Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ನ ಪ್ರಮದಿತವ್ಯಮ್’ ಜಾಗತೀಕರಣದ ಹಿನ್ನೆಲೆಯ ಕಥೆಗಳು – ಬೆಳಗೋಡು ರಮೇಶ ಭಟ್
    Literature

    ಪುಸ್ತಕ ವಿಮರ್ಶೆ | ‘ನ ಪ್ರಮದಿತವ್ಯಮ್’ ಜಾಗತೀಕರಣದ ಹಿನ್ನೆಲೆಯ ಕಥೆಗಳು – ಬೆಳಗೋಡು ರಮೇಶ ಭಟ್

    June 5, 2023Updated:August 19, 20231 Comment4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಈ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ವಿಜೇತ ಕೃತಿ, ‘ನ ಪ್ರಮದಿತವ್ಯಮ್’ ವಿಭಿನ್ನ ಹಿನ್ನೆಲೆಯ ಹದಿಮೂರು ಸಣ್ಣ ಕಥೆಗಳ ಸಂಕಲನ, ಬಿಟ್ಟು ಬಂದ ಹಳ್ಳಿಯ ಮುಗ್ಧ ಮನುಷ್ಯ ಸಂಬಂಧಗಳನ್ನೋ ಬಾಲ್ಯದ ಹಳವಂಡಗಳನ್ನೂ ಮೆಲುಕುಹಾಕುವ ಯುವ ಬರಹಗಾರರ ಈಚೆಯ ಕಥೆಗಳಿಗಿಂತ ಪ್ರತ್ಯೇಕ ಹಾದಿ ಹಿಡಿದಿರುವ ಸೋಮಯಾಜಿಯವರಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ವಿಸ್ತಾರವೂ, ವೈವಿಧ್ಯಮಯವೂ ಆಗುತ್ತಿರುವ ಜೀವನಾನುಭವದ ಕಥೆಗಳಿವೆ. ಅವರ ಕಥೆಗಳು ಘಟಿಸುವುದು ಲಿಬರಲೈಸ್ಡ್ ನವ್ಯೋತ್ತರ ಜಗತ್ತಿನಲ್ಲಾದರೂ, ಅವರು ಸೃಷ್ಟಿಸುವ ಪಾತ್ರಗಳು ನವೋದಯದ ಕಾಲಘಟ್ಟದಲ್ಲಿ ಬೇರು ಚಾಚಿರುವುದರಿಂದ ಅವರ ಕಥೆಗಳ ಕಟ್ಟೋಣ ಬಹುತೇಕ ಪೂರ್ವಸೂರಿಗಳು ಅನುಸರಿಸಿದ ಮಾರ್ಗದಲ್ಲಿವೆ.

     

    ಶ್ರೀಲೋಲ ಸೋಮಯಾಜಿ

    ಆದುದರಿಂದಲೇ, ಶ್ರೀಲೋಲ ಸೋಮಯಾಜಿಯವರ ಬಹುತೇಕ ಕಥೆಗಳು, ಸಮಕಾಲಿನ ಸಂದಿಗ್ಧತೆಯೊಂದರ ಎರಡು ಆಯಾಮಗಳನ್ನು ದಕ್ಕಿಸಿಕೊಂಡು ಬೆಳೆದರೂ, ಒಟ್ಟು ಮೌಲ್ಯಮಾಪನದ ಸಂದರ್ಭ ತಲುಪಿದಾಗ ಓದುಗರಿಗೆ ಹಸ್ತಾಂತರವಾಗುವ ಮಾಸ್ತಿಯವರ ಒಂದು ತಂತ್ರದ ಮುಂಚಾಚಿನ ಮಾದರಿಯಲ್ಲಿ ನಿರೂಪಿತವಾಗಿದೆ. ಉದಾರಣೆಗೆ ವೆಂಕಟಾಚಲ ನಿಲಯದಂತಹ ರಾಚನಿಕವಾಗಿ ಗಮನಾರ್ಹವೆನ್ನಿಸುವ ಕಥೆಯಲ್ಲಿನ ತ್ಯಾಗರಾಜರು ಬಿಲಹರಿ ರಾಗದ ಮೂಲಕ ಸತ್ತ ವ್ಯಕ್ತಿಯನ್ನು ಪುನಃ ಜೀವಂತ ಮಾಡಬಹುದಾದರೆ, ಮುತ್ತುಸ್ವಾಮಿ ದೀಕ್ಷಿತರು ತಮ್ಮ ನವಗ್ರಹ ಕೃತಿಯಿಂದ ಜನರ ಹೊಟ್ಟೆ ನೋವನ್ನು ಪರಿಹರಿಸಬಹುದಾದರೆ ನನ್ನ ಹೆಂಡತಿಯ ಸಮಸ್ಯೆಯನ್ನು ಸಂಗೀತ ಯಾಕೆ ಪರಿಹರಿಸಲಾಗದು’ ಎಂದು ಹೆಂಡತಿಯ ಮೇಲೇ ಸಂಗೀತ ಚಿಕಿತ್ಸೆಯ ಪ್ರಯೋಗ ಮಾಡುವ ವೆಂಕಟರಾಯರು ಮತ್ತು ಕಥೆಯ ಕೊನೆಯಲ್ಲಿ,’ ‘ದಯವಿಟ್ಟು. ಅವರು ಬರೆದವನ್ನು ಪ್ರಕಟಿಸಬೇಡಿ. ಅದು ಪ್ರಕಟವಾದರೆ ಅವರಿಗೆ ಇನ್ನಷ್ಟು ಉತ್ಸಾಹ ಮೂಡಿ, ಈ ಹುಚ್ಚನ್ನೇ ಮುಂದುವರಿಸಿಕೊಂಡು ಹೋದರೆ ತಮ್ಮ ಸಂಸಾರದತ್ತ ಈಗ ತೋರುವ ಗಮನವನ್ನೂ ಸಹ ಕೊಡಲಿಕ್ಕಿಲ್ಲ.’ ಎನ್ನುವ ಅವರ ಪತ್ನಿ ಹೀಗೆ ಒಂದು ಸಂಕೀರ್ಣ ಸನ್ನಿವೇಶಕ್ಕೆ ಕಾರಣವಾದಲ್ಲಿಗೆ ನಿಂತುಬಿಡುವ ಕಟ್ಟೋಣದಲ್ಲಿ, ಪ್ರಾಯೋಗಿಕತೆಯ ಚಮತ್ಕಾರಗಳಿಗಿಂತ, ಬದುಕಿನ ಕಟುಸತ್ಯವನ್ನು ಮನಗಾಣಿಸುವ ಹಂಬಲವೇ ಹೆಚ್ಚಿರುವುದನ್ನು ಗಮನಿಸಬಹುದು. ಇಂತಹ ಕಥೆಯನ್ನು ಸಂಗೀತದ ಸೂಕ್ಷ್ಮಗಳ ಅರಿವಿನ ಜೊತೆಗೆ ಬದುಕು ಎನ್ನುವುದು ಸೆರಗಲ್ಲಿ ಕಟ್ಟಿಕೊಂಡ ಕೆಂಡ ಎನ್ನುವುದನ್ನು ಬಲ್ಲವರಷ್ಟೇ ಬರೆಯುವುದು ಸಾಧ್ಯ.

