Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಶಶಿಧರ ಹಾಲಾಡಿಯವರ ‘ಪರಿಸರದ ಒಡನಾಟ’
    Article

    ಪುಸ್ತಕ ವಿಮರ್ಶೆ | ಶಶಿಧರ ಹಾಲಾಡಿಯವರ ‘ಪರಿಸರದ ಒಡನಾಟ’

    February 18, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಶಿಧರ ಹಾಲಾಡಿ ಇವರು ಕನ್ನಡದ ಪರಿಸರಾಸಕ್ತ ಓದುಗರನ್ನು ಮತ್ತೊಮ್ಮೆ ತಾವು ಹುಟ್ಟಿ ಬೆಳೆದ ಹಾಲಾಡಿ ಎಂಬ ಹಸುರಿನ ಬನಸಿರಿಯ ಸುತ್ತ ಸಂಚರಿಸಲು ತಮ್ಮ ಹೊಸ ಕೃತಿ ‘ಪರಿಸರದ ಒಡನಾಟ’ದ ಮೂಲಕ ಪ್ರೇರೇಪಿಸಿದ್ದಾರೆ. ಚಿಕ್ಕ ಬಾಲಕನಾಗಿದ್ದ ಕಾಲದಲ್ಲಿ ತಾವು ಕಂಡ ಹಾಲಾಡಿಯ ಗಿಡ-ಮರ-ಬಳ್ಳಿ-ಹಣ್ಣು-ಕಾಯಿ-ಹಸಿರೆಲೆ-ಪ್ರಾಣಿ-ಪಕ್ಷಿ-ಸರೀಸೃಪ-ಕ್ರಿಮಿ-ಕೀಟಗಳ ಜತೆಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡು ಸಂತೃಪ್ತ ಬದುಕು ಸಾಗಿಸುತ್ತಿದ್ದ ಹಳ್ಳಿಯ ಜನರ ಜೀವನ ಕ್ರಮದ ನೆನಪು ಈಗ ಅವರ ಪಾಲಿಗೊಂದು ಅಕ್ಷಯ ಪಾತ್ರೆ. ನೆನಪುಗಳಲ್ಲಿ ಅಚ್ಚಳಿಯದೆ ಉಳಿದಿರುವ ಅವೆಲ್ಲವೂ ಅವರ ಈ ವರೆಗಿನ ಕಥೆ-ಕಾದಂಬರಿ-ಲೇಖನಗಳಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವುದನ್ನು ನಾವು ನೋಡಿದ್ದೇವೆ.

