ಭರವಸೆಯ ಯುವ ಲೇಖಕರಾದ ಡಾ. ಸುಭಾಷ್ ಪಟ್ಟಾಜೆಯವರ ಎರಡನೆಯ ಕಥಾ ಸಂಕಲನ ‘ಕಾಡುಸಂಪಿಗೆ’. ಸುಮಾರು ಹನ್ನೆರಡು ವರ್ಷಗಳ ಹಿಂದೆ ಅವರು ವಿದ್ಯಾರ್ಥಿಯಾಗಿದ್ದಾಗ ಪ್ರಕಟಿಸಿದ್ದ ‘ಗೋಡೆ ಮೇಲಿನ ಗೆರೆಗಳು’ ಎಂಬ ಸಂಕಲನದ ಶೀರ್ಷಿಕೆ ಕತೆಯೂ ಸೇರಿದಂತೆ ಈ ಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಸುಭಾಷರು ಪ್ರತಿಭಾವಂತರಾದರೂ ಮೃದುಭಾಷಿ ಮತ್ತು ಸಂಕೋಚ ಸ್ವಭಾವದ ವ್ಯಕ್ತಿ. ಒಂದರ್ಥದಲ್ಲಿ ಅಂತರ್ಮುಖಿ. ಅವರ ಸ್ವಭಾವವೇ ಇಲ್ಲಿನ ಬಹುತೇಕ ಕಥಾ ನಾಯಕರಿಗಿರುವುದು ಆಕಸ್ಮಿಕವಲ್ಲ. ಕನ್ನಡ ಮತ್ತು ಮಲಯಾಳಂ ಕಥಾ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿರುವ ಸುಭಾಷರು, ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು’ ಎಂಬ ವಿಷಯದಲ್ಲಿ ಅಧ್ಯಯನವನ್ನು ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳ ಕುರಿತು ಅವರಿಗೆ ಸಾಕಷ್ಟು ಗೊತ್ತಿದೆ. ತುಂಬ ಒಳ್ಳೆಯ ಓದುಗ ಮತ್ತು ಪ್ರೇಕ್ಷಕರಾದ ಸುಭಾಷರ ಮೇಲೆ ಉತ್ತಮ ಸಾಹಿತ್ಯ ಮತ್ತು ಸದಭಿರುಚಿಯ ಚಲನಚಿತ್ರಗಳ ಪ್ರಭಾವವಿದೆ. ಇದು ಅವರ ಕಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಸಂಕೀರ್ಣವಾದ ಮನುಷ್ಯ ಸಂಬಂಧಗಳ ವಿಶ್ಲೇಷಣೆಯು ಸುಭಾಷರ ಕಥೆಗಳ ಪ್ರಧಾನ ಆಸ್ಥೆಯಾಗಿದೆ. ಗಂಡು ಹೆಣ್ಣಿನ ಪ್ರೇಮ, ಉಂಟಾಗುವ ದೈಹಿಕ ಸಂಬಂಧ ಮತ್ತು ಅದು ಅವರಿಬ್ಬರ ಬದುಕಿನ ಮೇಲೆ ಉಂಟು ಮಾಡುವ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಇಲ್ಲಿನ ಬಹುತೇಕ ಕತೆಗಳ ವಸ್ತು. ಒಂದು ಗಂಡು–ಒಂದು ಹೆಣ್ಣು ಅಥವಾ ಒಂದು ಗಂಡು–ಎರಡು ಹೆಣ್ಣು ಇಲ್ಲವೇ ಒಂದು ಹೆಣ್ಣು – ಎರಡು ಗಂಡು ಎಂಬ ಪಾತ್ರ ವಿನ್ಯಾಸವನ್ನು ಹೊಂದಿದ ಹಲವು ತ್ರಿಕೋನ ಪ್ರೇಮ ಕತೆಗಳು ಇಲ್ಲಿವೆ. ಅದು ದೈಹಿಕ ವಾಂಛೆಯಿಂದ ಮುಕ್ತವಾದ ಶುದ್ಧಾಂಗ ಪ್ರೇಮವೇನೂ ಅಲ್ಲ. ಗಂಡು ಹೆಣ್ಣಿನ ನಡುವೆ ಇಂಥ ಸಂಕೀರ್ಣ ಸಂಬಂಧ ಏರ್ಪಟ್ಟಾಗ ಬದುಕಿನಲ್ಲಿ ಏನೆಲ್ಲ ಸಂಭವಿಸಬಹುದೋ ಹೇಳಲಾಗುವುದಿಲ್ಲ. ಯಾವ ಪ್ರೇಮವೂ ಅನೈತಿಕವಲ್ಲ. ಆದರೆ ಕಾಮದ ಕುರಿತು ಹಾಗೆನ್ನುವಂತಿಲ್ಲ. ಅದು ಬದುಕಿನಲ್ಲಿ ಉಂಟು ಮಾಡುವ ಪರಿಣಾಮ ಸಾಮಾನ್ಯವಲ್ಲ.
