‘ಪುರಾಣ ಕಥಾಕೋಶ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಸಂಪಾದಿಸಿದ ಕೃತಿ. ಬಹುಮುಖ ಪ್ರತಿಭಾವಂತರಾಗಿದ್ದ ತಮ್ಮ ಅಜ್ಜ ಅಡೂರು ಅಪ್ಪೋಜಿರಾವ್ ಜಾದವ್ ಅವರು ಬಿಟ್ಟು ಹೋದ ಅಳಿದುಳಿದ ಆಸ್ತಿ. ಯಕ್ಷಗಾನ ತಾಳಮದ್ದಳೆಯಲ್ಲಿ ಊರು-ಪರವೂರುಗಳಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಿದ್ದ ಅವರು ಬರೇ ನಾಲ್ಕನೆಯ ತರಗತಿಯವರೆಗಷ್ಟೆ ಓದಿಕೊಂಡಿದ್ದರೂ ನೂರಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಹಿಮ್ಮೇಳಕ್ಕೆ ಬಳಸುವ ಮದ್ದಳೆ, ಜಾಗಟೆಯಂಥ ಸಂಗೀತೋಪಕರಣಗಳೂ ಅವರ ಸಂಗ್ರಹದಲ್ಲಿದ್ದವು. ಅಜ್ಜ ತೀರಿಕೊಂಡಾಗ ಮೋಹನ ಕುಂಟಾರ್ ಅವರು ಆರು ತಿಂಗಳ ಕೂಸು. ಅಜ್ಜನ ಆಸ್ತಿಯನ್ನು ಸುರಕ್ಷಿತವಾಗಿ ಇಡುವ ಆಸಕ್ತಿ ಮುಂದಿನ ತಲೆಮಾರಿನವರಿಗೆ ಇರಲಿಲ್ಲವಾಗಿ ಪುಸ್ತಕಗಳೆಲ್ಲ ಹರಿದು ಹಾಳಾದವು. ಮೋಹನರು ದೊಡ್ಡವರಾದ ನಂತರ ಅಜ್ಜನ ಆಸ್ತಿಯನ್ನು ಕಳೆದುಕೊಂಡದ್ದರ ಬಗ್ಗೆ ದುಃಖಿತರಾದರು. ಹುಡುಕಿ ಹುಡುಕಿ ಕೊನೆಗೆ ಸಿಕ್ಕಿದ ಕೆಲವು ಕದಲಿದ ಹಾಳೆಗಳನ್ನು ಜೋಡಿಸಿದಾಗ ಅಜ್ಜ ಬರೆದಿಟ್ಟಿದ್ದ ಕೆಲವು ಪುರಾಣ ಕಥೆಗಳು ಸಿಕ್ಕಿದವು. ಅವನ್ನೇ ಇಲ್ಲಿ ‘ಪುರಾಣ ಕಥಾಕೋಶ’ವಾಗಿ ಹೊರ ತಂದಿದ್ದಾರೆ. ಇದು ಅಜ್ಜನೊಂದಿಗಿನ ಅವರ ಭಾವುಕ ನಂಟಿನ ದ್ಯೋತಕವೂ ಹೌದು.
ಯಕ್ಷಗಾನ ಕ್ಷೇತ್ರದಲ್ಲಿ ದುಡಿದವರಿಗೆ ಪುರಾಣದ ಕಥೆಗಳು ಕರತಲಾಮಲಕ. ಸದಾ ಅವುಗಳ ಬಗ್ಗೆಯೇ ಚಿಂತಿಸುತ್ತ ಸಂಶೋಧನೆ ಮಾಡುತ್ತಿರುತ್ತಾರೆ. ಈ ಸಂಗ್ರಹದಲ್ಲಿ 140 ಪುಟ್ಟ ಪುಟ್ಟ ಕಥೆಗಳಿವೆ. ಇತರ ಪುರಾಣ ಕಥಾಕೋಶಗಳಲ್ಲಿ ಇಲ್ಲದ ಅನೇಕ ವಿಶೇಷ ಕಥೆಗಳಿವೆ. ಅಂಬರೀಶನು ದೂರ್ವಾಸರನ್ನು ರಕ್ಷಿಸಿದ ಕಥೆ, ಕಬಂಧನ ಕಥೆ, ಚಿತ್ರ ನಂಗೆಯರೆಂಬ ದೇವಕಿಯ ಮಕ್ಕಳ ಚರಿತ್ರೆ, ತಮಾಸುರನ ನಾಶ ಮತ್ತು ಮತ್ಸ್ಯವತಾರದ ಕಥೆ, ದೇವತೆಗಳು ಮರಗಳಾಗಿ ಜನಿಸಿದ ಕಥೆ, ನಿಮಿ ಕುಲದ ವಿಸ್ತಾರದ ಕಥೆ, ನಿಷಾದನೆಂಬ ಕಿರಾತನ ವಂಸದ ಕಥೆ – ಹೀಗೆ. ಕೆಲವು ಮಾಹಿತಿ ಕೊಡುವ ವಿವರಗಳು ಇವೆ- ಅರವತ್ತನಾಲ್ಕು ವಿದ್ಯೆಗಳು, ದೇವೆಂದ್ರನಿಗಿರುವ ಹೆಸರುಗಳು, ನದಿಗಳ ಹೆಸರುಗಳು, ಬ್ರಹ್ಮನ ನಾಮಾವಳಿಗಳು, ವಟವೃಕ್ಷಗಳ ವರ್ಣನೆಗಳು ಇತ್ಯಾದಿ. ಒಟ್ಟಿನಲ್ಲಿ ಪುರಾಣಗಳ ಬಗ್ಗೆ ತಿಳಿಯುವ ಆಸಕ್ತಿರುವವರಿಗೆ ಒಂದು ಕಿರು ವಿಶ್ವಕೋಶ ಇದ್ದಂತಿದೆ ಈ ಕೃತಿ. ಅರುವತ್ತಕ್ಕೂ ಮಿಕ್ಕಿ ವರ್ಷಗಳಷ್ಟು ಹಳೆಯ ಶೈಲಿಯ ಕನ್ನಡವನ್ನು ಮೋಹನ ಕುಂಟಾರ್ ಆಧುನಿಕ ಶೈಲಿಗೆ ತಂದು ಪ್ರಕಟಿಸಿದ್ದಾರೆ.
-ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು