ಜೀಜೀಯವರ ಕವಿತೆಗಳೆಂದರೆ ಸೂಜಿಯಂತೆ. ಸೂಜಿ ಸಣ್ಣದಾದರೂ ಅದರ ಗುಣ ದೊಡ್ಡದು. ಸೂಜಿ ಇರುವುದು ಚುಚ್ಚುವುದಕ್ಕಲ್ಲ. ಹೊಲಿದು ಒಂದು ಮಾಡುವುದಕ್ಕೆ. ಅಂತಹ, ಒಂದು ಮಾಡುವ ಗುಣ- ಒಂದಾಗಿಸುವ ಗುಣ- ಒಟ್ಟುಗೂಡಿಸುವ ಗುಣ ಜೀ ಜೀಯವರ ಕವಿತೆಗಳಿಗಿವೆ. ಕಾಂತೆಯನ್ನು ಕವಿತೆಯಾಗಿ ಕಂಡಾಗ ಸಂಸಾರ ತುಂಡಾಗದೆ ಯಾವತ್ತಿಗೂ ಒಂದಾಗಿಯೇ ಇರುವುದಂತೂ ಸತ್ಯ. ಅಂತಹ ಪರಮ ಸತ್ಯವನ್ನು ಅರಿತುಕೊಂಡ ಗಣೇಶ ಪ್ರಸಾದ್ ಜೀ ಅವರು ಕಾಂತೆಯಲ್ಲಿ ಕವಿತೆ ಕಾಣುತ್ತಾರೆ, ಕವಿತೆಯಲ್ಲಿ ಕಾಂತೆಯನ್ನು ಕಾಣುತ್ತಾರೆ. ಇಂತಹ ಕಾಣ್ಕೆಗಳು ಸಿಗುವುದು ಬದುಕನ್ನು ಚೆಲುವಾಗಿಸಿಕೊಂಡಾಗ.
ಮುದ್ದು ಮುದ್ದಾದ ಮುದ್ದಣ ಕಾಂತೆಯನ್ನು (ಮನೋರಮೆಯನ್ನು) ತನ್ನ ಜೊತೆ ಕುಳ್ಳಿರಿಸಿಕೊಂಡು ಗದ್ಯದಲ್ಲಿ ಕಥೆ ಹೇಳುತ್ತೇನೆ ಎನ್ನುತ್ತಾ, ಗದ್ಯವನ್ನೇ ಕಾವ್ಯವಾಗಿಸಿದ ಮಹನೀಯ. ಜೀ ಜೀ ಯವರು ಕಾಂತೆಯನ್ನು ತನ್ನ ಜೊತೆಗಿರಿಸಿಕೊಂಡು ಕವಿತೆಯನ್ನು ಕಂಡುಕೊಂಡವರು. ಹಾಗಾಗಿ ಇಲ್ಲಿ ಕಾ0ತೆಯಲ್ಲಿ ಕವಿತೆಯೂ, ಕವಿತೆಯಲ್ಲಿ ಕಾಂತೆಯೂ ಇಡೀ ಸಂಕಲನದ ಬರಹಗಳಲ್ಲಿ ಕಾಣುತ್ತಿರುವುದು ವಿಶೇಷವಾಗಿದೆ. ಕಾಂತೆ ಮತ್ತು ಕವಿತೆ ಎರಡು ಸಮಾನ ಭಾವವಾಗಿ ಒಂದಕ್ಕೊಂದು ಮಿಳಿತಗೊಂಡು ಇಲ್ಲಿನ ಸಾಲುಗಳಲ್ಲಿ ಪ್ರತಿಬಿಂಬಿಸುತ್ತಿರುವುದು ಕವಿ ದೃಷ್ಟಿಯ ಒಂದು ಅನನ್ಯ ನೋಟವೇ ಆಗಿದೆ. ಜೀ ಜೀ ಯವರ ದೃಷ್ಟಿಯೇ ಹಾಗೆ, ಬಹಳ ಸೂಕ್ಷ್ಮವಾದುದು ಮತ್ತು ಗುಣ ಗ್ರಾಹಿಯಾದುದು. ಹಾಗಾಗಿ ಅವರಿಗೆ ಕಾಂತೆಯಲ್ಲಿ ಕವಿತೆಯೂ ಕವಿತೆಯಲ್ಲಿ ಕಾಂತೆಯೂ ಕಾಣುತ್ತದೆ ಮತ್ತು ಎಲ್ಲೂ ವಕ್ರತೆ ಕಾಣುವುದಿಲ್ಲ. ಎಲ್ಲದರಲ್ಲೂ ಚೆಲುವು ಚೆಂದವೇ ಚೆಲ್ಲಾಟವಾಡುತ್ತಿದೆ.
