Subscribe to Updates

    Get the latest creative news from FooBar about art, design and business.

    What's Hot

    ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರಕ್ಕೆ ಫೆಲ್ಸಿ ಲೋಬೊರವರ ಕೃತಿ ಆಯ್ಕೆ

    December 12, 2025

    ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರಿಗೆ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ

    December 12, 2025

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಗರಿಗೆದರಿ’ ಕವನ ಸಂಕಲನ

    December 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಗರಿಗೆದರಿ’ ಕವನ ಸಂಕಲನ
    Article

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಗರಿಗೆದರಿ’ ಕವನ ಸಂಕಲನ

    December 12, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೊದಲ ಕವನ ಸಂಕಲನ ‘ಬಾ ಪರೀಕ್ಷೆಗೆ’ ಪ್ರಕಟವಾದ ಆರು ವರ್ಷಗಳ ಬಳಿಕ ಮಾಲತಿ ಪಟ್ಟಣಶೆಟ್ಟಿಯವರು ಹೊರತಂದ ‘ಗರಿಗೆದರಿ’ ಅವರ ಬರವಣಿಗೆಯಲ್ಲಿ ಆದ ಬದಲಾವಣೆಗಳು ಮತ್ತು ಸುಧಾರಣೆಗಳತ್ತ ಬೆಳಕು ಚೆಲ್ಲುತ್ತದೆ. ಸಂಕಲನದ ಶೀರ್ಷಿಕೆಯೇ ಬದಲಾವಣೆಯ ದ್ಯೋತಕವಾಗಿದೆ. ವೈಯಕ್ತಿಕ ನೋವುಗಳಿಗೆ ಸೀಮಿತವಾಗಿದ್ದ ಕವಿತೆಗಳು ಸಂಕುಚಿತತೆಯಿಂದ ಬಿಡಿಸಿಕೊಂಡು ಹಾರಲು ಗರಿ ಕೆದರುವ ಶ್ರಮಕ್ಕೆ ಸಂಕೇತವಾಗಿ ಕೃತಿಯನ್ನು ಪರಿಭಾವಿಸಿಕೊಳ್ಳಬಹುದು. ‘ಬಾ ಪರೀಕ್ಷೆಗೆ’ಯಲ್ಲಿದ್ದ ಹೆಣ್ಣಿನ ಪ್ರಾಮಾಣಿಕ ಒಳನೋಟ, ಸ್ವಾಭಿಮಾನ, ಸ್ವಾತಂತ್ರ್ಯದ ಬಯಕೆ ಇಲ್ಲೂ ಮುಂದುವರಿದಿದ್ದು, ಬವಣೆಯ ನಿರೂಪಣೆಗಷ್ಟೇ ಸೀಮಿತವಾಗದೆ ಅದನ್ನು ಎದುರಿಸುವ ದಿಟ್ಟತನ, ಮಾತಿನ ಕಟುತ್ವವು ಮಿದುತನಕ್ಕೆ ಒಳಗಾದ ಬಗೆಯನ್ನು ಕಾಣಲು ಸಾಧ್ಯವಿದೆ.

    ಮನಸ್ಸನ್ನು ಮುತ್ತುವ ಬಯಕೆಗಳನ್ನು ತಾಳಲಾರದೆ ಆರ್ತವಾಗುವ ಇಲ್ಲವೇ ಅವುಗಳನ್ನು ಹೊರತಳ್ಳಲು ಯತ್ನಿಸುವ ಮನೋಭಾವವನ್ನು ಅರಗಿಸಿಕೊಂಡು
    ಹೇಳು ನೀನು
    ನನ್ನ ನೀ
    ಯಾರಾಗಬೇಕು
    ಏಕಾಗಿ ಬೇಕು
    ನೂರು ಕಳವಳದ ನನ್ನ
    ಇಳೆಗುಂಟ ಕಳಕಳಿಸಿ ತಳಮಳಿಸಿ ಬಳ್ಳಿಯಾದವ
    ಬೆಂದ ಹೂವಿಗೆ ನೆರಳಾದವ
    ಬೆರಳಾದವ
    ಕರುಳಾದವ ಉಮ್ಮಳಕೆ
    ಳಾದವ ಬಿಕ್ಕಳಿಕೆಗೆ (ತಾರೆ, ಪುಟ 2)
    ಎಂದು ಪ್ರೀತಿಯಿಂದ ಪ್ರಶ್ನಿಸುತ್ತಾರೆ.

