‘ನನ್ನ ಸೋಲೋ ಟ್ರಿಪ್’ ಇದು ಶಶಿಧರ ಹಾಲಾಡಿಯವರ ವಿನೂತನ ಬಗೆಯ ಪ್ರವಾಸ ಕಥನ. ಏಕಾಂಗಿಯಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಕೈಗೊಂಡ ತಿರುಗಾಟದ ಚಿತ್ರಣ ಇಲ್ಲಿ ಬಹು ಪರಿಣಾಮಕಾರಿಯಾಗಿ ಮೈಪಡೆದಿದೆ. ಸಸ್ಯಕಾಶಿ ಪಕ್ಷಿಕಾಶಿಗಳ ಒಡನಾಟ, ಸುತ್ತಲಿನ ಜನಜೀವನ ಸಂಸ್ಕೃತಿಗಳಿಗೆ ಸಂಬಂಧಿಸಿದ ಒಳನೋಟಗಳನ್ನು ನೀಡುವ ಹನ್ನೆರಡು ಪುಟ್ಟ ಪುಟ್ಟ ಸ್ವಾರಸ್ಯಕರ ಲೇಖನಗಳು ಇಲ್ಲಿವೆ.
ಸೋಲೋ ಟ್ರಿಪ್ ಅಥವಾ ಏಕಾಂಗಿ ಪಯಣ ಎಂಬ ಹೆಸರಿನ ಈ ಪ್ರವಾಸಾನುಭವ ಲೇಖನಗಳ ಸಂಕಲನ ಮೂಡಿಬಂದ ರೀತಿಯನ್ನು, ಅವು ರೂಪುಗೊಂಡ ಸಂದರ್ಭವನ್ನು ಮುಮ್ಮಾತಿನಲ್ಲಿ ಲೇಖಕರು ಹೀಗೆ ಹೇಳಿಕೊಂಡಿದ್ದಾರೆ. “ಹಲವು ಪ್ರವಾಸ ಕಥನಗಳನ್ನು ನಾನು ಬರೆದಿದ್ದರೂ, ಅವುಗಳ ಅನುಭವದ ಜೀವಾಳವಾಗಿ ಗ್ರೂಪ್ ಟೂರ್ ಅಥವಾ ಗುಂಪು ಪ್ರವಾಸಾನುಭವವೇ ಮೂಡಿಬಂದಿದೆ. ಟ್ರಾವೆಲ್ ಏಜೆನ್ಸಿಯವರು ಏರ್ಪಡಿಸುವ ಪ್ರವಾಸ ಒಂದು ರೀತಿಯಾದರೆ, ಕುಟುಂಬ ಸದಸ್ಯರು ಅಥವಾ ಗೆಳೆಯರ ಗುಂಪಿನೊಂದಿಗೆ ಕೈಗೊಳ್ಳುವ ಪ್ರವಾಸವು ಇನ್ನೊಂದು ರೀತಿ. ಈ ವಿಚಾರವೇ ತಲೆಯಲ್ಲಿ ಸುಳಿದಾಡಿದಾಗ ಥಟ್ಟನೆ ನೆನಪಾದದ್ದು, ನಾನು ಕೈಗೊಂಡ ಹಲವು ಏಕಾಂಗಿ ಪ್ರವಾಸಗಳು ಅಥವಾ ‘ಸೋಲೋ ಟ್ರಿಪ್’ಗಳು. ಅರೆ, ಹೌದಲ್ಲವಾ, ನಾನು ಎಷ್ಟೊಂದು ಸೋಲೋ ಟ್ರಿಪ್ ಮಾಡಿದ್ದೇನೆ. ಅವೆಲ್ಲವೂ ಇನ್ನೂ ಅಕ್ಷರರೂಪದಲ್ಲಿ ಮೂಡಿ ಬಂದಿಲ್ಲ, ಅಂತಹ ಅನುಭವಗಳನ್ನು ಬರಹಗಳನ್ನಾಗಿಸಬಾರದೇಕೆ ಎನಿಸಿದಾಗ ಮೂಡಿ ಬಂದ ಬರೆಹಗಳು ಇಲ್ಲಿವೆ!”
ಹೀಗಾಗಿ ಈ ಪ್ರವಾಸ ಕಥನ ಕೃತಿ ಒಂದು ಬಗೆಯ ಸೃಜನಶೀಲ ಪ್ರಯೋಗವೇ ಆಗಿದೆ. “ಪುಟ್ಟ ಹಳ್ಳಿಯ ಮೂಲೆಯಲ್ಲಿ, ಕಾಡು, ಗುಡ್ಡ ಮತ್ತು ಬತ್ತದ ಗದ್ದೆಗಳ ನಡುವಿದ್ದ ಹೆಂಚಿನ ಮನೆಯೊಂದರಲ್ಲಿ ಬಾಲ್ಯವನ್ನು ಕಳೆದ ನಾನು, ಸನ್ನಿವೇಶದ ಒತ್ತಡದಿಂದಲೋ, ಸ್ವಭಾವದ ಪ್ರಭಾವದಿಂದಲೋ, ಮೊದಲಿನಿಂದಲೂ ಏಕಾಂಗಿ! ಜತೆಗೆ, ಏಕಾಂಗಿತನವನ್ನೇ ಹೆಚ್ಚು ಬಯಸುವ ವ್ಯಕ್ತಿತ್ವವನ್ನು ರೂಢಿಸಿಕೊಂಡವನು. ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ, ನಮ್ಮ ಹಳ್ಳಿಮನೆಯ ಮೂರು ಕಿ.ಮೀ. ದೂರದ ಪರಿಧಿಯಲ್ಲಿ ನನ್ನ ಯಾವುದೇ ಸಹಪಾಠಿಗಳ ಮನೆಯಿರಲಿಲ್ಲ; ಗೆಳೆಯರ ಮನೆಯೂ ಇರಲಿಲ್ಲ; ಇದೂ ಸಹ ನನ್ನ ಏಕಾಂಗಿತನಕ್ಕೆ, ಏಕಾಂಗಿ ವಿಚಾರಗಳಿಗೆ, ಸೋಲೋ ಟ್ರಿಪ್‌ಗಳಿಗೆ ಪ್ರೋತ್ಸಾಹ ನೀಡಿರಬಹುದು. ನಂತರದ ದಿನಗಳಲ್ಲಿ, ಉದ್ಯೋಗ ನಿಮಿತ್ತ, ಬಯಲುಸೀಮೆಯ ಪುಟ್ಟ ಹಳ್ಳಿಯಲ್ಲಿ ಹಲವು ವರ್ಷ ಕಾಲ ಕಳೆಯಬೇಕಾದಾಗ, ಏಕಾಂಗಿಯೇ ಆಗಿದ್ದೆ. ಪ್ರವಾಸದ ಗೀಳು ಆಂಟಿಸಿಕೊಂಡು, ಏಕಾಂಗಿಯಾಗಿಯೇ ಹಲವು ಕಡೆ ಓಡಾಡಿದ್ದೆ. ಇವೆಲ್ಲವೂ ಸೋಲೋಟ್ರಿಪ್ ಅನುಭವಗಳಿಗೆ ಇಂಬು, ಕೊಂಬು ಕೊಟ್ಟವು!” ಹೊಸ ದೃಷ್ಟಿಕೋನ, ಸ್ವಂತಿಕೆ, ಸೋಪಜ್ಞತೆ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಇಲ್ಲಿ ಹಾಲಾಡಿಯವರ ಭಾಷೆಯ ಉಳುಮೆ ಮೆಚ್ಚುವಂಥದ್ದು.
ಪ್ರವಾಸ ಹಾಲಾಡಿಯವರಿಗೆ ಬರೇ ಒಂದು ಹವ್ಯಾಸವಲ್ಲ, ಅದು ಅವರ ಪ್ರವೃತ್ತಿ, ಮನೋಧರ್ಮ. ಕುಂದಾಪುರದಲ್ಲಿ ಕಾಲೇಜು ಓದುತ್ತಿದ್ದ ಯುವಕ ಹಾಲಾಡಿ ಅವರು ತಮ್ಮ ಮನೆಗೆ ಏಕಾಂಗಿಯಾಗಿ ಒಂದು ಮಧ್ಯಾಹ್ನ ಕಾಲ್ನಡಿಗೆಯಲ್ಲಿ ಮಾಡಿದ ಪ್ರವಾಸ ಈ ಕೃತಿಯ ಮೊದಲ ಲೇಖನ. ಯುವಕ ಶಶಿಧರ ಕುಂದಾಪುರದಲ್ಲಿ ಕಾಲೇಜು ಮುಗಿಸಿ, ರಸ್ತೆಯ ಮೇಲೆ 22 ಕಿ.ಮೀ. ದೂರದ ಹಾಲಾಡಿಗೆ ಸಾಗಿ ಬಂದ ಸಾಹಸ ಯಾತ್ರೆ ಇಲ್ಲಿದೆ. ಉಳಿದ ಲೇಖನಗಳು ಇದೇ ಬಗೆಯ ಕಾಲು ದಾರಿಯ ಸಾಹಸಕಥನಗಳೇ ಆಗಿವೆ.
ಇದು ಲೇಖಕರು ಏಕಾಂಗಿಯಾಗಿ ಮಾಡಿದ ಪ್ರವಾಸಗಳ ಚಿತ್ರಣ. ಏಕಾಂತ ಎಂದರೆ ತನ್ನಲ್ಲೇ ತಾನು ಇರುವುದು, ತನ್ನೊಳಗೇ ತಾನು ಸಂತೋಷಪಡುವುದು ! ಏಕಾಂತದ ಸ್ಥಿತಿಯನ್ನು ‘ಸ್ವಸ್ಥ’ ಎಂದೂ ಕರೆಯಬಹುದು. ಸ್ವ-ಸ್ಥ ಎಂದರೆ ತನ್ನಲ್ಲೇ ತಾನು ಇರುವ ಸ್ಥಿತಿ! ತನ್ನನ್ನು ತಾನೇ ಕಂಡುಕೊಳ್ಳುವ ಸ್ಥಿತಿ, ತಾನು ತಾನಾಗಿ ಬೆಳೆಯುವ, ಅರಳುವ ಹೊರಳುವ ಸ್ಥಿತಿ-ಗತಿ. ಹೀಗಾಗಿ ಇಲ್ಲಿ ಒಂದು ಬಗೆಯ ಆನಂದ, ವಿಸ್ಮಯ, ಆತ್ಮಸ್ಥೈರ್ಯ, ಆತ್ಮಪ್ರಕಾಶ ಎದ್ದು ಕಾಣುತ್ತದೆ.
ಪ್ರಕೃತಿಯ ಚಿರವಾದ ಚೆಲುವನ್ನು ಒಲಿದು ನೋಡುವ ಸಂಪನ್ನ ಮನ:ಸ್ಥಿತಿಯೊಂದರ ದರ್ಶನ ಇಲ್ಲಿ ನಮಗಾಗುತ್ತದೆ. ನಿತ್ಯ ಹರಿದ್ವರ್ಣದ ಕಾಡು ಕಾನು ಗುಡ್ಡ ಗಿರಿ ಬರೆ ನಿಸರ್ಗದ ವಿವಿಧ ಮುಖಗಳ ದರ್ಶನವಿಲ್ಲಿದೆ. ಇರುವುದೊಂದೇ ಭೂಮಿ. ಇದು ಕೇವಲ ಮನುಷ್ಯರಿಗಾಗಿ ಮಾತ್ರ ಅಲ್ಲ, ಆತ ಈ ಜೀವ ಜಗತ್ತಿನ ಒಬ್ಬ ಪ್ರತಿನಿಧಿ ಅಷ್ಟೇ, ನಾಗರಿಕ ಜೀವನ ಈ ವನ್ಯ ಸಂಸ್ಕೃತಿಯ ಮುಂದೆ ತೀರಾ ಸಪ್ಪೆಯಾದುದು ಎಂಬ ಸೂಕ್ಷ್ಮ ಚಿಂತನೆ, ಪರಿಸರದ ಬಗೆಗಿನ ಕಾಳಜಿ ಸಹ ಇಲ್ಲಿ ಅಭಿವ್ಯಕ್ತಗೊಂಡಿದೆ.