ಹನ್ನೆರಡು ವರ್ಷಗಳ ಹಿಂದೆ ಪ್ರಕಟವಾದ ‘ಗೋಡೆ ಮೇಲಿನ ಗೆರೆಗಳು’ ಕಥೆ ಇಂಥ ವಿಷಮ ಸಂಬಂಧಕ್ಕೆ ಉತ್ತಮ ಉದಾಹರಣೆ. ಕಥಾನಾಯಕನ ಅಪ್ಪನು ಪಾರು ಎಂಬ ಹೆಂಗಸಿನೊಂದಿಗೆ ಹೊಂದಿದ ಅನೈತಿಕ ಸಂಬಂಧ, ಆ ಬಗ್ಗೆ ತಿಳಿದೂ ಪ್ರತಿಭಟಿಸದೆ, ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಅವಳ ಗಂಡ ಸುಕುಮಾರ – ಹೀಗೆ ಇಲ್ಲಿ ಎರಡು ಗಂಡುಗಳ ನಡುವೆ ಸಿಕ್ಕು ಒದ್ದಾಡುವ ಅಸಹಾಯಕ ಹೆಣ್ಣಾದ ಪಾರು ಇದ್ದಾಳೆ. ಎಲ್ಲ ಅನೈತಿಕ ಸಂಬಂಧಗಳಂತೆ ಇದೂ ಸಹ ಪಾರುವಿನ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಅವಳ ಸಾವು ಕಥಾನಾಯಕ ಮತ್ತು ಅವನ ತಾಯಿಯಲ್ಲಿ ಉಂಟುಮಾಡುವ ಮರುಕ ಹಾಗೂ ದುಃಖ ಅವಳನ್ನು ಆದು ಸ್ಥಿತಿಗೆ ತಂದ ಅವನ ಅಪ್ಪನಲ್ಲಿ ಉಂಟು ಮಾಡದಿರುವುದು ಗಂಡಿನ ಕ್ರೌರ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ.