    ‘ಸಂಬಂಧ’ವು ಇದರ ಬೇರೊಂದು ಪುಟವಾಗಿದೆ. ತನ್ನ ನೋವಿಗೆ ತಳಮಳಿಸಿದವನನ್ನು, ನೆರಳಾದವನನ್ನು ಧಿಕ್ಕರಿಸಿ ನುಡಿಯುವುದು ಮನುಷ್ಯತ್ವ ರಹಿತ ಧೋರಣೆಯೆಂದು ಕವಯತ್ರಿಗೆ ಗೊತ್ತಿರುವುದರಿಂದ ಅವನನ್ನು ಧಿಕ್ಕರಿಸುವ ಕೃತಘ್ನ ನಡೆಯನ್ನು ಅವರು ಪಾಲಿಸಲಾರರು. ಆದರೂ ‘ಮುಳ್ಳಾಗುವೆಯಾ ಮತ್ತೊಂದು ನನ್ನ ಪಯಣ ದುರ್ಭರಕೆ?’ (ಪುಟ 30) ಎಂದು ಕೇಳುವಲ್ಲಿ ಹಳೆ ಗಾಯದ ನೆನೆಪು ಮರುಕಳಿಸಿರುವುದನ್ನು ಕಾಣಬಹುದು. ಇದು ಬದುಕು ಮತ್ತು ಭವಿಷ್ಯವನ್ನು ಕುರಿತ ಎಚ್ಚರವೂ ಹೌದು.
    ನಿನ್ನ ಧರೆ ವಿಸ್ತಾರದಲಿ ಮಣ್ಣಾಗಿ ಬೀಳುವಾಸೆ
    ದಿಗಂತಗಳ ಬಳಸಿ ಕ್ಷಿತಿಜವಾಗುವಾಸೆ
    ಸಾಗರದುಬ್ಬರದ ವೇಗವಾಗಿ ಉಕ್ಕೇರುವಾಸೆ
    ಬೇಕು
    ಎಂದೆಂದಿಗೂ ನೀನು
    ನನ್ನ ಗತಿಗೆ ನಿನ್ನ ನಿಷ್ಠೆ ನಿಡುದಾರಿ
    ಬೆಳೆಯಬೇಕು ನೀ ನನ್ನ ನಾಳೆಗಳ ಸಮಾನಾಂತರ ರೇಖೆ (ಪುಟ 36)

