ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಷ್ಠ ಸಾಹಿತಿಗಳ ಪೈಕಿ ತಗಳಿ ಶಿವಶಂಕರ ಪಿಳ್ಳೆಯವರೂ ಒಬ್ಬರು. ಕತೆ, ಕಾದಂಬರಿ, ನಾಟಕ, ಆತ್ಮಕತೆ, ಜೀವನಚರಿತ್ರೆ ಮತ್ತು ಪ್ರವಾಸ ಕಥನಗಳ ಮೂಲಕ ಕೇರಳದಲ್ಲಿ ಮನೆಮಾತಾಗಿರುವ ಅವರ ಕೃತಿಗಳು ಭಾರತೀಯ ಮತ್ತು ಪಾಶ್ಚಾತ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಹಿಂದುಳಿದವರು, ಕಡುಬಡವರು, ಶ್ರಮಜೀವಿಗಳು, ರೈತರು, ಮೀನುಗಾರರು ಮತ್ತು ನೊಂದವರ ಬದುಕಿಗೆ ಅಕ್ಷರಗಳ ರೂಪವನ್ನು ನೀಡಿದ ಕೃತಿಗಳ ಪೈಕಿ ಅವರ ‘ಚೆಮ್ಮೀನು’ ಎಂಬ ಕಾದಂಬರಿಯೂ ಒಂದು. ಇದನ್ನು ‘ಕೆಂಪು ಮೀನು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದ ನಾ. ಕಸ್ತೂರಿಯವರ ಅನುವಾದದ ಲೋಪದೋಷಗಳು ಈ ಕಾದಂಬರಿಯನ್ನು ಮತ್ತೊಮ್ಮೆ ಅನುವಾದಿಸಲು ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥ ಮೋಹನ ಕುಂಟಾರ್ ಅವರಿಗೆ ಪ್ರೇರಣೆಯನ್ನು ನೀಡಿವೆ. ಮಲಯಾಳಂನಲ್ಲಿ ಚೆಮ್ಮೀನ್ ಎಂದರೆ ಸಿಗಡಿ ಎಂದರ್ಥವೇ ಹೊರತು ಕೆಂಪು ಮೀನು ಎಂದಲ್ಲ. ಆದ್ದರಿಂದ ಮೋಹನ ಕುಂಟಾರ್ ಅವರು ಶೀರ್ಷಿಕೆಯ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರಿಗೂ ಪರಿಚಿತವಾದ ‘ಚೆಮ್ಮೀನು’ ಎಂಬ ಪದವನ್ನು ಬಳಸಿಕೊಂಡಿದ್ದಾರೆ. ನಾ. ಕಸ್ತೂರಿಯವರ ಭಾಷಾಂತರದಲ್ಲಿ ಕಂಡುಬರುವ ಅರ್ಥವ್ಯತ್ಯಾಸ ಮತ್ತು ಭಾವವ್ಯತ್ಯಾಸಗಳನ್ನು ಗುರುತಿಸಿ, ಅವುಗಳನ್ನು ಮೂಲಪಠ್ಯದೊಂದಿಗೆ ಇಟ್ಟು, ತಮ್ಮ ಅನುವಾದವನ್ನೂ ಉದ್ಧರಿಸಿ ಯಥಾವತ್ತಾದ ಅನುವಾದದ ಬಗ್ಗೆ ಓದುಗರಿಗೆ ಮನವರಿಕೆಯಾಗುವ ರೀತಿಯಲ್ಲಿ ಪ್ರಸ್ತಾವನೆಯನ್ನು ಬರೆದಿದ್ದಾರೆ. “ಇದರ ಶೀರ್ಷಿಕೆ ಕಳೆದ ಮೂರ್ನಾ ಲ್ಕು ದಶಕಗಳ ಅವಧಿಯಲ್ಲಿ ಬಹು ಚರ್ಚಿತ ವಿಷಯ. ಕಾದಂಬರಿಯ ಶೀರ್ಷಿಕೆ ಸಾಂಕೇತಿಕವಾಗಿ ಮಾತ್ರವಿದೆ. ಅದರಲ್ಲಿ ಚೆಮ್ಮೀನಿನ ಕತೆಯೇನೂ ಇಲ್ಲ. ಆದರೆ ಚೆಮ್ಮೀನೇ ಮೊದಲಾದ ಸಮುದ್ರೋತ್ಪನ್ನಗಳನ್ನು ಅವಲಂಬಿಸಿ ಕಡಲತೀರದಲ್ಲಿ ಬದುಕುವ ಸಮುದಾಯದ ಬದುಕಿನ ವಿವರಗಳನ್ನು ಯಥಾರ್ಥವಾಗಿ ಅನಾವರಣಗೊಳಿಸುವ ಕಾದಂಬರಿಯಿದು” (ಪುಟ 13) ಎಂದು ಅನುವಾದಕರು ಸರಿಯಾಗಿ ಗುರುತಿಸಿದ್ದಾರೆ.
ಚೆಂಬನ್ ಕುಂಞು ಮತ್ತು ಚಕ್ಕಿ ದಂಪತಿಗಳಿಗೆ ಕರುತ್ತಮ್ಮ ಮತ್ತು ಪಂಚಮಿ ಎಂಬ ಇಬ್ಬರು ಹೆಣ್ಣು ಮಕ್ಕಳು. ಕಡಲತೀರದಲ್ಲಿ ಮೀನಿನ ವ್ಯಾಪಾರವನ್ನು ಮಾಡುವ ಪರೀಕುಟ್ಟಿ (ಫರೀದ್ ಕುಟ್ಟಿ ಎಂಬ ಹೆಸರಿನ ಅಪಭ್ರಂಶ ರೂಪ) ಎಂಬ ಮುಸ್ಲಿಂ ಯುವಕ ಮತ್ತು ಕರುತ್ತಮ್ಮ ಪರಸ್ಪರ ಪ್ರೀತಿಸುತ್ತಾರೆ. ಆಕೆಗಾಗಿ ಏನು ಮಾಡುವುದಕ್ಕೂ ಸಿದ್ಧನಾಗಿರುವ ಪರೀಕುಟ್ಟಿಯು ಸ್ವಂತ ದೋಣಿ ಮತ್ತು ಬಲೆಗಳನ್ನು ಖರೀದಿಸಿ ಮೀನಿನ ವ್ಯಾಪಾರವನ್ನು ಮಾಡಿ ಶ್ರೀಮಂತನಾಗಲು ಹಾತೊರೆಯುತ್ತಿದ್ದ ಚೆಂಬನ್ ಕುಂಞುವಿಗೆ ಅದುವರೆಗಿನ ಸಂಪಾದನೆಯಾದ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಬಿಡುತ್ತಾನೆ. ಹಣ ಸಂಪಾದನೆಯ ಬಗ್ಗೆ ಮಾತ್ರ ಆಲೋಚಿಸುವ ಆತನು ಪರೀಕುಟ್ಟಿಯ ಔದಾರ್ಯದ ರಹಸ್ಯವನ್ನು ಅರಿತುಕೊಳ್ಳುವುದಿಲ್ಲ. ಆದರೆ ಅವನ ಹೆಂಡತಿ ಚಕ್ಕಿಗೆ ಈ ಸೂಕ್ಷ್ಮವು ತಿಳಿಯುತ್ತದೆ. ಪರೀಕುಟ್ಟಿಯ ಪಾಲಿಗೆ ಅವನ ಅಷ್ಟೂ ವರ್ಷದ ಸಂಪಾದನೆಯು ಒಂದೇ ಏಟಿಗೆ ಇಲ್ಲದಾಗುವುದರಿಂದ, ಸಹಾಯವನ್ನು ಮಾಡಿದ ನೆಪದಲ್ಲಿ ಆತನು ತನಗೆ ಮತ್ತಷ್ಟು ಹತ್ತಿರವಾಗಬಹುದು ಎಂಬ ಅಳುಕು ಮೂಡಿದ್ದರಿಂದ ತನ್ನ ಅಪ್ಪನು ಅವನಿಂದ ಹಣವನ್ನು ಪಡೆದುಕೊಳ್ಳುವುದು ಕರುತ್ತಮ್ಮನಿಗೆ ಇಷ್ಟವಿಲ್ಲ. ಇದನ್ನು ಲೆಕ್ಕಿಸದ ಚೆಂಬನ್ ಕುಂಞು ಸ್ವತಂತ್ರ ಮೀನುಗಾರನಾಗಿ ದುಡಿದು ಹಣವಂತನಾದಾಗ ಅಹಂಕಾರವು ಹೆಚ್ಚಿ ಸುತ್ತುಮುತ್ತಲಿನವರೊಡನೆ ಕ್ರೂರವಾಗಿ ವರ್ತಿಸುತ್ತಾನೆ. ಆತನ ಮೀನುಗಳನ್ನು ಖರೀದಿಸಿ ವ್ಯಾಪಾರವನ್ನು ಮಾಡಬಹುದೆಂದುಕೊಂಡ ಪರೀಕುಟ್ಟಿಗೆ ಅವನು ಮೀನುಗಳನ್ನು ಕೊಡುವುದಿಲ್ಲ. ಸಾಲವನ್ನು ಹಿಂತಿರುಗಿಸುವುದಿಲ್ಲ. ಕರುತ್ತಮ್ಮ ಮತ್ತು ಪರೀಕುಟ್ಟಿಯ ನಡವೆ ಸಂಬಂಧವಿದ್ದುದರಿಂದಲೇ ಚೆಂಬನ್ ಕುಂಞುವು ಇದ್ದಕ್ಕಿದ್ದಂತೆ ಶ್ರೀಮಂತನಾದನೆಂದು ಊರಿನವರು ಸುದ್ದಿಯನ್ನು ಹಬ್ಬಿಸುತ್ತಾರೆ. ಬೆಸ್ತರ ಸಂಪ್ರದಾಯದಂತೆ ಕರುತ್ತಮ್ಮಳು ಬೇರೆ ಜಾತಿಯವನನ್ನು ಮದುವೆಯಾಗಲು ಸಾಧ್ಯವಿಲ್ಲದಿರುವುದರಿಂದ ಕರುತ್ತಮ್ಮನ ಹೆತ್ತವರು ಗಟ್ಟಿಗನೂ, ಬಲಶಾಲಿಯೂ ಆಗಿರುವ ಪಳನಿಯೊಂದಿಗೆ ಆಕೆಯ ಮದುವೆಯನ್ನು ಮಾಡುತ್ತಾರೆ. ಕರುತ್ತಮ್ಮನು ಕಳಂಕಿತೆಯಾಗಿರುವುದರಿಂದಲೇ ಆಕೆಯನ್ನು ಅನಾಥನೂ, ಬಡವನೂ ಆದ ಪಳನಿಗೆ ಕೊಡಲಾಗಿದೆ ಎಂದು ಊರಿನವರು ಹೇಳುತ್ತಾರೆ. ಕರುತ್ತಮ್ಮ ಇದನ್ನೆಲ್ಲ ಸಹಿಸಿಕೊಂಡು ಪಳನಿಯೊಂದಿಗೆ ಹೊಸ ಬದುಕನ್ನು