‘ಆಂದೋಲನ’ ಕಥೆಯಲ್ಲಿ ಸಹ ರಾಧಾ, ನಾರಾಯಣ ಮತ್ತು ಪಟೇಲ – ಮೂವರ ನಡುವಿರುವ ವಿಷಮ ಸಂಬಂಧ ನಾರಾಯಣನ ಮರಣದಲ್ಲಿ ಮುಕ್ತಾಯಗೊಳ್ಳುತ್ತದೆ. ಚಾಣಾಕ್ಷಳಾದ ರಾಧಾ, ಪಟೇಲನೊಂದಿಗಿನ ಅಕ್ರಮ ಸಂಬಂಧವನ್ನು ಗುಟ್ಟಾಗಿ ಸಾಗಿಸಿಕೊಂಡು ಹೋಗುತ್ತಾಳೆ. ನಾರಾಯಣನಿಗೆ ಪಕ್ಕದ ಮನೆಯ ಸುಕುಮಾರ ಮತ್ತು ಪಟೇಲ ಇಬ್ಬರಿಗೂ ರಾಧೆಯೊಂದಿಗೆ ಸಂಬಂಧವಿರಬಹುದೆಂಬ ಅನುಮಾನವಿದೆ. ನಾರಾಯಣ ಮತ್ತು ಸುಕುಮಾರರ ನಡುವೆ ನಡೆದ ಜಗಳದಲ್ಲಿ ಸೇತುವೆಯ ಮೇಲಿಂದ ಕಾಲು ಜಾರಿ ಬಿದ್ದು ಸಾಯುವ ನಾರಾಯಣನದ್ದು ಆಕಸ್ಮಿಕ ಸಾವೋ ಅಥವಾ ಪಟೇಲ ಅವನನ್ನು ತಳ್ಳಿ ಕೊಂದದ್ದೋ ಎಂಬುದನ್ನು ಓದುಗರ ಊಹೆಗೆ ಬಿಡುವ ಲೇಖಕನ ಜಾಣ್ಮೆ ಕಥೆಯ ಕೊನೆಯನ್ನು ಅರ್ಥಪೂರ್ಣಗೊಳಿಸಿದೆ.
‘ಪ್ರಕ್ಷುಬ್ಧ’ ಕಥೆಯ ವಾರಿಜ, ‘ವಾಸನೆ’ ಕಥೆಯ ಗುಲಾಬಿ ಇಬ್ಬರೂ ಅನಿವಾರ್ಯ ಸಂದರ್ಭಗಳಲ್ಲಿ ಗಂಡನನ್ನು ಬಿಟ್ಟು ಪರಪುರುಷರಲ್ಲಿ ಸುಖವನ್ನರಸಿಕೊಂಡು ಹೋದವರು. ಈ ಕಥೆಗಳಲ್ಲಿ ಬರುವ ಗಂಡಂದಿರು ದುರ್ಬಲರೂ, ಹೆಂಡತಿಯರನ್ನು ತೃಪ್ತಿಪಡಿಸಲು ಅಸಮರ್ಥರಾದವರೂ ಆಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಗುಲಾಬಿಯ ಗಂಡ ಅಂಗಾರ ಹಾಗೂ ಕರುಳಿನ ಕ್ಯಾನ್ಸರಿನಿಂದ ಜೀವದ ಮೇಲೆ ಆಸೆ ತೊರೆದ ವಾರಿಜಳ ಗಂಡ ದಿವಾಕರನ ದುರಂತ ಅಂತ್ಯ, ಅನೈತಿಕ ಸಂಬಂಧಗಳು ಉಂಟು ಮಾಡುವ ದುಷ್ಪರಿಣಾಮಕ್ಕೆ ಸಾಕ್ಷಿಯಾಗಿವೆ. ‘ಪರಿಣಾಮ’ ಇವೆರಡಕ್ಕಿಂತ ಹೆಚ್ಚು ಗಟ್ಟಿಯಾದ ಕಥೆ. ದಿನೇಶ ಮತ್ತು ಪ್ರಿಯಾರ ನಡುವಿನ ಅಕ್ರಮ ಸಂಬಂಧದ ಪ್ರಸ್ತಾಪದೊಂದಿಗೆ ಕಥೆ ಆರಂಭವಾದರೂ ಸಹ ಅದು ದೈಹಿಕ ಕಾಮನೆಯನ್ನು ತೀರಿಸಿಕೊಳ್ಳುವ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರಿಬ್ಬರ ನಡುವೆ ನಿಜವಾದ ಪ್ರೀತಿಯಿದೆ. ಹಲವು ಕಠಿಣ ಸನ್ನಿವೇಶಗಳನ್ನೆದುರಿಸಿ ಕೊನೆಗೂ ಪ್ರಿಯಾ ಮತ್ತು ದಿನೇಶ ಒಂದಾಗುವುದು ಕಥೆಯನ್ನು ಸುಖಾಂತಗೊಳಿಸಿದೆ.
