ಚುಟುಕು ಕವಿ, ಹಾಸ್ಯ ಕವಿ, ಹನಿಗವನಗಳ ಕವಿಗಳೆಂದೇ ಜನಪ್ರಿಯರಾದ ಡುಂಡಿರಾಜ್ ಇಪ್ಪತ್ತಕ್ಕೂ ಮಿಕ್ಕಿ ಹಾಸ್ಯ ನಾಟಕಗಳನ್ನು ಬರೆದಿದ್ದಾರೆಂಬುದು ಅನೇಕರಿಗೆ ತಿಳಿದಿಲ್ಲ. ಅರ್ಧ ಅಥವಾ ಒಂದು ಗಂಟೆಯ ಅವಧಿಯಲ್ಲಿ ರಂಗದ ಮೇಲೆ ಆಡಬಹುದಾದ ಅವರ ಹಲವು ಕಿರುನಾಟಕಗಳನ್ನು ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಅನೇಕ ವರ್ಷಗಳಿಂದ ರಂಗಾಸಕ್ತರು ಆಡುತ್ತಿದ್ದಾರೆ. ಇತ್ತೀಚೆಗೆ ಅವರ ಹೊಸ ಸಂಕಲನ ‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’ ಅಂಕಿತ ಪುಸ್ತಕದ ಮೂಲಕ ಹೊರ ಬಂದಿದೆ. ಅವರ ಹನಿಗವನಗಳಂತೆಯೇ ನವಿರಾದ ಹಾಸ್ಯ ಸಂಭಾಷಣೆಗಳಿಂದ ಮತ್ತು ಆಧುನಿಕ ಬದುಕಿನ ಸಂದರ್ಭ-ಸನ್ನಿವೇಶಗಳಿಗೆ ಸಂಬಂಧಿಸಿದ ವಿಚಾರಗಳಿಂದ ತುಂಬಿರುವ ನಾಟಕಗಳು ಇಲ್ಲಿವೆ.
ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ದರ್ಶನವೀಯಲು ಬರುವ ಗಣಪನನ್ನು ಅಧುನಿಕ ದೃಷ್ಟಿಕೋನದಿಂದ ಮಾತನಾಡಿಸುತ್ತ ಸಾಮಾಜಿಕ ಸ್ಥಿತಿಗತಿಗಳನ್ನು, ರಾಜಕೀಯದ ಓರೆಕೋರೆಗಳನ್ನು, ಗಣಪನ ಮೂರ್ತಿಗೆ ರಾಸಾಯನಿಕ ಬಣ್ಣಗಳನ್ನು ಬಳಸಿ ಜನರು ಪರಿಸರಕ್ಕೆ ಉಂಟು ಮಾಡುವ ಹಾನಿಗಳನ್ನು ಹಾಸ್ಯ ಮಿಶ್ರಿತ ಮಾತುಗಳಿಂದ ಚಿತ್ರಿಸುವ ನಾಟಕ ‘ಅಸಲಿಯೋ ನಕಲಿಯೋ ?’. ಅನಾರೋಗ್ಯ ಸಮಸ್ಯೆಗೆ ಸರಿಯಾದ ಪರಿಹಾರವನ್ನೇ ನೀಡದ ಟಿ.ವಿ. ಕಾರ್ಯಕ್ರಮ ‘ಅನಾರೊಗ್ಯವೇ ಭಾಗ್ಯ’ದಲ್ಲಿ ಉತ್ಪ್ರೇಕ್ಷೆಯ ಮೂಲಕ ಹಾಸ್ಯ ಇದೆ. ಗಂಡು-ಹೆಣ್ಣಿನ ನಡುವಣ ಪ್ರೇಮ ಸಂಬಂಧಗಳು ಹೇಗಿರಬೇಕು ಎಂಬುದರ ಬಗ್ಗೆ ಲಘುಧಾಟಿಯಲ್ಲಿ ಲೇವಡಿ ಮಾಡುವ ‘ಪ್ರೇಮ ಸಮಾಲೋಚನೆ’ ಎಂಬ ಟಿ.ವಿ. ಕಾರ್ಯಕ್ರಮವು ಟಿ.ಆರ್.ಪಿ. ಗೋಸ್ಕರ ಕಸರತ್ರು ಮಾಡುವ ಚಾನೆಲ್ಲುಗಳ ಬಗೆಗಿನ ಟೀಕೆ. ಚಾನೆಲ್ಲಿನ ಹೆಸರನ್ನು ಟೈಮ್ ಪಾಸ್ ಟಿ.ವಿ. ಎಂದು ಇಟ್ಟಿರುವದೇ ಇದಕ್ಕೆ ಸಾಕ್ಷಿ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮೇಲಿನ ಪಾಠದ ಹೊರೆ, ಶಾಲೆಯವರೂ ಹೆತ್ತವರೂ ಅಂಕಗಳಿಗೆ ಕೊಡುವ ಅನಗತ್ಯ ಮಹತ್ವ, ಮಕ್ಕಳಿಗೆ ಪಾಠಗಳನ್ನು ಹೇಳಿಕೊಡಲು ಹೆತ್ತವರೇ ಅಧ್ಯಯನ ಮಾಡಬೇಕಾದ ವಿಪರ್ಯಾಸ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ‘ಮಗನಿಗೆ ಪರೀಕ್ಷೆ – ಅಪ್ಪನಿಗೆ ಶಿಕ್ಷೆ’ ನಕ್ಕು ನಗಿಸುವ ನಾಟಕ. ಯುವಕ ಸಂಘಗಳು ನಡೆಸುವ ಸಭೆ ಸಮಾರಂಭಗಳಿಗೆ ಅತಿಥಿಗಳಾಗಿ ಹೋಗಿ ಮಾಡಬೇಕಾಗಿ ಬರುವ ಭಾಷಣ, ಕಾಟಾಚಾರಕ್ಕೆ ಗಂಭೀರ ವಿಷಯಗಳ ಮೇಲೆ ಮಾಡುವ ವಿಚಾರ ಸಂಕಿರಣಗಳು, ಅವರ ಬೂಟಾಟಿಕೆಗಳು ‘ಸಭೆ, ಸಮಾರಂಭ-ಗೋಳು’ ಎಂಬ ನಾಟಕದಲ್ಲಿದೆ. ಸದಾ ಗಂಭೀರ ಮುಖ ಹೊತ್ತುಕೊಂಡಿರುವುದನ್ನು ಬಿಟ್ಟು ಹಾಸ್ಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳುವ ನಾಟಕ ‘ಹಾಸ್ಯ ಎಷ್ಟು ಆವಶ್ಯ ?’ ಸರಿಯಾದ ಆಹಾರ ಸೇವನೆ ಮಾಡದೆ, ಮನೆ ಮದ್ದಿನ ಬಗ್ಗೆ ಏನೇನೂ ತಿಳುವಳಿಕೆಯಿಲ್ಲದೆ ನೆಗಡಿಯಂತಹ ಸಾಮಾನ್ಯ ಕಾಯಿಲೆಗೂ ಡಾಕ್ಟರ್ ಹತ್ತಿರ ಓಡುವ ಇಂದಿನ ಜನಾಂಗ ‘ರಂಗಣ್ಣನ ನೆಗಡಿ’, ಸಂಗೀತಕ್ಕೂ ಕೆಲವು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎನ್ನುವ ಅರಿವು ಮೂಡಿಸುವ ‘ಮುತ್ತಣ್ಣನ ಮ್ಯೂಸಿಕ್ ಥೆರಪಿ’, ನಮ್ಮ ಸಾಂಸ್ಕೃತಿಕ ಬೇರುಗಳನ್ನು ರಕ್ಷಿಸುವ ಶಿಲಾಶಾಸನಗಳ ಬಗೆಗಿನ ಐತಿಹಾಸಿಕ ಜ್ಞಾನವಿರಬೇಕು ಎಂದು ಹೇಳುವ ‘ಹನಿಕೂಡಿ ಹಳ್ಳ, ಶಿಲೆಗೂಡಿ ಮ್ಯೂಸಿಯಂ’, ಎಲ್ಲಾ ಅಭಿವೃದ್ದಿ ಕೆಲಸಗಳನ್ನು ರಾಜಧಾನಿಗೇ ಯಾಕೆ ಸೀಮಿತವಾಗಿಸಬೇಕು ಎನ್ನುತ್ತ ಗಿನ್ನೆಸ್ ದಾಖಲೆ ಮಾಡುವ ಹುಚ್ಚಿನಲ್ಲಿ 140 ಬಾರಿ ತೇಗಿ ತೋರಿಸುವವನಿಗೆ ‘ತೇಗ್ ಬಹದೂರ್’ ಎಂದು ಹೆಸರಿಡುವ ನಾಟಕ, ಶಿಕ್ಷಕ ಪ್ರಶಸ್ತಿಗಾಗಿ ವಶೀಲಿ ಮಾಡುವವರು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡದೆ ಟ್ಯೂಷನ್ ಧಂಧೆಯ ಮೂಲಕ ಹಣ ಮಾಡುವುದು ಮತ್ತು ಬೆಕ್ಕುಗಳ ಮದುವೆಗಾಗಿ ವ್ಯರ್ಥ ಹಣ ಪೋಲು ಮಾಡುವ ಕುರಿತು ಮಾತನಾಡುವ ‘ಬ್ಯಾಂಕಾಕಿನಲ್ಲಿ ಬೆಕ್ಕಿನ ಮದುವೆ’, ಮಾತು ಮಾತಿಗೂ ಕಾವ್ಯ ಕಟ್ಡುವ ಚತುರಮತಿ ಬರಿಯಪ್ಪನ ಟಿವಿ ಸಂದರ್ಶನವನ್ನು ತೋರಿಸುವ ‘ಹಾಸ್ಯ ಕವಿ ಬರಿಯಪ್ಪ’, ಬ್ಯಾಂಕಿನಲ್ಲಿ ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಯನ್ನು ಟೀಕಿಸುವ ‘ಸಾಲ-ಸೋಲ’, ಗಾಸಿಪ್ ಗಳನ್ನು ಓದುವುದರಲ್ಲೇ ಹೆಚ್ಚು ಆಸಕ್ತಿ ತೋರಿಸುವ ಮಂದಿಯನ್ನು ಗಾಸಿಪ್ ಪತ್ರಿಕೆಗಳು ಮೋಸ ಮಾಡುವ ಪರಿಗೆ ಸಾಕ್ಷಿಯಾಗುವ ‘ಮೋಸ ಪತ್ರಿಕೆ’ – ಹೀಗೆ ಸಂಕಲನದ ಎಲ್ಲ ನಾಟಕಗಳಲ್ಲೂ ಸಂಭಾಷಣೆಯ ವಿಷಯ-ವಸ್ತುಗಳು ಆಧುನಿಕ ಸಮಾಜದ ಬದುಕಿನ ವಿವಿಧ ಮುಖಗಳ ಬಗ್ಗೆ ಆಗಿದ್ದರೂ ಉದ್ದಕ್ಕೂ ಇರುವ ತುಂಬಿರುವ ಲವಲವಿಕೆಯ ಹಾಸ್ಯಗಳು ಮತ್ತು ನಡುನಡುವೆ ಇಣುಕುವ ಹನಿಗವನಗಳು ಇಡೀ ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತವೆ.
ಉದ್ದಕ್ಕೂ ಕಾಣುವ ಕಾವ್ಯಾತ್ಮಕ ಸಂಭಾಷಣೆಗಳು, ಹೆಜ್ಜೆಹೆಜ್ಜೆಗೂ ಶಬ್ದಗಳೊಂದಿಗೆ ಆಟವಾಡುವ ಪರಿ(ಪನ್), ಅಲ್ಲಲ್ಲಿ ಕಾಣುವ ಪಂಚ್ ಡಯಲಾಗುಗಳು ಓದುಗರ (ಅಥವಾ ಪ್ರೇಕ್ಷಕರ) ನಗೆ ಲಹರಿಗೆ ಕಾರಣವಾದರೆ ಸುತ್ತಮುತ್ತಲ ವ್ಯವಸ್ಥೆಯಲ್ಲಿ ಕಾಣುವ ದೋಷಗಳ ಕುರಿತಾದ ಟೀಕೆಗಳು ಗಂಭೀರ ಚಿಂತನೆಗೂ ಹಚ್ಚುತ್ತವೆ. ಸಾಹಿತ್ಯ ಪ್ರಿಯರು ಹಾಸ್ಯ ಸಾಹಿತ್ಯದ ಬಗ್ಗೆ ಲಘುವಾಗಿ ಮಾತನಾಡುವುದನ್ನು ವಿರೋಧಿಸಿ ವರ್ಷಕ್ಕೊಮ್ಮೆ ನಡೆಸುವ ಮೂರ್ಖರ ದಿನಾಚರಣೆಯಲ್ಲಿ ಭಾಗವಹಿಸಿ ಹೊಟ್ಟೆ ತುಂಬಾ ನಗುವುದು ಆರೋಗ್ಯಕ್ಕೆ ಒಳ್ಳಯದು ಎನ್ನುತ್ತ ಒಂದೆಡೆ ಲೇಖಕರು ಹೀಗೆ ಹೇಳುತ್ತಾರೆ : “ನಮ್ಮ ಸಭ್ಯತೆ, ಶ್ರೀಮದ್ ಗಾಂಭೀರ್ಯ, ವಿಚಾರವಂತಿಕೆ, ಬುದ್ಧಿವಂತಿಕೆ ಮುಂತಾದ ಮುಖವಾಡಗಳನ್ನೆಲ್ಲ ಕಿತ್ತು ಬಿಸಾಕಿ ಒಂದು ನಿಮಿಷ ನಮ್ಮ ನಿಜವಾದ ಸಹಜವಾದ ಮುಖವನ್ನು ನಾವು ಹಾಸ್ಯ ಅನ್ನುವ ಕನ್ನಡಿಯಲ್ಲಿ ನೋಡಿಕೊಂಡರೆ ನಮ್ಮ ವ್ಯಕ್ತಿತ್ವದ ಓರೆಕೋರೆಗಳು ನಮಗೆ ಚೆನ್ನಾಗಿ ತಿಳಿಯುತ್ತವೆ”.
ಡುಂಡಿರಾಜರ ಹಾಸ್ಯದ ಉದ್ದೇಶ ಕೇವಲ ಇತರರನ್ನು ಟೀಕಿಸುವುದಲ್ಲ. ಅವರ ಅನೇಕ ನಾಟಕಗಳಲ್ಲಿ ಅವರನ್ನು ಪ್ರತಿನಿಧಿಸುವ ಪಾತ್ರಗಳನ್ನು ನೋಡಬಹುದು. ಅಲ್ಲೆಲ್ಲ ಅವರು ತಮ್ಮ ಹಾಸ್ಯಗಳಿಗೆ ತಮ್ಮನ್ನೇ ಗುರಿಯಾಗಿಸುತ್ತಾರೆ. ಇದು ಒಳ್ಳೆಯ ವಿನೋದದ ಲಕ್ಷಣ. ಅಲ್ಲದೆ ಹಾಸ್ಯಗಳು ತಕ್ಷಣಕ್ಕೆ ನಗುವನ್ನು ಉಕ್ಕಿಸಿದರೂ ನಡುನಡುವೆ ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳ ಮೂಲಕ ಅವರು ತಮ್ಮ ನಾಟಕಗಳನ್ನು ‘ಹೊರಗಿನಿಂದ ಸಿಹಿ ಲೇಪಿಸಿದ ಕಹಿ ಗುಳಿಗೆಗಳನ್ನಾಗಿ ಮಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾದ ಕಾಳಜಿಯನ್ನು ತೋರಿಸುತ್ತಾರೆ.
ಇವು ಕಿರುನಾಟಕಗಳಾದ್ದರಿಂದ ಶಾಲಾ ಕಾಲೇಜುಗಳ ಲಲಿತಕಲಾ ಉತ್ಸವಗಳಲ್ಲೂ ವಾರ್ಷಿಕೋತ್ಸವಗಳಲ್ಲೂ ಅಡಲು ಅನುಕೂಲವಾಗಿವೆ. ಬಳಸಿದ ಭಾಷೆ ಸರಳವಾಗಿದ್ದು ಸುಲಭದಲ್ಲಿ ಕಲಿಯಬಹುದಾಗಿದೆ. ಕೆಲವು ನಾಟಕಗಳಿಗೆ ಉತ್ತರ ಕರ್ನಾಟಕದ ಆಡುಭಾಷೆಯನ್ನು ಸಮರ್ಥವಾಗಿ ಬಳಸಿದ್ದು, ಕರ್ನಾಟಕದಾದ್ಯಂತ ಎಲ್ಲೆಡೆ ಜನಪ್ರಿಯವಾಗಬಲ್ಲ ಸಾಮರ್ಥ್ಯ ಇವುಗಳಿಗೆ ಇದೆ. ಎಲ್ಲವೂ ಸಾಮಾಜಿಕ ನಾಟಕಗಳಾದ್ದರಿಂದ ವೇಷಭೂಷಣ, ಪ್ರಸಾಧನ ಮತ್ತು ರಂಗಪರಿಕರಗಳನ್ನು ಒಟ್ಟು ಮಾಡುವ ಕಷ್ಟ ಇಲ್ಲಿಲ್ಲ. ಪರಿಣಾಮಕಾರಿ ಸಂಭಾಷಣೆಗಳು ಇಲ್ಲಿ ರಂಗದ ಮೇಲೆ ನಾಟಕಗಳನ್ನು ಯಶಸ್ವಿಯಾಗಿಸಬಲ್ಲ ಮುಖ್ಯ ಅಂಶ.
-ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.