Subscribe to Updates

    Get the latest creative news from FooBar about art, design and business.

    What's Hot

    ಕವನ | ನಿಮಗರ್ಥವಾಗದು…..

    October 27, 2025

    ಕೂಚಿಪುಡಿ ನಾಟ್ಯ ಪರಂಪರ ಹನ್ನೆರಡನೆಯ ನೃತ್ಯೋತ್ಸವ -2025 | ಅಕ್ಟೋಬರ್ 31

    October 27, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    October 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಗ್ರಾಮಭಾರತದ ಚಿತ್ರಣ ‘ನದಿ ದಾಟಿ ಬಂದವರು’ ಕಾದಂಬರಿ
    Article

    ಪುಸ್ತಕ ವಿಮರ್ಶೆ | ಗ್ರಾಮಭಾರತದ ಚಿತ್ರಣ ‘ನದಿ ದಾಟಿ ಬಂದವರು’ ಕಾದಂಬರಿ

    October 27, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ನದಿ ದಾಟಿ ಬಂದವರು’ ಖ್ಯಾತ ಲೇಖಕ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ. ಇದನ್ನು ಅವರು ಪೂರ್ತಿಯಾಗಿ ಗ್ರಾಮಭಾರತದ ಚಿತ್ರಣಕ್ಕೆ ಮೀಸಲಾಗಿಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಳ್ಳಿಗಳಲ್ಲಿ ಕೃಷಿ-ಬೇಸಾಯ ಹಾಗೂ ಜನಜೀವನದ ಸ್ವರೂಪಗಳು ಹೇಗಿದ್ದವು ಅನ್ನುವುದನ್ನು ಇತಿಹಾಸದಲ್ಲಿ ನಡೆದ ನಿಜ ಘಟನೆಗಳಿಗೆ ಕಲ್ಪನೆಯ ಕಥೆಗಳನ್ನು ಹೆಣೆದು ಪ್ರಸ್ತುತ ಪಡಿಸುವುದು ಅವರ ಕಾದಂಬರಿಯ ಉದ್ದೇಶ. ಅದನ್ನು ಅವರು ಯಶಸ್ವಿಯಾಗಿ ಪೂರೈಸಿದ್ದಾರೆ.

    ಕಥಾಹಂದರ ಆರಂಭವಾಗುವುದೇ ಕರುಳು ಚುರಕ್ಕೆನ್ನಿಸುವ ಒಂದು ಸನ್ನಿವೇಶದ ಮೂಲಕ. ಕರ್ಜೆ ಎಂಬ ಹಳ್ಳಿಯಲ್ಲಿ ನಿಷ್ಕರುಣಿ ನಾರಾಯಣ ಭಂಡಾರರ ಒಕ್ಕಲಾಗಿ ಪರಿಶ್ರಮಪಟ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಕುರಿಯ ನಾಯಕ, ಅವನ ಹೆಂಡತಿ ಶೇಷಿಬಾಯಿ, ಮಗ ಸಿದ್ದನಾಯಕ ಮತ್ತು ಇತರ ಮಕ್ಕಳೊಂದಿಗಿನ ಸಂಸಾರವು ಧನಿಯು ಕೊಡುವ ಕಾಟವನ್ನು ತಡೆಯಲಾರದೆ, ಅವನು ಸುಳ್ಳುಸುಳ್ಳಾಗಿ ಹೊರಿಸಿದ ಸಾಲದ ಹೊರೆಯನ್ನು ತೀರಿಸಲಾಗದೆ ರಾತ್ರೋರಾತ್ರಿ ತಮ್ಮ ಗುಡಿಸಲ ಮುಂದಿನ ಅಂಗಳದಲ್ಲಿ ಖಾಲಿ ಮಡಿಕೆ ಕವುಚಿಟ್ಟು (ನಾವು ಸಾಲ ತೀರಿಸಲಾರೆವು ಎಂಬುದರ ಸೂಚನೆಯಾಗಿ) ಓಡಿ ಹೋಗುತ್ತಾರೆ.‌ ಊರಿನ ಗಡಿಯಾದ ಸೀತಾನದಿಯನ್ನು ದಾಟಿ ಮುಂದೆ ನಡೆದು ನೆಲ್ಯಾಡಿ ಗ್ರಾಮವನ್ನು ತಲುಪಿ ಅಲ್ಲಿನ ದಯಾಳು ಜಮೀನ್ದಾರನಾಗಿದ್ದ ಸುಸಂಸ್ಕೃತ ವ್ಯಕ್ತಿ ವೆಂಕಣ್ಣಯ್ಯನವರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.‌ ಆರಂಭದಲ್ಲಿ ಅವರಲ್ಲೇ ಊಳಿಗ ಮಾಡಿ ಕೊನೆಗೆ ಅವರ ಭೂಮಿಯನ್ನು ಚಾಲಗೇಣಿಗೆ ವಹಿಸಿಕೊಳ್ಳುತ್ತಾರೆ. ಸಂಸಾರ ರಥವು ಹೀಗೆ ನೆಮ್ಮದಿಯಿಂದ ಸಾಗುತ್ತಿರಲು ಊರಿನ ಪಾಳೆಯಗಾರನಂತೆ ಎಲ್ಲರ ಮೇಲೆ ಅಧಿಕಾರ ಚಲಾಯಿಸುತ್ತ ತನ್ನನ್ನು ವಿರೋಧಿಸಿದವರ ಮೇಲೆ ತನ್ನ ಹಿಂಬಾಲಕರ ಮೂಲಕ ಹಲ್ಲೆ ಮಾಡಿಸುವ ಹೃದಯಹೀನ ವ್ಯಕ್ತಿ ಬಲ್ಲಾಳರು ವೆಂಕಣ್ಣಯ್ಯನವರ ವಿರುದ್ದವೂ ಕತ್ತಿ ಮಸೆಯುತ್ತಾರೆ.