    ಎಂಬುದು ಇದಕ್ಕೆ ಸಂವಾದಿಯಾದ ಸಾಲುಗಳಾಗಿವೆ. ಇದರ ವಿರುದ್ಧ ನೆಲೆಯಲ್ಲಿರುವ ‘ಅಗತ್ಯವಿಲ್ಲ’ ಎಂಬ ಕವಿತೆಯು ಪುರುಷರನ್ನು ಅವಲಂಬಿಸದೆ ಬದುಕುವ ಛಲವನ್ನು ತೊಟ್ಟರೆ ‘ಗೊಮ್ಮಟನಾಗಬೇಕು’ ಎಂಬ ಕವಿತೆಯು ಬದುಕಿನ ಕಷ್ಟ, ಕಾಡುವ ಆಮಿಷ, ವಿಷಯಾಸಕ್ತಿ, ಅಸಹಾಯಕತೆ, ಬಿಸಿನೆತ್ತರ ಹರಿವು, ಮುದಿತನದಲ್ಲಿ ತೋರುವ ನಿರಾಸಕ್ತಿಗಳಿಗೆ ಬಲಿಯಾಗದೆ ಸ್ಥಿತಪ್ರಜ್ಞರಾಗುವ ಸಂದೇಶವನ್ನು ಕೊಡುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ ಎಂದು ಕವಯತ್ರಿಗೆ ತಿಳಿದಿದೆ ಎಂಬುದಕ್ಕೆ ‘ಆಹ್ವಾನ’ ಉದಾಹರಣೆಯಾಗಿದೆ. ಆವೇಶದಿಂದ ಹೊರಟ ಕವಯತ್ರಿಯು ಮರುಭೂಮಿಯಲ್ಲಿ ಸಿಕ್ಕಿ ಬಿದ್ದು ಬಾಯಾರಿ, ಬಿಸಿಲನ್ನಪ್ಪಿ ‘ಕಳೆವೆಯಾ ನೀನಾದರೂ ನನ್ನ ದಾಹ?’ ಎಂದು ಕೇಳುವ ಸಂದರ್ಭ, ‘ಮಾಮರ ಹೂತಾಗ’ ನೆನಪಾಗುವ ಪ್ರಣಯ ಸನ್ನಿವೇಶಗಳು ಅವರನ್ನು ಭೂತಕ್ಕೆ ಕಟ್ಟಿ ಹಾಕುತ್ತವೆ.

    ಕಿಟಿಕಿ, ಗೋಡೆ, ಬಾಗಿಲುಗಳಿಲ್ಲದ ‘ಮನೆ’ಯ ಪರಿಕಲ್ಪನೆಯೂ ಸಂಕುಚಿತತೆಯನ್ನು ಮೀರುವ ಅಗತ್ಯವನ್ನು ಹೇಳುತ್ತದೆ. ಇದು ಕುವೆಂಪು ಅವರ ‘ಅನಿಕೇತನ’ದ ಪರಿಕಲ್ಪನೆಯೇ ಆದರೂ

    ಚಿಂತೆ ಮೂಟೆಗಳನಿಳಿಸಿ ಮಲಗಬೇಕೆಂದಿದ್ದೇವೆ
    ಭ್ರಮೆಯ ಮುಸುಕನು ಕಳಚಿ ಏಳಬೇಕೆಂದಿದ್ದೇವೆ
    ನೆಲದ ಮಣ್ಣನು ಮೂಸಿ ಅಲೆಯಬೇಕೆಂದಿದ್ದೇವೆ
    ತಾರೆ ತಾರೆಗಳನೆಣಿಸಿ ಕಾಲ ಕಳೆಯಬೇಕೆಂದಿದ್ದೇವೆ (ಪುಟ 9)
    ಎನ್ನುವಲ್ಲಿ ನವೋದಯ ಪಂಥವನ್ನು ನೆನಪಿಸುವ ಲಯಬದ್ಧ ಸಾಲುಗಳು ಆಶಾವಾದವನ್ನು ಪ್ರತಿನಿಧಿಸಿದರೂ

    ಓ ಯಾರಿಲ್ಲಿ
    ಓ ನನ್ನವರೆಲ್ಲಿ
    ಕರೆದು ತಂದವರೆ ಈಗ ನೀವೆಲ್ಲಿ
    ಎಷ್ಟು ಕೂಗಿದರೂ ದನಿ ಮುಟ್ಟುವುದಿಲ್ಲ
    ಮಾರ್ದನಿ ತಟ್ಟುವುದಿಲ್ಲ (ಪುಟ 10)
    ಎನ್ನುವಲ್ಲಿ ‘ಅನಿಕೇತನ’ದ ವಿರುದ್ಧ ನೆಲೆಯನ್ನು ಮುಟ್ಟಿ ಬದುಕಿನ ಶೂನ್ಯತೆಯನ್ನು ತೋರಿಸುತ್ತದೆ.

