Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ

    February 5, 2026

    ಹರಿಕಥಾ ಪರಿಷತ್ತಿನ 16ನೇ ವಾರ್ಷಿಕೋತ್ಸವ

    February 5, 2026

    ಡಾ. ಕೆ.ಬಿ. ಸೂರ್ಯಕುಮಾರ್‌ಗೆ ‘ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ ಪ್ರಕಟ

    February 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ
    Article

    ಪುಸ್ತಕ ವಿಮರ್ಶೆ | ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ

    February 5, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪಾರ್ಟಿ-ಕಂಪೆನಿಗಳೆಂದು ಸದಾ ಸ್ನೇಹಿತರೊಂದಿಗೆ ಬಿಡುವಿನ ಸಮಯವನ್ನು ಕಳೆಯುವ ಇಂದಿನ ಯುವಜನತೆ ಕೆಲವೊಮ್ಮೆ ‘ಸೋಲೋಟ್ರಿಪ್’ ಎಂದು ದೂರ ಪ್ರವಾಸ ಹೋಗುವುದೂ ಇದೆ. ಇವತ್ತಿನ ಕಾಲದಲ್ಲಿ ಸೋಲೋಟ್ರಿಪ್ ಅಂದರೆ ಸ್ನೇಹಿತರನ್ನು ಬಿಟ್ಟು ಒಬ್ಬರೇ ವಿಮಾನ-ರೈಲು-ಬಸ್ಸು-ಕಾರುಗಳಲ್ಲಿ ತಿಂಗಳಿಗೆ ಮೊದಲೇ ಬುಕ್ ಮಾಡಿ ಇಳಿದುಕೊಳ್ಳಲು ಹೋಟೆಲ್ ವ್ಯವಸ್ಥೆಯನ್ನೂ ಮೊದಲೇ ಮಾಡಿಕೊಂಡು ಹೋಗುವುದು. ಕೆಲವರು ನೂರಾರು ಕಿ.ಮೀ.ಗಳಷ್ಟು ದೂರದ ಬೈಕ್ ಸವಾರಿಯ ಸಾಹಸಕ್ಕೆ ಕೈ ಹಾಕುವುದೂ ಇದೆ.

    ಆದರೆ ಖ್ಯಾತ ಲೇಖಕ ಶಶಿಧರ ಹಾಲಾಡಿಯವರು ತಮ್ಮ ಹೊಸ ಕೃತಿ ‘ನನ್ನ Solo ಟ್ರಿಪ್’ನಲ್ಲಿ ಹೇಳುತ್ತಿರುವುದು ಇಂಥ ಪ್ರವಾಸಗಳ ಬಗ್ಗೆ ಅಲ್ಲ. ಇದು ಅವರು ಎಳೆಯ ಹುಡುಗ ಹಾಗೂ ಯುವಕರಾಗಿದ್ದ ಕಾಲದಲ್ಲಿ-ಅಂದರೆ 1970-80ರ ದಶಕಗಳಲ್ಲಿ – ಅವರ ಊರಾದ ಹಾಲಾಡಿಯ ಸುತ್ತುಮುತ್ತ, ಸಹ್ಯಾದ್ರಿ ಪ್ರದೇಶ, ವೃತ್ತಿಜೀವನ ಆರಂಭಿಸಿದ ಅರಸೀಕೆರೆಯ ಸುತ್ತುಮುತ್ತಲಿದ್ದ ಕಾಡು-ಗುಡ್ಡ-ಬೆಟ್ಟಗಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸೈಕಲ್ ಸವಾರಿಯ ಮೂಲಕ ಏಕಾಂಗಿಯಾಗಿ ಮಾಡಿದ ಪ್ರವಾಸಗಳ ಬಗ್ಗೆ. ಆಗ ಇವತ್ತು ಎಲ್ಲೆಡೆ ಸಾಮಾನ್ಯವಾಗಿ ಬಿಟ್ಟಿರುವ ರಸ್ತೆಗಳು ಮತ್ತು ವಾಹನ ಸಂಪರ್ಕಗಳು ಏನೂ ಇರಲಿಲ್ಲ. ಹೋಟೆಲಿಗೆ ಖರ್ಚು ಮಾಡಲು ಧಾರಾಳ ಹಣವೂ ಇರುತ್ತಿರಲಿಲ್ಲ. ಅಲ್ಲದೆ ಎಳೆಯ ಹುಡುಗನಾಗಿದ್ದಾಗ ಮನೆಯಿಂದ ಅವರ ಅಮ್ಮಮ್ಮ ಒಬ್ಬನೇ ಹಾಗೆಲ್ಲ ತಿರುಗಾಡಲು ಸರ್ವಥಾ ಅನುಮತಿ ನೀಡುತ್ತಿರಲಿಲ್ಲ.

    ಬೆಟ್ಟ ಗುಡ್ಡ, ಹೊಲ-ಗದ್ದೆ, ದಟ್ಟ ಕಾಡುಗಳಿರುವ ಪ್ರದೇಶದಲ್ಲಿ ಒಂಟಿಯಾಗಿ ನಿಂತ ಲೇಖಕರ ಮನೆಯ ಪರಿಸರದ ಪ್ರಕೃತಿ ಸೌಂದರ್ಯವು ಅವರು ಬಹಳ ಚಿಕ್ಕವರಿರುವಾಗಲೇ ಅವರನ್ನು ಇನ್ನಿಲ್ಲದಂತೆ ಅಕರ್ಷಿಸಿತ್ತು. ಹಾಗೆ ಬಿಡುವು ಸಿಕ್ಕಿದಾಗಲೆಲ್ಲ ದೂರದಲ್ಲಿ ಕಾಣುವ ಗುಡ್ಡ ಬೆಟ್ಟಗಳನ್ನೇರಿ ಅಲ್ಲಿಂದ ಪ್ರಕೃತಿ ವೀಕ್ಷಣೆ ಮಾಡಬೇಕೆನ್ನುವ ಅನ್ವೇಷಕ ಬುದ್ದಿಯಿಂದ ಮನೆಯ ಹಿರಿಯರಾದ ‘ಹೆಡ್ ಮೇಡಂ’ (ಅಮ್ಮಮ್ಮ) ಅವರ ಬಳಿ ಸುಳ್ಳು ಹೇಳಿ ಬೆಳಗ್ಗೆ ಮನೆ ಬಿಟ್ಟು ಸಂಜೆಯೊಳಗೆ ಮನೆ ಸೇರುತ್ತಿದ್ದರು. ಸಹ್ಯಾದ್ರಿಯ ತಪ್ಪಲಿನ ಬಾಳೆಬರೆ ಘಾಟ್ ಅವರು ನೋಡಿದ್ದು ಹೀಗೆ. ಹದಿಹರೆಯದ ಹುಡುಗ ಹೀಗೆ ಒಂಟಿಯಾಗಿ ನಿರ್ಜನ ರಸ್ತೆಯಲ್ಲಿ ನಡೆದು ಹೋಗುವ ಪರಿಪಾಠ ಅಂದು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೂ ಇರಲಿಲ್ಲ.

    ಒಮ್ಮೆ ಕಾಲೇಜು ಓದುತ್ತಿದ್ದಾಗ ಶಿಲಾರೋಹಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ಅಂತಹ ಅನೇಕ ಸಾಹಸಗಳನ್ನು ಮಾಡಿ ಅನುಭವವಿದ್ದ ಶ್ರೀ ಜಿ.ಎನ್. ಅಶೋಕವರ್ಧನ್ ಬಂದಿದ್ದರು. ಶಿಲಾರೋಹಣದ ನಿಜ ಅನುಭವ ಪಡೆಯಲು ಆಸಕ್ತಿ ಇದ್ದವರು ಉಜಿರೆಗೆ ಬಂದು ತಾನು ಕಟ್ಟುವ ತಂಡವನ್ನು ಸೇರಬಹುದೆಂದು ಅವರು ಆಹ್ವಾನವಿತ್ತಾಗ ಲೇಖಕರು ಹಿಂದುಮುಂದು ನೋಡದೆ ಹೆಸರು ಕೊಟ್ಟರು. ಮನೆಯಲ್ಲಿ ತಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆಂದು ಸುಳ್ಳು ಹೇಳಿ ಉಜಿರೆಗೆ ಹೋಗಿ ತಂಡವನ್ನು ಸೇರಿ ರಾತ್ರಿಯಿಡೀ ರಸ್ತೆಯಲ್ಲಿ ಕತ್ತಲಲ್ಲಿ ನಡೆದು ಚಾರ್ಮಾಡಿ ಘಟ್ಟದಲ್ಲಿರುವ ‘ಏರಿಗಲ್ಲನ್ನು’ ಏರಿ ಕಚಗುಳಿಯಿಡುವ ಆ ಅನುಭವವನ್ನು ಪಡೆದೇ ಬಿಟ್ಟಿದ್ದರು.

    ಬ್ಯಾಂಕ್ ಉದ್ಯೋಗಕ್ಕೆ ಅರಸೀಕೆರೆಯ ಸಮೀಪದ ಒಂದು ಹಳ್ಳಿಗೆ ನಿಯುಕ್ತರಾದಾಗ ಬಿಡುವಿನ ದಿನಗಳೊಂದನ್ನೂ ಬಿಡದೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಹೆಚ್ಚಾಗಿ ಏಕಾಂಗಿಯಾಗಿ ಮತ್ತು ಕೆಲವೊಮ್ಮೆ ಒಬ್ಬರೋ ಇಬ್ಬರೋ ಗೆಳೆಯರೊಂದಿಗೆ ಎಕ್ಸ್ ಪ್ಲೋರ್ ಮಾಡಿದ್ದರು.‌ ಆಗಿನ್ನೂ ಟಾರು ಹಾಕಿರದಿದ್ದ ಕಚ್ಚಾರಸ್ತೆಯಲ್ಲಿ ಬಾಡಿಗೆ ಸೈಕಲ್ ತೆಗೆದುಕೊಂಡು ಎಂಟು-ಹತ್ತು ಕಿ.ಮೀ. ಪ್ರಯಾಣ ಮಾಡಿದ್ದರು. ಅಲ್ಲಿಂದ ಕೆಲವೊಮ್ಮೆ ಗೆಳೆಯನಿರುವ ಚಿಕ್ಕಮಗಳೂರಿಗೆ ಬಂದು ಮುಳ್ಳಯ್ಯನ ಗಿರಿ-ಬಾಬಾಬುಡನ್ ಗಿರಿ, ಕಡೂರಿನ ಬಳಿಯ ‘ಮದಗದ ಕೆರೆ’ ಮೊದಲಾದೆಡೆಗಳಿಗೆ ಹೋಗಿ ಅವುಗಳಾಚೆಗಿನ ನಿರ್ಜನ ಪ್ರದೇಶಗಳಲ್ಲಿ ಪಾಳು ಬಿದ್ದ ದೇಗುಲಗಳನ್ನು ನೋಡಿದ್ದರು. ಬಾಬಾ ಬುಡನ್ ಗಿರಿಯ ಮೇಲೇರಿ ನೋಡಿ ಕೆಳಗಿಳಿಯುತ್ತಿದ್ದಾಗ ಕೆಳಗೆ ಹತ್ತಾರು ಮಂದಿ ಮುಸಲ್ಮಾನ ಯುವಕರು ಎಲ್ಲೋ ಹೋಗುತ್ತಿದ್ದುದನ್ನು ನೋಡಿ ಅವರು ಎಲ್ಲಿಗೆ ಹೋಗುತ್ತಿರುವುದೆಂದು ನೋಡುವ ಕುತೂಹಲದಿಂದ ಅವರ ಜತೆ ಸೇರಿ ನಡೆದಿದ್ದರು. ಇನ್ನೊಂದೆಡೆ ಬೃಹತ್ ಗಾತ್ರದ ಬಂಡೆಯ ಮೇಲೆ ಬಳ್ಳಿಗಳು ಹಬ್ಬಿಕೊಂಡಂಥ ರಚನೆಯನ್ನು ನೋಡಿ ಪ್ರಕೃತಿಯ ವೈಚಿತ್ರ್ಯಕ್ಕೆ ಬೆರಗಾಗಿದ್ದರು. ಬೆಂಗಳೂರಿನ ಹೊರವಲಯದ ತುರಹಳ್ಳಿ ಬಂಡೆಯನ್ನು ಏರುವ ಸಾಹಸವನ್ನು ಅವರು ಮಾಡಿದ್ದು ‘ಸ್ಪಾರ್ಕ್ಸ್’ ಎಂಬ ಹವ್ಯಾಸಿ ತಂಡದ ಜತೆ ಸೇರಿಯಾಗಿತ್ತು.

    ಹುಟ್ಟಿ ಬೆಳೆದ ಸ್ಥಳಕ್ಕೆ ಸಮೀಪದಲ್ಲೇ ಇರುವ ಶಂಕರನಾರಾಯಣ ಮತ್ತು ಕೋಟಿಲಿಂಗೇಶ್ವರ ದೇವಸ್ಥಾನಗಳಿಗೆ ಜಾತ್ರೆಯ ಸಮಯದಲ್ಲಿ ಏಕಾಂಗಿಯಾಗಿ ಹೋದದ್ದು, ‘ಜಗತ್ಪ್ರಸಿದ್ಧ’ ವಂಡಾರು ಕಂಬಳ ಗದ್ದೆಗೆ ಹೋಗಿ ಅಂಚಿನಲ್ಲಿ ಉದ್ದಕ್ಕೂ ಅಕ್ಕಿ ಚೆಲ್ಲಿ ಹರಕೆ ಸಲ್ಲಿಸಲು ಹೋಗಿದ್ದು ಎಲ್ಲವನ್ನೂ ಲೇಖಕರು ಸೋಲೋ ಟ್ರಿಪ್ಪಿನ ಲೆಕ್ಕಕ್ಕೆ ಸೇರಿಸುತ್ತಾರೆ. ಕಬ್ಬಿನಾಲೆ ಗ್ರಾಮದ ಕುಚ್ಚೂರಿನಲ್ಲಿರುವ ಬಂಧುಗಳ ಮನೆಯಿಂದ ‘ನಾಯಿ ಬೆರಿ’ ಬೆಟ್ಟಕ್ಕೆ ಮುಸ್ಸಂಜೆಯ ಹೊತ್ತು ಇಬ್ಬರು ಚಿಕ್ಕ ಹುಡುಗರೊಂದಿಗೆ ಹೋಗಿದ್ದು ಅವರಿಗೆ ಅಪಾರ ಸಂತೋಷ ಕೊಡುತ್ತದೆ. ಅಂಡಮಾನ್ ದ್ವೀಪಕ್ಕೆ ಹೋಗಬೇಕೆಂದು ಕನಸು ಕಂಡರೂ ಹಡಗಿನ ಟಿಕೆಟ್ ಸಿಕ್ಕದೆ ಮದರಾಸಿನಿಂದ ವಾಪಸ್ ಬಂದದ್ದು ಮಾತ್ರವಲ್ಲದೆ ಏಜೆಂಟ್ ಗೆ ಕೊಟ್ಟ ದೊಡ್ಡ ಮೊತ್ತದ ಹಣವನ್ನೂ ಕಳೆದುಕೊಂಡ ನೋವಿನ ಬಗ್ಗೆಯೂ ಇಲ್ಲಿ ಒಂದು ಲೇಖನವಿದೆ.

    ಈ ಕೃತಿಯು ಚೆನ್ನಾಗಿ ಓದಿಸಿಕೊಂಡು ಹೋಗಲು ಇನ್ನೊಂದು ಕಾರಣ ಲೇಖಕರು ನಡುನಡುವೆ ಸಾಂದರ್ಭಿಕವಾಗಿ ಹೇಳುವ ಇತರ ವಿಚಾರಗಳು. ಅಂದಿನ ದಿನಗಳಲ್ಲಿ ಪ್ರಕೃತಿ-ಪರಿಸರಗಳು ಹೇಗಿದ್ದವು, ರಸ್ತೆಗಳು ಇಲ್ಲದ ಊರಿನಲ್ಲಿ ಕಾಡುದಾರಿಗಳು ಹೇಗಿದ್ದವು, ಗ್ರಾಮೀಣ ಪ್ರದೇಶಗಳಲ್ಲಿ ಜನರ ಸ್ವಭಾವ ಮತ್ತು ಪರಸ್ಪರ ಸಂಬಂಧಗಳು ಹೇಗಿದ್ದವು ಅಪರೂಪದ ಹೂವು-ಹಣ್ಣು-ಹಕ್ಕಿಗಳು ಎಲ್ಲೆಲ್ಲಿ ಕಾಣಸಿಗುತ್ತಿದ್ದವು ಮೊದಲಾದ ವಿವರಗಳು ಕೃತಿಯಲ್ಲಿ ಯಥೇಚ್ಛವಾಗಿ ಸಿಗುತ್ತವೆ. ದೇವಸ್ಥಾನಗಳ ಜಾತ್ರೆಯಲ್ಲಿ ಜನರನ್ನು ಆಕರ್ಷಿಸುವ ಅಂಗಡಿಗಳು, ಜನರ ಮುಗ್ಧ ಉತ್ಸಾಹ, ಮಕ್ಕಳ ಕುತೂಹಲಗಳು ಲೇಖನಗಳಿಗೆ ಬಣ್ಣ ಬಳಿಯುತ್ತವೆ. ಕಬ್ಬಿನಾಲೆಯ ಕುಚ್ಚೂರಿನ ಕೂಡು ಕುಟುಂಬದ ಕಥೆಯಂತೂ ಆಧುನಿಕರ ಪಾಲಿಗೊಂದು ಕನಸಿನ ಸ್ವರ್ಗವಾಗಿ ಕಾಣುತ್ತದೆ.

