ಮಂಜೇಶ್ವರದ ಕೋಳ್ಯೂರಿನಲ್ಲಿ ಹುಟ್ಟಿ, ಕಾರ್ಕಳದ ಕಾಂತಾವರದಲ್ಲಿ ಜನಪ್ರಿಯ ವೈದ್ಯರಾಗಿ ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳು, ಹಲವಾರು ಕತೆ ಮತ್ತು ಕವನ ಸಂಕಲನಗಳನ್ನು ಪ್ರಕಟಿಸುವುದರೊಂದಿಗೆ ಸಾಹಿತ್ಯ ಸಂಘಟಕರಾಗಿಯೂ ಹೆಸರುವಾಸಿಯಾಗಿರುವ ಡಾ. ನಾ. ಮೊಗಸಾಲೆಯವರ ಇತ್ತೀಚಿನ ಕೃತಿ ‘ಕೊಪ್ಪರಿಗೆ ಮನೆ’. ಇದರಲ್ಲಿ 1870ರಿಂದ 1930ನೇ ಇಸವಿಯೊಳಗಿನ ಮಂಜೇಶ್ವರ ಪರಿಸರವನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಚರಿತ್ರೆ ಮುಚ್ಚಿಹಾಕಿದ ನಮ್ಮ ಹಿರೀಕರ ಸಚ್ಚರಿತ್ರೆಗಳು ಇಲ್ಲಿ ಅಡಗಿವೆ. ನಮ್ಮ ಪೂರ್ವಜರು ದುಷ್ಟರೆಂದೂ, ಹಿಂಸಕರೆಂದೂ ಹೇಳುವ ಸುಳ್ಳು ಸುದ್ದಿಗೆ ಈ ಕೃತಿ ಸಡ್ಡು ಹೊಡೆದಿದೆ.
ಹಿಂದಿನ ಕಾಲದಲ್ಲಿ ಪಟೇಲಿಕೆ ನೋಡುವ ಹತ್ತಾರು ಮನೆತನಗಳಿದ್ದುವು. ಮಣ್ಣಿನ ಸಂಸ್ಕೃತಿಯಾದ ಅಳಿಯಕಟ್ಟು ಹಾಗೂ ಮಕ್ಕಳ ಕಟ್ಟು ರೂಢಿಯಲ್ಲಿತ್ತು. ಎಲ್ಲೆಲ್ಲೂ ಕಾಡು. ಅಲ್ಲಲ್ಲಿ ಸಾಹಸದಿಂದ ನಿರ್ಮಿಸಿದ ಕೃಷಿ ಭೂಮಿ. ಅಂಥ ಪರಿಸರದಲ್ಲಿ ಹೆಸರಾಂತ ಕೊಪ್ಪರಿಗೆ ಮನೆ. ಕ್ರೂರ ಪ್ರಾಣಿಗಳಿಂದ ರಕ್ಷಣೆಗಾಗಿಯೇ ಮನೆಗಳಿಗೆ ಆ ಗಾತ್ರವಿತ್ತು. ಪುಟ್ಟ ತಗ್ಗಾದ ದಿಡ್ಡಿ ಬಾಗಿಲು, ಒಳಮುಖಿ ಕೋಣೆಗಳು, ಹತ್ತಿರ ಹರಿಯುವ ನೀರ ಸೆಲೆ. ಅಂಥ ಮನೆತನದ ಶಂಕರಭಟ್ಟ ಮತ್ತು ಮಡದಿ ಗಂಗಮ್ಮ. ಅವರಿಗೆ ಮೂವರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಹೆಣ್ಣು ಮಕ್ಕಳಲ್ಲಿ ಒಬ್ಬಳ ಗಂಡ ತೀರಿಕೊಂಡಿದ್ದರೆ, ಇನ್ನೊಬ್ಬಳನ್ನು ಗಂಡ ಬಿಟ್ಟಿದ್ದಾನೆ. ಅಂಥವರ ತಮ್ಮನಾಗಿ ಕೇಶವ.
ಶಂಕರ ಭಟ್ಟರು ಊರ ಪಟೇಲರು. 1870ರ ಆ ಕಾಲಘಟ್ಟದಲ್ಲಿ ಬ್ರಿಟಿಷ್ ಆಳಿಕೆಯ ಬೆಂಗಾವಲಾದ ಶಿರಸ್ತೇದಾರರ ಕೈ ಕೆಳಗಿರುವ ಪಟೇಲರು ತಾನು ಮತ್ತು ಒಕ್ಕಲಿಗರು ಮಾಡಿದ ಕೃಷಿ ವಸ್ತುಗಳನ್ನು ಗೇಣಿಯಾಗಿ ಒಟ್ಟುಗೂಡಿಸಿ ಅಧಿಕಾರಿಗಳಿಗೆ ಒಪ್ಪಿಸಬೇಕು. ವಿಧೇಯರಾಗಿ ನಡಕೊಳ್ಳದಿದ್ದರೆ ಘೋರ ಶಿಕ್ಷೆ. ಒಂದರ್ಥದಲ್ಲಿ ಅಂದಿನ ನಾಯಕರನ್ನು ಸೃಷ್ಟಿಸುವವರು ಸಾದಾ ಪ್ರಜೆಗಳೇ. ಅಧಿಕಾರಶಾಹಿಯ ಕೈಕೆಳಗೆ ಎಲ್ಲರೂ ದಿಗ್ಬಂಧಿತರೇ. ಎಲ್ಲರೂ ಭಟ್ಟರನ್ನು ಮೇಲಿಟ್ಟು ದೇವಾಲಯದ ಜೀರ್ಣೋದ್ಧಾರ ಮಾಡಿಸಿ ತಾಮ್ರದ ಮಾಡು ಹಾಕಿಸುತ್ತಾರೆ. ಸ್ವಯಂ ಸ್ಫೂರ್ತಿಯನ್ನೂ ಸೇರಿಸಿ ಪಟೇಲರು ಪ್ರಭುಗಳ ಹೆಸರಿಗೆ ಆಸ್ತಿ ಅಡವಿಟ್ಟು ಇದ್ದಬದ್ದ ಆಭರಣ ಮಾರಿ- ಹೀಗೇ ನಾಡಿನ ಉದ್ಧಾರ ಆಗುತ್ತದೆನ್ನಿ. ಯಾರನ್ನಾದರೂ ಹೊಗಳಿ ಮೆಚ್ಚಿ ನಡೆಸಿಕೊಂಡರೆ ಯಾವ ಉದ್ಧಾರ ಕಾರ್ಯವೂ ಸಲೀಸೆಂಬುದು ನಿಜ!
ನಾನ್ನೂರು ಪುಟಗಳಿಂದ ಕೂಡಿದ್ದು, ಸಲೀಸಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಒಂದು ಮನೆತನದ ಅಧೋಮುಖಿ ಚಲನೆಯನ್ನು ಸಂಕೇತಿಸುತ್ತದೆ. ಪಟೇಲರ ಉದಾರ ನೀತಿ, ಜನಪ್ರೀತಿ, ವ್ಯವಹಾರದಲ್ಲಿನ ಪ್ರಾಮಾಣಿಕತೆ ಅವರನ್ನು ಮಾನವೀಯತೆಯ ಉತ್ತುಂಕ್ಕೇರಿಸುತ್ತದೆ. ಓದುಗ ಅದರಲ್ಲಿ ಮುಳುಗಿಬಿಡುತ್ತಾನೆ.
ಇದ್ದಕ್ಕಿದ್ದಂತೆ ರೋಗಕ್ಕೆ ಬಲಿಯಾಗುವ ಅಪ್ಪನ ನಂತರ ಮಗ ಕೇಚಣ್ಣ ಅಧಿಕಾರಕ್ಕೆ ಬರುತ್ತಾರೆ. ಅಕ್ಕನ ಆತ್ಮಹತ್ಯೆಯ ನೋವು ಒಂದೆಡೆ ಇದ್ದರೂ ಕೇಶವ ಅಮ್ಮನ ಒತ್ತಾಯ ಮತ್ತು ಸಲಹೆಯಂತೆ ಸೋದರಿಕೆಯ ವಿವಾಹವಾಗುತ್ತಾನೆ. ಚೆಲುವೆ ಮತ್ತು ಸಾಧ್ವಿಯಾದ ಗೌರಿಯೊಂದಿನ ಅವನ ಪ್ರೀತಿ, ಪ್ರೇಮ, ಸರಸ ಮುಂತಾದವುಗಳನ್ನು ಕಾದಂಬರಿಕಾರರು ತೆರೆದಿಟ್ಟ ರೀತಿ ಅನನ್ಯವಾಗಿದೆ. ದುರಂತವೆಂದರೆ ಮತ್ತೆ ಮತ್ತೆ ಗರ್ಭಪಾತಕ್ಕೆ ಒಳಗಾಗುವ ಗೌರಿ ತನ್ನ ಗಂಡನಿಗೇಕೆ ತೊಂದರೆ ಎಂದು ಮುದುಡಿ ಆತ್ಮಹತ್ಯೆಗೆ ಶರಣಾಗುತ್ತಾಳೆ.
ಕಾದಂಬರಿಯಲ್ಲಿ ಹಳ್ಳಿಯ ಘಟನಾವಳಿಗಳ, ಪರಸ್ಪರ ಸಹಕಾರದಿಂದ ನಡೆಯುವ ಜೀರ್ಣೋದ್ಧಾರ, ಧಾರ್ಮಿಕ ಆಚರಣೆ, ದೈವಾರಾಧನೆ, ಭೂತನರ್ತಕನ ಕೊರಳಿಗೆ ಬೆಳ್ಳಿಯ ಆಭರಣಗಳು, ತಲೆಪಟ್ಟಿ, ಬೆಳ್ಳಿಯ ಆಣಿ, ತೋಳಬಂದಿ, ಬಳೆ ಮುಂತಾದುವುಗಳ ಪ್ರಸ್ತಾಪ, ಜನರನ್ನು ಕಾಡುವ ರೋಗರುಜಿನ, ಅದಕ್ಕೆ ಮಂಜೇಶ್ವರದ ಕೇಳು ಪಂಡಿತರ ಶುಶ್ರೂಷೆ, ದವಾಖಾನೆಯ ನೆರವು ಹೀಗೆ ಅನೇಕ ಪ್ರಸ್ತಾಪಗಳಿದ್ದು ಅದೆಲ್ಲ ತುಳುನಾಡಿನ ವೈಭವವನ್ನು ಸೂಚಿಸುತ್ತದೆ.
ಕೇಶವ ಭಟ್ಟರು ಅಪ್ಪನ ಹಾದಿ ಹಿಡಿದು ನಡೆಯುತ್ತಾರೆ. ಊರವರು ಸಜ್ಜುಗೊಳಿಸಿದ ಕಂಬಳಕ್ಕೆ ಮೊದಲ ಬಾರಿಗೆ ಅತಿಥಿಯಾಗುತ್ತಾರೆ. ಮರುಮದುವೆಗೆ ಒಪ್ಪದ ಅವರ ಕಣ್ಣಿಗೆ ಭುಜಬಲಿ ಬಂಗರು ಇಟ್ಟುಕೊಂಡಿದ್ದ ಕಾವೇರಿ ಎಂಬ ಹೆಣ್ಣು ಕಣ್ಣಿಗೆ ಬಿದ್ದು, ಆಕರ್ಷಿತರಾಗಿ ತನ್ನ ಇಂಗಿತವನ್ನು ಅವಳಿಗೆ ತಿಳಿಸಿ ಕರೆಸಿಕೊಳ್ಳುತ್ತಾರೆ. ಆ ಕಾಲಕ್ಕೆ ಇಂಥ ಸಂಬಂಧ ಸಹಜ. ಮುಂದೆ ಸ್ವಾತಂತ್ರ್ಯ ಹೋರಾಟಗಾರನಾದ ಅವಳ ಸಹೋದರನ ಒತ್ತಾಯ, ಕಾವೇರಿ ಕೊಟ್ಟ ಸಲಹೆಗಳನ್ನು ಸ್ವೀಕರಿಸಿ ಪಟೇಲಿಕೆ ತ್ಯಜಿಸಿ ಎಲ್ಲವನ್ನು ಸ್ವಾತಂತ್ರ್ಯಾಂದೋಲನಕ್ಕಾಗಿ ದಾನ ಮಾಡುತ್ತಾರೆ. ಅಲ್ಲಿಗೆ ಮನೆತನ ಅಂತ್ಯ ಕಂಡಂತಾದರೂ ಜಾತಿಭೇದವನ್ನು ಲೆಕ್ಕಿಸದ ಕೇಶವ ಭಟ್ಟರು ಕಾವೇರಿಯಲ್ಲಾದ ಮಕ್ಕಳಿಗೆ ಮನೆತನ ಮತ್ತು ಸೊತ್ತನ್ನು ಒಪ್ಪಿಸುವ ಸ್ಥಿತಿಗೆ ತಲುಪುವುದೇ ಕಾದಂಬರಿಯ ಕೊನೆಯ ನಿಲ್ದಾಣ.
ಈ ಕಾದಂಬರಿಯ ಓದು ರಂಜನೀಯ ಅನುಭವವನ್ನು ನೀಡುತ್ತದೆ. ಸ್ವಾತಂತ್ರ್ಯಪೂರ್ವ ಭಾರತ ಅಥವಾ ನಮ್ಮ ಪರಿಸರ ಕಣ್ಣಿಗೆ ಕಟ್ಟಿದಂತಾಗುತ್ತದೆ. ಮೊಗಸಾಲೆಯವರು ಇಂಥ ಅನೇಕ ಕಾದಂಬರಿಗಳನ್ನು ಬರೆದಿದ್ದು, ಅವರ ಬರೆಹದ ಒಳಗುಟ್ಟು ಅವರದೇ ಮಾತುಗಳಲ್ಲಿ ಹೀಗಿದೆ: “ಒಂದು ವಸ್ತುವೇ ನನ್ನನ್ನು ಆವರಿಸಿ ಕಾಡಿದಾಗ ನಾನು ಅನಿವಾರ್ಯವಾಗಿ ಬರೆದಿದ್ದೇನೆ ಮತ್ತು ಈ ಕಾದಂಬರಿಯೂ ಅದಕ್ಕೆ ಅಪವಾದವಾಗಿ ಇಲ್ಲ!
ಪ್ರೊ. ಪಿ.ಎನ್. ಮೂಡಿತ್ತಾಯ