Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಶ್ವ ದಾಖಲೆಗಾಗಿ ‘ಭರತನಾಟ್ಯ’ ಪ್ರದರ್ಶನ | ಜುಲೈ 21ರಿಂದ 28

    July 19, 2025

    ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯಗೆ ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ

    July 19, 2025

    ಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಪಾಕ್ಷಿಕ ತಾಳಮದ್ದಲೆ ಸರಣಿ | ಜುಲೈ 24

    July 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನ
    Article

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನ

    July 19, 2025No Comments10 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಕಜ್ಜಾಯ’ವು ಸುನಂದಾ ಬೆಳಗಾಂಕರರ ಮೊದಲ ಸೃಜನಶೀಲ ಕೃತಿಯಾಗಿದೆ. ಎಪ್ಪತ್ತರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಸತತವಾಗಿ ಲಲಿತ ಪ್ರಬಂಧಗಳನ್ನು ಬರೆಯುವ ಮೂಲಕ ಸಾಹಿತ್ಯದ ಪಯಣವನ್ನು ಆರಂಭಿಸಿದ ಅವರಿಗೆ ಓದುಗರ ಅಪಾರ ಮೆಚ್ಚುಗೆಯು ದೊರೆಯಿತು. ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನವು ಈಗಾಗಲೇ ಐದು ಮುದ್ರಣಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

    ಕಜ್ಜಾಯದಲ್ಲಿ ಹತ್ತು ಲಲಿತ ಪ್ರಬಂಧಗಳಿವೆ. ಮೇಲುನೋಟಕ್ಕೆ ಲಲಿತಪ್ರಬಂಧ ಎನಿಸಿಕೊಳ್ಳುವ ‘ಮಣ್ಣು’ ಎಂಬ ರಚನೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಬಳಸಲಾಗಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಪಾತ್ರವೊಂದರ ಮೂಲಕ ಕತೆಯನ್ನು ಹೇಳುತ್ತಾರೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ತಿಳಿ ಹಾಸ್ಯದ ಧಾಟಿಯಲ್ಲಿ ಆರಂಭವಾಗುವ ಪ್ರಬಂಧದಲ್ಲಿ ಬರುವ ಮಣ್ಣಿನ ಪ್ರಸ್ತಾಪದಲ್ಲಿ ಮುಂಬರುವ ಸಾವಿನ ಪೀಠಿಕೆಯಿದೆ. ಮಣ್ಣನ್ನು ನೋಡುವಾಗ ಲೇಖಕಿಗೆ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದ ದಾನಪ್ಪ-ಹಾಲವ್ವ ದಂಪತಿಯರ ನೆನಪು, ಹೆತ್ತವರನ್ನು ಬಿಟ್ಟು ಮುಂಬಯಿಗೆ ಉದ್ಯೋಗಕ್ಕೆ ಹೋಗಬಯಸುವ ಮಗ ಶ್ರೀಶೈಲ, ಇದೇ ಕೊರಗನ್ನು ಅನುಭವಿಸುತ್ತಾ ಮಣ್ಣಿನಲ್ಲಿ ಮಣ್ಣಾಗುವ ತಂದೆಯ ಪರಿಸ್ಥಿತಿಯನ್ನು ಲೇಖಕಿಯು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

    ಯಾವುದೋ ಒಂದು ವಸ್ತುವನ್ನು ನೋಡಿ ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ಮುಂದಿಟ್ಟುಕೊಂಡು ಕತೆಯನ್ನು ಹೇಳುವ ತಂತ್ರ ನವೋದಯದ ಅನೇಕ ಕತೆಗಳಲ್ಲಿ ಕಂಡು ಬರುತ್ತದೆ. ಈ ತಂತ್ರವನ್ನು ಲಲಿತಪ್ರಬಂಧದಲ್ಲಿಯೂ ಬಳಸುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ಇಲ್ಲಿಯ ವಿಶೇಷವೆಂದರೆ ಕತೆಯನ್ನು ತಾನೇ ಹೇಳುತ್ತಿರುವೆನೆಂಬ ಸೂಚನೆಯನ್ನು ಕೊಟ್ಟು ಲೇಖಕಿಯು ತನ್ನ ಭಾಷೆಯಲ್ಲೇ ಕತೆಯನ್ನು ಹೇಳುವುದಿಲ್ಲ. ದಾನಪ್ಪ, ಹಾಲವ್ವ ಮತ್ತು ಶ್ರೀಶೈಲನಿಗೆ ಅವರದ್ದೇ ಆದ ವ್ಯಕ್ತಿತ್ವ, ಭಾಷೆ, ಶೈಲಿಗಳನ್ನು ಕೊಟ್ಟು ಅವುಗಳ ಮೂಲಕ ಕತೆಯನ್ನು ಹೇಳುತ್ತಾರೆ. ಅಕ್ಷರಾಭ್ಯಾಸವನ್ನು ಪಡೆಯದೆ ಸಾಂಪ್ರದಾಯಿಕ ರೀತಿಯಲ್ಲಿ ಮಣ್ಣಿನ ಮೂರ್ತಿಯನ್ನು ಮಾಡಿಕೊಂಡು ಬದುಕಿದ ದಾನಪ್ಪನ ತಂದೆ, ಅಪ್ಪನಂತೆ ಮೂರ್ತಿಯ ಕಸುಬನ್ನು ಒಪ್ಪಿಕೊಂಡು ಉದ್ಯೋಗಸ್ಥ ಬದುಕನ್ನು ನೆಚ್ಚಿಕೊಂಡು ಬಡಮೇಷ್ಟ್ರಾಗಿ ಬಾಳಿದ ದಾನಪ್ಪ ಮತ್ತು ಅವನ ಹೆಂಡತಿ ಹಾಲವ್ವ, ಹುಟ್ಟೂರು ಮತ್ತು ಕುಲಕಸುಬನ್ನು ತುಚ್ಛವಾಗಿ ಕಂಡು ಮುಂಬಯಿಯ ಕಡೆ ಆಕರ್ಷಿತನಾಗುವ ಶ್ರೀಶೈಲ ಹೀಗೆ ಮೂರು ತಲೆಮಾರಿನ ಪಾತ್ರಗಳು ಇಲ್ಲಿವೆ. ‘ಗಾಳಿ, ಬೆಂಕಿ, ನೀರು, ಉಗಿ ಕೂಡಿ ಆಗಿರುವ ಮೋಡದ್ಹಾಂಗ ಮಣ್ಣು, ನೀರು, ಭಾವ, ವಿಚಾರ ಮಿಶ್ರಣ ಮುರ್ತಿ ಮಾಡುವ ಕಲಾ. ಅದರ ಬೆಳವಣಿಗೆಗೆ ಹೊಗಳಿಕೆ ಶತ್ರು. ಹೊಗಳಿಕೆಗೆ ತಲೆ ಕೊಡಬಾರದು. ಹಾವ ಕಂಡ್ಹಂಗ ಹೆದರಬೇಕು” (ಪುಟ 24) ಎಂದ ತಂದೆಯ ಮಾತನ್ನು ಅನುಸರಿಸಿ ಮೂರ್ತಿಯನ್ನು ಮಾಡತೊಡಗಿದ ದಾನಪ್ಪನ ಮೇಲೆ ಕಾಲ ಮತ್ತು ಶಿಕ್ಷಣವು ಪ್ರಭಾವವನ್ನು ಬೀರಿದ್ದರ ಪರಿಣಾಮವಾಗಿ ಅವರು ಸಾಂಪ್ರದಾಯಿಕ ಮೂರ್ತಿಗಳ ಬದಲು, ಸಮಕಾಲೀನ ಸ್ಥಿತಿಗತಿಗಳಿಗೆ ಅನುಗುಣವಾಗಿ ಹೊಸ ಭಾವನೆಗಳನ್ನು ತುಂಬುತ್ತಾರೆ. ಹಸಿವಿನ ಪ್ರತೀಕವಾಗಿ ಮೂಡಿಬಂದ ತೆಳ್ಳಗಿನ ಹೊಟ್ಟೆಯ ಗಣಪ, ಗೋಡ್ಸೆಯನ್ನು ತುಳಿದು ನರ್ತಿಸುವ ಗಾಂಧಿ ಟೊಪ್ಪಿಗೆಯ ಗಣಪ ಇದಕ್ಕೆ ಉದಾಹರಣೆಗಳಾಗಿವೆ. ಬಡತನವು ಕಲೆಯನ್ನು ಬೆಳೆಸುತ್ತದೆ. ಕಲೆ ಬೆಳೆದು ಕಲಾವಿದನೂ ಬೆಳೆಯುತ್ತಾನೆ. ಹರಿದ ಕುಪ್ಪಸದೊಳಗಿನ ಹೆಂಡತಿಯ ತೋಳು ಬೆಳದಿಂಗಳಿನಲ್ಲಿ ಪ್ರತಿಫಲಿಸಿದಾಗ ಆ ಕರುಳು ಇರಿಯುವ ನೋವಿನಲ್ಲಿಯೂ ಮೈಗೆ ಬೂದಿಯನ್ನು ಬಳಿದು ಕೊರಳಿಗೆ ಹಾವು ಸುತ್ತಿದ ಭಿಕಾರಿ ಶಿವನಾಗಿ ತನ್ನನ್ನೂ, ಹಿಮಗಿರಿ ಕನ್ಯೆ ಪಾರ್ವತಿಯಾಗಿ ತನ್ನ ಮಡದಿ ಹಾಲವ್ವನನ್ನೂ ಕಾಣುತ್ತಾನೆ. ‘ಮಣ್ಣ ಮೂರ್ತಿ ಮಾಡಿ ಮಣ್ಣು ಮುಕ್ಕ ಬಯಸುವುದಿಲ್ಲ’ ಎನ್ನುವ ಶ್ರೀಶೈಲನ ಮಾತಿನಲ್ಲಿ ಕ್ರೂರ ವ್ಯಂಗ್ಯದ ಎಳೆಯು ನೇಯ್ದುಕೊಳ್ಳುತ್ತದೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಿಧಿಯ ಕೈವಾಡದ ಅರಿವು, ವಾಸ್ತವ ಪ್ರಜ್ಞೆ, ಕರುಳಿನ ನೋವು, ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮವು ಅಚ್ಚರಿಯನ್ನು ಉಂಟು ಮಾಡುತ್ತದೆ. ಹಾಲವ್ವ ದುಃಖವನ್ನು ನುಂಗಿಕೊಂಡು ಕುಳಿತುಕೊಳ್ಳುವವಳಲ್ಲ. “ಶ್ರವಣ ಕುಮಾರ ಮುಪ್ಪಿನ ತಂದೆತಾಯಿಯರನ್ನು ಬಿಟ್ಟು ಸತ್ತ. ನಮ್ಮಗ ಇದ್ದೂ ಇಲ್ಲ” (ಪುಟ 32) ಎನ್ನುತ್ತಾ ಅಳುತ್ತಾಳೆ. “ಧಾರವಾಡ ಮಣ್ಣು! ಏನೈತಿ ಈ ಮಣ್ಣಾಗ? ‘ಈ ಮಣ್ಣು ಮಣ್ಣು’ ಅಂದನ್ರಿ ನನ್ನ ಮಗ. ಮಣ್ಣು ಮಣ್ಣಾಗಿರಬೇಕ್ರಿ. ಬಂಗಾರ ಆದ್ರ ಏನು ಮಜ ಅದರಾಗ? ಅವಗ ಬಂದ ಕಲಾ ಈ ಮಣ್ಣಲ್ಲಿ ಹುಟ್ಟಿದ್ದರಿ. ನಮ್ಮೂರಾಗ ಕಲಾ ಕಲಾರಿ. ಮುಂಬಯಿದಾಗ ಅದು ಧಂಧೇರಿ. ಲಕ್ಷ್ಮಿ ಬೆನ್ನ ಹತ್ತಿದರ ಸರಸೋತಿ ಸಿಗಾಕಿಲ್ಲರಿ. ಎಲ್ಲಿ ಹೋದಾನು ಬಂದೇ ಬರ್ತಾ ನು” (ಪುಟ 31) ಎಂಬ ಮಾತಿನ ಹಿಂದೆ ಕಾಣುವ ಸಂಯಮ, ತಿಳುವಳಿಕೆಗಳು ಮಹತ್ವದ್ದಾಗಿವೆ. ಅನುಭವಗಳ ಚೌಕಟ್ಟಿನಲ್ಲಿ ಮೌಲ್ಯಗಳ ಅರ್ಥವನ್ನು ವಿಸ್ತರಿಸುವ ಪ್ರಯತ್ನವು ಮುಖ್ಯವಾಗುತ್ತದೆ. ಇಲ್ಲಿ ಮಣ್ಣು ಒಂದು ಸಂಸ್ಕೃತಿಯ, ವ್ಯಕ್ತಿತ್ವದ ಪರಿಪಾಕದ, ಜೀವನ ವಿಧಾನದ ಮತ್ತು ಮರಣದ ಪ್ರತೀಕವಾಗುತ್ತದೆ.

