Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಚೊಚ್ಚಲ ಕೃತಿ ‘ಹೆಜ್ಜೆ ಊರುವ ತವಕ’
    Article

    ಪುಸ್ತಕ ವಿಮರ್ಶೆ | ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಚೊಚ್ಚಲ ಕೃತಿ ‘ಹೆಜ್ಜೆ ಊರುವ ತವಕ’

    April 2, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಿರಂತರ ಸಾಹಿತ್ಯಾಧ್ಯಯನ, ಬರಹ ಅದರಲ್ಲೂ ವಿಶೇಷವಾಗಿ ಪ್ರಕೃತಿ ಮತ್ತು ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ಚೊಚ್ಚಲ ಕೃತಿ ‘ಹೆಜ್ಜೆ ಊರುವ ತವಕ’ವು ಅವರ ಹವ್ಯಾಸಗಳಲ್ಲಿರುವ ಪ್ರಾಮಾಣೀಕತೆಯ ಪ್ರತೀಕವಾಗಿ ಮೂಡಿಬಂದಿದೆ.

    ‘ಹೆಜ್ಜೆ ಊರುವ ತವಕ’ವು ಮೂರು ಭಾಗಗಳನ್ನು ಹೊಂದಿದ್ದು, ಮೊದಲ ಭಾಗ ಪಕ್ಷಿ ಜಗತ್ತಿನ ವಿಸ್ಮಯಗಳಿಗೆ ತೆರೆದ ಮಡಿಲಾದರೆ, ಎರಡನೇ ಭಾಗವು ಲೇಖಕರು ಕೈಗೊಂಡ ಚಾರಣಗಳ ಕುರಿತಾದ ಅನುಭವಾತ್ಮಕ ಬರಹಗಳಿಂದ ಕೂಡಿದೆ. ಮೂರನೇ ಭಾಗದಲ್ಲಿ ನಿಸರ್ಗ ಜಗತ್ತನ್ನು ಅನಾವರಣಗೊಳಿಸಿದ ಪ್ರಸಿದ್ಧ ಲೇಖಕರ ಕೃತಿಗಳ ಕುರಿತಾದ ವಿಮರ್ಶಾ ಬರಹಗಳಿದ್ದು, ಪ್ರಾಕೃತಿಕ ವಿದ್ಯಮಾನಗಳನ್ನು ಧ್ವನಿಸಿದ ರೀತಿಯು ಸೊಗಸಾಗಿ ಮೂಡಿಬಂದಿದೆ.