ಆರಂಭಿಸುತ್ತಾಳೆ. ಆಕೆಯ ಶೀಲದ ಬಗ್ಗೆ ಗುಸುಗುಸು ಕೇಳಿಸಿಕೊಂಡರೂ ತಲೆಕೆಡಿಸಿಕೊಳ್ಳದಿದ್ದ ಪಳನಿಗೆ ಕ್ರಮೇಣ ಸಂಶಯಗಳು ಹುಟ್ಟುತ್ತವೆ. ಕಡಲಿಗೆ ಮೀನು ಹಿಡಿಯಲು ಹೋಗುವ ಗಂಡನ ಪ್ರಾಣವು ಹೆಂಡತಿಯ ಶೀಲದಲ್ಲಿದೆ. ಅದುವೇ ಆಕೆಯ ಗಂಡನ ಪ್ರಾಣವನ್ನು ಕಾಪಾಡುತ್ತದೆ. ಆಕೆಯು ಶೀಲಗೆಟ್ಟರೆ ಅವಳು ಮಾತ್ರವಲ್ಲ, ಅವಳ ಗಂಡ, ಕುಟುಂಬ ಮತ್ತು ಸಮಾಜದ ಅಧಪತನವಾಗುತ್ತದೆ ಎಂಬ ಜನಪದ ನಂಬಿಕೆಗೆ ವಿಧೇಯರಾಗಿರುವ ಪಳನಿಯ ಸಂಗಡಿಗರು ಕರುತ್ತಮ್ಮನ ಶೀಲವನ್ನು ಶಂಕಿಸಿ ಆತನ ಕೈಬಿಡುತ್ತಾರೆ. ಆದರೆ ಗಂಡನ ಪ್ರಾಣವನ್ನು ಉಳಿಸಬೇಕಾದ ಜವಾಬ್ದಾರಿಯು ತನ್ನ ಮೇಲಿದೆ ಎಂದು ಅರಿತುಕೊಂಡಿದ್ದ ಕರುತ್ತಮ್ಮನು ತನ್ನ ತಾಯಿಯು ತೀರಿಕೊಂಡ ಸುದ್ದಿಯನ್ನು ಹೇಳಲು ಬಂದಿದ್ದ ಪರೀಕುಟ್ಟಿಯನ್ನು ಒಳಗೆ ಕರೆಯದೆ ತನ್ನ ಶೀಲವನ್ನು ನಿಧಿಯಂತೆ ಕಾಪಾಡಿಕೊಂಡರೂ ಇಲ್ಲಸಲ್ಲದ ಅಪವಾದಗಳಿಗೆ ಬಲಿಯಾಗಿ ಬದುಕು ಮುಳುಗತೊಡಗುತ್ತದೆ. ಪರೀಕುಟ್ಟಿಯೊಂದಿಗೆ ಅವಳಿಗೆ ಪ್ರೇಮವಿತ್ತು ಎಂದು ಅರಿತುಕೊಂಡ ಬಳಿಕ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ ಪಳನಿಯು ಕಾರ್ಮೋಡ ಮತ್ತು ಬಿರುಗಾಳಿಯಿಂದ ಕೂಡಿದ ರಾತ್ರಿಯಲ್ಲಿ ಸಮುದ್ರಕ್ಕೆ ತೆರಳುತ್ತಾನೆ. ಅವನ ಗಾಳಕ್ಕೆ ದೊಡ್ಡ ವಾಟೆ ಮೀನು ಸಿಕ್ಕಿಕೊಳ್ಳುತ್ತದೆ. ಪಳನಿ ಅದನ್ನು ತನ್ನ ಕಡೆಗೆ ಎಳೆದರೆ ಮೀನು ಅವನನ್ನು ಕಡಲ ಸುಳಿಗೆ ಎಳೆಯುತ್ತದೆ. ಎಳೆದೆಳೆದು ಬಳಲಿದ ಪಳನಿಯು ‘ಕರುತ್ತಮ್ಮಾ’ ಎಂದು ಚೀರಿ ಮುಳುಗುವ ವೇಳೆಯಲ್ಲಿ ಆಕೆಯು ಚೆಂಬನ್ ಕುಂಞುವಿಗೆ ಹುಚ್ಚು ಹಿಡಿದ ವಿಚಾರವನ್ನು ತಿಳಿಸಲು ಬಂದ ಪರೀಕುಟ್ಟಿಯ ತೆಕ್ಕೆಯಲ್ಲಿರುತ್ತಾಳೆ. ಎರಡು ದಿನಗಳ ಬಳಿಕ ಪರಸ್ಪರ ತಬ್ಬಿಕೊಂಡಿದ್ದ ಕರುತ್ತಮ್ಮ ಮತ್ತು ಪರೀಕುಟ್ಟಿಯ ಹೆಣಗಳು ದಡಕ್ಕೆ ತಲುಪುತ್ತವೆ.
ತಗಳಿಯವರು ಚಿತ್ರಿಸುವ ಸಮಾಜವು ಬೆಸ್ತರ ಸಮುದಾಯದೊಳಗಿನ ಜಾತಿ ಶ್ರೇಣೀಕರಣದ ಮೆಟ್ಟಿಲುಗಳನ್ನು ಹೊಂದಿದೆ. ಮೇಲ್ನೋಟಕ್ಕೆ ಎಲ್ಲರೂ ಒಂದೇ ಜಾತಿ ಎಂಬಂತೆ ತೋರುತ್ತಿದ್ದರೂ ಪರಸ್ಪರ ಭಿನ್ನವಾಗಿದ್ದುಕೊಂಡು ಒಂದನ್ನೊಂದು ಅವಲಂಬಿಸಿ ಬದುಕುತ್ತಿರುವ ವಿನ್ಯಾಸವನ್ನು ಹೆಣೆದಿದ್ದಾರೆ. ಬೆಸ್ತರಿಗೇ ವಿಶಿಷ್ಟವಾಗಿರುವ ವ್ಯವಸ್ಥೆಯಲ್ಲಿ, ಪರಸ್ಪರ ಪ್ರೀತಿ, ಹೊಟ್ಟೆಕಿಚ್ಚು, ದ್ವೇಷಗಳ ಸಂಬಂಧದಲ್ಲಿ ಅನಿವಾರ್ಯವೆಂಬಂತೆ ಅವರು ಒಟ್ಟು ಬದುಕೊಂದನ್ನು ಬದುಕುತ್ತಾರೆ. ಇಲ್ಲಿ ಮೇಲ್ಜಾತಿಯ ಭೂಮಾಲೀಕವರ್ಗದ ಕ್ರೌರ್ಯ ಶೋಷಣೆಗಳು ಇರದಿದ್ದರೂ ಬೆಸ್ತರ ಸಮುದಾಯದವರು ತಮ್ಮವರನ್ನೇ ಶೋಷಿಸುವ ಕ್ರೌರ್ಯವನ್ನು ಕಾಣುತ್ತೇವೆ. ಇವುಗಳ ನಡುವೆಯೂ ಜಾತಿಮತಗಳನ್ನು ಮೀರಿದ ಮಾನವೀಯ ಸಂಬಂಧವು ಸಾಧ್ಯವಾಗಿದೆ. ಸಾಮಾಜಿಕ ಬದುಕಿನಲ್ಲಿ ಅವರವರ ಜಾತಿ, ವರ್ಗ, ಲಿಂಗಗಳನ್ನು ಆಧರಿಸಿ ಸ್ಥಾನಮಾನಗಳನ್ನು ನಿರ್ಧರಿಸಲಾಗಿದ್ದರೂ ಒಂದು ಸಮುದಾಯವಾಗಿಯೂ ಅವರಿಗೆ ಒಂದು ಅಸ್ತಿತ್ವವಿದೆ. ಸಂಭ್ರಮದ ಜೊತೆಗೆ ಸಿಟ್ಟು, ಅತೃಪ್ತಿ, ಜಗಳ ಮತ್ತು ಒಳ ಬಂಡಾಯಗಳು ಇವೆ. ಮೀನುಗಾರರೊಳಗೆ ಅರೆಯ, ವಲಕ್ಕಾರನ್, ಮುಕ್ಕುವನ್, ಮರಕ್ಕಾಲ, ವಾಲನ್ ಎಂಬ ಜಾತಿಗಳಿದ್ದರೂ ಜಾತಿಯ ಮುಖ್ಯಸ್ಥನಾದ ಅರಯಯ್ಯನು ತನಗೆ ಕೊಡುವ ಕಾಣಿಕೆಯನ್ನು ಆಧರಿಸಿ ವಲಕ್ಕಾರರಿಗೆ (ವಲಕ್ಕಾರನ್ ಎಂದರೆ ಬಲೆಯನ್ನು ಹೊಂದಿದವನು ಎಂದು ಅರ್ಥ) ಮಾತ್ರವೇ ದೋಣಿ ಮತ್ತು ಬಲೆಗಳನ್ನು ಕೊಂಡುಕೊಳ್ಳಲು ಅನುಮತಿಯನ್ನು ಕೊಡುತ್ತಿದ್ದ. “ಅವರವರೇ ಹಣ ತೆತ್ತು ದೋಣಿ ಬಲೆಗಳನ್ನು ತರುತ್ತಿದ್ದರೆ ಅರಯಯ್ಯನಿಗೆ ಏಕೆ ಕಾಣಿಕೆಯನ್ನು ಕೊಡಬೇಕು?” (ಪುಟ 55) ಎಂಬ ವೇಲಾಯುಧನ ಮಾತಿನಲ್ಲಿ ಅಧಿಕಾರವನ್ನು ವಿರೋಧಿಸುವ ಸೂಚನೆಯಿದೆ. ಮರಕ್ಕಾಲನಾದ ಚೆಂಬನ್ ಕುಂಞುವಿಗೆ ಬಲೆಯನ್ನು ಖರೀದಿಸುವ ಹಕ್ಕಿಲ್ಲದಿದ್ದರೂ ಅವನಿಂದ ಹಣವನ್ನು ಪಡೆದು ದೋಣಿ ಬಲೆಗಳನ್ನು ಕೊಳ್ಳಲು ಒಪ್ಪಿಗೆಯನ್ನು ನೀಡುವುದು ಏಕೆ? ಎಂಬ ಪ್ರಶ್ನೆಯೂ ಏಳುತ್ತದೆ. ಕರುತ್ತಮ್ಮನ ತಾಯಿ ಚಕ್ಕಿಯೂ ತನ್ನ ಯೌವನದಲ್ಲಿ ಕಡಲತೀರದ ಪಾವಿತ್ರ್ಯವನ್ನು ಕೆಡಿಸಿದವಳಂತೆ. ಕಾಳಿ ಕುಂಞುಯ ಕೂಸಿನ ತಂದೆ ಒಣಮೀನನ್ನು ಖರೀದಿಸಲು ಮನೆಮನೆಗೂ ಹೋಗುತ್ತಿದ್ದ ಮುಸಲ್ಮಾನನಂತೆ. ಅಲ್ಲಿ ಸೇರಿರುವ ಹೆಂಗಸರಿಗೂ ಅವರ ತಾಯಿಯರ ಬಗೆಗೂ ಕತೆಗಳಿವೆ. “ಹೆಂಗಸರೆಲ್ಲ ಕಡಲತೀರವನ್ನು ಅಶುದ್ಧ ಮಾಡಿದವರೆಂದೋ? ಕಡಲತೀರದ ತತ್ವ ಸಿದ್ಧಾಂತಗಳಿಗೆ ಯಾವ ಅರ್ಥವೂ ಇಲ್ಲವೇ? ಈ ಹೆಂಗಸರಿಗೆಲ್ಲ ಅನಾಚಾರದ ಕತೆಗಳಿದ್ದೂ ಪಡುವಣ ಕಡಲು ಮೊದಲಿನಂತೆ ಇದೆಯಲ್ಲ. ಹಾಗಾದರೆ ಹಳೆಯ ಕತೆಗಳ ಅರ್ಥವೇನು? ಬರೇ ಸುಳ್ಳಿನ ಕಂತೆಗಳು” (ಪುಟ 61) ಎಂದು ಚಿಂತಿಸುವ ಕರುತ್ತಮ್ಮನ ಯೋಚನಾಲಹರಿಯು ತಗಳಿಯವರ ಮನೋಧರ್ಮವನ್ನೇ ಪ್ರತಿಬಿಂಬಿಸುತ್ತದೆ.
ಬೆಸ್ತರ ಯುವತಿ ಕರುತ್ತಮ್ಮ ಮತ್ತು ಮುಸಲ್ಮಾನ ಯುವಕ ಪರೀಕುಟ್ಟಿಯರ ನಡುವಿನ ಪ್ರೇಮವೇ ಕಾದಂಬರಿಯ ಕೇಂದ್ರವಾಗಿದ್ದರೂ ವಸ್ತುವನ್ನು ಆ ಕಾಲದ ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುವುದರಲ್ಲಿ ತಗಳಿವರ ಸ್ವಂತಿಕೆ ಇದೆ. ಅವರನ್ನು ಮಲಯಾಳಂ ಕಾದಂಬರಿ ಲೋಕದಲ್ಲಿ ಗುರುತಿಸುವಂತೆ ಮಾಡಿದ ‘ರಂಡ್ ಇಡಂಙಳಿ’ (ಎರಡು ಬಳ್ಳ) ಎಂಬ ಕಾದಂಬರಿಯಲ್ಲೂ ತ್ರಿಕೋನ ಪ್ರೇಮವೇ ವಸ್ತುವಾಗಿದೆ. ಕುಟ್ಟನಾಡಿನ ಅಸ್ಪೃಶ್ಯ ಜನಾಂಗದವರ ಬದುಕು ಮತ್ತು ಸಮಸ್ಯೆಗಳನ್ನು ಚಿತ್ರಿಸುವ ಈ ಕಾದಂಬರಿಯಲ್ಲಿ ಕೋರ ಮತ್ತು ಚಾತ್ತ ಎಂಬ ಯುವಕ ಮಿತ್ರರು ಚಿರುದೆಯೆಂಬ ಯುವತಿಯನ್ನು ಪ್ರೇಮಿಸುತ್ತಾರೆ. ಚಿರುದೆಯು ಕೋರನನ್ನು ಮದುವೆಯಾಗುತ್ತಾಳೆ. ಆಕೆಯ ಮಾನಭಂಗಕ್ಕೆ ಯತ್ನಿಸಿದ ತನ್ನ ಯಜಮಾನನ ಮಗನನ್ನು ಕೊಂದ ಕೋರನು ಸೆರೆಮನೆಗೆ ಹೋದಾಗ ಬಸುರಿಯಾಗಿದ್ದ ಚಿರುದೆಯನ್ನು ಸಂರಕ್ಷಿಸುವ ಚಾತ್ತನು ಆಕೆಯ ಹೆರಿಗೆಯನ್ನು ಮಾಡಿಸಿ, ತಾಯಿ ಮತ್ತು ಮಗುವನ್ನು ಕೋರನಿಗೆ ಒಪ್ಪಿಸುವ ಹೃದಯಸ್ಪರ್ಶಿ ಕತೆಯು ಅದರಲ್ಲಿದೆ. ಆದರೆ ‘ಚೆಮ್ಮೀನು’ ಕಾದಂಬರಿಯ ತ್ರಿಕೋನ ಪ್ರಣಯವು ‘ರಂಡ್ ಇಡಂಙಳಿ’ಯ ಕತೆಗಿಂತ ಭಿನ್ನವಾಗಿದೆ. ಸ್ಪರ್ಶದ ಹಂಗು ತೊರೆದ ಪರೀಕುಟ್ಟಿ ಮತ್ತು ಕರುತ್ತಮ್ಮನ ಪ್ರೇಮದಲ್ಲಿ ಉತ್ಕಟತೆಯಿದೆ. ಆದರೆ ಅವರು ತಮ್ಮ ಜಾತಿ, ಸಂಸ್ಕೃತಿಯ ಬಂಧನವನ್ನು, ಸಂಬಂಧದ ವಿನಯವನ್ನು ಮೀರಲಾರರು. ಬೇರೆ ಧರ್ಮಗಳಿಗೆ ಸೇರಿದವರಾದುದರಿಂದ ಅವರ ಪ್ರೇಮವು ವಿಫಲವಾಗುತ್ತದೆ. ಮಾತು ಮಾತಿಗೂ ಅವಮಾನಿತರಾಗಿ ಸಮಾಜದ ಪಾಲಿಗೆ ನಿಕೃಷ್ಟರಾಗುತ್ತಾರೆ. ಕರುತ್ತಮ್ಮಳು ಸಮಾಜಕ್ಕೆ ಒಪ್ಪಿತವಾದ ರೀತಿಯಲ್ಲಿ ಪಳನಿಯನ್ನು ಮದುವೆಯಾದಾಗ ಪರೀಕುಟ್ಟಿಯು ಅವಿವಾಹಿತನಾಗಿ ಉಳಿಯುತ್ತಾನೆ. ಅಲ್ಲಿಂದ ಕಾದಂಬರಿಯಲ್ಲಿ ತ್ರಿಕೋನ ಪ್ರೇಮದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.
ಪ್ರೇಮದ ಗಂಡಾಂತರಗಳನ್ನು ಬಿಂಬಿಸುವ ಕಾದಂಬರಿಯು ವಿಷಮ ಸಂಸಾರದ ಚಿತ್ರಗಳನ್ನು ಒದಗಿಸುತ್ತದೆ. ದುಡಿಯುವ ಜನರು ಬಡತನದಿಂದಾಗಿ ಬದುಕಿನ ಕ್ಷುದ್ರ ಸಂತೋಷಗಳಿಂದಲೂ ವಂಚಿತರಾಗುವ ಬಗೆಯನ್ನು ವಸ್ತುನಿಷ್ಠವಾಗಿ ಚಿತ್ರಿಸುತ್ತದೆ. ಕತೆಯ ವಸ್ತುವಿನಂತೆ ಕಥನದ ರೀತಿಯೂ ಜನರ ಬಾಳುವೆಯಿಂದ ಬಂದಿದೆ. ತಗಳಿಯವರು ಪರೀಕುಟ್ಟಿಯನ್ನು ವ್ಯವಹಾರ ಜ್ಞಾನವಿಲ್ಲದ ದುರ್ಬಲ ಪಾತ್ರವಾಗಿ ಚಿತ್ರಿಸಿದ್ದರೂ ಅವನಲ್ಲಿರುವ ದಕ್ಷತೆ, ಸಭ್ಯತೆ, ಪ್ರಾಮಾಣಿಕತೆ, ಪ್ರೀತಿಸಿದ ಹೆಣ್ಣು ಬೇರೊಬ್ಬನನ್ನು ಮದುವೆಯಾದರೂ ದ್ವೇಷ ಮತ್ತು ಅಸೂಯೆಯನ್ನು ತಾಳದೆ ಅವಳನ್ನು ಮತ್ತಷ್ಟು ಪ್ರೀತಿಸುವ ಹೃದಯವಂತಿಕೆಯೊಂದಿಗೆ ಆತನ ಅಸಾಧಾರಣ ಮಾನವೀಯ ಗುಣಗಳನ್ನು ಗುರುತಿಸುತ್ತಾರೆ. ಆದರೆ ಚೆಂಬನ್ ಕುಂಞು ಹಾಗಲ್ಲ. ಬಡ ಮರಕ್ಕಾಲನಾಗಿದ್ದ ಆತನು ತನ್ನ ಮಗಳನ್ನು ಪ್ರೀತಿಸುತ್ತಿದ್ದ ಪರೀಕುಟ್ಟಿಯ ಬಳಿಯಿಂದ ಸಾಲವನ್ನು ಪಡೆದು ದೋಣಿ ಮತ್ತು ಬಲೆಗಳನ್ನು ಖರೀದಿಸಿ ಮೀನು ಹಿಡಿದು ಮಾರಾಟವನ್ನು ಮಾಡಿ ಹಣವಂತನಾಗುತ್ತಾನೆ. ಅದಕ್ಕೆ ಅನುಗುಣವಾಗಿ ಸಮಾಜದಲ್ಲಿರುವ ಅವನ ಸ್ಥಾನದಲ್ಲಿಯೂ ಬದಲಾವಣೆಯಾಗುತ್ತದೆ. ಅನೇಕರು ಅವನಲ್ಲಿ ಸಾಮಾಗ್ರಿಗಳನ್ನು ಅಡವಿಟ್ಟು ಸಾಲವನ್ನು ಪಡೆದುಕೊಳ್ಳುತ್ತಾರೆ. ಬಡ ಬೆಸ್ತನಾಗಿದ್ದವನು ಮಾಲೀಕನಾಗಿ ಬದಲಾಗುವ ವೈಚಿತ್ರ್ಯವನ್ನು ಕಾಣುತ್ತೇವೆ. ಹಂತಹಂತವಾಗಿ ಪ್ರಗತಿಯನ್ನು ಹೊಂದುತ್ತಿದ್ದಂತೆ ಸುತ್ತುಮುತ್ತಲಿನವರ ಮೇಲೆ ಅನಾದರ, ಅನಾಸ್ಥೆ, ಹಣದ ಮೇಲೆ ಹಪಾಹಪಿ, ದರ್ಪಗಳು ಹೆಚ್ಚಾಗಿ ಮಾನವೀಯತೆಯನ್ನು ಮರೆಯುತ್ತಾನೆ. ಮೇಲ್ಜಾತಿಯವನಿರಲಿ, ಕೆಳಜಾತಿಯವನಿರಲಿ, ಹಣ, ಅಧಿಕಾರ ಮತ್ತು ಅಂತಸ್ತು ದೊರೆತರೆ ಆತನೂ ಭೂಮಾಲೀಕನ ಬುದ್ಧಿಯನ್ನು ತೋರಿಸುತ್ತಾನೆ ಎಂಬುದಕ್ಕೆ ಚೆಂಬನ್ ಕುಂಞು ಉದಾಹರಣೆಯಾಗುತ್ತಾನೆ. ತೀರಕ್ಕೆ ಬಂದ ದೋಣಿಯನ್ನು ಸುತ್ತುವರಿದ ಮಕ್ಕಳನ್ನು ತಳ್ಳುವಾಗ ಆತನ ಮಗಳಾದ ಪಂಚಮಿಗೆ ಏಟು ಬಿದ್ದು ಗಾಯಗೊಳ್ಳುವುದು ಪರಿಸ್ಥಿತಿಯ ಕ್ರೂರ ವ್ಯಂಗ್ಯವಾಗಿದೆ. ಪರೀಕುಟ್ಟಿಯ ಮಾನವೀಯತೆ, ಔದಾರ್ಯಗಳಿಗೆ ಪ್ರತಿಯಾಗಿ ಚೆಂಬನ್ ಕುಂಞುವಿನ ಸ್ವಾರ್ಥ, ಲಾಭಕೋರತನ ಹಾಗೂ ಕೃತಘ್ನತೆಗಳ ನಡುವಿನ ವೈರುಧ್ಯಗಳು ಗಮನಾರ್ಹವಾಗಿವೆ. ಪರೀಕುಟ್ಟಿಯು ಕರುತ್ತಮ್ಮನ ಮೇಲೆ ಕಣ್ಣಿಟ್ಟೇ ಹಣವನ್ನು ನೀಡಿದ್ದರೂ, ಅವನಿಗೆ ಕೊಟ್ಟ ಸಾಲಕ್ಕೆ ಸರಿದೂಗುವಷ್ಟು ಮೀನುಗಳನ್ನು ಕೊಂಡುಕೊಳ್ಳುವ ಉದ್ದೇಶ ಇದ್ದಿರಬಹುದಾಗಿದ್ದರೂ ಚೆಂಬನ್ ಕುಂಞು ಮೀನನ್ನು ಕೊಡದೆ ಕೃತಘ್ನತೆಯನ್ನು ತೋರಿಸಿದಾಗ ಪರೀಕುಟ್ಟಿಯು ಅವನ ಕುಟುಂಬದ ನೆಮ್ಮದಿಯನ್ನು ಹಾಳುಮಾಡುವುದಿಲ್ಲ. ತನ್ನ ಉನ್ನತಿಯ ಸಂದರ್ಭದಲ್ಲಿ ಚೆಂಬನ್ ಕುಂಞುವಿಗೆ ತನ್ನ ಕರ್ಮದ ಬಗೆಗೆ ಸಂಶಯಗಳಿರುವುದಿಲ್ಲ. ಬದುಕಿನಲ್ಲಿ ಸೋತ ಮೇಲೆ ಚೆಂಬನ್ ಕುಂಞು ತನ್ನ ಮಿತಿಗಳ ಕುರಿತು ಯೋಚಿಸುವಂತಾಗುತ್ತದೆ. ತನ್ನ ಕೃತಿಗಳ ಔಚಿತ್ಯವನ್ನು ತಾನೇ ಪ್ರಶ್ನಿಸುವಂತಾಗುತ್ತದೆ. “ತನಗೆ ಇನ್ನೇನು ಉಳಿದಿದೆ? ಹೆಂಡತಿಯಿಲ್ಲ. ಮಕ್ಕಳಿಲ್ಲ. ಕಷ್ಟಪಟ್ಟು ಸಂಪಾದಿಸಿದ ದೋಣಿ ಮತ್ತು ಬಲೆಗಳಿಲ್ಲ. ಎಲ್ಲರೂ ದೂರವಾದರು. ಲೆಕ್ಕ ಹಾಕಿ ನೋಡಿದಾಗ ಐನೂರ ತೊಂಭತ್ತು ರೂಪಾಯಿಗಳಿವೆ. ಪರೀಕುಟ್ಟಿಗೆ ಕೊಡಬೇಕಾದ ಸಾಲ ಬಾಕಿಯಿದೆ. ಆತನು ಕರುತ್ತಮ್ಮಳನ್ನು ಪ್ರೀತಿಸದಿದ್ದರೆ ಹೀಗಾಗುತ್ತಿರಲಿಲ್ಲ. ನನ್ನನ್ನು ನಾಶ ಮಾಡಲು, ಕರುತ್ತಮ್ಮನನ್ನು ಹಂಗಿಗೆ ಒಳಗಾಗಿಸಲು ಕೊಟ್ಟ ಹಣ ನನಗಿನ್ನು ಬೇಡ (ಪುಟ 236-237)” ಎಂಬಲ್ಲಿ ಅವನಿಗೆ ಶೂನ್ಯದ ದರ್ಶನವಾದ ಬಗೆಯು ವ್ಯಕ್ತವಾಗುತ್ತದೆ. ತಗಳಿಯವರ ‘ಏಣಿಪ್ಪಡಿಗಳ್’ (ಏಣಿಯ ಮೆಟ್ಟಿಲುಗಳು) ಕಾದಂಬರಿಯ ಕೇಶವನ್ ನಾಯರ್ ಇವನ ಪಾತ್ರದ ವಿಸ್ತೃತ ರೂಪವಾಗಿದೆ. ಚೆಂಬನ್ ಕುಂಞುವು ಪರೀಕುಟ್ಟಿಯನ್ನೇ ಏಣಿಯ ಮೆಟ್ಟಿಲಾಗಿ ಉಪಯೋಗಿಸಿಕೊಂಡು ಮೇಲೇರಿದ ಅವನನ್ನೇ ತಳ್ಳಿ ಹಾಕಿದರೆ ‘ಏಣಿಪ್ಪಡಿಗಳ್’ ಕಾದಂಬರಿಯಲ್ಲಿ ಮಧ್ಯಮ ವರ್ಗದ ನಾಯರ್ ಯುವಕನು ಹಲವರ ನೆರವಿನೊಂದಿಗೆ ಉದ್ಯೋಗದ ಏಣಿಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ, ಸೆಕ್ರಟರಿಯೇಟಿನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರವನ್ನು ಪಡೆದ ಬಳಿಕ ತಾನು ಏರಿದ ಏಣಿಯನ್ನೇ ಕೆಳಗುರುಳಿಸಿ ಸೊಕ್ಕಿನಿಂದ ಮೆರೆಯುತ್ತಿರುವಾಗಲೇ ಕಾರಣಾಂತರಗಳಿಂದ ಜಾರಿ ಬೀಳುವ ವಿಪರ್ಯಾಸಗಳ ಹಿನ್ನೆಲೆಯಲ್ಲಿ ಕಾದಂಬರಿಗಳು ಎದುರಿಸುವ ಸಮಸ್ಯೆಗಳ ಸಂಕೀರ್ಣತೆಯು ಮುಖ್ಯವಾಗುತ್ತದೆ.