    ‘ಪರಿಸರದ ಒಡನಾಟ’ ಶಶಿಧರ ಅವರ ಹದಿನೆಂಟನೇ ಕೃತಿ. ಇದರಲ್ಲಿ 42 ಲೇಖನಗಳಿವೆ. ಇಲ್ಲಿ ಹಳ್ಳಿಯಲ್ಲಿ ಕಳೆದ ಸಮೃದ್ಧ ಬಾಲ್ಯದ ನೆನಪುಗಳ ಮೂಲಕ ಅಡಕೆ ತೋಟ, ಮನೆಯ ಮುಂದಿನ ಬಗ್ಗು ಬಾವಿ, ಅಗೇಡಿ, ಗದ್ದೆ ಬಯಲುಗಳು, ನೀರು ಹರಿಯುವ ತೋಡುಗಳು, ಆ ನೀರನ್ನು ಜನರು ಬಳಸುತ್ತಿದ್ದ ಪರಿ, ಬೀಸುವ ಗಾಳಿ, ಸೋಗೆ ಮಾಡಿನ ಶಾಲೆಗೆ ಹೋಗುವ ದಾರಿಯಲ್ಲಿ ಹತ್ತಿ ಇಳಿಯಬೇಕಾದ ಗುಡ್ಡಗಳು, ದಾಟಬೇಕಾದ ಸಂಕಗಳು, ರಸ್ತೆಯೇ ಇಲ್ಲದ ಸಂಪರ್ಕ ದಾರಿಗಳು, ಯಾವುದೋ ರಾಜರ ಕಾಲದಲ್ಲಿ ಕಟ್ಟಿದ ಜರನ ಗುಡ್ಡೆಯ ಬಳಿಯ 120 ಕಲ್ಲಿನ ಮೆಟ್ಟಲುಗಳು -ಮೊದಲಾದವುಗಳ ಕಣ್ಣಿಗೆ ಕಟ್ಟುವಂಥ ವರ್ಣನೆಗಳಿವೆ.‌ ಅವರ ಹಳ್ಳಿಗೆ ಸರಕಾರದಿಂದ ಶಾಲೆ ಮಂಜೂರಾದರೂ ಸರಿಯಾದ ಕಟ್ಟಡವಿಲ್ಲದೇ ವರ್ಷಾನುಗಟ್ಟಲೆ ಮಕ್ಕಳು ಕಷ್ಟ ಪಟ್ಟ ಕುರಿತು ಹೇಳುತ್ತ, ಆದಾಗ್ಯೂ ಆ ಹುಲ್ಲು ಮಾಡಿನ ಗುಡಿಸಲಿನಂಥ ಕಟ್ಟಡಗಳಲ್ಲಿ ಕಲಿಯುವಾಗ ಒಳಗೂ ಹೊರಗೂ ಶಾಲೆಗೆ ಹೋಗುವ ದಾರಿಯಲ್ಲಿಯೂ ತಾವು ಪಡೆದ ಪರಿಸರದ ಪಾಠ ಬಲು ದೊಡ್ಡದು ಎನ್ನುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಪರಿಸರದ ಬಗ್ಗೆ ಅಪಾರ ಕುತೂಹಲ ಬೆಳೆಸಿಕೊಂಡ ಅವರಿಗೆ ಐದನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಒಂದು ಅಪರೂಪದ ಪಾಚಿ ಗಿಡ ಅವರು ತೋಡಿನ ನೀರಿನಲ್ಲಿ ಕುಳಿತಿದ್ದಾಗ ಅನಾಯಾಸವಾಗಿ ಕೈಗೆ ಸಿಗುತ್ತದೆ. ಅದನ್ನು ಅವರು ಶಾಲೆಗೆ ಒಯ್ದು ಮೇಷ್ಟ್ರಿಗೆ ಕೊಟ್ಟು ಮೇಷ್ಟ್ರ ಮೆಚ್ಚುಗೆ ಗಳಿಸುತ್ತಾರೆ. ಅಂದು ಪರಿಸರದ ಬಗ್ಗೆ ತಿಳಿದುಕೊಳ್ಳಲು ಹಳ್ಳಿಯ ಬದುಕಿನಲ್ಲಿ ವಿಪುಲ ಅವಕಾಶಗಳಿದ್ದವು ಅನ್ನುತ್ತಾರೆ. ಸಸ್ಯ ಸಂಕುಲವನ್ನೂ ಪ್ರಾಣಿ ಸಂತತಿಯನ್ನೂ ಉಳಿಸಿ ಬೆಳೆಸುವುದೇ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವ ಒಂದೇ ದಾರಿ ಎಂದು ಆಗಲೇ ಕಂಡುಕೊಂಡ ಅವರಿಗೆ ಕಾಲೇಜಿನಲ್ಲಿ ಕಪ್ಪೆ ಕೊಯ್ಯುವ ಪ್ರಯೋಗವು ಮನಸ್ಸಿಗೆ ಹಿಂಸೆಯುಂಟು ಮಾಡುತ್ತದೆ.