    ಮಗ ಸತ್ಯನಾರಾಯಣ ಓದಿ ಮುಂದೆ ಬರಬೇಕು, ಶಾಲಾ ಅಧ್ಯಾಪಕನಾಗಿ ನೆಮ್ಮದಿಯ ಜೀವನ ಸಾಗಿಸಬೇಕು ಅನ್ನುವುದು ಅವನ ತಂದೆ-ತಾಯಿಯರಿಬ್ಬರ ಕನಸು. ಆದರೆ ಜ್ವರ ಬಂದು ವೆಂಕಣ್ಣಯ್ಯನವರು ಅಕಾಲ ಮೃತ್ಯುವಿಗೊಳಗಾದಾಗ ಅವರ ಕುಟುಂಬವು ಅಸಹಾಯಕವಾಗುತ್ತದೆ. ಸತ್ಯನಾರಾಯಣನು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮನೆಯಲ್ಲಿ ಅಮ್ಮನಿಗೆ ನೆರವಾಗುತ್ತೇನೆಂದು ನಿಂತರೂ ಅವನ ಮಾವ ಬೆಂಗಳೂರಿನಿಂದ ಬಂದು ಅವನನ್ನು ಹೊಟೇಲ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹೀಗೆ ಒಂದು ತಲೆಮಾರಿನ ಬ್ರಾಹ್ಮಣರು ತಮಗೆ ವರ್ಜ್ಯವೆಂದು ತಿಳಿದಿದ್ದ ಹೊಟೇಲ್ ಕೆಲಸದಲ್ಲಿ ಮೇಲೆ ಬರುವ ಸನ್ನಿವೇಶ ಕಾರಂತರ ‘ಮರಳಿ ಮಣ್ಣಿಗೆ’ಯಂತೆ ಇಲ್ಲಿಯೂ ಇದೆ.

    ಗಾಂಧೀಜಿಯವರ ಬಗ್ಗೆ ಅಪಾರ ಅಭಿಮಾನವನ್ನಿಟ್ಟುಕೊಂಡ ವೆಂಕಣ್ಣಯ್ಯನವರನ್ನು ಓರ್ವ ದೇಶಪ್ರೇಮಿ ಕನಸುಗಾರನಂತೆ ಲೇಖಕರು ಚಿತ್ರಿಸಿದ್ದಾರೆ. ಗಾಂಧೀಜಿಯವರು ಕುಂದಾಪುರಕ್ಕೆ ಬಂದಾಗ ಅವರನ್ನು ನೋಡಲು ನಡೆದುಕೊಂಡೇ ಹೋಗುವ ಅವರ ನಿಷ್ಠೆ ಮೆಚ್ಚುವಂಥದ್ದು. ಆದರೆ ಅಲ್ಲಿ ಸೇರಿದ ಎಲ್ಲ ಮಂದಿಗೆ ದೂರದಿಂದಷ್ಟೇ ಗಾಂಧೀಜಿ ಕಾಣಿಸಿಕೊಳ್ಳುವುದು ‘ಹೀರೋ ವರ್ಷಿಪ್’ ಎಂಬ ಪರಿಕಲ್ಪನೆಯ ವ್ಯಂಗ್ಯವೂ ಹೌದು.

    ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾದ ವೆಂಕಣ್ಣಯ್ಯನವರು ಚಿಂತಕರೂ ಹೌದು. ಬಲ್ಲಾಳರು ಮಾಡುತ್ತಿರುವ ಅನ್ಯಾಯಗಳನ್ನು ಗಮನಿಸಿದರೂ ಬಲಾಢ್ಯರಾದ ಅವರನ್ನು ವಿರೋಧಿಸಿ ಎದುರು ಹಾಕಿಕೊಳ್ಳುವುದಿಲ್ಲ. ಗಾಂಧೀಜಿಯವರ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬರುವ ದಿನವನ್ನು ಮತ್ತು ದೇಶದ ಪರಿಸ್ಥಿತಿ ಸುಧಾರಿಸುವ ದಿನವನ್ನೇ ಅವರು ಎದುರು ನೋಡುತ್ತಾರೆ. ಆದರೆ ಸ್ವತಂತ್ರ ಭಾರತದಲ್ಲಿ ಬದುಕುವ ಅವಕಾಶ ಅವರಿಗೆ ಸಿಗುವುದಿಲ್ಲ. ವೆಂಕಣ್ಣಯ್ಯನವರ ಮಗ ಸತ್ಯನಾರಾಯಣನೂ ಇಲ್ಲಿ ಒಂದು ಆದರ್ಶ ಪಾತ್ರವಾಗಿ ಮಿಂಚುತ್ತಾನೆ. ಅಪ್ಪನಂತೆ ದೇಶದ ಸ್ವಾತಂತ್ರ್ಯದ ಬಗ್ಗೆ ಅವನೂ ಕನಸು ಕಾಣುತ್ತಾನೆ. ಆದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಅದನ್ನು ಪಡೆಯಲು ಏನೂ ಮಾಡದ ಬಲ್ಲಾಳರು ಅಧಿಕಾರಕ್ಕಾಗಿ ಕುಟಿಲ ತಂತ್ರಗಳನ್ನು ಹೂಡಿದ ಅವರ ವರ್ತನೆ ಅವನಿಗೆ ಬಿಡಿಸಲಾಗದ ಒಗಟಾಗುತ್ತದೆ.
    ಕಾದಂಬರಿಯಲ್ಲಿ ಕೃಷ್ಣಯ್ಯನೆಂಬ ಸ್ವಲ್ಪವೂ ಮನೋಬಲವಿಲ್ಲದ ಸ್ತ್ರೀ ಲೋಲನ ಪಾತ್ರವನ್ನು ವೆಂಕಣ್ಣಯ್ಯನವರ ಸಶಕ್ತ ಪಾತ್ರದ ಎದುರಿಗಿಟ್ಟು ನೋಡಬಹುದಾಗಿದೆ. ಇಲ್ಲಿರುವುದು ತಿಳಿಹಾಸ್ಯವಾದರೂ ಅದು ಅಂದಿನ ಕಾಲದಲ್ಲಿ ಕೌಟುಂಬಿಕ ಬದುಕನ್ನು ಹಾಳುಗೆಡವುತ್ತಿದ್ದ ವೇಶ್ಯಾವಾಟಿಕೆಯ ದಿನಗಳನ್ನು ನೆನಪಿಸುತ್ತದೆ.

    ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ತಮ್ಮ ನಯವಂಚಕತನದ ಮೂಲಕ ಅಯ್ಕೆಯಾಗಿ ಬರುವ ಬಲ್ಲಾಳರು ಊರಿನಲ್ಲಿ ಭೂಮಿ-ಕಾಣಿಯನ್ನು ಹೊಂದಿದ ಎಲ್ಲ ಭೂಮಾಲಿಕರನ್ನೂ ವಂಚಿಸುತ್ತ ಅವರ ಒಕ್ಕಲುಗಳು ಅವರ ವಿರುದ್ಧ ನಿಲ್ಲುವಂತೆ ಮಾಡುತ್ತ ಹಿಂಸೆ-ಹೊಡೆದಾಟಗಳಿಗೂ ಕುಮ್ಮಕ್ಕು ಕೊಡುತ್ತಾರೆ‌. ಆ ಕಾಲದ ಭೂಮಾಲಿಕರ ಎಲ್ಲ ಗುಣಗಳನ್ನೂ ಹೊತ್ತ ಒಂದು ಪಾತ್ರ ಅವರದು. ಸ್ವಾತಂತ್ರ್ಯ ಬಂದ ನಂತರ ‘ಉಳುವವನೇ ಹೊಲದೊಡೆಯ’ ಎಂಬ ಕಾನೂನು ಜ್ಯಾರಿಯಾದಾಗಲಂತೂ ಇತರ ಅನೇಕ ಸಣ್ಣ ಹಿಡುವಳಿದಾರರು ತಮ್ಮ ಇದ್ದಬದ್ದ ಭೂಮಿಯಿಂದ ವಂಚಿತರಾಗಲು ಅವರೇ ಕಾರಣರಾಗುತ್ತಾರೆ. ಭಾರತದ ಎಲ್ಲೆಡೆ ನಡೆದ ಘಟನೆಗಳ ಚಿತ್ರಣಗಳನ್ನು ಲೇಖಕರು ಇಲ್ಲಿಯೂ ನಿರ್ಲಿಪ್ತವಾಗಿ ವರ್ಣಿಸುತ್ತಾರೆ. ಸಾಕಮ್ಮನ ವಿಚಾರದಲ್ಲಿ ಅವಳು ಮತ್ತು ಸಿದ್ದನಾಯಕನ ಮಧ್ಯೆ ಭೂಮಿಯು ಸಮವಾಗಿ ಹಂಚಿ ಹೋಗುವಂತೆ ಮಾಡಿದ್ದು ಮಾತ್ರ ಬಲ್ಲಾಳರ ಔದಾರ್ಯ. ಆದರೆ ಅದಾಗಲೇ ಎಲ್ಲವನ್ನೂ ತಿಳಿದುಕೊಂಡಿದ್ದ ಬಾರಕೂರಿನಂಥ ಪೇಟೆಯಲ್ಲಿ ವಾಸಿಸುತ್ತಿದ್ದ ಸಿದ್ದನಾಯಕನ ಭಾವ ನಾಗರಾಜನಿಂದಾಗಿ ಸಿದ್ದನಾಯಕನಿಗೆ ಮನಸ್ಸಿಲ್ಲದಿದ್ದರೂ ಸಾಕಮ್ಮನ ಎಲ್ಲ ಆಸ್ತಿಯೂ ಅವನ ವಶವಾಗುತ್ತದೆ.

    ಕಾದಂಬರಿಯಲ್ಲಿ ಸಾಕಮ್ಮನ ಪಾತ್ರ ಪೋಷಣೆ ಸಮರ್ಥವಾಗಿ ಬಂದಿದೆ. ಯಶಸ್ವಿ ಗೃಹಿಣಿಯಾದ ಆಕೆಯಲ್ಲಿ ಒಬ್ಬ ಉತ್ತಮ ಕೃಷಿಕಳಾಗುವ ಸಾಮರ್ಥ್ಯವೂ ಇದೆ. ಸ್ವಾಭಿಮಾನಿಯಾದ ಅಕೆ ತನ್ನ ಭೂಮಿಯ ಅಳಿವು-ಉಳಿವಿನ ಪ್ರಶ್ನೆ ಬಂದಾಗ ಬಲ್ಲಾಳರಂಥ ಸರ್ವಾಧಿಕಾರಿಯ ಮಾತನ್ನೂ ವಿರೋದಿಸಿ ತನ್ನಿಷ್ಟ ಪ್ರಕಾರ ನಡೆಯುವ ಬುದ್ದಿವಂತೆ. ಸಿದ್ದನಾಯಕ ಅವಳ ಗದ್ದೆಯನ್ನು ಅವಳ ಮಾತನ್ನು ಕೇಳದೆ ಉಳಲು ಹೊರಟಾಗ ಗದ್ದೆಯ ಮಧ್ಯ ನೇಗಿಲಿಗೆದುರಾಗಿ ಕುಳಿತುಕೊಂಡು ತನ್ನ ವಿರೋಧವನ್ನು ವ್ಯಕ್ತಪಡಿಸುವ ದಿಟ್ಟೆ ಸಾಕಮ್ಮ. ಆದರೆ ಕೊನೆಯಲ್ಲಿ ಸಾಕಮ್ಮ ಸೋಲು ಅನುಭವಿಸಿ ಅವಳ ಇಡೀ ಕುಟುಂಬವೇ ಬೆಂಗಳೂರಿಗೆ ಹೋಗಬೇಕಾಗಿ ಬರುವುದು ಪರಿಸ್ಥಿತಿಯ ವ್ಯಂಗ್ಯ.

    ಯಾರು ಸರಿ-ಯಾರು ತಪ್ಪು ಎಂಬ ತೀರ್ಪನ್ನು ಲೇಖಕರು ಎಲ್ಲೂ ಕೊಡುವುದಿಲ್ಲ. ಅದರೆ ಒಂದಿಲ್ಲೊಂದು ದಿನ ಭೂಮಿಯನ್ನು ಪಡೆದ ಬಡ ಕುಟುಂಬದವರ ಮಕ್ಕಳು ಶಾಲೆಗೆ ಹೋಗಿ ಕಲಿತು ಭೂಮಿಯನ್ನು ಮಾರಿ ಪೇಟೆಗೆ ಹೋಗಿ ಕುಳಿತು ಬಿಳಿ ಕಾಲರ್ ಕೆಲಸವನ್ನು ನೆಚ್ಚಿಕೊಳ್ಳುವವರೇ ಆಗುತ್ತಾರೆ ಅನ್ನುವ ಸೂಚನೆ ಕಾದಂಬರಿಯಲ್ಲಿದೆ.

    ಒಂದು ಮನಮುಟ್ಟುವ ಕಥೆ ಮಾತ್ರವಲ್ಲದೆ ಕಾದಂಬರಿಯ ತುಂಬಾ ಕರಾವಳಿಯ ಬದುಕಿನ ಸುಂದರ ಚಿತ್ರಣವೂ ಇದೆ. ಕೃಷಿ-ಬೇಸಾಯಗಳ ವರ್ಣನೆ, ಹಸಿರು ತುಂಬಿದ ಪ್ರಕೃತಿಯ ಬೆಡಗು, ನಿಸರ್ಗ ಮತ್ತು ಮನುಷ್ಯರ ನಡುವಣ ಆಪ್ತ ಸಂಬಂಧ, ಕರಾವಳಿಯಲ್ಲಿ ಜನಪ್ರಿಯವಾದ ಯಕ್ಷಗಾನ ಪ್ರಿಯತೆಗಳು ಇಲ್ಲಿ ಹೃದಯಂಗಮವಾಗಿ ಚಿತ್ರಿತವಾಗಿವೆ. ಒಂದು ರೀತಿಯಿಂದ ನೋಡಿದರೆ ಇಡೀ ಕರಾವಳಿಯೇ ಇಲ್ಲಿ ಒಂದು ಸಶಕ್ತ ಪಾತ್ರವಾಗಿ ಮೈದುಂಬಿ ನಿಂತಿದೆ. ಗ್ರಹಣದ ಕುರಿತಾದ ‘ಮುಷ್ಟ’ ಮೊದಲಾದ ನಂಬಿಕೆಗಳನ್ನು ಮೂಢನಂಬಿಕೆಗಳೆಂದು ಕರೆಯಲಾಗದಂತಹ ಪರಿಸ್ಥಿತಿ ಅದರ ಪರಿಣಾಮದಲ್ಲಿ ಕಾಣಿಸುತ್ತದೆ. ಪ್ರಕೃತಿಯಲ್ಲಿ ಲಭ್ಯವಾಗುವ ವಸ್ತುಗಳ ಸಹಾಯದಿಂದಲೇ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿವರಗಳು ಬಹಳ ಚೆನ್ನಾಗಿ ಬಂದಿವೆ. ಮಂಗಳೂರಿನಲ್ಲಿ ಅರ್ಧಂಬರ್ಧ ವೈದ್ಯಕೀಯ ಕಲಿತು ಹಳ್ಳಿ- ಪೇಟೆಗಳ ಆಯಕಟ್ಟಿನ ಜಾಗಗಳಲ್ಲಿ ನೆಲೆಸಿ ‘ಕೆಂಪು ಔಷಧಿ’ ಕೊಡುವ ವೈದ್ಯ ಭೀಮರಾಯರಂಥವರು ಭಾರತದ ಎಲ್ಲ ಹಳ್ಳಿಗಳಲ್ಲಿ ಆ ಕಾಲಘಟ್ಟದಲ್ಲಿ ಇದ್ದವರೇ. ಮನೆಮದ್ದು ಮಾಡಿ ಕಾಯಿಲೆ ಗುಣವಾಗದ ಸಂದರ್ಭಗಳಲ್ಲಿ ಜನರು ಕೊನೆಯ ಘಳಿಗೆಯಲ್ಲಿ ಹೋಗುವುದು ಅವರ ಬಳಿಗೇ.

    ಅಂತೆಯೇ ಕಾಲಕ್ರಮೇಣ ಪರಿಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳ ಚಿತ್ರಣವೂ ಕಾದಂಬರಿಯಲ್ಲಿದೆ. ಸ್ವಾತಂತ್ರ್ಯದ ನಂತರ ಹಳ್ಳಿಗಳ ನಡುವೆ ಸೃಷ್ಟಿಯಾಗುವ ಸಾರಿಗೆ ವ್ಯವಸ್ಥೆ, ಮೋಟರುಗಳ ಮೂಲಕ ಸರಾಗವಾಗುವ ಜನರ ಓಡಾಟ, ಬ್ಯಾಂಕುಗಳ ಸ್ಥಾಪನೆ, ರಾಷ್ಟ್ರೀಕೃತ ಬ್ಯಾಂಕುಗಳು ರೈತರನ್ನು ಆಕರ್ಷಿಸಲು ಬ್ಯಾಂಕುಗಳು ಹೂಡುವ ವಿವಿಧ ತಂತ್ರಗಳಂಥ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಣಿಸುವ ಪಲ್ಲಟಗಳು ಕಥೆಯೊಳಗೆ ಹಾಸುಹೊಕ್ಕಾಗಿರುವುದು ಓದುಗರ ಗಮನಕ್ಕೆ ಬಾರದಿರುವುದಿಲ್ಲ.

    ಶಶಿಧರ ಹಾಲಾಡಿಯವರು ಕಥೆಯನ್ನು ಹೇಳುವುದರಲ್ಲಿ ಸಿದ್ಧಹಸ್ತರು. ಅವರ ನಿರೂಪಣಾಶೈಲಿ ಕುತೂಹಲ ಹುಟ್ಟಿಸುತ್ತ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಗ್ರಾಮೀಣ ಬದುಕಿನ ವರ್ಣನೆ ಅವರಿಗೆ ಕರತಲಾಮಲಕ. ಆದ್ದರಿಂದಲೇ ಹಳ್ಳಿಯ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಅವರು ವರ್ಣಿಸಬಲ್ಲರು. ‘ನದಿ ದಾಟಿ ಬಂದವರು’ ಎಂಬ ಶೀರ್ಷಿಕೆಯೇ ಅದಕ್ಕೆ ಸಾಕ್ಷಿ.‌ ದೋಣಿಯಿಲ್ಲದೆ ನದಿ ದಾಟುವುದು ಬಹಳ ಕಷ್ಟದ ಕೆಲಸ. ದಾಟಲು ಸಾಧ್ಯವಾದರೆ ಅದು ದಾಸ್ಯದಿಂದ ಬಳಲುತ್ತಿದ್ದವರು ಸ್ವಾತಂತ್ರ್ಯ ಪಡೆದಂತೆ. ಕಷ್ಟಗಳಿಂದ ಬಿಡುಗಡೆಗಾಗಿ ನಡೆಸುವ ಹೋರಾಟದ ವಿವಿಧ ಮುಖಗಳನ್ನು ಕಾದಂಬರಿಯ ಉದ್ದಕ್ಕೂ ಲೇಖಕರು ಚಿತ್ರಿಸುತ್ತಾರೆ. ಒಂದು ಉತ್ತಮ ಬದುಕಿನ ಕನಸನ್ನು ಹೊತ್ತು ಸೀತಾನದಿಯನ್ನು ದಾಟಿ ನೆಲ್ಯಾಡಿಗೆ ಬಂದು ನೆಲೆಸಿದ ಕುಟುಂಬವು ಯಾವಯಾವುದೋ ರೀತಿಗಳಿಂದ ಕಷ್ಟಗಳನ್ನು ಅನುಭವಿಸಿ ಕೊನೆಗೆ ಭೂಮಿಯ ಒಡೆತನ ಪಡೆಯುವ ಮಟ್ಟಕ್ಕೆ ಹೋಗುವುದು ದಲಿತರ ಸಮಸ್ಯೆಗೆ ಒಂದು ಪರಿಹಾರವೇ ಆದರೂ ಕೃಷಿಯನ್ನು ಅಪಾರವಾಗಿ ಪ್ರೀತಿಸುವ ಸಾಕಮ್ಮನಂತಹ ಮಧ್ಯಮವರ್ಗದ ಪರಿಶ್ರಮಿ ಜೀವಿಗಳೂ ಎಲ್ಲವನ್ನೂ ಕಳೆದುಕೊಳ್ಳುವುದು ಮತ್ತು ಬಡವರನ್ನು ನಿರಂತರವಾಗಿ ಶೋಷಿಸಿದ ಬಲ್ಲಾಳರಂಥ ಶ್ರೀಮಂತ ಜಮೀನ್ದಾರರಿಗೆ ಭೂಮಸೂದೆಯ ಬಿಸಿ ತಾಗದೇ ಇರುವುದು ಪರಿಸ್ಥಿತಿಯ ಒಂದು ದುರಂತವೆಂಬ ನೋವಿನ ಎಳೆಯೂ ಓದುಗರ ಮನಸ್ಸಿಗೆ ಬಾರದಿರಲಾರದು. ಆ ಕಾಲಘಟ್ಟದ ಒಂದು ಕಟು ವಾಸ್ತವವನ್ನು ಅತ್ಯಂತ ನಿರುದ್ವಿಗ್ನವಾಗಿ ಕಾದಂಬರಿಕಾರರು ಬಣ್ಣಿಸುವ ಪರಿಗೆ ತಲೆದೂಗಲೇಬೇಕು.

    – ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ನಂದಗೋಕುಲ ವೇದಿಕೆಯಲ್ಲಿ ‘ಕನ್ನಡ ರಾಜ್ಯೋತ್ಸವ 2025’ | ನವೆಂಬರ್ 01
    Next Article ಮಾತಂಗಿ ಟೀಚರ್ ಮತ್ತು ಡಾಕ್ಟರ್ ನಂದಿನಿಯ ಸಂಗೀತದಲ್ಲಿ ಮುಳುಗಿದ ಗೋಶಾಲೆ
    roovari

    Add Comment Cancel Reply


    Related Posts

    ಕವನ | ನಿಮಗರ್ಥವಾಗದು…..

    October 27, 2025

    ಕೂಚಿಪುಡಿ ನಾಟ್ಯ ಪರಂಪರ ಹನ್ನೆರಡನೆಯ ನೃತ್ಯೋತ್ಸವ -2025 | ಅಕ್ಟೋಬರ್ 31

    October 27, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    October 27, 2025

    ಮಾತಂಗಿ ಟೀಚರ್ ಮತ್ತು ಡಾಕ್ಟರ್ ನಂದಿನಿಯ ಸಂಗೀತದಲ್ಲಿ ಮುಳುಗಿದ ಗೋಶಾಲೆ

    October 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.