ಕನ್ನಡದ ಮಹತ್ವದ ಕವಯತ್ರಿಯರಲ್ಲಿ ಒಬ್ಬರಾದ ಮಾಲತಿ ಪಟ್ಟಣಶೆಟ್ಟಿಯವರ ‘ಎಷ್ಟೊಂದು ನಾವೆಗಳು’ (2009) ವಿಶಿಷ್ಟವಾದ ಕವನ ಸಂಕಲನವಾಗಿದೆ. ಇಲ್ಲಿನ ಕವಿತೆಗಳಲ್ಲಿ ಪ್ರೀತಿಯ ಹುಡುಕಾಟವನ್ನು ಕಾಣಬಹುದು. ಹುಡುಕಾಟದ ನಡುವೆ ಸಂಭ್ರಮ, ಸಂಕಟ, ವಿಷಾದ, ವ್ಯಾಕುಲತೆಗಳು ಕಾಣಿಸಿಕೊಳ್ಳುತ್ತವೆ. ಪ್ರೀತಿಯನ್ನು ತನ್ನೆಲ್ಲ ತೀವ್ರತೆಯೊಂದಿಗೆ ಹುಡುಕುವ ಕವಿತೆಗಳಲ್ಲಿ ಪ್ರತಿಮೆ ಸಂಕೇತಗಳು ಪೂರಕವಾಗಿ ದುಡಿಯುತ್ತವೆ. ಒಂದರ್ಥದಲ್ಲಿ ಇದು ಅಮೂರ್ತತೆಯ ಶೋಧ. ಇಂಥ ಹುಡುಕಾಟ ಸುಲಭವಲ್ಲ. ಅದರ ಹಾದಿಯಲ್ಲಿ ನಿರಾಸೆಯು ಬರುತ್ತದೆ. ಹುಡುಕಾಟದ ಹಾದಿಯಲ್ಲಿದ್ದ ಕವಯತ್ರಿಗೆ ಒಂಟಿತನವು ಕಾಡತೊಡಗುತ್ತದೆ. ಆದರೆ ಅವರು ಅದನ್ನು ಆಪ್ತವಾಗಿ ಅನುಭವಿಸುವುದರಿಂದ ಋಣಾತ್ಮಕವೆನಿಸುವುದಿಲ್ಲ.
ಒಂದು ಪ್ರೀತಿ ಸತ್ತರೆ
ಎದೆಗೆ ಬರ್ಚಿ ನೆಟ್ಟಂತೆ
ಜಗತ್ತೇ ಸುಟ್ಟು ಹೋದಂತೆ
ನಿಂತ ನೆಲವೇ ನುಂಗಿದಂತೆ
ಸಾವು ಆಪ್ತವಾದಂತೆ (ಎಷ್ಟೊಂದು ನಾವೆಗಳಲ್ಲಿ ಎಷ್ಟೊಂದು ಪಯಣ, ಪುಟ 2)
ಎನ್ನುವಲ್ಲಿ ಸಾವನ್ನೇ ಆಪ್ತವಾಗಿ ಕಾಣುವ ನಿರ್ಲಿಪ್ತ ಮನಸ್ಥಿತಿಯನ್ನು ಬೆಳೆಸಿಕೊಂಡಿರುವ ಕವಯತ್ರಿಯು ಅನಾಥಪ್ರಜ್ಞೆಯನ್ನು ಆಪ್ತವಾಗಿ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಭ್ರಮೆ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸವನ್ನು ತಿಳಿಯದ ಮೂರ್ಖರು ಭ್ರಮೆಯನ್ನೇ ವಾಸ್ತವವೆಂದು ನಂಬಿ ಬದುಕುತ್ತಾರೆ. ಆದರೆ ಇಲ್ಲಿ ಭ್ರಮೆ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸದ ಅರಿವಿದೆ. ‘ಭ್ರಮೆಗಳಿಲ್ಲದ ಬದುಕಿಲ್ಲ, ಭ್ರಮೆಗಳೆಂದೂ ಬದುಕುವುದಿಲ್ಲ’ ಎಂಬ ವಿಚಾರ ಸ್ಪಷ್ಟವಾಗಿರುವುದೇ ಇದಕ್ಕೆ ಕಾರಣ. ಇಂಥ ಮನೋಭಾವದಿಂದಾಗಿ ಕವಿತೆಗಳು ಸಮಚಿತ್ತವನ್ನು ರೂಢಿಸಿಕೊಂಡಿವೆ.
“ಮಾಲತಿಯವರ ಕವಿತೆಗಳು ಸರಳ ಸಾಲುಗಳಿಂದ ಆರಂಭವಾದರೂ ಸಂಕೀರ್ಣ ಸ್ತರಗಳನ್ನು ಹಾದು ಹೋಗುವ ಸರಾಗ ನಡಿಗೆಯಿಂದ ವಿಶಿಷ್ಟವಾಗುತ್ತವೆ. ಒಪ್ಪಿತ ಹಾಗೂ ಸಾಮಾನ್ಯೀಕೃತ ತಿಳುವಳಿಕೆಗಳನ್ನು ಮೀರಿ ಹೊಸ ಅರ್ಥ, ಹೊಸ ವ್ಯಾಖ್ಯಾನಗಳನ್ನು ಕಟ್ಟಿಕೊಡುವ ಕವಿತೆಗಳು ಮನಸ್ಸಿನಲ್ಲಿ ಉಳಿಯುತ್ತವೆ, ಬೆಳೆಯುತ್ತವೆ” ಎಂದು ಬರಗೂರು ರಾಮಚಂದ್ರಪ್ಪನವರು ಮುನ್ನುಡಿಯಲ್ಲಿ ಹೇಳಿದ್ದಾರೆ. ‘ಕತ್ತಲೆಯೆಂದರೆ’ ಮತ್ತು ‘ನದಿಯಾಗಲಾರೆ’ ಎಂಬ ಕವಿತೆಗಳು ಇದಕ್ಕೆ ಉದಾಹರಣೆಗಳಾಗಿವೆ. ಕವಯತ್ರಿಯು ಕತ್ತಲೆಯನ್ನು ಋಣಾತ್ಮಕವಾಗಿ ಕಾಣುವುದಿಲ್ಲ.
ನನ್ನಂತಾಗಿರಲೆಂದೇ ನಾನು
ಕಟ್ಟಿಕೊಳ್ಳುವ ಆಪ್ತದಂತಃಪುರ
ಎಷ್ಟು ಕಳೆದರೂ ಉಳಿದ ಕಂಬನಿ
ವರೆಸಿ ಮಲಗಿಸುವ ಮಂತ್ರಗಾತಿ
ಅರಳಿಕೊಳ್ಳುವ ದಳ ಸಹಸ್ರದ
ಜೀವ ಕಮಲದ ಮಾಯಾಲೋಕ
ಕ್ರಾಂತಿ ಗರ್ಭಗಳನು ಧರಿಸುವ ಹತ್ತು
ಜಗದೋದ್ಧಾರರಾ ಹೆಮ್ಮೆಯ ಸದ್ದು
ತೆರೆದುಕೊಳ್ಳುವ ಕನಸುಗಳ ಬ್ರಹ್ಮಾಂಡ ಜಗತ್ತು (ಕತ್ತಲೆಯೆಂದರೆ, ಪುಟ 11)
ನಿರಂತರ ಚಲನೆಯ ಸಂಕೇತವಾದ ನದಿಯನ್ನು ಕವಯತ್ರಿಯು ಕಾಣುವ ದೃಷ್ಟಿಕೋನವೇ ಬೇರೆ.