    ಈ ಕೃತಿಯಲ್ಲಿ ಹಕ್ಕಿಗಳ ಬಗ್ಗೆ ಪ್ರತ್ಯೇಕವಾದ ಮೂರು ಲೇಖನಗಳಿವೆ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೆಲಸ ದೊರೆಯುವ ತನಕ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಲೇಖಕರು ಈ ಅವಧಿಯನ್ನು ಪರಿಸರ ಅಧ್ಯಯನಕ್ಕಾಗಿ ಬಳಸುತ್ತಾರೆ. ಆಗಲೇ ಸಲೀಂ ಆಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಓದಿಕೊಂಡ ಅವರು ಕಾಡು ಮೇಡುಗಳನ್ನು ಸುತ್ತಿ ಪ್ರಾಣಿ ಪಕ್ಷಿಗಳನ್ನು ಗುರುತಿಸುತ್ತಾರೆ.‌ ಎಷ್ಟೋ ಬಾರಿ ತಮಗೆ ಅರ್ಥವಾಗದ ವಿಚಾರಗಳನ್ನು ಅನುಭವಿ ಮಹಿಳೆಯಾದ ತಮ್ಮ ಅಮ್ಮಮ್ಮನಲ್ಲಿ ಕೇಳಿ ತಿಳಿದುಕೊಳ್ಳುತ್ತಾರೆ. ಅಂತೆಯೇ ಅವರ ಮೊದಲ ಲೇಖನದಲ್ಲಿ ಗೂಬೆ ಹಕ್ಕಿಯ ವಿವಿಧ ಪ್ರಭೇದಗಳನ್ನು ವರ್ಣಿಸುತ್ತ (ಗೂಬೆ ನೆತ್ತಿಂಗಗಳ ಲೋಕದಲ್ಲಿ) ಮೀನುಗೂಬೆ, ಕೊಂಬುಗೂಬೆ ಮೊದಲಾದ ಕಣ್ಣಿಗೆ ಕಾಣಿಸುವ ಗೂಬೆಗಳಲ್ಲದೆ ರಾತ್ರಿ ಹೊತ್ತು ಭಯ ಹುಟ್ಟಿಸುವ ರೀತಿಯಲ್ಲಿ ವಿಕಾರವಾಗಿ ಕೂಗುವ, ಅಮ್ಮಮ್ಮ ಹೇಳಿದ ‘ಜಕಣಿ ಹಕ್ಕಿ’ಯೂ ಸೇರಿಕೊಂಡಿದೆ.

    ಕೀಟಗಳ ಬಗ್ಗೆ ಇರುವ ಎರಡು ಲೇಖನಗಳು ‘ಮಿಂಚು ಹುಳಗಳ ಬೆಳಕಿನ ಪರಿಷೆ’ ಮತ್ತು ‘ಹುಲಿ ಕಡ್ಜುಳನ ಗೂಡು’. ಮಿಂಚು ಹುಳಗಳು ಸೃಷ್ಟಿಸುವ ಬೆಳಕಿನ ಮಾಯಾಲೋಕವನ್ನು ನಿಸರ್ಗದ ವಿಸ್ಮಯಕಾರಿ ಬೆಳಕಿನ ಕಾವ್ಯ ಎಂದು ಹೇಳುತ್ತ ಆಧುನಿಕ ಪ್ರಖರ ಬೆಳಕಿನ ಪರಿಕರಗಳ ಬಳಕೆ ಮತ್ತು ಮರಗಳ ಕಡಿಯುವಿಕೆಯಿಂದಾಗಿ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗಿದೆ ಮತ್ತು ಅವುಗಳು ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದು ಲೇಖಕರು ವಿಷಾದಿಸುತ್ತಾರೆ. ಹುಲಿ ಕಡ್ಜುಳವು ಕಚ್ಚಿದರೆ ಜೇನುಹುಳಕ್ಕಿಂತಲೂ ಹೆಚ್ಚು ಅಪಾಯಕಾರಿಯೆಂದು ಜನರು ಅದರ ಗೂಡಿಗೆ ಬೆಂಕಿ ಹಚ್ಚಲು ಹೊರಟಾಗ ಸದಾ ಇಕಾಲಜಿ ಸರಪಣಿಯ ಬಗ್ಗೆ ಚಿಂತಿಸುವ ಲೇಖಕರಿಗೆ ಅದು ತುಂಬಾ ಕಸಿವಿಸಿಯುಂಟು ಮಾಡುತ್ತದೆ.

