ಸುಮಾರು ಐದು ದಶಕದ ಸಾಹಿತ್ಯ ಹಾದಿಯಲ್ಲಿ ಮಾಲತಿ ಪಟ್ಟಣಶೆಟ್ಟಿಯವರದ್ದು ಸಹಜ ನಡಿಗೆ. ನದಿ ತನ್ನ ತೆಕ್ಕೆಗೆ ಸಿಕ್ಕಿದ್ದನ್ನು ಸೆಳೆದುಕೊಂಡು ಹರಿಯುವಂತೆ ಇವರ ಕಾವ್ಯವು ಕಾಲದ ಸ್ಪಂದನೆಗೆ ಹೊಂದಿಕೆಯಾಗುವ ವಿಚಾರಗಳನ್ನು ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡು ಮುನ್ನಡೆದಿದ್ದಾರೆ. ‘ಬಾಳೆಂಬ ವ್ರತ’ (2018) ಸಂಕಲನದಲ್ಲಿ ವ್ಯಷ್ಟಿಗಿಂತ ಸಮಷ್ಟಿಯ ಕಡೆ ಗಮನವಿದೆ. ಮೊದಲ ಸಂಕಲನದಲ್ಲಿ ವೈಯಕ್ತಿಕ ನೋವೇ ಕೇಂದ್ರವಾಗಿದ್ದರೆ ನಂತರದ ಕೃತಿಗಳಲ್ಲಿ ವೈಯಕ್ತಿಕ ನೋವಿನ ಮೂಲಕ ಸಾಮಾಜಿಕತೆಯತ್ತ ಮುಖ ಮಾಡಿದ ಕವನಗಳಿವೆ. ಆದರೆ ಇಲ್ಲಿ ವೈಯಕ್ತಿಕ ತವಕ ತಲ್ಲಣಗಳಿಗಿಂತ ಹೆಚ್ಚಾಗಿ ಸಮಾಜದ ಜ್ವಲಂತ ವಿದ್ಯಮಾನಗಳಿಗೆ ಮುಖಾಮುಖಿಯಾಗುವ ತುಡಿತವಿದೆ. ಕವಿತೆಗಳನ್ನು ಬರೆಯದೆ
ಮನೆಯ ಹಿತ್ತಿಲು ಮೂಲೆಯಲ್ಲೊಂದು ಸಸಿ
ನೆಟ್ಟು ನೀರೆರೆದು ಕಣ್ಣಿಟ್ಟು ಬೆಳೆಸಿದ್ದರೆ
ನೂರು ಗರಿ ಬಿಚ್ಚಿದ ನವಿಲಂತೆ
ಕಣ್ಣ ತುಂಬುವ ಹಚ್ಚನೆ ಮರವಾಗಿ ಕುಣಿಯುತ್ತಿತ್ತು
ಸಾರ್ಥಕತೆಯ ಕಣ್ಣೀರು ತುಂಬುತ್ತಿತ್ತು (ಹೃದಯವಂತಿಕೆ, ಪುಟ 1)
ಪುಟ್ಟ ಸೇವೆಗೆ ಬೆಟ್ಟದಂಥ ಸಾರ್ಥಕತೆ! ಇಲ್ಲಿ ಜೀವಪರ ನಿಲುವು ಪ್ರಾಯೊಗಿಕ ರೂಪವನ್ನು ತಾಳಬೇಕಾದ ಅಗತ್ಯವನ್ನು ಕಾಣುತ್ತೇವೆ. ಕುಳಿತುಕೊಂಡು ಬರೆಯುವುದು, ಸಾಮಾಜಿಕ ಕಳಕಳಿಯನ್ನು ಮರೆಯುವುದು ಸುಲಭ. ಆದರೆ ಅದನ್ನು ಕಾರ್ಯಗತಗೊಳಿಸುವುದು ಮುಖ್ಯ. ಒಂದೇ ಬಗೆಯ ಕೆಲಸವನ್ನೇ ಮಾಡಿ ಬೇಸತ್ತಾಗ ಬೇರೆ ಕಡೆ ಕಣ್ಣು ಹಾಯುವುದು ಸಹಜ. ಆದರೆ ಬರವಣಿಗೆಯ ಮೂಲಕ ಸಮಾಜ ಬದಲಾವಣೆಯಾದುದರ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಬರಹವು ಜಡ ಕೆಲಸವಲ್ಲ. ಜೀವಪರ ನಿಲುವಿನ ಪ್ರತೀಕ.