    ವಿಸ್ಮಯ ಮತ್ತು ಆಲೋಚನೆಗಳಿಗೆ ನಿಲುಕದ ಪಕ್ಷಿ ಜಗತ್ತಿನ ಸೂಕ್ಷ್ಮ ಅವಲೋಕನಗಳನ್ನು ಕೃತಿಯ ಮೊದಲ ಭಾಗದಲ್ಲಿ ಕಾಣಬಹುದು. ಎಳವೆಯ ಮುಗ್ಧ ಮನಸ್ಸುಗಳು ಅಜ್ಜಿ ಮನೆಯ ಆಸರೆಯನ್ನು ಬಯಸುವಂತೆ ತನ್ನ ಅಜ್ಜಿ ಮನೆಯನ್ನು ನೆಚ್ಚಿಕೊಳ್ಳುವ ಲೇಖಕರು ರಜಾ ದಿನಗಳಲ್ಲಿ ಅಲ್ಲಿ ಉಳಿದುಕೊಂಡುದುದರ ಫಲವೋ ಎಂಬಂತೆ ಕೃತಿಯಲ್ಲಿ ಆ ಕುರಿತಾದ ಬರಹಗಳು ಅನಾವರಣಗೊಂಡಿವೆ. ಬೇಸಿಗೆಯ ಸೆಕೆ, ಶಿಶಿರದ ಗಾಳಿ ಮತ್ತು ಮಳೆಯ ಪಾರುಪತ್ಯದಲ್ಲಿ ಅನುಭವಿಸಿದ ಸವಿ ನೆನಪುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಬಾನಿಗೆ ಮುತ್ತಿಡುವ ಮರಗಳುದ್ದಕ್ಕೂ ಹರಿದಾಡುವ ಹಾರುವ ಓತಿ, ವರ್ಣಮಯ ಹಕ್ಕಿಯಾದ ಮಲಬಾರ್ ಟ್ರೋಜನ್, ಇನಿದನಿಯ ಮೂಲಕ ಪರಿಸರ ಬಂಧುಗಳ ಕಿವಿಗಳಿಗೆ ಮಧುರ ಸಂಗೀತವನ್ನು ಉಣಬಡಿಸಿ ಮೌನವನ್ನೂ ಮಾತನಾಡಿಸುವ ಮಲಬಾರ್ ಹಕ್ಕಿ, ಹೊಟ್ಟೆಪಾಡಿಗಾಗಿ ತುತ್ತು ಕೂಳಿಗಾಗಿ ಜಗಳವಾಡಿ ಕೆಲವು ನಿಮಿಷಗಳ ಬಳಿಕ ಸಮರವನ್ನು ಸಾಮರಸ್ಯದಲ್ಲಿ ಮುಗಿಸಿ ಕೂಡಿ ಬದುಕುವ ಹರಟೆ ಮಲ್ಲ ಹಕ್ಕಿಗಳು, ಪರಾಗಸ್ಪರ್ಶದಲ್ಲಿ ನಿರತವಾಗುತ್ತಾ ತಮ್ಮ ಕರ್ಮಕ್ಕೆ ಬದ್ಧವಾಗಿ ಬದುಕುವ ಪಾತರಗಿತ್ತಿಗಳ ಜೀವನಶೈಲಿ, ಹಸಿರು ವನಸಿರಿಯ ನಡುವೆ ದುಂಡಗಿನ ಪಪ್ಪಾಯಿ ಹಣ್ಣುಗಳನ್ನು ಕುಕ್ಕಿ ತಿನ್ನುವ ಹಕ್ಕಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಅಲಿಖಿತ ಶಿಸ್ತು ಕ್ರಮ, ದಟ್ಟವಾದ ಮೋಡಗಳು ಗರ್ಜಿಸಿದ ಬಳಿಕ ಸುರಿದ ಮಳೆಯು ಇಳೆಯನ್ನು ತಂಪಾಗಿಸಿದ ಬೆನ್ನಿಗೇ ಅಲ್ಲಿ ನಗೆಯ ಸ್ವರಗಳನ್ನು ಮಾರ್ದನಿಸಿ ಹರ್ಷಿಸುವ ದರ್ಜಿ ಹಕ್ಕಿ, ಮರಕುಟಿಗ, ಮಿಂಚುಳ್ಳಿ, ಹೊನ್ನೆ ಹಣೆಯ ಎಲೆ ಹಕ್ಕಿಗಳೇ ಮೊದಲಾದ ವಿವಿಧ ಹಕ್ಕಿಗಳ ರಾಜ್ಯಭಾರದ ಕುರಿತು ಸರಳ ಮತ್ತು ಸ್ಪಷ್ಟ ಭಾಷೆಯ ಮೂಲಕ ತಿಳಿಸುವ ಮೂಲಕ ಕೃತಿಯು ಓದಿನ ಪ್ರೀತಿಯನ್ನು ವಿಸ್ತರಿಸುತ್ತದೆ.

    ಚಾರಣವನ್ನು ಕುರಿತ ಅನುಭವಾತ್ಮಕ ಲೇಖನಗಳು ಓದುಗರ ಕೌತುಕವನ್ನು ಹೆಚ್ಚಿಸುತ್ತದೆ. ತಾಯಿ ಶಾರದೆಯ ದಿವ್ಯ ಸನ್ನಿಧಾನವಾದ ಶೃಂಗೇರಿಯಿಂದ ಅನತಿ ದೂರದಲ್ಲಿ ಇರುವ ‘ಸಿರಿಮನೆ ಜಲಪಾತ’ದ ಕುರಿತು ರೋಚಕ ಮಾಹಿತಿಗಳನ್ನು ಒಳಗೊಂಡ ಮೊದಲ ಲೇಖನ ಗಮನ ಸೆಳೆಯುತ್ತದೆ. ಒಂದೆಡೆ ಮನೋ ಜಾಡ್ಯಗಳನ್ನು ನಿವಾರಿಸುವ ಸಲುವಾಗಿ ತನ್ನೆಡೆಗೆ ಬರುವ ಆಸ್ತಿಕ ಬಂಧುಗಳ ಮನದಾಸೆಯನ್ನು ಈಡೇರಿಸಲು ನೆಲೆ ನಿಂತ ಶಾರದೆಯ ಸನ್ನಿಧಾನದಿಂದ ಹೊರಹೊಮ್ಮುವ ದೈವಿಕ ಅಂಶಗಳು ಶ್ರೀಕ್ಷೇತ್ರದ ಪರಿಶುದ್ಧಿಯನ್ನು ಸಾರುತ್ತಿದ್ದರೆ, ನಿಸರ್ಗದ ಸೋಜಿಗಗಳನ್ನೇ ಒಡಲಲ್ಲಿ ಹೊತ್ತು ವರ್ಷದೋಕುಳಿಯನ್ನು ಚಿಮ್ಮಿಸುವ ಸಿರಿಮನೆ ಜಲಪಾತ ಇನ್ನೊಂದೆಡೆ. ಇವೆರಡರ ಕೂಟದಲ್ಲಿ ತನು ಮನಗಳು ಅನುಭವಿಸುವ ಆನಂದವನ್ನು ಅಲ್ಲಿಗೆ ಹೋಗಿಯೇ ಸವಿಯಬೇಕೇ ಹೊರತು ಅವುಗಳ್ನು ಬಾಯಿ ಮಾತುಗಳಿಂದ ಕಟ್ಟಿಕೊಡುವುದು ಆಗದ ಕೆಲಸ ಎನ್ನುವ ಲೇಖಕರ ಮಾತು ಅಕ್ಷರಶಃ ನಿಜ.

    ಪ್ರಕೃತಿಯು ಬೆರಗಿನ ಆಗರ. ಪ್ರದೇಶದಿಂದ ಪ್ರದೇಶಕ್ಕೆ ಅವು ವ್ಯತ್ಯಾಸ ಕಾಣಬಹುದೇ ಹೊರತು ಅಲ್ಲಿ ಮೇಲು ಕೀಳುಗಳ ಮಾತೇ ಇಲ್ಲ ಎಂದು ಹೇಳುವ ಲೇಖಕರ ಮನದ ಮಾತಿನಲ್ಲಿ ಕಾಣುವ ಸಂತಸ ‘ಅಂಬಾತೀರ್ಥ’ದ ಸೊಬಗನ್ನು ಪ್ರತಿಬಿಂಬಿಸುತ್ತದೆ. ರಮಣೀಯ ದೃಶ್ಯಗಳನ್ನು ಹೊದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುವ ಚಿಕ್ಕಮಗಳೂರು ಜಿಲ್ಲೆಯ ಕಳಸ ‘ಅಂಬಾತೀರ್ಥ’ದ ಮೂಲಕವೂ ಪ್ರಸಿದ್ಧವಾಗಿದೆ. ಮೊದಲ ಮಳೆಯ ಘಮ, ಪಡುವಣ ಬಾನ ಸಂಜೆಯ ಮನಮೋಹಕ ದೃಶ್ಯ, ನೀರಿನ ನಿನಾದ ಮತ್ತು ಸೂರ್ಯನ ಕಿರಣಗಳ ಪ್ರತಿಫಲನದಿಂದ ರಾರಾಜಿಸುವ ಚೆಲುವಿನ ಬಣ್ಣನೆಯ ಜೊತೆಯಲ್ಲಿ ಅಂಬಾತೀರ್ಥದ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಲು ಲೇಖಕರು ಮರೆಯಲಿಲ್ಲ.

    ‘ಹೆಜ್ಜೆ ಊರುವ ತವಕ’ ಕೃತಿಯ ಪುಟಗಳು ಮತ್ತಷ್ಟು ತೆರೆದಂತೆ ಕೇರಳದ ಪಾಲಕ್ಕಾಡಿನಲ್ಲಿರುವ ‘ಚೆಂಧಮಂಗಲಮ್ ವೆಟ್ ಲ್ಯಾಂಡ್ಸ್’ ಎಂಬ ಜೌಗು ಪ್ರದೇಶದ ವಿಸ್ಮಯ ಅನಾವರಣಗೊಳ್ಳುತ್ತದೆ. ನೀರಿನಿಂದ ಸುತ್ತುವರೆದ ಪ್ರದೇಶದ ವಾತಾವರಣವನ್ನು ಮನಮುಟ್ಟುವಂತೆ ವಿವರಿಸುವ ಲೇಖಕರ ನಿರೂಪಣೆಯಲ್ಲಿ ನೋವಿನ ನೆರಳು ಸ್ಪಷ್ಟವಾಗಿ ಕಾಣುತ್ತದೆ. ನಿಸರ್ಗದ ಚೆಲುವಿಕೆಗೆ ಅನುರೂಪವಾಗಿ ಇರುವ ಇಂತಹ ಜೌಗು ಪ್ರದೇಶದ ಚೆಲುವು ಸ್ವಾರ್ಥಿ ಮಾನವನ ಕಪಿಮುಷ್ಠಿಯಲ್ಲಿ ಸಿಲುಕಿ ಹಾಳಾಗುವ ಬಗೆಯನ್ನು ಅತ್ಯಂತ ವಿಷಾದದಿಂದ ತಿಳಿಸುವ ಲೇಖಕರು ಅಪರೂಪವಾಗಿ ಕಾಣಸಿಗುವ ಇಂಥ ತಾಣಗಳನ್ನು ಉಳಿಸಬಯಸುವ ಹಂಬಲವನ್ನು ವ್ಯಕ್ತ ಪಡಿಸುತ್ತಾರೆ. ಇದು ಯುವ ಜನಾಂಗದ ಹೊಣೆಗಾರಿಕೆಯನ್ನು ಧ್ವನಿಸುತ್ತದೆ.

    ‘ಹೆಜ್ಜೆ ಊರುವ ತವಕ’ ಕೃತಿಯ ಕೊನೆಯ ಭಾಗ ಪರಿಸರ ಸಂಬಂಧಿ ಕೃತಿಗಳ ಬಗೆಗಿನ ಪರಿಚಯಾತ್ಮಕ ಬರಹಗಳನ್ನು ಒಳಗೊಂಡಿದೆ. ಶಿವಾನಂದ ಕಳವೆಯವರ ‘ಕಾನುಘಟ್ಟ’, 2022ರ ‘ಚಡಗ ಕಾದಂಬರಿ ಪ್ರಶಸ್ತಿ’ ವಿಜೇತ ಕೃತಿಯಾದ ಡಾ. ಶ್ರೀಧರ ಎಚ್.ಜಿ. ಅವರ ‘ಪ್ರಸ್ಥಾನ’, ಕೃಪಾಕರ ಸೇನಾನಿಯವರ ‘ಕೆನ್ನಾಯಿಯ ಜಾಡಿನಲ್ಲಿ’, ಗಿರಿಮನೆ ಶ್ಯಾಮರಾವರ ‘ಮಲೆನಾಡಿನ ರೋಚಕ ಕತೆಗಳು’ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಪ್ರಕಟಿತ ಕೃತಿಗಳ ಕುರಿತು ಸೂಕ್ಷ್ಮವಾಗಿ ವಿವರಿಸುವ ಲೇಖನಗಳು ತೂಕಬದ್ಧ ಆಂಶಗಳನ್ನು ಒಳಗೊಂಡಿದೆ.

    ಹಚ್ಚಹಸುರಿನ ಪರಿಸರದ ಮಡಿಲಿನಲ್ಲಿ, ಹರೆಯದ ಹೊಸ್ತಿಲಿನಲ್ಲಿ ಬೆಳೆಯುತ್ತಿರುವ ನವೀನಕೃಷ್ಣ ಎಸ್. ಇವರ ಚೊಚ್ಚಲ ಕೃತಿಯು ಅವರ ವಯಸ್ಸಿಗೆ ಮೀರಿದ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಸಾಲು ಸಾಲು ಹಕ್ಕಿಗಳನ್ನು ಸರಾಗವಾಗಿ ಪಟ್ಟಿ ಮಾಡುತ್ತಾ, ಅವುಗಳ ಜೀವನ ಚರ್ಯೆಗಳನ್ನು ಮುಕ್ತವಾಗಿ – ಸ್ಪಷ್ಟವಾಗಿ ತಿಳಿಸುವ ಬಗೆ ಇಂದು ನೆನ್ನೆಯ ಓದಿನ ಮಾತಲ್ಲ. ಸಾಕಷ್ಟು ತಾಳ್ಮೆ, ಪರಿಸರ ಸಹಜವಾಗಿಯೇ ತೋರುವ ಕೆಲವೊಂದು ಅಡ್ಡಿಗಳನ್ನು ಎದುರಿಸುವಲ್ಲಿ ಬೇಕಾಗಿರುವ ತಾಳ್ಮೆ ಅವರ ಎಳವೆಯಿಂದಲೇ ಬೆಳೆದು ಬಂದಿದೆ. ಕೈಯಲ್ಲೊಂದು ಕ್ಯಾಮೆರಾ ಹಿಡಿದ ಕೂಡಲೇ ಎಲ್ಲರೂ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಅದಕ್ಕೂ ಒಂದು ಕಲೆ, ಆ ಕಲೆಯನ್ನು ಕರಗತಗೊಳಿಸುವಲ್ಲಿ ನಿರಂತರ ಶ್ರಮ ಮತ್ತು ನಿಷ್ಠೆ ಬೇಕು. ಎಲ್ಲೂ ಉತ್ಪ್ರೇಕ್ಷೆಯ ಹಂಗಿಗೆ ಬೀಳದೇ, ಅಸಹಜತೆಯ ಕುರುಹನ್ನು ಅಚ್ಚಾಗಿಸದೆ, ಕಣ್ಣುಗಳು ಕೇಂದ್ರೀಕರಿಸಿದ ವೈವಿಧ್ಯಮಯ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುವ ನವೀನಕೃಷ್ಣರ ಬರಹಗಳು ಸರಳ ಭಾಷೆ ಮತ್ತು ಹಿತಮಿತ ನಿರೂಪಣೆಗಳಿಂದ ನಿಸರ್ಗ ಪ್ರಿಯರಿಗೆ ಮತ್ತು ಎಲ್ಲಾ ವರ್ಗದ ಓದುಗರಿಗೆ ಆಪ್ತವಾಗುವುದರಲ್ಲಿ ಸಂಶಯವಿಲ್ಲ.

    ನಯನ ಜಿ.ಎಸ್.:


    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿರುವ ನಯನ ಜಿ.ಎಸ್. ಇವರು ಹವ್ಯಾಸಿ ಬರಹಗಾರ್ತಿಯಾಗಿದ್ದು, ಅನೇಕ ಲೇಖನಗಳು, ಕವಿತೆಗಳು ಸ್ಥಳೀಯ ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ’ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಎರಡು ಪ್ರವಾಸ ಕಥನಗಳು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ಇದರೊಂದಿಗೆ ಮಂಜುವಾಣಿ, ಮಂಗಳ, ನೈರುತ್ಯ ಹಾಗೂ ಇನ್ನಿತರ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಇವರ ಕವನಗಳು, ಲೇಖನಗಳು, ಗಜಲ್ ಬರಹಗಳು, ಲಲಿತ ಪ್ರಬಂಧಗಳು ಪ್ರಕಟಗೊಂಡಿವೆ. ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಫರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.

    ಕೃತಿಯ ಹೆಸರು – ‘ಹೆಜ್ಜೆ ಊರುವ ತವಕ’
    ಲೇಖಕರು – ನವೀನಕೃಷ್ಣ ಎಸ್. ಉಪ್ಪಿನಂಗಡಿ.
    ಪ್ರಕಾಶಕರು – ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಸಂಘ, ಪುತ್ತೂರು.
    ಬೆಲೆ – ರೂ.120/-

     

    ಲೇಖಕರ ಪರಿಚಯ :


    ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವಾಸವಾಗಿರುವ ನವೀನಕೃಷ್ಣ ಎಸ್. ಇವರು ಶ್ರೀ ಎಸ್.ಎನ್. ಪ್ರಕಾಶ್ ಮತ್ತು ಶ್ರೀಮತಿ ಎಸ್. ಸೀತಾ ದಂಪತಿಗಳ ಸುಪುತ್ರ. ಪ್ರಸ್ತುತ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗುತ್ತಿರುವ ನವೀನ್ ಪ್ರಸ್ತುತ ವಿವೇಕಾನಂದ ಪದವಿ ಕಾಲೇಜು, ಪುತ್ತೂರು ಇಲ್ಲಿ ಬಿ.ಕಾಂ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದ ಜೊತೆ ಜೊತೆಗೆ ವೇದ, ಮಂತ್ರ ಮತ್ತು ಶಾಸ್ತ್ರಾಧ್ಯಯನದಲ್ಲೂ ಆಸಕ್ತಿ ಹೊಂದಿರುವ ಇವರು ಚೂಂತಾರು ಮತ್ತು ಮುಕ್ರಂಪಾಡಿಯ ದ್ವಾರಕಾದಲ್ಲಿ ನಡೆಯುವ ವಸಂತ ವೇದಪಾಠ ಶಿಬಿರದಲ್ಲಿ ಅಧ್ಯಯನ ಮತ್ತು ಅಧ್ಯಾಪನ ಎರಡನ್ನೂ ನಿರ್ವಹಿಸುತ್ತಿದ್ದಾರೆ. ನವೀನ್ ಅವರ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆನ್ಲೈನ್ ತಾಣಗಳಾದ ಬುಕ್ ಬ್ರಹ್ಮ, ಜ್ಞಾನ ತಾಣ, ಫೇಸ್ಬುಕ್ಕಿನ ಪುಸ್ತಕ ಅವಲೋಕನ ಬಳಗದಲ್ಲಿಯೂ ಪ್ರಕಟಗೊಂಡಿರುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ‘ಅರೆಹೊಳೆ ನಾಟಕೋತ್ಸವ’ ಏಪ್ರಿಲ್ 4ರಿಂದ 7
    Next Article ಬ್ರಹ್ಮಾವರದಲ್ಲಿ ‘ರಂಗೋತ್ಸವ’ | ಏಪ್ರಿಲ್ 5ರಿಂದ 7
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.