ಕಾಸರಗೋಡಿನ ಸಾಧಕರನ್ನು ಹೊರಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಪ್ರಕಟಿಸಿದ ‘ಕನ್ನಡಿಯಲ್ಲಿ ಕನ್ನಡಿಗರು’ ಎಂಬ ಕೃತಿಯ ಎರಡು ಸಂಚಿಕೆಗಳು ಹಿರಿಯ ಕವಿ, ಸಂಘಟಕ ಡಾ. ರಮಾನಂದ ಬನಾರಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಮೊದಲ ಸಂಚಿಕೆಯನ್ನು ಅವರೇ ಸಂಪಾದಿಸಿದ್ದು, ಎರಡನೇ ಸಂಚಿಕೆಯನ್ನು ಹಿರಿಯ ವಿದ್ವಾಂಸ ಡಾ. ವಸಂತಕುಮಾರ ಪೆರ್ಲರು ಸಂಪಾದಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಬಹುಮುಖಿ ಸಾಧನೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಅವರ ಸಾಧನೆಗಳ ಹೆಗ್ಗುರುತುಗಳನ್ನು ದಾಖಲಿಸುವಲ್ಲಿ ಸಂಪಾದಕರಿಬ್ಬರೂ ಯಶಸ್ವಿಯಾಗಿದ್ದಾರೆ.
ಆಡಳಿತಾತ್ಮಕವಾಗಿ ಹಿಂದುಳಿದ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಭಾಷಾ ಅಲ್ಪಾ ಸಂಖ್ಯಾತರು ಇತ್ತ ಕೇರಳಕ್ಕೂ ಅತ್ತ ಕರ್ನಾಟಕಕ್ಕೂ ಸಲ್ಲದವರು. ಎರಡೂ ರಾಜ್ಯಗಳ ಸಾಹಿತ್ಯಕ ಸಾಂಸ್ಕೃತಿಕ ಕ್ಷೇತ್ರಗಳು ರಾಜಕೀಯ ಮಸಲತ್ತು, ಹಿಂಬಾಗಿಲ ಪ್ರವೇಶ, ಅರ್ಹರನ್ನು ಪದಚ್ಯುತಗೊಳಿಸುವ ತಂತ್ರಗಳು ಕಾಸರಗೋಡಿನವರನ್ನು ಮುಖ್ಯವಾಹಿನಿಯಿಂದ ದೂರ ಮಾಡುತ್ತಿವೆ. ಕಾಸರಗೋಡಿನವರ ಹಿಂಜರಿಕೆಯ ಮನಸ್ಥಿತಿಯೂ ಅವರ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಕಾಸರಗೋಡಿನ ಸಾಧಕರ ಮೇಲೆ ಕವಿದ ಕತ್ತಲನ್ನು ಹೋಗಲಾಡಿಸಿ ಅವರ ಕಡೆಗೆ ಬೆಳಕನ್ನು ಬೀರಿರುವ ಈ ಸಂಚಿಕೆಗಳು ಕಾಸರಗೋಡಿನವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವ ಕೊರತೆಯನ್ನು ತಕ್ಕಮಟ್ಟಿಗೆ ನೀಗಿವೆ.
ಸಾಧಕರು ಮತ್ತು ಅವರ ಸಾಧನೆಯ ಸಂಕ್ಷಿಪ್ತ ವಿವರಗಳನ್ನು ಪೀಠಿಕೆಯ ರೂಪದಲ್ಲಿ ಕೊಟ್ಟು ಸಂದರ್ಶನದ ಮೂಲಕ ಅವರ ವಿವರಗಳು ಒದಗುವಂತೆ ಮಾಡುವಲ್ಲಿ ಸಂಪಾದಕರ ಶ್ರಮ ಎದ್ದು ಕಾಣುತ್ತದೆ. ಸಾಧಕರ ಸಾಹಿತ್ಯಕ ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ಮಾತ್ರ ಬರೆದು ಪ್ರಬಂಧದ ರೂಪವನ್ನು ಒದಗಿಸದೆ ಸಂದರ್ಶನವನ್ನು ನೀಡಿರುವುದರಿಂದ, ಓದುಗರ ಜೊತೆಗಿನ ಆತ್ಮೀಯ ಸಂವಾದದಂತೆ ಭಾಸವಾಗುತ್ತದೆ. ಅವರ ಬದುಕಿನ ಎಲ್ಲ ಮಗ್ಗುಲಿಗೂ ಕಣ್ಣು ಹಾಯುವಂತಾಗಿ ಸಮಗ್ರತೆಯ ಕಡೆ ಕೆಲವು ಹೆಜ್ಜೆಗಳನ್ನಿಡಲು ಸಾಧ್ಯವಾಗಿದೆ. ಜೊತೆಗೆ ಸಾಧಕರ ಆತ್ಮಕತೆಯ ಪುಟಗಳೂ ತೆರೆದುಕೊಳ್ಳುತ್ತವೆ. ಪ್ರತಿಯೊಂದು ಸಂಧರ್ಶನದ ಬಳಿಕ ಕೊಟ್ಟಿರುವ ವ್ಯಕ್ತಿ ಪರಿಚಯವು ಅವರ ಸಾಧನೆಯನ್ನು ಸ್ಥೂಲವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
‘ಕನ್ನಡಿಯಲ್ಲಿ ಕನ್ನಡಿಗ’ ಕೃತಿ ಸರಣಿಯ ಒಂದನೇ ಸಂಚಿಕೆಯಲ್ಲಿ ಡಾ. ರಮಾನಂದ ಬನಾರಿಯವರು ಸಿದ್ಧಪಡಿಸಿದ ಡಾ. ಪಿ. ಶ್ರೀಕೃಷ್ಣ ಭಟ್ಟರ ಸಂದರ್ಶನ ಲೇಖನವು ಹೆಚ್ಚು ಬೆಳಗುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳ ಪ್ರತಿಯೊಂದು ಸಾಲಿಗೂ ಅಡಿಗೆರೆಯನ್ನು ಎಳೆಯುವಷ್ಟರ ಮಟ್ಟಿಗಿನ ಪ್ರಾಮುಖ್ಯತೆಯನ್ನು ಹೊಂದಿದೆ. “ಭಾಷೆ ಎಂಬುದು ಸಂಸ್ಕೃತಿಯ ಭಾಗ. ಭಾಷೆ ಸಂಸ್ಕೃತಿಯ ವಾಹಕ. ಸಂಸ್ಕೃತಿಯು ಮಾನವೀಯ ಮೌಲ್ಯಗಳನ್ನು ಒಳಗೊಂಡ ಘಟಕ. ಪಾಠಗಳನ್ನು ಕಲಿಯುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ತುಂಬುವಂತಾಗಬೇಕು” ಎಂಬ ಅಭಿಪ್ರಾಯವೂ ಸೇರಿದಂತೆ ಎಲ್ಲವೂ ತೂಕಬದ್ಧ ಮಾತುಗಳಾಗಿದ್ದು, ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಸ್ಕೃತ-ಕನ್ನಡ ಸಂಬಂಧಗಳ ಬಗ್ಗೆ ವಿಶೇಷ ಒಳನೋಟಗಳನ್ನು ನೀಡುತ್ತವೆ.
ಪ್ರಮೀಳ ಮಾಧವರು ಗದ್ಯ ಪದ್ಯ ಪ್ರಕಾರಗಳಲ್ಲಿ ನಡೆಸಿದ ವಿಪುಲ ಬರವಣಿಗೆ, ಕರಕುಶಲ ವಸ್ತುಗಳ ತಯಾರಿ, ಆನ್ ಲೈನ್ ಸಾಹಿತ್ಯಕ ಕಾರ್ಯಕ್ರಮಗಳಿಂದ ತಮ್ಮ ವ್ಯಕ್ತಿತ್ವವು ಮಾಗಿದ ಬಗ್ಗೆ ಅರ್ಥಪೂರ್ಣ ನುಡಿಗಳನ್ನಾಡಿದ್ದಾರೆ. ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಕಾರ್ಯಾಧ್ಯಕ್ಷರಾಗಿ ಪಿ.ಎನ್. ಮೂಡಿತ್ತಾಯರು ಮಾಡಿದ ಉತ್ತಮ ಕೆಲಸಗಳು, ಬಹುಭಾಷಾ ಜ್ಞಾನಿಯಾಗಿ ಪಡೆದ ಅನುಭವಗಳು, ಅನುವಾದಕರಾಗಿ ಕಂಡುಕೊಂಡ ಯಶಸ್ಸು, ಭಾಷಾಂತರ ಕಮ್ಮಟಗಳನ್ನು ಆಯೋಜಿಸಿ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದ ಬಗೆಯು ಮನದಟ್ಟಾಗುತ್ತದೆ.
“ತಾಯಿ ನುಡಿ ಅಬ್ಬೆಯ ಹಾಲಿನೊಂದಿಗೆ ಬರುತ್ತದೆ. ಅದು ಹೃದಯದ ನುಡಿ. ಆ ನುಡಿ ಹಾಗೇ ಅಭಿವ್ಯಕ್ತಗೊಂಡರೆ ಆಪ್ತವೆನಿಸುತ್ತದೆ. ಕನ್ನಡದ ಅತ್ಯಂತ ಹಳೆಯ ಉಪಭಾಷೆಯನ್ನು ದಾಖಲಿಸಿಕೊಂಡಂತಾಗುತ್ತದೆ. ಆಯಾ ಭಾಷಿಗರೇ ಇದನ್ನು ಮಾಡಬೇಕು. ಇದನ್ನು ಅವಜ್ಞೆ ಮಾಡುವುದು ಸರಿಯಲ್ಲ” ಎನ್ನುವ ಡಾ. ಹರಿಕೃಷ್ಣ ಭರಣ್ಯರ ಮಾತು ಆರೋಗ್ಯಕರ ಚರ್ಚೆಯನ್ನು ಬಯಸುತ್ತದೆ. ಹವ್ಯಕ ಭಾಷೆಯ ಬಗ್ಗೆ ವಿಶೇಷ ಕೃತಿಗಳನ್ನು ರಚಿಸಿದ, ಸಂಶೋಧನೆಗಳನ್ನು ಕೈಗೊಂಡ ಇವರ ನುಡಿಗಳು ಮಾತೃಭಾಷೆಯ ಮೇಲಿನ ಕಾಳಜಿಯನ್ನು ವ್ಯಕ್ತಪಡಿಸುತ್ತವೆ.
ಡಾ. ಯು. ಮಹೇಶ್ವರಿಯವರ ಸಂದರ್ಶನವು ಹೆಚ್ಚು ಹೃದ್ಯವಾಗಿದೆ. ಅವರ ಮನೆಯವರು ಮತ್ತು ಸುತ್ತುಮುತ್ತಲಿನವರು ಅವರ ಮೇಲೆ ಸಾಹಿತ್ಯಕ ಪ್ರಭಾವಗಳನ್ನು ಮಾತ್ರವಲ್ಲ ಮಾನವೀಯತೆಯನ್ನು ಬೆಳೆಸಿಕೊಳ್ಳಲು ಕಾರಣರೆನಿಸಿದರು. ಸಾಹಿತ್ಯ ಸಂಶೋಧನೆ, ಅಧ್ಯಾಪನ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅವರು ಅಪ್ಪಟ ಮಾನವತಾವಾದಿಯಾಗಿ ಗಮನವನ್ನು ಸೆಳೆಯುತ್ತಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಿಂದ ಶಿಕ್ಷಣ ಕೊಡಿಸಿದ್ದಾರೆ. ಆ ಸೌಲಭ್ಯವನ್ನು ಪಡೆದ ವಿದ್ಯಾರ್ಥಿಗಳ ಪೈಕಿ ಕೊರಗ ಸಮುದಾಯದ ಹುಡುಗಿಯ ಪರಿಸ್ಥಿತಿಗೆ ನೆರವಾದ ಬಗೆ ಎಂಥವರ ಕಣ್ಣು ತೆರೆಸುತ್ತದೆ. “ಕೊರಗ ಸಮುದಾಯದ ಹುಡುಗಿಯೊಬ್ಬಳು ಮನೆಯ ಪರಿಸ್ಥಿತಿಯಿಂದಾಗಿ ಓದನ್ನು ನಿಲ್ಲಿಸಿ ಬಿಡುವವಳಿದ್ದಳು. ಅವಳಿಗೆ ನನ್ನಿಂದಾದ ಬೆಂಬಲ ನೀಡಿ, ಧೈರ್ಯ ತುಂಬಿ ನನ್ನ ಮಾರ್ಗದರ್ಶನದಲ್ಲಿ ಎಂ.ಫಿಲ್ ಪಡೆದ ಮೊದಲಿಗಳಾಗಿ ಗುರುತಿಸಿಕೊಂಡಾಗ ಧನ್ಯತಾ ಭಾವ ಮೂಡಿತ್ತು. ನಮ್ಮ ಸರಕಾರ ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಅನುಕೂಲತೆಗಳನ್ನು ಒದಗಿಸುತ್ತವೆ. ಹತ್ತಿರದಿಂದ ನೋಡಿದಾಗ ಮಾತ್ರ ಅದರಲ್ಲಿನ ತೊಡಕು ತೊಂದರೆಗಳು ಅರ್ಥವಾಗುತ್ತದೆ. ಅಧಿಕಾರಶಾಹಿ ಮತ್ತು ಸವಲತ್ತುಗಳ ಜವಾಬ್ದಾರಿ ಹೊತ್ತವರು ಆಕೆಗೆ ಸಲ್ಲಬೇಕಾದ ವಿದ್ಯಾರ್ಥಿವೇತನವನ್ನು ನೀಡದೆ ಏನೇನೋ ಕಾರಣಗಳನ್ನು ಹೇಳಿ ಸತಾಯಿಸಿದ್ದರು, ಅವಮಾನಿಸಿದ್ದರು. ಆಕೆ ಅದನ್ನು ನನ್ನ ಜೊತೆ ಹೇಳಿಕೊಂಡಿದ್ದಳು. ಕಛೇರಿಯಲ್ಲಿ ತೂಗು ಹಾಕಿದ ಅಂಬೇಡ್ಕರರ ಭಾವಚಿತ್ರವನ್ನು ತೋರಿಸಿ ‘ಈ ಮಹಾನುಭಾವನ ಆಶಯಗಳಿಗೆ ತಕ್ಕಂತೆ ನೀವಿರಬೇಡವೇ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದೆ. ಆಕೆಯ ತೊಡಕು ನಿವಾರಣೆಯಾಯಿತು. ಆದರೆ ಇನ್ನಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ಮಾಡುವ ಶ್ರಮ ಫಲಿಸಲಿಲ್ಲವಲ್ಲ ಎಂಬ ಕೊರಗು ಇದೆ” ಎಂಬ ಮಾತುಗಳು ಈಗಿನ ಜ್ವಲಂತ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ಸಾಹಿತ್ಯ, ಪತ್ರಿಕೆ, ಬಾನುಲಿ, ದೂರದರ್ಶನ, ರಂಗಭೂಮಿ, ಚಲನಚಿತ್ರ, ಸಂಘಟನೆ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡ ವಿದ್ವಾಂಸ ಡಾ. ವಸಂತಕುಮಾರ ಪೆರ್ಲರ ಸಾಧನೆಯ ವಿವರಗಳು ವಿಸ್ತೃತವಾಗಿ ಹರಡಿಕೊಂಡಿವೆ. ವಿ.ಬಿ. ಕುಳಮರ್ವರ ಸಂದರ್ಶನವು ಅಧ್ಯಾಪನ ವೃತ್ತಿಯ ಸಾರ್ಥಕತೆಯ ಕಡೆಗೆ ಬೆಳಕನ್ನು ಬೀರುತ್ತವೆ. ಛಂದಸ್ಸಿನ ಬಳಕೆ ಮತ್ತು ಅದನ್ನು ಸರಿಯಾಗಿ ಬಳಸುವ ವಿಧಾನದೆಡೆಗೆ ಒತ್ತು ಕೊಡುತ್ತದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಮಸ್ಯೆ ಮತ್ತು ಸಾಹಿತ್ಯ ಪ್ರಶಸ್ತಿಗಳ ಕುರಿತು ಕಿವಿಮಾತುಗಳನ್ನು ಹೇಳುತ್ತವೆ. ವೈ. ಸತ್ಯನಾರಾಯಣರು ಸಾಹಿತ್ಯಲೋಕಕ್ಕೆ ಪ್ರವೇಶಿಸಲು ಅವರ ಬಡತನ, ಆರ್ಥಿಕ ಮುಗ್ಗಟ್ಟನ್ನು ಸರಿಪಡಿಸಲು ಸಣ್ಣಪುಟ್ಟ ಉದ್ಯೋಗಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ, ಕಾಸರಗೋಡಿನ ಬಿ.ಇ.ಎಂ. ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಬಳಿಕ ಸಾಹಿತಿಯಾಗಿ ಹೊರಹೊಮ್ಮಿದ ಬಗ್ಗೆ ಬೆಳಕು ಚೆಲ್ಲುತ್ತದೆ. ಪತ್ರಕರ್ತರಾಗಿ, ಸಾಹಿತಿಯಾಗಿ, ತುಳು-ಕನ್ನಡ-ಇಂಗ್ಲೀಷ್ ಭಾಷೆಗಳನ್ನು ದುಡಿಸಿಕೊಂಡ ಜಯರಾಮ ರೈಗಳು ಸಾಂಸ್ಕೃತಿಕ ವಿಲೀನೀಕರಣಕ್ಕೆ ಪ್ರಾಮುಖ್ಯತೆಯನ್ನು ಕೊಡಬಯಸುತ್ತಾರೆ. ಈ ಸಂಕಲನದಲ್ಲಿ ಚರ್ಚೆಗೊಳಗಾದ ಇತರ ವಿದ್ವಾಂಸರು ಭಾಷಾ ಸಂಸ್ಕೃತಿಗಳೆಲ್ಲವೂ ಬೇರೆಯಾಗಿ ಉಳಿದುಕೊಂಡು ಅನನ್ಯತೆಯೊಂದಿಗೆ ಬೆಳೆಯಬೇಕೆಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಬೇರೆಯಾಗಿ ಉಳಿದರೂ ಮೂಲಶ್ರುತಿ ಒಂದೇ ಆಗಿರಬೇಕೆಂದು ಬಯಸಿದವರಿದ್ದಾರೆ.