ಹೆಣ್ಣಿನ ಬಾಳನ್ನು ಚಿತ್ರಿಸುವಾಗ ತಗಳಿಯವರು ಅವಳ ನೋವು ಯಾತನೆಗಳನ್ನು ಅನುಕಂಪದಿಂದ ಚಿತ್ರಿಸಿದ್ದಾರೆ. ಮದುವೆಯ ದಿನದಂದು ಏಳುವ ಗದ್ದಲ, ಗುಲ್ಲುಗಳಿಂದಾಗಿ ಗೊಂದಲಪುರವೇ ನಿರ್ಮಾಣವಾಗುತ್ತದೆ. ಹೆಣ್ಣಿನ ತಂದೆಗೆ ಕೊಡಬೇಕಾದ ‘ತೆರ’ (ವಧು ದಕ್ಷಿಣೆ)ದ ವಿಷಯದಲ್ಲಿ ಪಳನಿ ಮತ್ತು ಚೆಂಬನ್ ಕುಂಞುವಿನ ಕಡೆಯವರ ನಡುವೆ ನಡೆಯುವ ವಾಗ್ವಾದ, ಮಾತಿಗೆ ಮಾತು ಬೆಳೆದು “ಈ ತೀರವನ್ನು ಹಾಳು ಮಾಡುವ ಮೊದಲು ಕಳುಹಿಸಬೇಕೆಂದಲ್ಲವೇ ಈ ಮದುವೆ ಮಾಡುತ್ತಿರೋದು ? ನಮ್ಮ ತೀರ ಹಾಳಾದರೂ ಚಿಂತೆಯಿಲ್ಲ. ಊರಿನಲ್ಲಿಲ್ಲದ ತೆರ ಕೊಟ್ಟು ಮದುವೆಯಾಗಬೇಕು!” (ಪುಟ 133) ಎಂಬ ಮಾತಿನಲ್ಲಿ ಕರುತ್ತಮ್ಮನ ಶೀಲದ ಬಗೆಗಿನ ಕುಹಕವನ್ನು ಕೇಳಿ ಪ್ರಜ್ಞೆ ತಪ್ಪಿ ಬೀಳುವ ಚಕ್ಕಿ, ಗಲಿಬಿಲಿಗೊಳ್ಳುವ ಚೆಂಬನ್ ಕುಂಞು ಮುಂತಾದವರಿಂದಾಗಿ ಸಂದಿಗ್ಧ ವಾತಾವರಣ ರೂಪುಗೊಳ್ಳುತ್ತದೆ. ಕರುತ್ತಮ್ಮ ಮದುವೆಯಾಗಿ ಹೊರಟುಹೋದರೆ ವಿವಶಳಾಗಿ ಮಲಗಿದ ಚಕ್ಕಿಗೆ ಒಂದು ಗುಟುಕು ನೀರು ಕಾಯಿಸಿಕೊಡಲು ಯಾರೂ ಇಲ್ಲ. ಆದರೆ ಮದುವೆಯಾದ ಹುಡುಗಿಯನ್ನು ಕರೆದುಕೊಂಡು ಹೋಗದಿರಲು ಸಾಧ್ಯವಿಲ್ಲ. ತಾಯಿ ಚೇತರಿಸಿದ ಬಳಿಕ ಹೆಣ್ಣನ್ನು ಕರೆದುಕೊಂಡು ಹೋಗಬೇಕೆಂದು ಚೆಂಬನ್ ಕುಂಞು ಪಳನಿಯ ಬಳಿ ಪರಿ ಪರಿಯಾಗಿ ವಿನಂತಿಸಿದರೆ ಆತನೂ ನಿರ್ಧಾರಕ್ಕೆ ಬರಲಾರದ ಸ್ಥಿತಿಯಲ್ಲಿದ್ದಾನೆ. ಆತನು ಮನೆ ಬಳಗ ಇರುವವನಲ್ಲ. ಮನೆ ಮಾಡುವ ಮೂಲಕ ತನಗೊಂದು ಶಾಶ್ವತ ನೆಲೆಯಾಗಬೇಕೆಂಬ ಉದ್ದೇಶದಿಂದ ಆತನು ಮದುವೆಯಾಗಿದ್ದ. ಮದುವೆಯಾದ ಬಳಿಕ ಹುಡುಗಿಯನ್ನು ಬಿಟ್ಟು ಹೋಗುವುದರಲ್ಲಿ ಅವನಿಗೆ ತೃಪ್ತಿಯಿಲ್ಲ. ಆತ ಹಲವು ಕೆಲಸಗಳನ್ನು ಮಾಡಬೇಕಿದ್ದು ತಡವಾದರೆ ಕಷ್ಟ. ಇದರಿಂದ ಆತನು ಹುಡುಗಿಯನ್ನು ಕರೆದೊಯ್ಯಲು ಸಿದ್ಧನಾಗುತ್ತಾನೆ. ಇವನ ಮನಸ್ಸನ್ನು ತಿಳಿಯದೆ ಆಕ್ಷೇಪವನ್ನು ಎತ್ತಿದವರು ಕರುತ್ತಮ್ಮನ ಅಭಿಪ್ರಾಯವನ್ನು ಕೇಳಿದಾಗ ಅವಳಿಗೂ ಗೊಂದಲ. ಹೆಸರು ಕೆಟ್ಟ ಭಯದಿಂದ, ಭವಿಷ್ಯವನ್ನು ನೆನೆದು ಮನೆ ಬಿಟ್ಟು ತೆರಳುವ ಆತುರದಲ್ಲಿದ್ದಾಗಲೇ ಅಮ್ಮನು ಕುಸಿದು ಬಿದ್ದುದರಿಂದ ಅಪ್ಪನನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದುಕೊಂಡು ಆಕೆ ಹೋಗದಿರಲು ನಿರ್ಧರಿಸುತ್ತಾಳೆ. ಆದರೆ ಹಾಸಿಗೆ ಹಿಡಿದ ಪರಿಸ್ಥಿತಿಯಲ್ಲಿಯೂ ಚಕ್ಕಿಯು ಕರುತ್ತಮ್ಮನನ್ನು ಅಲ್ಲಿಂದ ಹೊರಡುವಂತೆ ಕೇಳಿಕೊಳ್ಳುತ್ತಾಳೆ. ‘ಪರೀಕುಟ್ಟಿಯನ್ನು ಬಿಟ್ಟು ಹೋಗಲಾಗುವುದಿಲ್ಲ ಅಲ್ಲವೇ?’ ಎಂದು ಚುಚ್ಚಿ ನುಡಿದಾಗ ಕರುತ್ತಮ್ಮನು ತನ್ನ ನಿರ್ಧಾರವನ್ನು ಬದಲಿಸಿ ಪಳನಿಯೊಂದಿಗೆ ಹೋಗಲು ಸಿದ್ಧಳಾಗುತ್ತಾಳೆ. ಪಳನಿಯ ಮಾತಿಗಿಂತಲೂ ಇವಳ ನಿರ್ಧಾರವು ಚೆಂಬನ್ ಕುಂಞುವಿನ ಮೇಲೆ ಇಮ್ಮಡಿ ಆಘಾತವನ್ನು ಉಂಟು ಮಾಡುತ್ತದೆ. ಆಕೆಯ ಮನಸ್ಸಿನ ತುಮುಲಗಳನ್ನು ಅರಿಯದ ಚೆಂಬನ್ ಕುಂಞು ಸಿಟ್ಟಿನಿಂದ ತನ್ನ ಮಗಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಈ ಸನ್ನಿವೇಶವನ್ನು ಸೃಷ್ಟಿಸಿದ ರೀತಿ, ವಿಸ್ತರಿಸಿದ ಕ್ರಮ, ಗೊಂದಲದಲ್ಲೇ ಮುಕ್ತಾಯಗೊಳಿಸುವ ರೀತಿಯಲ್ಲಿ ತಗಳಿಯವರ ಪ್ರತಿಭೆಯು ಎದ್ದು ಕಾಣುತ್ತದೆ. ಪಳನಿಯ ಜಾತಿಯ ಬಗ್ಗೆ ತಿಳಿಯದಿದ್ದುದರಿಂದ ಕೆಲವರು ಊಟ ಮಾಡದೆ ಎದ್ದು ಹೋಗುತ್ತಾರೆ. ಬೆಸ್ತರ ಸಮುದಾಯದೊಳಗಿನ ಇಕ್ಕಟ್ಟು, ಅವರಲ್ಲೂ ವಿಷಮವಾಗಿ ಉಳಿದಿರುವ ಜಾತಿಭೇದ ಮತ್ತು ಅಶಾಂತ ಜ್ವಾಲಾಮುಖಿಯನ್ನು ಪ್ರಸ್ತುತಪಡಿಸುವ ರೀತಿಯು ಮುಖ್ಯವಾಗುತ್ತದೆ. ಮದುವೆಯಲ್ಲಿ ಎತ್ತುವ ವೈಯಕ್ತಿಕ, ಸಾಮಾಜಿಕ ಮತ್ತು ಧಾರ್ಮಿಕ ಪ್ರಶ್ನೆಗಳು ಕಾದಂಬರಿಯ ಸಂವಿಧಾನವನ್ನು ಮುನ್ನಡೆಸುವ ಮುಖ್ಯ ಪರಿಕರಗಳಾಗುತ್ತವೆ.