    ಇಲ್ಲಿನ ಕವನಗಳಲ್ಲಿ ಕಂಡುಬರುವ ಪ್ರಮುಖ ಚಿಂತನೆಗಳೆಂದರೆ ಬದುಕಿನಲ್ಲಿ ಹಾಸುಹೊಕ್ಕಿರುವ ವ್ಯಂಗ್ಯ ವೈರುಧ್ಯಗಳು. ‘ಪ್ರೇಮಪಾಠ’, ‘ಮೈತ್ರಿ’, ‘ಒಂದು ಪ್ರಶ್ನೆ’, ‘ಸ್ವಾತಂತ್ರ್ಯೋತ್ಸವದ ದಿನ’, ಸ್ತ್ರೀ ಸ್ವಾತಂತ್ರ್ಯ’ ಮುಂತಾದ ರಚನೆಗಳು ಇದಕ್ಕೆ ಉದಾಹರಣೆಗಳಾಗಿವೆ. ಇವುಗಳು ಸಾಮಾಜಿಕ, ರಾಜಕೀಯ ಕ್ಷೇತ್ರಗಳ ದಯನೀಯ ಪರಿಸ್ಥಿತಿ ಮತ್ತು ಆಷಾಢಭೂತಿತನವನ್ನು ವಿಡಂಬಿಸುತ್ತಾ ಇವುಗಳ ನಡುವೆ ನಲುಗುವ ಜನಸಾಮಾನ್ಯರ ಬದುಕಿನ ಅರ್ಥವೇನು ಎಂದು ಪ್ರಶ್ನಿಸುತ್ತವೆ. ‘ದಿವ್ಯ ಭಾರತೀಯರು ನಾವು’ ಮತ್ತು ‘ಕನ್ನಡದ ಮಾತು’ ಕಾವ್ಯಾತ್ಮಕತೆಯನ್ನು ಮೀರದಿದ್ದರೂ ವಾಚ್ಯವಾಗಿವೆ. ವೈಯಕ್ತಿಕ ನೆಲೆಯಲ್ಲಿ ಚಿಂತಿಸುತ್ತಿದ್ದ ಕವನಗಳು ಸಾಮಾಜಿಕತೆಯತ್ತ ಹೊರಳಿರುವುದು ಸಮಾಧಾನಕರ ಸಂಗತಿಯಾಗಿದೆ.

    ಪ್ರೀತಿ, ಪ್ರೇಮ, ಪ್ರಣಯ, ಶೃಂಗಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯದ ಯುವಜನತೆಯು ಪ್ರೇಮದ ಹೆಸರಿನಲ್ಲಿ ತೆವಲು ತೀರಿಸಿಕೊಳ್ಳುವುದನ್ನು ‘ಪ್ರೇಮಪಾಠ’ವು ವ್ಯಂಗ್ಯವಾಡಿದರೆ ‘ಮೈತ್ರಿ’ಯು ಕಣ್ಣೆದುರಲ್ಲಿ ಒಳ್ಳೆಯವರಂತೆ ವರ್ತಿಸುತ್ತಾ ಬೆನ್ನಿಗೆ ಚೂರಿ ಹಾಕುವವರ ಮಧ್ಯೆ ಬಾಳಬೇಕಾಗಿ ಬರುವ ವಿಪರ್ಯಾಸವನ್ನು ವ್ಯಂಜಿಸುತ್ತದೆ. ವರ್ತಮಾನದ ಅರ್ಥಹೀನ ಬದುಕು ನಿರಂತರ ಕಾಡುವ ಬಗೆ ವ್ಯಕ್ತವಾಗುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಸದ್ದಿಲ್ಲದೆ ನೋಡುತ್ತಾ ನಿಲ್ಲಬೇಕಾಗಿ ಬರುವ ಅಸಹಾಯಕತೆಗೆ ‘ಬೆದರು’ (ಬೆದರು ಬೊಂಬೆ) ಸಂಕೇತವಾದರೆ, ಭೂಮಿಯಲ್ಲಿ ಅನ್ಯಾಯ ಅತ್ಯಾಚಾರಗಳು ಹೆಚ್ಚಿದಾಗ ಅತಿಮಾನವ ಗುಣದ ದೇವತೆಯು ಅನ್ಯಾಯವನ್ನು ಪರಿಹರಿಸುತ್ತದೆ ಎಂಬ ನಂಬಿಕೆಯ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸುವ ‘ಒಂದು ಪ್ರಶ್ನೆ’ಯು ಅಂಥ ಸಂಹಾರಮೂರ್ತಿಯ ಅಸ್ತಿತ್ವವನ್ನು ಹುಡುಕಾಡುತ್ತದೆಯೇ ಹೊರತು ಕಾಪಾಡಲು ಮೊರೆಯಿಡುವುದಿಲ್ಲ. ಈ ಆಶಯವನ್ನು ಹುಳ ಹಿಡಿದ ಮರದ ಪ್ರತಿಮೆಯ ಮೂಲಕ ಸಂಕೇತಿಸುವ ‘ನಾಳೆಗಳು’ ತನ್ನ ಧ್ವನಿಪೂರ್ಣತೆಯಿಂದ ಗಮನವನ್ನು ಸೆಳೆಯುತ್ತದೆ.

