ನಾವೆಲ್ಲ ಯಾವ ವಯಸ್ಸಿನಲ್ಲಿ, ಎಂತಹ ಕತೆ, ಕಾದಂಬರಿಗಳನ್ನು ಓದಬೇಕು? ಓದಿ ಏನು ಮಾಡಬೇಕು? ಎಂಬುದನ್ನು ವಿಕಾಸ ಹೊಸಮನಿ ಎಂಬ ಯುವ ಬರಹಗಾರರು ತೋರಿಸಿಕೊಟ್ಟಿದ್ದಾರೆ. ಅವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’, ‘ವೀತರಾಗ’, ‘ಮಿಂಚಿನ ಬಳ್ಳಿ’, ‘ಹೃದಯದ ಹಾದಿ’ ಎಂಬ ಗಟ್ಟಿ ಕೃತಿಗಳಲ್ಲಿ ವಿಮರ್ಶೆಯ ಓಘವಿದ್ದರೆ, ‘ಮಂದಹಾಸ’ ಎಂಬ ಸಂಪಾದಿತ ಕೃತಿಯಲ್ಲಿ ಸಮಕಾಲೀನ ಬರಹಗಾರರ ಲಲಿತ ಪ್ರಬಂಧಗಳ ಕಂಪು ತುಂಬಿ ತುಳುಕಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಓದಿನ ಸಾರ್ಥಕ್ಯವನ್ನು ‘ಜೀವ ಸಂವಾದ’ ಎಂಬ ಕೃತಿಯಲ್ಲಿ ಕಾಣುತ್ತೇವೆ.
ಕಳೆದ 50 ವರ್ಷಗಳಲ್ಲಿ (1973 -2023) ಕನ್ನಡದ ಕಾದಂಬರಿಯ ಬೆಳೆಯನ್ನು ಸುಮಾರು ನೂರಕ್ಕೂ ಹೆಚ್ಚು ಕೃತಿಗಳ ಕಥೆ ಮತ್ತು ಇತಿಮಿತಿಗಳನ್ನು ಟ್ರೇಲರಿನಂತೆ ಕೊಟ್ಟಿದ್ದಾರೆ. ಕಥಾಸಾರ, ಹೋಲಿಕೆ, ವಿಶ್ಲೇಷಣೆ, ವಿಮರ್ಶಾತ್ಮಕ ಒಳನೋಟ, ಆಯಾ ಕಾದಂಬರಿಗಳಿಂದಾದ ಪ್ರೇರಣೆಗಳ ಬಗ್ಗೆ ಅಧಿಕೃತವಾಗಿ ಬರೆದಿದ್ದಾರೆ. ಆರಂಭದ ಮಾತುಗಳು ಹೀಗಿವೆ. “70ರ ದಶಕದ ಹೊತ್ತಿಗೆ ಕನ್ನಡ ಕಾದಂಬರಿ ಪ್ರಬುದ್ಧಾವಸ್ಥೆಯನ್ನು ತಲುಪಿತ್ತು. ಕಥಾವಸ್ತು, ತಂತ್ರ, ಭಾಷೆ, ಶೈಲಿ, ನಿರೂಪಣೆ ಮತ್ತು ನಾವೀನ್ಯತೆ ಸೇರಿದಂತೆ ಎಲ್ಲ ದೃಷ್ಟಿಯಿಂದಲೂ ಜಗತ್ತಿನ ಯಾವುದೇ ಭಾಷೆಗೆ ಅನುವಾದಗೊಂಡರೂ ಸಹ ಅಲ್ಲಿನ ಶ್ರೇಷ್ಠ ಕಾದಂಬರಿಗಳ ಜೊತೆಗೆ ಸರಿ ಮಿಗಿಲಾಗಿ ನಿಲ್ಲಬಲ್ಲ ಮಹತ್ವದ ಕಾದಂಬರಿಗಳು ಕನ್ನಡದಲ್ಲಿವೆ.”
ಕುವೆಂಪು, ಕಾರಂತ, ದೇವುಡು, ಮಾಸ್ತಿ, ಬಿ. ಪುಟ್ಟಸ್ವಾಮಯ್ಯ, ಆನಂದಕಂದ, ಶ್ರೀರಂಗ, ಗೊರೂರು, ಗೋಕಾಕ, ರಂ.ಶ್ರೀ. ಮುಗಳಿ, ಕೆ.ವಿ. ಅಯ್ಯರ್, ಅ.ನ.ಕೃ., ತ.ರಾ.ಸು., ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ, ವ್ಯಾಸರಾಯ ಬಲ್ಲಾಳ, ವಿ.ಎಂ. ಇನಾಂದಾರ್, ರಾವ್ ಬಹದ್ದೂರ್, ಶಂಕರ ಮೊಕಾಶಿ ಪುಣೇಕರ, ಎಸ್.ಎಲ್. ಭೈರಪ್ಪ, ಶಾಂತಿನಾಥ ದೇಸಾಯಿ, ಯು.ಆರ್. ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ, ಪೂರ್ಣಚಂದ್ರ ತೇಜಸ್ವಿ, ಸಿ.ಕೆ. ನಾಗರಾಜರಾವ್, ಕುಸುಮಾಕರ ದೇವರಗೆಣ್ಣೂರ, ರಾಮಚಂದ್ರ ಕೊಟ್ಟಲಗಿ, ಕೊರಟಿ ಶ್ರೀನಿವಾಸ ರಾವ್, ರಂ.ಶಾ. ಲೋಕಾಪುರ, ಚಂದ್ರಶೇಖರ ಕಂಬಾರ, ನಾ. ಮೊಗಸಾಲೆ, ರಾಘವೇಂದ್ರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ, ಗಿರಿಯವರ ದುಡಿಮೆಯನ್ನು ಉದಾಹರಿಸುವುದರ ಜೊತೆಗೆ ನವೋದಯ, ಪ್ರಗತಿಶೀಲ ಮತ್ತು ನವ್ಯ ಪಂಥಗಳ ಮೂಲಕ ಇವರ ಸಲ್ಲುವಿಕೆಯನ್ನೂ ಸೂಚಿಸುತ್ತಾರೆ. ಎಸ್.ಎಲ್. ಭೈರಪ್ಪ (ಪುಟ 35) ಅವರನ್ನು ಜನಪ್ರಿಯರ (ಪುಟ 89) ಬುಟ್ಟಿಗೆ ಸೇರಿಸದಿರುವುದು ಮೆಚ್ಚುಗೆಯ ವಿಚಾರ. ಮಹಿಳೆಯರ ಬರವಣಿಗೆಯನ್ನು (ಪುಟ 84ರಿಂದ) ಪ್ರತ್ಯೇಕವಾಗಿ ಗುರುತಿಸುವಾಗಲೂ ಸಹ ಅವರು ಸಂಯಮ ತೋರಿದ್ದಾರೆ. “ಅನ್ಯ ಭಾರತೀಯ ಭಾಷಾ ಲೇಖಕಿಯರು ಮಹಿಳಾ ಮೀಸಲಾತಿ ಬಯಸದೆ ಪುರುಷ ಲೇಖಕರೊಂದಿಗೆ ಸಮಾನ ಸ್ಕಂಧರಾಗಿ ವಿರಾಜಮಾನರಾಗಿದ್ದಾರೆ.” ಎಂದು ಬರೆದರೂ ಸಂಖ್ಯೆಯಲ್ಲಿ ಪುರುಷರಿಗಿಂತ ಹೆಚ್ಚು ಕೊಡುಗೆ (ಸಾವಿರಾರು) ಕೊಟ್ಟಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತ, ಎಂ.ಕೆ. ಇಂದಿರಾ, ತ್ರಿವೇಣಿ ಅವರಂತೆ ಅನೇಕರನ್ನು ಬೇರ್ಪಡಿಸಿ ನೋಡಲಾಗದೆಂಬ ಅಭಿಪ್ರಾಯವನ್ನು ಉದಾಹರಣೆಗಳೊಂದಿಗೆ ವ್ಯಕ್ತಪಡಿಸುತ್ತಾರೆ.
ಕನ್ನಡ ಸಾಹಿತ್ಯಪ್ರಿಯರು ತಾವೇ ಓದಿಕೊಂಡು ಅನುಭವಿಸುವುದಕ್ಕೆ ಅರ್ಹವಾದ ವಾದಸರಣಿ ಇಲ್ಲಿದೆ. ಹೆಚ್ಚಿನ ಕನ್ನಡ ಕಾದಂಬರಿಕಾರರು ಹೆಚ್ಚು ಬದ್ಧತೆ ಹೊಂದಿದವರಲ್ಲ. ಹೀಗಿದ್ದೂ ಕೆಲವು ಲೇಖಕರು ಮೇಲ್ವರ್ಗದ ದರ್ಪ, ದೌರ್ಜನ್ಯ, ಕ್ರೌರ್ಯ, ಹಿಂಸೆ, ಜಮೀನ್ದಾರಿ ವ್ಯವಸ್ಥೆಯ ಕೇಡುಗಳ ಬಗ್ಗೆ ಅತಿರಂಜಿತ, ಅತಿರೇಕದ ವರ್ಣನೆಗಳನ್ನು ಮಂಡಿಸುವ ಬಗ್ಗೆ ಸೂಚ್ಯವಾಗಿ ಹೇಳಿದ ರೀತಿ ಗಮನಾರ್ಹವಾಗಿದೆ. “ಕುಗ್ರಾಮಕ್ಕೆ ಆಧುನಿಕತೆಯ ಪ್ರವೇಶವಾದಾಗ ಉಂಟಾಗುವ ಅಲ್ಲೋಲ ಕಲ್ಲೋಲಗಳ ಸೊಗಸಾದ ಚಿತ್ರಣ ಈ ಕಾದಂಬರಿಯಲ್ಲಿದೆ. ಹಳ್ಳಿಗರಿಗೆ ಆಧುನಿಕ ಪ್ರಪಂಚದ ಜನ ಬಳಸುವ ವಸ್ತುಗಳಾದ ಸೌಂದರ್ಯ ಸಾಧನಗಳು ಮತ್ತು ಒಳ ಉಡುಪುಗಳನ್ನು ಸರಬರಾಜು ಮಾಡುವ ಗೆಂಡೆತಿಮ್ಮ ಮಾತ್ರ ಆಧುನಿಕನಲ್ಲ” ಎಂಬ ‘ಪರಸಂಗದ ಗೆಂಡೆತಿಮ್ಮ’ದ ಕುರಿತ ಅಂಶ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಕಥಾ ಸಾರಾಂಶವನ್ನು ಕಟ್ಟಿಕೊಡುವ ವಿಕಾಸ್ ಹೊಸಮನಿಯವರ ಸುಭಗ ಶೈಲಿಗೆ ನಿದರ್ಶನವಾಗಿದೆ.
ನೂರಾರು ಕಾದಂಬರಿಗಳ ಕಥಾರೂಪ, ಶೈಲಿ ಮತ್ತಿತರ ಸಂಗತಿ, ವಿಮರ್ಶಾತ್ಮಕ ಒಳನೋಟಗಳನ್ನು ಕೊಡುತ್ತ, ಹಿಂದೆ ಓದಿದ್ದರೆ ಅದರ ಮರು ನೆನಕೆಗೂ, ಓದದವರಿಗೆ ನಮ್ಮ ಹೆಮ್ಮೆಯ ಸಾಹಿತ್ಯ ಜಗತ್ತಿನ ಕುರಿತ ಸಾಮಾನ್ಯ ಜ್ಞಾನ ಸಂಗ್ರಹಕ್ಕೂ ಸಹಕರಿಸುವ ಈ ವಿಶಿಷ್ಟ ಕೃತಿ ಸಮಗ್ರ ಕಾದಂಬರಿ ಜಗತ್ತಿನ ಒಳನೋಟವನ್ನು ಕಂಡ ಯುವ ವಿಮರ್ಶಕನೊಬ್ಬನ ಉತ್ತಮ ಕೊಡುಗೆಯಾಗಿದೆ.
ಪ್ರೊ. ಪಿ.ಎನ್. ಮೂಡಿತ್ತಾಯ