    ‘ಬೆಣ್ಣೆಯ ಗಡಿಗೆ’ ಎಂಬ ಪ್ರಬಂಧವು ನವ್ಯ ಸಂಕೇತಗಳನ್ನು ಒಳಗೊಂಡ ರಚನೆಯಾಗಿದೆ. ಅಂತರಂಗದಲ್ಲಿ ತಾಯ್ತನ, ಪ್ರೀತಿ ವಾತ್ಸಲ್ಯಗಳನ್ನು ತುಂಬಿಕೊಂಡ ಭರಮಿಯು ಬೆಣ್ಣೆಯ ಗಡಿಗೆಗೂ, ಕತೆಯನ್ನು ಹೇಳುವ ಲೇಖಕಿಯು ಓದುವ ಕೀಟ್ಸ್ ನ ‘ಓಡ್ ಆನ್ ಎ ಗ್ರೇಶ್ಯನ್ ಅರ್ನ್’ ಎಂಬ ಕವಿತೆಯ ಚಿತಾಭಸ್ಮದ ಕುಂಭವು ಒಂದಕ್ಕೊಂದು ಪೂರಕವಾಗಿ ಕತೆಯಲ್ಲಿ ಬೆಸೆದುಕೊಳ್ಳುತ್ತವೆ. ಹೊರಗೆ ಬದುಕು. ಒಳಗೆ ಸಾವು. ಬದುಕನ್ನು ಅನುಭವಿಸಬೇಕು. ಮರಣದ ಭಯ ಅಥವಾ ಗತಿಸಿದ ಪ್ರೀತಿಪಾತ್ರರ ನೆನಪಿನಿಂದ ಕೊರಗುವುದರಲ್ಲಿ ಅರ್ಥವಿಲ್ಲ. ಬೇಸಗೆಯು ಭೂಮಿಯನ್ನು ಸುಟ್ಟರೂ ಶ್ರಾವಣವು ಹಸಿರನ್ನು ಹೊದೆಸುತ್ತದೆ. ಸಾವು ಬದುಕುಗಳ ನಡುವಿನ ಸತ್ಯ ಮತ್ತು ಸೌಂದರ್ಯವನ್ನು ಅರಿತುಕೊಳ್ಳಬೇಕಿದೆ ಎಂಬ ತತ್ವದ ಹಿನ್ನೆಲೆಯಲ್ಲಿ ಭರಮಿಯ ಕತೆಯು ರೂಪುಗೊಳ್ಳುತ್ತದೆ. ನವಲೂರ ಗೌಡ ಮತ್ತು ಆತನ ಹೆಂಡತಿ ಗೌರಿಯ ನಡುವೆ ಶಾರೀರಿಕ ಸಾಮರಸ್ಯವು ಸಾಧ್ಯವಾಗುವುದಿಲ್ಲ. ಆದ್ದರಿಂದ ಆತನು ಭರಮಿಯನ್ನು ಇಟ್ಟುಕೊಳ್ಳುತ್ತಾನೆ. ಇದರಿಂದ ಸಿಟ್ಟುಗೊಂಡ ಗೌರಿಯು ಮಗನಾದ ಮಲ್ಲಿಕಾರ್ಜುನನೊಂದಿಗೆ ತನ್ನ ತವರು ಮನೆಗೆ ಹೋಗುತ್ತಾಳೆ. ಹಿಂತಿರುಗಿ ಬರುವಂತೆ ಅಂಗಾಲಾಚಿದ ಗೌಡನ ಬಳಿ ಆಕೆ ಪ್ರಶ್ನಿಸುತ್ತಾಳೆ. “ನನ್ನಂಥ ಹೆಂಡ್ತಿ ಇರಲಾಕ ನಿಮ್ಮ ಬುದ್ಧಿ ಹೋತ?”
    “ಗೌರಾ, ನೀ ಮನಸ್ಸಿಗೊಪ್ಪಿದ ಹೆಣ್ಣು. ಭರಮಿ ದೇಹಕ್ಕೊಪ್ಪಿದ ಹೆಣ್ಣು.”
    “ನಿಮಗ ಮನಸ್ಸಿಗೊಂದು ದೇಹಕ್ಕೊಂದು ಹೆಣ್ಣು ಬೇಕಾಗತೈತೇ? ಆಗಲಿ, ಶಿವ ನಿಮ್ಮ ಬಾಯಾಗ ನುಡಿಸ್ಯಾನ. ನಿಮಗ ಮನಸು ಕೊಟ್ನಿ. ಆತಲ್ಲ?” (ಪುಟ 60) ಎಂದು ಆತನೊಂದಿಗೆ ಮರಳಿದರೂ ಶಾರೀರಿಕ ಸಂಪರ್ಕವನ್ನು ಮಾಡುವುದಿಲ್ಲ. ಕಹಿ ಪ್ರಸಂಗಗಳಿಂದ ಘಾಸಿಗೊಳಗಾದರೂ ಕುಸಿಯುವುದಿಲ್ಲ, ಅಧೀರಳಾಗುವುದಿಲ್ಲ. ಇಲ್ಲಿ ಕಥನವು ಗೌಡ ಮತ್ತು ಭರಮಿಯರ ಕಣ್ಣುಗಳಿಂದ ಮಾತ್ರ ಬದುಕನ್ನು ನೋಡದೆ ಗೌರಿಯ ದೃಷ್ಟಿಕೋನದಿಂದಲೂ ಲೈಂಗಿಕ ಸಂಬಂಧಗಳನ್ನು ಪರಿಶೀಲಿಸುವ ದಿಟ್ಟತನವನ್ನು ತೋರುತ್ತದೆ. ಗೌಡರು ಮತ್ತು ಭರಮಿಯ ಸಂಬಂಧದಲ್ಲಿ ಹುಟ್ಟಿದ ಬಸವಣ್ಣಿಯು ಕಾಣೆಯಾದ ಎಮ್ಮೆಯನ್ನು ಹುಡುಕಲು ಹೋದಾಗ ಆತನು ಸಿಡಿಲು ಬಡಿದು ಸಾಯುವಲ್ಲಿ ಬೆಣ್ಣೆಯ ಗಡಿಗೆಯು ಚಿತಾಭಸ್ಮದ ಕುಂಭವಾಗಿ ಬದಲಾಗುವ ವಿರೋಧಾಭಾಸವನ್ನು ಕಾಣುತ್ತೇವೆ. ಹೊರಗೆ ಜೀವನ. ಒಳಗೆ ಮರಣದ ನೆರಳು ಬೆಳಕಿನಾಟವನ್ನು ವ್ಯಕ್ತಪಡಿಸಿದ ಬಗೆಯು ಮುಖ್ಯವಾಗುತ್ತದೆ.

    ‘ಹೆಣ್ಣು, ಭೂಮಿ’ ಎಂಬ ರಚನೆಯು ಇದರ ಇನ್ನೊಂದು ಮಗ್ಗುಲಿನಂತಿದೆ. ಭರಮಿಯು ನವಲೂರಿನ ಗೌಡನ ಸಂಗ ಮಾಡಿದಂತೆ ಚೆನ್ನವ್ವಳು ನಾಟಕದ ಮಲ್ಲೇಶಿಯ ಜೊತೆ ಸಂಬಂಧವನ್ನು ಇಟ್ಟುಕೊಂಡು ನಿಂಗಣ್ಣಿಯ ತಾಯಿಯಾಗುತ್ತಾಳೆ. ಶಾಲೆಯಲ್ಲಿ ಸೂಳೆಮಗ ಎಂದು ಕರೆಸಿಕೊಂಡು ಅವಮಾನಕ್ಕೊಳಗಾದ ನಿಂಗಣ್ಣಿಯು ಸಿಟ್ಟುಗೊಂಡು ತನ್ನ ತಂದೆಯ ಬಗ್ಗೆ ವಿಚಾರಿಸಿದಾಗ ತಾಯಿಯ ಹಾರಿಕೆಯ ಉತ್ತರದಿಂದ ಸಿಟ್ಟುಗೊಂಡ ಆತನು ಆಕೆಯ ಮೇಲೆ ಕೊಡಲಿಯನ್ನು ಎತ್ತುತ್ತಾನೆ. ಆದರೆ ತಾಯಿಯಾದವಳು ನೊಂದರೂ ಮನಸ್ಸಿನಲ್ಲಿ ಹಗೆಯನ್ನು ಇಟ್ಟುಕೊಳ್ಳದೆ ಲೇಖಕಿಯ ತಂದೆಯವರ ಕಡೆಯಿಂದ ಬುದ್ಧಿವಾದವನ್ನು ಹೇಳಿಸಿ ಅವನಿಗೆ ಕೆಲಸವನ್ನು ಕೊಡಿಸಿ ಸ್ವಾವಲಂಬಿಯಾಗುವಂತೆ ಮಾಡುತ್ತಾಳೆ. ಇಲ್ಲಿ ಆಕೆಯ ತಾಳ್ಮೆ ಮತ್ತು ತನ್ನ ಒಡಲಲ್ಲಿ ಬಿತ್ತಿದ ಬೀಜವನ್ನು ಬೆಳೆಸುವ ಭೂಮಿಯ ಸಂಕೇತವಾಗುತ್ತಾಳೆ. ಕೇವಲ ಒಂದು ಪಾತ್ರದ ದೃಷ್ಟಿಗೆ ಸೀಮಿತವಾಗದೆ ಸಂಗಣ್ಣಿಯ ವ್ಯಗ್ರತೆ, ಹೊರಗೆ ಬಲಿಷ್ಠನಾದರೂ ಒಳಗೆ ಅಸಹಾಯಕನಾಗಿರುವ ರುದ್ರಜ್ಜ, ತನ್ನಿಂದ ಬಸುರಾದ ಚೆನ್ನವ್ವನನ್ನು ಮದುವೆಯಾಗಬಯಸಿದಾಗ ಅದಕ್ಕೆ ತಡೆಯೊಡ್ಡಿದ ತಾಯಿಯ ಮೇಲೆ ಆಯುಧದಿಂದ ಹಲ್ಲೆ ಮಾಡಿ ಓಡಿಹೋದ ಮಲ್ಲೇಶಿ ಮುಂತಾದವರನ್ನು ಒಳಗೊಳ್ಳುವುದರಿಂದ ಪ್ರಬಂಧಕ್ಕೆ ಸರ್ವಸಾಕ್ಷಿತ್ವದ ನಿರೂಪಣೆಯು ಸಿದ್ಧಿಸಿದೆ.