‘ಭಾಷಾ ಮಾರಣ ಹೋಮ’ವು ಪರಭಾಷಾ ಸಂಸ್ಕೃತಿಗಳ ಕಡೆ ವ್ಯಾಮೋಹವನ್ನು ತಾಳುವ ಯುವಜನತೆಯ ಮನೋಭಾವವನ್ನು ಲೇವಡಿ ಮಾಡುತ್ತದೆ.
ಹರಕು ಸೀರೆಯ ಅವ್ವ
ಮುರುಕು ಗುಡಿಸಲಲ್ಲಿದ್ದ ಅಜ್ಜಿ
ಹಚ್ಚಿಬಿಟ್ಟಿದ್ದಾಳೆ ಕಕ್ಕುಲತೆಯ ಮಾತು ಜ್ಯೋತಿ
ಎತ್ತಿ ಜೋಗುಳ ಹಾಡಿ
ಮಡಿಲಲ್ಲಿಟ್ಟು ಮುದ್ದಾಡಿದ
ತಾಯ್ನುಡಿಯನ್ನೇ ಮನೆ ಮಾರು
ದೇಶವನ್ನೇ ಮಾರಿಕೊಂಡಿದ್ದೇವಲ್ಲ ಅನ್ಯರಿಗೆ (ಪುಟ 4)
ಜಾಗತೀಕರಣದ ಹೆಸರಿನಲ್ಲಿ ಆಂಗ್ಲಭಾಷೆಯು ಲೋಕದ ಮೂಲೆ ಮೂಲೆಗಳಲ್ಲೂ ಆವರಿಸಿಕೊಂಡಿರುವ ವರ್ತಮಾನದ ಸಂದರ್ಭದಲ್ಲಿ ಈ ಕವಿತೆಯು ಪ್ರಸ್ತುತವೆನಿಸುತ್ತದೆ.
‘ಬಾಳಹಸೆಯು’ ಆರುಷಿಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಪ್ರತಿಭಟನೆಯ ಕೂಗನ್ನು ಮೊಳಗಿಸಿದರೆ ‘ಬಾಳದೀಕ್ಷೆ’ಯು ಹೆಣ್ಣಿನ ಬದುಕಿನ ಘಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಅಗತ್ಯವನ್ನು ಮನಗಾಣಿಸುತ್ತದೆ. ಆದರೆ ಇಲ್ಲಿನ ಕವಿತೆಗಳು ಹೆಣ್ಣಿನ ಬವಣೆಗಳಿಗೆ ಮೀಸಲಾಗದೆ ಎಲ್ಲರ ಬಾಳಿನ ಪರಿಸ್ಥಿತಿಯನ್ನು ಗಮನಕ್ಕೆ ತಂದುಕೊಂಡಿದ್ದಾರೆ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ.