    ಎಷ್ಟು ಕೊಳಕು ಹುಳು ಈ ಮರದಲ್ಲಿ
    ರೆಂಬೆ ಕೊಂಬೆಗಳಲ್ಲಿ
    ಕಾಲು ಹೊಸೆದು
    ಪದರು ಪದರನ್ನೆ ಕೆರೆದು
    ಚಿಗುರು ಒಗರಲ್ಲೆ ಹರಿದು
    ಮೊಗ್ಗು ಕನಸಲ್ಲೆ ಕೊರೆದು
    ವಸಂತದಲ್ಲೆ ತನ್ನ ಹಸಿ ನಾಲಗೆ ಚಾಚಿ
    ಕುಳಿತ ಮರವನ್ನೆ ದೋಚಿ
    ಬೆಳೆದ ಡೊಳ್ಳ
    ಜೀವ ಕೊಳ್ಳುವ ಕಳ್ಳ
    ಜಾಲ ಹೆಣೆವ ಹಗೆ ಹಗಲಿರುಳ
    ಕೊನರು ನುಂಗುತ್ತ ಬರಡು ಬಿತ್ತುವ ಖೂಳ
    ಹುಳು ಹಿಡಿದ ಮರದಲ್ಲಿ
    ಕೋಗಿಲೆ ಕೂಗುವುದೆಂತು
    ಕನಸು ಮಾಗುವುದೆಂತು? (ಪುಟ 19)

