ತಮ್ಮ ಮೊದಲ ಕೃತಿಯಾದ ‘ಬಾ ಪರೀಕ್ಷೆಗೆ’ ಎಂಬ ಸಂಕಲನದಿಂದ ತೊಡಗಿ ‘ಮೌನ ಕರಗುವ ಹೊತ್ತು’ ಎಂಬ ಕವನ ಸಂಗ್ರಹಗಳಿಂದ ಆಯ್ದ 103 ಕವಿತೆಗಳೊಂದಿಗೆ ನಂತರದ ದಿನಗಳಲ್ಲಿ ರಚಿಸಿದ 22 ಕವಿತೆಗಳೂ ಸೇರಿದಂತೆ ಒಟ್ಟು 125 ಕವಿತೆಗಳ ಗುಚ್ಛವೇ ‘ಹೂ ದಂಡಿ.’ (2005)
“ನುಗ್ಗಿ ಬಂದ ಸಂವೇದನೆಯ ನೆರೆಗೆ ದಂಡೆಯನ್ನು, ಒಡ್ಡನ್ನು ಕಟ್ಟಿದ್ದರಿಂದಲೇ ಅವು ಹುಚ್ಚು ಹೊಳೆಯಾಗಿ ಕೊಚ್ಚಿ ಹೋಗದಂತೆ, ವೇದನೆಯ ಜಡಿಮಳೆಯಾಗಿ ಸುರಿದು ಕಾಲಗರ್ಭದಲ್ಲಿ ಇಂಗಿ ಕಳೆದು ಹೋಗದಂತೆ, ಆ ಪ್ರವಾಹವನ್ನು ಅರಿವಿನತ್ತ ಪ್ರವಹನೀಯಗೊಳಿಸಿದ್ದರಿಂದ, ಸಂವೇದನೆಗಳ ಒತ್ತಡಗಳನ್ನು ಕಾವ್ಯದಲ್ಲಿ ಹರಿಯಬಿಟ್ಟದ್ದರಿಂದ ಬದುಕು ಸಹನೀಯವಾಗಿದೆ. ಶಾಂತ, ಹೂ ಹಗುರಾದ ಮನಸ್ಸಿನ ನಿರಾಳ ಭಾವದ ಈ ದಂಡಿ (ದಡ)ದಲ್ಲಿ ಕುಳಿತು ಇದುವರೆಗೆ ಬರೆದ ಕವಿತೆಗಳ ವಾಚನ ಮಾಡುವಾಗ ಅಭಿವ್ಯಕ್ತಿಯ ಹೆದ್ದೆರೆಗಳ ಮೊರೆತ ಮರುಕಳಿಸಿ ಗದ್ಗದಿತಳಾಗುತ್ತೇನೆ” ಎಂದು ಕವಯತ್ರಿಯು ಲೇಖಕರ ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ‘ದಂಡಿ’ ಎಂಬ ಪದವನ್ನು ‘ದಂಡೆ’ ಎಂಬುದಾಗಿ ಪರಿಭಾವಿಸಿದರೆ ಅದಕ್ಕೆ ಮಾಲೆ ಎಂಬ ಅರ್ಥ ದೊರೆಯುವುದರಿಂದ ಈ ಸಂಕಲನವನ್ನು ‘ಹೂವಿನ ಮಾಲೆ’ ಎಂದೂ ಅರ್ಥೈಸಿಕೊಳ್ಳಬಹುದು.
“ಶ್ರೀಮತಿ ಮಾಲತಿಯವರ ಸಂಕಲನದಿಂದ ಸಂಕಲನಕ್ಕೆ ಬೆಳೆಯುತ್ತ ಬಂದ ಕಾವ್ಯ. ಇಲ್ಲಿ ಸ್ಥಗಿತತೆಗೆ ಇಂಬಿಲ್ಲ. ದೇಶ ದೇಶಾಂತರದ ಸ್ಥಿತಿಗತಿ ಬದಲಾದಂತೆ ಇವರ ಭಾವುಕತೆಯೂ ಬದಲಾಗಿ ವೈಚಾರಿಕ ಮನೋವೃತ್ತಿ ಜಾಗೃತಗೊಂಡದ್ದನ್ನು ಗಮನಿಸಬಹುದು. ಈ ಹಂತದಲ್ಲಿ ತನ್ನ ವೈಯಕ್ತಿಕ ನೋವು ನಿರಾಸೆಗಳು ಗೌಣವಾಗಿ ದೇಶದ ಹಗೂ ವಿಶ್ವದ ಸಾಮಾಜಿಕ ರಾಜಕೀಯ ತಲ್ಲಣಗಳತ್ತ ಮನಸ್ಸು ಹರಿಯುತ್ತದೆ” ಎಂದು ಮುನ್ನುಡಿಕಾರರಾದ ಬಿ.ಎ. ಸನದಿ ಸರಿಯಾಗಿ ಗುರುತಿಸಿದ್ದಾರೆ. ಕೋಮು ಗಲಭೆಯನ್ನು ವಸ್ತುವಾಗಿರಿಸಿಕೊಂಡ ‘ಮಂದಿರ ಮಸೀದಿಗಳೆಂಬ ದೇವಸ್ಥಾನ’ವು ಜಾತಿಧರ್ಮಗಳ ಹೆಸರಿನಲ್ಲಿ ಹೊಡೆದಾಡಿ ಸಾಯುವ ಜನರ ಮನಸ್ಥಿತಿಯನ್ನು ಕಂಡು ತಲ್ಲಣಿಸುತ್ತದೆ.