ಆಗದಿರು ನನ್ನಂತೆ ಎಂದಿಗೂ
ನಿನ್ನನ್ನು ತುಳಿವ ಅಳುವ ನುಂಗಿ
ನೊಣೆವ ಸಮುದ್ರ ಶಕ್ತಿಗಳಿವೆ ತಿಳಿ
ಹೆಬ್ಬಂಡೆಯಾಗಿ ತಡೆ ಮುನ್ನಡೆ
ಕಟ್ಟಿಕೋ ಭದ್ರ ಕೋಟೆ ಮನದ ದಂಡೆಗೆ
ಆದರೆ ನದಿಯಾಗಬೇಡ ಎಂದಿಗೂ (ನದಿಯಾಗಲಾರೆ, ಪುಟ 28)
ಬದುಕಿನ ಅಸ್ತಿತ್ವದ ಸಂಕೇತವಾದ ನದಿಯನ್ನು ಸಮುದ್ರದಲ್ಲಿ ಕರಗಿ ಅಸ್ತಿತ್ವ ರಹಿತವಾಗುವ ರೀತಿಯನ್ನು ಕವಯತ್ರಿಯು ಮಾರ್ಮಿಕವಾಗಿ ವಿವರಿಸಿದ್ದಾರೆ. ‘ಬೊಗಸೆ ತುಂಬಿದ ಬದುಕು’ ಕವಿಯತ್ರಿಯ ಬದುಕಿನ ಪ್ರಣಾಳಿಕೆಯಂತಿದೆ.
ವಿಸ್ತಾರದ ಆಕಾಶವನ್ನು ಪುಕ್ಕದಲ್ಲಿಟ್ಟುಕೊಂಡು ಹಾರಬಯಸುವ ಹಕ್ಕಿ, ಚಂದಿರನ ಮುಖವನ್ನು ಅಲೆಗಳಲ್ಲೆತ್ತಿ ಮುತ್ತಿಟ್ಟ ತಾಯ್ತನವನ್ನು ಅನುಭವಿಸಲು ಬಯಸುವ ಕಡಲು, ಮೋಹನ ಮುರಳಿಯಾಗ ಬಯಸುವ ಬಿದಿರು, ಸ್ವಾತಿಮುತ್ತಾಗಲು ಬಯಸುವ ಮಳೆಹನಿಗಳನ್ನು ರೂಪಕವಾಗಿಟ್ಟುಕೊಂಡು ಬಯಕೆಗಳನ್ನು ‘ಇಂಥ ಬಯಕೆ’ ವ್ಯಕ್ತಪಡಿಸುತ್ತದೆ. ಹುಟ್ಟು ಸಾವು, ಜೀವವೈವಿಧ್ಯಗಳನ್ನು ಒಳಗೊಂಡು ಬೆಳೆಯುತ್ತಲೇ ಹೋಗುವ ವಿಸ್ಮಯಕಾರಿ ವಿಶ್ವಕ್ಕೆ ನಾಶ ಎಂಬುದಿಲ್ಲ, ಆದಿ ಅಂತ್ಯಗಳೂ ಇಲ್ಲ ಎಂಬುದನ್ನು ‘ನಮಗೆ ಸಾವೆಂಬುದಿಲ್ಲ’ ಉದಾಹರಣೆಗಳೊಂದಿಗೆ ವಿವರಿಸುತ್ತದೆ.
