‘ಮಾತು ಎಂಬ ವಿಸ್ಮಯ’ ಡಾ. ಮೀನಾಕ್ಷಿ ರಾಮಚಂದ್ರ ಇವರು ಮಲೆಯಾಳದಿಂದ ಕನ್ನಡಕ್ಕೆ ಅನುವಾದಿಸಿರುವ ಸಜಿ ಎಂ. ನರಿಕ್ಕುಯಿ ಇವರ ಒಂದು ಅಪೂರ್ವ ಕೃತಿ. ಮನುಷ್ಯನು ತನ್ನ ಜೀವನದಲ್ಲಿ ಯಶಸ್ಸು ಸಾಧಿಸಬೇಕಿದ್ದರೆ, ಸುಖ ಶಾಂತಿ ನೆಮ್ಮದಿಗಳನ್ನು ಪಡೆಯಬೇಕಿದ್ದರೆ, ಯಾವ ರೀತಿಯ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಅನ್ನುವುದನ್ನು ಲೇಖಕರು ಈ ಕೃತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ದವಾಗಿ ವಿವರಿಸಿದ್ದಾರೆ. ನಾವು ಆಡುವ ಬಹಿರಂಗದ ಮಾತ್ರವಲ್ಲದೆ ಅಂತರಂಗದೊಳಗಿನ ಮಾತುಗಳು ಹೇಗೆ ನಮ್ಮ ಜೀವನದಲ್ಲಿ ವಿಸ್ಮಯಕರವಾದ ಬದಲಾವಣೆಗಳನ್ನು ಉಂಟುಮಾಡಬಹುದು ಅನ್ನುವುದನ್ನು ಸನ್ನಿವೇಶ-ಸಂದರ್ಭಗಳ ಉಲ್ಲೇಖಗಳ ಮೂಲಕ ಸೋದಾಹರಣವಾಗಿ ಚಿತ್ರಿಸಿದ್ದಾರೆ.
ಈ ಕೃತಿಯಲ್ಲಿ ಒಟ್ಟು ಐದು ಭಾಗಗಳಿವೆ. ಪ್ರತಿಯೊಂದು ಭಾಗವನ್ನು 8-10 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ಅಧ್ಯಾಯದ ಕೊನೆಗೂ ಆ ಅಧ್ಯಾಯವು ಹೇಳುವ ವಿಚಾರಗಳ ಸಾರಸತ್ವದ ಮೇಲೆ ಬೆಳಕು ಚೆಲ್ಲುವ ಒಂದು ವಾಕ್ಯವನ್ನು ನೀಡಲಾಗಿದೆ. ಇದು ತರಗತಿಯಲ್ಲಿ ಅಧ್ಯಾಪಕರು ಪಾಠ ಮಾಡುವ ರೀತಿಯಲ್ಲಿದೆ. ಓದುಗರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇದು ಸಹಕಾರಿ.
‘ಮಾತಿನ ಮಾಂತ್ರಿಕ ಶಕ್ತಿ’ ಎಂಬ ಮೊದಲ ಭಾಗದಲ್ಲಿ ಒಂಭತ್ತು ಅಧ್ಯಾಯಗಳಿವೆ. ಮಾತುಗಳು ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತವೆ, ಬದುಕನ್ನು ಬದಲಾಯಿಸಲು ಮಾತುಗಳನ್ನು ಹೇಗೆ ಪ್ರಯೋಗಿಸಬೇಕು, ಮಾತುಗಳು ಹೇಗೆ ಕೆಲಸ ಮಾಡುತ್ತವೆ, ಚಿತ್ರ ಬರೆಯುವ ಮಾತುಗಳು ಯಾವುವು, ಮಾತುಗಳು ಮತ್ತು ಮಿದುಳಿನ ನಡುವಣ ಸಂಬಂಧವೇನು, ಮನುಷ್ಯನನ್ನು ಬೆಳೆಸುವ ಮಾತುಗಳು ಹೇಗಿರುತ್ತವೆ, ಕೇಳಬೇಕಾದ ಸರಿಯಾದ ಪ್ರಶ್ನೆಗಳು ಯಾವುವು, ಪ್ರಪಂಚದಿಂದ ನಾವು ಏನು ಕೇಳಬೇಕು, ಮಾತು ಮತ್ತು ನಮ್ಮ ಆರೋಗ್ಯ, ಜೀವನದ ಬದಲಾವಣೆಯ ದಾರಿ ಯಾವುದು, ಬದಲಾವಣೆಯ ಆರಂಭ ಎಲ್ಲಿ, ನಮ್ಮ ಹಣೆಬರಹವನ್ನು ತಿದ್ದುವ ಬಗೆ ಹೇಗೆ, ಬದುಕಿನ ಕಥೆಯನ್ನು ನಾವು ಹೇಗೆ ತಿದ್ದಬಹುದು, ಬದುಕನ್ನು ಬದಲಾಯಿಸುವ ಸೂತ್ರವೇನು, ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ, ಕುಗ್ಗಿಸುವ ಪೂರ್ವಗ್ರಹ ಮತ್ತು ಬೆಳೆಸುವ ವಾಸ್ತವತೆ, ಸುಪ್ತ ಪ್ರಜ್ಞೆಯ ಮನಸ್ಸನ್ನು ವಶಪಡಿಸಿಕೊಳ್ಳುವುದು ಹೇಗೆ, ಆಲೋಚನೆಗಳ ಮಾಂತ್ರಿಕ ಶಕ್ತಿ, ಜೀವನದ ಬದಲಾವಣೆ ಮತ್ತು ನಂಬಿಕೆ, ದೃಢಪ್ರತಿಜ್ಞೆಯ ವಚನಗಳ ತಯಾರಿ, ವಿಜಯದ ಮೊದಲ ಮೆಟ್ಟಲು, ವಿಜಯದಲ್ಲಿನ ವ್ಯತ್ಯಾಸ, ವಿಜಯದ ನಿಯಮಗಳು, ವಿಜಯದ ಭಾಷೆ, ವಿಜಯದ ಸೋಪಾನಗಳು, ಇಚ್ಛಾಶಕ್ತಿಯನ್ನೊಳಗೊಂಡ ವಿಜಯ, ವಿಜಯಿಗಳು ಮತ್ತು ಪರಾಜಿತರು, ವಿಜಯಿಗಳ ಏಳು ರಹಸ್ಯಗಳು, ವಿಜಯದ ಶತ್ರು, ಹೊಂದಿಕೆಯುಳ್ಳ ಸಂಬಂಧಗಳು, ಮಾಂತ್ರಿಕ ಕನ್ನಡಕಗಳು, ಪ್ರೀತಿ ಮತ್ತು ಅಹಂ, ಹೆಜ್ಜೆಯನ್ನು ಮಾರ್ಪಡಿಸುವುದು, ಸಂಬಂಧಗಳು ಮತ್ತು ಆರ್ಥಿಕ ವಿಶ್ವಾಸಗಳು, ಹೊಂದಾಣಿಕೆಯುಳ್ಳ ಸಂಬಂಧಗಳು, ಅದ್ಭುತಗಳನ್ನು ಸೃಷ್ಟಿಸುವ ಹವಾಯ್ ವಾಚಕಗಳು, ಮಾತ್ರವಲ್ಲದೆ ಹಣಕ್ಕೆ ಸಂಬಂಧಪಟ್ಟ ಹಾಗೆ ಹರಿಯುವ ಹಣ, ಸಮೃದ್ಧಿಯ ಮನಸ್ಸು, ಆರ್ಥಿಕ ಸಾಕ್ಷರತೆ, ಆರ್ಥಿಕ ಚಿತ್ರಕತೆ, ಆರ್ಥಿಕ ಸಂಕಲ್ಪಗಳು, ಆರ್ಥಿಕ ಮನೋಭಾವಗಳು, ಮೆಂಟಲ್ ಅಕೌಟಿಂಗ್, ಹಣವನ್ನು ಆಕರ್ಷಿಸುವ ರಹಸ್ಯಗಳು, ಹಣ ಬರಲು ತೆರೆದಿಡಬೇಕಾದ ಬಾಗಿಲುಗಳು, ಆರ್ಥಿಕ ರೋಗಗಳು – ಎಂಬೀ ಮಾತಿಗೆ ಸಂಬಂಧಪಟ್ಟ ವೈವಿಧ್ಯಮಯ ವಿಷಯಗಳ ಮೇಲೆ ಸರಳವಾದ, ಎಳೆಯ ಮಕ್ಕಳಿಗೂ ಅರ್ಥವಾಗಬಹುದಾದ ವಿವರಣೆಗಳಿವೆ.
ಕೃತಿಯ ಅನುವಾದ ಬಹಳ ಚೆನ್ನಾಗಿದೆ. ಸೂಕ್ತ ಪದಗಳ ಬಳಕೆ, ವಾಕ್ಯಗಳ ಸ್ಪಷ್ಟತೆ, ಮೂಲದ ಆಶಯವು ಸೋರಿಹೋಗದಂತೆ ತೆಗೆದುಕೊಂಡ ಎಚ್ಚರ, ಮೂಲವಾಕ್ಯಗಳ ಧ್ವನಿಯನ್ನು ಉಳಿಸಿಕೊಂಡ ಜಾಣ್ಮೆ, ವ್ಯಾಕರಣ ಶುದ್ದಿ ಎಲ್ಲವೂ ಮೆಚ್ಚಿಕೊಳ್ಳುವಂಥದ್ದು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಓದುಗರಿಗೆ ಇಂಥ ಒಂದು ಕೃತಿ ಲಭ್ಯವಾಗಬೇಕು ಎಂದು ಇದನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದು ಪ್ರಶಂಸಾರ್ಹ.
ಬಹಳ ಉಪಯುಕ್ತವಾಗಬಹುದಾದ ಒಂದು ಪುಸ್ತಕವಿದು. ಸಂಸ್ಕೃತಿ ಎಂದರೆ ಏನೆಂದೇ ಗೊತ್ತಿಲ್ಲದೆ ಯದ್ವಾತದ್ವಾ ಮಾತನಾಡಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಜನರಿರುವ ಇಂದಿನ ದಿನಗಳಲ್ಲಿ ಜನರು ಇಂಥ ಪುಸ್ತಕಗಳನ್ನು ಓದುವ ತುರ್ತು ಬಹಳವಾಗಿ ಇದೆ.
ಪುಸ್ತಕ ವಿಮರ್ಶಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಕೃತಿಯ ಹೆಸರು : ‘ಮಾತು ಎಂಬ ವಿಸ್ಮಯ’
ಮೂಲ ಮಲೆಯಾಳ : ಸಜಿ ಎಂ. ನರಿಕ್ಕುಯಿ
ಕನ್ನಡ ಅನುವಾದ : ಡಾ. ಮೀನಾಕ್ಷಿ ರಾಮಚಂದ್ರ
ಪ್ರ : ಮೈರುಗ ಪ್ರಕಾಸನ, ಮಂಗಳೂರು
ಪ್ರ. ವರ್ಷ : 2025, ಪು. 259, ಬೆಲೆ : ರೂ.300
ಮೊ. : 9448911777