    ಮರವು ಸಮಾಜಕ್ಕೆ ಸಂಕೇತವಾದರೆ ರೆಂಬೆ, ಚಿಗುರು, ಮೊಗ್ಗು, ವಸಂತ ಮುಂತಾದವುಗಳು ವಿಕಸನದ ಗುಣಗಳಾಗಿವೆ. ನಿರ್ಮಾಣವಾಗಬೇಕಿದ್ದ ವ್ಯಕ್ತಿತ್ವ ಮತ್ತು ಅದರ ಮೂಲಕ ಬೆಳೆಯಬೇಕಾದ ಸಮಾಜ ಹಲವು ರೀತಿಯ ಭ್ರಷ್ಟಾಚಾರ ಮತ್ತು ಪಿಡುಗುಗಳು ಬಾಧಿಸಿರುವುದರಿಂದ ಚೆನ್ನಾಗಿ ಬೆಳೆಯಬೇಕಿದ್ದ ವ್ಯಕ್ತಿ ಅಥವಾ ಸಮಾಜ ಎಳವೆಯಲ್ಲೇ ಅಧಃಪತನಕ್ಕೊಳಗಾಗುತ್ತದೆ. ಮುಗ್ಧ ಜನರ ಬದುಕು ನರಕ ಸದೃಶವಾಗಿದೆ. ಧರ್ಮ, ದೇವರು, ಜಾತಿ, ಮತ ವೈಭವೀಕರಣಗಳಿಂದಾಗಿ ಸಮಾಜವು ಟೊಳ್ಳಾಗುತ್ತಿದೆ. ಅರಾಜಕತೆ, ಅಸಹಾಯಕತೆ ತುಂಬಿ ಹೋಗಿ ಎಲ್ಲರೂ ಹತಾಶರಾಗಿದ್ದಾರೆ ಎನ್ನುವುದಕ್ಕೆ ‘ಕೋಗಿಲೆ ಕೂಗುವುದೆಂತು? ಕನಸು ಮಾಗುವುದೆಂತು?’ ಎಂಬ ಸಾಲುಗಳು ಸಾಕ್ಷಿಯಾಗುತ್ತವೆ. ‘ಬೆಳ್ಳಿ ಮೂಡಲಿಲ್ಲ’ ಈ ಸಮಸ್ಯೆಗಳನ್ನು ಕನ್ನಡ ನಾಡಿನ ಚೌಕಟ್ಟಿನಲ್ಲಿಟ್ಟು ನೋಡುತ್ತದೆ.

    ಕವಯತ್ರಿಯು ಎಲ್ಲವನ್ನೂ ಋಣಾತ್ಮಕವಾಗಿ ನೋಡುವ ಸಿನಿಕರಲ್ಲ. ಭಗ್ನ ಬದುಕಿನ ನಡುವೆಯೂ ತಾನು ಕಳೆದುಕೊಂಡದ್ದನ್ನು ಮತ್ತೆ ಪಡೆದುಕೊಳ್ಳುವ ಹಂಬಲವಿದೆ.

    ಮಲಗಿದಜ್ಜಮ್ಮನ ಬೊಚ್ಚು ಬಾಯಲಿ ಮಲ್ಲಿಗೆ ಅರಳು
    ಮರಳುಗೊಳಿಸಿತ್ತೆನ್ನ ಚಾಚಿದಾ ತೋಳು
    ಧಾವಿಸಿದೆ ಅಬ್ಬರದ ಹೊಳೆಯಂತೆ ಕಡಲಿನೆಡೆ
    ಕಳೆದಿತ್ತು ನನ್ನ ಇಪ್ಪತ್ತರ ಮತ್ತು ಕರಾಮತ್ತು
    ಅಂಬೆಗಾಲಿಟ್ಟಿದ್ದೆ ಮತ್ತೊಮ್ಮೆ ಹೊಳೆಹೊಳೆವ ಅವಳ
    ಬೆಳ್ಳಿಗಂಗಳ ಅಂಗಳ ತುಂಬ ಹರಿದಾಡಿ (ಬೆಳ್ಳಿ, ಪುಟ 31)
    ಆದರೆ ಕಳೆದುಕೊಂಡದ್ದು ದಕ್ಕಲಾರದು ಎನ್ನುವ ಅರಿವು ಕವಯತ್ರಿಗಿರುವುದರಿಂದ

    ಏಕೆ
    ಮಳ್ಳ ಪಾತರಗಿತ್ತಿ
    ಮರೆಯಲ್ಲಿ ಕರೆಯುವಿ
    ಸುಳ್ಳ ಗೋಪುರಕೆ
    ಸಿಳ್ಳುಗಾಳಿಯಾಗಿ ಸುಳಿದಾಡುವಿ? (ಧರ್ಮ, ಪುಟ 39)
    ಎಂದು ತುಂಟತನದಿಂದ ಪ್ರಶ್ನಿಸಿದರೂ, ಒಳಗೆ ಅದುಮಿಟ್ಟ ಸಂಕಟದ ಪ್ರಮಾಣ ಚಿಕ್ಕದಲ್ಲ.