ಕಂದನಿಗೆ ಬಾಳಿನ ಪಾಠವನ್ನು ಬೋಧಿಸುವ ಜನಪದ ತ್ರಿಪದಿಗಳಲ್ಲಿ ತಾಯಿಯ ಮನಸ್ಸಿನ ಹಾರೈಕೆಯನ್ನು ಕಾಣಬಹುದು. ಆದರೆ ಆಧುನಿಕ ಯುಗದ ಪರಿಸ್ಥಿತಿಯು ಇದಕ್ಕೆ ವಿರುದ್ಧವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ, ಸಂಸ್ಕೃತಿಗಳು ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಕಾಳಸಂತೆಯಲ್ಲಿ ಮರೆಯಾಗಿರುವಾಗ, ಭಕ್ತಿ, ತ್ಯಾಗ, ಪ್ರೇಮ ಮುಂತಾದ ಮಾನವೀಯ ಮೌಲ್ಯಗಳು ಕಾಲಕಸವಾಗಿರುವಾಗ ನಾನು ಬದುಕಿನ ಪಾಠವನ್ನು ಹೇಗೆ ಕಲಿಸಲಿ ಎಂದು ಮರುಗುವ ತಾಯಿಯ ಮನಸ್ಸು ‘ತಮ್ಮನ್ನೆ ಮಾರಿಕೊಂಡವರು’ ಎಂಬ ಕವಿತೆಯಲ್ಲಿ ಭಯೋತ್ಪಾದಕರ ವಿರುದ್ಧ ಕಿಡಿಕಾರುತ್ತದೆ. ಅವರ ಕುಕೃತ್ಯಗಳನ್ನು ಎಳೆಎಳೆಯಾಗಿ ವಿವರಿಸುತ್ತಾ
ಇಂಥ ನಿಮ್ಮ ದಾರಿಗೆ ಕಾಯ್ದಿರುವನೊಬ್ಬ
ನಿಷ್ಠುರ ನ್ಯಾಯವಾದಿ
ನಿಮ್ಮನ್ನೆಳೆವ ತುಳಿವ
ಸಾವೆಂಬ ಧರ್ಮದ
ಮಾನವ ರಕ್ಷಕ (ಪುಟ 29)
ಎಂದು ಷರಾ ಬರೆಯುತ್ತಾರೆ. ನಿರ್ದಿಷ್ಟ ಜಾತಿಮತಗಳಿಗೆ ಸೇರಿದವರನ್ನು ಹೊಗಳುವುದು ಅಥವಾ ತೆಗಳುವುದೇ ಪ್ರಗತಿಪರ ಚಿಂತನೆ ಎಂಬ ಭಾವನೆಯು ಬೇರು ಬಿಟ್ಟಿರುವ ಈ ಹೊತ್ತಿನಲ್ಲಿ, ಭಯೋತ್ಪಾದಕರ ಜಾತಿಮತಗಳನ್ನು ನೋಡದೆ ಅವರ ದಾಳಿಕೋರ ಸಂಸ್ಕೃತಿಯನ್ನು ಕಟುವಾದ ಮಾತಿನಲ್ಲಿ ಖಂಡಿಸಿದ್ದನ್ನು ಮೆಚ್ಚಿಕೊಳ್ಳಬೇಕಾಗಿದೆ. ಅಂಥವರ ಮನಸ್ಸಿಗೆ ನೋವಾಗುವುದೆಂಬ ಕಾರಣಕ್ಕಾಗಿ ಅವರ ಕ್ರೌರ್ಯವನ್ನು ಬಯಲುಗೊಳಿಸದೆ ಬಿಟ್ಟಿಲ್ಲ. ಭಯೋತ್ಪಾದಕರನ್ನು ಹತ್ಯೆಗೈಯುವುದೇ ಸಮಸ್ಯೆಗೆ ಪರಿಹಾರವೆಂದು ಕವಯತ್ರಿಗೆ ತಿಳಿದಿರುವುದರಿಂದ ಪ್ರೀತಿಯ ಮಾತುಗಳಿಂದ ಭಯೋತ್ಪಾದಕರನ್ನು ಸರಿದಾರಿಗೆ ತರಬೇಕು ಎನ್ನುವ ಬಾಲಿಶ ಮಾತುಗಳಿಗೆ ಎಡೆಯಿಲ್ಲ. ಯಾಕೆಂದರೆ
ದಯೆಯ ಬಂಗಾರದ ಬೀಜ ಹಿಡಿದು
ಬಿತ್ತ ಬಂದರು ರಾಮ, ಕೃಷ್ಣರು
ಬುದ್ಧ, ಬಸವ, ಕ್ರಿಸ್ತ, ಪೈಗಂಬರ
ಬಂದವರ ಬೆನ್ನ ನೆರಳಲ್ಲೇ
ಕೊಲೆಯಾಗುತ್ತಿತ್ತು ಮಾನವಧರ್ಮ (ಪಲಾಯನ, ಪುಟ 50)
ನಮ್ಮದು ಸಮೃದ್ಧ ದೇಶವಾದರೂ ಸಮಾನತೆಯ ಬದುಕಿಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಶತಮಾನಗಳಿಂದ ಶೋಷಣೆಗೊಳಗಾದ ಜನ ಸಮಬಾಳು ಸಮಪಾಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲೆಡೆಯಲ್ಲೂ ‘ಯಾರಿಗುಂಟು ಯಾರಿಗಿಲ್ಲ’ ಎಂಬ ಪರಿಸ್ಥಿತಿಯಿದೆ. ಬಡವರ, ನಿರ್ಗತಿಕರ ನೋವಿಗೆ ಮಿಡಿಯುವ ಅಂಶ ‘ಅಗ್ನಿನೇತ್ರರು’ ಕವಿತೆಯಲ್ಲಿದೆ.