    ಒದಗಿ ಬಂದವರು ಕಥೆಯಲ್ಲಿ ‘ಯಾರು ಅಂದದ್ದು ಮನುಷ್ಯ ಕ್ರೂರಿಯೆ೦ದು? ಒಂದು ವೇಳೆ ಕ್ರೂರಿಯೇ ಆಗಿದ್ದರೆ ಈ ಯುದ್ಧವನ್ನು ನಾನೊಬ್ಬನೇ ಹೋರಾಡಿ ಗೆಲ್ಲಲು ಸಾಧ್ಯವಿತ್ತೇ?’ ಎನ್ನುವ ನಿರೂಪಕ, ‘ರಾಮ ನವಮಿಯ ದಿವಸ’ ಕಥೆಯಲ್ಲಿ ‘ಅವರ ಮಾತನ್ನು ನೀನು ಕೇಳಬೇಕಾಗಿಲ್ಲ, ಅವರ ಮಾತನ್ನು ಕೇಳಿಯೇ ಇಷ್ಟೆಲ್ಲ ರಂಪಾಟವಾದದ್ದು. ಈಗ ನೀನು ನಿನ್ನ ಮನಸ್ಸು ಏನು ಹೇಳುತ್ತದೆ ಎಂಬುದನ್ನು ಕೇಳಿಕೊಂಡು ಅದರಂತೆ ನಡೆ’ ಎಂದು ಹೇಳುವ ಶಬರತ್ತೆ, ಪದ್ದಕ್ಕನ ಅರಮನೆ, ಕಥೆಯಲ್ಲಿನ ಎ೦ದೂ ತನ್ನವರನ್ನು ಬೇರೆಯವರ ಎದುರು ಬಿಟ್ಟು ಕೊಟ್ಟಿರದ’ ಪದ್ದಕ್ಕ ಮೊದಲಾದ ಕೆಲವು ಪಾತ್ರಗಳಂತೂ ಶ್ರೀಲೋಲ ಸೋಮಯಾಜಿಯವರು ಚಿತ್ರಿಸಲೆತ್ನಿಸುವ ಜೀವನದೃಷ್ಟಿಯ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ‘ನ ಪ್ರಮದಿತವ್ಯಮ್’ನ ಗಾಢ ವಿಷಾದವನ್ನು ಚಿತ್ರಿಸುವಾಗಲೂ ಅವರೊಳಗಿನ ಕಲಾವಿದ, ಕ್ಯಾನ್ವಾಸಿನಿಂದ ಆರೋಗ್ಯಕಾರಿ ಅಂತರವನ್ನು ಕಾಪಾಡಿಕೊಳ್ಳುವುದನ್ನೂ ಈ ಹಿನ್ನೆಲೆಯಲ್ಲಿ ಗುರುತಿಸಬಹುದು.

