ವಿಶಿಷ್ಟ ಶೀರ್ಷಿಕೆಯನ್ನು ಹೊತ್ತ ಕೃತಿ ಖ್ಯಾತ ಲೇಖಕ ಕೆ. ಸತ್ಯನಾರಾಯಣ ಇವರ ‘ನೆದರ್ ಲ್ಯಾಂಡ್ಸ್ ಬಾಣಂತನ’. ವಿದೇಶಗಳಿಗೆ ಪ್ರವಾಸ ಹೋಗಿ ಅಲ್ಲಿ ನೋಡಿದ ಮತ್ತು ಅನುಭವಿಸಿದ ಭೌತಿಕ ಮತ್ತು ಸಾಂಸ್ಕತಿಕ ವೈಶಿಷ್ಟ್ಯಗಳನ್ನು ಕುರಿತು ಬರೆಯುವ ಪ್ರವಾಸ ಕಥನಗಳಿಗಿಂತ ಪೂರ್ತಿ ಭಿನ್ನವಾಗಿರುವ ಈ ಕೃತಿ ಯೂರೋಪಿನ ಒಂದು ಪುಟ್ಟ ದೇಶವಾದ ನೆದರ್ ಲ್ಯಾಂಡಿನ ಕುರಿತಾಗಿ ಇದೆ. ಅಲ್ಲಿನ ಜನಜೀವನ ಶೈಲಿ, ಶಿಕ್ಷಣ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕುಗಳ ಒಳನೋಟವನ್ನು ನೀಡುವುದು ಲೇಖಕರ ಮುಖ್ಯ ಕಾಳಜಿ. ತೃತೀಯ ಜಗತ್ತಿನ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಮೂಲೆಗುಂಪು ಮಾಡಲ್ಪಟ್ಟ ಈ ದೇಶದ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಹಲವಾರು ಮಹತ್ವದ ವಿಚಾರಗಳನ್ನು ಅವರು ಇಲ್ಲಿ ಸ್ಪರ್ಶಿಸಿರುವುದು ಗಮನಿಸಬೇಕಾದ ಅಂಶ.
ತಮ್ಮ ಮೂರು ವಿದೇಶಿ ಪ್ರವಾಸಗಳಲ್ಲಿ ಗಮನಕ್ಕೆ ಬಂದ ವಿಚಾರಗಳ ಬಗ್ಗೆ ಹೇಳುತ್ತ ಲೇಖಕರು ತಾವು ನೆದರ್ ಲ್ಯಾಂಡಿನಲ್ಲಿರುವ ಮಗಳ ಮನೆಗೆ ಮೂರು ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಹೋದ ವಿಚಾರದಿಂದ ಆರಂಭಿಸುತ್ತಾರೆ. ಮೊದಲಬಾರಿ ಹೋಗಿದ್ದು ಅವರ ಮಗಳು-ಅಳಿಯ ನೆದರ್ ಲ್ಯಾಂಡಿನ ಮೋರ್ಬರ್ಗ್ ಎಂಬಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ನೆಲೆಸಿದ ಸಂದರ್ಭದಲ್ಲಿ. ಎರಡನೇ ಬಾರಿ ಕೋವಿಡ್ ಮಹಾಮಾರಿಯು ಜಗತ್ತನ್ನೇ ನಡುಗಿಸಿದ.