    ಹಳ್ಳಿಯಲ್ಲಿ ಅಂದು ಸಮೃದ್ಧವಾಗಿ ಸಿಗುತ್ತಿದ್ದ ಸಸ್ಯಜನ್ಯ ಆಹಾರವಸ್ತುಗಳು, ಮಿಡಿ, ಕಾಯಿ ಹಣ್ಣು- ಹಂಪಲುಗಳ ವಿವರಗಳು ಇಲ್ಲಿ ಹಲವು ಲೇಖನಗಳನ್ನು ತುಂಬಿಕೊಂಡಿವೆ. ಘಮ್ಮೆಂದು ಪರಿಮಳ ಬೀರುವ ಕಾಟು ಮಾವಿನ ಮಿಡಿಗಳಿಂದ ಊರಿನ ಎಲ್ಲ ಮನೆಗಳಲ್ಲಿ ಮಾಡುತ್ತಿದ್ದ, ಎರಡು ಮೂರು ವರ್ಷಗಳಾದರೂ ಹಾಳಾಗದ ಉಪ್ಪಿನ ಕಾಯಿಯ ನೆನಪು ಅವರನ್ನು ಪದೆಪದೇ ಕಾಡುತ್ತದೆ. ಮರಗಳಿಂದ ಬೀಳುವ ಮಾವಿನ ಹಣ್ಣುಗಳನ್ನು ಹೆಕ್ಕಲು ಊರಿನ ಮಕ್ಕಳೆಲ್ಲಾ ಮರದಡಿ ಸೇರಿ ಖುಷಿಪಡುತ್ತಿದ್ದ ದಿನಗಳು ಮರೆಯಲಾರದಂತವು. ಕರಾವಳಿ ಜಿಲ್ಲೆಗಳಲ್ಲಿ ಹಲಸನ್ನು ವೈವಿಧ್ಯಮಯ ತಿಂಡಿ ತಿನಸುಗಳನ್ನು ಮಾಡಲು, ಹಪ್ಪಳ ಮಾಡುವುದಲ್ಲದೆ ಬೀಜಗಳನ್ನು ಕೂಡಾ ದಾಸ್ತಾನು ಮಾಡಿ ಮಳೆಗಾಲದಲ್ಲಿ ತಿನ್ನಲು ಬಳಸುತ್ತಿದ್ದ ಬಗ್ಗೆ ಅವರಿಗೆ ಹೆಮ್ಮೆಯೆನ್ನಿಸುತ್ತದೆ. ಹಲಸಿನ ಈ ರೀತಿಯ ಬಹೂಪಯೋಗಿ ಗುಣಗಳ ಬಗ್ಗೆ ಬಯಲು ಸೀಮೆಯವರು ಯಾಕೆ ಆಲೋಚಿಸಿಲ್ಲ ಅನ್ನುವುದು ಅವರಿಗೆ ಅಚ್ಚರಿಯ ವಿಚಾರ.

    ಗುಂಬಳ ಹೂವಿನಿಂದ ಮಾಡುತ್ತಿದ್ದ ದೋಸೆ, ತಾಳೆ ಮರದಿಂದ ಸಿಗುತ್ತಿದ್ದ ಹಣೆಕಣ್ಣು, ದಾಸವಾಳ ಎಲೆಗಳಿಂದ ಮಾಡುತ್ತಿದ್ದ ಇಡ್ಲಿ ಮೊದಲಾದ ತಿನಿಸುಗಳನ್ನು ಲೇಖಕರು ಚಪ್ಪರಿಸುತ್ತ ತಿನ್ನುತ್ತಿದ್ದ ಆ ಕಾಲಕ್ಕೂ ಅಂಥ ಯಾವುದೇ ಸಾಂಪ್ರದಾಯಿಕ ತಿನಿಸುಗಳಲ್ಲೂ ಆಸಕ್ತಿಯೇ ಇಲ್ಲದೆ ಕೃತಕವಾಗಿ ತಯಾರಿಸಿದಂಥ ಆಧುನಿಕ ತಿನಿಸುಗಳನ್ನೇ ಇಷ್ಟಪಡುವ ಹೊಸ ತಲೆಮಾರಿನವರ ಈ ಕಾಲಕ್ಕೂ ನಡುವೆ ಅಜಗಜಾಂತರವಿರುವುದನ್ನು ಲೇಖಕರು ದುಃಖದಿಂದ ಗಮನಿಸುತ್ತಾರೆ.