ಓ ಜಗದೊಡೆಯನೆ
ಕೂಗಾಡಿ ಸೋತ ಶಬ್ದಗಳ ಕೊನೆಗೆ
ತೋರಿಸಲೇನು ಎದೆ ಬಗೆದು
ಅಗ್ನಿಕುಂಡವಾದ ನನ್ನ ಜನಗಳ ಆತ್ಮ
ಪ್ರಾರ್ಥಿಸುವೆ ಓ ಜಗದೋದ್ಧಾರಕ
ಹೇಳು ನಿನಗೆಷ್ಟು ಸ್ಥಳ ಬೇಕು
ಮಣ್ಣೊಳಗೆ ಮಣ್ಣಾಗಿ ಕುಸಿವ
ಗೋಡೆಗಳ ಹಂದರವೊ
ಅಲ್ಲಮ ಅಜಗಣ್ಣರು ಕಂಡ
ಬಯಲು ಆಲಯದ ಮುಕ್ತ ಮಂದಿರವೊ (ಪುಟ 184)
ಮಂದಿರ ಮಸೀದಿಗಳು ಒಡೆಯುತ್ತವೆ. ಆದರೆ ಒಡೆದ ಹೃದಯ? ಬದುಕಬಹುದು ಹಂಚಿಕೊಂಡು. ಬದುಕಬಹುದೇ ಕಿತ್ತುಕೊಂಡು? ಜಾತಿಮತಗಳ ಹೆಸರಿನಲ್ಲಿ ನಡೆದ ಲೂಟಿ, ಹತ್ಯೆ, ಬಲವಂತದ ಮತಾಂತರ, ಜನಾಂಗ ನಾಶದ ಯತ್ನ ಇವೆಲ್ಲದಕ್ಕೆ ಕ್ಷಮೆಯಿದೆಯೇ? ಧರ್ಮ, ದೇವರ ಹೆಸರಿನಲ್ಲಿ ನಡೆಯುತ್ತಿರುವ ನರಮೇಧಗಳಿಗೆ ಪ್ರಾಯಶ್ಚಿತ್ತವಿದೆಯೇ? ಕ್ಷಮಿಸಬಹುದೇ ಇವೆಲ್ಲವನ್ನು? ಹಾಗೆ ನೋಡಿದರೆ ಕ್ಷಮಿಸುವುದಕ್ಕೆಂದು ಉಳಿದವರು ಯಾರು? ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದ ಪಾಪಕಾರ್ಯಗಳು ತಪ್ಪೊಪ್ಪಿಗೆಯ ಒಂದೇ ಮಾತಿನಲ್ಲಿ ಕರಗಬಹುದೇ? ಒಂದೇ ತಾಯಿಯ ಮಕ್ಕಳಾಗಿದ್ದುಕೊಂಡು ಒಂದೇ ಮಣ್ಣಿನಲ್ಲಿ ಮಲಗುವ ನಮ್ಮ ನಡುವೆ ಅಂತರವೇಕೆ? ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಾಡಲು ಕವಿತೆಯು ಪ್ರೇರೇಪಿಸುತ್ತದೆ.
ಸ್ತ್ರೀ ದೌರ್ಜನ್ಯದ ಇನ್ನೊಂದು ಮಗ್ಗುಲನ್ನು ಬಿಚ್ಚಿಡುವ ‘ಫೂಲನ್ ಸಮೀಕರಣ’ವು ಠಾಕೂರ ಸಮುದಾಯದವರ ಎಲ್ಲ ಬಗೆಯ ಶೋಷಣೆಗೆ ಬಲಿಯಾಗಿ, ಅವರ ವಿರುದ್ಧದ ಪ್ರತೀಕಾರದ ಶಕ್ತಿಯಾಗಿ ಬೆಳೆದು, ಅವರನ್ನು ಆಯುಧ ಪ್ರಯೋಗಗಳ ಮೂಲಕ ಮಟ್ಟ ಹಾಕಿದ ಬಳಿಕ, ಹಿಂಸಾಮಾರ್ಗವನ್ನು ತ್ಯಜಿಸಿ, ಸಂಸದೆಯಾಗಿ ಸಮಾಜಸೇವೆಯನ್ನು ಮಾಡುತ್ತಿದ್ದ ಹೊತ್ತಿನಲ್ಲಿ ಬರ್ಬರ ಹತ್ಯೆಗೊಳಗಾದ ದುರಂತವನ್ನು ಸೂಕ್ಷ್ಮವಾಗಿ ವಿವರಿಸುವಾಗ ಕವಯತ್ರಿಯು ಫೂಲನ್ ದೇವಿಯ ಹೋರಾಟದ ಹಾದಿಯನ್ನು ಮಾದರಿಯಾಗಿಸದೆ
ಬೇಡ ಬೇಡೀಗ ಬಂದೂಕಿನ ಬಲಾ
ಹೆದಗೇರಬೇಕೀಗ ತಂಗಿಯರೆ ಬದುಕುವ ಛಲಾ
ತೂಗುತ್ತಲೇ ಇದೆ ಇಂದಿಗೂ ನೆತ್ತಿಗೇರಿ
ದೌರ್ಜನ್ಯದ ಈ ಖಡ್ಗ ಶೇಷ ಪ್ರಶ್ನೆಯಗಿ
ತೂಗುತ್ತ ನಮ್ಮ ತಿಳಿವಿನ ಅಬಲತ್ವ (ಪುಟ 188)
ಎನ್ನುವ ಮೂಲಕ ಹೆಂಗಸರು ಆಕೆಯ ಛಲ ಮತ್ತು ನಿರ್ಭಯದ ಬದುಕನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ.
ರಾಜಕಾರಣಿಗಳ ಕನ್ನಡಾಭಿಮಾನವು ಕನ್ನಡ ಕಾರ್ಯಕ್ರಮಗಳ ಉದ್ಘಾಟನೆಗಷ್ಟೇ ಸೀಮಿತವಾಗುವ ವ್ಯಂಗ್ಯವನ್ನು ಬಿತ್ತರಿಸುವ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ತನ್ನ ವಿಡಂಬನ ಶಕ್ತಿಯ ಮೂಲಕ ಗಮನವನ್ನು ಸೆಳೆಯುತ್ತದೆ. ಕವಿತೆಯ ತಲೆಬರಹವೂ ಸೇರಿದಂತೆ, ಹಚ್ಚೇವು ಕನ್ನಡದ ದೀಪ, ಎಲ್ಲಾದರೂ ಇರು ಎಂತಾದರೂ ಇರು ಎಂಬ ಕವಿವಾಣಿಗಳನ್ನು ಕನ್ನಡಿಗರ ಅಭಿಮಾನ ಶೂನ್ಯತೆಯನ್ನು ಲೇವಡಿ ಮಾಡಲು ಬಳಸಲಾಗಿದೆ. ಕನ್ನಡದ ಹೆಸರು ಹೇಳಿಕೊಂಡು ಆಂಗ್ಲಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸುವ ರಾಜಕಾರಣಿಗಳು ಬಡವರ ಬದುಕನ್ನು ಕತ್ತಲೆಯಲ್ಲಿಟ್ಟು ತಾವು ಸಿರಿವಂತರಾಗುತ್ತಿರುವ ವಿಪರ್ಯಾಸದ ಕಡೆ ಬೆಳಕು ಚೆಲ್ಲಿದ್ದಾರೆ. ‘ಜಾಕ್ರಾಂಡಾ ಮರದ ಹೂ’ ಹೆಣ್ಣಿನ ಚೆಲುವಿನ ಪ್ರತೀಕವಾದರೆ ‘ಹುಡುಗಿ’ಯಲ್ಲಿ ಕಾಣಿಸಿಕೊಳ್ಳುವ ಪ್ರಾಕೃತಿಕ ವಿದ್ಯಮಾನಗಳು ಹೆಣ್ಣಿನ ಶಾರೀರಿಕ ಮಾನಸಿಕ ಬದಲಾವಣೆಯನ್ನು ಧ್ವನಿಸುತ್ತವೆ.
ಕಸವನ್ನು ಗುಡಿಸುವುದು ನಿತ್ಯದ ಕಾಯಕ. ಮನೆಯ ಶುಚಿತ್ವ, ಜೀವಂತಿಕೆಯ ಸಂಕೇತ. ಅವ್ವ ಕಸಗುಡಿಸುವ ರೀತಿಯನ್ನು ನೈಜತೆಯಿಂದ ಚಿತ್ರಿಸುವ ‘ಮುಳ್ಳಿನ ಬೇಲಿ’ಯಲ್ಲಿನ ಕೆಲವು ಕವಿತೆಗಳಂತೆ ಮೇಲ್ಪದರದ ಬಣ್ಣನೆಯಲ್ಲಿ ಆಸಕ್ತಿಯನ್ನು ತಾಳುವುದಿಲ್ಲ. ಆಕೆಯು ತನ್ನ ಬಾಳಿನ ಕಸಿವಿಸಿ, ನೋವು, ದೇಹದ ಕಸುವು, ಶೂನ್ಯ, ಹೆಣ್ತನ, ಕನಸುಗಳನ್ನೇ ಗುಡಿಸಿ ರಾಶಿ ಹಾಕುತ್ತಾಳೆಯೇ ಹೊರತು ಕೇವಲ ಕಸವನ್ನಲ್ಲ. ಆಕೆ ತನ್ನ ಮನದಲ್ಲಿರುವ ಧನಾತ್ಮಕ ವಿಚಾರಗಳನ್ನೇ ಗುಡಿಸಿ ಖಾಲಿಯಾಗುತ್ತಿರುವುದು ದುರಂತ. ‘ಕರಿಮಣಿಗೆ ಕುತ್ತಿಗೆ ಕೊಟ್ಟ, ಗಂಡನ ಮನೆ ಕೊಟ್ಟಿಗೆಗೆ ಅಟ್ಟಿದ’ ವ್ಯವಸ್ಥೆಯು ಈ ದುರಂತಕ್ಕೆ ಕಾರಣವೆಂದು ಕವಯತ್ರಿ ಗುರುತಿಸಿದ್ದಾಳೆ. ಇಷ್ಟಾದರೂ ‘ಬಾಳ ಹಡಲಿಗೆ ಹೊತ್ತು ಬಾಗದ, ಬದುಕ ಶಪಿಸುತ್ತಾ ಬೀಗದ’ ಅವ್ವನ ನಿರ್ಲಿಪ್ತ ಭಾವ ಆಕೆಯ ಮಗಳಲ್ಲಿಲ್ಲ. ಆಕೆಯ ಕಾರ್ಯವೈಖರಿಯು ಬೇರೆ ರೀತಿಯಲ್ಲಿದೆ.
ಅವಳ ನೆನಪಿನುರಿ ಉಂಡು ತೇಗಿದ ನಾನು
ಸುಟ್ಟು ಹಾಕಿದ್ದೇನೆ ಆ ಕರಿಕೆ ಕಸದ ಬೇರು
ಸುಟ್ಟ ಕಸದ ಗೊಬ್ಬರ ಮಾಡಿ
ಸಾಲು ಸಾಲಾಗಿ ಸಸಿ ನೆಟ್ಟು
ಬೆಳೆಸಿದ್ದೇನೆ ನನ್ನ ಕನಸು ಮನಸು
ಕಿತ್ತೊಗೆಯುತ್ತ ಎಲ್ಲ ಬೇಲಿಯ ಮುಳ್ಳು (ಪುಟ 189)
ಅವ್ವನಿಂದ ಸಾಧ್ಯವಾಗದ ಕೆಲಸವನ್ನು ನಂತರದ ತಲೆಮಾರಿಗೆ ಸೇರಿದ ಮಗಳು ಅರ್ಥಪೂರ್ಣವಾಗಿ ಪೂರ್ತಿಗೊಳಿಸುತ್ತಾಳೆ. ಅಮ್ಮನ ನೊಂದ ಬದುಕನ್ನು ನೋಡಿದ ಮಗಳು ಸಮಸ್ಯೆಯ ಮೂಲವನ್ನೇ ಉರಿಸಿ, ಅದರ ಬೂದಿಯನ್ನು ಗೊಬ್ಬರವಾಗಿಸಿ ತನ್ನ ಕನಸು ಮನಸುಗಳ ಆರೈಕೆಯನ್ನು ಮಾಡುತ್ತಾಳೆ. ಸಂಪ್ರದಾಯದ ಬೇಲಿಯನ್ನು ನಿರುಪಯುಕ್ತಗೊಳಿಸುತ್ತಾಳೆ. ಕಾಯಕನಿಷ್ಠಳಾದ ಅವ್ವ ದುಡಿಮೆಯೇ ದೇವರು, ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಗಳಿಗೆ ತಕ್ಕಂತೆ ಬದುಕಿದರೆ ಸೃಜನಶೀಲತೆಯ ಪರವಾಗಿರುವ ಮಗಳು ತನ್ನ ಕರ್ತೃತ್ವ ಶಕ್ತಿಯ ಮೂಲಕ ಬದುಕನ್ನು ಹಸನುಗೊಳಿಸುತ್ತಾಳೆ. ಪೀಳಿಗೆಗಳ ಅಂತರವು ವಿರುದ್ಧ ನೆಲೆಯಲ್ಲಿರದೆ ಒಂದಕ್ಕೊಂದು ಪೂರಕವಾಗಿ ದುಡಿಯುತ್ತದೆ. ಇವರ ಸಮಕಾಲೀನ ಕವಯತ್ರಿಯಾದ ಸ. ಉಷಾ ಅವರು
ನೀ ಹಾಕಿರುವ ಅಣೆಕಟ್ಟೆ
ಒಡೆದು ಬಿರುಮಳೆಗೆ ಸೊಕ್ಕಿ
ಭೋರ್ಗರೆದು ಒಳ ನುಗ್ಗಿ
ನಿನ್ನಂತಾಗದೇ ಬದುಕುತ್ತೇನೆ
ನನಗೆ ದಾರಿ ಬಿಡು
ಎಂದು ವಾಚ್ಯವಾಗಿ ಹೇಳಿದ್ದನ್ನು ಮಾಲತಿ ಪಟ್ಟಣಶೆಟ್ಟಿಯವರು ಸೂಚ್ಯವಾಗಿ ತಿಳಿಸಿದ್ದಾರೆ.
‘ಹೇಗೆ ಉದ್ಘೋಷಿಸಲಿ?’ ಎಂಬ ಕವಿತೆಯು ಪಂಜರದಿಂದ ಬಿಡುಗಡೆಗೊಂಡ ಪಕ್ಷಿಯು ಹೊಸ ಬದುಕು ಕಟ್ಟಿಕೊಳ್ಳಲು ಹಾರುತ್ತಾ ಹೊರಟಾಗ ಹೂವು ಹಸಿರಿಲ್ಲದ, ಧೂಳು ತುಂಬಿದ ಜಾಗಗಳನ್ನು ಕಂಡು ಕಂಗೆಟ್ಟು, ಬಾಳಿನ ಮಂತ್ರವನ್ನು ಪಠಿಸುವ ಬಗೆ ಹೇಗೆ ಎಂದು ತಲ್ಲಣಿಸುತ್ತದೆ. ಆದರೆ ‘ಬನ್ನಿ ಗುಬ್ಬಚ್ಚಿಗಳೆ ಸಾಲುಗಟ್ಟಿ’ ಎಂಬ ಕವಿತೆಯು ನಿರಾಶೆಯಲ್ಲಿ ಕೊನೆಗೊಳ್ಳುವುದಿಲ್ಲ. ಸಂಬಂಧಗಳಿಗೆ ಪ್ರತೀಕವಾಗಿರುವ ಗುಬ್ಬಚ್ಚಿಗಳನ್ನು ಬರಡು ಬದುಕಿಗೆ ಆಹ್ವಾನಿಸುವುದರ ಮೂಲಕ ಜೀವನ್ಮುಖಿಯೆನಿಸಿಕೊಳ್ಳುತ್ತದೆ.
‘ಚಂದ ಬಲು ಚಂದ’ ಅತ್ಯಂತ ಪ್ರಬುದ್ಧ ಕವಿತೆಯಾಗಿದ್ದು ಬದಕಿನ ಸಿಹಿ ಕಹಿಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುತ್ತದೆ. ಕವನ ತೋರುವ ಸಂಯಮ ಅನನ್ಯವಾಗಿದೆ. ಹುಟ್ಟು ಸಾವಿನ ನಡುವಿನ ಬದುಕನ್ನು ಆಪ್ತವಾಗಿ ಕಂಡರಿಸಿದ ಬಗೆ ಹೀಗಿದೆ.
ಅರಳಿಕೊಳ್ಳುವುದು ಚಂದ
ಮಾಗಿ ಉದುರುವುದು ಚಂದ
ಅರಳುವಿಕೆ ಮರಳುವಿಕೆಯ ಮಧ್ಯದ
ಸುಗಂಧ ಹರಡುವಿಕೆ ಬಲು ಚಂದ (ಪುಟ 205)
ಕಷ್ಟಕೋಟಲೆಗಳು ನಮ್ಮನ್ನು ಭಗವಂತನೆಡೆಗೆ ನಡೆಸುವ ಸನ್ಮಾರ್ಗಗಳು. ಆ ಕರುಣಾಳು ಆಯ್ದ ಕೆಲವರನ್ನಷ್ಟೇ ಕಷ್ಟದಲ್ಲಿ ತೊಳಲಾಡಿಸುತ್ತಾನೆ. ಆ ಅನುಭವಗಳು ನಮ್ಮನ್ನು ಪಕ್ವಗೊಳಿಸಲಿ, ವ್ಯಕ್ತಿತ್ವವನ್ನು ಬದಲಾಯಿಸಲಿ ಎಂದು. ಎಡರು ತೊಡರುಗಳು, ಕೇಳಿಬರುವ ಅಪವಾದಗಳನ್ನು ಎದುರಿಸಿ ನಿಲ್ಲುವ ರೀತಿ ಉಳಿದವರಿಗೆ ಮಾದರಿಯಾಗಬೇಕು. ಸ್ವಪ್ರತಿಷ್ಠೆ, ದುರಹಂಕಾರಗಳನ್ನು ಬಂಡವಾಳವಾಗಿಸಿಕೊಂಡ ಕಪಟಿಗಳು ನಮ್ಮನ್ನು ಕಾಡಿ, ಕಷ್ಟಗಳನ್ನು ನೀಡಿದರೂ ಒಂದು ದೃಷ್ಟಿಯಲ್ಲಿ ಅವರು ಉಪಕಾರವನ್ನು ಮಾಡುವವರು. ಇದರಿಂದಾಗಿ ನಮ್ಮ ವ್ಯಕ್ತಿತ್ವದ ಶುಭ್ರತೆ, ಸುಗಂಧ ಎಲ್ಲೆಡೆಗೂ ಪಸರಿಸುತ್ತದೆ. ಬದುಕಿನ ಯಾತನೆಯಲ್ಲೂ ಜೀವನಪ್ರೀತಿಯ ಸೆಲೆ ಪುಟಿಯುತ್ತಿರಬೇಕು.
ಎದೆ ಹೊತ್ತಿ ಉರಿದರೂ ಚಂದ
ಸಹಿಸುತ್ತ ತಣ್ಣಗಿರುವುದು ಚಂದ
ವೇದನೆಯ ಉತ್ಕಟತೆಯಲ್ಲೂ ಪ್ರೀತಿಗೆ ಹಂಬಲಿಸುವುದು ಚಂದ
ವಿಜ್ಷಾನದ ಅತ್ಯಾಧುನಿಕ ಸಂಶೋಧನೆಗಳೂ ಹೆಣ್ಣಿನ ಶೋಷಣೆಗೆ ದಾರಿಯಾಗುತ್ತವೆ. ಗರ್ಭಸ್ಥ ಶಿಶುವಿಗೆ ಅಂಗವೈಕಲ್ಯ ಅಥವಾ ರೋಗವಿದೆಯೇ ಎಂದು ಪತ್ತೆ ಹಚ್ಚಲು ಭ್ರೂಣ ಪರೀಕ್ಷೆಯನ್ನು ಆವಿಷ್ಕರಿಸಲಾಯಿತು. ಇದರಿಂದ ಶಿಶುವಿನ ಲಿಂಗ ಪರೀಕ್ಷೆ ಸಾಧ್ಯವೆಂದು ತಿಳಿದಾಗ ಹೆಣ್ಣು ಶಿಶುವಿನ ಭ್ರೂಣಹತ್ಯೆ ಆರಂಭವಾಯಿತು. ಇದರಿಂದ ಹೆಣ್ಣು ಶಿಶುಗಳ ಜನನ ಕಡಿಮೆಯಾಗಿ ಗಂಡು ಹೆಣ್ಣುಗಳ ಅನುಪಾತದಲ್ಲಿ ಅಸಮತೋಲನ ಉಂಟಾಯಿತು. ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂದು ವಿದ್ಯಾವಂತರು ನಂಬಿಕೊಂಡಿದ್ದಾರೆಯೇ? ಹಾಗಿದ್ದರೆ ನಮಗೆ ದೊರೆಯುತ್ತಿರುವ ಶಿಕ್ಷಣವಾದರೂ ಎಂಥದ್ದು? ಹೆಣ್ಣು ಮಕ್ಕಳಿಗೆ ಮದುವೆಯೇ ಅಂತಿಮ ಗುರಿ ಎಂದು ತಿಳಿದ ಸಮಾಜದಲ್ಲಿ, ಅವರ ಮದುವೆಯೇ ಹೊರೆಯಾದಾಗ ಇಂಥ ಅನಾಹುತಗಳು ನಡೆಯುತ್ತವೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಯತ್ನಿಸಬೇಕು. ಬಳಿಕ ಮದುವೆಯ ಯೋಚನೆಯನ್ನು ಮಾಡಬೇಕು. ಕೈಹಿಡಿಯುವವನು ಯಜಮಾನನಾಗದೆ ಸಂಗಾತಿಯಾಗಬೇಕು. ಯಾಕೆಂದರೆ ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳು. ಅವರಲ್ಲಿ ಯಾರೂ ಶ್ರೇಷ್ಠರಲ್ಲ ಕನಿಷ್ಠರಲ್ಲ. ಪರಸ್ಪರ ಗೌರವ ಭಾವನೆಯಿಂದ ಮಾತ್ರ ಬದುಕಿನ ಸುಖ ಹೆಚ್ಚುತ್ತದೆ. ಆದರೆ ಹೆಣ್ಣಿನ ಮನಸ್ಸನ್ನು ಪ್ರೀತಿಯಿಂದ ಅನುನಯದಿಂದ ಗೆದ್ದು ಆತ್ಮವಿಶ್ವಾಸವನ್ನು ಹುಟ್ಟಿಸುವ ಬದಲು ಕೀಳಾಗಿ ಕಾಣುವ ಮನೋಭಾವದಿಂದಾಗಿ ಆಕೆಯು ಶೋಷಣೆಗೆ ಒಳಗಾಗುವಂತಾಗಿದೆ. ಆಧುನಿಕ ಯುಗದಲ್ಲೂ ವ್ಯಾಪಿಸುತ್ತಿರುವ ಈ ಮೌಢ್ಯದ ಮುಂದುವರಿಕೆಯು ಮಾನವನ ವೈಚಾರಿಕ ಪ್ರಜ್ಞೆಗೆ ಸವಾಲೆನಿಸಿದೆ. ಹೆಣ್ಣು ಮಗುವನ್ನು ನಿರಾಕರಿಸುವ, ನಿರ್ಲಕ್ಷಿಸುವ ತರತಮ ಧೋರಣೆಯು ಸಮಾಜದಲ್ಲಿ ಹಲವು ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಹೆಣ್ಣನ್ನು ಕೇವಲ ದೇಹವಾಗಿ ಪರಿಭಾವಿಸದೆ ಅವಳ ಮನೋವ್ಯಕ್ತಿತ್ವವನ್ನು ಗೌರವಿಸುವ ಧೋರಣೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಬದುಕಿನ ಎಲ್ಲಾ ರಂಗಗಳಲ್ಲೂ ಭೇದಭಾವಕ್ಕೆ ಅವಕಾಶವಿಲ್ಲದಂತೆ ಸ್ತ್ರೀ ಪುರುಷರ ಸಮಾನ ಸಹಭಾಗಿತ್ವದೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾಗಿರುವ ಸಂದರ್ಭದಲ್ಲಿ ‘ನಾ ಬರಿ ಭ್ರೂಣವಲ್ಲ’ ಎಂಬ ಕವಿತೆಯು ಪ್ರಸ್ತುತವೆನಿಸುತ್ತದೆ. ಗರ್ಭವು ತನ್ನ ಪಾಲಿಗೆ ಸುರಕ್ಷಿತ ತಾಣವೆಂದು ಭಾವಿಸಿದ ಮಗುವಿಗೆ ತನ್ನ ಅಸ್ತಿತ್ವವನ್ನೇ ನಿರಾಕರಿಸುವ ವ್ಯವಸ್ಥೆಯ ಧೋರಣೆಗಳು ಆತಂಕವನ್ನುಂಟು ಮಾಡಿವೆ. ಬದುಕುವುದಕ್ಕೆ ಮಾತ್ರವಲ್ಲ ಹುಟ್ಟುವುದಕ್ಕೂ ಹೋರಾಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ಉಳಿಸುವ ಶಕ್ತಿಯಿದೆ ಎಂಬ ಭರವಸೆಯೊಂದಿಗೆ ಹೊಟ್ಟೆಯೊಳಗಿನ ಮಗು ತನ್ನನ್ನು ಕಾಪಾಡುವಂತೆ ಮೊರೆಯಿಡುವ ಚಿತ್ರಣವು ಇಲ್ಲಿದೆ. ಹೆಣ್ಣು ಮಗುವಿನ ಜನನದ ಸಂದರ್ಭದಲ್ಲಿ ಕಂಡುಬರುವ ಕೌಟುಂಬಿಕ ಮತ್ತು ಸಾಮಾಜಿಕ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯು ಹೆಣ್ಣಿನ ಅಸಹಾಯಕತೆ, ದುಗುಡ, ದುಮ್ಮಾನಗಳಿಗೆ ದನಿಯಾಗುತ್ತದೆ.
ಮಾಲತಿ ಪಟ್ಟಣಶೆಟ್ಟಿಯವರ ಈ ಕವಿತೆಯೊಂದಿಗೆ ಅವರ ನಂತರದ ತಲೆಮಾರಿನವರಾದ ನೇಮಿಚಂದ್ರರ ‘ನನ್ನೊಳಗಿನೊಂದು ಬಿಂದು’ ಎಂಬ ಕತೆಯನ್ನು ಹೋಲಿಸುವುದು ಉಚಿತವೆನಿಸುತ್ತದೆ. ವಿಜ್ಞಾನಿಯಾದ ತಾನು ಮೂರನೇ ಬಾರಿ ಬಸುರಾಗಿದ್ದೇನೆಂದು ತಿಳಿದಾಗ ನೋವು ಮತ್ತು ಅಸಹಾಯಕತೆಯನ್ನು ಅನುಭವಿಸುತ್ತಾಳೆ. ಇಬ್ಬರು ಹೆಣ್ಣುಮಕ್ಕಳ ತಾಯಿಯಾದ ಆಕೆಯು ಮತ್ತೊಂದು ಮಗುವನ್ನು ಸ್ವಾಗತಿಸುವ ಸ್ಥಿತಿಯಲ್ಲಿರುವುದಿಲ್ಲ. ತನ್ನ ದೇಹದ ಬಿಂದುವೊಂದು ಫಲಿತ ಕಣವಾಗಿದ್ದು, ಅದನ್ನು ಹೊರಗೆ ಹಾಕುವುದೆಂದರೆ ಕೊಲೆ ಮಾಡಿದಂತಲ್ಲ ಎನ್ನುವ ನಾಯಕಿಯು ತನ್ನ ಬೌದ್ಧಿಕ ಮಹತ್ವಾಂಕಾಂಕ್ಷೆಗಳನ್ನು ದಕ್ಕಿಸಿಕೊಳ್ಳಲು ನನ್ನದೇ ಆದ ಸಮಯ ಬೇಕು ಎನ್ನುತ್ತಾಳೆ. “ಗಂಡಿನ ಸುಖದ ಕ್ಷಣಗಳು ಫಲಿತಾಗಲೆಲ್ಲ ಹೆಣ್ಣು ಹೆತ್ತ ನನ್ನಮ್ಮ ಮೂವತ್ತೈದಕ್ಕೆ ಮೊಣಕಾಲು ನೋವೆಂದು ಹಾಸಿಗೆ ಹಿಡಿದ ಮೇಲೂ ಮತ್ತಿಬ್ಬರನ್ನು ಹೆತ್ತಳು. ನಾವು ಹುಟ್ಟಿದೆವು ವೈವಾಹಿಕ ಬದುಕಿನ ಅನಿವಾರ್ಯ ಬದುಕಿನ ಬೈಪ್ರಾಡಕ್ಟುಗಳಾಗಿ. ನನಗೆ ಅಮ್ಮನ ಅಸಹಾಯಕತೆ ಬೇಡ. ಈ ಭ್ರೂಣವನ್ನು ಹೊರಬೇಕೇ ಬೇಡವೇ ಎಂಬುದು ನನ್ನ ನಿರ್ಧಾರವಾಗಿರಲಿ” ಎಂದು ನುಡಿಯುತ್ತಾಳೆ.