    ತಾಯಿಯು ಮಮತೆಯ ಪ್ರತೀಕವಾಗಿದ್ದಾಳೆ. ತನ್ನ ಕರುಳಬಳ್ಳಿಗಾಗಿ ತುಡಿಯುವ ಆಕೆಯ ಹೃದಯವು ಮಗುವಿನ ಏಳಿಗೆಯನ್ನು ಕಂಡಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಅಂಥ ತಾಯಿಯ ಬದುಕಿನಲ್ಲಿಯೂ ದ್ವಂದ್ವವು ಎದುರಾಗಬಹುದು. ಬದುಕಿನ ದುರ್ಭರ ಗಳಿಗೆಯಲ್ಲಿ ಆಯ್ಕೆಯು ಕಷ್ಟವಾಗಬಹುದು. ಅನಿವಾರ್ಯವಾಗಿ ಯಾವುದೋ ಒಂದನ್ನು ಆಯ್ಕೆ ಮಾಡಿದ ಬಳಿಕ ಅದಕ್ಕಾಗಿ ಪರಿತಪಿಸಬೇಕಾಗಿ ಬರಬಹುದು. ಆದರೂ ಮಕ್ಕಳ ಬಗ್ಗೆ ಹೊಂದಿರುವ ಕಾತರವು ದೇಶಕಾಲ ಪರಿಮಿತವಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ. ಅದರ ಎಳೆಗಳನ್ನು ‘ಬೆಣ್ಣೆ ಗಡಿಗೆ’, ‘ಹೆಣ್ಣು, ಭೂಮಿ’ಯಲ್ಲಿ ಕಾಣುತ್ತೇವೆ.

    ಮುತ್ತೈದೆತನ ಮತ್ತು ತಾಯ್ತನದ ಪರಿಕಲ್ಪನೆಗಳ ವೈಭವೀಕರಣವು ವೈಧವ್ಯ ಮತ್ತು ಬಂಜೆತನಗಳನ್ನು ಕೀಳಾಗಿ ಕಾಣುವುದಕ್ಕೆ ಕಾರಣವಾಗಿದೆ. ಪತಿಯನ್ನು ಕಳೆದುಕೊಂಡ ಹೆಣ್ಣಿಗೆ ಬಾಳಿಗೆ ಅವಕಾಶ ಇಲ್ಲದಾಗುವ ಸ್ಥಿತಿ, ಹಿಂದೊಮ್ಮೆ ಆಕೆ ತಾಯಿಯಾಗಿ ತನ್ನ ಕರ್ತವ್ಯಗಳನ್ನು ತೀರಿಸಿದ ಬಳಿಕ, ಒಲಿದ ಜೀವದೊಂದಿಗೆ ಉಳಿದ ಜೀವನ ಯಾತ್ರೆಯನ್ನು ಮಾಡಿದಾಗ ಎದುರಾಗುವ ಕುಹಕ ವ್ಯಂಗ್ಯಗಳು, ತನ್ನ ಮಕ್ಕಳಿಂದ ಎದುರಾಗುವ ಅವಮಾನ ಸಂಕಟಗಳ ಚಿತ್ರಣವನ್ನಷ್ಟೇ ನೀಡಿ ವಿರಮಿಸದೆ ನೊಂದ ಜೀವದ ಜೊತೆಗೆ ನಿಲ್ಲುವ ಪಾತ್ರಗಳನ್ನು ಸೃಷ್ಟಿಸಿ ಕಳಕಳಿಯನ್ನು ಮೆರೆದಿದ್ದಾರೆ. ವ್ಯವಸ್ಥೆಯ ವಿರುದ್ಧ ಬೆಸೆದುಕೊಂಡಿರುವ ಸಾಂಪ್ರದಾಯಿಕ ಧಾರ್ಮಿಕ ಬಂಧನಗಳನ್ನು ವಿದ್ಯಾಭ್ಯಾಸವಿಲ್ಲದ ಮಂದಿಗಳು ಪ್ರತಿರೋಧಿಸುವ ಬಗೆಯನ್ನು ತೋರಿದ ಬಗೆಯು ಅನನ್ಯವಾಗಿದೆ. ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲದಿರುವ ಕಾಲದಲ್ಲಿ ಬಾಳಿದ ಹೆಣ್ಣುಮಕ್ಕಳ ನೋವಿಗೆ ದನಿಯಾದ ಬರಹಗಳು ಪತಿಪಾರಾಯಣತೆಯನ್ನು ಮರೆಯದೆ ಸವಾಲುಗಳನ್ನು ಎದುರಿಸುವ ಪಾತ್ರಗಳನ್ನು ಕಟ್ಟಿಕೊಟ್ಟ ರೀತಿಯು ಮನಮುಟ್ಟುವಂತಿದೆ.

    ಅಂಚೆಪೆಟ್ಟಿಗೆಯೊಳಗಿನ ಪತ್ರಗಳಲ್ಲಿ ಸುಖ-ದುಃಖ, ಸಂತಾಪ-ಸಮಾಧಾನ, ರಾಗ-ಲೋಭ, ಮದ-ಮತ್ಸರಗಳು ತುಂಬಿರುವುದರಿಂದ ಅಂಚೆಕಛೇರಿಯ ‘ಕೆಂಪುಡಬ್ಬಿ’ಯು ಇಡೀ ಸಂಸಾರದ ಸಂಕೇತವಾಗಿ ಮಹತ್ವವನ್ನು ಪಡೆಯುತ್ತದೆ. ಆದರೆ ಈ ಲಲಿತಪ್ರಬಂಧವು ಪತ್ರಲೇಖನದ ಸ್ವಾರಸ್ಯಗಳನ್ನು ಮಾತ್ರ ಹೇಳದೆ ಮಗಳನ್ನು ಕಳೆದುಕೊಂಡ ಅಂಚೆಯಣ್ಣ ಸಿದ್ಧಪ್ಪನ ದುಃಖಕ್ಕೆ ದನಿಯಾಗುತ್ತದೆ. ಆತನ ಮಗಳು ರಮೆಯು ಲೇಖಕಿಯ ಆತ್ಮೀಯ ಗೆಳತಿಯೂ ಆಗಿರುವುದು ನೋವನ್ನು ಹೆಚ್ಚಿಸುತ್ತದೆ. ಅವರಿಬ್ಬರ ನಡುವೆ ನಡೆದ ಬಾಲ್ಯದ ಜಗಳವು ವರ್ಗಭೇದವನ್ನು ಸೂಕ್ಷ್ಮವಾಗಿ ಚಿತ್ರಿಸುವ ರೀತಿಯು ಮನೋಜ್ಞವಾಗಿದೆ.
    “ನಮ್ಮಪ್ಪಾರು ಡಾಕ್ಟರ್ ಇದ್ದಾರ”
    “ನಿಮ್ಮಪ್ಪಾರು ಡಾಕ್ಟರ ಇದ್ದರ ನಮ್ಮಪ್ಪಾರು ಪೋಸ್ಟ್ ಮನ್ ಅದಾರ”
    “ಅದೇನ ದೊಡ್ಡ ಕೆಲಸಾ? ಮನಿ ಮನಿ ತಿರುಗಿ ಪತ್ರ ಹಂಚಾದು. ನಮ್ಮಪ್ಪ ಎಲ್ಲಾರ ಜೀವ ಉಳಿಸತಾರ.”
    “ಜೀವ ಉಳಿಸಾಕ ಅವರು ದೇವರೇನು? ನೀರ ತುಂಬಿ ಇಂಜಕ್ಷನ್ ಕೊಡತಾರ. ರೊಕ್ಕ ಉಳಿಸತಾರ. ನಮ್ಮಪ್ಪಾರು ಕಷ್ಟ ಪಡತಾರ. ಚಳಿ ಮಳಿ ಗಾಳಿ ಬಿಸಿಲಾಗ ಪತ್ರ ಹಂಚತಾರ. ನಮ್ಮಪ್ಪಾರಂದ್ರ ಎಲ್ರಿಗೂ ಪ್ರೀತಿ. ನಾವು ಬಡವರೂಂತ ಹಂಗಸತಿಯೇನು?” (ಪುಟ 106) ಎಂಬ ಮಾತಿನ ಮೂಲಕ ರಮೆಯು ಹೆಚ್ಚು ಅನುಭವಸ್ಥಳಾಗಿ ತೋರುತ್ತಾಳೆ. ಆದರೆ ಅವರ ನಡುವಿನ ಕೋಪವು ಹೆಚ್ಚು ಕಾಲ ಬಾಳುವುದಿಲ್ಲ. ಯಾಕೆಂದರೆ ಅವರು ಮಕ್ಕಳು. ಪರಸ್ಪರ ಮಾತನಾಡದೆ ಇರಲು ಸಾಧ್ಯವಾಗುವುದಿಲ್ಲ. ಅಹಮಿಕೆ ಇದ್ದರೂ ಮುಗ್ಧತೆಯು ಅದನ್ನು ಮೀರಿ ನಿಲ್ಲುತ್ತದೆ. ಆದ್ದರಿಂದಲೇ ‘ಚುರಮುರಿ ತಂದೀನಿ ತಿನ್ನಾಣ ಬಾ’ ಎನ್ನಲು ರಮೆಗೆ ಸಾಧ್ಯವಾಗುತ್ತದೆ. ಬರುವುದಿಲ್ಲ ಎನ್ನುವಷ್ಟು ಸಣ್ಣವಳಾಗಲು ಲೇಖಕಿಗೆ ಸಾಧ್ಯವಾಗುವುದಿಲ್ಲ. ಸ್ನೇಹ ಹಸ್ತವನ್ನು ಚಾಚಿದರೂ ದೂರವಾಗುವ ಸಣ್ಣತನವು ದೊಡ್ಡವರಲ್ಲೇ ಕಾಣಿಸುತ್ತದೆ ಎಂಬ ದನಿಯು ಇಲ್ಲಿದೆ. ಗೆಳತಿಯ ನೆನಪನ್ನು ದಾಖಲಿಸುವ ವಿವರಗಳ ನಡುವೆ ಹಲವು ಬಾರಿ ಎಮ್ಮೆ ದನಗಳು ಮತ್ತು ಹಾಲು ಮಾರುವವರ ಚರ್ಯೆಗಳ ವರ್ಣನೆಯು ಓದಿನ ಏಕಾಗ್ರತೆಗೆ ಭಂಗವನ್ನು ತರುತ್ತವೆ.