    ಡಾಕ್ಟರ್ ಗಳು, ಔಷಧಿಗಳು, ಆಸ್ಪತ್ರೆಗಳು ಏನೂ ಇಲ್ಲದಿದ್ದ ಅಂದಿನ ಕಾಲದಲ್ಲಿ ಸಾಮಾನ್ಯ ಕಾಯಿಲೆಗಳಿಗೆಲ್ಲ ಹಳ್ಳಿಗರು ಔಷಧೀಯ ಸಸ್ಯ ಜನ್ಯ ವಸ್ತುಗಳನ್ನೇ ಬಳಸುತ್ತಿದ್ದರು. ನೆಗಡಿ, ಜ್ವರ, ಶೀತ, ಕೆಮ್ಮು, ಮೈಕೈನೋವುಗಳಿಗೆಲ್ಲ ಶುಂಠಿ, ಮೆಣಸಿನ ಕಾಳು, ಬೆಳ್ಳುಳ್ಳಿ, ಹಂಗಾರ ಕೆತ್ತೆ ಮೊದಲಾದವುಗಳ ಕಷಾಯವೆ ಮದ್ದು. ಹಲ್ಲು ನೋವಿಗೆ ಲವಂಗ, ಕಿವಿನೋವಾದರೆ ಬೆಳ್ಳುಳ್ಳಿ ಎಣ್ಣೆ, ಕುರ-ಕಜ್ಜಿಗಳಾದರೆ ಅರಸಿನದ ಲೇಪಗಳೇ ಔಷಧಿಗಳು. ಬಿಳಿ ದಾಸವಾಳ- ಬಿಳಿ ಕಿಸ್ಕಾರಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ಹಳ್ಳಿಗರು ಅದಾಗಲೇ ತಿಳಿದುಕೊಂಡಿದ್ದರು. ಇವತ್ತು ಆಧುನಿಕ ಔಷಧಿ ತಯಾರಕರ ಕಣ್ಣು ದಾಸವಾಳ ಕಿಸ್ಕಾರಗಳ ಮೇಲೆ ಬಿದ್ದದ್ದರ ಕುರಿತೂ ಈ ಲೇಖನಗಳು ಎಚ್ಚರಿಸುತ್ತವೆ. ‘ಮುಷ್ಠ’ ಅನ್ನುವ ಜನಪದ ಚಿಕಿತ್ಸಾ ವಿಧಾನದ ಬಗ್ಗೆ ಲೇಖಕರು ಆಶ್ಚರ್ಯ ಪಡುತ್ತಾರೆ. ದೇಹದಲ್ಲಿ ನೋವಾದ ಭಾಗಕ್ಕೆ ಎದುರಾಗಿ ಒಣಹುಲ್ಲಿನ ಎಸಳನ್ನು ಗೆಜ್ಜೆಯಂತೆ ಕಟ್ಟಿ ಬೇಕೆಂದೇ ನೆರೆಕರೆಯವರ ಮುಂದೆ ತಿರುಗಾಡಿ, ಅವರು ಅದಕ್ಕೆ ಕಾರಣ ಕೇಳಿದರೆ ಆ ನೋವು ಅವರಿಗೆ ವರ್ಗಾಯಿಸಲ್ಪಡುತ್ತದೆ ಅನ್ನುವ ನಂಬಿಕೆಯಿಂದ ಹುಟ್ಟಿಕೊಂಡ ಚಿಕಿತ್ಸಾ ಪದ್ಧತಿಯದು.

