ಶ್ರೀಮತಿ ಆಶಾ ರಘು ಅವರ ‘ಮಾರ್ಕೋಲು’ ಒಂದು ವಿಶಿಷ್ಟ ಸ್ವರೂಪದ ಕಾದಂಬರಿ. ಇವರ ಕುಟುಂಬದಲ್ಲಿ ಒಬ್ಬರಾಗಿ ಬೆರೆತು ಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ವಿಧಿಯಮ್ಮನ ಜನಪದ ಕತೆಯನ್ನು ಹೇಳಿದ್ದನ್ನು ಸಾಹಿತ್ಯಾಸಕ್ತಿ ಬೆಳೆದ ಮೇಲೆ ಹೊಸ ಆಯಾಮದಲ್ಲಿ ಅರ್ಥ ಮಾಡಿಕೊಂಡ ಪ್ರತಿಭಾನ್ವೇಷಣೆಯ ಫಲವಾಗಿ ಈ ಕಾದಂಬರಿಯು ಮೂಡಿ ಬಂದಿದೆ. ಲಕ್ಷ್ಮಮ್ಮನವರು ಹೇಳಿದ್ದ ಕತೆಗೂ ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕದ ವಸ್ತುವಿಗೂ ಇರುವ ಸಾಮ್ಯತೆಯನ್ನು ಕಂಡುಕೊಂಡ ಲೇಖಕಿ ಕುತೂಹಲಿಯಾಗುತ್ತಾರೆ. ಸಿಗ್ಮಂಡ್ ಫ್ರಾಯ್ಡ್ ನಿರೂಪಿಸಿದ ‘ಈಡಿಪಸ್ ಕಾಂಪ್ಲೆಕ್ಸ್’ ಪರಿಕಲ್ಪನೆಯನ್ನು ವಿಧಿಯಮ್ಮನ ಕತೆ ಮತ್ತು ಸೋಫೋಕ್ಲಿಸ್ಸಿನ ನಾಟಕಗಳಲ್ಲಿ ಕಂಡ ಲೇಖಕಿ ಅಪಾರ ಅಧ್ಯಯನ ಮಾಡುತ್ತಾರೆ.
ತಾಯಿಯೇ ಮಗನನ್ನು ಮದುವೆಯಾಗುವ ಪ್ರಸಂಗವು ಆ ಜಾನಪದ ಕತೆ ಮತ್ತು ನಾಟಕ ಎರಡರಲ್ಲೂ ಇದ್ದದ್ದು ವಿಸ್ಮಯಕಾರಿ ವಿಷಯವಾಗಿದ್ದು, ಆಶಾ ರಘು ಅವರು ಅದರ ಎಳೆ ಹಿಡಿದು ಅನೇಕ ಜನಪದ ಕತೆಗಳ ಅಧ್ಯಯನ ಮಾಡಿ, ತನ್ನೊಳಗೆ ತಂದುಕೊಂಡು ಸೃಜನಶೀಲ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಅಧ್ಯಯನದ ಅರಿವನ್ನು ಅಂತರಂಗದ ಸಂವೇದನೆಯಾಗಿಸಿಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಚಿಂತನಶೀಲತೆ ಮತ್ತು ಸಂವೇದನಾಶೀಲತೆಗಳನ್ನು ಒಂದಾಗಿಸುವ ಸವಾಲು. ಈ ಸವಾಲನ್ನು ಸ್ವೀಕರಿಸಿರುವ ಲೇಖಕಿ, ವಾಸ್ತವಿಕತೆ ಮತ್ತು ಕಲ್ಪಕತೆಗಳೊಂದಾದ ಕಾದಂಬರಿಯನ್ನು ಆಡುಭಾಷೆಯಲ್ಲಿ ನಿರೂಪಿಸಿ ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಗಿಸಿದ್ದಾರೆ.
ಸರಳವೆಂಬಂತೆ ಆರಂಭವಾಗುವ ಕಥನವು ಜನಪದೀಯತೆ ಮತ್ತು ಆಧುನಿಕತೆಗಳು ಒಂದೇ ಎಂಬಂತೆ ನಿರೂಪಿಸುವ ಸಂಕೀರ್ಣ ಕಥಾನಕವಾಗಿದೆ. ಕತೆಯೊಳಗೆ ಕತೆಗಳು ಸೇರುತ್ತ, ಬೆಳೆಯುತ್ತ, ಇದೊಂದು ಸಂಯುಕ್ತ ಕಥನಕವೂ ಆಗುತ್ತದೆ. ಇಲ್ಲಿ ವಿಧಿಯಮ್ಮನ ಪಾತ್ರವೇ ನಂಬಿಕೆಗಳ ಒಂದು ಪ್ರತಿಮಾ ರೂಪ. ಈಕೆ ಹಣೆಬರಹವನ್ನು ಬರೆಯುವ ಕಲ್ಪಕತೆಗೆ ಕಾದಂಬರಿಯ ಕೊನೆಯಲ್ಲಿ ಬರುವ ದ್ಯಾವಮ್ಮ ಹೇಳುವ ‘ಮನುಷ್ಯ ಪ್ರಯತ್ನದಿಂದ ಹಣೆಬರಹವನ್ನು ಮೀರಬಹುದು; ಆ ಬ್ರಮ್ಮನಂಥ ಬ್ರಮ್ಮಂಗೇ ತಿದ್ದಿ ಬರೆಯೋವಂಗೆ ಮಾಡಬಹುದು’ ಎಂದು ಮಾತು ಕಾದಂಬರಿಯ ಆಶಯವೇ ಆಗಿದೆ. ಹೊಟ್ಟೆಯಲ್ಲಿ ನಾಲ್ಕು ಕತೆಗಳಿರುವುದು, ಕನ್ನಡಿಯಲ್ಲಿ ಎಲ್ಲೋ ಇರುವ ವ್ಯಕ್ತಿಗಳನ್ನು ಕಾಣಿಸುವುದು, ವಿಧಿಯಮ್ಮ ಹಣೆಬರಹ ಬರೆಯುವುದು – ಮುಂತಾದ ಪ್ರಸಂಗಗಳು ಜನಪದ ಕತೆಗಳ ನೆಲೆಯಲ್ಲಿ ನಿರೂಪಿತವಾಗುತ್ತಾ ಒಟ್ಟು ಕೃತಿಯ ಒಡಲಲ್ಲಿ ವಾಸ್ತವವೂ ಹರಿಯುವ ವೈರುಧ್ಯವನ್ನು ಆಶಾ ರಘು ಅವರು ನಿಭಾಯಿಸಿದ್ದಾರೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಕನ್ನಡಕ್ಕೆ ಚಿಂತನಾರ್ಹ ಕೃತಿಯೊಂದನ್ನು ಕೊಟ್ಟಿದ್ದಾರೆ.
– ಡಾ. ಬರಗೂರು ರಾಮಚಂದ್ರಪ್ಪ