    ‘ಗೋವಿನ ಕಥೆ’ಯು ಅನಾಥಪ್ರಜ್ಞೆಯನ್ನು ವ್ಯಕ್ತಪಡಿಸುವ ರೀತಿಯು ವಿಶಿಷ್ಟವಾಗಿದೆ. ಗೋವಿನ ಹಾಡು ಎಂಬ ಪದ್ಯದಲ್ಲಿ ‘ಅಣ್ಣಗಳರಾ ಅಕ್ಕಗಳಿರಾ ನನ್ನ ತಾಯೊಡಹುಟ್ಟುಗಳಿರಾ, ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು’ ಎಂಬ ಸಾಲುಗಳು ಬರುವಾಗ ತಾಯಿಯು ಸಾಯುವ ಮುನ್ನ ತನ್ನನ್ನು ಬಂಧುಗಳ ಕೈಗೆ ಒಪ್ಪಿಸಿದ ಸನ್ನಿವೇಶವನ್ನು ನೆನೆದು ಅಳುವ ಸರಸಿ ಓದುಗರ ಮನಸ್ಸನ್ನು ಆವರಿಸುತ್ತಾಳೆ. ಲೇಖಕಿಯು ಅವಳಂತೆ ಪುಟ್ಟ ಹುಡುಗಿಯಾಗಿರುವುದು ಪ್ರಬಂಧಕ್ಕೆ ನಾಟ್ಯಪೂರ್ಣವಾದ ಸಂದರ್ಭವನ್ನು ಒದಗಿಸುತ್ತದೆ. ಆಕೆಯ ಸಹಜ ಪ್ರಶ್ನೆಗಳು ಸರಸಿಯಲ್ಲಿ ಭಾವನೆಗಳನ್ನು ಬಡಿದೆಬ್ಬಿಸುತ್ತವೆ. ಇದು ಸಾಮಾನ್ಯ ಪ್ರಬಂಧವಾಗಿದ್ದರೆ ಸರಸಿಯ ಕೊರಗು ಮಾತ್ರ ಅದರ ವಸ್ತುವಾಗಿರುತ್ತಿತ್ತು. ಆದರೆ ಈ ಕೊರಗಿನೊಡನೆ ಆಕೆಯು ತನ್ನ ಗೆಳತಿಯೊಡನೆ ಕೂಡಿಕೊಂಡು ಆಡುವ, ಕಲಿಯುವ, ಹಂಚಿ ತಿನ್ನುವ ಸಹಭಾಗಿತ್ವ, ಆಕೆಯ ಅಜ್ಜಿ ಸುಬ್ಬಮ್ಮನ ಕತೆಯೂ ಹೆಣೆದುಕೊಂಡಿರುವುದರಿಂದ ಅಪೂರ್ವ ರಚನೆಯಾಗಿ ಕಂಗೊಳಿಸುತ್ತದೆ.

    ವ್ಯಕ್ತಿಗಳನ್ನು ಶಿಷ್ಟ ಮತ್ತು ದುಷ್ಟ ಎಂಬ ಕಪ್ಪು ಬಿಳುಪಿನ ದೃಷ್ಟಿಕೋನದಿಂದ ಅಳೆಯಲು ಸಾಧ್ಯವಿಲ್ಲ. ಯಾವ ವ್ಯಕ್ತಿಯೂ ನೂರಕ್ಕೆ ನೂರು ಸಾತ್ವಿಕನಾಗಿಯೋ, ಪೂರ್ಣ ದುಷ್ಟನಾಗಿಯೋ ಇರಲಾರ. ದುಷ್ಟರೆನಿಸಿದವರಲ್ಲಿ ಒಳ್ಳೆಯತನ, ಒಳ್ಳೆಯವರೆನಿಸಿದವರಲ್ಲಿ ದುಷ್ಟತನ ಇದ್ದೇ ಇರುತ್ತದೆ. ಕಾಲೇಜಿನ ರಸನಿಮಿಷಗಳು ಮತ್ತು ಒಳ್ಳೆಯ ಗಂಡನ ಕೈಹಿಡಿದ ಸಾರ್ಥಕತೆಯ ಸುತ್ತ ಹೆಣೆದ ‘ಸ್ಮೃತಿ’ಯ ಉತ್ತರಾರ್ಧದಂತಿರುವ ‘ಹತ್ತು ಐದು’ ಎಂಬ ಪ್ರಬಂಧದ ಕೇಂದ್ರ ಪಾತ್ರವಾಗಿರುವ ಕಾಲೇಜು ವಿದ್ಯಾರ್ಥಿ ಗೋಪಿಯು ಎಲ್ಲರ ಕಣ್ಣಿನಲ್ಲಿ ಆತನು ಯುವತಿಯರನ್ನು ಛೇಡಿಸುವ ಬೀದಿಕಾಮಣ್ಣನಾದರೆ ಲೇಖಕಿಯ ಕಣ್ಣಿಗೆ ಆತನು ತಲೆಕೆಟ್ಟ ತಾಯಿಗಾಗಿ ಪಡಿಪಾಟಲು ಪಡುವ, ತನ್ನ ತಮ್ಮ ತಂಗಿಯರನ್ನು ಸಾಕಲು ಒದ್ದಾಡುವ ವ್ಯಕ್ತಿ. ಆತ ರಸಿಕನಾದರೂ ಕಾಮುಕನಲ್ಲ. ಸಾಮಾನ್ಯ ಗ್ರಹಿಕೆಗೆ ಒಳಗಾದ ಒಬ್ಬನ ವ್ಯಕ್ತಿತ್ವವು ಸೂಕ್ಷ್ಮ ಸಂವೇದಿಯ ದೃಷ್ಟಿಯಲ್ಲಿ ಬೇರೆಯೇ ಆಗಿ ಕಾಣುವುದು ಇಲ್ಲಿನ ವಿಶೇಷತೆಯಾಗಿದೆ. ಬ್ರಾಹ್ಮಣ ಜಾತಿಗೆ ಸೇರಿದವನು ಹೊಟ್ಟೆಪಾಡಿಗಾಗಿ ಹಮಾಲಿಯ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ ಮಾರವಾಡಿಯಿಂದ ನ್ಯಾಯವಾಗಿ ಸಲ್ಲಬೇಕಿದ್ದ ಕೂಲಿಯನ್ನು ಕೇಳಿದಾಗ ಆತನು ದೂಡಿದ ಪರಿಣಾಮವಾಗಿ ರೈಲಿನಡಿಗೆ ಬಿದ್ದು ಸಾಯುವ ಗೋಪಿಯ ಪರಿಸ್ಥಿತಿಯನ್ನು ಲೇಖಕಿಯು ಹೃದಯಂಗಮವಾಗಿ ಬಣ್ಣಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂದರ್ಭದಲ್ಲಿಯೂ ತಾನು ಸಾಲ ಪಡೆದಿದ್ದ ಹತ್ತು ಮತ್ತು ಐದು ರೂಪಾಯಿಗಳ ನೋಟುಗಳನ್ನು ಆಕೆಗೆ ತಲುಪಿಸುವ ಏರ್ಪಾಡು ಮಾಡಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ವಿಚಾರವು ಮುಖ್ಯವಾಗುತ್ತದೆ.

    ಅನ್ನ ನೀಡಿ ಸಲಹಿದವರಿಗಾಗಿ ಬದುಕನ್ನು ಮುಡಿಪಾಗಿಡುವ ನಾಯಿಯ ಸ್ವಾಮಿನಿಷ್ಠೆಗೆ ಎಣೆಯಿಲ್ಲ. ನಾಯಿ ಮತ್ತು ಬಂಜೆಯ ನೋವನ್ನು ಮಾನವೀಯ ಅಂತಃಕರಣದಿಂದ ನಿರೂಪಿಸುವ ಈ ಪ್ರಬಂಧವು ನಾಯಿಯನ್ನು ಮಾನದಂಡವಾಗಿರಿಸಿಕೊಂಡು ಮನುಷ್ಯನ ಕ್ರೌರ್ಯವನ್ನು ವಿಮರ್ಶಿಸುತ್ತದೆ. ಸಾಕುನಾಯಿಯನ್ನು ಮಗನಂತೆ ನೋಡಿಕೊಳ್ಳುವ ಅಂಜನಳ ವಾತ್ಸಲ್ಯ, ನಾಯಿಯ ಬದಲು ತನ್ನ ಮಗನ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿ, ಆತನನ್ನು ದತ್ತಕ್ಕೆ ಕೊಟ್ಟು ಆಸ್ತಿಯನ್ನು ಕಬಳಿಸುವ ಯೋಚನೆ ಮಾಡುವ ನಾದಿನಿ, ನಾಯಿಯನ್ನು ಹಿಡಿದ ಕಿಡಿಗೇಡಿಗಳು ಅದನ್ನು ಗೋಣಿಯೊಳಗೆ ಹಾಕಿ ಮುನಿಸಿಪಾಲಿಟಿಯವರಿಗೆ ಒಪ್ಪಿಸಿದಾಗ ಅದು ಗೋಣಿಚೀಲವನ್ನು ಕಚ್ಚಿ ತೂತು ಮಾಡಿ ಹೊರಬಂದರೂ, ಕೊರಳಿಗೆ ಸಿಕ್ಕಿದ ಗೋಣಿಯಿಂದ ಬಿಡಿಸಿಕೊಳ್ಳಲಾರದೆ ಹತ್ತು ಮೈಲು ದೂರದ ಮನೆಯವರೆಗೂ ಎಳೆದುಕೊಂಡು ಬಂದ ರೀತಿ, ಹಸಿವಿನಿಂದ ಕಂಗೆಟ್ಟ ದೈನ್ಯ ಸ್ಥಿತಿ, ಅಂಜನಾ ತೀರಿಕೊಂಡ ಬಳಿಕವೂ ಆಕೆಯ ಹಾದಿ ಕಾಯುವ ಮನೋಭಾವ ಮನಮುಟ್ಟುವಂತಿದೆ. “ನಾಯಿ ಅಂದ್ರ ಯಾಕಿಷ್ಟು ತಿರಸ್ಕಾರ? ನಾಯಿ ಸ್ವಭಾವ ಮನುಷ್ಯಗಿದ್ರ ಈ ಜಗತ್ತು… ಬೊಗಳೋ ನಾಯಿ ಕಚ್ಚೋದಿಲ್ಲ. ಆದ್ರ ಈ ಬೊಗಳೋ ನಾಯಿ… (ಪುಟ 79)” ಎಂದು ಮನುಷ್ಯರನ್ನು ಉದ್ದೇಶಿಸಿ ಆಡುವ ಮಾತುಗಳು ಪ್ರಬಂಧದ ಆಶಯವನ್ನು ವಾಚ್ಯಗೊಳಿಸುತ್ತವೆ. ಸುನಂದಾ ಅವರ ನಂತರದ ಕೃತಿಯಾದ ‘ಕಾಕ ಭುಶುಂಡಿ’ಯಲ್ಲಿ ಇಂಥ ಪ್ರಾಣಿರೂಪಕಗಳು ಹೇರಳವಾಗಿ ದೊರಕುತ್ತವೆ.

    ಲಲಿತಪ್ರಬಂಧದ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಮೂಡಿಬಂದ ‘ಮೊಸರು ಅವಲಕ್ಕಿ’ಯು ವರ್ಣನೆಯ ತಾಜಾತನದಿಂದ ಕಂಗೊಳಿಸುತ್ತದೆ. “ಮೊಸರವಲಕ್ಕಿ ಎಂದರೆ ಮೊಸರು ಅವಲಕ್ಕಿ. ಅವಲಕ್ಕಿ ಮೊಸರಲ್ಲ. ಮೊಸರವಲಕ್ಕಿಯ ರುಚಿ ಅವಲಕ್ಕಿ ಮೊಸರಿಗೆ ಬಾರದು. ಮೊಸರು ಕೆನೆಕೆನೆಯಾಗಿ ಗಟ್ಟಿ ಇರಬೇಕು. ಗಡಿಗೆ ಮೊಸರಿದ್ದರಂತೂ ಬಲು ಸೊಗಸು. ಆ ಮೊಸರಿಗೆ ಅವಲಕ್ಕಿ ಉಪ್ಪು ಬೆರೆಸಬೇಕು. ಜೊತೆಗಿಷ್ಟು ಚಟ್ನಿಪುಡಿ ಇದ್ದರಾಯಿತು. ಹಸಿಮೆಣಸಿನಕಾಯಿ, ಕೊತ್ತಂಬರಿ, ಉಳ್ಳಾಗಡ್ಡಿ ಸಣ್ಣಗೆ ಹಚ್ಚಿ ಬೆರೆಸಬೇಕು. ಮೇಲೆ ತುಪ್ಪದ ಒಗ್ಗರಣೆ” (ಪುಟ 88-90) ಈ ಪಾಕವಿಧಾನದ ಮಾದರಿಯನ್ನೇ ಇಲ್ಲಿನ ಲಲಿತ ಪ್ರಬಂಧಗಳಲ್ಲೂ ಕಾಣುತ್ತೇವೆ. ಬದುಕಿನ ಉಪ್ಪು ಹುಳಿ ಖಾರಗಳು ಬೆರೆತ ರಚನೆಗಳು ಇಲ್ಲಿವೆ. ‘ಮೊಸರು ಅವಲಕ್ಕಿ’ ಎಂಬ ಪ್ರಬಂಧದಂತೆ ‘ರುಚಿ’ಯು ಒಂದೇ ವಿಷಯದ ಸುತ್ತ ಸುತ್ತಿದರೂ ಮೂರ್ತದ ಜೊತೆ ಅಮೂರ್ತತೆಯನ್ನು ಹಿಡಿಯಲು ಯತ್ನಿಸುವುದರಿಂದ ‘ಮೊಸರು ಅವಲಕ್ಕಿ’ಗಿಂತ ಮಿಗಿಲೆನಿಸುತ್ತದೆ.