‘ಭಂಗ’, ‘ನೇಪಥ್ಯ’ ಮತ್ತು ‘ಅನಾವರಣ’ ಕಥೆಗಳು ಪತ್ತೇದಾರಿ ಕಥೆಗಳಿಂತಿದ್ದು, ಸಂಕಲನದ ಉಳಿದ ಕಥೆಗಳಿಗಿಂತ ಭಿನ್ನವಾಗಿವೆ. ಇಲ್ಲೂ ಸಹ ಹೆಣ್ಣು, ಹಣ, ಆಸ್ತಿಯೇ ಮುಖ್ಯವಾಗಿವೆ. ಅವು ಉಂಟುಮಾಡುವ ಅನರ್ಥಗಳು ಅಷ್ಟಿಷ್ಟಲ್ಲ. ಅವು ಮನುಷ್ಯ, ಮನುಷ್ಯನನ್ನೇ ಬೇಟೆಯಾಡುವಂತೆ ಮಾಡಿವೆ. ಈ ಕಥೆಗಳಲ್ಲಿ ಶ್ರೀಮಂತಿಕೆಯ ಕುರಿತು ಮನುಷ್ಯನಿಗಿರುವ ಸ್ವಾರ್ಥ, ಹೆಣ್ಣಿನೊಂದಿಗಿನ ಹಾದರದ ಸಂಬಂಧ ಮತ್ತು ತನ್ನ ದಾರಿಗೆ ಅಡ್ಡ ಬಂದವರ ಕೊಲೆ ಮಾಡುವ ಕ್ರೌರ್ಯ ಸೇರಿದಂತೆ ಎಲ್ಲ ಮಸಾಲಾ ಅಂಶಗಳಿದ್ದು, ಜನಪ್ರಿಯ ಪತ್ತೇದಾರಿ ಕಥೆಗಳಂತೆ ಉಸಿರು ಬಿಗಿಹಿಡಿದು ಓದಿಸಿಕೊಂಡು ಹೋಗುತ್ತವೆ.
ಮುಕುಂದ ಮೇಷ್ಟ್ರು ಮತ್ತು ರತ್ನಳ ನಡುವಿನ ಪ್ರಬುದ್ಧ ಪ್ರೇಮಕಥೆಯಾದ ‘ಮೂಕಮನ’ ಹಾಗೂ ಭಾಸ್ಕರ ಎಂಬ ವಿಧುರ ಮತ್ತು ಜಾನು ಎಂಬ ವಿಧವೆಯ ನಡುವಿನ ಪ್ರೇಮಕಥೆಯಾದ ‘ಒಳತೋಟಿ’ ಎರಡೂ ಸರಳ ಕಥೆಗಳು. ಎಂಬತ್ತರ ದಶಕದ ಮಲಯಾಳಂ ಚಿತ್ರಗಳಂತೆ ರೋಮ್ಯಾಂಟಿಕ್ಕಾಗಿರುವ ಆ ಕತೆಗಳಲ್ಲಿ ಅಂಥ ಆಳವೇನೂ ಇಲ್ಲ. ಪ್ರೀತಿಯ ಹೆಸರಿನಲ್ಲಿ ದುಡುಕಿ, ಲಂಪಟನೊಬ್ಬನನ್ನು ಮದುವೆಯಾಗಿ, ಬಾಳನ್ನು ಹಾಳುಮಾಡಿಕೊಂಡ ರಾಜೀವಿ ಎಂಬ ಯುವತಿಯ ವ್ಯಥೆಯ ಕಥೆ ‘ಪ್ರಾಪ್ತಿ’. ಸಂಜೀವಣ್ಣನಂಥ ಪರೋಪಕಾರಿಯ ಸಹಾಯ ದೊರೆಯದಿದ್ದರೆ ಅವಳು ಬೀದಿಪಾಲಾಗುತ್ತಿದ್ದಳು. ರಾಜೀವಿಯಂಥ ನತದೃಷ್ಟ ಯುವತಿಯರು ನಮ್ಮ ಸುತ್ತಮುತ್ತಲೂ ಕಂಡುಬರುತ್ತಾರೆ.