    ‘ನ ಪ್ರಮದಿತವ್ಯಮ್’ ಎಂಬ ಪರಿಕಲ್ಪನೆ ತೈತ್ತಿರೀಯೋಪನಿಷತ್ತಿನ ಪ್ರಥಮಾಧ್ಯಾಯದ ಹನ್ನೊಂದನೆಯ ಅನುಪಾಕದಲ್ಲಿ ಸತ್ಯ, ಧರ್ಮ, ಕ್ಷೇಮ ಸಂಪತ್ತು, ಸ್ವಾಧ್ಯಾಯ, ಪ್ರವಚನಗಳಲ್ಲಿ – ನಿಯಮಗಳನ್ನು ಉಲ್ಲಂಘಿಸಬೇಡ’ ಎನ್ನುವಲ್ಲಿ ಅನುಶಾಸನ ರೂಪದಲ್ಲಿ ಮೊದಲ ಸಲ ಬಳಕೆಯಾಗಿದ್ದರೆ, ಗೋಪಾಲಕೃಷ್ಣ ಅಡಿಗರ ವರ್ಧಮಾನ ಕವಿತೆಯಲ್ಲಿ ‘ಉಲ್ಲ೦ಘಿಸಬಾರದ್ದನ್ನು ವರ್ಧಮಾನದ ವರಾತದಲ್ಲಿ ಉಲ್ಲಂಘಿಸಿದರೆ ಆಗುವ ಅಪಘಾತದ ಎಚ್ಚರಿಕೆಯ ರೂಪದಲ್ಲಿ ಬಳಸಲ್ಪಟ್ಟಿದೆ. ಈ ‘ನ ಪ್ರಮದಿತವ್ಯಮ್’ ಹಲವು ಅರ್ಥಗಳಲ್ಲಿ ಸೋಮಯಾಜಿಯವರ ಒಟ್ಟು ಕಥೆಗಾರಿಕೆಯ ರೂಪಕದಂತಿವೆ. ಸಂಕಲನದ ಜೋಡಿ ನವಿಲು ಕಥೆಯ ಗೌರವ್ ಅನುಶಾಸನವನ್ನು ಉಲ್ಲ೦ಘಿಸುವುದನ್ನು ನಿರ್ಲಿಪ್ತವಾಗಿ ಹೇಳುವ ಕಥೆಗಾರರು ಜಾನಕಮ್ಮನ ಪ್ರತಿಕ್ರಿಯೆಯನ್ನು ಭಾವುಕವನ್ನಾಗಿಸಲು ಪ್ರಯತ್ನಿಸುವ ಸಂದರ್ಭವಿರಬಹುದು, ರಾಮನವಮಿಯ ದಿವಸ ಕಥೆಯಲ್ಲಿ ಪದ್ದಡಿಗ ಅನುಶಾಸನವನ್ನು ಉಲ್ಲಂಘಿಸಿದಾಗಲೂ, ಕಥೆಯು ಶಬರತ್ತೆಯ ಪಾತ್ರ ನಿರ್ವಹಣೆಗೆ ಹೆಚ್ಚು ನಿಷ್ಠವಾಗುವ ವಿವರಗಳಿರಬಹುದು, ಒದಗಿ ಬಂದವರು ಕಥೆಯಲ್ಲಿ ಎಲ್ಲೆಲ್ಲೋ ಕಾರು ನುಗ್ಗಿಸಿ’ ನಿಯಮಗಳನ್ನು ಉಲ್ಲಂಘಿಸುವ ಗಿರೀಶ ಆಂಬುಲೆನ್ಸ್ ಡ್ರೈವ್ ಮಾಡುವಾಗ ಅದೇ ಟೆಕ್ನಿಕ್ ಬಳಸಿ ಸರಿಯಾದ ಸಮಯಕ್ಕೆ ಪೇಶ೦ಟುಗಳನ್ನು ಆಸ್ಪತ್ರೆಗೆ ತಲುಪಿಸುವುದು’ ಒಂದು ಸ್ಟೇಟ್ಮೆಂಟ್ ಉಳಿದು, ಆತನ ಬಾಳೆಹಣ್ಣಿನ ಹಲ್ವದ ಬಯಕೆಯೇ ನಿರೂಪಕನನ್ನು ಭಾವಕನನ್ನಾಗಿಸುವ ಘಟನೆಯಿರಬಹುದು, ಪದ್ದಕ್ಕನ ಅರಮನೆಯಲ್ಲಿ ತನ್ನ ಕರ್ತವ್ಯವನ್ನೇ ಮರೆತ’ ಕೊನೆಯ ಮೈದುನನ ಉಲ್ಲಂಘನೆಯನ್ನು ಹಿಂದೆ ತಳ್ಳಿ ಪದ್ದಕ್ಕನ ಕುರಿತ ಅಭಿಮಾನದಲ್ಲಿಯೇ ಕಥೆಯನ್ನು ಮುಗಿಸುವುದು, ಇವೆಲ್ಲ ಸುಮ್ಮನೆ ಕ್ಲೈ ಮ್ಯಾಕ್ಸ್‌ಗಾಗಿಯೇ ಕಟ್ಟಿದಂತೆ ಕಾಣಿಸುವುದಿಲ್ಲ. ‘ನ ಪ್ರಮದಿತವ್ಯಮ್’ ಹೆಸರಿನ ಕಥೆಯಲ್ಲಂತೂ ಕಂಪೆನಿಯ ಬದ್ಧತೆಯು ಆರ್ಥಿಕವಾಗಿ ಬೆಳೆಯುವುದು ಮಾತ್ರ. ತನ್ನ ಲಾಭಕ್ಕಾಗಿ ದಿನೇದಿನೇ ಬದಲಾಗುವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದು ಕಂಪನಿಗೆ ಅನಿವಾರ್ಯವಿರಬಹುದು. ಆದರೆ, ಅದು ತನಗೆ ಒಪ್ಪಿತವಲ್ಲ ಎನ್ನುವ ಚೇತನಾಳ ನಿಲುವನ್ನು ವಾಚ್ಯನನ್ನಾಗಿಸುವ ಮೆಯಿಲ್ ಅಂತೂ ಈ ರೂಪಕಕ್ಕೆ ಬಲ ಕೊಡುವಂತಿದೆ.