ಕಾಂತತೆ, ಎಂದರೆ ಆಕರ್ಷಿಸುವ ಗುಣವನ್ನು ಹೊಂದಿರುವುದು. ಗಂಡನ್ನು ಆಕರ್ಷಿಸುವ ಗುಣ ಹೆಣ್ಣಿನಲ್ಲಿರುವುದರಿಂದ ಆಕೆಯನ್ನು ‘ಕಾಂತೆ’ ಎನ್ನಲಾಗಿದೆ. ಕಾಂತೆ ಆಕರ್ಷಿಸಿ ಆವರಿಸಿಕೊಳ್ಳುವಂತೆ ಕವಿತೆಯು ಮನಸ್ಸನ್ನು ಆಕರ್ಷಿಸುತ್ತದೆ ಮತ್ತು ಆವರಿಸಿಕೊಳ್ಳುತ್ತದೆ. ಹಾಗಾಗಿ ಇಲ್ಲಿನ ಕವಿಗೆ ಕಾಂತೆ ಮತ್ತು ಕವಿತೆ ಸಮಾನವಾಗಿ ಕಾಣುತ್ತಾರೆ.
ಓ ನನ್ನ ನೀರೇ…
ನೀರು ನೀನು.
ಮೀನು ನಾನು.
ನೀನಿಲ್ಲದೆ, ನಾ
ಹೇಗೆ ಬದುಕಿಯೇನು?
ಎಂಬಲ್ಲಿ ಕವಿತೆಯು ಇದೆ. ಕಾಂತೆಯೂ ಇದ್ದಾಳೆ. ಹೆಣ್ಣಿಲ್ಲದೆ ಗಂಡಿಗೆ ಅಸ್ತಿತ್ವ ಇಲ್ಲ. ಕವಿತೆ ಇಲ್ಲದಿದ್ದರೆ ಕವಿಯೂ ಬಾಳಲಾರ. ಎಂಥ ವಿಚಾರ ಪೂರ್ಣ ನೋಟ ಈ ಸಾಲುಗಳಲ್ಲಿ ಅಡಕವಾಗಿದೆಯಲ್ಲವೇ?
ಕವಿ ಕಲ್ಪನೆ ಎಂಬುದು ಹೇಗಿರುತ್ತದೆ ಎಂಬುದಕ್ಕೆ ಈ ಕವನದ ಸಾಲುಗಳನ್ನು ಓದಿ –
ನಲ್ಲ ನಲ್ಲೆಯರಂತೆ
ಇರುಳು ಮತ್ತು ಹಗಲು
ಬಿಗಿದಪ್ಪಿ ಜೊತೆ ಜೊತೆಯಾಗಿ
ಮಲಗಿ ಉರುಳುತ್ತಿರಲು
ಆಗುವುದು ರಾತ್ರಿ ಹಗಲು
ಹಗಲ ಮೇಲಿರಲು ಇರುಳು
ಜಗಕ್ಕೆಲ್ಲ ಕತ್ತಲು.
ಇರುಳು ಮೇಲೆ ಬಂದಿತೋ ಹಗಲು
ಬೆಳಕು ಸುತ್ತ ಮುತ್ತಲೂ!