ಕೋಮುಗಲಭೆಯ ಹಿನ್ನಲೆಯುಳ್ಳ ‘ಕಿಚ್ಚು’ ಬಹು ಹಿಂದಿನಿಂದಲೂ ಬೂದಿಮುಚ್ಚಿದ ಕೆಂಡದಂತಿರುವ ಹಿಂದೂ-ಮುಸ್ಲಿಂರ ನಡುವಿನ ದ್ವೇಷವನ್ನು ಸಂಯಮದಿಂದ ನಿರೂಪಿಸಿದೆ. ‘ಕಾಸಗಲದಬೊಟ್ಟು’ ನಾಸ್ಟಾಲ್ಜಿಕ್ಭಾವ ಉಂಟು ಮಾಡುವ ಕಥೆಯಾಗಿದ್ದು, ತನ್ನ ಜೀವನವನ್ನು ರೂಪಿಸಿದ ಸರಳಾ ಟೀಚರ್ ಕುರಿತ ನೆನಪುಗಳನ್ನು ಮನಮುಟ್ಟುವಂತೆ ನಿರೂಪಿಸುತ್ತದೆ. ವಯಸ್ಸು ಮೂವತ್ತು ದಾಟಿ, ಬದುಕಿನಲ್ಲಿ ಒಳ್ಳೆಯ ನೆಲೆ ಕಂಡರೂ ಕಾರಣಾಂತರಗಳಿಂದ ಮದುವೆಯಾಗದ ಯುವಕನೊಬ್ಬನ ಮನಸ್ಸಿನ ಒಳತೋಟಿಯನ್ನು ಬಿಂಬಿಸುವ ‘ಅಂತರ’, ‘ಸಂಧಿ’ ಇವತ್ತಿನ ಧಾವಂತದ ಬದುಕಿನಲ್ಲಿ ಸೂಕ್ತ ಕನ್ಯೆ ಸಿಗದೆ, ಒದ್ದಾಡುವ ವಿದ್ಯಾವಂತ, ಉದ್ಯೋಗಸ್ಥ ಯುವಕರ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತವೆ.
ಈ ಸಂಕಲನಕ್ಕೆ ಶೀರ್ಷಿಕೆ ಕೊಟ್ಟಿರುವ ‘ಕಾಡುಸಂಪಿಗೆ’ ಈ ಕಥೆಗಳ ಪೈಕಿ ಉತ್ತಮವಾಗಿದೆ. ಸೂರ್ಯಕಾಂತ ಮೇಷ್ಟ್ರು, ಮನೋರಮಾ, ವಿರಾಜ, ವೀಣಾ ಮುಂತಾದ ಪಾತ್ರಗಳ ಮೂಲಕ ಸಾಹಿತ್ಯ ಹಬ್ಬದ ಹಿನ್ನಲೆಯಲ್ಲಿ ರೂಪುಗೊಂಡಿರುವ ಕಥೆ ಸೂರ್ಯಕಾಂತ ಮತ್ತು ಮನೋರಮೆಯರ ಪವಿತ್ರ ಪ್ರೇಮವನ್ನು ಅಚ್ಚುಕಟ್ಟಾಗಿ ಮತ್ತು ಸಂಯಮದಿಂದ ಚಿತ್ರಿಸಿದೆ. ಮೂವತ್ತು ಕಳೆದರೂ ಸೂಕ್ತ ಕನ್ಯೆ ಸಿಗದೆ ಅವಿವಾಹಿತನಾಗಿರುವ ಸೂರ್ಯಕಾಂತ ಮತ್ತು ಹುಟ್ಟಾ ಪಾರ್ಕಿನ್ಸನ್ರೋಗಿಯಾದ ಮನೋರಮಾ ಕಾಸರಗೋಡಿನಲ್ಲಿ ನಡೆಯುವ ಸಾಹಿತ್ಯ ಹಬ್ಬದಲ್ಲಿ ಭೇಟಿಯಾಗುವುದರೊಂದಿಗೆ ಆರಂಭವಾಗುವ ಕಥೆ ಸೂರ್ಯಕಾಂತನ ಮೂಲಕ ನಿರೂಪಿತವಾಗಿದೆ. ಆದರ್ಶವಾದಿ ಸಾಹಿತಿಯಾದ ಸೂರ್ಯಕಾಂತನಿಗೆ ಹಿಂದೊಮ್ಮೆ ಆಕರ್ಷಣೆ ಉಂಟು ಮಾಡಿದ ಪಿ.ಹೆಚ್.ಡಿ. ವಿದ್ಯಾರ್ಥಿನಿ ವೀಣಾ ಮತ್ತು ಅವಳ ತಂದೆ ಕೇವಲ ಐಹಿಕ ಸುಖಭೋಗ ಮತ್ತು ಐಷಾರಾಮದ ಬದುಕಿಗೆ ಬೆಲೆ ಕೊಟ್ಟು ಅವನನ್ನು ಹಳ್ಳಿಮೇಷ್ಟ್ರು ಎಂದು ಮದುವೆಯ ಪ್ರಸ್ತಾಪ ತಿರಸ್ಕರಿಸಿದವರು. ಅಂಥ ಸಂದರ್ಭದಲ್ಲಿ ಓದುಗಳಾಗಿ ಪರಿಚಿತಳಾದ ಮನೋರಮೆಯಲ್ಲಿ ಅವನಿಗೆ ಪ್ರೇಮವುಂಟಾಗುತ್ತದೆ. ಇಷ್ಟೇ ಆಗಿದ್ದರೆ ಅದೊಂದು ಹತ್ತರೊಡನೆ ಹನ್ನೊಂದು ಎಂಬಂಥ ಜನಪ್ರಿಯ ಶೈಲಿಯ ಪ್ರೇಮಕಥೆಯಾಗುತ್ತಿತ್ತು.
ಮನೋರಮೆ ಮತ್ತು ಸೂರ್ಯಕಾಂತ – ಇಬ್ಬರದೂ ಸಾಮಾನ್ಯವಾಗಿ ಯುವಕ-ಯುವತಿಯರಲ್ಲಿ ವಯೋಸಹಜವಾಗಿ ಉಂಟಾಗಬಹುದಾದ ದೈಹಿಕ ಆಕರ್ಷಣೆಯ ಮಟ್ಟಕ್ಕೆ ಸೀಮಿತವಾದ ಬಯಕೆಯಲ್ಲ. ಅದು ಎರಡು ಮನಸ್ಸುಗಳು ಒಲಿದು ಒಂದಾದ ಪ್ರಬುದ್ಧಪ್ರೇಮ. ಮನೋರಮೆ ಹುಟ್ಟಾಪಾರ್ಕಿನ್ಸನ್ರೋಗಿ ಎಂದು ತಿಳಿದೂ ಸಹ ಅವಳನ್ನು ಮದುವೆಯಾಗ ಬಯಸುವ ಸೂರ್ಯಕಾಂತ ಮತ್ತು ತನ್ನ ಅನಾರೋಗ್ಯದ ಕಾರಣದಿಂದಾಗಿ ಮದುವೆಯನ್ನು ನಿರಾಕರಿಸುವ ಮನೋರಮೆಯ ಪ್ರಬುದ್ಧತೆ ಗಮನಾರ್ಹವಾಗಿದೆ. ಈ ಮದುವೆ ಅಸಾಧ್ಯವೆಂದು ತಿಳಿದು ಅಂತರ್ಮುಖಿಯಾದ ನಾಯಕ ಒಳಗೊಳಗೇ ನೋವುಣ್ಣುತ್ತಾನೆ. ಪರಿಸ್ಥಿತಿಯ ಒತ್ತಡಕ್ಕೆ ಸೋತ ಮನೋರಮೆಯ ತಂದೆ ಆಕೆಯನ್ನು ಮೃತ್ಯುಂಜಯನಂಥ ವಿಚ್ಛೇದಿತ, ಲಂಪಟ ಮತ್ತು ಭ್ರಷ್ಟನಾದ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ಜೊತೆ ಮದುವೆ ಮಾಡಿಕೊಡಲು ಪ್ರಯತ್ನಿಸಿದಾಗ, ತಾನೇ ಅವಳನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವುದು ಕಥೆಯ ಅಂತ್ಯವನ್ನು ಅರ್ಥಪೂರ್ಣಗೊಳಿಸಿದೆ.
