ಬದುಕು ಮತ್ತು ಬರವಣಿಗೆಯಲ್ಲಿ ಅಪೂರ್ವ ಸಂಯಮವನ್ನು ಮೆರೆದ ಹಿರಿಯ ಮಹಿಳೆ ಪ್ರೊ. ಮಾಲತಿ ಪಟ್ಟಣಶೆಟ್ಟಿ. ಬದುಕಿನಲ್ಲಿ ಜಂಝಾವಾತವೇ ಎದುರಾದರೂ ಅದಕ್ಕೆ ಶರಣಾಗದೆ, ಮಾನವೀಯವಾಗಿಯೂ, ಧೀರೋದಾತ್ತ ನಡೆಯಿಂದಲೂ ಎಲ್ಲರ ಗೌರವಾದರಗಳನ್ನು ಗೆದ್ದ ವ್ಯಕ್ತಿತ್ವ ಅವರದು. ಕತೆ ಮತ್ತು ವಿಮರ್ಶೆಯ ಪ್ರಕಾರಗಳಲ್ಲಿ ದೃಢವಾದ ಹೆಜ್ಜೆಗಳನ್ನು ಊರುತ್ತಿರುವ ಡಾ. ಸುಭಾಷ್ ಪಟ್ಟಾಜೆಯವರು ಇತ್ತೀಚೆಗೆ ಕನ್ನಡದ ಅಪರೂಪದ ಬರಹಗಾರ್ತಿ ಮಾಲತಿ ಪಟ್ಟಣಶೆಟ್ಟಿಯವರ ಕುರಿತಾದ ಮೊನೋಗ್ರಾಫನ್ನು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಲೇಖಕಿಯ ಬದುಕು ಮತ್ತು ಬರಹದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ, ವಿಶ್ಲೇಷಿಸಿ, ಪುಸ್ತಕವನ್ನು ಕೋದ ಬಗೆ ಹಿರಿಯ ಕಿರಿಯರ ಮೆಚ್ಚುಗೆಯನ್ನು ಗಳಿಸಿದೆ. ಕಾಸರಗೋಡಿನಲ್ಲಿದ್ದುಕೊಂಡು ಧಾರವಾಡದ ಅಕ್ಷರ ಲೋಕದ ಹಿರಿಯರ ಪ್ರೀತಿ ಅಭಿಮಾನಗಳನ್ನು ತನ್ನ ಅಪ್ಪಟವಾದ ದುಡಿಮೆಯಿಂದಲೇ ಗಳಿಸಿಕೊಂಡ ಸುಭಾಷ್ ನನ್ನ ವಿದ್ಯಾರ್ಥಿಯಾಗಿದ್ದವರು. ಪ್ರಸ್ತುತ ಗಡಿನಾಡಿನಲ್ಲಿ ಅಧ್ಯಾಪಕರಾಗಿದ್ದುಕೊಂಡು, ಬೋಧನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟು ಹಾಕುತ್ತಿರುವವರು.
ಈ ಕಿರು ಹೊತ್ತಗೆಯಲ್ಲಿ ಸುಭಾಷ್ ಅವರು ಮಾಲತಿ ಪಟ್ಟಣಶೆಟ್ಟಿಯವರ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಿದ್ದಾರೆ. ಮುಂದೆ ಕಾವ್ಯ, ಕತೆ, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ ಎಂದು ಮುಂತಾಗಿ ಕವಲೊಡೆದ ಅವರ ಕೃತಿಗಳ ಅವಲೋಕನವನ್ನು ಸಂಕ್ಷಿಪ್ತತೆಯಲ್ಲೇ ಸಮಗ್ರವಾಗಿ ನಿರೂಪಿಸಿದ್ದಾರೆ. ಲೇಖಕಿಯ ಕುರಿತಾಗಿ ಇರುವ ಪ್ರೀತಿ ಮತ್ತು ಗೌರವಗಳಿಂದ ಸುಭಾಷ್ ಬಹಳ ಶ್ರದ್ಧೆಯಿಂದ ಈ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಪರಿಚಯ ಮಾಲಿಕೆಯಲ್ಲಿ ಸತೀಶ ಕುಲಕರ್ಣಿಯವರು ಬರೆದ ಪುಸ್ತಿಕೆಯ ಹೊರತಾಗಿ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಮಾಲತಿಯವರ ಸಾಹಿತ್ಯದ ನ್ಯಾಯೋಚಿತ ವಿಮರ್ಶೆ ಬಾರದಿರುವ ವಿಚಾರವನ್ನು ಲೇಖಕರು ಪ್ರಸ್ತಾಪಿಸುತ್ತಾರೆ.
ಮುಖ್ಯವಾಗಿ ಕವಯತ್ರಿ ಎಂದೇ ಖ್ಯಾತರಾಗಿರುವ ಮಾಲತಿಯವರ ಕವನ ಸಂಕಲನಗಳ ವಿಮರ್ಶೆಯನ್ನು ಸ್ವಲ್ಪ ವಿಸ್ತಾರವಾಗಿ, ಅವು ಪ್ರಕಟವಾದ ಕಾಲಾನುಕ್ರಮದಲ್ಲಿ, ಸುಭಾಷ್ ಕೈಗೊಳ್ಳುತ್ತಾರೆ. ಈ ಮೂಲಕ ಕವಯತ್ರಿಯ ಕಾವ್ಯದ ದಾರಿ ಪಳಗಿದ ಬಗೆಗೆ ಸುಭಾಷ್ ಅವರ ವಿಶ್ಲೇಷಣೆ ತೋರುಗಂಬವಾಗುತ್ತದೆ. ಸಂಕಲನಗಳ ಮುನ್ನುಡಿಕಾರರ ಮಾತುಗಳ ಹೊರತಾಗಿ ಅನ್ಯ ಉದ್ಧರಣೆಗಳನ್ನು ನೀಡದೆ ಒಂದೊಂದು ಸಂಕಲನವನ್ನೂ ಆಸಕ್ತಿಯಿಂದ, ಶ್ರದ್ಧೆಯಿಂದ ಪರಿಶೀಲಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಲೇಖಕಿಯ ಸೂಕ್ಷ್ಮ ಪ್ರಜ್ಞೆ, ವೈಶಿಷ್ಟ್ಯಗಳನ್ನು ಗುರುತಿಸುವ ಸುಭಾಷ್ ಅವರು ಕೆಲವೊಂದೆಡೆ ಲೇಖಕಿಯ ಮಿತಿಯನ್ನೂ ಮರೆಮಾಚದೆ ದಾಖಲಿಸುವ ಜವಾಬ್ದಾರಿಯನ್ನು ತೋರಿದ್ದಾರೆ. ಹಲವು ಕಡೆ ಅವರ ವಿಮರ್ಶೆ ತೌಲನಿಕವಾಗಿಯೂ ಸಾಗಿರುವುದು ಅವರ ನಡಿಗೆಯ ಪ್ರಬುದ್ಧತೆಯನ್ನು ಸಾರುತ್ತದೆ. ಬರವಣಿಗೆ ಶುಷ್ಕವಾಗದೆ, ಕಾಟಾಚಾರವಾಗದೆ ಓದಿಸಿಕೊಂಡು ಹೋಗುವ ಕಾಂತಿಯನ್ನು ಹೊಂದಿರುವುದು ಗಮನಾರ್ಹವಾಗಿದೆ. ಮಾಲತಿಯವರ ಇತರ ಪ್ರಕಾರದ ಕೃತಿಗಳ ಅವಲೋಕನಕ್ಕೂ ಈ ಮಾತು ಅನ್ವಯಿಸುತ್ತದೆ. ಉದಾಹರಣೆಗೆ ಕತೆಗಳ ಅವಲೋಕನದ ಸಂದರ್ಭದಲ್ಲಿ ಬರುವ ಈ ಮಾತು – “ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕಿಯೊಳಗಿನ ಜೀವನ ಪ್ರೀತಿಯಿಂದ ಮೂಡಿಬಂದಿವೆ. ಕತೆಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿ ಅನಿಸುತ್ತದೆ.”
ಲೇಖಕಿ ಮಾಲತಿಯವರ ಎಂಬತ್ತರ ಹರೆಯದ ಹೊತ್ತಿನಲ್ಲಿ ಅರ್ಪಿತಗೊಳ್ಳುವ ಈ ಕೃತಿಯು ಹಿರಿಯ ತಲೆಮಾರಿಗೆ ಎಳೆಯ ತಲೆಮಾರು ತೋರುವ ಒಂದು ಋಣ ಸಂದಾಯದ ಹೆಜ್ಜೆ ಎಂದು ನಾನು ತಿಳಿಯುತ್ತೇನೆ. ಇದನ್ನೊಂದು ಅಕ್ಕರೆಯ ಕೆಲಸವಾಗಿ ಕೈಗೆತ್ತಿಕೊಂಡ ಶ್ರೀಮತಿ ಸೀಮಾ ಕುಲಕರ್ಣಿಯವರಿಗೂ ಲೇಖಕ ಸುಭಾಷ್ ಪಟ್ಟಾಜೆಯವರಿಗೂ ನನ್ನ ಅಭಿನಂದನೆಗಳು. ವಯಸ್ಸಿನಿಂದಲೂ, ಅನುಭವದಿಂದಲೂ ಮಾಗಿದ ಚೇತನ ಮಾಲತಿಯವರಿಗೆ ಎಲ್ಲ ರೀತಿಯಲ್ಲೂ ಕಿರಿಯಳಾದ ನನ್ನ ಪ್ರಣಾಮಗಳು ಮತ್ತು ಶುಭಾಶಯಗಳು.

ವಿಮರ್ಶಕಿ | ಡಾ. ಮಹೇಶ್ವರಿ ಯು. ಕಾಸರಗೋಡು