ಎರಡನೇ ಸಂಚಿಕೆಯ ಸಂಪಾದಕರಾದ ಡಾ. ವಸಂತಕುಮಾರ ಪೆರ್ಲರು ರಮಾನಂದ ಬನಾರಿಯವರ ಬಗ್ಗೆ ಬರೆದ ವಿವರಗಳಲ್ಲಿ ಅವರ ಬಾಲ್ಯ, ಶಿಕ್ಷಣ, ಕೌಟುಂಬಿಕ ವಾತಾವರಣದ ಬಗ್ಗೆ, ತಮಗೆ ಸರಕಾರಿ ವೈದ್ಯರಾಗುವ ಅವಕಾಶವಿದ್ದೂ ಕುಟುಂಬ ವೈದ್ಯರಾಗಿ ಉಳಿಯಲು ನಿರ್ಧರಿಸಿದ ಬಗೆ, ಆಯ್ಕೆಯ ಗೊಂದಲ, ಅದರೆಡೆಯಲ್ಲೂ ವೈದ್ಯಕೀಯ ವೃತ್ತಿಗಷ್ಟೇ ಸೀಮಿತರಾಗಿ ಉಳಿಯದೆ ಕನ್ನಡಪರ ಹೋರಾಟ, ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಬದುಕನ್ನು ಮುಡಿಪಾಗಿಟ್ಟ ರೀತಿಯ ಕುರಿತು ತಿಳಿಯುತ್ತದೆ. ಕಾಸರಗೋಡಿನಲ್ಲಿ ಕನ್ನಡವನ್ನು ಬಳಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ, ಕನ್ನಡದ ಮೇಲೆ ಹಲ್ಲೆಯಾದಾಗ ಹೋರಾಡುವ ಮತ್ತು ಮಹಾಜನ ವರದಿಯ ಅಸ್ತಿತ್ವಕ್ಕಾಗಿ ಸರಕಾರವನ್ನು ಒತ್ತಾಯಿಸುವ ಉದ್ದೇಶವು ಅದರ ಆಶಾವಾದಕ್ಕೆ ಕನ್ನಡಿಯನ್ನು ಹಿಡಿಯುತ್ತದೆ.
ಅರ್ತಿಕಜೆ ಶ್ರೀಕೃಷ್ಣ ಭಟ್ಟರು ಚೆನ್ನೈಯಲ್ಲಿದ್ದುಕೊಂಡು ಖ್ಯಾತ ಸಾಹಿತಿಗಳನ್ನು ಆಹ್ವಾನಿಸಿ ವಿಶೇಷ ಉಪನ್ಯಾಸ, ಕವಿಗೋಷ್ಠಿ ಮತ್ತು ಇತರ ಕಾರ್ಯಕ್ರಮಗಳನ್ನು ಸಂಘಟಿಸಿ ಓರಿಯಂಟಲ್ ಸಂಶೋಧನ ಕೇಂದ್ರ, ‘ಲಹರಿ’ ಮಾಸಪತ್ರಿಕೆಯನ್ನು ಮುನ್ನಡೆಸಿ, ಬಹುಭಾಷಾ ನಿಘಂಟಿನ ಸಹಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅವರು ಬರೆದ ಸಾಹಿತ್ಯ ಕೃತಿಗಳ ಬಗ್ಗೆ ವಿವರಗಳು ಉಲ್ಲೇಖದ ರೂಪದಲ್ಲಿವೆ.