    ಪ್ರಪಂಚದಲ್ಲಿ ಪ್ರಸಿದ್ಧವಾಗಿರುವ ನ್ಯಾಷನಲ್ ಪಾರ್ಕುಗಳನ್ನು ಹೊಂದಿದ ಅಮೇರಿಕಾ ಎಳೆಯ ಮಕ್ಕಳಿಗೂ ಅವುಗಳನ್ನು ನೋಡುವ ಅವಕಾಶಗಳನ್ನು ರಸ್ತೆ ಸಂಪರ್ಕಗಳ ಮೂಲಕ ಸುಲಭ ಸಾಧ್ಯವಾಗಿಸಿದೆ. ಭಾರತದಲ್ಲೂ ಬೇಕಾದಷ್ಟು ನ್ಯಾಷನಲ್ ಪಾರ್ಕ್ ಗಳಿವೆ. ಆದರೆ ಅವುಗಳನ್ನು ನೋಡಲು ಹೋಗಲು ಮಾತ್ರ ಸರಿಯಾದ ವ್ಯವಸ್ಥೆಗಳಿಲ್ಲ. ಸಂಪರ್ಕ ಸಾಧನಗಳನ್ನು ಸುಲಭವಾಗಿಸುವ ಒಂದು ವೈಜ್ಞಾನಿಕ ರೂಟ್ ಮ್ಯಾಪ್ ಮಾಡುವ ಕೆಲಸ ಆಗಬೇಕಾಗಿದೆ ಮತ್ತು ಇದರಿಂದ ಒಂದು ಆರೋಗ್ಯಪೂರ್ಣ ಹವ್ಯಾಸ ಹಾಗೂ ಪರಿಸರ ಕಾಳಜಿ ಜನರಲ್ಲಿ ಹುಟ್ಟಲು ಸಹಾಯವಾಗುತ್ತದೆ ಎಂದು ಲೇಖಕರು ಹೇಳುತ್ತಾರೆ.

    ಅಭಿವೃದ್ಧಿಯ ಹೆಸರಿನಲ್ಲಿ ಸರಕಾರ ಮತ್ತು ಜನತೆಯಿಂದ ಆಗುತ್ತಿರುವ ಅಚಾತುರ್ಯಗಳಿಂದಾಗಿ ಸಂಭವಿಸುತ್ತಿರುವ ಹಲವಾರು ರೀತಿಯ ಪ್ರಾಕೃತಿಕ ದುರಂತಗಳ ಬಗ್ಗೆ ಇಲ್ಲಿನ ಹಲವು ಲೇಖನಗಳು ವಿಷಾದ ವ್ಯಕ್ತಪಡಿಸುತ್ತವೆ. ರಷ್ಯಾದಲ್ಲಿ ಹಿಂದೆ ಇದ್ದ ‘ಅರಾಲ್ ಸಮುದ್ರ’ ಎಂಬ ಜಗತ್ತಿನಲ್ಲೇ ಅತಿ ಹೆಚ್ಚು ವಿಶಾಲವಾದ ಸಿಹಿನೀರಿನ ಸರೋವರಕ್ಕಾದ ದುರ್ಗತಿ ಇವುಗಳಲ್ಲೊಂದು. ಎರಡು ದೊಡ್ಡ ನದಿಗಳು ಈ ಸರೋವರಕ್ಕೆ ನೀರನ್ನುಣಿಸುತ್ತಿದ್ದವು. ಪ್ರಾಣಿಪಕ್ಷಿಗಳೊಂದಿಗೆ ಮನುಷ್ಯರೂ ಈ ನೀರನ್ನು ಖುಷಿಯಿಂದ ಬಳಸುತ್ತಿದ್ದರು. ಆದರೆ ಸರಕಾರದ ಮಹತ್ವಾಕಾಂಕ್ಷೆಯ ‘ನದೀ ತಿರುವು ಯೋಜನೆ’ಯು ಸರೋವರಕ್ಕೆ ನೀರು ಹೋಗದಂತೆ 30ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಕಟ್ಟಿತು. ಪರಿಣಾಮವಾಗಿ ಸರೋವರವು ಪೂರ್ತಿಯಾಗಿ ಬತ್ತಿ ಅಲ್ಲಿ ಮರುಭೂಮಿ ಉಂಟಾಯಿತು. ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ‘ಎತ್ತಿನ ಹೊಳೆ ನದೀ ತಿರುವು’ ಯೋಜನೆಗೋಸ್ಕರ ಈಗಾಗಲೇ ಸಾವಿರಾರು ಎಕರೆ ಅರಣ್ಯಗಳನ್ನು ನಾಶ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿಯಲ್ಲಿ ನಡೆಸಲು ಉದ್ದೇಶಿಸಿರುವ ಗಣಿಗಾರಿಕೆಯ ಯೋಜನೆಯೂ ಒಂದಿಲ್ಲೊಂದು ದಿನ ವಿನಾಶಕ್ಕೆ ದಾರಿಯಾಗುವಂಥದ್ದು.‌ ಕಾಡುಗಳನ್ನು ಕಡಿದು ಅಕೇಶಿಯಾ ಮರಗಳನ್ನು ಯಥೇಚ್ಛವಾಗಿ ನೆಡುವುದರಿಂದ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಗಳನ್ನು ಕಟ್ಟುವುದರಿಂದ ವಯನಾಡು, ಕೊಡಗು, ಶಿರಾಡಿ, ಸಕಲೇಶಪುರಗಳಲ್ಲಿ ನಡೆದಂತಹ ಗುಡ್ಡ ಕುಸಿತ-
    ಜೀವಹಾನಿಗಳು ಸಂಭವಿಸುತ್ತಿವೆ ಅನ್ನುತ್ತಾರೆ.