ಒಂದು ಕಾಲದಲ್ಲಿ ಸೂರ್ಯಕಾಂತ ಇಷ್ಟಪಟ್ಟ ವೀಣಾ ಪ್ರತಿಭಾನ್ವಿತಳಾದರೂ ಒಳ್ಳೆಯವಳಲ್ಲ. ಅವಳು ಸೂರ್ಯಕಾಂತ-ಮನೋರಮೆ ಇಬ್ಬರ ಪಾಲಿಗೂ ಖಳನಾಯಕಿಯಿದ್ದಂತೆ. ವಿಶ್ವವಿದ್ಯಾಲಯದಲ್ಲಿ ಹಲವು ರಂಗೇಲಿ ಆಟವಾಡಿದ ಅವಳಿಗೆ ಸೂರ್ಯಕಾಂತ- ಮನೋರಮೆಯ ನಿಷ್ಕಲ್ಮಶ ಪ್ರೀತಿ ಅರ್ಥವಾಗುವುದಿಲ್ಲ. ಅತಿಥಿ ಪಾತ್ರವಾಗಿ ಬರುವ ಸ್ನೇಹಿತ ವಿರಾಜ, ಸೂರ್ಯಕಾಂತನ ನಿಜವಾದ ಹಿತೈಷಿ. ಸಹೃದಯನಾದ ಅವನು ಸೂರ್ಯಕಾಂತ-ಮನೋರಮೆಯರ ಪ್ರೇಮಕ್ಕೆ ಬೆಂಬಲವಾಗಿ ನಿಲ್ಲುತ್ತಾನೆ.
ಸಾಹಿತ್ಯದ ಹಬ್ಬದ ವಿವರಗಳು ಕಥೆಗೆ ಪೂರಕವಾಗಿ ಬಂದಿವೆ. ವಿರಾಜ-ನವ್ಯ ಮತ್ತು ವಿರಾಜ-ವೀಣಾರ ಕುರಿತ ಸಂಗತಿಯ ಪ್ರಸ್ತಾಪ ಔಚಿತ್ಯವರಿತು ಬಂದಿದ್ದು ಕಥೆಗೆ ಪೋಷಕವಾಗಿವೆ. ಕಥೆ ಮೊದಲಿನಿಂದ ಕೊನೆಯವರೆಗೆ ಒಂದೇ ಹದವನ್ನು ಕಾಯ್ದುಕೊಂಡಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬದುಕಿನ ಅರ್ಥವೇನೆಂದು ಅರಿತು, ಆಚರಿಸುವ ಸೂರ್ಯಕಾಂತ-ಮನೋರಮೆಯರದು ಕೇವಲ ರೋಮ್ಯಾಂಟಿಕ್ ಆದರ್ಶವಾಗದೆ, ವಾಸ್ತವ ಪ್ರಜ್ಞೆಯಿಂದ ಕೂಡಿರುವುದು ಉಲ್ಲೇಖನೀಯ. ಸೂರ್ಯಕಾಂತ-ಮನೋರಮೆಯರು ಯಾರ ಕಣ್ಣಿಗೂ ಬೀಳದೆ, ತಮ್ಮಷ್ಟಕ್ಕೆ ತಾವೇ ಅರಳಿ, ಪರಿಮಳ ಸೂಸುವ ಕಾಡುಸಂಪಿಗೆಯಂತಿರುವುದು ಈ ಕಥೆಯ ಶೀರ್ಷಿಕೆಯನ್ನು ಸಾರ್ಥಕಗೊಳಿಸಿದೆ.