ರಾಧಾಕೃಷ್ಣ ಉಳಿಯತ್ತಡ್ಕರ ಬಗೆಗಿನ ವಿವರಗಳು ಸ್ವವಿಮರ್ಶೆ ಮತ್ತು ಚಿಂತನೆಗಳಿಂದ ಕೂಡಿವೆ. ಅವರ ಕೃತಿಗಳನ್ನು ಕುರಿತ ವಿಮರ್ಶಾತ್ಮಕ ನೋಟ ಅವರ ಕೃತಿಗಳನ್ನು ಬೇರೆಯೇ ದೃಷ್ಟಿಯಲ್ಲಿ ನೋಡಲು ಒತ್ತಾಯಿಸುತ್ತದೆ. ಹೊಟ್ಟೆಪಾಡಿಗಾಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ತಿಲಕನಾಥ ಮಂಜೇಶ್ವರ ಅವರು ತಮ್ಮ ಬದುಕು ಬವಣೆಗಳ ನಡುವೆ ನಡೆಸಿದ ಸಾಹಿತ್ಯ ಸೇವೆ, ಪ್ರತಿಷ್ಠಿತ ‘ತರಂಗ’ ವಾರಪತ್ರಿಕೆಯ ಉಪಸಂಪಾದಕರಾಗುವವರೆಗೂ ಕೊಂಡೊಯ್ದ ಹಾದಿಯ ಸೂಚನೆ ಸಿಗುತ್ತದೆ. ಅದಕ್ಕಿಂತ ಮೊದಲು ಅವರು ‘ಭಾವಗಂಗೋತ್ರಿ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಸಾಹಿತ್ಯ ಸೇವೆಯನ್ನು ನಡೆಸಿದ ಇಣುಕು ನೋಟದೊಂದಿಗೆ ಅವರ ಬರವಣಿಗೆಗಳ ಸಂಕ್ಷಿಪ್ತ ಅವಲೋಕನವಿದೆ. ಸುಕುಮಾರ ಆಲಂಪಾಡಿಯವರು ಜ್ಯೋತಿಷ್ಯದ ಕುರಿತು ನಡೆಸಿದ ಅಧ್ಯಯನ ಬೆರಗುಗೊಳಿಸುತ್ತದೆ. ಸಾಹಿತ್ಯದಲ್ಲಿ ನನ್ನದೇನೂ ಅಂಥ ಕೊಡುಗೆಯಿಲ್ಲ ಎಂಬ ವಿನಯವು ಅವರ ಸಜ್ಜನಿಕೆಯನ್ನು ವ್ಯಕ್ತಪಡಿಸುತ್ತದೆ. ವಿ.ಬಿ ಕುಳಮರ್ವ ಮತ್ತು ಹರೀಶ ಪೆರ್ಲರ ಮಾತುಗಳು ಮತ್ತು ವಿವರಗಳಲ್ಲಿ ಪುನರಾವರ್ತನೆಯಿದ್ದರೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಮೀನಾಕ್ಷಿ ರಾಮಚಂದ್ರರ ಬದುಕಿನ ವಿವರಗಳು ಹೆಣ್ಣಿನ ಬದುಕಿನ ನಿರ್ಣಾಯಕ ಪರಿಸ್ಥಿತಿಯನ್ನು ಬಯಲುಗೊಳಿಸುತ್ತದೆ. “ವಿವಾಹವಾದ ಬಳಿಕ ಪದವಿ ತರಗತಿಗೆ ಸೇರಿದ ಹೊತ್ತಿನಲ್ಲಿ ಗರ್ಭಿಣಿಯಾದೆ. ಹೆರಿಗೆಗೆಂದು ಮಂಗಳೂರಿಗೆ ಕರೆತಂದಿದ್ದರು. ಮೇ 6ಕ್ಕೆ ಹೆರಿಗೆ. 9ನೇ ತಾರೀಕು ಆದರೂ ಹೆರಿಗೆ ಆಗಲಿಲ್ಲ. ಆ ದಿನ ಪರೀಕ್ಷೆ. ಗಂಡ ಧೈರ್ಯ ಮಾಡಿ ಪರೀಕ್ಷೆಗೆ ಕರೆದುಕೊಂಡು ಹೋದರು. ಪರೀಕ್ಷೆ ಆದ ಬಳಿಕ 12ಕ್ಕೆ ಹೆರಿಗೆ. ಮಗುವನ್ನು ಮಡಿಲಲ್ಲಿಟ್ಟುಕೊಂಡು ಪರೀಕ್ಷೆ ಬರೆದೆ.” ಈ ಮನಸ್ಥಿತಿಯನ್ನು ವಿವರಿಸುವುದು ಮಾತಿಗೆ ನಿಲುಕದ ವಿಚಾರವಾಗಿದೆ. ಇದು ಹೆಣ್ಣೊಬ್ಬಳು ಮಾತ್ರ ಅನುಭವಿಸಬಲ್ಲ ಕಷ್ಟವಾದರೆ ಗಣೇಶ ಕಾಸರಗೋಡು ಅವರದ್ದು ಗಂಡಸು ಮಾತ್ರ ಅನುಭವಿಸಬಲ್ಲ ಕಷ್ಟಗಳು. ಒಬ್ಬ ಗಂಡನಾಗಿ ಅನುಭವಿಸಿದ ತಲ್ಲಣ. ಮದುವೆಯಾದರೂ ಮನೆ ಇಲ್ಲದಿರುವ ಪರಿಸ್ಥಿತಿ. ಉಡುಗೊರೆಯಾಗಿ ಸಿಕ್ಕಿದ್ದು ಅಡುಗೆಗೆ ನೆರವಾಗುವಂಥ ನಿತ್ಯೋಪಯೋಗಿ ವಸ್ತುಗಳು. ಉದ್ಯೋಗಕ್ಕಾಗಿ ಮಾಡಿದ ಹೋರಾಟ, ಸಾಲಸೋಲ, ಪ್ರತಿಭೆಯನ್ನು ಬಳಸಿಕೊಂಡು ಮೋಸ ಮಾಡಿದ ಚಲನಚಿತ್ರ ನಿರ್ದೇಶಕರು, ಅನುಭವಿಸಿದ ಕಷ್ಟಗಳು ಮನಮುಟ್ಟುವಂತಿದೆ. ಪಾರ್ವತಿ ಜಿ. ಐತಾಳರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಪ್ರತಿಷ್ಠಿತ ವೈದ್ಯರೊಬ್ಬರು ತಮ್ಮ ಆತ್ಮಕತೆಯನ್ನು ಅವರಿಂದ ಬೇರೆ ಭಾಷೆಗೆ ಅನುವಾದಿಸಿ, ಅವರ ಹೆಸರು ಹಾಕದೆ ಪ್ರಕಟಿಸಿ ಅವಮಾನಿಸಿದ ಪ್ರಸಂಗ ಇಲ್ಲಿದೆ. ಇಂಥ ಸಂದರ್ಭದಲ್ಲಿ ಧೈರ್ಯ ಕಳೆದುಕೊಂಡು ತಮ್ಮ ಸೃಜನಶೀಲತೆಯನ್ನು ಮೊಟಕುಗೊಳಿಸುವವರ ಉದಾಹರಣೆಯೇ ಹೆಚ್ಚು. ಆದರೆ ಇವರು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅನುಭವದ ಕುಲುಮೆಯಲ್ಲಿ ಬೆಂದು ಹೊರಬಂದಿದ್ದಾರೆ.
ಪುಸ್ತಕಗಳನ್ನು ಪ್ರಕಟಿಸಿದವರನ್ನಷ್ಟೇ ಸಾಧಕರೆಂದುಕೊಳ್ಳದೆ ನರಸಿಂಗರಾವ್ ಅಂಥ ಮುತ್ಸದ್ಧಿಯನ್ನು ಬರಹದ ರೂಪದಲ್ಲಿ ಹಿಡಿದಿಟ್ಟದ್ದು ಗಮನಾರ್ಹವಾಗಿದೆ. ಅವರ ಓದಿನ ವ್ಯಾಪ್ತಿಯ ಬಗ್ಗೆ ಬೆರಗು ಮೂಡಿಸುವ ವಿವರಗಳು ಸಿಗುತ್ತವೆ. ಇತಿಹಾಸ ಸಂಶೋಧಕ ಮೊಹಮ್ಮದ್ ಅವರು ತಮ್ಮ ಜಾತ್ಯತೀತ ನೆಲೆಯ ಮೂಲಕ ಅಯೋಧ್ಯಾ ವಿವಾದಕ್ಕೆ ಇತಿಶ್ರೀ ಹಾಡಿದಾಗ ‘ನಾನೊಬ್ಬ ಭಾರತೀಯ’ ಎಂಬ ಅವರ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿದ ನರಸಿಂಗ ರಾವ್ ಅವರಿಂದ ಆ ಪುಸ್ತಕದ ತಿರುಳನ್ನೂ ವಿವರಿಸುವಂತೆ ಮಾಡಿದ್ದರೆ ಈ ಪುಸ್ತಕವು ಕೋಮು ಸಾಮರಸ್ಯದ ಮಜಲನ್ನು ಮಟ್ಟಿದಂತಾಗುತ್ತಿತ್ತು.