ಸಂದರ್ಭದಲ್ಲಿ ಮಗಳು ಎರಡನೇ ಹೆರಿಗೆಗೆ ತಯಾರಾದಾಗ. ಮೂರನೇ ಬಾರಿ ಮಕ್ಕಳು-ಮೊಮ್ಮಕ್ಕಳ ಜತೆಗೆ ಹಾಯಾಗಿ ಸಮಯ ಕಳೆಯಲೆಂದು. ಮೂರೂ ಸಲ ಅವರು ಅಲ್ಲಿನ ಜೀವನ ಕ್ರಮದ ಹಲವು ಮಗ್ಗುಲುಗಳನ್ನು ಪರಿಚಯಿಸಿಕೊಂಡು ತಾವು ಕಂಡದ್ದನ್ನು ವಿಮರ್ಶೆಗೊಳಪಡಿಸುತ್ತ ಯಾವುದೇ ಭಯ-ಆತಂಕಗಳಿಲ್ಲದೆ ತಣ್ಣಗೆ ಬದುಕು ಸಾಗಿಸುತ್ತಿರುವ ನೆದರ್ ಲ್ಯಾಂಡಿನ ಜೀವನ ದೃಷ್ಟಿಕೋನವನ್ನು ಭೌತಿಕ ಅಭಿವೃದ್ಧಿಯ ನೆಲೆಯಲ್ಲೇ ದೊಡ್ಡಣ್ಣನಾಗಿ ಹೆಸರು ಪಡೆಯುತ್ತಿರುವ ಅಮೇರಿಕಾದಂಥ ಬಂಡವಾಳಶಾಹಿ ರಾಷ್ಟ್ರದ ಜತೆಗೆ ಹೋಲಿಸುತ್ತ ಒಂದು ತೌಲನಿಕ ಅಧ್ಯಯನವನ್ನು ನಮ್ಮ ಮುಂದೆ ತೆರೆದಿಡುತ್ತಾರೆ.
ಬಿಳಿಯರನ್ನು ಕಂಡಾಗ ಹೊಟ್ಟೆಯೊಳಗೆ ತಮಗಾಗುತ್ತಿದ್ದ ತಳಮಳ, ಮನಸ್ಸಿಗಾಗುತ್ತಿದ್ದ ಹಿಂಸೆಯ ಕಾರಣ ಚರಿತ್ರೆಯ ಹಿಂದಿನ ಪುಟಗಳ ವಸಾಹತುಶಾಹಿ ದೌರ್ಜನ್ಯ ಇರಬಹುದೇ ಎಂಬ ಸಂದೇಹ ಅವರಲ್ಲಿ ಮೂಡುತ್ತದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರ ಮನಸ್ಥಿತಿ-ಧೋರಣೆಗಳಲ್ಲಿ ಸಕಾರಾತ್ಮಕ ಬದಲಾವಣೆಯಾಗಿದ್ದರೆ ಅವರನ್ನು ತಾವು ಕ್ಷಮಿಸಬೇಕಲ್ಲವೇ ಎಂಬ ಅರಿವು ಕೂಡಾ ಮೂಡುತ್ತದೆ. ಹೀಗೆ ಪ್ರವಾಸವು ಕೊಡುವ ಅರಿವಿನ ಪಾಠದ ಭಿನ್ನ ಅನುಭವದ ಕಡೆಗೂ ಲೇಖಕರು ನಮ್ಮ ಗಮನ ಸೆಳೆಯುತ್ತಾರೆ.
ಬಸಿರು-ಬಾಣಂತನ, ಮಗುವಿನ ಆರೈಕೆ, ಮಗು ಬೆಳೆಯಲು ಬೇಕಾದ ಎಲ್ಲ ರೀತಿಯ ಅಗತ್ಯಗಳನ್ನು ಎಚ್ಚರಿಕೆಯಿಂದ ಒದಗಿಸುವ ನೆದರ್ಲ್ಯಾಂಡ್ಸ್ ಸರಕಾರದ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಲೇಖಕರು ತಮ್ಮ ಅಪಾರ ಮೆಚ್ಚುಗೆಯನ್ನು ಸೂಸುತ್ತಾರೆ. ಬಸುರಿಯಾಗಿದ್ದಾಗ ಒಬ್ಬ ಪರಿಣಿತ ಮಿಡ್ ವೈಫ್ ಬಳಿ ನೋಂದಾಯಿಸಿಕೊಳ್ಳುವುದರಿಂದ ಹಿಡಿದು ಅಗತ್ಯ ಬಿದ್ದರೆ ಆಸ್ಪತ್ರೆಯಲ್ಲಿ ಮಾಡುವ ಹೆರಿಗೆಯ ಖರ್ಚು ಎರಡು ವಾರಗಳ ತನಕ ಬಾಣಂತಿ-ಮಗುವಿನ ಆರೈಕೆ ಇತ್ಯಾದಿ ಎಲ್ಲದಕ್ಕೂ ಸರಕಾರವೇ ಖರ್ಚನ್ನು ವಹಿಸುತ್ತದೆ. ಆರೋಗ್ಯ ವಿಮೆ ಕಟ್ಟಿದರಾಯಿತು. ಬಾಣಂತನ ಮುಗಿದ ನಂತರವೂ ಕೌಟುಂಬಿಕ ವಾತಾವರಣವು ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆಯೇ ಎಂದು ಕೂಡಾ ಪರೀಕ್ಷಿಸಲಾಗುತ್ತದೆ. ಒಟ್ಟಿನಲ್ಲಿ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಅನ್ನುವುದು ಸರಕಾರವೇ ರೂಪಿಸಿಕೊಂಡ ಯೋಜನೆ. ಮಕ್ಕಳು ಕಲಿಯಬೇಕಾದ ಭಾಷೆಗಳ ಬಗ್ಗೆಯೂ ಸರಕಾರದ ಖಚಿತ ನಿಲುವುಗಳು ಶಿಕ್ಷಣ ಪದ್ಧತಿಯನ್ನು ನೋಡಿದರೆ ಸ್ಪಷ್ಟವಾಗುತ್ತವೆ. ಡಚ್ ಭಾಷಾ ಮಾಧ್ಯಮ ಶಾಲೆಗಳೂ ಅಂತರ್ರಾಷ್ಟ್ರೀಯ ಶಾಲೆಗಳೂ ಡಚ್ ಮತ್ತು ಇಂಗ್ಲೀಷ್ -ಎರಡೂ ಭಾಷೆಗಳಲ್ಲಿ ವ್ಯವಹರಿಸುವ ನೈಪುಣ್ಯವನ್ನು ಮಕ್ಕಳಲ್ಲಿ ಬೆಳೆಸುತ್ತವೆ. ಜಾಗತಿಕ ಮಟ್ಟದಲ್ಲಿ ಸಂವಹನಕ್ಕೆ ಇಂಗ್ಲೀಷ್ ಬೇಕು ಅನ್ನುವುದನ್ನು ಅವರು ಒಪ್ಪಿಕೊಂಡಿರುವುದು ಹೃದ್ಯವಾದ ಸಂಗತಿ. ವಲಸಿಗರಿಗೂ ಅನುಕೂಲವಾಗಲೆಂದು ಡಚ್ ಭಾಷೆಯಲ್ಲಿ ಅವರು ನಿರ್ದಿಷ್ಟ ಪರೀಕ್ಷೆಗಳನ್ನು ಪಾಸ್ ಮಾಡಿರಬೇಕೆಂಬ ನಿಯಮವನ್ನೂ ಅವರು ಜ್ಯಾರಿಗೆ ತಂದಿದ್ದಾರೆ.
ನೆದರ್ಲ್ಯಾಂಡಿನ ಶಿಕ್ಷಣ ವ್ಯವಸ್ಥೆ, ಪ್ರಯೋಗ ಮತ್ತು ತಾತ್ವಿಕತೆಯ ಬಗ್ಗೆ ಮೆಚ್ಚುಗೆ ಸೂಸುತ್ತ ಲೇಖಕರು ಅಲ್ಲಿ ಪ್ರತಿಯೊಂದು ಮಗುವಿನ ವ್ಯಕ್ತಿ ವೈಶಿಷ್ಟ್ಯವನ್ನು ಗುರುತಿಸುವ ಅಥವಾ ಅವರವರೇ ಗುರುತಿಸುವಂತೆ ಪ್ರೋತ್ಸಾಹಿಸುವುದು ಅವರ ಆದ್ಯತೆಯ ಮೂಲಸೂತ್ರವೆನ್ನುತ್ತಾರೆ. ಕಲಿಕೆಯಲ್ಲಿ ಸ್ವಂತಿಕೆಯನ್ನು ಪ್ರೋತ್ಸಾಹಿಸಬೇಕು, ಕಲಿಕೆ ಸಕ್ರಿಯವಾಗಿರಬೇಕು, ವಿದ್ಯಾರ್ಥಿ-ಶಿಕ್ಷಕರಿಬ್ಬರೂ ಸಮಾನವಾಗಿ ಭಾಗವಹಿಸಬೇಕು, ಮಕ್ಕಳು ಇತರರ ಜತೆಗೆ ಒಡನಾಡುವುದನ್ನು ಪ್ರೋತ್ಸಾಹಿಸಿ ಇತರರ ಭಾವನೆಗಳಿಗೆ ಸ್ಪಂದಿಸುವುದು ಹೇಗೆ ಅನ್ನುವುದನ್ನು ತಿಳಿಯಬೇಕು ಎಂಬುದನ್ನು ಅಲ್ಲಿ ಎಲ್ಲರೂ ಒಪ್ಪುತ್ತಾರೆ.
