Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ

    February 16, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬೆಳ್ಳಕ್ಕಿ ಸಾಲು’

    February 16, 2026

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬೆಳ್ಳಕ್ಕಿ ಸಾಲು’
    Article

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬೆಳ್ಳಕ್ಕಿ ಸಾಲು’

    February 16, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಲವು ಮಜಲುಗಳನ್ನು ಕಂಡ ಮಕ್ಕಳ ಕಾವ್ಯವು ಜೀವಂತಿಕೆಯಿಂದ ಕೂಡಿದ್ದು ವೈವಿಧ್ಯಮಯವಾಗಿ ಮುಂದುವರಿಯುತ್ತಿದೆ. ‘ಬೆಳ್ಳಕ್ಕಿ ಸಾಲು’ (2011) ಎಂಬ ಸಂಕಲನದ ಮೂಲಕ ಮಾಲತಿ ಪಟ್ಟಣಶೆಟ್ಟಿಯವರು ಈ ಪರಂಪರೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಮಕ್ಕಳ ಕುತೂಹಲವನ್ನು ತಣಿಸುವ, ಅರಿವಿನ ಪರಿಧಿಯನ್ನು ವಿಸ್ತರಿಸುವ, ಮೌಲ್ಯ ಆದರ್ಶಗಳನ್ನು ನಿರೂಪಿಸುವ, ಸಚ್ಚಾರಿತ್ರ್ಯವನ್ನು ನಿರ್ಮಿಸುವ ಕವಿತೆಗಳನ್ನು ಎಳೆಯರಿಗೆ ಖುಷಿಯಾಗುವಂತೆ ಒದಗಿಸಬೇಕಾದದ್ದು ಮಕ್ಕಳ ಕವನಗಳ ಕರ್ತವ್ಯ. ಕನ್ನಡದ ಭವಿಷ್ಯದ ಬಗ್ಗೆ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಳೆಯ ಮಕ್ಕಳು ಕೂಡ ಸಾಹಿತ್ಯದ ಒಲವನ್ನು ಪ್ರೋತ್ಸಾಹಿಸಲು ಯತ್ನಿಸಿರುವುದು ಸಂತಸದ ವಿಷಯ.

    ನಾಡಿನ ಜನಜೀವನದ ಅಂಗವಾಗಿ ಮೂಡಿದ 27 ಕವನಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಕೈಕೈ ಹಿಡಿದು ನಡೆದಾಡುವ ಪುಟ್ಟ ಮಕ್ಕಳಂತಿರುವ ಪ್ರಾಸಗಳು ತಾವಾಗಿಯೇ ಬೆಳೆದು ಮೈಗೂಡಿದ್ದು ಅಲ್ಲಲ್ಲಿ ಒಪ್ಪುವ ನುಡಿಗಳು ಛಂದೋಬದ್ಧವಾಗಿ ಮೈವೆತ್ತು ಮಿಂಚುತ್ತವೆ. ವಿವರಿಸಿದ ವಿಚಾರಗಳು ಪ್ರಗತಿಪರವಾಗಿದ್ದು ನೀತಿಬೋಧಕವಾಗಿವೆ. ಭಾಷೆ ಸರಳವಾಗಿದ್ದು ವಾಚನೀಯವಾಗಿದೆ. ಇದರಲ್ಲಿ ಅಜ್ಜ ಅಜ್ಜಿಯ ಪ್ರೀತಿಯಿದೆ. ದೇಶಭಕ್ತಿ, ನೀತಿಬೋಧೆ, ಐಕ್ಯಗಾನಗಳಿವೆ. ಪ್ರಾಣಿ ಪಕ್ಷಿಗಳ ಸಖ್ಯವಿದೆ. ‘ಬೆಳ್ಳಕ್ಕಿ ಸಾಲು’, ‘ಮಿಂಚು ಹುಳವೆ’ ಎಂಬ ಕವನಗಳಲ್ಲಿ ಪ್ರಕೃತಿಯ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಸಶಕ್ತ ಉಕ್ತಿಗಳಿಂದ ಗಮನ ಸೆಳೆಯುವ ಕವನಗಳು ವಾಸ್ತವ ಬದುಕಿನ ದಾರುಣತೆಯನ್ನು ಮೀರುವ ಹಂಬಲವನ್ನೊಳಗೊಂಡಿವೆ. ಬದುಕಿನ ಸ್ಥಿತ್ಯಂತರ, ವೈಚಿತ್ರ್ಯಗಳನ್ನು ಪ್ರಕೃತಿಯ ವಿದ್ಯಮಾನಗಳ ಮೂಲಕ ಪ್ರತಿಬಿಂಬಿಸುವ ಕವನಗಳಲ್ಲಿ ವೈಚಾರಿಕತೆ, ಪರಿಸರ ಪ್ರಜ್ಞೆ, ಬದುಕಿನ ಸಾವು ನೋವುಗಳ ವಿವರಗಳು ಕಂಡುಬರುತ್ತವೆ. ನಿಸರ್ಗದ ಪ್ರೇರಣೆ, ಪ್ರಾಣಿಪಕ್ಷಿ ಲೋಕ, ಜನಜೀವನಗಳನ್ನೊಳಗೊಂಡ ರಚನೆಗಳಲ್ಲಿ ಆದರ್ಶಗಳು ಮಿಂಚುತ್ತವೆ. ವಾಸ್ತವತೆ ಹೊಂಚುತ್ತದೆ. ಇಲ್ಲಿ ಸೂಚ್ಯವಾದ ದನಿಗಳಿವೆ. ವಾಚ್ಯವಾದ ಸ್ವರಗಳೂ ಇವೆ.

    ಸಹಜೀವಿಗಳನ್ನು ಕರೆದು ಪ್ರಕೃತಿಯ ಸೊಬಗನ್ನು ಹಂಚಿಕೊಂಡು ಸಂತಸಪಡುವ ಉತ್ಸಾಹವೇ ‘ಬಾರೋ ಗೆಳೆಯಾ’, ‘ಬಾರೋ ಮೋಡವೇ’, ‘ಹಾಡೋಣ ಬನ್ನಿ’, ‘ವಜ್ರಗಳು’ ಎಂಬ ಕವನಗಳ ಸ್ಥಾಯಿ ಭಾವವಾಗಿದೆ. ಛಂದೋಲಯಗಳು ಕವಿಯತ್ರಿಯ ಉತ್ಸಾಹ, ಸಂತಸ ಮತ್ತು ಭಾವನಿರ್ಭರತೆಗಳಿಗೆ ಒಗ್ಗಿಕೊಂಡಿವೆ. ‘ಪರಹಿಂಸೆ ಬೇಡ’, ‘ನಮ್ಮ ಹೊಣೆ’, ಎಂಬ ಕವನಗಳಲ್ಲಿ ಗದ್ಯದ ಲಯವನ್ನು ಮುರಿದು ಪದ್ಯಕ್ಕೆ ಹೊಂದಿಸಲಾಗಿದೆ. ಪರಿಸರ ಪ್ರೇಮಿಯೊಬ್ಬಳ ಉತ್ಸಾಹಗೀತೆಯಂತಿರುವ ‘ಸಸ್ಯಧರ್ಮ’ವು ಅಡಿಮುಡಿವರೆಗೂ ಲೋಕೋಪಯೋಗಿಯೆನಿಸಿಕೊಂಡ ಗಿಡಗಳ ಸಾರ್ಥಕ ಜೀವನವನ್ನು ಬಣ್ಣಿಸುತ್ತದೆ. ‘ಒಂದು ಕಾಳು ಪಡೆದುಕೊಂಡು ನೂರು ಕೊಡುವಂಥ ಹೃದಯ’ (ಪುಟ 24) ನಿಸರ್ಗದ ಹೃದಯ ವೈಶಾಲ್ಯತೆಯ ದ್ಯೋತಕವಾಗಿದೆ.

    ಕೆರೆಯ ತೆರೆಯ ಮೇಲೆ
    ಹಾರಿದೆ ಬೆಳ್ಳಕ್ಕಿ ಸಾಲು
    ಅಗೋ ಕೆರೆ ನಕ್ಕಂತಿದೆ
    ಮುತ್ತ ಹಾರ ತೊಟ್ಟಂತಿದೆ
    ಹೊಳೆವ ನೂರು ನಕ್ಷತ್ರದಾ ಮಾಲೆ ತೊಡಿಸಿದಂತಿದೆ (ಪುಟ 2)

    ಎಂಬ ಕಲ್ಪನೆ ಕನ್ನಡಕ್ಕೇ ಹೊಸತು.

    ರಾತ್ರಿಯ ಶಾಲೆಗೆ ಚಂದ್ರನೇ ಮಾಸ್ತರ್
    ಗುಂಪು ಗುಂಪಲಿ ನಕ್ಷತ್ರ ಹಾಜರ್ (ಪುಟ 8)

    ನೈಸರ್ಗಿಕ ನೋಟವನ್ನು ಮಕ್ಕಳ ಕಲಿಕೆಯ ಕ್ರಿಯೆಗೆ ಹೋಲಿಸಿದ ರೀತಿ ಸೊಗಸಾಗಿದೆ. ತಾನು ದೇವರಂತೆ ಕಾಣುವ ಪ್ರಕೃತಿಯನ್ನು ನಾಶಮಾಡುವ ಮಾನವನ ದುಷ್ಕೃತ್ಯಕ್ಕೆ ನೊಂದು ಬರೆದ ವಿಷಾದಗೀತೆಗಳನ್ನು ಓದುವಾಗ ಕವಯತ್ರಿಯರು ಈ ಹೊತ್ತಿನ ಸಂಕಟಗಳ ಬಗ್ಗೆ ಚಿಂತಿಸುತ್ತಿದ್ದಾರೆಂದು ಬೆರಗುಗೊಳ್ಳಬೇಕೋ, ಬಾಲ್ಯವನ್ನು ದುಗುಡಕ್ಕೆ ಒಡ್ಡುವ ಸಂದರ್ಭ ಸೃಷ್ಟಿಯಾಗಿರುವುದರ ಕುರಿತು ವಿಷಾದಿಸಬೇಕೋ ಎಂದು ಗೊಂದಲಪಡುವಂತಾಗುತ್ತದೆ.

    ಹೂವಿನ ಬಗ್ಗೆ ಬರೆದಂತೆ ತೋರುವ ‘ಪುಷ್ಪ ಕತೆ’ಯು ಮನುಷ್ಯರ ಬದುಕಿನ ಘಟ್ಟಗಳಾದ ಬಾಲ್ಯ, ಯೌವನ, ವೃದ್ಧಾಪ್ಯಗಳನ್ನು ಧ್ವನಿಸುತ್ತದೆ.

    ತೆರೆದೆ ಕಣ್ಣು ಮೆತ್ತಗೆ
    ಮಂಜು ಹನಿಯ ಮುತ್ತಿಗೆ
    ಬಾಲ ರವಿಯ ಸ್ನೇಹ ಜೊತೆಗೆ
    ಬಂತು ಬಾಲ್ಯ ಬೆಳಗಿಗೆ (ಬಾಲ್ಯ)
    ಬಂತು ಹರೆಯ ಮಳ್ಳ ಹೃದಯ
    ಕೊಟ್ಟೆ ಪ್ರೀತಿ ಚಿಟ್ಟೆಗೆ (ಯೌವನ)
    ಸಂಜೆ ಬಾನ್ಗೆ ಹೇಳಿ ಕತೆಯ (ವೃದ್ಧಾಪ್ಯ)

    ಎಂಬ ಸಾಲುಗಳು ಅದಕ್ಕೆ ಸಾಕ್ಷಿಯಾಗಿವೆ.

    ಸಮಾಜದೊಳಗೆ ನಿಷ್ಪಾಪಿ ಜೀವಗಳು ಎಂಥ ಒತ್ತಡದಲ್ಲಿ ಉಸಿರಾಡುತ್ತವೆ ಎಂಬುದನ್ನು ‘ದೊಡ್ಡವಳಾಗಲೊಲ್ಲೆ’ ಸಾಬೀತು ಪಡಿಸುತ್ತದೆ.

    ಇಷ್ಟು ಉದ್ದ ಸೀರೆಯುಟ್ಟು
    ಹೊಟ್ಟೆಯಲ್ಲಿ ಕೂಸನಿಟ್ಟು
    ಕಷ್ಟಪಡುವ ಅವ್ವಗಂತೂ ಬುದ್ಧಿ ಬೇಡವೇ
    ಅಪ್ಪ ರೇಗುವುದೇಕೋ
    ಅವ್ವ ರಾತ್ರಿ ಅಳುವುದೇಕೋ
    ಹೂವಿನಂಥ ನನ್ನ ಮನವು
    ಬಾಡಿ ಹೋಗುವುದೇತಕೋ (ಪುಟ 30)

    ಈ ಕವಿತೆಯು ವ್ಯಕ್ತಿತ್ವ ನಿರ್ಮಾಣವಾಗುವ ಮೊದಲೇ ಅಸ್ತಿತ್ವವನ್ನು ಕಳೆದುಕೊಂಡ ಬದುಕಿಗೊಡ್ಡಿದ ರೂಪಕವಾಗುತ್ತದೆ.

    ಪುಟಾಣಿಗಳಿಂದ ಹಿಡಿದು ವೈಚಾರಿಕವಾಗಿ ಪ್ರಬುದ್ಧರಾಗುತ್ತಿರುವ ಮಕ್ಕಳವರೆಗೆ ಬೇರೆ ಬೇರೆ ಹಂತದಲ್ಲಿ ಭಾವಬದ್ಧವಾಗಿ ಓದಬಲ್ಲ, ರಾಗಬದ್ಧವಾಗಿ ಹಾಡಬಲ್ಲ ವಿಭಿನ್ನ ವಿಷಯಗಳನ್ನು ಕುರಿತ ಕವನಗಳು ಇಲ್ಲಿವೆ. ಆದ್ದರಿಂದ ಇಲ್ಲಿನ ಕವನಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಸಮಾಜವು ರೂಢಿಸಿಕೊಂಡು ಬಂದಿರುವ ಶಿಷ್ಟಾಚಾರ, ಸಾಹಿತ್ಯವು ಮೂಡಿಸಿದ ವಿಶಿಷ್ಟ ಸಂಸ್ಕೃತಿಯ ಪ್ರಭಾವ, ದುಡಿವ ಜನರಿಗೆ ಮಣಿಯುವ ವಿನಯ, ಕೃತಜ್ಞತೆ, ಪ್ರಕೃತಿಯ ಮತ್ತು ಬದುಕಿನ ಚೆಲುವನ್ನು ಕಂಡು ಅನುಭವಿಸಿ ಹಿಗ್ಗುವ ಪ್ರಸನ್ನಭಾವಗಳು ಕವಿಯತ್ರಿಯ ಚೇತನವನ್ನು ಮುನ್ನಡೆಸಿವೆ. ಬಾಳ್ವೆಯ ನೋವು, ಕಣ್ಣೀರುಗಳನ್ನು ಕಂಡು ಕರಗುವ ಆರ್ದಹೃದಯವನ್ನು ಕಾಣುತ್ತೇವೆ. ಬದುಕಿನ ನೋವು ನಲಿವುಗಳು, ಜೀವನದ ಜಟಿಲತೆಯನ್ನು ಕುರಿತ ಚಿಂತನೆ ಕಂಡುಬರುತ್ತದೆ. ಬಾಳ್ವೆಯ ಸುಕುಮಾರ ಮುಖಗಳನ್ನಲ್ಲದೆ ವಿಕಾರ ರೇಖೆಗಳನ್ನೂ ಗುರುತಿಸಿದ ಇವರ ಚಿಕಿತ್ಸಕ ದೃಷ್ಟಿ-ಮಾನವೀಯ ಸ್ಪಂದನಗಳು ಕವನಗಳುದ್ದಕ್ಕೂ ಕೆಲಸ ಮಾಡಿವೆ. ಹೊಸ ಕಲ್ಪನೆ, ಕುಣಿಯುವ ನಡೆ, ಮಿದುವಾದ ಭಾವಗಳ ಮೂಲಕ ಮನಸ್ಸಿಗೆ ಮುದನೀಡುವ ಕವನಗಳು ಲಯಗಾರಿಕೆ ಮತ್ತು ವಿವರಗಳ ಸಂಯೋಜನೆಗಳಿಗೆ ಸೀಮಿತವಾಗದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅವ್ಯವಹಾರ, ಕ್ರೌರ್ಯಗಳಿಗೆ ಮುಖಾಮುಖಿಯಾಗುತ್ತವೆ.

    ಈ ಸಂಕಲನವನ್ನು ಓದಿದಾಗ ಕವಯತ್ರಿಯು ತನ್ನ ಅಮಾಯಕ ಕಣ್ಣುಗಳಿಂದ ಲೋಕವನ್ನು ನೋಡಿದ ಬಗೆ ವ್ಯಕ್ತವಾಗುತ್ತದೆ. ಕೆಲವು ರಚನೆಗಳಂತೂ ಆಗ ತಾನೇ ನಿದ್ದೆಹೋದ ಮಗುವಿನ ನಗೆಯಂತೆ ಮನೋಹರವಾಗಿವೆ. ಮುಗ್ಧತೆ ಮತ್ತು ಮುಕ್ತತೆಯನ್ನು ಹೊಂದಿದ ರಚನೆಗಳು ಬಾಲ್ಯವನ್ನು ದಾಟಿದವರ ಹೃದಯದೊಳಗೂ ಇಳಿಯುತ್ತವೆ. ತಾನು ಕಂಡ, ಕೇಳಿದ, ಓದಿದ ವಿಷಯಗಳನ್ನು, ಕತೆಗಳನ್ನು, ಮೆಲುದನಿಯಲ್ಲಿ ವಿವರಿಸುತ್ತಿದ್ದಂತೆ ಅಭಿವೃದ್ಧಿಯ ನೆಪದಲ್ಲಿ ಉಂಟಾಗುವ ಪ್ರಕೃತಿ ನಾಶದ ವಿರುದ್ಧ ನೋವಿನಿಂದ ಕೂಡಿದ ದನಿಯು ಕೇಳಿಸುತ್ತದೆ. ಪರಿಸರದ ನಾಶದಿಂದ ಉಂಟಾಗುವ ದುಷ್ಪರಿಣಾಮ, ಸಮಾಜದಲ್ಲಿ ಕಂಡುಬರುವ ಕ್ರೌರ್ಯಗಳ ಸೂಕ್ಷ್ಮ ಚಿತ್ರಣ ಮನಸ್ಸಿಗೆ ನಾಟುತ್ತದೆ. ಸಮಾಜದ ಓರೆಕೋರೆಗಳನ್ನು ಕಂಡು ಮರುಗುವ ಮನಸ್ಸು ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುತ್ತಾ ಬದುಕಿನ ಸಾರ್ಥಕತೆಯನ್ನು ಮೆರೆಯುತ್ತದೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ
    Next Article ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ
    roovari

    Add Comment Cancel Reply


    Related Posts

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ

    February 16, 2026

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.