Subscribe to Updates

    Get the latest creative news from FooBar about art, design and business.

    What's Hot

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು
    Article

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು

    February 21, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಾಲತಿ ಪಟ್ಟಣಶೆಟ್ಟಿಯವರು ಮಕ್ಕಳಿಗಾಗಿ ಬರೆದ ‘ಇಂದಿನ ನಚಿಕೇತ’, ‘ತುಂಬಿ ಬಂದಿತ್ತು’, ‘ಕೊಡಿ ನನ್ನ ಬಾಲ್ಯವ’ ಎಂಬ ನಾಟಕಗಳು ‘ಮಕ್ಕಳ ಮೂರು ನಾಟಕಗಳು’ (2014) ಎಂಬ ಸಂಕಲನದಲ್ಲಿವೆ. ಇವುಗಳು ಆಧುನಿಕ ಶಿಕ್ಷಣ ಪದ್ಧತಿ, ಬದುಕಿನ ರೀತಿನೀತಿ, ನಗರಜೀವನದ ಕಡೆಗಿನ ತುಡಿತ, ಪರಿಸರದಿಂದ ವಿಮುಖವಾಗುತ್ತಿರುವ ಬಾಲ್ಯ, ರೈತರ ಬವಣೆ, ನಿರ್ಲಕ್ಷ್ಯಕ್ಕೊಳಗಾಗುತಿರುವ ವೃದ್ಧರ ಪರಿಸ್ಥಿತಿ ಮುಂತಾದ ಗಂಭೀರ ಸಮಸ್ಯೆಗಳನ್ನು ಒಳಗೊಂಡಿವೆ.

    ಮಗನನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಹಟ ಹಿಡಿದ ಹೆತ್ತವರ ನಡುವೆ ನಲುಗುವ ಮಗನ ಪರಿಸ್ಥಿತಿಯನ್ನು ‘ಇಂದಿನ ನಚಿಕೇತ’ ನಾಟಕವು ಹಿಡಿದಿಡುತ್ತದೆ. ನಿಜಜೀವನದಲ್ಲಿ ಮಾಡಲಾಗದ ಪ್ರತಿರೋಧವನ್ನು ಅವರು ನಾಟಕದಲ್ಲಿ ಅಭಿನಯಿಸುವ ಮೂಲಕ ವ್ಯಕ್ತಪಡಿಸುತ್ತಾರೆ. ಇದು ಅವರ ಸೃಜನಶೀಲ ನೆಲೆಯಾಗಿದ್ದು ನಾಟಕದೊಳಗೆ ನಾಟಕವನ್ನು ಅಳವಡಿಸುವ ರಂಗತಂತ್ರವನ್ನು ಅನುಸರಿಸಿದ್ದಾರೆ. ಇಲ್ಲಿನ ನಾಟಕಗಳಲ್ಲಿ ಮಕ್ಕಳು ಗಂಭೀರ ವಿಷಯವನ್ನು ತಮ್ಮ ವಯೋಮಾನಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಜವಾದರೂ “ನಮ್ಮ ದೇಶದ್ಯಾಗ ಸಾಹಿತ್ಯ, ಕಲೆ, ಸಂಸ್ಕೃತಿಗಳೆಲ್ಲ ಸಾಯಲಿಕತ್ಯಾವ. ಸರಕಾರದವರು, ದೊಡ್ಡ ಶ್ರೀಮಂತರೆಲ್ಲ ಬರೇ ಕಾರಖಾನಿ ಸ್ಥಾಪಿಸ್ತಾ ಹೊಂಟಾರ. ಕಡೇ ಪಕ್ಷ ನಾಲ್ಕ ಕಾರಖಾನಿಗೆ ಒಂದರಂತ ಕಲಾಶಾಲೆ ತೆಗೆಯೋ ಹಂಗ ಅವರ ತಲ್ಯಾಗ ಒಂದಿಷ್ಟು ಬುದ್ಧಿ ಹಾಕಪ್ಪ. ಜನಪ್ರತಿನಿಧಿಗಳು ಇಲೆಕ್ಷನ್ಯಾಗ ಹಾಕೂ ರೊಕ್ಕ ಚಿತ್ರಕಲಾ ಮಹಾವಿದ್ಯಾಲಯ, ನೃತ್ಯ ಮಹಾವಿದ್ಯಾಲಯ, ರಂಗ ತರಬೇತಿ ವಿದ್ಯಾಲಯಗಳನ್ನು ತೆಗೆಯುವ ಬುದ್ಧಿ ಹಾಕಪ್ಪ. ದೇಶ ದೊಡ್ಡ ಪ್ರಗತಿ ಸಾಧಿಸ್ತದ (ಪುಟ 35-36) ಎನ್ನುವಲ್ಲಿ ಲೇಖಕಿಯು ತಮ್ಮ ಧೋರಣೆ ಮತ್ತು ಆದರ್ಶಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಹುಡುಗನ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಿಸಿದ್ದಾರೆ. ತನ್ನನ್ನು ಕಾಡುವ ತಂದೆತಾಯಿಯರಿಂದ ಮುಕ್ತಿಯನ್ನು ಪಡೆಯಲು ಸಾವನ್ನು ದಯಪಾಲಿಸು ಎನ್ನುವ ಮೂಲಕ ಬದುಕಿಗೆ ಬೆನ್ನು ಹಾಕುವ ನಚಿಕೇತನು ವ್ಯಥೆಯ ತಂತಿಯನ್ನು ಮೀಟುತ್ತಾನೆ. ಹಿರಿಯರು ಎಲ್ಲಿ ತಪ್ಪುತ್ತಿದ್ದಾರೆ, ಎಲ್ಲಿ ಎಡವಿದ್ದಾರೆ ಎಂದು ಆತ್ಮಾವಲೋಕವನ್ನು ಮಾಡಲು ಪ್ರೇರಣೆಯನ್ನು ನೀಡುತ್ತಾನೆ. ಮಕ್ಕಳಿಗೂ ಅವರದ್ದೇ ಆದ ಆಶೋತ್ತರಗಳಿದ್ದು ಅದಕ್ಕೆ ತಕ್ಕಂತೆ ಅವರ ಬಾಳು ರೂಪಿಸಲು ಅವಕಾಶವನ್ನು ನೀಡಬೇಕು ಎಂಬ ಆಶಯವನ್ನು ಧ್ವನಿಸುವುದರಲ್ಲಿ ನಾಟಕವು ಯಶಸ್ವಿಯಾಗಿದೆ.

    ‘ಕೊಡಿ ನನ್ನ ಬಾಲ್ಯವ’ ಇದೇ ವಸ್ತುವಿನ ಮತ್ತೊಂದು ಮಗ್ಗುಲನ್ನು ಹುಡುಕಾಡುತ್ತದೆ. ನಚಿಕೇತನ ಜಾಗದಲ್ಲಿರುವ ಶಾಲೂ ಆತನಂತೆ ಭಾವಜೀವಿ. ನಿಸರ್ಗದೊಂದಿಗೆ ಬೆರೆತು ಬಾಳಲು ಬಯಸುವ ಆಕೆಯ ನಡೆಗೆ ವಿರುದ್ಧವಾಗಿ ಪ್ರತಿ ಹೆಜ್ಜೆಗೂ ನಿಯಂತ್ರಣವನ್ನು ಹೇರುವ ತಂದೆತಾಯಿಯರು ವಿರೋಧಿ ನೆಲೆಯಲ್ಲಿರುತ್ತಾರೆ. ಶಾಲು ಮತ್ತು ಪಕ್ಕದ ಮನೆಯ ಬಾಲಕ ರಾಜುವಿನ ಒಡನಾಟವು ವರ್ಗಭೇದದ ವಿರ್ಯಾಯಸವನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಶಾಲೂನ ಹತ್ತಿರ ಮಾತನಾಡಲೆಂದು ಬಂದವನು ‘ನಿಮ್ಮವ್ವ ಅಪ್ಪ ಇದ್ದಾರ?’ ಎನ್ನುವುದು, ‘ಅವರಿಲ್ಲ, ಅಂಜಬ್ಯಾಡ. ಬಾ ಒಳಗ’ ಎಂದು ಉತ್ತರಿಸುವುದು ಆ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಜಾತಿ, ಅಂತಸ್ತುಗಳ ಸೋಂಕಿಲ್ಲದೆ, ಹಕ್ಕಿಗಳಂತೆ ಹಾರಾಡುತ್ತಿದ್ದ, ಸ್ವಚ್ಛ ಭಾವನೆಗಳ ಮುಗ್ಧ, ಮುಕ್ತ ಪರಿಸರದ ಕನಸನ್ನು ತುಂಬುತ್ತದೆ. ಪಟ್ಟಣದ ಜಗತ್ತಿನ ಕಡೆಗೆ ಮನಸ್ಸು ಮಾಡಿದ ಹೆತ್ತವರ ಬಳಿ “ಅಪ್ಪಾ, ನನಗ ಅಜ್ಜ ಅಜ್ಜಿ ನೆನಪಾಗಲಿಕ್ಕ ಹತ್ತೇದ. ಅಲ್ಲಿ ಹೊಲ, ತ್ವಾಟ, ನದಿ, ಬೆಟ್ಟಗುಡ್ಡ ಎಲ್ಲ ಅದ. ಮಾಮನ ಮಕ್ಕಳ ಜೊತೆ ಆಟ ಆಡತೇನಿ. ಗದ್ದಲದ ಊರಾಗ (ಬೆಂಗಳೂರು) ನನ್ನ ಯಾರೂ ಮಾತಾಡಿಸೋದಿಲ್ಲ. ಮಿಕಿಮಿಕಿ ನೋಡಿಕೋತ ಮಂಗ್ಯಾ ಆಗಬೇಕು. ಹಳ್ಳೀಗೆ ಹೋದ್ರ ಇಡೀ ಜನ ಮಾತಾಡಿಸ್ತದ. ಅಜ್ಜ, ಅಜ್ಜಿ, ನೀನು, ಅಪ್ಪ, ಮಾಮ, ಮಾಮಿ, ಅಣ್ಣ ಎಲ್ಲರೂ ಆ ಫೊಟೊದಾಗ ಇದ್ದಾರ. ಅದು ನನಗೆ ಬೇಕಪ್ಪಾ (ಪುಟ 84) ಎನ್ನುವ ಶಾಲೂನ ಮಾತಿನಲ್ಲಿ ಹಳ್ಳಿ ಮತ್ತು ನಗರ ಸಂಸ್ಕೃತಿಯ ನಡುವಿನ ಭಿನ್ನತೆ, ಆ ಜಗತ್ತುಗಳನ್ನು ಲೇಖಕಿಯು ಗ್ರಹಿಸಿದ ರೀತಿ, ಕೂಡಿ ಬಾಳಿದರೆ ಸ್ವರ್ಗಸುಖ ಎಂಬ ಆಶಯಗಳು ವ್ಯಕ್ತವಾಗುತ್ತವೆ.

    ನೀರು ಮತ್ತು ಹೃದಯವಂತಿಕೆಯ ನಡುವಿನ ಸಂಬಂಧವು ಕನ್ನಡ ಸಾಹಿತ್ಯದಲ್ಲಿ ಹೊಸತಲ್ಲ. ‘ತುಂಬಿ ಬಂದಿತ್ತು’ ನಾಟಕದಲ್ಲಿ ನೀರು ಮಾನವೀಯತೆಯ ಪ್ರತೀಕವಾಗಿ ಬೆಳೆಯುವ ರೀತಿಯು ಗಮನಾರ್ಹವಾಗಿದೆ. ನೀರಿನ ಬತ್ತುವಿಕೆ, ಉಕ್ಕುವಿಕೆ, ಬದುಕಿಗೆ ಅದರ ಅನಿವಾರ್ಯತೆಗಳು ಸ್ಫುರಿಸುತ್ತಾ ನೀರು ಎಂಬುದು ಹೃದಯವಂತಿಕೆಯ ದೃಶ್ಯರೂಪವಾಗುತ್ತದೆ. ಹವಾಮಾನದ ವೈಪರೀತ್ಯದಿಂದಾಗಿ ಜಲಮೂಲಗಳು ಒಣಗಿ, ನೀರಿಲ್ಲದೆ ಹಾಹಾಕಾರವೆದ್ದಾಗ ಹಳ್ಳಿಗರು ಗುಳೆ ಹೋಗುತ್ತಾರೆ. ಆಗ ಪುಟ್ಟ ಹುಡುಗಿಯೊಬ್ಬಳು ಕೆರೆಯ ಹೂಳೆತ್ತಿ ನೀರಿನ ಸೆಲೆಯನ್ನು ಜಿನುಗಿಸಿದ ಕತೆ ಇಲ್ಲಿದೆ. ಅನುಕಂಪ ಮತ್ತು ಸಹಮಾನವ ಪ್ರಜ್ಞೆ ಪ್ರಾಣದಾಯಕ ನೀರಿನ ರೂಪದಲ್ಲಿ ಒಸರುತ್ತದೆ.
    ಈ ನಾಟಕಗಳು ಮಕ್ಕಳನ್ನು ಮಾತ್ರವಲ್ಲ ಹೆತ್ತವರನ್ನೂ ಉದ್ದೇಶಿಸಿ ಬರೆದಂತಿದೆ. ಈಗಾಗಲೇ ಭಯಾನಕ ಸ್ಥಿತಿಯಲ್ಲಿ ಬದುಕುತ್ತಿರುವ ನಾವು ಜೀವವಿರೋಧಿ ನೀತಿಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಸಮಯ ಕಳೆದುಹೋಗಿದೆ. ಆದ್ದರಿಂದ ಇಲ್ಲಿ ಮನುಷ್ಯರು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ‘ಇಂದಿನ ನಚಿಕೇತ’ದಲ್ಲಿ ಬ್ರಹ್ಮ, ಮರಳಿ ಕೊಡು ಬಾಲ್ಯ’ದಲ್ಲಿ ಗಂಧರ್ವರು ಮೊದಲಾದ ಅತಿಮಾನವ ಗುಣವನ್ನು ಹೊಂದಿದವರು ಸಮಸ್ಯೆಯನ್ನು ಪರಿಹರಿಸುತ್ತಾರೆ. ಕೇಂದ್ರಪಾತ್ರಗಳಾದ ಮಕ್ಕಳು ಅವರ ಹತ್ತಿರ ತಮ್ಮ ಅಳಲನ್ನು ತೋಡಿಕೊಂಡರೆ ‘ಮರಳಿ ಕೊಡು ಬಾಲ್ಯವ’ ನಾಟಕದ ಶಾಲು ತನ್ನ ಗೊಂಬೆಯ ಹತ್ತಿರ ಗೋಳನ್ನು ಹೇಳಿಕೊಳ್ಳುತ್ತಾಳೆ. ಹಿರಿಯರೆನಿಸಿಕೊಂಡವರು ಕ್ರಿಯಾಶಕ್ತಿ ಮತ್ತು ಸಂವೇದನೆಗಳನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಇದು ಧ್ವನಿಸುತ್ತದೆ. ಹಾಗೆಂದು ಇವುಗಳು ಅತಿ ಗಂಭೀರ ನಾಟಕಗಳಲ್ಲ. ಸರಳ ಭಾಷೆಯ ಮೂಲಕ ಮೂಡಿ ಬಂದಿರುವ ಹಾಡು, ಸಂಗೀತ, ನೃತ್ಯಗಳ ಮೂಲಕ ನಾಟಗಳು ಸುಲಭವಾಗಿ ಸಂವಹನಗೊಳ್ಳುತ್ತವೆ. ಮಕ್ಕಳೇ ಮುಖ್ಯಪಾತ್ರಗಳಾಗಿರುವುದರಿಂದ ಸುತ್ತಲಿನ ಜಗತ್ತನ್ನು ಸಂತಸ, ಲವಲವಕೆ, ಮುಗ್ಧತೆ ಮತ್ತು ವಯೋಸಹಜ ಭಾವನಾತ್ಮಕತೆಯಿಂದ ನೋಡುವ ನಿಷ್ಪಕ್ಷಪಾತ ದೃಷ್ಟಿಕೋನ ದೊರಕಿದೆ. ತಮ್ಮ ನೋವು, ಅನುಮಾನ ಮತ್ತು ಪ್ರತಿಭಟನೆಯನ್ನು ಬಾಲಭಾಷೆಯಲ್ಲಿ ವ್ಯಕ್ತಪಡಿಸುವ ಮಕ್ಕಳ ಮಾತುಗಳು ಧಾರವಾಡದ ಆಡುಮಾತಿನ ಲಯವನ್ನು ಒಳಗೊಂಡಿವೆ.

