಇಣಿಕಿ ನೋಡಿ ಕೊಂಕು ಮಾತನಾಡಿ ನೋಯಿಸುವವರಿಲ್ಲ.
ಇನ್ನೊಂದು ದೃಷ್ಟಿಯಿಂದ ಯೋಚಿಸುವುದಾದರೆ ಎಲ್ಲವೂ ಆಧುನಿಕತೆಯ ದುಷ್ಪರಿಣಾಮ ಎಂದೂ ಹೇಳಬಹುದು. ಸಾಂಪ್ರದಾಯಿಕ ಮನೋಭಾವದ ಪುಷ್ಪಾಳ ಅಮ್ಮನ ನಿಲುವುಗಳು ದೃಡವಾಗಿವೆ. ಪುಷ್ಪಾ ತನ್ನ ಬದುಕನ್ನು ಹಾಳು ಮಾಡಿಕೊಂಡದ್ದು ಹಳ್ಳಿಗೆ ಆಧುನಿಕತೆ ಪ್ರವೇಶಿಸಿದ ಕಾಲದಲ್ಲಿ. ಯಾವುದನ್ನು ಅಪ್ಪಿಕೊಳ್ಳುವುದೆಂದು ಯುವಜನತೆ ಸಂದಿಗ್ಧ ಸ್ಥಿತಿಯಲ್ಲಿದ್ದ ಕಾಲದಲ್ಲಿ. ಆದರೆ ಮುಂಬಯಿನಲ್ಲೇ ಬೆಳೆದ ಸೋನಾಲಿಯಲ್ಲಿ ಆ ಸಂದಿಗ್ಧತೆ ಇಲ್ಲ. ಗೊಂದಲಗಳೂ ಇಲ್ಲ. ಬದುಕು ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಅವಳಿಗಿದೆ. ಇದು ತಲೆಮಾರುಗಳ ನಡುವಿನ ಅಂತರದಲ್ಲಿ ಉಂಟಾದ ಬದಲಾವಣೆ.
ಕಾದಂಬರಿಯ ಮೊದಲ ಭಾಗದಲ್ಲಿ ಹಳ್ಳಿಯ ಬದುಕಿನ ಸಾಂಸ್ಕೃತಿಕ ವಿವರಗಳಿವೆ. ವ್ಯಕ್ತಿಯೊಬ್ಬ ಸತ್ತಾಗ ಮಾಡುವ ಉತ್ತರಕ್ರಿಯೆಗಳ ವಿವರಗಳಿವೆ. ಎರಡನೇ ಭಾಗದಲ್ಲಿ ಮುಂಬಯಿ ಬದುಕಿನಲ್ಲಿ ಹೆಣ್ಣುಮಕ್ಕಳು ಬದುಕನ್ನು ಕಟ್ಟಿಕೊಳ್ಳಲು ಪಡುವ ಕಷ್ಟಗಳ ಚಿತ್ರಗಳಿವೆ. ಒಂದು ರೀತಿಯಿಂದ ನೋಡಿದರೆ ಇಡೀ ಕಾದಂಬರಿಯೇ ಹೆಣ್ಣುಮಕ್ಕಳು ಜೀವನದಲ್ಲಿ ಅನುಭವಿಸುವ ಒದ್ದಾಟದ ಬಗ್ಗೆಯೇ ಇದೆ. ಬಾರ್ ಸರ್ವರ್ ಆಗಿ ಕೆಲಸ ಮಾಡಿ ಮರ್ಯಾದೆಯ ಬದುಕು ಸಾಗಿಸುವಲ್ಲಿ ಗಂಡಸರ ಕಾಮುಕ ದೃಷ್ಟಿಯು ಅವರಿಗೆ ಅಡ್ಡ ಬರುವ ಪರಿ ಕರುಳು ಹಿಂಡುವಂತೆ ಚಿತ್ರಿತವಾಗಿದೆ. ಶ್ರೀಮಂತ ವರ್ಗದ ಸೋಗಿನ ಬದುಕಿನಲ್ಲಿ ಹಗುರವಾಗಿ ಬಿಡುವ ಹೆಣ್ಣು-ಗಂಡುಗಳ ನಡುವಣ ಲೈಂಗಿಕ ಸಂಬಂಧದ ಚಿತ್ರಣವೂ ಆತ್ಯಂತಿಕವಾಗಿ ಪರಿಣಾಮ ಬೀರುವುದು ಹೆಣ್ಣಿನ ಮೇಲೆಯೇ ಅನ್ನುವ ಧ್ವನಿಯೂ ಇಲ್ಲಿದೆ. ಪುಷ್ಪಾಳಂಥವರು ಅರಿವಿಲ್ಲದೆ ಜಾರಿದರೆಂದು ಮುಂದಿನ ತಲೆಮಾರಿನ ಸೋನಾಲಿಯಂಥವರು ಹಾಗಾಗದೆ ಬಹಳಷ್ಟು ಲೋಕಜ್ಞಾನವನ್ನು ಬೆಳೆಸಿಕೊಂಡದ್ದರ ಬಗೆಗೂ ಕಾದಂಬರಿಕಾರರು ಹಲವಾರು ವಿವರಗಳ ಮೂಲಕ ನಮ್ಮ ಗಮನ ಸೆಳೆಯಲು ಮರೆಯುವುದಿಲ್ಲ. ಒಟ್ಟಿನಲ್ಲಿ ಬದುಕಿನ ಒಂದು ಸಂಕೀರ್ಣ ಚಿತ್ರಣವನ್ನು ಈ ಕಾದಂಬರಿ ಕೊಡುತ್ತದೆ.
ಪುಸ್ತಕ ವಿಮರ್ಶಕರು | ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕ | ಕುಮಾರಸ್ವಾಮಿ ತೆಕ್ಕುಂಜ
ಕುಮಾರಸ್ವಾಮಿ ತೆಕ್ಕುಂಜ ಇವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ ‘ಫಿಯಟ್ ಅಟೊಮೊಬೈಲ್ ಕಂಪೆನಿ’ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ ‘ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿರುವ ‘ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್’ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ ‘ಒಪ್ಪಣ್ಣ. ಕಾಂ’ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ಕನ್ನಡ ಪೌರಾಣಿಕ ಕಾದಂಬರಿ ‘ಮಂಡೋದರಿ’ಯಲ್ಲಿ ರಾವಣನ ಮಡದಿ ಮಂಡೋದರಿಯ ಚಿತ್ರಣವಿದೆ. ಜೊತೆಗೆ, ರಾಮಾಯಣ ಯುದ್ಧ ಕಾಲದಲ್ಲಿ ರಾವಣಾಂತಪುರದ ಸ್ತ್ರೀಯರ ಪಾಡುಗಳು, ಸೀತಾಪಹಾರವಾದ ನಂತರದಲ್ಲಿ ಶೂರ್ಪಣಖಿ ಏನಾದಳು ಎಂಬ ಜಿಜ್ಞಾಸೆಯೂ ಸೇರಿವೆ. ಅಪಹರಿಸಿ ತಂದ ಸೀತೆಯನ್ನು ಮರಳಿಸುವಂತೆ ರಾವಣನ ಮನಃಪರಿವರ್ತನೆಗೆ ಏನೆಲ್ಲ ಪ್ರಯತ್ನವನ್ನು ಮಂಡೋದರಿ ನಡೆಸಿರಬಹುದು ಎಂಬ ವಿವರಣೆಯಿದೆ. ‘ಪಾರುಪತಿಯ ಪಾರುಪತ್ಯ’ ಎಂಬ ಹವಿಗನ್ನಡ ಕೃತಿ.