ಹಾಲಾಡಿಯವರು ಬರೇ ಪ್ರಕೃತಿಯ ಉಪಾಸಕರಷ್ಟೇ ಅಲ್ಲ. ಅವರಿಗೆ ನಿಸರ್ಗ ಬರೇ ಸೌಂದರ್ಯದ ಖಣಿ ಮಾತ್ರವಲ್ಲ. ಪ್ರಕೃತಿ ಹಾಗೂ ಮಾನವನ ಸಂಬಂಧ ಘನಿಷ್ಠವಾದದ್ದು, ಅಲ್ಲಿ ಸಾಮರಸ್ಯ ಸಹಜ. ಪ್ರಕೃತಿಯಿಂದ ಸಿಗುವ ದೊಡ್ಡ ಲಾಭವೆಂದರೆ ಆನಂದ. ಋತುಗಳ ರಿಂಗುಣಿತದಲ್ಲಿ ಬದುಕಿನ ಅಮೃತ ಶ್ರುತಿಯನ್ನು ಹಿಡಿಯುವ ಪ್ರಯತ್ನ ಇಲ್ಲಿ ಸದ್ದಿಲ್ಲದೇ ನಡೆದಿದೆ. ಪ್ರಕೃತಿಯನ್ನು ನಿಸರ್ಗವನ್ನು ಜಗತಿಯನ್ನು ಸೃಷ್ಟಿಯನ್ನು ಲೇಖಕರು ನೋಡುವ ಕ್ರಮದಲ್ಲಿ ಹೊಸತನವಿದೆ. ಸುತ್ತಲಿನ ಜೀವ ಜಗತ್ತಿನ ಕುರಿತಾಗಿ ಲೇಖಕರಿಗಿರುವ ನಿತಾಂತವಾದ ಪ್ರೇಮ, ಪ್ರಜ್ಞೆ ಮತ್ತು ಚೈತನ್ಯಗಳ ಬೆಸುಗೆ ಇಲ್ಲಿ ಎದ್ದು ಕಾಣುತ್ತದೆ. ನಾಗರಿಕತೆ ಮತ್ತು ನಿಸರ್ಗ ಜೀವನಗಳ ನಡುವಿನ ಆಪ್ತ ಸಂವಾದ ಸಮೀಕರಣವೂ ಇಲ್ಲಿದೆ.
ಇಲ್ಲಿನ ಪ್ರತಿಯೊಂದು ಲೇಖನದ ಶೀರ್ಷಿಕೆಯೂ ಅಷ್ಟೇ ಆಕರ್ಷಕವಾಗಿದ್ದು ಕೃತಿ ವಾಚನೀಯ. ಸೃಜನಾತ್ಮಕ ಅಭಿವ್ಯಕ್ತಿ ಇಲ್ಲಿ ಮಿಂಚಿದೆ. ಕಾದಂಬರಿಯ ಸ್ವಾರಸ್ಯವೂ ಭಾವಪ್ರಬಂಧದ ಪರಿಮಳವೂ ಇಲ್ಲಿ ಮಿಳಿತವಾಗಿದೆ. ಕೃಷಿ ಸಂಸ್ಕೃತಿಯಲ್ಲಿ ಕಾಣೆಯಾಗುತ್ತಿರುವ ಕಂಬಳ, ಅಣೆ, ಹಕ್ಕಲು, ಕುಮರಿ, ಸಂಕ ಬರೆ, ತೋಡು, ಗುಮ್ಮಿ, ಮದಗ, ಗಾಡಿಪೈಂಟ್ ಹೀಗೆ ಅನೇಕ ಪಾರಿಭಾಷಿಕ ಪದಗಳು, ವಿಶೇಷವಾದ ಸ್ಥಳನಾಮಗಳು ಈ ಕೃತಿಯಲ್ಲಿ ಕಾಣಸಿಗುವುದು ವಿಶೇಷ. ಇಲ್ಲಿ ಪ್ರಕಟವಾದ ಗಾಢ ಅನುಭವ, ಸಮೃದ್ಧ ವಿವರಣೆ ಅಷ್ಟೇ ಚೇತೋಹಾರಿಯಾಗಿದೆ.
ಕನ್ನಡಕ್ಕೆ ವಿಶಿಷ್ಟ ರೀತಿಯ ಪ್ರವಾಸ ಕಥನಗಳನ್ನು ನೆಯ್ಗೆ ಮಾಡಿ ಕೊಟ್ಟವರಲ್ಲಿ ಶಶಿಧರ ಹಾಲಾಡಿ ಅವರೂ ಒಬ್ಬರು. ಪ್ರವಾಸ ಸಾಹಿತ್ಯ ಎಂದರೆ ಸಾಮಾನ್ಯವಾಗಿ ಒಂದು ಪ್ರೇಕ್ಷಣೀಯ ಸ್ಥಳ, ಪ್ರದೇಶ, ಸಮಾಜ, ದೇಶ, ರಾಷ್ಟ್ರವನ್ನು ಪರಕೀಯವಾಗಿ ನೋಡಿ ವಿಶ್ಲೇಷಣೆಗೊಳಪಡಿಸಿದ ಕಥನ. ಆದರೆ ಈ ಮಾದರಿಗಿಂತ ತುಸು ಭಿನ್ನ ಬಗೆಯ ಸಾಹಸ ಪ್ರವಾಸ ಕಥನಗಳನ್ನು ಹಾಲಾಡಿಯವರು ಬರೆದು ಹೆಸರು ಮಾಡಿರುವುದು ವಿಶೇಷ. ಹಾಲಾಡಿ ಇವರದು ಬಹುಮುಖ ಪ್ರತಿಭೆ. ಅವರ ಹಾಗೆ ನಿಸರ್ಗದೊಂದಿಗೆ ಆತ್ಮೀಯ ತಾದಾತ್ಮ್ಯ ಅಂಟು ನಂಟು ಹೊಂದಿ ಅನುಸಂಧಾನಗೈದು ಅಲ್ಲಿ ತಾವು ಎದುರಿಸಿದ ಸನ್ನಿವೇಶಗಳನ್ನು ಕಂಡುಂಡ ವಿದ್ಯಮಾನಗಳನ್ನು ಸಜೀವವಾಗಿ ಸಚಿತ್ರವಾಗಿ ಸ್ವಾರಸ್ಯಪೂರ್ಣವಾಗಿ ನಿರೂಪಿಸಿದವರು ತೀರಾ ಕಡಿಮೆ ಎಂದೇ ಹೇಳಬಹುದು. ಶಶಿಧರ ಹಾಲಾಡಿ ಇವರು ಪತ್ರಕರ್ತರಾಗಿ, ಕಾದಂಬರಿಕಾರರಾಗಿ, ಅಂಕಣಕಾರರಾಗಿ, ಪ್ರಬಂಧಕಾರರಾಗಿ, ಕಸುವುಳ್ಳ ಪ್ರವಾಸ ಸಾಹಿತ್ಯ ನಿರ್ಮಾಪಕರಾಗಿ ಸೈ ಎನಿಸಿಕೊಂಡಿದ್ದಾರೆ. ಅನ್ವೇಷಣಾತ್ಮಕವಾದ ಕುತೂಹಲಕರವಾದ ಹಲವು ಉತ್ತಮ ಪ್ರವಾಸ ಕಥನಗಳನ್ನು ಅವರು ಬರೆದಿದ್ದಾರೆ. ಆ ಸಾಲಿಗೆ ಈ ಕೃತಿಯೂ ಈಗ ಹೊಸ ಸೇರ್ಪಡೆ.
ಪುಸ್ತಕ ವಿಮರ್ಶಕರು | ಪ್ರೊ. ಜಿ.ಎನ್. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬೈ, 400098.
ಪುಸ್ತಕ : ‘ನನ್ನ ಸೋಲೋ ಟ್ರಿಪ್’
ಲೇಖಕರು : ಶಶಿಧರ ಹಾಲಾಡಿ
ಸಪ್ನ ಬುಕ್ ಹೌಸ್ ಬೆಂಗಳೂರು
ಬೆಲೆ : ರೂ 100/-
