ಮಾಲತಿ ಪಟ್ಟಣಶೆಟ್ಟಿಯವರ ‘ನನ್ನ ಸೂರ್ಯ’ (2012) ಸಂಕಲನವು ಅವರ ಜೀವನ ಮತ್ತು ಕಾವ್ಯಜೀವನಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲೇ ಸರಿ. 32 ಕವಿತೆಗಳಿಂದ ಕೂಡಿದ ಈ ಸಂಕಲನದಲ್ಲಿ 23 ಪುಟ್ಟ ಪದ್ಯಗಳ ‘ನನ್ನ ಸೂರ್ಯ’ ಎಂಬ ಸರಣಿಯು ತನ್ನೆಲ್ಲ ವಿಶೇಷತೆಗಳೊಂದಿಗೆ ಕಂಗೊಳಿಸುತ್ತದೆ. ಕವಯತ್ರಿಯು ತಮ್ಮ ಮಗನನ್ನು ಸ್ಫೂರ್ತಿಯ ಸಂಕೇತವಾಗಿ, ಮೂಲ ಸೆಲೆಯಾಗಿ ಪರಿಭಾವಿಸುತ್ತಾರೆ. ‘ನನ್ನ ಸೂರ್ಯ’ ಕವನದಲ್ಲಿ ವಾತ್ಸಲ್ಯ ಭಾವವು ಕಂಡುಬರುತ್ತದೆ. ಲೋಕಕ್ಕೆ ಬೆಳಕನ್ನು ಕೊಡುವವನು ಸೂರ್ಯನಾದರೆ ತಾಯಿಯ ಮನೆಮನಗಳಿಗೆ ಬೆಳಕು ಕೊಡುವವನು ಮಗ. “ಪ್ರೊ. ಮಾಲತಿ ಈಗ ಮಾಗಿದ್ದಾರೆ. ಹಿಂದಿನ ನೆನಪುಗಳಿವೆ. ಆದರೆ ಉಪ್ಪು, ಹುಳಿ, ಖಾರಗಳ ಲೇಪನವಿಲ್ಲ. ಕವನಗಳ ತುಂಬಾ ತಾಯಿಯ ಮಮತೆ ಕಾಳಜಿಗಳಿವೆ” ಎಂದು ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟ ಚಂದ್ರಶೇಖರ ಕಂಬಾರರ ಮಾತುಗಳು ಗಮನಾರ್ಹವಾಗಿವೆ. 2022ರಲ್ಲಿ ಪ್ರಕಟವಾದ ‘ಕಳ್ಳುಬಳ್ಳಿ’ಯ ಪ್ರಸ್ತಾವನೆಯಲ್ಲಿ ಇದಕ್ಕೆ ಸಮರ್ಥನೆ ದೊರಕುತ್ತದೆ. “ಸಂತಸಪಡುವ ನನ್ನ ಮನಸ್ಸು ಹೇಳುತ್ತದೆ- ‘ನೋಡು ಹೇಗೆ ಹಬ್ಬಿಕೊಂಡಿದೆ ನಿನ್ನ ಸಾಹಿತ್ಯದ ಬಳ್ಳಿ!’ ನನ್ನದು ಈಗ ಸಂತೃಪ್ತ ಜೀವನ. ಹೀಗೆ ಮೂಡಿಕೊಂಡಿವೆ ನನ್ನ ಕಳ್ಳುಬಳ್ಳಿಯಲ್ಲಿ ಎರಡು ಹೂವು.”
ಗರ್ಭದ ಬಾಗಿಲು ತೆರೆ ತೆರೆದು
ಅಂಬೆಗಾಲಿಟ್ಟು ಬರುವ ಕೃಷ್ಣ ಚಂದಿರ ನೀ
ಭವ ಬಂಧನದಲ್ಲಿದ್ದು ಜನ್ಮ ಕೊಡುವ ದೇವಕಿ ನಾ (ಪುಟ 29)
ಎಂಬಲ್ಲಿ ಅದುವರೆಗೆ ಅನುಭವಿಸಿದ ಎಲ್ಲ ಬಗೆಯ ನೋವು ಯಾತನೆಗಳು ಮಗನ ಮುಖವನ್ನು ನೋಡಿದಾಗ ಮರೆಯಾಗುತ್ತದೆ. ತಾಯಿ ಮಗನ ಸಂಬಂಧಕ್ಕೆ ದೈವಿಕ ಸ್ಪರ್ಶ ಒದಗುತ್ತದೆ.
ಸೆರಗಿನಲ್ಲಿ ಅರ್ಧ ಮರೆಯಾದ ನಿನ್ನ ಮುಖ
ಮೋಡದ ಮರೆಯ ಚಂದಿರ
ಮಿನುಗುವ ಎರಡು ಕಣ್ಣು ನಕ್ಷತ್ರ
ಎನ್ನುವಲ್ಲಿ ಮಗನ ಮುಖದಲ್ಲಿ ಬ್ರಹ್ಮಾಂಡವನ್ನು ಕಾಣುತ್ತಾಳೆ. ‘ಇಗೊ ತಗೊ ತಣಿಸಬೇಕೆಂಬ ವಾತ್ಸಲ್ಯದ ಆತುರ’ ಎಂಬಲ್ಲಿ ತಾಯ್ತನದ ತುಡಿತವು ಗಮನವನ್ನು ಸೆಳೆಯುತ್ತದೆ. ತಾಯಿಯ ಮನದ ಪ್ರೀತಿಯೇ ಮಗುವಿನ ರೂಪದಲ್ಲಿ ಹುಟ್ಟಿದೆ ಎನ್ನುವುದನ್ನು ಸಾಕ್ಷೀಕರಿಸುವಂತೆ ಇಲ್ಲಿನ ಪ್ರತಿಯೊಂದು ಸಾಲುಗಳು ಮೂಡಿವೆ.
ಕಾಲ ನಿಜಕ್ಕೂ ನಿಷ್ಠುರ. ಅದು ಒಳಿತು ಕೆಡುಕಗಳೆರಡನ್ನೂ ಇಲ್ಲವಾಗಿಸುತ್ತದೆ. ಕವಯತ್ರಿಯು ತಾನು ಕಳೆದುಕೊಂಡಿದ್ದರೂ ನೆನಪುಗಳಲ್ಲಿ ಜೀವಿಸುತ್ತಾಳೆ. ‘ನಿರ್ಝರ’ದಲ್ಲಿ ಬರುವ ಹರಿವಿನ ರೂಪಕ ಅದನ್ನು ಸಂಕೇತಿಸುತ್ತದೆ. ಆದರೆ ಅವರು ಹಳಹಳಿಸುತ್ತಾ ಕುಳಿತುಕೊಳ್ಳುವುದಿಲ್ಲ.
ಆಕಾಶದಲ್ಲಿ ಕೊಳೆತ ನಕ್ಷತ್ರ ನಗೆ
ರಾಶಿ ರಾಶಿ ಕಸ ಕಿತ್ತೊಗೆದು
ಸುಟ್ಟ ಸೂರ್ಯ ಸತ್ತ ಚಂದಿರನ
ಗಂಟು ಕಟ್ಟಿ ಆಚೆ ಚೆಲ್ಲಿ
ಹೊಸ ದಿಗಂತ ವಿಸ್ತರಿಸಿಕೊಂಡಳು (ತಿಳಿಬೆಳಗು, ಪುಟ 17)
ಕವಯತ್ರಿಯ ಸೂಕ್ಷ್ಮ ಸಂವೇದನೆಯು ಹಾಳು ಬಿದ್ದ ಅರಮನೆಯ ಅಳು, ಬತ್ತಿದ ನದಿಯ ಶಾಪ, ಗೋರಿ, ಸ್ಮಾರಕ, ಬಾವಿಗಳ ಹಾಡುಗಳನ್ನು ಆಲಿಸುತ್ತದೆ. ನಿರ್ಜೀವ ವಸ್ತುಗಳೆನಿಸಿಕೊಂಡವುಗಳಲ್ಲೂ ಜೀವ ಮಿಡಿಯುತ್ತದೆ ಎಂಬ ವಿಚಾರವನ್ನು ಗ್ರಹಿಸುತ್ತದೆ. ಎದೆಗೊತ್ತಿಕೊಳ್ಳುವ ನವಿಲುಗರಿ, ಕಣ್ಣಿಗೊತ್ತಿಕೊಳ್ಳುವ ಸೆರಗಿನಂಚು, ಎತ್ತಿಕೊಳ್ಳುವ ಪುಸ್ತಕಗಳು ಜೀವಂತಿಕೆಯ ಸೆಲೆಗಳಾಗಿವೆ. ಅದುವರೆಗೂ ರಮ್ಯ ಭಾವದಲ್ಲಿ ಸಾಗುತ್ತಿದ್ದ ಕವಿತೆಯು ‘ಮಾನವ ಕುಲದ ನಾಶಕ್ಕೆ ಒಮ್ಮೊಮ್ಮೆ ಭೂಕಂಪ, ಜ್ವಾಲಾಮುಖಿ, ಮಹಾಪೂರ ಕಾರಣ’ ಎನ್ನುವುದರ ಮೂಲಕ ನಿಸರ್ಗದ ನಿರ್ಜೀವ ವಿದ್ಯಮಾನಗಳಲ್ಲೂ ಸಂಹಾರ ಶಕ್ತಿಯು ಅಡಕವಾಗಿರುವುದನ್ನು ತಿಳಿಸುತ್ತದೆ.
ಹೊಸ ಕಾಲವನ್ನು ಮನಷ್ಯ ಎಷ್ಟೇ ಬಲಿಷ್ಠವಾಗಿ ನಿರ್ಮಿಸಿದರೂ ಆತನು ನಿಸರ್ಗದೆದುರು ನಿಲ್ಲಲಾರ. ನಿಸರ್ಗವು ಅವನ ಸೃಷ್ಟಿಯನ್ನು ಒಂದೇ ಏಟಿಗೆ ನಾಶಪಡಿಸಬಲ್ಲದು. ಮಾನವನ ಎಲ್ಲ ಆಸೆಗಳನ್ನು ಪೂರೈಸುವ ಶಕ್ತಿ ಪ್ರಕೃತಿಗಿದೆ, ಆದರೆ ಅವನ ದುರಾಸೆಗಳನ್ನಲ್ಲ ಎಂಬ ತತ್ವಜ್ಞಾನದ ಮಾತು ಅವನ ಮನಸ್ಸಿಗೆ ಹೊಕ್ಕಿಲ್ಲ. ಪ್ರಾಕೃತಿಕ ಅಸಮತೋಲನಕ್ಕೆ ಮಾನವನ ದುರಾಸೆಯೇ ಕಾರಣ. ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶಗೈಯುತ್ತಾ ಅಟ್ಟಹಾಸವನ್ನು ಮಾಡುತ್ತಿದ್ದಾನೆ. ಅರಣ್ಯನಾಶವು ಜೀವಜಾಲದ ವಿನಾಶಕ್ಕೆ ಕಾರಣವಾಗಿದೆ. ಇದರಿಂದ ಪ್ರಾಣಿಸಂಕುಲ ನಾಶ, ಹವಾಮಾನ ವೈಪರೀತ್ಯ, ಜಲಮೂಲಗಳ ನಾಶ, ಬರಗಾಲಗಳು ತಲೆದೋರಿ ಮಾನವನ ಬದುಕು ದುರ್ಭರವಾಗುತ್ತಿರುವ ಹೊತ್ತಿನಲ್ಲಿ ಮಾನವನು ಪ್ರಕೃತಿಯ ಮೇಲೆಸಗುವ ಅತ್ಯಾಚಾರವನ್ನು ಖಂಡಿಸುವ ‘ಕ್ಷಮಿಸುತ್ತೀಯಾ ಕಾಡೆ?’ ಪ್ರಸ್ತುತವೆನಿಸುತ್ತದೆ. ‘ಕಾಡಿದ್ದರೆ’ ಎಂಬ ರಚನೆಯು ಕಾಡಿನ ಮಹತ್ವವನ್ನು ಸಾರುತ್ತದೆ.
‘ನಾನು ಭೂಮಿ, ನೀನು ಆಕಾಶ’ದಲ್ಲಿ ಜಡ ಮತ್ತು ಚಲನಶೀಲ ಅಂಶಗಳ ಮುಖಾಮುಖಿಯಾಗುತ್ತದೆ. ಇದ್ದಲ್ಲಿ ಇದ್ದಂತೆ ಕಾಣುವ ಬಾನು ಭುವಿ ಮತ್ತು ನಿರಂತರ ಬದಲಾವಣೆಗಳಿಗೆ ಗುರಿ ಮಾಡಿಕೊಂಡ ಸೂರ್ಯಾಸ್ತ ಮತ್ತು ನದಿ ಬದುಕಿನ ಬದಲಾವಣೆಯ ಸಂಕೇತವಾಗಿವೆ. ಕವಯತ್ರಿಯ ಮನದ ಹೊಯ್ದಾಟ ಮತ್ತು ಪ್ರಿಯಕರನ ಬರವಿನ ನಿರೀಕ್ಷೆಯು ಈ ಕವಿತೆಯ ಕೇಂದ್ರ.
ಒಂದೊಮ್ಮೆಯಾದರೂ ಕೊರಳ ಬಳಸಿ
ಉಮ್ಮಳವ ಹರಿಯಬಿಡಲಾರೆನೆ
ಸುಖದ ಮಕ್ಕಳ ಹೆರಲಾರೆನೆ
ಜನ್ಮಜನ್ಮದ ಆಸೆ ತಣಿಸಲಾರೆನೆ (ಪುಟ 21)
ಎಂದು ಒದ್ದಾಡುವಷ್ಟು ಬಯಕೆಯು ತೀವ್ರವಾಗಿದ್ದರೂ ಅವನೊಂದಿಗೆ ಪ್ರೀತಿಯನ್ನು ಬೆಳೆಸಲಾಗದ ತನ್ನ ಅಸಹಾಯಕತೆಯು ಇಲ್ಲಿದೆ. ಸ್ಥಿತಿಗತಿಗಳ ನಡುವಿನ ಹೊಯ್ದಾಟ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗದ ಪರಿಸ್ಥಿತಿಯು ಮುಖ್ಯವಾಗುತ್ತದೆ. ಇದೇ ವಸ್ತುವನ್ನು ಮಣ್ಣಿನ ಪ್ರತೀಕವನ್ನಾಗಿಸಿಕೊಂಡು ನೋಡುವ ‘ಸ್ಪರ್ಶ’ ಗಮನ ಸೆಳೆಯುತ್ತದೆ. ಬದುಕಿನಲ್ಲಿ ಅನುಭವಿಸಿದ ಕಷ್ಟನಷ್ಟಗಳನ್ನು ಹೇಳುವಾಗ ಹಿಂದಿನ ಸಂಕಲನದಲ್ಲಿರುವಂತೆ ಆವೇಶದಿಂದ ಹೇಳದೆ ನಿರ್ಲಿಪ್ತವಾಗಿ ಹೇಳುವ ಧಾಟಿಯು ಕವಯತ್ರಿಯ ವಯೋಸಹಜ ಪ್ರಬುದ್ಧತೆಯನ್ನು ಸೂಚಿಸುತ್ತದೆ.
ಯಾವುದೋ ಕೊನೆಯ ಸಂಬಂಧ
ಕಳಚಿಕೊಂಡಂತೆ ಗಳಗಳ
ಉದುರುತ್ತವೆ ಮರದೆಲೆ
ಸಾಗಿ ಹೋದ ಋತುಗಳ ಮಾಗಿದ
ನೆನಪು ಮಾಯ್ದ ಗಾಯ್ದ ಗುರುತುಗಳು
ಮರದ ಮೈತುಂಬಿಕೊಂಡು
ನಿರಾಳ ಕತೆ ಹೇಳುತ್ತವೆ ನನ್ನಂತೆ (ಪುಟ 41)
ಎಂಬ ಶಕ್ತ ಪ್ರತೀಕವು ಕವಯತ್ರಿಯ ವ್ಯಕ್ತಿತ್ವದ ಪ್ರತಿಫಲನವಾಗಿದೆ. ಪ್ರತಿ ಚರಣದಲ್ಲಿ ‘ನನ್ನಂತೆ’ ಎಂಬ ಪದವಿಲ್ಲದರುತ್ತಿದ್ದರೂ ಕವಿತೆ ಯಶಸ್ವಿಯಾಗಬಹುದಿತ್ತು.
‘ಅಸಾಧ್ಯವೆಂಬುದಿಲ್ಲ’ ಎಂಬ ಕವನವು ಪ್ರಕೃತಿಯ ದುರವಸ್ಥೆಯನ್ನು ಬಣ್ಣಿಸುವಮತೆ ಕಂಡರೂ ರಾಡಿಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಚಿತ್ರಣವನ್ನು ಅದರೊಳಗೆ ಕಾಣಲು ಸಾಧ್ಯವಿದೆ.
ಕಲ್ಲಾಗಿ ಬಿದ್ದುಕೊಂಡ
ಶಾಪಗ್ರಸ್ತ ಅಹಲ್ಯೆಯಂಥ ಕೋಟೆ ಕೊತ್ತಳ ಅರಮನೆ ಸ್ಮಾರಕಗಳ ಆ
ರೋದನವನ್ನಾಲಿಸುತ್ತ, ಕರಗುತ್ತ, ಮರುಗುತ್ತ
ಕಣ್ಣಲ್ಲಿ ಎತ್ತಿಕೋ ಮಮತೆಯಿಂದ (ಪುಟ 43)
ಎನ್ನುವಲ್ಲಿ ಸಂಸ್ಕೃತಿಯನ್ನು ಕಾಪಾಡಬೇಕಾದ ಹೊಣೆಯನ್ನು ನೆನಪಿಸುತ್ತದೆ.
ಏನೂ ಕಾಣದ ಕೇಳದಂಥ
ಕುರುಡ ಕಿವುಡರಂತೆ ಹಾಗೇ
ಬಿದ್ದುಕೊಂಡರೆ ಇನ್ನೇನಿದೆ ತೋಡಿಕೊ
ಹಾಳೂರಲ್ಲಿ ನಿನ್ನ ಬದುಕಿನ ಗೋರಿ
ಮರೆಯಾಗುತ್ತಿರುವ ಮಾನವೀಯತೆ, ಇತಿಹಾಸಕ್ಕೆ ಬೆನ್ನು ತಿರುಗಿಸುವ ನಿರ್ಲಕ್ಷ್ಯವನ್ನು ಬಿಟ್ಟು ಬದುಕಿನ ಸುಧಾರಣೆಗೆ ಕರೆ ನೀಡುತ್ತದೆ.
ಜಡ್ಡು ಹಿಡಿದ ಕರ್ಮಠ ಆಚಾರ ವಿಚಾರಗಳನ್ನು ವಿಮರ್ಶಿಸಿ ಅಸಲು ಕಸುಬಿಗೆ ಒಗ್ಗಿಸುವ ವಾಂಛೆ ನವ್ಯದ ನೇತಾರರಾದ ಗೋಪಾಲಕೃಷ್ಣ ಅಡಿಗರಲ್ಲಿ ಕಂಡುಬಂದರೆ ದಲಿತ ಕವಿ ಸಿದ್ಧಲಿಂಗಯ್ಯನವರಿಗೆ ‘ವೇದಶಾಸ್ತ್ರ ಪುರಾಣಗಳನ್ನು ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿಯ ಬಿಡುವ’ ತವಕ. ಆದರೆ ಸಿದ್ಧಲಿಂಗಯ್ಯನವರ ಇಂಥ ಕಾವ್ಯ ಕಲಾತ್ಮಕವೇ? ಜನಪರ ಕಾಳಜಿ, ಸಿದ್ಧಾಂತ, ಧಿಕ್ಕಾರ ಕೂಗುವುದು, ಘೋಷಣ ವಾಕ್ಯಗಳು ಕಾವ್ಯವಾಗಬಲ್ಲವೇ ಎಂಬ ಪ್ರಶ್ನೆಗಳೊಂದಿಗೆ ಸಾಹಿತ್ಯದಲ್ಲಿ ವಿಚಾರಗಳೇ ಪ್ರಧಾನವಾದರೆ ಕಲಾತ್ಮಕತೆಗೆ ಧಕ್ಕೆಯಾಗುತ್ತದೆ ಎಂಬ ಟೀಕೆಯನ್ನು ಎದುರಿಸಬೇಕಾಗುತ್ತದೆ. ಶೋಷಣೆಯ ವಿರುದ್ಧದ ಗೆಲುವನ್ನು ಸಾರುವ ‘ನಾವು ಮೆಟ್ಟಿಲಲ್ಲ’ ಅನುಭವದ ಸರಳೀಕರಣವನ್ನು ಒಳಗೊಂಡಿದ್ದರೂ ಮಿಕ್ಕ ದೋಷಗಳನ್ನು ನಿವಾರಿಸಿಕೊಂಡು ತನ್ನ ಸಾಂಕೇತಿಕತೆಯಿಂದ ಗಮನ ಸೆಳೆಯುತ್ತದೆ.
ಮೆಟ್ಟಿಲಾಗಿದ್ದೆವು
ನಿಮ್ಮ ಮೆಟ್ಟುಗಳ
ಮುಡಿಗೇರಿಸಿಕೊಂಡು ಮೆಟ್ಟಿಲಾಗಿದ್ದೆವು. (ಪುಟ 50)
ಮೆಟ್ಟು ಮತ್ತು ಮೆಟ್ಟಿಲುಗಳು ತುಳಿತವನ್ನು ಮತ್ತು ತುಳಿತಕ್ಕೊಳಗಾದವರನ್ನು ಪ್ರತಿನಿಧಿಸುತ್ತವೆ. ದಲಿತರನ್ನು ತುಳಿದೇ ಧಣಿಗಳು ಮೇಲೇರಿದ್ದಾರೆ ಎಂಬುದನ್ನು ಇದು ಧ್ವನಿಸುತ್ತದೆ. ಮುಂದಿನ ಭಾಗದಲ್ಲಿ ಕಾಲ ಬದಲಾದ ಸೂಚನೆಯಿದೆ.
ಮೆಟ್ಟುವವರಿಗೆ ತಲೆ ಕೊಡದೆ
ನಿಟ್ಟು ನಿಟ್ಟಲಿ ಸಮತೆಯ ದೀಪವಾಗ
ಹೊರಟವರಿಗೆ ಮೆಟ್ಟಲಾಗಿದ್ದೇವೆ
ಇಲ್ಲಿ ಕವಿತೆಯ ಆಶಯವು ಸ್ಪಷ್ಟವಾಗಿದೆ. ದಲಿತ ಸಮುದಾಯಕ್ಕೆ ಸಲ್ಲಬೇಕಾದ ಪಾಲನ್ನು ಪಡೆದು ಹೆಮ್ಮೆಪಡುವ ದನಿಯು ವ್ಯಕ್ತವಾಗುತ್ತದೆ. ಶ್ರಮದ ಪಲವನ್ನು ಅಸಹಾಯಕತೆಯಿಂದ ಅನುಭವಿಸಲಾರದ ಅರಿವಿನ ಪಾಡು ಮೊದಲ ಭಾಗದಲ್ಲಿ ಹಾಡಾಗಿ ಮೂಡಿದರೆ ಎರಡನೇ ಭಾಗದಲ್ಲಿ
ತುಳಿಸಿಕೊಂಡು ಮಾತನಳಿಸಿಕೊಂಡವರೆಲ್ಲ
ತುಳಿದ ಧಣಿಗೆ ಕುಣಿ ತೋಡಿಟ್ಟುಕೊಟ್ಟು
ಎದೆತಟ್ಟಿಕೊಂಡು ಮೆಟ್ಟಿಲಾಗಿದ್ದೇವೆ (ಪುಟ 51)
ಕರುಳಿರಿಯುವ ವ್ಯಂಗ್ಯವನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮೆಟ್ಟಿಲು ಎಂಬ ಪದವು ಶೋಷಣೆ ಮತ್ತು ಆಧಾರ ಎಂಬ ಅರ್ಥಗಳನ್ನು ಏಕಕಾಲಕ್ಕೆ ಧ್ವನಿಸುತ್ತದೆ.
ನೊಂದ ಸೋದರಿಗೆ ಸಾಂತ್ವನವಾಗುವ ‘ಕಂಬನಿ ಬೇಡ ಗೆಳತಿ’, ಒಂಟಿ ಮಹಿಳೆಯ ಹಾದಿಯಲ್ಲಿ ಎದುರಾಗುವ ಅಪಾಯಗಳನ್ನು ವಿವರಿಸುವ ‘ಏಕಾಕಿ ದಾರಿ’ ಹೆಣ್ಣಿನ ಸದ್ಯದ ಪರಿಸ್ಥಿತಿಗೆ ಕನ್ನಡಿಯನ್ನು ಹಿಡಿಯುತ್ತದೆ. ಪುರುಷ ಪ್ರಪಂಚದ ಸರಹದ್ದಿನಲ್ಲಿ ಉಸಿರಾಡುವ ಮಹಿಳೆಯು ತನಗೆದುರಾದ ಕಠೋರ ಪರಿಸ್ಥಿತಿಯನ್ನು ಪ್ರತಿಭಟಿಸಿದರೂ, ಇಲ್ಲದಿದ್ದರೂ ಉಪೇಕ್ಷೆಗೊಳಗಾಗುವ ದುರಂತವನ್ನು ಕವಯತ್ರಿಯು ಸಮರ್ಥವಾಗಿ ಸಂವಹನಗೊಳಿಸಿದ್ದಾರೆ. 21ನೇ ಶತಮಾನದಲ್ಲೂ ಹೆಣ್ಣು ಸ್ವಾಯತ್ತತೆಯ ಹಾದಿಯನ್ನು ಕಂಡುಕೊಂಡಿರದ ಆತಂಕವನ್ನೂ ಇಲ್ಲಿ ಕಾಣಬಹುದು.
ಯೌವನದ ಉಸಿರನ್ನು ಕೊಟ್ಟರೆ ಹಸಿರು ದೀಪ ಹಚ್ಚುವೆಯಾ ಎಂದು ಚಿಗುರನ್ನು ಪ್ರಶ್ನಿಸುವ ತರಗೆಲೆ, ಏಳು ಬಣ್ಣವನ್ನು ಕೊಟ್ಟರೆ ಮುಂಗಾರಿನ ತೋರಣ ಕಟ್ಟುವೆಯಾ ಎಂದು ಮೋಡವನ್ನು ಕೇಳುವ ಬಾನು, ಕಂಠಸಿರಿಯ ಕೊಟ್ಟರೆ ಹೊಸ ಹಾಡ ಹಾಡುವೆಯಾ ಎಂದು ಕೋಗಿಲೆಯನ್ನು ಕೇಳುವ ಪ್ರಕೃತಿಯ ವಿದ್ಯಮಾನಗಳಲ್ಲಿ ಪ್ರಯೋಜನಾಕಾಂಕ್ಷೆಯ ವ್ಯವಹಾರದ ನಡುವೆ ಬೆಂಡಾದ ಕೈ, ಸೋತ ಉಸಿರಿನ ಅವ್ವ ಹೊರಟು ನಿಂತ ಮಗಳಿಗೆ ‘ಚಿಗುರು ಚೈತ್ರವಾಗು, ಸುಳಿವ ಭೃಂಗವಾಗು, ಸುತ್ತಾಡಿ ರಚಿಸು ನೀ ಬಾಳ ತೋಟವನು’ (ಪುಟ 61) ಎನ್ನುವ ನಿಸ್ವಾರ್ಥಮತಿಯು ಮನಸ್ಸನ್ನು ತಟ್ಟುತ್ತದೆ.
ಕತ್ತಲೆ ಮತ್ತು ಬೆಳಕಿನ ಕಾರ್ಯಗಳು ಬೇರೆ ಬೇರೆಯಾಗಿದ್ದರೂ ತಾತ್ವಿಕವಾಗಿ ಒಂದೇ ಉದ್ದೇಶವನ್ನು ಧ್ವನಿಸುತ್ತದೆ. ಪ್ರಕೃತಿಯ ಎರಡು ವಿದ್ಯಮಾನಗಳೂ ಮನುಷ್ಯನಿಗೆ ಉಪಕಾರಿ. ಆದ್ದರಿಂದ ಇವುಗಳು ಅದ್ವೈತ ಪರಿಕಲ್ಪನೆಗೆ ಪ್ರತೀಕವಾಗುತ್ತವೆ.
ಬೆಳಕು ಕತ್ತಲೆಯಾಟದ ಸೃಷ್ಟಿ
ಹುಟ್ಟು ಸಾವಿನ ಕುಲಮೆಯಲ್ಲಿ
ಪರಿಷ್ಕರಿಸಿಕೊಳ್ಳುತ್ತ ಬೆಳಕಿನುಜ್ವಲ ಸತ್ವ
ಹೆರುತ್ತದೆ ದಿನನಿತ್ಯ ಹೊಸ ಬೆಳಕನು
ಕಳೆಯುತ್ತ ಕತ್ತಲ ಕೊಳೆಯನ್ನು (ಬೆಳಕು ಕತ್ತಲೆಯಾಟ, ಪುಟ 71)
‘ಶ್ರೀಗಂಧ’, ‘ಹೊರಟು ನಿಂತ ಮಗಳಿಗೆ’ ಕವನಗಳ ಭಾವವಿಸ್ತಾರವು ಈ ಸಂಕಲನದ ಸ್ಥಾಯಿಭಾವವಾಗಿದೆ. ಮಗನಿಗಾಗಿ ತುಡಿಯುವ ತಾಯಿಯ ಹೃದಯವನ್ನು ‘ನನ್ನ ಸೂರ್ಯ’ ಸಂಕಲನದಲ್ಲಿ ಕಾಣಬಹುದಾದರೂ ಅಷ್ಟಕ್ಕೇ ಸೀಮಿತವಾಗದೆ ನಮ್ಮನ್ನು ಪೊರೆಯುವ ನಿಸರ್ಗವನ್ನು ಹಾಳು ಮಾಡುತ್ತಿರುವ ದುಷ್ಟರ ಮನಸ್ಸಿಗೆ ಅರಿವಿನ ಬೆಳಕನ್ನು ಕೊಡುವಂಥ ರಚನೆಗಳು ಇಲ್ಲಿರುವುದರಿಂದ ಈ ಶೀರ್ಷಿಕೆಯು ಹಲವು ಮಗ್ಗುಲುಗಳಿಂದ ಅರ್ಥಪೂರ್ಣವಾಗಿದೆ. ದೂರವಾಗುತ್ತಿರುವ ಸಂಬಂಧಗಳು, ಗತಕಾಲದ ಬದುಕಿನ ನೆನಪು, ಶೋಷಣೆಯನ್ನು ವಿರೋಧಿಸುವ ಮನೋಭಾವ, ರಾಜಕೀಯ ವಿಡಂಬನೆ, ಆಶಾವಾದ ಮತ್ತು ಆದರ್ಶಗಳನ್ನು ಒಳಗೊಂಡ ಕವಿತೆಗಳ ಮೂಲಕ ಸಂಕಲನವು ವೈವಿಧ್ಯಮಯವಾಗಿ ಕಂಗೊಳಿಸುತ್ತದೆ.