    ಬಾಲ್ಯವು ಬದುಕಿನಲ್ಲಿ ಅತ್ಯಂತ ಉತ್ಸಾಹ, ಉಲ್ಲಾಸದ ಚಿಲುಮೆ ಚಿಮ್ಮುವ ಭಾಗವಾಗಿದೆ. ಬಾಲ್ಯದಲ್ಲಿ ಮನಸ್ಸು ಮುಗ್ಧವಾಗಿ, ಮುಕ್ತವಾಗಿ ನಿಷ್ಕಳಂಕ ಅಭಿವ್ಯಕ್ತಿಯನ್ನು ಹೊಮ್ಮಿಸುವುದು ಸಹಜ. ಪರಿಮಳವನ್ನು ಬೀರಲಿರುವ ಮೊಗ್ಗು ಮುಂಜಾನೆ ತನ್ನ ಎಸಳುಗಳನ್ನು ತೆರೆಯುವಂತೆ ಬಾಲ್ಯದ ಭಾವನೆಗಳು ವ್ಯಕ್ತಿತ್ವ ವಿಕಾಸದೆಡೆಗೆ ತೆರೆದುಕೊಳ್ಳುತ್ತವೆ. ಆ ಭಾವನೆಗಳನ್ನು ಯಾಂತ್ರಿಕಗೊಳಿಸದೆ, ಆರೋಗ್ಯಕರವಾಗಿ ಪೋಷಿಸುವುದು ಪ್ರಜ್ಞಾವಂತ ಹಿರಿಯರ ಕರ್ತವ್ಯ ಎಂಬುದನ್ನು ಸಾರುವಲ್ಲಿ ಕೃತಿಯ ಹಿರಿಮೆಯಿದೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್
    Next Article ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ
    roovari

    Add Comment Cancel Reply


    Related Posts

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ

    February 21, 2026

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.