    ರಾತ್ರಿಯಲ್ಲಿ ಅರಳಿ, ಮನ ಕೆರಳಿಸುವ ಪರಿಮಳವನ್ನು ಬೀರಿ, ಬೆಳಗ್ಗೆ ಉದುರಿದ ‘ಪಾರಿಜಾತ’ ಮೇಲ್ನೋಟಕ್ಕೆ ಹೂಗಳನ್ನು ಕುರಿತ ವಿವರಣೆಯಂತೆ ಕಂಡುಬಂದರೂ ಅದು ಬದುಕನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರ ಬದುಕು ಹೂವಿನ ಬಾಳಿನಂತೆ ನಶ್ವರ. ಇಂದು ನಗುತ್ತಿದ್ದವರು ಮುಂದೊಂದು ದಿನ ಬಿದ್ದುಹೋಗುತ್ತಾರೆ. ಜೀವನ ಶಾಶ್ವತವಲ್ಲ ಎಂಬ ತತ್ವವನ್ನು ಸರಳವಾಗಿ ಪ್ರತಿಪಾದಿಸುವ ಕವಿತೆಯು ಹೆಣ್ಣಿನ ದುರಂತ ಬದುಕಿನ ರೂಪಕವಾಗುತ್ತದೆ.

    ಹಗಲ ಹೆಗಲ ಮೇಲೆ ನಿತ್ಯ ಆಸೆ ಹೆಣ ಮೆರವಣಿಗೆ
    ಮಣ್ಣನಪ್ಪಿದ ಮುಗ್ಧ ಮುಖದಲ್ಲಿ ಸಾವ ಬರವಣಿಗೆ
    ಘಾಸಿ ಮನ ಬಾಗಿಲಿಗಾತು ದಿನಬೆಳಗೂ
    ಉದುರಿಸುವೆ ಬಳಬಳ ಕಂಬನಿ ಹೂ (ಪುಟ 42)
    ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ದಾಟಿಸಿದ ರೀತಿಯು ಧ್ವನಿಪೂರ್ಣವಾಗಿದೆ.

    ಇಲ್ಲಿನ ಕವಿತೆಗಳಲ್ಲಿ ಮಿಡುಕುವ, ಒದ್ದಾಡುವ ತಪ್ತ ಶಬ್ದಗಳಿವೆ. ಶಬ್ದ ಗುಚ್ಛಗಳಿವೆ. ಶಪಿತ ಬದುಕಿನ ನೆರಳುಗಳಿವೆ. ಆದರೆ ಈ ತಪ್ತ ಪದಗಳನ್ನು ಹಿಂದಕ್ಕೆ ಸರಿಸಿದಾಗ ಕೊನೆಗೂ ಮನದಲ್ಲುಳಿಯುವುದು ತ್ರಸ್ತ ಭಾವ ಮಾತ್ರ.

    ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿ : ಮಾಲತಿ ಪಟ್ಟಣಶೆಟ್ಟಿ

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿ ಕೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು) ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ) ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ) ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ) ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.

     

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ‘ಕೊಂಕಣಿ ಕಲೋತ್ಸವ- 2025’ | ಡಿಸೆಂಬರ್ 14
    Next Article ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರಿಗೆ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರಕ್ಕೆ ಫೆಲ್ಸಿ ಲೋಬೊರವರ ಕೃತಿ ಆಯ್ಕೆ

    December 12, 2025

    ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರಿಗೆ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ

    December 12, 2025

    ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ‘ಕೊಂಕಣಿ ಕಲೋತ್ಸವ- 2025’ | ಡಿಸೆಂಬರ್ 14

    December 12, 2025

    ಮೈಸೂರಿನಲ್ಲಿ ರಂಗಸಂಪದ ಸುವರ್ಣ ಸಂಭ್ರಮದ ಪ್ರಯುಕ್ತ ನಾಟಕ ಪ್ರದರ್ಶನ | ಡಿಸೆಂಬರ್ 13 ಮತ್ತು 14

    December 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.