ಕವಿತೆಯೆಂದರೆ ಹಾಗೆ ನಿಶ್ಶಬ್ದಕ್ಕೂ ಧ್ವನಿ ನೀಡುವ ಭೋರ್ಗರೆಯುವ ಕಡಲು, ಭವದ ಸಾಯುಜ್ಯಕ್ಕೆ ಉರಿವ ಹಣತೆ ಎನ್ನುವ ಕವಯಿತ್ರಿ ಜಯಶ್ರೀ ಬಿ. ಕದ್ರಿಯವರ ಕವಿತೆಗಳಲ್ಲಿ ಅವರು ತಮ್ಮ ಭಟ್ಟಿಯಿಳಿಸಿದ ಭಾವಗಳಿಗೆ ಅಕ್ಷರಗಳ ರೂಪು ಕೊಡುತ್ತಾರಾದರೂ ತಮ್ಮ ಸುತ್ತ ಮುತ್ತ ಕಾಣುವ ಮನಸ್ಸು ಒಲ್ಲದ ವಿಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತ ಪಡಿಸುವಾಗಲೂ ಮೃದುವಾಗಿ ನೆಲಕ್ಕೆ ಬೀಳುವ ಪಾರಿಜಾತದಂತೆ ಪಿಸುಗುಟ್ಟುವ ಧ್ವನಿಯಲ್ಲಿ ಮಾತನಾಡುತ್ತಾರೆ. Unheard melodies are sweeter ಅನ್ನುವಂತೆ ಕೇಳಿಸದ ಸದ್ದುಗಳು, ಮೌನದಾಚೆಯ ಶಬ್ದಗಳು ಮತ್ತು ನಿಶ್ಶಬ್ದಗಳ (ಅಂದರೆ ಸಾಮಾನ್ಯರ ಬಾಹ್ಯೇಂದ್ರಿಯಗಳ ಅರಿವಿಗೆ ಬಾರದ ವಿಚಾರಗಳ) ಬಗ್ಗೆ ಹೆಚ್ಚು ಒಲವಿರುವ ಕವಯಿತ್ರಿ ಈಕೆ. ‘ಶಕುಂತಲೆ’, ‘ಅಡುಗೆ’, ‘ಮರೀಚಿಕೆ’, ‘ವಿಮರ್ಶೆ’ ಮೊದಲಾದ ಅವರ ಅನೇಕ ಕವಿತೆಗಳು ಸ್ತ್ರೀ ಸಂವೇದನೆಯ ಕವಿತೆಗಳು. ಅಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗಾಗುವ ಅನ್ಯಾಯಗಳ ವಿರುದ್ಧ ಏರು ಧ್ವನಿಯಲ್ಲಿ ಏನೂ ಹೇಳದೆ ಬಹಳ ಸೂಚ್ಯವಾಗಿ ಹೆಣ್ಣಿನ ಸಂಕಷ್ಟಗಳನ್ನು ಹೇಳುವ ಅವರು ತಮ್ಮ ಸದ್ದಿಲ್ಲದ ಸಂಯಮದ ಮೂಲಕ ಓದುಗರ ಗಮನ ಸೆಳೆಯುತ್ತಾರೆ.
ಬೆಳಕಿನ ಪೊರೆಯುವ ಗುಣದ ಬಗ್ಗೆ ಇಲ್ಲಿ ಹಲವು ಕವನಗಳಿವೆ. ಬೆಳಕಿಲ್ಲದೆ ಬದುಕಿಲ್ಲ. ಮನುಷ್ಯನ ಒಳಗನ್ನೂ ಹೊರಗನ್ನೂ ಕಾಪಿಡುವುದು ಬೆಳಕು. ಆದರೆ ಬೆಳಕು ನಮ್ಮನ್ನು ಕಾಪಾಡುವಂತೆ ನಮ್ಮೊಳಗೆ ಅದನ್ನು ಸದಾ ಕಾಪಿಟ್ಟುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಆಗಿದೆ ಎನ್ನುತ್ತಾರೆ ಕವಯಿತ್ರಿ.
ಒಳಮನೆಯ ಬೆಳಕಿಗೂ ಒಳಮನದ ಬೆಳಕಿಗೂ/ ಕತ್ತಲೆಯ ನೋಡಿಸುವ ಕಾಯಕ/ ಸೊಡರು ಕಾಡುವ ಗಾಳಿ ಆರಿ ಹೋಗುವ ತೈಲ/ ಪೊರೆಯುವ ಕೈಗಳು ಬೇಕು ಕಿರುಹಣತೆಗೆ/ ಭಾವದೀಪ್ತಿಯ ಬೆಳಕು ಚಿತ್ತಕೋಶದ ತುಂಬ/ ಬೆಳಕಿನಲೆಗಳನು ತುಂಬಿಕೋ ಮನವೆ/ ಕತ್ತಲೆಯ ಕಾವಳದಿ ಕಂಗೆಡುವಾ ಕನಸು/ ಕಾಪಿಡುವ ಕಾಯಕವ ಮುನ್ನಡೆಸು ಬೆಳಕೆ (ಬೆಳಕೇ ಬಾ.ಪುಟ 79)
‘ಕಡತ ವಿಲೇವಾರಿ’ಯಲ್ಲಿ ಆತ್ಮಾವಲೋಕನ ಹಾಗೂ ಆತ್ಮಶುದ್ಧಿಯ ಅಗತ್ಯದ ಸೂಚನೆಯಿದೆ. ಮನೆಯನ್ನು ಸ್ವಚ್ಛಗೊಳಿಸಲು ಹೊರಟ ಕವಯಿತ್ರಿಯ ಆಲೋಚನೆಗಳು ಎಲ್ಲೆಲ್ಲೋ ಹರಿದಾಡುತ್ತವೆ. ಅವು ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುವ ವಿಚಾರಗಳು:
ಸಂದಿಗೊಂದಿಗಳಲ್ಲಿ ಧೂಳು ಕಸಗಳಿವೆ/
ಪುಸ್ತಕದ ಮರೆಯಲ್ಲಿ ಗೆದ್ದಲಿನ ಗೂಡು/
….ಎಲ್ಲ ಮನೆಗಳ ಹಾಗೆ ನನ್ನ ಮನೆಯೂ ಕೂಡ/
ಯಾರ ಮನೆಯಲ್ಲಿಲ್ಲ ಚೂರು ಕಸ ಹೇಳಿ (ಕಡತ ವಿಲೇವಾರಿ.. ಪುಟ 51)
ಕಡು ಕಷ್ಟದ ಪರಿಸ್ಥಿತಿಯಲ್ಲೂ ಕಣ್ಣ ಬೆಳಕು ಉಳಿಯಲಿ ಎನ್ನುವ ಆಶಯ ‘ಕಣ್ಣ ಬೆಳಕೇ ನಿಲ್ಲು’ ಎಂಬ ಕವಿತೆಯಲ್ಲಿ ಇದೆ. ಕನಸು ಕಾಣುವ ವಯಸ್ಸಿನ ಎಳೆಯರ ಪರವಾಗಿ ನಿಲ್ಲುವ ‘ಚೌಕಟ್ಟಿರದ ಕನಸುಗಳು’, ಕಾಲದ ಆಟವನ್ನು ಒಪ್ಪಿಕೊಳ್ಳುವ ‘ಕಾಲ ಕಾಯುವುದಿಲ್ಲ’, ಲೌಕಿಕದೊಂದಿಗೆ ಆರಂಭವಾಗಿ ಅನುಭಾವದ ಮೆಟ್ಟಿಲೇರುವ ‘ಕಳೆದು ಹೋದ ವಸ್ತು’, ಸಾಧಾರಣ ಹೇಳಿಕೆಯಿಂದ ಹೊರಟು ಆಧ್ಯಾತ್ಮಿಕ ಅರಿವಿನತ್ತ ಕೊಂಡೊಯ್ಯುವ ‘ಅರಿವೆ’, ‘ನನ್ನ ಕನಸಿನ ದೇಶ’ದಲ್ಲಿ ಕಾಣುವ ಯುಟೋಪಿಯಾ, ರೂಪಕವೇ ಕವಿತೆಯಾಗಿ ಬರುವ ‘ಆರ್ಕಿಡ್ ಹೂವು’, ‘ಮಿಂಚು ಹುಳ’ ಮೊದಲಾದ ಕವಿತೆಗಳು ಈ ಕವಯಿತ್ರಿಯ ಕಾವ್ಯ ಕಟ್ಟುವ ಶಕ್ತಿಯ ದ್ಯೋತಕಗಳು. ಒಟ್ಟು 68 ಪುಟ್ಟ ಪುಟ್ಟ ಕವಿತೆಗಳುಳ್ಳ ‘ಕೇಳಿಸದ ಸದ್ದುಗಳು’ ಎಂಬ ಈ ಸಂಕಲನವು ನೋಟಕ್ಕೆ ಸರಳವೆಂದು ಕಂಡರೂ ಸಾಕಷ್ಟು ಆಳವಾದ ಅರ್ಥವಿರುವ ಕವನಗಳನ್ನು ಹೊಂದಿದೆ.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕಿ ಡಾ. ಜಯಶ್ರೀ ಬಿ. ಕದ್ರಿ ಇವರು ಮೂಲತಃ ಕೇರಳದ ಗಡಿನಾಡು ಕಾಸರಗೋಡಿನವರು. ವೃತ್ತಿಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿದ್ದು, ಪ್ರಸ್ತುತ ತುಮಕೂರಿನ ಹುಳಿಯಾರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ತೆರೆದಂತೆ ಹಾದಿ’, ‘ಬೆಳಕು ಬಳ್ಳಿ’ ಹಾಗೂ ‘ಕೇಳಿಸದ ಸದ್ದುಗಳು’ ಇವರ ಪ್ರಕಟಿತ ಕೃತಿಗಳು. ಉದಯವಾಣಿ, ತರಂಗ, ಮಂಗಳ, ಮಾನಸ, ಅವಧಿ ಅಂತರ್ಜಾಲ ಪತ್ರಿಕೆ, ಸುರಹೊನ್ನೆ ಇ-ಪತ್ರಿಕೆ ಹೀಗೆ ಇವರ ನೂರ ಐವತ್ತಕ್ಕೂ ಹೆಚ್ಚು ಬರಹಗಳು (ಲೇಖನಗಳು, ಕತೆ, ಕವಿತೆಗಳು) ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ತೆರೆದಂತೆ ಹಾದಿ’ ಕೃತಿಗೆ 2019ನೇ ಸಾಲಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಕೊಡುವ ಶ್ರೇಷ್ಠ ಪುಸ್ತಕ ಪ್ರಶಸ್ತಿ (ವೈಚಾರಿಕ ವಿಭಾಗದಲ್ಲಿ) ಹಾಗೂ 2021ನೇ ಸಾಲಿನ ‘ಅವ್ವ’ ಪುಸ್ತಕ ಪ್ರಶಸ್ತಿ ಲಭಿಸಿರುತ್ತದೆ. ‘ಬೆಳಕು ಬಳ್ಳಿ’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುಸ್ತಕ ಪ್ರಶಸ್ತಿ ಲಭಿಸುತ್ತದೆ.