    ಸುನಂದಾ ಬೆಳಗಾಂವಕರರ ಬರಹಗಳಿಗೆ ಪ್ರಾದೇಶಿಕ ಅಸ್ತಿತ್ವವಿದೆ. ಅಲ್ಲಿ ಬದುಕುವವರು ಏಕ ಶಿಲಾಕೃತಿಯಲ್ಲೆಂಬಂತೆ ಚಿತ್ರಿತರಾಗಿಲ್ಲ. ಯಾವ ಪಾತ್ರವನ್ನೂ ಜಾತಿ, ವರ್ಗ ಮತ್ತು ಲಿಂಗ ಮಾದರಿ ಎನ್ನುವಂತಿಲ್ಲ. ನಿರ್ದಿಷ್ಟ ಜಾತಿಯವರು ಧಾರಣ ಮಾಡುವ ರೂಢಿಗತ ಲಕ್ಷಣಗಳು ಇದ್ದರೂ ಅವುಗಳನ್ನು ಮೀರಿ ಅಪ್ಪಟ ಮನುಷ್ಯತ್ವವನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳೆಂಬಂತೆ ಚಿತ್ರಿತವಾಗಿವೆ. ಎಲ್ಲ ಬಗೆಯ ದ್ವಿದಳ ವರ್ಗೀಕರಣದ ಕಥನ ರೀತಿಯನ್ನು ಕೈಬಿಟ್ಟಿದ್ದರಿಂದ ಈ ಕೃತಿಯು ಜಾತಿವಾದಿ ಕಥನವಾಗದೆ ಮಾನವೀಯ ಕಥನವಾಗುತ್ತದೆ. ಪರಂಪರಾಗತ ನಂಬಿಕೆಗಳು, ರೂಢಿಗಳು, ಬದುಕಿನ ದೃಶ್ಯಗಳು ಹಾಸುಹೊಕ್ಕಿರುವ ಹಳ್ಳಿಯ ಜೀವನವನ್ನು ಪುನರ್ ಸೃಷ್ಟಿಸುವಲ್ಲಿ ಸೂಕ್ಷ್ಮ ಸಂವೇದನೆಯ, ವಾಸ್ತವವನ್ನು ಹುಡುಕುವ, ಕೋಮಲತೆ-ಗಟ್ಟಿತನಗಳು ಬೆರೆತ ಮನಸ್ಸನ್ನು, ಹಳ್ಳಿಯ ಬದುಕಿನ ವಿವರಗಳೊಂದಿಗೆ ಮಿತಿಗಳನ್ನು ಕಾಣಬಲ್ಲ ಕಣ್ಣು ಹೃದಯಗಳನ್ನು ಕಾಣುತ್ತೇವೆ. ಮರದ ಕೇಂದ್ರದಿಂದ ರೆಂಬೆಗಳು ಹುಟ್ಟಿಕೊಳ್ಳುವಂತೆ ಕೇಂದ್ರ ವಸ್ತುವಿನಿಂದ ಇತರ ವಿಚಾರಗಳು ಮೂಡುತ್ತವೆ. ಒಳ್ಳೆಯವರು, ಕೆಟ್ಟವರು ಎಂಬ ತೀರ್ಪುಕೊಡುವ ಪ್ರವೃತ್ತಿಯನ್ನು ಬದಿಗಿಟ್ಟು, ಮನುಷ್ಯ ಸ್ವಭಾವದ ಚಿತ್ರಗಳನ್ನು ರಚಿಸುತ್ತಾರೆ. ಪರಿಪಕ್ವ ವ್ಯಕ್ತಿತ್ವವನ್ನು ಹೊಂದಿದವರ ಜೀವನ ವಿವರಗಳನ್ನು ಬರೆದು ಮೌಲ್ಯಗಳನ್ನು ಸೂಚಿಸುವಾಗ ವ್ಯಕ್ತಿಗಳು ಕೇವಲ ಉದಾಹರಣೆಗಳಾಗದೆ ಜೀವಂತವಾಗಿ ಕಂಗೊಳಿಸುತ್ತಾರೆ. ತಮ್ಮ ನಾಡುನುಡಿಯ ಬಗ್ಗೆ ಅಪರಿಮಿತ ಪ್ರೀತಿಯನ್ನು ಹೊಂದಿದ ಬರಹಗಳು ಅತಿಭಾವುಕತೆಗೆ ಅವಕಾಶವನ್ನು ನೀಡದೆ ಬದುಕಿನಲ್ಲಿ ಶ್ರದ್ಧೆ, ಬದುಕಿನ ಹೊಣೆಯ ಅರಿವು, ಅನುಕಂಪ, ಬದುಕನ್ನು ಶುಭ್ರಗೊಳಿಸುವ, ಸಾರ್ಥಕಗೊಳಿಸುವ ಹಾದಿಯ ಹುಡುಕಾಟದೊಂದಿಗೆ ಮನುಷ್ಯ ಸ್ವಭಾವದ ಬಗೆಗಿನ ಆಸಕ್ತಿಯನ್ನು ಪ್ರಕಟಿಸುತ್ತವೆ. ನೆನಪುಗಳು ಪ್ರಸ್ತುತವೆಂದು ಸಮರ್ಥಿಸಲು ಯೋಗ್ಯವಾದ ವಿವರಗಳು ದೊರೆಯುತ್ತವೆ. ಎಲ್ಲ ಪ್ರಬಂಧಗಳಲ್ಲಿ ಒಂದು ಕೇಂದ್ರ ಪಾತ್ರವಿದ್ದರೂ ಅದರ ವೈದೃಶ್ಯದಲ್ಲಿ ನಿಲ್ಲುವ ಪಾತ್ರಗಳು ಇರುವುದರಿಂದ ಅವುಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಇಲ್ಲಿನ ಪ್ರಬಂಧಗಳು ಇತರ ಲೇಖಕರ ರಚನೆಗಳಿಗಿಂತ ಭಿನ್ನವಾಗಿರುವ ಬಗೆಯು ಗೋಚರವಾಗುತ್ತದೆ. ಇಲ್ಲಿ ಯಾರ ಬದುಕೂ ಸುಖದ ಸುಪ್ಪತ್ತಿಗೆಯಾಗಿಲ್ಲ. ಬದುಕು ಎಲ್ಲರ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಅದಕ್ಕಾಗಿ ಹಲವು ಬಗೆಯ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಸಾಧನೆ ಮತ್ತು ಜೀವನಾನುಭವಗಳಿಂದ ವ್ಯಕ್ತಿತ್ವಗಳು ಹದಗೊಳ್ಳುತ್ತವೆ.