    ಗಮನಿಸಬೇಕಾದ ಇನ್ನೊಂದು ಕಥೆ ‘ಇರವು’. ‘ನಾನು ಇಲ್ಲಿಯ ಯಾವ ಗುಂಪಿಗೂ ಸೇರಿದವನಲ್ಲ, ನನ್ನ ಅಗತ್ಯ ಇಲ್ಲಿ ಯಾರಿಗೂ ಇಲ್ಲ’ ಎನ್ನುವ ತಾನು ಇಲ್ಲಿ ಅಪ್ರಸ್ತುತ ಎಂದುಕೊಳ್ಳುವ ಗೋಪಾಲರಾಯರು ತಾವು ಬಸರೂರಿನಲ್ಲಿ ಕೆರೆಗೆ ಹಾಕಿ ಬಂದಿರುವ ಮನೆ ದೇವರನ್ನು ಮೇಲೆತ್ತಿ ಪೂಜೆ ಮಾಡಿಕೊಂಡು ಅಲ್ಲೇ ಇದ್ದರೆ ಮನಸ್ಸಿಗೆ ಆರಾಮವಾದೀತು ಎಂಬ ಮನಸ್ಥಿತಿಯನ್ನು ತಲುಪಿ, ಅರಾಮವಾದೀತು, ಅಲ್ಲವೆ?’ ಎಂದು ನಿರೂಪಕನಲ್ಲಿ ಕೇಳುತ್ತಾರೆ. ನಿರೂಪಕನ ರೂಪದಲ್ಲಿ ಅಲ್ಲೆಲ್ಲಾ ಹಾಜರಿರುವ ಕಥೆಗಾರ ಈ ಹುಡುಕಾಟಕ್ಕೆ ಸಾಕ್ಷಿ ಮಾತ್ರ, ಸಲಹೆಗಾರನಾಗುವುದಿಲ್ಲ. ಈ ಕಥೆಗಳಲ್ಲಿ ಅನುಭವಕ್ಕೆ ಬರುವ ಈ ತೆರನಾದ ಮೆಚ್ಯುರಿಟಿಯು ಸಂಸ್ಕೃತಿಯ ಧಾರಣಶಕ್ತಿಗೆ ಈ ಕಥೆಗಾರ ಬರೆಯಲಿಚ್ಚಿಸುವ ಭಾಷ್ಯದಂತೆಯೂ ಕಾಣಿಸುತ್ತದೆ. ಯಾವುದೇ ಕಾಲದ ಕಥೆಗಳಿಗೆ ಅನ್ವಯಿಸಿ ನೋಡಬಹುದಾದ ಇಂತಹ ಸಕಾರಾತ್ಮಕ ನಿರ್ವಹಣೆಯೇ ಇಲ್ಲಿನ ಕಥೆಗಳನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡುತ್ತದೆ. ಮೊದಲ ಕಥಾಸಂಕಲನದಲ್ಲಿಯೇ ಸೃಜನಶೀಲತೆಯ ಸವಾಲುಗಳನ್ನು ಇಷ್ಟೊಂದು ಗಂಭೀರವಾಗಿ ದಕ್ಕಿಸಿಕೊಂಡ ಕಥೆಗಾರನ ಮುಂದಿನ ಪಯಣವನ್ನು ಕುತೂಹಲದಿಂದ ಗಮನಿಸಬೇಕಾದ ಅಗತ್ಯವನ್ನು ಎತ್ತಿಹಿಡಿಯುತ್ತದೆ.

    ಬೆಳಗೋಡು ರಮೇಶ ಭಟ್
    ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಗಳಾಗಿದ್ದು, ಬ್ಯಾಂಕಿನ ಪ್ರತಿಷ್ಠಿತ ಬ್ಯಾಂಕ್‌ ಮೆನೇಜ್‌ಮೆಂಟ್‌ ಕಾಲೇಜು ಎಸ್.ಐ.ಬಿ.ಎಂ. ಮಣಿಪಾಲ ಇದರ ಪ್ರಾಂಶುಪಾಲರಾಗಿದ್ದು ಈಗ ನಿವೃತ್ತರಾಗಿರುವ ಬೆಳಗೋಡು ರಮೇಶ ಭಟ್ಟರು ಕವಿಗಳು, ಕಥೆಗಾರರು ಮತ್ತು ವಿಮರ್ಶಕರು. ಸಾಹಿತ್ಯಿಕ ಮೌಲ್ಯದ ಹದಿನೆಂಟು ಕೃತಿಗಳನ್ನು ರಚಿಸಿರುವ ಇವರ ‘ಜರಾಸಂಧ’ ಕವನ ಸಂಕಲನಕ್ಕೆ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’, ‘ಅಂಬಿಗನ ಹಂಗಿಲ್ಲ’ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’, ಕಥಾ ಸಂಕಲನ ‘ಮನುಷ್ಯರನ್ನು ನಂಬಬಹುದು’ ಇದಕ್ಕೆ ‘ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ನಿಧಿ ಪುರಸ್ಕಾರ’ ಮತ್ತು ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’ ಹಾಗೂ ವಿಮರ್ಶಾಲೇಖನಗಳ ಸಂಕಲನ ‘ಸೃಷ್ಟಿಯ ಮೇಲಣ ಕಣಿ’ಗೆ ‘ಕಾವ್ಯಾನಂದ ಪುರಸ್ಕಾರ’ ಪ್ರಾಪ್ತವಾಗಿದೆ. ಇವರ ಕಥೆಯೊಂದು ಕನ್ನಡ ಪಠ್ಯ ಪುಸ್ತಕದಲ್ಲಿ ಅವಕಾಶ ಪಡೆದದ್ದು, ನಾಲ್ಕು ಕತೆಗಳು ಹಿಂದಿಗೆ ಅನುವಾದಗೊಂಡು ಪ್ರಕಟಗೊಂಡದ್ದು ಹೆಚ್ಚುಗಾರಿಕೆ. ‘ಮದುವೆಯ ಭರ್ಜರಿ ಅಲಂಕಾರಗಳನ್ನು ಕಳಚಿಟ್ಟು ಹತ್ತಿ ಬಟ್ಟೆ ತೊಟ್ಟು ಹಗುರಾಗುವ ಖುಷಿಯನ್ನು ರಮೇಶ ಭಟ್ಟರ ಕಥೆಗಳು ನೀಡುತ್ತವೆ’ ಎಂದು ಜನಪ್ರಿಯ ಕಥೆಗಾರ ವಸುಧೇಂದ್ರರು ಶ್ಲಾಘಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | “ಸಿಡಿಲಮರಿ – ರಂಗಪಾದರಸ” – ತೀರ್ಥಹಳ್ಳಿ ಗೋಪಾಲ ಆಚಾರ್ಯ
    Next Article ಚಿತ್ತಾಲ ಚಿತ್ತ | ಜೂನ್ 10
    roovari

    1 Comment

    1. Sheelalshankar on June 5, 2023 7:36 pm

      ಸೊಗಸಾದ ವಿಮರ್ಶೆ. ವಿಮರ್ಶೆಗಾಗಿ ವಿಮರ್ಶೆ ಎಂಬಂತಿರದೆ. ಸಹೃದಯರು ಪುಸ್ತಕ ಕೊಂಡು ಓದಬೇಕು, ಆ ಮೂಲಕ ಲೇಖಕ ಬೆಳೆಯಬೇಕು ಎಂಬ ಧನಾತ್ಮಕ ನಿಲುವು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

      Reply

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    1 Comment

    1. Sheelalshankar on June 5, 2023 7:36 pm

      ಸೊಗಸಾದ ವಿಮರ್ಶೆ. ವಿಮರ್ಶೆಗಾಗಿ ವಿಮರ್ಶೆ ಎಂಬಂತಿರದೆ. ಸಹೃದಯರು ಪುಸ್ತಕ ಕೊಂಡು ಓದಬೇಕು, ಆ ಮೂಲಕ ಲೇಖಕ ಬೆಳೆಯಬೇಕು ಎಂಬ ಧನಾತ್ಮಕ ನಿಲುವು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.