ತಂದೆ, ತಾಯಿ ಮತ್ತು ಮಗಳು ಈ ಮೂವರೂ ಒಳ್ಳೆಯ ಜೀವಗಳೇ. ಮೂವರಿಗೂ ಪರಸ್ಪರ ಪ್ರೀತಿಯೇ. ಒಬ್ಬರಿಗಾಗಿ ಇನ್ನೊಬ್ಬರು ಮರುಗುವವರೇ. ಆದರೆ ಬದುಕಿನ ಏರಿಳಿತಗಳು, ಕಡಲ ತಡಿಯ ಜೀವನ ಮತ್ತು ಆಚಾರಗಳು ಅವರ ಸಂಬಂಧಗಳನ್ನು ಎಷ್ಟು ವಕ್ರಗೊಳಿಸುತ್ತವೆ, ಸಾಮಾನ್ಯ ಘಟನೆಗಳು ತಿರುಚಿಕೊಂಡು ಜೀವನವನ್ನು ಹೇಗೆ ಹಾಳು ಮಾಡುತ್ತವೆ ಎಂಬುದನ್ನು ಪಾತ್ರಗಳ ನೋವಿನ ಮೂಲಕ ಅರ್ಥ ಮಾಡಿಕೊಳ್ಳಬಹುದು. ಮೂವರೂ ನಿರಪರಾಧಿಗಳು. ಒಳ್ಳೆಯ ಮನಸ್ಸಿನವರು. ಆದರೂ ನೋವನ್ನು ಅನುಭವಿಸುತ್ತಾರೆ. ‘ಇದಕ್ಕೆಲ್ಲ ಅರ್ಥವೇನು ದೇವರೇ?’ ಎಂದು ನವ್ಯ ಸಾಹಿತ್ಯವು ಕೇಳತೊಡಗಿದ ಪ್ರಶ್ನೆಯನ್ನು ಈ ಕಾದಂಬರಿಯೂ ಅಬ್ಬರವಿಲ್ಲದೆ ಕೇಳುತ್ತದೆ. ಅನಾಥನಾಗಿದ್ದ ಪಳನಿಗೆ ಆಸೆಗಳೇನೂ ಇಲ್ಲ. ಈ ಮನೋಭಾವವು ಬದುಕಿನಲ್ಲಿ ಸಾಮಾನ್ಯ ಅಪೇಕ್ಷೆಗಳನ್ನು ಇಟ್ಟುಕೊಂಡ ಕರುತ್ತಮ್ಮನಿಂದ ಅವನನ್ನು ಬೇರೆಯಾಗಿಸುತ್ತದೆ. ಪಳನಿಯನ್ನು ಮದುವೆಯಾಗಿ ದಾಂಪತ್ಯದ ಸುಖವನ್ನು ಅನುಭವಿಸಿದರೂ ಆಕೆಗೆ ಪರೀಕುಟ್ಟಿಯ ಮೇಲಿನ ಮೋಹದಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಗಂಡ ಹೆಂಡತಿಯರ ನಡುವೆ ದೈಹಿಕ ಆಕರ್ಷಣೆ ಮತ್ತು ತೃಪ್ತಿಗಳು ಇದ್ದರೂ ಕೊಡುಕೊಳ್ಳುವಿಕೆ ಇರುವುದಿಲ್ಲ. ಅಪರಾಧಿ ಪ್ರಜ್ಞೆ, ದ್ವಂದ್ವ ಮತ್ತು ಅಪೂರ್ಣತೆಯ ಅರಿವು ಅವಳನ್ನು ಕಾಡುತ್ತಿರುತ್ತದೆ. ತನ್ನ ಅನುಭವವನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕು ಎಂಬ ಬಯಕೆಯಿದ್ದರೂ ಅದರ ಪ್ರತಿಕ್ರಿಯೆ ಏನಾಗಬಹುದು ಎಂಬ ಬಗ್ಗೆ ಅವಳಲ್ಲಿ ಸಂಶಯ ಮತ್ತು ಭಯವಿದೆ. ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ, ಅಕ್ಕತಂಗಿಯರಿಲ್ಲದೆ ಒಂಟಿಯಾಗಿ ಬೆಳೆದು ಒರಟುತನವನ್ನು ಮೈಗೂಡಿಸಿಕೊಂಡ ಪಳನಿಯು ಹೆಣ್ಣಿನ ಆತಂಕಗಳನ್ನು ಕಲ್ಪಿಸಿಕೊಳ್ಳಲಾರ. ನಿಜವನ್ನು ಹೇಳಿದರೆ ಆತನು ಕರುತ್ತಮ್ಮನನ್ನು ನಂಬಲಾರ. ಒಂದು ವೇಳೆ ನಂಬಿದರೂ ತಪ್ಪು ತಿಳಿದುಕೊಳ್ಳುವ ಸಾಧ್ಯತೆಗಳಿವೆ. ಈ ತಲ್ಲಣಗಳಿಂದಾಗಿ ಸಂಬಂಧವು ಯಾಂತ್ರಿಕವಾಗಿ ಉಳಿದರೂ ಅದರ ಬಗೆಗಿನ ವ್ಯಂಗ್ಯ, ವಿರೋಧಗಳ ಗ್ರಹಿಕೆಯು ಸಾಧ್ಯವಾಗುತ್ತದೆ. ಆಕೆಯು ಬಯಸುವ ವಸ್ತುಗಳನ್ನು ಒದಗಿಸಲಾರದ್ದಕ್ಕೆ ಖೇದವನ್ನು ಅನುಭವಿಸುವ ಪಳನಿಗೆ ಅವಳ ಮೇಲೆ ಪ್ರೀತಿಯಿದೆ. ಆಕೆಯ ಶೀಲದ ಬಗೆಗಿನ ಸಂಶಯಗಳು ವೈಷಮ್ಯಕ್ಕೆ ಕಾರಣವಾದರೂ ಆಕೆಯನ್ನು ತ್ಯಜಿಸುವುದಿಲ್ಲ. ಕರುತ್ತಮ್ಮನು ದುರ್ಬಲ ಮತ್ತು ಅಸಹಾಯ ಹೆಣ್ಣಾಗಿದ್ದರೂ ಬಾಳಿನ ಸಮಸ್ಯೆಗಳನ್ನು ನಿರ್ಲಿಪ್ತವಾಗಿ ಎದುರಿಸುತ್ತಾಳೆ. ಅವಳ ನಿರ್ಲಿಪ್ತತೆಯು ಬದುಕನ್ನು ಇಡಿಗಣ್ಣಾಗಿ ನೋಡುವ ಧೈರ್ಯದಿಂದ ಹುಟ್ಟಿಕೊಂಡಿದೆಯೇ ಹೊರತು ಉದಾಸೀನತೆಯಿಂದಲ್ಲ. ನೆರೆಹೊರೆಯವರು, ಗಂಡ-ಹೆಂಡತಿ, ತಂದೆ-ಮಗಳು, ಅಕ್ಕ-ತಂಗಿ ಮುಂತಾದ ಬಾಂಧವ್ಯಗಳ ಮೇಲೆ ನೆರಳೊಂದು ಹೇಗೆ ಬೀಳಬಹುದು! ಜೀವ ಜೀವಗಳ ನಡುವೆ ಪ್ರೀತಿ ಇದ್ದಾಗಲೂ ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೆಷ್ಟು ಕಷ್ಟ! ಎಷ್ಟು ಹತ್ತಿರವಿದ್ದರೂ ಎಷ್ಟು ದೂರ!
ಪ್ರಗತಿಶೀಲ ಲೇಖಕರಾದ ತಗಳಿಯವರು ಪ್ರಗತಿಪರ ವಿಚಾರವನ್ನು ಯಾವ ರೀತಿಯಲ್ಲಿ ಸ್ವೀಕರಿಸಿದರು ಎನ್ನುವುದನ್ನು ಪ್ರೇಮ ಮತ್ತು ವಿವಾಹಗಳ ಕಲ್ಪನೆಯನ್ನು ಆಧರಿಸಿದ ಸನ್ನಿವೇಶಗಳ ಮೂಲಕ ನೋಡಬಹುದು. ನಾಲ್ಕನೇ ವೇದದವರು (ಅಥರ್ವವೇದವು ಋಗ್ವೇದ ಯಜುರ್ವೇದ ಮತ್ತು ಸಾಮವೇದದಷ್ಟು ಪ್ರಾಚೀನವಲ್ಲ ಎಂಬ ನಂಬಿಕೆಯ ಕಾರಣಕ್ಕೆ ಮೂರೇ ವೇದಗಳು. ಹಾಗಾಗಿ ಕುರಾನ್ ನಾಲ್ಕನೇ ವೇದ ಎಂದು ಪ್ರತೀತಿ) ಎನಿಸಿಕೊಂಡ ಮುಸಲ್ಮಾನ ಸಮುದಾಯಕ್ಕೆ ಸೇರಿದ ಪರೀಕುಟ್ಟಿ ಮತ್ತು ಹಿಂದೂ ಧರ್ಮದವಳಾದ ಕರುತ್ತಮ್ಮ ಅವರ ಸಂಬಂಧದ ವ್ಯಾಖ್ಯಾನಕ್ಕೆ ಕಾದಂಬರಿಯ ಶರೀರದಲ್ಲಿಯೇ ಅನೇಕ ನೆಲೆಗಳನ್ನು ಸೃಷ್ಟಿಸುವ ಮೂಲಕ ತಗಳಿಯವರು ಅದರ ಕೌಟುಂಬಿಕ ಮತ್ತು ಸಾಮಾಜಿಕ ಸ್ವರೂಪವನ್ನು ಇಡಿಯಾಗಿ ಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಪ್ರೇಮಕ್ಕೆ ಜಾತಿ, ಧರ್ಮ ಮಾತ್ರವಲ್ಲ ಮರಕಾಲ್ತಿಯು ಶೀಲಗೆಟ್ಟರೆ ಆಕೆಯ ಗಂಡ, ಕುಟುಂಬ ಮತ್ತು ಬೆಸ್ತರ ಸಮುದಾಯವು ನಾಶವಾಗುತ್ತದೆ ಎಂಬ ಜನಪದ ನಂಬಿಕೆಯೂ ಕಾರಣವಾಗಿದೆ. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದ್ದ ನಿಷ್ಕಳಂಕ ಪ್ರೀತಿಯು ಇದರಿಂದಾಗಿ ಕೊನೆಯುಸಿರೆಳೆಯುತ್ತದೆ. ಧಾರ್ಮಿಕ ಕಟ್ಟಳೆ, ಜನಪದ ನಂಬಿಕೆ, ಜಾತಿಧರ್ಮಗಳು ಅವರ ಬದುಕಿಗೆ ಸುಖ ಸಮೃದ್ಧಿಗಳನ್ನು ನೀಡುವುದಿಲ್ಲ. ಮದುವೆಯಾಗುವವರೆಗೆ ತಂದೆತಾಯಿಯರ ನಿಗಾ ಇದ್ದರೂ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅವಳ ಮನಸ್ಸಿಗೆ ಏಟುಗಳು ಬೀಳತೊಡಗುತ್ತವೆ. ಜಡವಾದ, ರೂಢಿಗತವಾದ ಸಾಂಪ್ರದಾಯಿಕ ರೀತಿ ರಿವಾಜುಗಳಿಂದಾಗಿ ದಾಂಪತ್ಯವು ಕ್ಲೇಶಕ್ಕೆ ಒಳಗಾಗಿ ಮುರಿದು ಬೀಳುತ್ತದೆ. ದುಷ್ಟರೇ ಎಂದರೆ ದುಷ್ಟರಲ್ಲದ, ಪ್ರೇಮಿಗಳೇ ಎಂದರೆ ಪ್ರೀತಿಯನ್ನು ಸರಿಯಾಗಿ ನಿಭಾಯಿಸಲಾರದ ಪರಿಸ್ಥಿತಿಯು ಕಂಡುಬರುತ್ತದೆ. ಮೃದುವಾದ ಸಾಮಾಜಿಕ ಟೀಕೆಯೊಂದಿಗೆ ಮಾನವೀಯ ವ್ಯವಹಾರಗಳ ಸೂಕ್ಷ್ಮ ನಿರೀಕ್ಷಣೆಯೂ ಸೇರಿದ್ದು ಕಲ್ಪನೆಯೂ ಸಕ್ರಿಯವಾಗಿದೆ. ಚಿಕ್ಕಪುಟ್ಟ ವಾಕ್ಯಗಳ ಮೂಲಕ ಸ್ಪಷ್ಟವಾದ, ಮೂರ್ತ ವಿವರಗಳಿಂದ ಕೂಡಿದ, ಭಾವತೀಕ್ಷಣತೆಯಿಂದ ಶಕ್ತಿಯನ್ನು ಪಡೆಯುವ ಶೈಲಿ, ವೇಗವಾಗಿ ಸಾಗುವ ಕ್ರಿಯೆ, ಬಾಣವು ಗುರಿಯನ್ನು ಮುಟ್ಟುವಂತೆ ಪರಿಣಾಮವನ್ನು ಸಾಧಿಸುವ ಕಲೆಗಾರಿಕೆಯೊಂದಿಗೆ ವಾಸ್ತವದ ಹಾದಿಯಲ್ಲಿ ಚಲಿಸುವ ಕಾದಂಬರಿಯು ಜನಪದ ಸತ್ವವನ್ನೊಳಗೊಂಡು ಪರಿಪುಷ್ಟವಾಗಿದ್ದು ಕಾವ್ಯಾತ್ಮಕತೆಯ ನೆರವಿನಿಂದ ವಸ್ತುವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗಿದೆ.