    ಸರಳರೇಖೆಯಲ್ಲಿ ಚಲಿಸುವ ಪ್ರಬಂಧಗಳ ಕಥನಕೌಶಲವು ಮೆಚ್ಚುವಂತಿದೆ. ಘಟನೆಯ ಮಧ್ಯಂತರದಿಂದ ಕಥನವನ್ನು ಆರಂಭಿಸುವ ತಂತ್ರವನ್ನು ಬಳಸಲಾಗಿದೆ. ಕತೆಯ ಚೌಕಟ್ಟನ್ನು ಪಡೆದಿರುವ ಪ್ರಬಂಧಗಳಲ್ಲಿ ನಿರೂಪಕಿಯ ಸಾನ್ನಿಧ್ಯವಿರುತ್ತದೆ. ಆಕೆಯ ಕುಟುಂಬದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ ವ್ಯಕ್ತಿಯ ಸಾವುನೋವುಗಳು ಭಾವಲೋಕದಲ್ಲಿ ಹರಳುಗಟ್ಟಿದ ಪರಿ ಹೇಗೆಂದು ಅನಾವರಣಗೊಳಿಸುತ್ತಾ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಓದುಗರಿಗೆ ದಕ್ಕುವಂತೆ, ಅವರೂ ಅದರಲ್ಲಿ ಪಾಲುಗೊಳ್ಳುವಂತೆ ನಿರೂಪಿಸುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ಘರ್ಷಣೆ, ಆಮಿಷ, ಸವಾಲುಗಳ ಸ್ವರೂಪವು ಈಗ ಬದಲಾಗಿದ್ದರೂ ಸಾರ್ಥಕವಾದ ಬಾಳನ್ನು ಸಾಗಿಸಲು ಮನುಷ್ಯನನ್ನು ಸಿದ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿನ ಲಲಿತ ಪ್ರಬಂಧಗಳು ಉತ್ತಮಪುರುಷದಲ್ಲಿ ಮಾತನಾಡುತ್ತಿದ್ದರೂ ಅಹಂಕಾರಕ್ಕೆ ಕಟ್ಟುಬೀಳದೆ ಸಾಧಾರಣೀಕರಣವನ್ನು ಸಾಧಿಸುತ್ತವೆ. ಲೇಖಕಿಯು ತಾನೇ ನಾಯಕಿಯಾಗಿ ಮೆರೆಯದೆ, ಇತರರ ಬದುಕಿನ ಅವಲೋಕನಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿರುವುದರಿಂದ ಇದು ಸಾಧ್ಯವಾಗಿದೆ. ಲೇಖಕಿಯ ಚಿಂತನೆ ಹರಿತವಾಗಿರುವುದರಿಂದ, ಪ್ರಚೋದಕವಾಗಿರುವುದರಿಂದ, ಗಂಭೀರ ವಿಚಾರವನ್ನು ಭಾರಗೊಳಿಸದೆ ಹಗುರತ್ವವನ್ನು ನೀಡುವ ಲವಲವಿಕೆ ಇರುವುದರಿಂದ ಲಲಿತ ಪ್ರಬಂಧಗಳು ಯಶಸ್ವಿಯಾಗಿವೆ. ಕನ್ನಡದ ಈ ಕಥನ ಪ್ರತಿಭೆಯು ಪರಂಪರೆಯಿಂದ ಸತ್ವವನ್ನು ಹೀರಿಕೊಂಡಿದೆ. ಕತೆ, ಕವಿತೆ ಮತ್ತು ಕಾದಂಬರಿಗಳಲ್ಲಿ ಕಾಣಿಸಿಕೊಂಡಿದ್ದ ಪ್ರತಿಮೆ, ಸಂಕೇತ, ರೂಪಕ ಮತ್ತು ಪ್ರತೀಕಗಳನ್ನು ಲಲಿತ ಪ್ರಬಂಧಗಳಲ್ಲಿ ಬಳಸಿಕೊಂಡಿರುವುದು ಇಲ್ಲಿನ ವಿಶೇಷತೆಯಾಗಿದೆ. ‘ಗರಿಕೆದರಿದ ನವಿಲು ತನ್ನ ಬೀಸಣಿಕೆಯನ್ನು ಮುಚ್ಚಿ ಬಿಚ್ಚುವಂತೆ ಹಳೆಯ ನೆನೆಪುಗಳನ್ನು ಬಿಚ್ಚುತ್ತಾ ಕೋಣೆ ಸೇರಿದಳು, ಕಲ್ಲೊಗೆತದಿಂದ ಹೆಡೆಯೆತ್ತಿ ನೋಡುವ ಹಾವಿನಂತೆ ಭಾವಹುತ್ತದಿಂದ ಮುಖವೆತ್ತಿದೆ, ನೀರಿನಲ್ಲಿ ಹಾವು ಹರಿದಂತೆ ಅಪಸ್ವರವೆದ್ದಿತು, ಗೂಡಿಗೆ ಬೆಂಕಿಯಿಟ್ಟಾಗ ಓಡುವ ಇರುವೆಗಳಂತೆ ವಿಚಾರಗಳ ಹುಚ್ಚು ಹುಚ್ಚಾಗಿ ಹರಿದವು, ಚಿತ್ತ ಹುಳ ತಿಂದ ಎಲೆಯಾಯಿತು’ ಮುಂತಾದ ಹೊಸ ಬಗೆಯ ಪದ ಪ್ರಯೋಗಗಳು ಮನದೊಳಗೆ ಅನುರಣಿಸುತ್ತವೆ. ಹೊಸ ದೃಷ್ಟಿಯನ್ನು ಪ್ರತಿಪಾದಿಸುವ ಸಾಮರ್ಥ್ಯವನ್ನು ಹೊಂದಿದ ಕೆಲವು ಪ್ರಬಂಧಗಳು ಓದಿ ಮುಗಿಸಿದ ಬಳಿಕವೂ ನೆನಪಿಗೆ ಬರುತ್ತವೆ. ನುಡಿಚಿತ್ರಗಳನ್ನು ಚಿತ್ರಿಸುವ ಶಕ್ತಿ, ರಸಿಕತೆ, ಮೃದುಹಾಸ್ಯ, ಜೀವನಾನುಭವಗಳು ಓದಿನ ಪಯಣದಲ್ಲಿ ಮುದವನ್ನು ನೀಡುತ್ತವೆ. ಬದುಕು-ಸಂಸ್ಕೃತಿಯನ್ನು ಪ್ರೀತಿಸುವ, ಚೆಲುವು ಒಲವುಗಳನ್ನು ಗೌರವಿಸುವ ಸುಸಂಸ್ಕೃತ ವ್ಯಕ್ತಿತ್ವದೊಡನೆ ನಂಟನ್ನು ಬೆಸೆಯುತ್ತದೆ. ಧಾರವಾಡ ಜಿಲ್ಲೆಯ ಆಡುಮಾತಿನ ಲಯ, ಜಾನಪದ ಸೊಗಡಿನ ಜೊತೆಗೆ ಪಾಶ್ಚಾತ್ಯ ಕತೆ, ಕವಿತೆ ಮತ್ತು ನುಡಿಗಟ್ಟುಗಳು ಪ್ರಬಂಧಗಳ ತಾತ್ವಿಕತೆಯ ಹಿನ್ನೆಲೆಯಲ್ಲಿದ್ದರೂ ಸಂವಹನಕ್ಕೆ ಅಡ್ಡಿಯಾಗುವುದಿಲ್ಲ. ಸ್ತ್ರೀವಾದ ಮತ್ತು ಕ್ರಾಂತಿಯ ಸಾಧ್ಯತೆಗಳನ್ನು ಬಿಟ್ಟುಕೊಟ್ಟ ರಚನೆಗಳು ಬದುಕನ್ನು ಎದುರಿಸಲು, ಬಾಳಲು ಅಗತ್ಯವಾದ ಮನೋಧರ್ಮ ಮತ್ತು ಸ್ಥೈರ್ಯವನ್ನು ಬೆಳೆಸುತ್ತದೆ. ಬದುಕನ್ನು ಹೊರಗಿನಿಂದ ನೋಡುತ್ತಿದ್ದರೂ ಘಟನೆಗಳು ಮತ್ತು ಮನುಷ್ಯ ಸ್ವಭಾವದ ವೈವಿಧ್ಯದ ದರ್ಶನ, ನಿರೂಪಣೆಯ ಸೊಗಸು, ಮಾನವೀಯತೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ವಿಷಯವನ್ನು ಬೇರೆ ಬೇರೆ ದೃಷ್ಟಿಯಿಂದ ಕಾಣಬಲ್ಲ, ನಿರ್ಧಾರಕ್ಕೆ ಬರುವ ಮುನ್ನ ವಸ್ತುವಿನ ಹಲವು ಮುಖಗಳನ್ನು ಗುರುತಿಸಲು ಬಯಸುವ ಆರೋಗ್ಯಕರ ಮನಸ್ಸಿನ ಲಕ್ಷಣವನ್ನು ಕಾಣುತ್ತೇವೆ. ಲಲಿತಪ್ರಬಂಧಗಳೆಂದು ಹೇಳುತ್ತಿದ್ದರೂ ಇವುಗಳಿಂದ ಸಣ್ಣಕತೆಗಳನ್ನು ಪ್ರತ್ಯೇಕಿಸಿ ತೆಗೆಯಬಹುದು. ಹೆಚ್ಚಿನ ಪ್ರಬಂಧಗಳಲ್ಲಿ ಕತೆಯ ಅಂಶ ಹೆಚ್ಚಿರುವುದರಿಂದ ಅವುಗಳನ್ನು ಕಥನ ಪ್ರಬಂಧಗಳೆಂದರೂ ತಪ್ಪಾಗಲಾರದು.

    ಪುಸ್ತಕ ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ
    Next Article ಹೇಮಂತ್ ಪಾರೇರ ರಚಿತ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ಬಿಡುಗಡೆ
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಶ್ವ ದಾಖಲೆಗಾಗಿ ‘ಭರತನಾಟ್ಯ’ ಪ್ರದರ್ಶನ | ಜುಲೈ 21ರಿಂದ 28

    July 19, 2025

    ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯಗೆ ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ

    July 19, 2025

    ಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಪಾಕ್ಷಿಕ ತಾಳಮದ್ದಲೆ ಸರಣಿ | ಜುಲೈ 24

    July 19, 2025

    ಹೇಮಂತ್ ಪಾರೇರ ರಚಿತ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ಬಿಡುಗಡೆ

    July 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.