ಭಾಷಾವಾರು ಪ್ರಾಂತ್ಯ ವಿಂಗಡಣೆಯ ಹೊತ್ತಿನಲ್ಲಿ ಬಿದ್ದ ಬೆಂಕಿ ಕಾಸರಗೋಡಿನ ಕನ್ನಡಿಗರನ್ನು ಇವತ್ತಿಗೂ ಸುಡುತ್ತಿದೆ. ಅದರೊಳಗೆ ಸಿಲುಕಿ ಬೇಯುತ್ತಲೇ ಕನ್ನಡ ನುಡಿ, ಗಡಿ ಗುಡಿಗಳನ್ನು ಕಾಯುತ್ತಾ ಕನ್ನಡವನ್ನು ಉಳಿಸಿ ಬೆಳೆಸಿದ ಪರಂಪರೆಯನ್ನು ಇಲ್ಲಿ ಕಾಣುತ್ತೇವೆ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದು ಅಲ್ಲೇ ನೆಲೆಯೂರಿದವರು, ಬೇರೆಡೆಗಳಲ್ಲಿ ಹುಟ್ಟಿ ಕಾಸರಗೋಡಿನಲ್ಲಿ ನೆಲೆಸಿ ಕೊಡುಗೆಗಳನ್ನಿತ್ತವರು, ಕಾಸರಗೋಡಿನಲ್ಲಿ ಜನಿಸಿ ಪರವೂರಿನಲ್ಲಿ ಸಾಧನೆ ಮಾಡಿದವರನ್ನು ಜಾತಿ, ಮತ, ಧರ್ಮ, ಪಕ್ಷ, ಪಂಗಡಗಳೆಂಬ ಭೇದವಿಲ್ಲದೆ ಒಂದೇ ತಂತುವಿನಲ್ಲಿ ಬೆಸೆಯಲಾಗಿದೆ. ಎರಡು ಸಂಚಿಕೆಗಳಲ್ಲಿ ಪ್ರಶ್ನಾವಳಿಗಳ ಮೂಲಕ ಸಾಧಕರ ಸತ್ವವನ್ನು ಹೊರ ತೆಗೆದ ಸಂಪಾದಕರು ಬೇರೆಯಾಗಿದ್ದರೂ ಅವರು ಕೇಳಿದ ಪ್ರಶ್ನೆಗಳ ಮೂಲಸ್ರೋತ ಒಂದೇ ಆಗಿದೆ. ಬನಾರಿಯವರ ಪ್ರಶ್ನೆ ಮತ್ತು ಉತ್ತರಗಳು ವಿಸ್ತಾರವನ್ನು ಬಯಸಿದರೆ ವಸಂತಕುಮಾರರ ಪ್ರಶ್ನೋತ್ತರಗಳು ಹ್ರಸ್ವ ಮತ್ತು ಸಂಕ್ಷಿಪತ್ತೆಯ ಕಡೆಗೆ ಒಲಿದಿವೆ. ಹುಟ್ಟೂರು, ಬಾಲ್ಯ, ಶಿಕ್ಷಣ, ಸಾಧನೆ, ಬದುಕಿನಲ್ಲಿ ಮರೆಯಲಾಗದ ಘಟನೆಗಳು, ಕಾಸರಗೋಡಿನ ಭೌಗೋಳಿಕ ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಕನ್ನಡದ ಇತ್ತೀಚಿನ ಸ್ಥಿತಿಗತಿಗಳನ್ನು ಒಳಗೊಳ್ಳುವಂಥ ಪ್ರಶ್ನೆಗಳನ್ನೇ ಎಲ್ಲರಿಗೆ ಕೇಳಿದ್ದರೂ ಹುಟ್ಟೂರಿನ ಹೃದ್ಯವಾದ ಬಣ್ಣನೆ, ಬದುಕಿನ ಬವಣೆಗಳು ಮತ್ತು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿದ ಮಾರ್ಗಸೂಚಿಗಳೂ ಸೇರಿದಂತೆ ಪ್ರತಿಯೊಬ್ಬನ ಅನುಭವಗಳೂ ಬೇರೆಯಾಗಿರುವುದರಿಂದ ಉತ್ತರದಲ್ಲಿ ಏಕತಾನತೆಯು ಕಾಡುವುದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಬಗ್ಗೆ ಬರೆದಿರುವುದರಿಂದ ಕೃತಿಯಲ್ಲಿ ವೈವಿಧ್ಯತೆಯಿದೆ. ವಿವರಗಳು ಮಾತುಕತೆಯ ರೂಪದಲ್ಲಿರುವುದರಿಂದ ಸಹಜವಾಗಿಯೇ ಹಗುರತ್ವ ಬಂದಿದ್ದರೂ ಬಿಗಿಯಾದ ಬರವಣಿಗೆಯ ಮೂಲಕ ಮೂಡಿಬಂದಿರುವ ವಿಚಾರಗಳನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಿಂದಿನ ತಲೆಮಾರಿನ ಊರು, ನಿಸರ್ಗದ ಚಿತ್ರಣ, ಅಳಿದ ವೈಭವದ ಕುರುಹುಗಳು ಕಾಣಸಿಗುತ್ತವೆ. ಇವರ ಬದುಕು ವಿದ್ಯಾರ್ಥಿಗಳ ಪಾಲಿಗೆ ಉತ್ತಮ ಸಂದೇಶವಾಗಿದೆ. ಈಗಾಗಲೇ ಆತ್ಮಕತೆಯನ್ನು ಹೊರತಂದ ಹರೀಶ್ ಪೆರ್ಲ ಮತ್ತು ಪಾರ್ವತಿ ಜಿ. ಐತಾಳರನ್ನು ಹೊರತುಪಡಿಸಿದ ಸಾಧಕರಿಗೆ ಈ ಸಂದರ್ಶನವನ್ನು ವಿಸ್ತರಿಸಿಕೊಂಡು ಆತ್ಮಕತೆಯನ್ನಾಗಿಸುವ ಅವಕಾಶವು ತೆರೆದುಕೊಳ್ಳುತ್ತದೆ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.