ಸುಭಾಷ್ ಪಟ್ಟಾಜೆಯವರ ಕತೆಗಳಲ್ಲಿ ನವ್ಯ ಸಂವೇದನೆಯು ಹೆಚ್ಚಾಗಿ ಕಂಡುಬರುತ್ತದೆ. ತೀವ್ರ ವೈಯಕ್ತಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಅರಳಿದ ಬಹುತೇಕ ಕತೆಗಳಲ್ಲಿ ಗಂಡು ಹೆಣ್ಣಿನ ಸಂಬಂಧಗಳ ವಿಶ್ಲೇಷಣೆಯಿದೆ. ಹೆಚ್ಚಿನ ಕತೆಗಳು ಪ್ರೇಮ ಮತ್ತು ಕಾಮವನ್ನು ವಸ್ತುವನ್ನಾಗಿಟ್ಟುಕೊಂಡಿದ್ದರೂ ಅವುಗಳ ನಿರ್ವಹಣೆಯಲ್ಲಿ ಏಕತಾನತೆಯಿಲ್ಲ. ಒಂದೇ ವಸ್ತುವಿನ ಬಗ್ಗೆ ಮತ್ತೆ ಮತ್ತೆ ಬರೆದರೂ ವಿವರಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಜಾಣ್ಮೆ ಅವರಲ್ಲಿದೆ. ಕೆಲವೇ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ಕಥೆ ಹೇಳುವಲ್ಲಿ ಅವರು ಸಫಲರಾಗಿದ್ದಾರೆ. ಕಾಮದಂಥ ಸೂಕ್ಷ್ಮ ವಿಷಯದ ಕುರಿತು ಬರೆಯುವಾಗ ತುಂಬ ಸಂಯಮವನ್ನು ತೋರುತ್ತಾರೆ. ವಿವರಗಳು ವಾಚ್ಯವಾಗದೆ ಸೂಚ್ಯವಾಗಿ ಬರೆದಿರುವುದು ಕಥೆಯ ಬಂಧವನ್ನು ಗಟ್ಟಿಗೊಳಿಸಿದೆ. ಕಥೆಯನ್ನು ಅನಿರೀಕ್ಷಿತವಾಗಿ ಮುಗಿಸಿ, ಅಂತ್ಯವನ್ನು ಓದುಗರ ಊಹೆಗೆ ಬಿಡುವ ಅವರ ಕಥನತಂತ್ರ ಫಲಿಸಿದೆ. ಕತೆಗಳ ಗುಣಮಟ್ಟ ಚೆನ್ನಾಗಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುವ ಶೈಲಿಯಿಂದಾಗಿ ಪ್ರಬುದ್ಧ ಮತ್ತು ಸಾಮಾನ್ಯ–ಎರಡೂ ಬಗೆಯ ಓದುಗರಿಗೆ ಪ್ರಿಯವಾಗಬಲ್ಲವು. ‘ಕಾಡುಸಂಪಿಗೆ’ ಕಥಾ ಸಂಕಲನದ ಮೂಲಕ ಸುಭಾಷ್ ಪಟ್ಟಾಜೆಯವರು ಕನ್ನಡದ ಭರವಸೆಯ ಕಥೆಗಾರರಲ್ಲೊಬ್ಬರಾಗಿ ಗುರುತಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ವಿಮರ್ಶಕರು : ವಿಕಾಸ ಹೊಸಮನಿ
