ಪತ್ರಕರ್ತ, ಲೇಖಕ ಶಿವಾನಂದ ಕರ್ಕಿಯವರು ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ನ ತಮ್ಮ ಪ್ರವಾಸಾನುಭವಗಳನ್ನು ಪ್ರಮುಖವಾಗಿ ಹೇಳಲು ಹೊರಟಿರುವ ಈ ಕೃತಿಯ ಶೀರ್ಷಿಕೆ ‘ಗಿರಗಿಟ್ಲೆ’ ಎಂದಿರುವುದೇ ಇದರ ವೈಶಿಷ್ಟ್ಯತೆಗೊಂದು ನಿದರ್ಶನ. ಶೀರ್ಷಿಕೆಯ ಅಡಿಸಾಲು ‘ವಿದೇಶದಲ್ಲೂ ನಾವು ಹೀಗೆ’. ಹಿಂಬದಿ ರಕ್ಷಾಪುಟದಲ್ಲಿ ಹಲವು ದಶಕಗಳ ಹಿಂದೆ ಮಕ್ಕಳಾಟಕ್ಕಾಗಿ ಹಲಸಿನೆಲೆಯಿಂದ ಮಾಡುತ್ತಿದ್ದ ಗಿರಗಿಟ್ಲೆಯ ಚಿತ್ರವೂ ಇದೆ. ವಿದೇಶ ಪ್ರವಾಸಾನಂತರ ಪ್ರವಾಸಾನುಭವಗಳ ಗುಂಗು ತಲೆತುಂಬ ಗಿರಕಿ ಹೊಡೆಯುತ್ತಿದ್ದುದನ್ನು ಲೇಖಕರು ಗಿರಗಿಟ್ಲೆಗೆ ಹೋಲಿಸಿದ್ದಾರೆ. ಚಿಂತಕ ಜಿ.ಎಸ್. ರಾಜೇಂದ್ರರ ಮುನ್ನುಡಿ ಹೊಂದಿರುವ ನೂರಾಎಂಟು ಪುಟಗಳ ಈ ಕೃತಿ ‘ಧ್ವನಿ ಪ್ರಕಾಶನ’ದ ಪ್ರಕಟಣೆ.
ಕೊರೋನಾ ಕರಾಳತೆಯ ಫಲಾನುಭವಿಯಾಗಿ ಪಾರ್ಶ್ವವಾಯುವಿಗೆ ತುತ್ತಾಗಿ ವೈದ್ಯರಿಂದ ನಲವತ್ತೆಂಟು ಗಂಟೆ ಏನೂ ಹೇಳಲಾಗದು ಎಂದೂ, ಪ್ರಜ್ಞೆ ಬಂದರೂ ಉಸಿರಾಡುವ ಜೀವಚ್ಛವದಂತಿರಬೇಕಾಗುತ್ತದೆ ಎಂದೂ ಹೇಳಿಸಿಕೊಂಡು, ವೈದ್ಯರ ಊಹೆ ಹುಸಿಯಾಗಿಸಿ ಮರುಹುಟ್ಚು ಪಡೆದ ಕರ್ಕಿಯವರು ಮತ್ತೆ ಬೈಪಾಸ್ ಸರ್ಜರಿಗೆ ಒಳಗಾಗುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಘಾತಗಳ ಮೇಲೆ ಆಘಾತಗಳನ್ನೆದುರಿಸಿಯೂ ತಮ್ಮ ಮನೋಬಲದಿಂದಲೇ ಇವೆಲ್ಲಕ್ಕೂ ಸೆಡ್ಡು ಹೊಡೆದು ನವ ಜೀವನಕ್ಕೆ ಮುಖ ಮಾಡಿ ವಿದೇಶ ಪ್ರವಾಸಕ್ಕೂ ಸಜ್ಜಾಗುವ ಶಿವಾನಂದರು ಪತ್ನಿ ವಿನಂತಿಯವರಿಗೆ ದೊರಕಿದ್ದ ವಿದೇಶ ಪ್ರವಾಸಾವಕಾಶದಲ್ಲಿ ಭಾಗಿಯಾಗುತ್ತಾರೆ. ವಿಮಾನ ಪ್ರಯಾಣಕ್ಕೆ ಆಸೆಪಟ್ಟಿದ್ದ ತಂದೆಯನ್ನು ನೆನೆದು ಭಾವುಕರಾಗುತ್ತಾ, ಕಸವನ್ನು ಶತ್ರುವಿನಂತೆ ನೋಡುವ ದೇಶದಲ್ಲಿ ಕಸದ ರಾಶಿಯ ಮೇಲೇ ಸುಖ ನಿದ್ದೆ ಮಾಡುವ ತನ್ನ ದೇಶದ ಜನರನ್ನು ನೆನೆಯುತ್ತಾ, ಜೆಂಟಿಂಗ್ ಹೈಲ್ಯಾಂಡ್ಸ್ ಗೆ ಕೇಬಲ್ ಕಾರಲ್ಲಿ ಹೋಗುವಾಗ ಪ್ರಾಣಭೀತಿಯಿಂದಾದ ದಿಗಿಲಿನಿಂದ ತಮ್ಮೂರಿನ ಜಕಣಿ ಕೂಡಿಸೋ ಸಂಪ್ರದಾಯವನ್ನು ಸವಿವರವಾಗಿ ಮೆಲುಕು ಹಾಕುತ್ತಾ, ವಿದೇಶೀ ನೆಲದಲ್ಲೂ ಸ್ವದೇಶೀ ಗುಂಗನ್ನು ಹೊತ್ತೊಯ್ದು ಮೆಲುಕು ಹಾಕುವ ವಿಶಿಷ್ಟಾನುಭವಗಳನ್ನು ವಿವಿಧ ಅಧ್ಯಾಯಗಳಲ್ಲಿ ನಿರೂಪಿಸಿದ್ದಾರೆ. ಸಿಂಗಾಪುರದ ಉದ್ಯಾನವನಗಳ ಸಸ್ಯರಾಶಿ ನೋಡಿ ಮಾರುಹೋದರೂ ತಮ್ಮೂರ ದಟ್ಟೈಸಿದ ಕಾಡು ನೆನೆದು ‘ಇಲ್ಲಿ ಸಸ್ಯರಾಶಿಯನ್ನು ಚಂದವಾಗಿ ಜೋಡಿಸಿ ಕಣ್ಣಿಗೆ ಕಟ್ಟುವಂತೆ ಕಲೆಗಾರಿಕೆ ಮಾಡಿದ್ದಾರೆ ಎಂದಷ್ಟೇ ಅನಿಸಿತು’ ಎಂಬ ಒಳಗೆ ಬಿಟ್ಟು ಕೊಂಡರೂ ಅಂತರದಲ್ಲಿರಿಸುವ ನಿರ್ಲಿಪ್ತಿ ತೋರುತ್ತಾರೆ.
ಮಲೇಷಿಯಾದ ಕೆಎಲ್ ಟವರ್, ಪೆಟ್ರೋನಾಸ್ ಟ್ವಿನ್ ಟವರ್ಸ್, ಜೆಂಟಿಂಗ್ ಹೈಲ್ಯಾಂಡ್ಸ್, ಅಲ್ಲಿನ ಕೆಸಿನೋ, ಥೈಲ್ಯಾಂಡ್ ನ ಮಸಾಜ್ ಶಾಪ್ ಗಳು, ಅಲ್ಕಜಾರ್ ಶೋ, ವಾಕಿಂಗ್ ಸ್ಟ್ರೀಟ್ ನ ಅನುಭವಗಳು, ಬ್ಯಾಂಕಾಕ್ ನ ಟ್ರಾಮಿಟ್ ದೇವಾಲಯದ ಬುದ್ಧ, ಇವನ್ನೆಲ್ಲ ತಮ್ಮದೇ ವಿಶಿಷ್ಟ ವಿಭಿನ್ನ ದೃಷ್ಟಿಕೋನದಿಂದ ಪರಾಮರ್ಶಿಸಿದ್ದಾರೆ.
ಎಡರ ತೊಡರ ಕಡಲ ಹೆದ್ದೆರೆಗಳು ಭೋರ್ಗರೆಯುತ ಎದುರಾದಾಗಲೇ ಎದೆಗುಂದದೆ ಎದೆಗೊಟ್ಟು ನಿಂತು ‘ಗರ್ಕು’ ಕಾದಂಬರಿ ಬರೆದುಧ ತಮ್ಮ ಧೀಶಕ್ತಿ ತೋರಿದ್ದ ಶಿವಾನಂದರು ಅದೇ ಧೀಶಕ್ತಿಯು ತಮ್ಮನ್ನು ಸದಾ ಮುನ್ನಡೆಯಿಸುತ್ತಿದೆ ಎಂಬುದನ್ನು ‘ಗಿರಗಿಟ್ಲೆ’ ಪುಸ್ತಕದಲ್ಲಿ ವಿಭಿನ್ನ ಶೈಲಿಯಲ್ಲಿ ಪ್ರವಾಸಾನುಭವ ಮಾತ್ರವೇ ಅಲ್ಲದೆ, ಬದುಕಿನೆಡೆಗಿನ ಸಕಾರಾತ್ಮಕ ದೃಷ್ಟಿಕೋನವನ್ನು, ತಮ್ಮ ಜಾನಪದೀಯ ಆಸಕ್ತಿಯನ್ನು, ಅಭಿವ್ಯಕ್ತಿಸುವ ಮೂಲಕ ಸಾಬೀತುಪಡಿಸಿದ್ದಾರೆ.
ವಿಮರ್ಶೆಕಿ | ಕೆ.ಆರ್. ಉಮಾದೇವಿ ಉರಾಳ್