ಹೆಣ್ಣಿಗೆ ತಾಯ್ತನ ಬೇಡವೆಂದಲ್ಲ. ಅದು ಪುರುಷರಿಗೆ ಒದಗದ, ಹೆಣ್ಣಿಗೆ ಮಾತ್ರ ದೊರೆಯುವ ಅಪೂರ್ವ ವರ. ಆದರೆ ಅದರಿಂದಾಗಿ ಹೆಣ್ಣಿನ ಶೋಷಣೆ ನಡೆಯಬಾರದು ಎಂಬ ಕಾಳಜಿ ಇಲ್ಲಿದೆ. ಮಾಲತಿ ಪಟ್ಟಣಶೆಟ್ಟಿ ಮತ್ತು ನೇಮಿಚಂದ್ರರು ಭಿನ್ನ ತಲೆಮಾರಿಗೆ ಸೇರಿದವರಾಗಿದ್ದರೂ ಹೆಣ್ಣನ್ನು ಕೇವಲ ಹೆರಿಗೆಯ ಯಂತ್ರವೆಂದು ಬಗೆದು, ಆಕೆಯ ಕ್ರಿಯಾಶೀಲತೆಯನ್ನು ನಾಶಮಾಡಿ, ಅವರನ್ನು ಮೂಲೆಗೆ ಒತ್ತರಿಸಿದ ಪುರುಷ ಸಮಾಜದ ವಿರುದ್ಧ ತಮ್ಮ ಸೃಜನಶೀಲ ಕೃತಿಗಳ ಮೂಲಕ ದನಿಯೆತ್ತಿದವರು. ಮಾಲತಿ ಪಟ್ಟಣಶೆಟ್ಟಿಯವರು ಭ್ರೂಣದ ಮೂಲಕ ಸಮಸ್ಯೆಯ ಗಂಭೀರತೆಯನ್ನು ಅರಿವಿಗೆ ತಂದರೆ, ನೇಮಿಚಂದ್ರರು ಬಸುರಿ ಹೆಂಗಸಿನ ದೃಷ್ಟಿಕೋನದಿಂದ ಸಮಸ್ಯೆಯನ್ನು ಕಂಡಿದ್ದಾರೆ. ಮಾಲತಿ ಪಟ್ಟಣಶೆಟ್ಟಿಯವರ ಪಾಲಿಗೆ ಗರ್ಭಪಾತವು ಕೊಲೆ ಎನಿಸಿದರೆ, ನೇಮಿಚಂದ್ರರ ಪಾಲಿಗೆ ಗರ್ಭಪಾತವೆನ್ನುವುದು ಒಡಲೊಳಗಿನ ಬಿಂದುವಿನ ನಿರಾಕರಣೆ. ಪೀಳಿಗೆಯಿಂದ ಪೀಳಿಗೆಗೆ ಬದಲಾಗುವ ಹೆಣ್ಣಿನ ಸ್ಥಾನಮಾನ, ಬದುಕನ್ನು ಗ್ರಹಿಸಿಕೊಳ್ಳುವ ರೀತಿ ಮತ್ತು ಧೋರಣೆಗಳು ಚಿಂತನೆಗೆ ಹಚ್ಚುತ್ತವೆ.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

ಲೇಖಕಿ : ಮಾಲತಿ ಪಟ್ಟಣಶೆಟ್ಟಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು), ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ), ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ), ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ), ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು, ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.
