ಪ್ರಸ್ತುತ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಚನ್ನಪ್ಪ ಕಟ್ಟಿಯವರ ಸಮಗ್ರ ಕಥೆಗಳ ಸಂಕಲನ ‘ಕಥಾ ಕಿನ್ನುರಿ’ ಅವರ ಅದ್ಬುತ ಕಥನ ಶೈಲಿಗೆ ಸಾಕ್ಷಿಯಾಗಿ ನಿಲ್ಲುವ, ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಕೃತಿ. ಕಥೆ, ಕಾವ್ಯ, ಅನುವಾದ, ವಿಮರ್ಶೆ ಮೊದಲಾದ ಹಲವು ಹಲವು ಪ್ರಕಾರಗಳಲ್ಲಿ ಕೈಯಾಡಿಸಿರುವರಾದರೂ ಸಣ್ಣ ಕಥೆಗಳಲ್ಲಿ ಅವರ ಬರವಣಿಗೆಯ ಪ್ರತಿಭೆ ಹೆಚ್ಚು ಸಶಕ್ತವಾಗಿ ಪ್ರಕಟವಾದಂತೆ ಕಾಣುತ್ತದೆ. ಈ ಕೃತಿಯಲ್ಲಿ ಅವರ ಲೇಖನಿಯಿಂದ ಅನಾಯಾಸವಾಗಿ ಹರಿದು ಬಂದ 24 ಕಥೆಗಳಿವೆ. ಇದು ಈಗಾಗಲೇ ಮೂರು ಸಂಕಲನಗಳಲ್ಲಿ ಪ್ರಕಟವಾಗಿರುವ ಸಮಗ್ರ ಕಥೆಗಳ ಸಂಕಲನ. ಇಲ್ಲಿ ಹೆಚ್ಚಿನವು ಗ್ರಾಮೀಣ ಜನರ ಬದುಕಿನ ಅಗುಹೋಗುಗಳಿಗೆ ಸಂಬಂಧಪಟ್ಟ ಕಥೆಗಳು. ಹಳ್ಳಿಯ ಜನರ ಬದುಕಿನ ಏಳು ಬೀಳುಗಳು, ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳು, ರಾಜಕೀಯ ಒಳಸುಳಿಗಳು, ಹೆಣ್ಣು-ಗಂಡುಗಳ ನಡುವಣ ಪ್ರೇಮ-ದಾಂಪತ್ಯ- ವಿವಾಹೇತರ ಸಂಬಂಧಗಳು, ಅವರ ಮೇಲೆ ಆಧುನಿಕ ನಗರೀಕೃತ ಜೀವನ ಶೈಲಿಯ ಪ್ರಭಾವ ಹಾಗೂ ಪರಿಣಾಮಗಳು- ಮೊದಲಾದ ಪ್ರಸಕ್ತ ವಿದ್ಯಮಾನಗಳು ಸಶಕ್ತವಾಗಿ ಅವರ ಕಥೆಗಳಲ್ಲಿ ಅನಾವರಣಗೊಳ್ಳುತ್ತವೆ.
ಪ್ರಸ್ತುತ ರಾಜಕೀಯ ದೊಂಬರಾಟಗಳು ಬಡವರ ಬದುಕನ್ನು ಹೇಗೆ ಮುಳುಗಿಸುತ್ತವೆ ಎಂಬುದನ್ನು ‘ಮುಳುಗಡೆ’ (ಪು.1-13) ಮನಮುಟ್ಟುವಂತೆ ಚಿತ್ರಿಸಿದರೆ ತನ್ನ ಇಚ್ಛೆಯ ವಿರುದ್ಧ ಅನಿರೀಕ್ಷಿತ ಸನ್ನಿವೇಶಗಳಿಗೆದುರಾಗಿ ಮಠವೊಂದರ ಸ್ವಾಮೀಜಿಯಾಗುವ ಸೂಕ್ಷ್ಮಜ್ಞ ಮನಸ್ಸಿನ ಒಬ್ಬ ವ್ಯಕ್ತಿಯ ಮಾನಸಿಕ ಗೊಂದಲ ಹಾಗೂ ತೊಳಲಾಟ-ತಾಕಲಾಟಗಳನ್ನು ‘ಮೃತ್ಯೋರ್ಮಾ ಅಮೃತಂಗಮಯ’ (ಪು.105-115) ಚಿತ್ರಿಸುತ್ತದೆ. ಮುಗ್ಧ ಮನಸ್ಸಿನ ಶ್ರಮ ಜೀವಿ ಹಳ್ಳಿಗ ಬೀರಪ್ಪನಿಗೆ, ಮೈಗಳ್ಳನಾಗಿ ಆಧುನಿಕ ಬದುಕಿನ ಸೆಳೆತದ ಹಿಂದೆ ಹೋದ ಅವನ ಅಣ್ಣನೇ ಅನ್ಯಾಯ ಮಾಡುವ ಮತ್ತು ನಾಲ್ಕಾಗಿದ್ದ ಕುರಿಗಳನ್ನು ಕಷ್ಟಪಟ್ಟು ದುಡಿದು ನಾನೂರಾಗಿ ಮಾಡುವ ಮತ್ತು ಅಣ್ಣ ಬೇಡವೆಂದು ಬಿಟ್ಟ ಹಳ್ಳಿಯ ಹುಡುಗಿ ಕಲ್ಲಿಯನ್ನು ಮದುವೆಯಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ತಮ್ಮನ ಬಳಿ ಪಾಲು ಕೇಳುವ ಮಾತ್ರವಲ್ಲದೆ ಹೆಂಡತಿಯನ್ನೂ ಕೇಳುವ ಅಣ್ಣನ ಮೃಗೀಯ ಸ್ವಭಾವವು ಎಂಥವರ ಮನಸ್ಸನ್ನೂ ಕರಗಿಸುವಂಥದ್ದು (ಪಾಲು ಪು.14 -24).
ಮಕ್ಕಳಾಗದ ಕಾರಣದಿಂದ ರಕ್ತಸಂಬಂಧಿಯ ಮಗ ರವಿಯನ್ನೇ ದತ್ತು ತೆಗೆದುಕೊಳ್ಳುವ ಸಾಹುಕಾರ್ತಿ ಚಂದ್ರವ್ವ ತನ್ನ ವೃದ್ಧಾಪ್ಯದಲ್ಲಿ ಅವನು ಆಸರೆಯಾಗುತ್ತಾನೆ ಎಂದು ಕನಸು ಕಂಡರೆ ಪಟ್ಟಣಕ್ಕೆ ಹೋಗಿ ಡಾಕ್ಟರಿಕೆ ಕಲಿತ ದತ್ತು ಮಗ ಅವಳಿಂದ ದೂರವಾಗಿ ಆಳು ನಿಂಗ್ಯಾನ ಮಗ ಪಾರ್ಯಾನೇ ಅವಳ ಆಸೆಗಳನ್ನು ಪೂರೈಸುವ ಕಥೆ ‘ಆಳು-ಮಗ’ (ಪು.25-38) ರಕ್ತ ಸಂಬಂಧಗಳಲ್ಲಿ ಇಡುವ ನಂಬಿಕೆ ಅರ್ಥಹೀನವೆಂದು ಹೇಳುತ್ತದೆ. ಶ್ರಮಜೀವನದಲ್ಲಿ ನಂಬಿಕೆಯಿಟ್ಟು ಸದಾ ಕಷ್ಟಪಟ್ಟು ದುಡಿಯುವ ಕಲ್ಲವ್ವಳನ್ನು ಮದುವೆಯಾಗದೆ ಅವಳನ್ನು ನಿರಾಸೆಗೊಳಿಸಿ ಪಟ್ಟಣದ ಹುಡುಗಿಯನ್ನು ಮದುವೆಯಾಗುವ ತಿಪ್ಪಣ್ಣ ಅಲ್ಲಿ ಮೋಸಹೋದ ನಂತರ ಮರಳಿ ಕಲ್ಲವ್ವಳ ಬಳಿಗೆ ಬಂದಾಗ ವೇದಾಂತಿಯಂತೆ ಮಾತನಾಡಿ ಅವನ ತಪ್ಪನ್ನು ಮನ್ನಿಸಿ ಕಲ್ಲವ್ವ ಸ್ವೀಕರಿಸುವ ಸನ್ನಿವೇಶ ಹೃದಯಂಗಮವಾದುದು ‘ಬೆಂಕಿ ಇಲ್ಲದ ಬೆಳಕು’ (ಪು.95-104).
ಅಸೌಖ್ಯತೆಯಿಂದ ನರಳುತ್ತಿದ್ದ ತನ್ನ ಮಗನದೇ ವಯಸ್ಸಿನ ಇನ್ನೊಬ್ಬ ಹುಡುಗ ಚಾಕು ಮಾರಲು ಬಂದು ದೀನನಾಗಿ ಬೇಡಿಕೊಂಡಾಗ ಅವನ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತಿದ್ದರೂ ಹತ್ತು ರೂಪಾಯಿ ಕೊಡಲು ಹಿಂದೆ ಮುಂದೆ ನೋಡಿ ಅವನು ಕೋಮುವಾದಿಯಿರಬಹುದು, ಭಯೋತ್ಪಾದಕನಿರಬಹುದು ಎಂದೆಲ್ಲ ವಿನಾಕಾರಣ ಸಂದೇಹ ಪಡುವ ನಿರೂಪಕ ನಡುಬೀದಿಯಲ್ಲಿ ಆ ಹುಡುಗನ ಕೊಲೆಯಾದಾಗ ತನ್ನ ತಪ್ಪಿಗಾಗಿ ಪರಿತಪಿಸುವ ಕಥೆ ‘ಚಾಕು ಮಾರುವ ಹುಡುಗ’ (ಪು.150-159) ವಸ್ತು ಮತ್ತು ಧ್ವನಿಗಳ ದೃಷ್ಟಿಯಿಂದ ಪೂರ್ತಿ ಭಿನ್ನವಾದುದು.
‘ಏಕತಾರಿ’ (ಪು.255-268) ಕಥೆಯ ಚಂದ್ರವ್ವ ತನ್ನದಲ್ಲದ ತಪ್ಪಿಗಾಗಿ ಕಟ್ಟಿಕೊಂಡ ಗಂಡನಿಂದ ಪರಿತ್ಯಜಿಸಲ್ಪಟ್ಟರೂ ಎದೆಗುಂದದೆ ಬದುಕು ಕಟ್ಟಿಕೊಳ್ಳುವ ದಿಟ್ಟ ಹೆಣ್ಣು. ಹೆಂಡತಿಯನ್ನು ನೋಡಿದರೆ ಅವ್ವನನ್ನು ನೋಡಿದಂತೆ ಆಗುತ್ತದೆ ಎಂಬ ನೆಪವೊಡ್ಡಿ ಅವಳನ್ನು ಕೂಡದೆ ಬೇರೊಬ್ಬ ನಾಟಕದ ಹೆಣ್ಣಿನೊಂದಿಗೆ ಊರೂರು ತಿರುಗಾಡುತ್ತ ಕಳೆಯುವ ಅವಳ ಗಂಡ ಚಂದ್ರಪ್ಪ ಒಬ್ಬ ಕರ್ತವ್ಯಭ್ರಷ್ಟ. ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ಏಕತಾರಿ ಹಿಡಿದು ತತ್ವಪದ ಹಾಡುತ್ತ ತಿರುಗುವ ಸಂತನಾಗುತ್ತಾನೆ ನಿಜ. ಆದರೆ ಜೀವನದುದ್ದಕ್ಕೂ ಏಕಾಂಗಿಯಾಗಿ ಹೋರಾಡುವ ಚಂದ್ರವ್ವ ನುಡಿಸುವ ಏಕತಾರಿಯ ಮುಂದೆ ಅವನು ಏನೂ ಅಲ್ಲ.
‘ಕಥಾಕಿನ್ನುರಿ’ಯ ಎಲ್ಲ ಕಥೆಗಳೂ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಇಷ್ಟವಾಗುತ್ತವೆ. ಸೈದ್ಧಾಂತಿಕವಾಗಿ ಇಂಥದೇ ಪ್ರಕಾರಕ್ಕೆ ಸೇರಿದ ಕಥೆಗಳಿವು ಎಂದು ವರ್ಗೀಕರಿಸುವ ಹಾಗಿಲ್ಲ. ನವ್ಯ, ನವ್ಯೋತ್ತರ, ದಲಿತ-ಬಂಡಾಯಗಳೆಲ್ಲವೂ ಇಲ್ಲಿ ಏಕತ್ರಗೊಂಡಿವೆ. ಹೆಚ್ಚಿನ ಕಥೆಗಳಲ್ಲಿ ಬಾಲ್ಯಕಾಲದ ನೆನಪುಗಳತ್ತ ಜಾರುವ ನಾಯಕರು ನಮಗೆ ಸಿಗುತ್ತಾರೆ.
ರೂಪಕಗಳ ಬಳಕೆಯಂತೂ ಹೇರಳವಾಗಿದೆ. ಕಥೆಗಳ ಕಾಲವು ಹಿಂದಕ್ಕೂ ಮುಂದಕ್ಕೂ ಥಟ್ಟನೆ ನಮಗರಿವಿಲ್ಲದಂತೆ ಬದಲಾಗುತ್ತದೆ. ಅನೇಕ ಕಥೆಗಳು ಬಡವರ, ದಮನಿತರ ಹಾಗೂ ಸ್ತ್ರೀಪರ ಕಾಳಜಿಗಳನ್ನು ಆಳವಾಗಿ ಮತ್ತು ಶಕ್ತಿಯುತವಾಗಿ ವ್ಯಕ್ತ ಪಡಿಸುತ್ತವೆ. ಹೆಣ್ಣು-ಗಂಡುಗಳ ನಡುವಣ ಪ್ರೇಮ-ಕಾಮ ಸಂಬಂಧಗಳ ಸನ್ನಿವೇಶಗಳು ಬಂದಾಗ ಕಥೆಗಾರರ ಲೇಖನಿ ವಹಿಸುವ ಅದ್ಭುತ ಸಂಯಮವು ಅವು ಮನುಷ್ಯ ಸಹಜ ಮತ್ತು ಮನುಷ್ಯನ ನೈತಿಕತೆಯನ್ನು ಅವುಗಳ ಮೂಲಕ ಅಳೆಯುವ ಅಗತ್ಯವಿಲ್ಲ ಎಂಬ ನಿಲುವಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಉತ್ತರ ಕರ್ನಾಟಕದ ಸಾಂಸ್ಕೃತಿಕ ಬದುಕಿಗೆ ಸಂಬಂಧಿಸಿದ ಸಣ್ಣ ಸಣ್ಣ ಸಂಗತಿಗಳು ಕೃತಿಯ ಉದ್ದಕ್ಕೂ ಅವಕಾಶ ಪಡೆದಿವೆ. ಇದು ಉತ್ತರ ಕರ್ನಾಟಕದ ನೆಲ-ಜಲ-ಗಿಡ-ಮರ-ಹಸಿರು ಸಂಕುಲಗಳ ಸಂಕಥನವೆಂದರೆ ತಪ್ಪಾಗಲಾರದು. ಕಥೆಗಳ ವಸ್ತುಗಳು ಆತ್ಯಂತ ಪ್ರಸ್ತುತವಾಗಿದ್ದು ಕಥನ ಶೈಲಿಯೂ ಆಕರ್ಷಕವಾಗಿದೆ.
ಕೃತಿಯ ಆರಂಭದಲ್ಲಿ ಕಥೆಗಳ ಎಲ್ಲ ಸೂಕ್ಷ್ಮಗಳನ್ನು ಆಳದಲ್ಲಿ ಗ್ರಹಿಸಿ ಸವಿಸ್ತಾರವಾಗಿ ಹನ್ನೆರಡು ಪುಟಗಳ ಮುನ್ನುಡಿಯನ್ನು ಬರೆದ ಪ್ರಸಿದ್ಧ ವಿಮರ್ಶಕಿ ಜ.ನಾ. ತೇಜಶ್ರೀ ಅವರು ನಿಜವಾಗಿಯೂ ಅಭಿನಂದನಾರ್ಹರು. ಎಲ್ಲ ಕಥೆಗಳಲ್ಲೂ ಲೇಖಕರು ಬಳಸಿದ ಉತ್ತರ ಕರ್ನಾಟಕದ ಭಾಷೆಯ ಬನಿಯ ಬಗ್ಗೆ ಒಂದು ಮಾತನ್ನು ಇಲ್ಲಿ ಹೇಳಲೇ ಬೇಕು. ಸಂಭಾಷಣೆಗಳಿಗೆ ಬಳಸಿದ ಗ್ರಾಮ್ಯ ಭಾಷೆ ಮಾತ್ರವಲ್ಲದೆ ನಿರೂಪಣೆಯಲ್ಲೂ ಬಳಸಿದ ನೂರಾರು ಪದಗಳು, ನುಡಿಗಟ್ಟುಗಳು ಮತ್ತು ಗಾದೆಮಾತುಗಳು ಕರ್ನಾಟಕದ ಇತರ ಪ್ರದೇಶಗಳ ಜನರಿಗೆ ಪರಿಚಿತವಲ್ಲ. ಉತ್ತರ ಕರ್ನಾಟಕದ ನೆಲ-ಜಲಗಳ ತಾಜಾತನವೇ ಇಲ್ಲಿ ಮೈವೆತ್ತು ಬಂದಂತಿದೆ. ಎಲ್ಲ ಕಥೆಗಳ ಕೊನೆಗೆ ಒಂದು ಪದಕೋಶವನ್ನೆ ಅರ್ಥ-ವಿವರಣೆಗಳ ಸಮೇತ ಕೊಡಬಹುದಿತ್ತು ಅನ್ನುವುದು ಒಂದು ಪ್ರಾಮಾಣಿಕ ಅನ್ನಿಸಿಕೆ.
ಕೃತಿಯ ಹೆಸರು : ಕಥಾ ಕಿನ್ನುರಿ
ಲೇಖಕ : ಚನ್ನಪ್ಪ ಕಟ್ಟಿ
ಪ್ರಕಾಶಕರು : ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ
ಪುಟಗಳು : 329
ಬೆಲೆ : ರೂ.320/-
ವಿಮರ್ಶಕಿ ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕ ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಇವರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡದಲ್ಲಿ ಇಂಗ್ಲೀಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಪ್ರಕಟಿತ ಕೃತಿಗಳು- ‘ಎರಡು ಸೆಲೆ ಒಂದು ನೆಲೆ’ (ಸ್ನೇಹಿತ ಪ್ರೊ. ನಾಗೇಶ ರಾಂಪುರ ಜೊತೆ), ‘ಇಂಡಿಯಾದಲ್ಲಿ’, ‘ನೆನಪುಗಳು ಸಾಯುವುದಿಲ್ಲ’, ‘ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ’ ಮತ್ತು ‘ಮುಳುಗಡೆ ಮತ್ತು ಇತರ ಕತೆಗಳು’, ‘ಬೆಂಕಿ ಇರದ ಬೆಳಕು’, ‘ಏಕತಾರಿ’ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ‘ಬಬಲೇಶ್ವರ ಶಾಂತವೀರ ಪಟ್ಟಾಧ್ಯಕ್ಷರು’, ‘ಇಟಗಿ ಶ್ರೀ ಭೀಮಾಂಬಿಕೆ’ ಎಂಬ ಎರಡು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ‘ಅರಕೇರಿ ಅಮೋಘಸಿದ್ದೇಶ್ವರ’, ‘ಅಮೋಘಸಿದ್ಧ ಪರಂಪರೆ’ (ಮಹಾ ಪ್ರಬಂಧ), ‘ಕುರುಬ ಮಹಿಳೆ’ ಎಂಬ ಸಂಶೋದನಾ ಕೃತಿಗಳನ್ನು ರಚಿಸಿದ್ದಾರೆ. ‘ಸಾರಣೆ’ ಚನ್ನಪ್ಪ ಕಟ್ಟಿ ಅವರ ವಿಮರ್ಶಾ ಕೃತಿ.