ಅಬ್ಬಬ್ಬಾ… ಎಂತಹ ಹೊಂದಾಣಿಕೆ…. ಈ ಜಗದಲ್ಲೂ! ಇಂತಹದೇ ಹೊಂದಾಣಿಕೆ ಸತಿ-ಪತಿಯಲ್ಲೂ ಇದ್ದರೆ ಆಹಾ… ಬಾಳು ಎಂಥ ಸುಂದರ. ಇಂತಲ್ಲಿ ನಾ ಬೇರೆ ನೀ ಬೇರೆ ಅನ್ನುವುದೇ ಇಲ್ಲ. ಇಬ್ಬರೂ ಮುಖ್ಯವೇ. ‘ಹದಿಬದೆಯ ಧರ್ಮ’ ಸಾಂಗತ್ಯ ಕೃತಿಯನ್ನು ಬರೆದ ಸಂಚಯ ಹೊನ್ನಮ್ಮನೂ ತನ್ನ ಪುಟ್ಟ ಪುಟ್ಟ ರಚನೆಗಳಲ್ಲಿ ಸತಿ-ಪತಿ ಧರ್ಮಗಳನ್ನು ವಿವರಿಸುತ್ತ, ಗಂಡು-ಹೆಣ್ಣಿನ ಸಮರಸದ, ಸಾಂಗತ್ಯದ ಬದುಕಿನ ಮಹತ್ವವನ್ನು ಹೇಳುತ್ತಾಳೆ. ಜೀ ಜೀ ಯವರೂ ಅಂತಹ ಸಮರಸದ ಸಾಂಗತ್ಯದ ಗಂಡು ಹೆಣ್ಣಿನ ಬದುಕನ್ನು ಇಡೀ ಪ್ರಕೃತಿಯಲ್ಲೇ ಕಂಡಿರುವುದು ಮಧುರವೆನಿಸುತ್ತದೆ. ಸಂಸಾರದಲ್ಲಿ ಪ್ರತಿಯೊಬ್ಬರ ಕಾಂತೆಯು ಕವಿತೆಯಾದರೆ ಬದುಕು ಎಷ್ಟೊಂದು ಸುಂದರವಾದೀತು ಅಲ್ಲವೇ?
ಇಲ್ಲಿಯ ಬರಹದ ಸಾಲುಗಳಲ್ಲಿ ಒಂದು ಮಿತಿ ಇಟ್ಟುಕೊಂಡು ಎಲ್ಲೂ ಅತಿ ಗೆ ಹೋಗದೆ ಮತಿಗೆ ಒಂದಷ್ಟು ಪ್ರೀತಿಯನ್ನು ತುಂಬುವ ಕೆಲಸವನ್ನು ಕವಿ ಜೀ ಜೀಯವರು ಬಹಳ ಕೌಶಲ್ಯ ಪೂರ್ಣವಾಗಿ, ಶಿಲ್ಪಿಯೊಬ್ಬ ಶಿಲಾಮೂರ್ತಿಯನ್ನು ನಯ- ನಾಜೂಕಿನಿಂದ ಕೆತ್ತಿದಂತೆ ಶಬ್ದ ಶಿಲ್ಪಗಳನ್ನು ಕಡೆದು ನಮ್ಮ ಮುಂದೆ ಇಟ್ಟಿದ್ದಾರೆ. ಕಾವ್ಯವೆಂದರೆ ಹಾಗೆ, ಎಷ್ಟು ಬೇಕೋ ಅಷ್ಟೇ. ಅದರ ಆಚೆಗೆ ಶಬ್ದಗಳು ಹರಿದರೆ ಕಾವ್ಯಮಯವಾಗುವ ಬದಲು ಕಾವ್ಯ ಮಾಯವಾಗುವ ಅಪಾಯಗಳು ಹೆಚ್ಚು. ಹಾಗಾಗಿ ಇದು ಕಿರು ಕಾವ್ಯಗಳಲ್ಲ ಎನ್ನುವುದು ನನ್ನ ಅಂಬೋಣ. ಯಾಕೆಂದರೆ ಅರ್ಥವಿಸ್ತಾರಕ್ಕೆ ತೆರೆದುಕೊಳ್ಳುವ ಗುಣವುಳ್ಳ ಇವುಗಳು ಬಿ೦ದುವಿನಿಂದ ಸಿಂಧುವಾಗುತ್ತದೆ. ಹಾಗಾಗಿ ಕಾಂತೆ ಕವಿತೆಯ ಕವನಗಳು ಒಂದು ನೆಲೆಗೆ ಮಾತ್ರ ಸಲ್ಲದೆ, ಪ್ರೀತಿ ಪ್ರೇಮ ಶೃಂಗಾರ ಭಾವಗಳಿಗೆ ಮಾತ್ರ ನಿಲ್ಲದೆ, ಪ್ರೀತಿ ಪ್ರೇಮ ಶೃಂಗಾರದ ಆಶಯಗಳನ್ನು ಮೀರಿ, ಅದರಾಚೆಯ ಕಾಣ್ಕೆಗಳಿಗೆ ಕವಿತೆ ಕಣ್ಣಾಗುತ್ತದೆ.

ವಿಮರ್ಶಕರು : ರಘು ಇಡ್ಕಿದು