ಟೋಬಿ ಎಂಬ ಆದರ್ಶ ಶಿಕ್ಷಕನ ಚಿತ್ರಣ ಬಹಳ ಹೃದಯಸ್ಪರ್ಶಿಯಾಗಿದೆ. ಅಂಥ ಶಿಕ್ಷಕನಿಗೆ ಸಂಬಳ-ಬಡ್ತಿಗಳು ಮುಖ್ಯವಲ್ಲ. ಅಂಥವನೂ ಅರ್ಧದಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ತನ್ನ ಸ್ವಂತ ಮಕ್ಕಳಿಗೆ ಶಾಲೆಯಿಂದ ಹೊರಗೆ ಪಡೆಯುವ ಶಿಕ್ಷಣದ ಅರಿವಾಗಬೇಕು, ಅದಕ್ಕಾಗಿ ತನ್ನ ಕುಟುಂಬದ ಜತೆಗೆ ಪ್ರವಾಸ ಮಾಡಬೇಕು ಅನ್ನುವ ಉದ್ದೇಶವನ್ನು ಹೊಂದಿರುತ್ತಾನೆ.
ನೆದರ್ಲ್ಯಾಂಡಿನವರು ಸೈಕಲ್ ಗೆ ಕೊಡುವ ಪ್ರಾಮುಖ್ಯ ನೋಡಿದರೆ ಅವರು ಎಷ್ಟೊಂದು ಸರಳ ಜೀವಿಗಳು ಅನ್ನುವುದು ತಿಳಿಯುತ್ತದೆ. ಒಂದೊಂದು ಮನೆಯಲ್ಲಿ ನಾಲ್ಕು ನಾಲ್ಕು ಸೈಕಲುಗಳಿರುವುದೂ ಇದೆ. ಇಂಧನದ ಬಳಕೆ ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಮತ್ತು ಅಪಘಾತಗಳನ್ನು ಕಡಿಮೆ ಮಾಡುವುದು ಸರಕಾರದ ಉದ್ದೇಶ. ಸೈಕಲ್ ಸವಾರರಿಗೆ ರಸ್ತೆಯಲ್ಲಿ ಪ್ರತ್ಯೇಕ ಲೇನ್ ಇದ್ದು ಸಿಗ್ನಲ್ ನಲ್ಲಿ ಮೊದಲ ಆದ್ಯತೆ ಅವರಿಗೆ ಇರುವುದು ಸರಕಾರದ ಧನಾತ್ಮಕ ನಿಲುವಿಗೆ ಸಾಕ್ಷಿ. ಹೆಚ್ವಿನ ಜನರು ಸಂಚಾರ ಮಾಡುವುದು ಸೈಕಲ್ ಅಥವಾ ರೈಲಿನಲ್ಲಿ.