ಬಡವರ ಹಣೆಯಲ್ಲಿ
ಬೆವರ ಕತೆ ಬರೆದವನೆ
ಹಸಿದವರ ಕಣ್ಣಲ್ಲಿ
ಹತಾಸೆಗಳ ಸುರಿದವನೆ
ಏನೀ ಇಬ್ಬಂದಿತನ ನಿನ್ನದು
ಎಂಥ ಸಮದೃಷ್ಟಿಯ ಸೃಷ್ಟಿಯ ದೇವ ನೀನು? (ಪುಟ 46)
ಎಂದು ಪ್ರಶ್ನಿಸುವುದರೊಂದಿಗೆ
ಇಂದಿಲ್ಲ ನಾಳೆಯಾದರೂ
ಬಂದೇ ಬರುವರವರು
ನಿನ್ನ ನೀತಿಸಂಹಿತೆ ಸುಡುವ
ನಿನ್ನ ಕ್ರೌರ್ಯವನ್ನೆಲ್ಲ ಕುಡಿವ ಅಗ್ನಿನೇತ್ರರು
ಎನ್ನುವಲ್ಲಿ ಶೋಷಿತರ ಪರವಾದ ಪ್ರತಿಭಟನೆಯ ದನಿಯು ಮೂಡಿ ಬಂದಿದೆ. ‘ಬನ್ನಿ ಗುಬ್ಬಚ್ಚಿಗಳೆ’ ಕವಿತೆಯಲ್ಲಿರುವ ಸಹಬಾಳ್ವೆಯ ಸಮಾಜಮುಖಿ ಆಶಯದ ವಿಸ್ತಾರವನ್ನು ಇಲ್ಲಿ ಕಾಣಬಹುದು.
ವಸ್ತುಗಳು ವೈಯಕ್ತಿಕ ಸಂಕಟವನ್ನು ಪ್ರತಿನಿಧಿಸುತ್ತಾ ಸಾಮಾಜಿಕ ವಿಚಾರಗಳ ಕಡೆಗೆ ಮುಖ ಮಾಡುತ್ತವೆ. ನವೋದಯ, ನವ್ಯ ಮತ್ತು ಬಂಡಾಯ ಸಂವೇದನೆಗಳನ್ನೊಳಗೊಂಡ ರಚನೆಗಳು ಒಂದೇ ಸಂಕಲನದಲ್ಲಿ ಸೇರಿಕೊಂಡಿರುವ ವೈಶಿಷ್ಟ್ಯವನ್ನು ಕಾಣುತ್ತೇವೆ. ಪ್ರತಿಮೆ ಸಂಕೇತಗಳ ಮೂಲಕ ಚಲಿಸುವ ಹೆಚ್ಚಿನ ಕವಿತೆಗಳಲ್ಲಿ ಬದುಕಿನ ಬಗೆಗಿನ ಬದ್ಧತೆ ಕಂಡುಬರುತ್ತದೆ. ಪದ್ಯದ ಲಯಗಳಲ್ಲಿ ಉಲ್ಲಾಸದ ನಡೆ ಕಂಡುಬರದಿದ್ದರೂ ಬಹುತೇಕ ಕವಿತೆಗಳು ಜೀವನೋತ್ಸಾಹವನ್ನು ಪ್ರತಿಬಿಂಬಿಸುವುದರಲ್ಲಿ ಯಶಸ್ವಿಯಾಗಿವೆ.