ಅಣುಬಾಂಬುಗಳ ಕಿಚ್ಚಿನ ಸ್ಪರ್ಧೆಗೆ
ಬದುಕುವುದೇ ಭಯವಾಗಿದೆ ನಮಗೆ
ಈಗ ನೀಡುವವರಾರು ಅಭಯದ ವರಾ
ಇವು ನೀಡುವುವು ನಮಗೆ ಸಾಲು ಮರಾ
ಮರದ ನೆರಳಿರಲಿ ನಮ್ಮ ನೆತ್ತಿಗೆ
ಮೂರ್ಖರು ರಾಜ್ಯವಾಳ್ವ ಹೊತ್ತಿಗೆ (ನೆತ್ತಿಗಿರಲಿ ಮರದ ನೆರಳು, ಪುಟ 11)
ಜಗತ್ತಿಗೆ ಪ್ರೀತಿ, ದಯೆ, ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳಲ್ಲಿ ಬುದ್ಧನೂ ಒಬ್ಬ. ಲೋಕ ಕಲ್ಯಾಣಕ್ಕಾಗಿ ಮಿಡಿದ ಆತನ ವ್ಯಕ್ತಿತ್ವವು ಇಂದಿಗೂ ಪ್ರಸ್ತುತ. ಹಿಂಸೆಯು ಆಧುನಿಕ ಸಮಾಜದ ಗುಣವೆಂಬಂತೆ ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಬುದ್ಧನ ಅಹಿಂಸೆ, ಔದಾರ್ಯ ನಮ್ಮೊಳಗೆ ಮಿಡಿಯಬೇಕಾಗಿದೆ. ‘ಬರಲಾರೆಯಾ ಬುದ್ಧ ತಂದೆ’ಯು ಮಹಾಪುರುಷನ ವ್ಯಕ್ತಿತ್ವ, ಆದರ್ಶಗಳನ್ನು ಚಿತ್ರಿಸದೆ ವೈರತ್ವ, ಭ್ರೂಣಹತ್ಯೆ, ಹಸುಳೆಗಳ ಮೇಲೆ ದೌರ್ಜನ್ಯ, ರೈತರ ಆತ್ಮಹತ್ಯೆ, ಜೀತ ಪದ್ಧತಿ, ವೃದ್ಧ ತಂದೆತಾಯಿಯರ ಕಡೆಗಣನೆ, ಆಳುವ ವರ್ಗದ ದುರಾಡಳಿತ, ಮೇಲು ಕೀಳು ಭಾವನೆಗಳಿಂದ ನೊಂದಿರುವ ಸಮಾಜದಲ್ಲಿ ಇವುಗಳನ್ನು ನೋಡಿ ನಿರ್ಲಿಪ್ತನಾಗಿ ಉಳಿಯುವ ಸೂರ್ಯನ ಬದಲು ಬುದ್ಧನೇ ಬೆಳಕಾಗಿ ಹುಟ್ಟಿಬರಬೇಕೆಂಬ ಆಶಯ ಮನಮುಟ್ಟುತ್ತದೆ.
‘ಯಶೋಧರೆ ಮಲಗಿಲ್ಲ’ ಚರಿತ್ರೆಯ ಮಗ್ಗುಲನ್ನು ಸ್ತ್ರೀವಾದಿ ನೆಲೆಯಲ್ಲಿ ಶೋಧಿಸುತ್ತದೆ. ಸಿದ್ಧಾರ್ಥನು ಯಶೋಧರೆಯನ್ನು ತ್ಯಜಿಸಿ ಹೊರಟಾಗ ಆಕೆಯ ದಯನೀಯ ಪರಿಸ್ಥಿತಿಯತ್ತ ಕಣ್ಣು ಹಾಯಿಸುವ ಕವಯತ್ರಿಯು ಅದರಲ್ಲೇ ಲೀನವಾಗದೆ ಆಕೆಯ ಅಂತಃಸತ್ವವನ್ನು ಬಗೆದು ತೋರಿಸುತ್ತಾರೆ. ಆಕೆ ತಿರಸ್ಕೃತ ಹೆಣ್ಣು ಮಾತ್ರವಲ್ಲ ರಾಹುಲನ ತಾಯಿಯೂ ಹೌದು. ಅವನ ಅಭಿವೃದ್ಧಿಯೇ ಆಕೆಯ ಕರ್ತವ್ಯ. ಸಿದ್ಧಾರ್ಥನು ಬುದ್ಧನಾಗಲು ಹೊರಟದ್ದು ಒಂದರ್ಥದಲ್ಲಿ ಕರ್ತವ್ಯಲೋಪವೇ ಆದರೂ ಆಕೆಯು ಹಳಹಳಿಸದೆ
ಅವನಿಗಿರಲಿ ಮಾನವೀಯ ಚಿಂತೆ
ನನಗಿರಲಿ ಸೃಷ್ಟಿಯ ಒಡಲು
ತಾಯ್ತನವು ತೆರೆದಿಟ್ಟಿದೆ
ಜಗದಗಲ ನೆಲಮುಗಿಲು (ಪುಟ 7)
ಎನ್ನುವಲ್ಲಿ ಆಕೆಯ ಕರ್ತವ್ಯ ಪ್ರಜ್ಞೆಯು ಜಾಗೃತವಾಗಿ, ಅಸ್ತಿತ್ವದ ಬೇರು ಗಟ್ಟಿಯಾಗುವುದನ್ನು ಕಾಣಬಹುದು. ‘ವಿಧವೆಯೆಂಬ ಶಬುದ ಹೊರಲಾರೆ’ ಇದೇ ವಿಷಯವನ್ನು ಸಾಮೂಹಿಕ ನೆಲೆಯಲ್ಲಿ ಬಿಚ್ಚಿಡುತ್ತದೆ. ಕೃಷ್ಣನು ಗೋಕುಲವನ್ನು ತೊರೆದು ಮಥುರೆಗೆ ಹೋದಾಗ ಅತಂತ್ರರಾದ ಗೋಪಿಕೆಯರ ಪಾಡು ಇಲ್ಲಿದ್ದರೂ, ಪರಿಸ್ಥಿತಿಗೆ ತಲೆಬಾಗದೆ
ವೈಧವ್ಯದ ಯಗಾಂತರದ ಮೊರೆ ಹೊರೆಯ
ಮೊರೆ ಹರಿದು ಬೀಸಾಡಿ ಮೇಲೇಳುತ್ತೇವೆ
ಹೆಡೆಯನೆತ್ತಿ ನಿಂತಿದ್ದೇವಲ್ಲ ಅಷ್ಟೇ ಸಾಕು
ಸಾಕಿನ್ನು ಅವಲಂಬಿತ ಬದುಕು
ಎಂದು ನಿರ್ಧರಿಸುತ್ತಾರೆ. ತನ್ನೊಳಗಿನ ಭಾವಗಳನ್ನು ವ್ಯಕ್ತಪಡಿಸಲಾರದ ಸಮಾಜೋಧಾರ್ಮಿಕ ಆವರಣದಲ್ಲಿ ಬಂಧಿತರಾದ ಹೆಣ್ಣಿನ ಒಡಲಾಳದ ಬೇಗೆಯು ವಿಷಾದದ ಹಿನ್ನೆಲೆಯಲ್ಲಿ ಹೊರಟರೂ ವ್ಯವಸ್ಥೆಯ ಮುಖಕ್ಕೆ ರಾಚುವ ಪ್ರತಿರೋಧವು ಎದ್ದು ಕಾಣುತ್ತದೆ.
ಹೆಣ್ಣಿನ ಅಸ್ತಿತ್ವದ ಚಿಂತನೆಯನ್ನು ನಡೆಸುವ ‘ಬಂಡೆದ್ದ ಭ್ರೂಣ ನಾವು’ ಎಂಬ ರಚನೆಯು ‘ಎಷ್ಟೊಂದು ನಾವೆಗಳು’ ಸಂಕಲನದ ‘ನಾ ಬರಿ ಭ್ರೂಣವಲ್ಲ’ ಕವಿತೆಯ ಮುಂದುವರಿದ ಭಾಗವಾಗಿದೆ. ಅಲ್ಲಿ ಭ್ರೂಣವು ನಮ್ಮನ್ನು ಉಳಿಸೆಂದು ಬೇಡಿದರೆ ಇಲ್ಲಿ ಭ್ರೂಣಗಳು ಕಟುವಾದ ಮಾತಿನಿಂದ ಭ್ರೂಣಹತ್ಯೆಯನ್ನು ಪ್ರತಿಭಟಿಸುತ್ತವೆ.
ಸೇರವುದಿಲ್ಲ ಓ ಅವ್ವ
ತಪ್ಪಿಯೂ ನಿನ್ನ ಗರ್ಭಕ್ಕೆ
ಸುಳಿಯಲಾರೆವೊ ಅಪ್ಪ
ಒಪ್ಪುತ್ತ ನಿನ್ನ ಪೌರುಷ
ತಾಯಿಯೆಂಬ ಮಾಯಾವಿ
ಆಗಿರುವೆಯಲ್ಲ ಮೃತ್ಯುದೇವತೆ (ಪುಟ 37)
ತಾಯಿ ಎನ್ನುವವಳು ಹೆಣ್ಣಾಗಿದ್ದೂ ಹೆಣ್ಣು ಭ್ರೂಣಹತ್ಯೆಗೆ ಒಪ್ಪಿಗೆ ಸೂಚಿಸುವ ವಿರೋಧಾಭಾಸವನ್ನು ಕಾಣಬಹುದಾದರೆ, ‘ರಾಜರಾಣಿ ಕತಿ’ಯಲ್ಲಿ ಬ್ರಿಟನಿನ ರಾಣಿ ಹೆಣ್ಣು ಮಗುವನ್ನು ಹೆತ್ತಾಗ ಪ್ರಜೆಗಳು ಸಂಭ್ರಮಿಸಿದರೆ, ‘ಹೆಣ್ಣು ಹುಟ್ಟಿತವ್ವಾ’ ಎಂದು ಗೋಳಾಡುವ ನಮ್ಮ ದೇಶದ ಮಂದಿಯ ಪರಿಸ್ಥಿತಿಯು ಬಾಳಿನ ವಿಪರ್ಯಾಸಗಳನ್ನು ವ್ಯಂಜಿಸುತ್ತದೆ. ರಂಗು ರಂಗಿನ ಕನಸುಗಳೊಂದಿಗೆ ಗಂಡನ ಮನೆಗೆ ಕಾಲಿಟ್ಟ ಹೆಣ್ಣಿನ ಕನಸು ಹೋಳಾಗುವ ಬಗೆಯನ್ನು, ಹೆಣ್ಣಾದವಳು ಕಟ್ಟುಪಾಡಿನೊಳಗೆ ಬಾಳಬೇಕೆಂಬ ಒತ್ತಡವನ್ನು ‘ರಂಗೋಲಿ’ಯ ಸಾಲುಗಳು ಹೀಗೆ ವ್ಯಕ್ತಪಡಿಸುತ್ತವೆ.
ಹಸಿರು ಕಂಡಲ್ಲೆಲ್ಲ ಮೇಯಬೇಕೆಂಬ
ಗೂಳಿಯಂತೆ ಓಡುವ
ಇವನಿಗೆಲ್ಲಿಗೆ ದಾಂಪತ್ಯ ಸೂತ್ರ
ಅದೆಲ್ಲವೂ ನನ್ನ ಕೊರಳಿಗೆ ಮಾತ್ರ (ಪುಟ 48)
ಈ ಅನುಭವದ ಹಿನ್ನೆಲೆಯಲ್ಲಿ ‘ನಾನೇ ನಾನು ನಾರಿ’ ರೂಪುಗೊಂಡಿದೆ.
ನಭವ ಮುಚ್ಚಿದೆ ಮಹಲಿನಟ್ಟಹಾಸ
ನೆಲವ ಕಚ್ಚಿವೆ ಬಡವರಾವಾಸ
ಹೀಗೆ ಪ್ರಕೃತಿಯಲ್ಲೊಂದು
ವಿಕೃತಿ ವಿಕಟ ನಗೆ ನಕ್ಕಂತಿದೆ (ಪ್ರಕೃತಿ – ವಿಕೃತಿ, ಪುಟ 21)
ಎನ್ನುವಲ್ಲಿ ಸಾಮಾಜಿಕ – ಆರ್ಥಿಕ ಅಸಮಾನತೆಯ ಪರಿಕಲ್ಪನೆಯನ್ನು ಕಂಡರೆ
ದೀಪವಿಲ್ಲ ಮನೆ ಬಾಗಿಲಿಗೆ
ದೀಪಾವಳಿ ಬಂದು ನಿಂತಿದೆ
ಬೆಳಕು ನಿನ್ನ ಧರ್ಮವಾದರೆ
ದೀನರೆದೆಯಲ್ಲೂ ದೀಪ ಹಚ್ಚು (ಬೆಳಕು ಧರ್ಮ, ಪುಟ 24)
ಬಡವರ ಬಾಳ ಕತ್ತಲೆಯನ್ನು ಮನಗಾಣಿಸಿದ ರೀತಿಯು ಅರ್ಥಪೂರ್ಣವಾಗಿದೆ. ಎದ್ದು ಕಾಣುವ ಆಶಾ ಭಾವನೆ, ಬದುಕು ಉತ್ತಮಗೊಳ್ಳುವುದೆಂಬ ಭರವಸೆ, ಬದುಕಿನ ಉರಿಯಲ್ಲೂ ಬತ್ತದ ಅಂತಃಕರಣಗಳು ಇಲ್ಲಿನ ಕವಿತೆಗಳ ಧನಾತ್ಮಕ ಅಂಶವಾಗಿದೆ.