ಮಕ್ಕಳಿಗೆ ಶಾಲೆಯಲ್ಲಿ ಆಟದ ವ್ಯವಸ್ಥೆ ಚೆನ್ನಾಗಿಯೇ ಇರುತ್ತದೆ. ಶಾಲೆಗಳ ಆವರಣದಲ್ಲೇ ಕ್ರೀಡಾಂಗಣ ಇರುತ್ತದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಮಕ್ಕಳನ್ನು ಮನೆಯಲ್ಲಿಯೇ ಕೂಡಿ ಹಾಕುವ ಅವರ ಕ್ರಮ ಅಚ್ಚರಿ ಹುಟ್ಟಿಸುತ್ತದೆ. ಶಾಲೆ-ಕೋಚಿಂಗ್ ಕ್ಲಾಸುಗಳು ಮುಗಿದ ಮೇಲೆ ಮಕ್ಕಳು ಮನೆಯೆಂಬ ಕೋಟೆಯೊಳಗೆ ಬಂದಿಯಾಗುತ್ತಾರೆ. ನಮ್ಮ ದೇಶದಲ್ಲಿರುವ ಹಾಗೆ ಬೇರೆ ಕುಟುಂಬಗಳ ಮಕ್ಕಳ ಜತೆಗೆ ಅವರನ್ನು ಮುಕ್ತವಾಗಿ ಅವರು ಆಡಲು ಬಿಡುವುದಿಲ್ಲ. ಮಕ್ಕಳು ಪರಸ್ಪರ ಒಡನಾಟದಲ್ಲೇ ಪಾಠಗಳನ್ನು ಕಲಿಯಬೇಕು ಅನ್ನುವ ನಿಯಮಕ್ಕೆ ತದ್ವಿರುದ್ಧವಾದುದು ಅವರ ಈ ಧೋರಣೆ ಎಂದು ಲೇಖಕರು ಹೇಳುತ್ತಾರೆ.
ಹೊರಗೆ ಹೋದಾಗ ತಾವು ಭಾರತೀಯರು ಎಂದು ಸುಳ್ಳು ಹೇಳಿಕೊಂಡು ಬಳಿಗೆ ಬಂದ ಸುರೀನಾಮಿಗಳ ಬಗ್ಗೆ ಲೇಖಕರು ಹೇಳುವ ವಿಷಯ ಆಸಕ್ತಿದಾಯಕವಾಗಿದೆ. ದಕ್ಷಿಣ ಅಮೇರಿಕಾದ ಪುಟ್ಟ ರಾಜ್ಯ ಸುರೀನಾಮ್. ಹಿಂದೆ ಅದು ನೆದರ್ಲ್ಯಾಂಡಿನ ವಸಾಹತಾಗಿತ್ತು. ಅಲ್ಲಿ ಅನೇಕ ಭಾಷೆ-ಧರ್ಮ-ಪಂಗಡಗಳಿವೆ. ಶೇಕಡಾ ಇಪ್ಪತ್ತಕ್ಕೂ ಹೆಚ್ಚು ಮಂದಿ ಭಾರತೀಯರು. ಉತ್ತರ ಭಾರತದಿಂದ ಕೃಷಿ ಕಾರ್ಮಿಕರಾಗಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಹೋದವರು. ಎಲ್ಲ ವಸಾಹತುಶಾಹಿ ದೇಶಗಳ ನಾಗರಿಕರಂತೆ ವಸಾಹತು ಪ್ರಭುಗಳ ನಾಡಿಗೆ ಉದ್ಯೋಗಕ್ಕಾಗಿ-ವಿದ್ಯೆಗಾಗಿ ಇರುತ್ತಾರೆ. ನೆದರ್ ಲ್ಯಾಂಡಿನವರು ಅವರನ್ನು ನಿರಾಶ್ರಿತರು ಎಂದು ಕೀಳಾಗಿ ಕಾಣುತ್ತಾರೆ. ಅವರ ಈ ಧೋರಣೆಯನ್ನು ಲೇಖಕರು ವಿರೋಧಿಸುತ್ತಾರೆ.