ಕಾದಂಬರಿಯು ಕರುತ್ತಮ್ಮನ ಮಾನಸಿಕ ತುಮುಲಗಳಿಗಷ್ಟೇ ಸೀಮಿತವಾಗದೆ ವಸ್ತುವಿನ ಸಾಮಾಜಿಕ ಸ್ವರೂಪವನ್ನು ವಿಶ್ಲೇಷಿಸುತ್ತದೆ. ಒಳ್ಳೆಯದರಿಂದ ಒಳ್ಳೆಯದು ಹೊರಬರುವ ಬದಲು ಕೆಟ್ಟದು ಹೊರಬರುವ ವ್ಯಂಗ್ಯ ವೈಚಿತ್ರ್ಯ, ಕರುತ್ತಮ್ಮಳನ್ನು ಆವರಿಸಿರುವ ಲೈಂಗಿಕ ಸಂಬಂಧಗಳ ಹೀನ ದೆಸೆ, ಇಂಥ ವಿಷಯಗಳಲ್ಲಿ ಜನರು ಹೊಂದಿರುವ ಕೆಟ್ಟ ಕುತೂಹಲ, ಒತ್ತಡದಲ್ಲಿ ಸಿಲುಕಿಕೊಂಡ ಆಕೆಯ ಮೇಲೆ ಸಮಾಜದ ವಕ್ರನೋಟ, ಮುಂತಾದ ಆಯಾಮಗಳಲ್ಲಿ ಕಾದಂಬರಿಯು ಹೆಣ್ಣಿನ ಬದುಕಿನ ಕಷ್ಟಗಳನ್ನು ನಿರೂಪಿಸುತ್ತದೆ. ಊರವರಿಂದ ಕೆಟ್ಟ ಮಾತುಗಳನ್ನು ಕೇಳಿಕೊಂಡು ಹಗಲಿರುಳು ಯಾತನೆಯನ್ನು ಅನುಭವಿಸುವ ಕರುತ್ತಮ್ಮನನ್ನು ಅರ್ಥಮಾಡಿಕೊಳ್ಳುವವರು ಇಲ್ಲದೆ ಕಷ್ಟ ಕಾರ್ಪಣ್ಯಗಳಲ್ಲಿ ಮಿಂದು, ಕ್ರೌರ್ಯ ತಿರಸ್ಕಾರಗಳಲ್ಲಿ ನೊಂದು, ಬದುಕಿನ ಬೇಗೆಯಲ್ಲಿ ಬೆಂದು ಬಾಳಿದವರ ಬದುಕಿನ ಚಿತ್ರಣದೊಂದಿಗೆ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾಗುವ ಬಗೆಯು ಮುಖ್ಯವಾಗುತ್ತದೆ. ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಸಮಾಜವು ಈಗಲೂ ಸಿನಿಕತನದ ಧೋರಣೆಯನ್ನು ಇಟ್ಟುಕೊಂಡಿರುವುದರಿಂದ ಸಂಬಂಧಗಳು ಬದಲಾದ ಸಾಮಾಜಿಕ ಸಂದರ್ಭದಲ್ಲೂ ಹೆಣ್ಣು ತನ್ನ ಸಂಬಂಧಗಳ ನೈಜತೆ, ಭದ್ರತೆಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಕರುತ್ತಮ್ಮ ಮನಸ್ಸು ಮಾಡಿದ್ದರೆ ಪರೀಕುಟ್ಟಿಯನ್ನು ಇಟ್ಟುಕೊಂಡು ಸುಖವಾಗಿ ಬಾಳಬಹುದಿತ್ತು. ಅವಕಾಶಗಳು ದೊರೆತರೂ ಆಕೆಯು ಅಂಥ ಬದುಕನ್ನು ಒಪ್ಪುವುದಿಲ್ಲ. ಇದು ಆಕೆಯು ತನ್ನ ಲೈಂಗಿಕತೆಯನ್ನು ನಿಭಾಯಿಸಿದ ಪರಿ. ಆದರೆ ಕೊನೆಗೆ ಇಬ್ಬರೂ ಜಾರಿ ದುರಂತಕ್ಕೆ ಒಳಗಾಗುವ ದುರಂತವನ್ನು ವಿವರಿಸುವ ಕೃತಿಯು ಯಾರನ್ನೂ ವೈಭವೀಕರಿಸುವುದಿಲ್ಲ. ಹೀನಾಯವಾಗಿ ಕಾಣುವುದಿಲ್ಲ. ಪರೀಕುಟ್ಟಿಯ ವಿರಹ, ಕರುತ್ತಮ್ಮನ ಕಷ್ಟಕಾರ್ಪಣ್ಯಗಳನ್ನು ಭಾವಾತಿರೇಕದಿಂದ ವರ್ಣಿಸಿ ಕಣ್ಣೀರು ತರಿಸುವುದಿಲ್ಲ. ಅವರ ಪರಿಸ್ಥಿತಿಯನ್ನು ನಿರೂಪಿಸುತ್ತಲೇ ಅವರ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತದೆ. ಕ್ಷುದ್ರ ಸಮಾಜವು ಅವರನ್ನು ಎಷ್ಟೇ ಹಳಿದರೂ ಅವರ ನೈಜಪ್ರೇಮ ಮತ್ತು ಸಾಚಾತನಗಳನ್ನು ಅನುಮಾನಿಸಲು ಸಾಧ್ಯವಿಲ್ಲ. ಚೆಂಬನ್ ಕುಂಞುವಿನ ದೃಷ್ಟಿಯಲ್ಲಿ ತನ್ನ ಹಾಗೂ ಕರುತ್ತಮ್ಮನ ಕುಟುಂಬಗಳ ಪತನಕ್ಕೆ ಪರೀಕುಟ್ಟಿಯೇ ಕಾರಣ. ಆದರೆ ಆತನ ಗ್ರಹಿಕೆ ತಪ್ಪು. ಪರೀಕುಟ್ಟಿಯು ತನಗರಿವಿಲ್ಲದಂತೆ ಅವರ ಕುಟುಂಬಗಳ ಒಳಗೆ ಇಳಿದುಬಿಟ್ಟ. ಅರೋಪಗಳನ್ನು ಹೊರಿಸುವಾಗ ಆತನು ತಪ್ಪಿತಸ್ಥನಂತೆ ಭಾಸವಾಗುವುದಾದರೂ ಆತನ ನಿಜಸ್ಥಿತಿಯನ್ನು ಅರಿತವಳು ಕರುತ್ತಮ್ಮ ಮಾತ್ರ.