    ಇಡೀ ಕೃತಿಯಲ್ಲಿ ಲೇಖಕರ ಕಥನ ಶೈಲಿ ಅಕರ್ಷಕವಾಗಿದೆ. ಲೇಖನಗಳಿಗೆ ಕೊಟ್ಟ ಶೀರ್ಷಿಕೆಗಳು ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿವೆ. ಆದರೆ ಎಲ್ಲ ಲೇಖನಗಳನ್ನು ಒಟ್ಟಿಗೆ ಪರಿಗಣಿಸಿದಾಗ ಅಲ್ಲಲ್ಲಿ ಕೆಲವು ವಿಷಯಗಳ ಪುನರಾವರ್ತನೆಯಾಗುವುದನ್ನು ಕಾಣಬಹುದು. ಇದು ಅವರ ಎಲ್ಲ ಕೃತಿಗಳಲ್ಲೂ ಕಾಣುವ ಒಂದು ಸಾಮಾನ್ಯ ವಿಚಾರ. ಅವರು ಹುಟ್ಟಿ ಬೆಳೆದ ಹಳ್ಳಿ, ವೃತ್ತಿ ಆರಂಭಿಸಿದ ಜಾಗ, ಪತ್ರಿಕೋದ್ಯಮಿಯಾಗಿ ಸೇರಿದ ಊರುಗಳ ಉಲ್ಲೇಖ ಎಲ್ಲ ಕೃತಿಗಳಲ್ಲೂ ಬರುವುದರಿಂದ ಆತ್ಮಕಥಾಂಶಗಳ ವಿಚಾರದಲ್ಲಿ ಪುನರಾವರ್ತನೆ ಅನಿವಾರ್ಯವೂ ಹೌದು. ತರಗತಿಯಲ್ಲಿ ದಿನವೂ ಪಾಠ ಮಾಡುವ ಅಧ್ಯಾಪಕರು ತಮಗರಿವಿಲ್ಲದಯೇ ಕೆಲವು ವಿಷಯಗಳನ್ನು ಪುನರಾವರ್ತನೆ ಮಾಡಿ ಹೇಳುವಂತೆ ಲೇಖಕ ಹಾಲಾಡಿಯವರೂ ಮಾಡುತ್ತಾರೆ. ಆದರೆ ಅವು ಸಂದರ್ಭೋಚಿತವಾಗಿ ಬರುವುದರಿಂದ ಎಲ್ಲಿಯೂ ಆಭಾಸವೆನ್ನಿಸುವುದಿಲ್ಲ.

    ಕೃತಿಯ ಹೆಸರು : ‘ನನ್ನ Solo ಟ್ರಿಪ್ ‘
    ಲೇ : ಶಶಿಧರ ಹಾಲಾಡಿ
    ಪ್ರ : ಸ್ವಪ್ನ ಬುಕ್ಸ್, ಬೆಂಗಳೂರು

    ಪುಸ್ತಕ ವಿಮರ್ಶಕರು : ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಹರಿಕಥಾ ಪರಿಷತ್ತಿನ 16ನೇ ವಾರ್ಷಿಕೋತ್ಸವ
    roovari

    Add Comment Cancel Reply


    Related Posts

    ಹರಿಕಥಾ ಪರಿಷತ್ತಿನ 16ನೇ ವಾರ್ಷಿಕೋತ್ಸವ

    February 5, 2026

    ಡಾ. ಕೆ.ಬಿ. ಸೂರ್ಯಕುಮಾರ್‌ಗೆ ‘ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ ಪ್ರಕಟ

    February 5, 2026

    ಮಂಗಳೂರಿನ ಪುರಭವನದಲ್ಲಿ ‘ಮಾರ್ಗಂ ಮಾಧುರ್ಯಂ’ ಭರತನೃತ್ಯ ಸಮೂಹ ಪ್ರಸ್ತುತಿ | ಫೆಬ್ರವರಿ 08

    February 5, 2026

    ಮುಲ್ಕಿಯಲ್ಲಿ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ | ಫೆಬ್ರವರಿ 08

    February 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.