    ಪ್ರಕೃತಿ ಪರಿಸರಗಳೊಂದಿಗೆ ಹಾಸು ಹೊಕ್ಕಾಗಿದ್ದ ಹಳ್ಳಿಯ ಜನರ ಜೀವನಕ್ರಮ, ಅವರು ಬೆಳೆಸಿಕೊಂಡ ನಂಬಿಕೆಗಳು, ಪ್ರಕೃತಿ-ಪರಿಸರಗಳ ಜತೆಗಿನ ಅವರ ಭಾವನಾತ್ಮಕ ಸಂಬಂಧಗಳು, ಅವರಲ್ಲಿ ಸದಾ ಜಾಗೃತವಾಗಿದ್ದ ಪರಸ್ಪರ ಸಹಕಾರ ತತ್ವ, ಸೌಹಾರ್ದ ಸಂಬಂಧಗಳು ಪ್ರತಿಯೊಂದು ಲೇಖನದಲ್ಲೂ ಅನುರಣಿತವಾಗಿವೆ. ಲೇಖಕರ ಆಪ್ತವಾದ ಬರವಣಿಗೆಯ ಶೈಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕುರಿತಾದ ಕೃತಿಗಳಂತೆ ಗ್ರಾಮೀಣ ಬದುಕಿನ ಒಂದು ವಿಹಂಗಮ ನೋಟವನ್ನು ಅಚ್ಚಳಿಯದಂತೆ ಕಟ್ಟಿ ಕೊಡುತ್ತದೆ. 42 ಲೇಖನಗಳನ್ನು ಒಟ್ಟಾಗಿ ತೆಗೆದುಕೊಂಡರೆ ಅವರು ಇಂಚಿಂಚಾಗಿ ವರ್ಣಿಸುವ ಹಾಲಾಡಿಯ ಮ್ಯಾಪ್ ನಮ್ಮ ಕಣ್ಣ ಮುಂದೆ ಚಲಿಸುವ ಒಂದು ಡಾಕ್ಯುಮೆಂಟರಿ ಚಿತ್ರವಾಗುತ್ತದೆ.

    ವಿಮರ್ಶಕರು : ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕ ಶಶಿಧರ ಹಾಲಾಡಿ

    article Literature review
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ನಾಟ್ಯರಂಗದ ವಿದ್ಯಾರ್ಥಿಗಳಿಂದ ‘ನೃತ್ಯ ಹರ್ಷ’ ಭರತನಾಟ್ಯ ಕಾರ್ಯಕ್ರಮ
    Next Article ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ‘ತಿಂಗಳ ಸಾಹಿತ್ಯ ಸಂವಾದ’
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.