ಚಕ್ಕಿಯು ತೀರಿಕೊಂಡ ಬಳಿಕ ಪಂಚಮಿಯಿಂದ ಮನೆ ನಡೆಸಲು ಸಾಧ್ಯವಿಲ್ಲ ಎಂದರಿತ ಚೆಂಬನ್ ಕುಂಞು ಮರುಮದುವೆಯ ಯೋಚನೆಯನ್ನು ಮಾಡುತ್ತಾನೆ. ಪಳ್ಳಿಕುನ್ನದ ಕಂಡನ್ ಕೋರ ವಲಕ್ಕಾರನ ವಿಧವೆ ಪಾಪಿ ಕುಂಞುಯ ಪ್ರಸ್ತಾಪ ಬಂದಾಗ ಆತನು ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳುತ್ತಾನೆ. ಆತನಿಗೆ ಆತ್ಮಸಾಂಗತ್ಯಕ್ಕಿಂತಲೂ ಸುಖದ ಬಯಕೆಯು ಹೆಚ್ಚಾಗಿರುತ್ತದೆ. ಚಕ್ಕಿಯು ಬದುಕಿರುವಾಗಲೇ ಅವನಿಗೆ ಸುಖಜೀವನದ ಕುರಿತು ಹೊಸ ಕಲ್ಪನೆ ಬಂದಿತ್ತು. ಪಳ್ಳಿಕುನ್ನದ ಕಂಡನ್ ಕೋರ ಮತ್ತು ಪಾಪಿಕುಂಞುಯ ಸರಸ, ಪುಟ್ಟ ಮಕ್ಕಳಂತೆ ಪರಸ್ಪರ ತಬ್ಬಿಕೊಂಡು ಮುತ್ತಿಡುವ ರೀತಿಯನ್ನು ಕಂಡು ಅವನ ಮನಸ್ಸು ಕೆರಳಿತ್ತು. ಅದರೆ ಅದು ಹುಚ್ಚು ಕಾಮಕ್ಕೆ ದಾರಿಯನ್ನು ಮಾಡಿರಲಿಲ್ಲ. ಅವನ ಕಾಮದ ಆಲೋಚನೆಗಳಿಗೆಲ್ಲ ಅವನ ಹೆಂಡತಿ ಚಕ್ಕಿಯೇ ಕೇಂದ್ರವಾಗುತ್ತಾಳೆ. ಯಾವ ಪಾಪಿಕುಂಞುಯನ್ನು ಕಂಡು ಚೆಂಬನ್ ಕುಂಞುವಿಗೆ ಮೋಹ ಗರಿಗೆದರಿತ್ತೋ, ಕಂಡನ್ ಕೋರ ಭಾಗ್ಯಶಾಲಿ ಎಂದುಕೊಂಡಿದ್ದನೋ, ಚಕ್ಕಿಯ ದೇಹವನ್ನು ಪಾಪಿಕುಂಞುಯಾಗಿ ತಿದ್ದಲು ಹಾತೊರೆಯುತ್ತಿದ್ದನೋ ಅದೇ ಪಾಪಿಕುಂಞುಯು ಅವನ ಹೆಂಡತಿಯಾಗುತ್ತಾಳೆ. ಆದರೆ ಸುಖದ ಕಲ್ಪನೆಯನ್ನು ಪ್ರಚೋದಿಸಿದ್ದ ಪಾಪಿಕುಂಞುಯನ್ನು ಬಿಗಿದಪ್ಪಿ ಮುತ್ತಿಡಲು ಆತನಿಗೆ ಸಾಧ್ಯವಾಗುವುದಿಲ್ಲ. ಮುತ್ತಿಟ್ಟರೂ ಚುಂಬನಕ್ಕೆ ಕಾವೇರುವುದಿಲ್ಲ. ಕೈಗಳು ಬಿಗಿಗೊಳ್ಳುವುದಿಲ್ಲ. ತುಂಬು ಯೌವನದ ಹೊಸ್ತಿಲಲ್ಲರುವ ಪಳನಿ ಮತ್ತು ಕರುತ್ತಮ್ಮನ ಸಂಬಂಧವು ಹಾಗಲ್ಲ. “ಪಳನಿ ಅವಳನ್ನು ತನ್ನ ದೇಹದೊಡನೆ ಸೇರಿಸಿಕೊಂಡು ಬಲಿಷ್ಠ ತೋಳುಗಳಿಂದ ಗಟ್ಟಿಯಾಗಿ ಅಪ್ಪಿಕೊಂಡ. ಅವಳಿಗೆ ಉಸಿರುಗಟ್ಟಿದಂತಾಗಿ ಕಣ್ಣುಗಳನ್ನು ಅರ್ಧಮುಚ್ಚಿಕೊಂಡಳು. ಅರೆಪ್ರಜ್ಞಾವಸ್ಥೆಗೆ ಜಾರಿ ಮಲಗಿದಳು. ಅಧಿಕಾರದಿಂದ ಗಂಡಸೊಬ್ಬ ಅವಳ ದೇಹವನ್ನು ಸ್ವಂತ ದೇಹದೊಂದಿಗೆ ಸೇರಿಸಿ ಹಿಡಿದುಕೊಂಡ. ವಿಧೇಯಳಾಗಿ ಅವಳು ಅದಕ್ಕೆ ಬಾಗಿದಳು” (ಪುಟ 149) ಎನ್ನುವಲ್ಲಿ ಪಳನಿ- ಕರುತ್ತಮ್ಮ ಮತ್ತು ಚೆಂಬನ್ ಕುಂಞು – ಪಾಪಿಕುಂಞು ಜೋಡಿಯ ದಾಂಪತ್ಯದ ಸಾಫಲ್ಯ ವೈಫಲ್ಯಗಳನ್ನು ಪರಿಶೀಲಿಸುವ ಚೌಕಟ್ಟು ನಿರ್ಮಾಣವಾಗುತ್ತದೆ. ಪುರುಷನ ಸ್ಪರ್ಶದ ಅರಿವನ್ನು ಮೊದಲ ಬಾರಿ ಮೂಡಿಸಿದ ಪಳನಿಯೊಂದಿಗೆ ಒಂದಾಗುವಾಗ ಕರುತ್ತಮ್ಮನಿಗೆ ಪರೀಕುಟ್ಟಿಯ ನೆನಪಾಗುವುದಿಲ್ಲ. ಆದರೆ ಚೆಂಬನ್ ಕುಂಞು ಮತ್ತು ಪಾಪಿಕುಂಞುಯು ಈ ಮೊದಲೇ ಸಂಸಾರವನ್ನು ಮಾಡಿ ಬದುಕಿನ ರುಚಿಗಳನ್ನು ಅರಿತ ಬಳಿಕ ಗಂಡಹೆಂಡಿರಾದವರು. ಸುಖದ ಬಯಕೆಯು ಇದ್ದರೂ ಹಾಸಿಗೆಯಲ್ಲಿ ದೇಹ ಮತ್ತು ವಯಸ್ಸು ಸಹಕರಿಸದಿರುವ ವಿಷಮ ಪರಿಸ್ಥಿತಿಯಲ್ಲಿ ಚೆಂಬನ್ ಕುಂಞು ಗತಿಸಿ ಹೋದ ತನ್ನ ಹೆಂಡತಿ ಚಕ್ಕಿಯನ್ನು, ಪಾಪಿಕುಂಞುಯು ತನ್ನ ಗಂಡ ಕಂಡನ್ ಕೋರನನ್ನು ನೆನೆದುಕೊಳ್ಳುತ್ತಾಳೆ. ಬಯಸಿದ ಸುಖವು ಸಿಗದೆ ಇರುವ ನಿರಾಶೆಯಲ್ಲಿ ಅವರಿಗೆ ತಮ್ಮ ಯೌವನದ ದಿನಗಳಲ್ಲಿ ಸುಖವನ್ನು ನೀಡಿದ್ದ ಸಂಗಾತಿಗಳ ನೆನಪಾದುದರಲ್ಲಿ ಅಚ್ಚರಿಯಿಲ್ಲ. ಚಕ್ಕಿಯು ಬದುಕಿದ್ದಾಗ ಆಕೆಯೊಂದಿಗೆ ಸಾಕಷ್ಟು ಸುಖಪಡಲಿಲ್ಲ ಎಂಬ ನೋವು ಪ್ರಾಮಾಣಿಕವಾಗಿದ್ದರೂ ಅವನಿಗೆ ಪಾಪಿಕುಂಞುಯ ಆಕರ್ಷಣೆಯನ್ನು ಎದುರಿಸುವ ಶಕ್ತಿಯಿಲ್ಲ.
ಚಕ್ಕಿಯ ಸ್ಥಾನವನ್ನು ತುಂಬಲು ಬಂದ ಪಾಪಿಕುಂಞುಗೆ ಪಂಚಮಿಯು ಪ್ರತಿಸ್ಪರ್ಧಿಯಾಗುತ್ತಾಳೆ. ತಂದೆಯು ಇನ್ನೊಬ್ಬಳ ಸೊತ್ತಾಗುವುದನ್ನು ಕಂಡು ಸಹಿಸಲಾರದೆ ಆಕೆಯು ಮಲತಾಯಿಯನ್ನು ಅನ್ಯಳಾಗಿ ಕಾಣುತ್ತಾಳೆ. ಪಾಪಿಕುಂಞುಯ ಮೊದಲ ಗಂಡನ ಮಗ ಗಂಗಾದತ್ತನೂ ಬಂದು ಸೇರಿದ್ದರಿಂದ ಅವರ ನಡುವಿನ ಪೈಪೋಟಿಯು ತೀವ್ರವಾಗುತ್ತದೆ. ಕೆಟ್ಟ ಸ್ವಭಾವದವಳಲ್ಲದ ಪಾಪಿಕುಂಞುಯು ಸಾಕಷ್ಟು ತಾಳಿಕೊಂಡೇ ಬಾಳುತ್ತಾಳೆ. ಐನೂರು ರೂಪಾಯಿಗಳಿಗಾಗಿ ತನ್ನ ಮೇಲೆ ಒತ್ತಡವನ್ನು ಹೇರುವ ಮಗ ಗಂಗಾದತ್ತನು ಹೊರಗೆ ಯಾವುದಾದರೂ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಿರಿವಂತನಾದರೆ ಅವನು ಎಲ್ಲಾದರೂ ನೆಮ್ಮದಿಯಿಂದಿರಬಹುದು. ಉಸಿರುಗಟ್ಟಿಸುವ ವಾತಾವರಣದಿಂದ ತಾನೂ ಬಿಡುಗಡೆಯನ್ನು ಹೊಂದಿ ಆತನೊಡನೆ ಬದುಕಬಹುದು ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ಚೆಂಬನ್ ಕುಂಞು ತನ್ನ ದೋಣಿ ಮತ್ತು ಬಲೆಗಳನ್ನು ದುರಸ್ತಿಗೊಳಿಸಲೆಂದು ಪೆಟ್ಟಿಗೆಯಲ್ಲಿ ತೆಗೆದಿರಿಸಿದ್ದ ಇನ್ನೂರು ರೂಪಾಯಿಗಳನ್ನು ಮಗನಿಗೆ ನೀಡುತ್ತಾಳೆ. ಇದನ್ನು ತಿಳಿದ ಚೆಂಬನ್ ಕುಂಞು ಆಕೆಯನ್ನು ಗುಡಿಸಲಿನಿಂದ ಹೊರಗೆ ಹಾಕುವುದರೊಂದಿಗೆ ಆತನ ವೈವಾಹಿಕ ಬದುಕು ನಿಷ್ಫಲವಾಗುತ್ತದೆ. ವಿಚಾರಣೆಯ ವೇಳೆಯಲ್ಲಿ ಅರಯಯ್ಯನು ‘ತನ್ನ ಅನುಮತಿಯನ್ನು ಪಡೆಯದೆ, ವೀಳ್ಯದೆಲೆ, ಹೊಗೆಸೊಪ್ಪು ಮತ್ತು ಕಾಣಿಕೆಗಳನ್ನು ಅರ್ಪಿಸದೆ ಪಾಪಿಕುಂಞುಯನ್ನು ಮದುವೆಯಾದದ್ದು ಇಲ್ಲಿನ ನೀತಿ ನ್ಯಾಯ ವ್ಯವಸ್ಥೆಯನ್ನು ಅವಮಾನಿಸಿದಂತೆ ಅಲ್ಲವೇ?’ ಎಂದು ಪ್ರಶ್ನಿಸಿದಾಗ ‘ಈಕೆಯು ತನ್ನ ಕೆಲಸದಾಕೆಯೇ ಹೊರತು ಹೆಂಡತಿಯಲ್ಲ’ ಎಂದು ಚೆಂಬನ್ ಕುಂಞು ವಾದಿಸುತ್ತಾನೆ. ಆಗ ಪಾಪಿಕುಂಞುಯು ‘ಈತ ತೆರ ಕೊಟ್ಟು ನನ್ನನ್ನು ಮದುವೆಯಾಗಿದ್ದ’ ಎಂದಿದ್ದರೆ ಆಕೆಗೆ ನ್ಯಾಯವು ದೊರಕುತ್ತಿತ್ತು. ಆದರೆ ಒಂದೇ ಸವನೆ ಸಂಕಟವನ್ನು ಅನುಭವಿಸಿದ್ದರ ಪರಿಣಾಮವಾಗಿ ಆಕೆಯ ಮನಸ್ಸು ಮರಗಟ್ಟಿ ಹೋಗಿದ್ದರಿಂದ ‘ಚೆಂಬನ್ ಕುಂಞುವಿನ ಜೊತೆಗೆ ಮದುವೆ ನಡೆದಿಲ್ಲ’ ಎಂದು ಅವನಿಂದ ಬೇರ್ಪಟ್ಟು ಯಾರ ಹಂಗಿಗೂ ಬೀಳದೆ ಕಡಲತಡಿಯಲ್ಲಿ ಅಲೆಮಾರಿಯಾಗಿ ಬಾಳುತ್ತಾಳೆ. ಮದುವೆ ಎಂದರೆ ಮನಸ್ಸುಗಳು ಒಂದಾಗಬೇಕೇ ಹೊರತು ಕೇವಲ ದೇಹಗಳಲ್ಲ ಎಂಬ ಧ್ವನಿಯು ಇಲ್ಲಿದೆ. ಕಡಲತಡಿಯ ನ್ಯಾಯ ವ್ಯವಸ್ಥೆಯು ಹೆಸರಿಗೆ ಮಾತ್ರ. ಸಮಾಜವು ತನ್ನ ಸಂರಕ್ಷಣೆಗಾಗಿ ಕಟ್ಟಿಕೊಂಡ ಕಟ್ಟಳೆಗಳು ಮತ್ತು ವ್ಯಕ್ತಿಯ ವಿವೇಕದ ನಡುವೆ ಸಮನ್ವಯವಿದ್ದರೆ ಸಮಸ್ಯೆಗಳು ಇರುವುದಿಲ್ಲ. ಆದರೆ ಚೆಂಬನ್ ಕುಂಞು ಮತ್ತು ಅರಯಯ್ಯನ ನಡುವೆ ಇಂಥ ಸಮನ್ವಯವಿಲ್ಲ. ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಯ ವಿವೇಕದ ನಡುವೆ ಹೊಂದಾಣಿಕೆಯು ಸಾಧ್ಯವಾಗದಿದ್ದುದರಿಂದ ವಾಗ್ವಾದವು ಸಾಮಾಜಿಕ ಕಾರಣಗಳಿಂದಾಗಿ, ಆಂತರಿಕ ಸಂಘರ್ಷದಿಂದಾಗಿ ವಿಫಲವಾಗುತ್ತದೆ.
ಬೆಸ್ತರ ಸಮುದಾಯ, ಸಂಸ್ಕೃತಿ ಮತ್ತು ಜೀವನಕ್ರಮದ ಚಿತ್ರಣವನ್ನು ನೀಡುವ ‘ಚೆಮ್ಮೀನು’ ಕರುತ್ತಮ್ಮ ಮತ್ತು ಪರೀಕುಟ್ಟಿಯ ನಡುವಿನ ಪ್ರೇಮವನ್ನು ಕೇಂದ್ರವಾಗಿರಿಸಿಕೊಂಡಿದ್ದರೂ ಅದರಿಂದ ಹುಟ್ಟುವ ಸಾಮಾಜಿಕ ಸಂಘರ್ಷ ಮತ್ತು ದುರಂತದ ಕಡೆಗೆ ತಗಳಿಯವರ ಗಮನವಿದೆ. ಇದೊಂದು ಸಾಮಾನ್ಯ ಕಾದಂಬರಿಯಾಗಿದ್ದರೆ ಪ್ರೇಮ ಮತ್ತು ಭಗ್ನಪ್ರೇಮದಿಂದ ಕಂಗೆಟ್ಟ ಅವರ ಕೊರಗು ಮಾತ್ರ ವಸ್ತುವಾಗಿರುತ್ತಿತ್ತು. ಆದರೆ ಆ ಕೊರಗನ್ನು ಮುಚ್ಚಿಟ್ಟುಕೊಂಡು ಆಕೆಯು ಬಾಳುವ ರೀತಿ, ಗಂಡನ ಮೇಲಿಟ್ಟುಕೊಂಡ ಪ್ರೀತಿ, ಹೊಸ ಸಂಸಾರದಲ್ಲಿ ಅವಳಿಗೆ ದೊರೆಯುವ ಸುಖ, ಸಮಾಜದ ಟೀಕೆಗಳನ್ನು ಲೆಕ್ಕಿಸದೆ ಹೊಸ ಜೀವನವನ್ನು ನಡೆಸುವಾಗ ತೃಪ್ತಿ-ಅತೃಪ್ತಿ ಮುಂತಾದ ಭಾವನೆಗಳು ಒಟ್ಟಾಗಿ ಬರುವುದರಿಂದ ಕಾದಂಬರಿಗೆ ಅಪೂರ್ವವಾದ ಸಂಕೀರ್ಣತೆಯು ಒದಗಿದೆ. ಕರುತ್ತಮ್ಮನಿಗೆ ಪರೀಕುಟ್ಟಿಯ ಮೇಲೆ ಪ್ರೇಮವಿತ್ತು ಎಂದು ತಿಳಿದ ಬಳಿಕ ಆಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ನೋಯಿಸದ, ತವರು ಮನೆಗೆ ಕಳುಹಿಸದ ಪಳನಿಯು ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೂ ತನ್ನ ಮಾನವೀಯತೆಯನ್ನು ಉಳಿಸಿಕೊಂಡ ನಿದರ್ಶನವನ್ನು ಕಾಣಲು ಸಾಧ್ಯ. ಚೆಂಬನ್ ಕುಂಞುವೇ ಸೇರಿದಂತೆ ಹೆಚ್ಚಿನ ಪಾತ್ರಗಳ ಹೊಯ್ದಾಟದಲ್ಲಿ ಬಂದು ಹೋಗುವ ಭಾವನೆಗಳೂ ಅತ್ಯಂತ ಸಂಕೀರ್ಣವಾಗಿವೆ. ಅವರೆಲ್ಲರ ಸಂವೇದನೆಗಳು ಮುಖ್ಯವಾಗುತ್ತವೆ. ಕಾದಂಬರಿ ಅಂತ್ಯದಲ್ಲಿ ಪಳನಿಯ ಬಾಯಿಯಿಂದ ಹೊರಡುವ ‘ಕರುತ್ತಮ್ಮಾ’ ಎಂಬ ಕೂಗು ಒಮ್ಮೆಗೆ ಬಹಳಷ್ಟನ್ನು ಹೇಳುತ್ತದೆ. ಅವನು ಏಕೆ ಹಾಗೆ ಚೀರಿದ? ಅವನಿಗೆ ಕರುತ್ತಮ್ಮನಲ್ಲದೆ ಬೇರೆ ಯಾರೂ ಇಲ್ಲದಿದ್ದುದರಿಂದಲೇ? ತಾನು ಸತ್ತ ಬಳಿಕ ಆಕೆಗೆ ಯಾರಿದ್ದಾರೆ ಎಂಬ ಸಂಕಟದಿಂದಲೇ? ತಾನು ಮರಣದ ಸುಳಿಯಲ್ಲಿ ಮುಳುಗಬೇಕಿದ್ದರೆ ಆಕೆ ಶೀಲಗೆಟ್ಟಿರಬೇಕು ಎಂದು ಖಚಿತವಾದಾಗ ಹುಟ್ಟಿದ ಯಾತನೆಯಿಂದಲೇ? ಒಬ್ಬರನ್ನೊಬ್ಬರು ತಬ್ಬಿಕೊಂಡು ಸತ್ತ ಪರೀಕುಟ್ಟಿ ಮತ್ತು ಕರುತ್ತಮ್ಮನ ಹೆಣಗಳು ಜಾತ್ಯಾಧಾರಿತ ತಾರತಮ್ಯ, ಗೊಡ್ಡು ಸಂಪ್ರದಾಯ ಮತ್ತು ಮೂಢನಂಬಿಕೆಗಳ ವಿರುದ್ಧ ನಡೆಸಿದ ಬಂಡಾಯದ ಪ್ರತಿರೂಪಗಳೇ? ಎಂಬ ಪ್ರಶ್ನೆಗಳನ್ನು ಧ್ವನಿಪೂರ್ಣವಾಗಿ ಓದುಗರ ಊಹೆಗೆ ಬಿಟ್ಟು ಕೊಡುವುದರಲ್ಲಿ ಕಾದಂಬರಿಯ ಗೆಲುವಿದೆ.
ಅನುವಾದಕ ಎನಿಸಿಕೊಳ್ಳಬೇಕೆಂಬ ಹುಮ್ಮಸ್ಸನಲ್ಲಿ ಕಳಪೆ ಗುಣಮಟ್ಟದ ಕೃತಿಗಳನ್ನು ಅನುವಾದಿಸದೆ ಮಲಯಾಳಂ ಭಾಷೆಯಲ್ಲಿ ಸಾಹಿತ್ಯಕ, ಸಾಮಾಜಿಕ ಮತ್ತು ಚಾರಿತ್ರಿಕ ಮಹತ್ವವನ್ನು ಪಡೆದ ಉರೂಬ್ ಅವರ ‘ಸುಂದರಿಯರು ಸುಂದರರು’, ಪಿ. ವತ್ಸಲಾ ಅವರ ‘ಆಗ್ನೇಯ’, ತಗಳಿ ಅವರ ‘ತೋಟಿಯ ಮಗ’, ‘ಚಂದು ಮೆನೋನ್ ಅವರ ‘ಶಾರದಾ’ ಮುಂತಾದ ಕಾದಂಬರಿಗಳನ್ನು ಆಯ್ದು ಅನುವಾದಿಸುವ ಮೂಲಕ ಕನ್ನಡಿಗರಿಗೆ ಮಲಯಾಳಂ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿರುವ ಖ್ಯಾತ ಅನುವಾದಕ ಮೋಹನ ಕುಂಟಾರ್ ಅವರು ‘ಚೆಮ್ಮೀನ್’ ಕಾದಂಬರಿಯಲ್ಲಿ ತಗಳಿಯವರ ಭಾಷೆ, ನುಡಿಗಟ್ಟು, ಶೈಲಿ, ಸಾಂಸ್ಕೃತಿಕ ವಿವರ ಮತ್ತು ಭಾಷಿಕ ಸ್ವರೂಪಗಳನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ. “ಭಾಷಾಂತರವು ಕನ್ನಡದ ಕೃತಿಯಾಗಿ ಓದಿಸಿಕೊಂಡರೆ, ಕನ್ನಡದ ಸಹಜ ಓದಿಗೆ ನಿಲುಕಿದರೆ ಅದು ಭಾಷಾಂತರ ಎನಿಸಿಕೊಳ್ಳುವುದಿಲ್ಲ. ಮೂಲ ಲೇಖಕರ ಶೈಲಿ, ಧಾಟಿ ಸೊಗಡುಗಳು ಅದೇ ರೀತಿಯಲ್ಲಿ ದಾಖಲಾಗಬೇಕು. ಅನುವಾದಗಳ ಮೂಲಕ ಬಳಕೆಗೆ ಬಂದ ‘ತರವಾಡು’ ಎಂಬ ಮಲಯಾಳಂ ಪದವನ್ನು ಸ್ವೀಕರಿಸಿದಂತೆ ಇತರ ಪದಗಳನ್ನೂ ಸ್ವೀಕರಿಸಿದಾಗ ಭಾಷೆಯು ಬೆಳೆಯುತ್ತದೆ” ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ಕಾದಂಬರಿಯಲ್ಲಿ ಕರುತ್ತಮ್ಮನನ್ನು ಉದ್ದೇಶಿಸಿ ಹೇಳಿದ ಮಾತನ್ನು ‘ಆಕೆ ತಲೆಯೂ ಮೊಲೆಯೂ ಬೆಳೆದವಳು’ ಎಂದು ಅನುವಾದಿಸುತ್ತಾರೆ. ಇಲ್ಲಿ ತಲೆಯು ಬುದ್ಧಿಯನ್ನು, ಮೊಲೆಯು ಯೌವನವನ್ನು ಸೂಚಿಸುತ್ತದೆ. ಇದಕ್ಕೆ ಸಂವಾದಿಯಾಗಿ ‘ಮೊಲೆಮುಡಿ ಬಂದವಳು’ ಎಂಬ ನುಡಿಗಟ್ಟನ್ನು ಬಳಸಿದರೆ ಕರುತ್ತಮ್ಮನ ಯೌವನವನ್ನು ಮಾತ್ರ ಹೇಳಿದಂತಾಗುತ್ತದೆಯೇ ಹೊರತು ಬುದ್ಧಿ ಬೆಳೆದವಳು ಎಂಬ ವಿಚಾರವನ್ನು ಧ್ವನಿಸಿದಂತಾಗುವುದಿಲ್ಲ. ಆದ್ದರಿಂದ ‘ತಲೆಯೂ ಮೊಲೆಯೂ ಬೆಳೆದವಳು’ ಎಂದು ಅನುವಾದಿಸಿದ್ದರಿಂದ ಕನ್ನಡಕ್ಕೆ ಹೊಸ ನುಡಿಗಟ್ಟು ದೊರಕಿದೆ. ಈ ವ್ಯತ್ಯಾಸವನ್ನು ಅರಿತುಕೊಂಡರೆ ಅನುವಾದ ಮತ್ತು ಸೃಜನಶೀಲತೆಯ ನಡುವಿನ ಅಂತರವು ತಿಳಿಯುತ್ತದೆ. ಮೂಲಭಾಷೆಯ ಕಾದಂಬರಿಯು ಮೂಲದಂತೆಯೇ ಓದಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆ ಭಾಷೆಯ ಪದಗಳಿಗೆ ಸಂವಾದಿಯಾದ ಕನ್ನಡದ ಪದಗಳಿದ್ದೂ ಮಲಯಾಳಂ ಪದಗಳನ್ನು ಹಾಗೆಯೇ ಉಳಿಸಿಕೊಳ್ಳುವುದರಿಂದ ಭಾಷೆಯಲ್ಲಿ ಅಸಹಜತೆ ಮತ್ತು ತೊಡಕುಗಳು ಅನುಭವಕ್ಕೆ ಬಂದರೂ ಸಂವಹನಕ್ಕೆ ಅಡ್ಡಿಯಾಗುವುದಿಲ್ಲ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.