ನೆದರ್ಲ್ಯಾಂಡಿನವರು ರಾಜಕಾರಣದ ಬಗ್ಗೆ ತೋರಿಸುವ ಅನಾಸಕ್ತಿ ಗಮನಾರ್ಹ. ಮಾಧ್ಯಮದವರೂ ರಾಜಕಾರಣದ ಸುದ್ದಿಗಳನ್ನು ತೋರಿಸುವುದಿಲ್ಲ. ನಾಗರಿಕರ ದಿನ ನಿತ್ಯದ ಬದುಕನ್ನು ಹಸನುಗೊಳಿಸುವುದು ಹೇಗೆ ಅನ್ನುವುದರ ಬಗ್ಗೆ ಎಲ್ಲೆಡೆ ಚಿಂತನೆ-ಚರ್ಚೆಗಳು ನಡೆಯುತ್ತವೆ. ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾತ್ರವನ್ನು ಒಪ್ಪುವುದರ ಮಟ್ಟಿಗೆ ದೇಶವು ಬಂಡವಾಳಶಾಹಿಯಾದರೂ ಅದು ಅಮೇರಿಕಾದ ಮಾದರಿಯಲ್ಲಿ ಅಲ್ಲ. ಸಂಪತ್ತು ಸಂಗ್ರಹದ ಬಗ್ಗೆ ಮಿತಿಮೀರಿದ ಗೀಳು ಇಲ್ಲ. ಅಮೇರಿಕಾ ಚೀನಾಗಳಂತೆ ಯುದ್ದಪ್ರಿಯತೆ ಇಲ್ಲ. ಒಂದು ಕಲ್ಯಾಣ ರಾಜ್ಯದ ಕಲ್ಪನೆ ಅವರದ್ದು. ಆ ಮಟ್ಟಿಗೆ ಒಂದು ಸಶಕ್ತ ರಾಷ್ಟ್ರ ನೆದರ್ಲ್ಯಾಂಡ್. ಆದರೆ ಜಾಗತಿಕ ಮಟ್ಟದಲ್ಲಿ ಈ ರಾಜ್ಯಕ್ಕೆ ಹೆಸರಿಲ್ಲದೆ ಇರುವುದು ಯಾಕೆ ಅನ್ನುವುದು ಲೇಖಕರ ಜಿಜ್ಞಾಸೆ.
ಹೀಗೆ ನೆದರ್ಲ್ಯಾಂಡಿನಲ್ಲಿ ಬಾಣಂತನ ವ್ಯವಸ್ಥೆಯ ಬಗ್ಗೆ ಮಾತನಾಡಲು ಹೊರಟ ಲೇಖಕರು ಇಡೀ ದೇಶದ ಜಾತಕವನ್ನೇ ಜಾಲಾಡಿಸಿ ಮೊಸರನ್ನು ಚೆನ್ನಾಗಿ ಮಥಿಸಿ ಒಳ್ಳೆಯ ಬೆಣ್ಣೆಯನ್ನು ಓದುಗರಿಗೆ ಕೊಡುತ್ತಾರೆ. ನೆದರ್ಲ್ಯಾಂಡಿನ ಗರ್ಭದೊಳಗಿಂದ ಹೊರತೆಗೆಯುವ ವಿಚಾರಗಳಿಗೆ ಬಾಣಂತನದ ಪೋಷಣೆ ಕೊಟ್ಟ ಈ ಕೃತಿ ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿ ಬಂದಿದೆ. 117 ಪುಟದ 17 ಅಧ್ಯಾಯಗಳುಳ್ಳ ಈ ಕೃತಿಯ ತುಂಬಾ ಲೇಖಕರ ಇನ್ನೂ ಹಲವು ಖಾಸಗಿ ಅನುಭವಗಳು ತುಂಬಿಕೊಂಡಿವೆ. ಅವರು ತಮ್ಮ ಮಗಳು-ಅಳಿಯ-ಮೊಮ್ಮಕ್ಕಳ ಜತೆಗೆ ತಿರುಗಾಡಿ ನೋಡಿದ ಸಂಗತಿಗಳ ವಿವರಣೆಯಿದೆ.

ವಿಮರ್ಶಕರು : ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು
