Subscribe to Updates

    Get the latest creative news from FooBar about art, design and business.

    What's Hot

    ‘ಚಿತ್ರಾ’ ನಾಟಕ ತಂಡದಿಂದ ‘ಚಿತ್ರಾ – 75’ ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 15

    August 30, 2025

    ಮೈಸೂರಿನಲ್ಲಿ ‘ಸಾಹಿತ್ಯ ಚಾವಡಿ’ ಸಂವಾದ ಕಾರ್ಯಕ್ರಮ | ಆಗಸ್ಟ್ 31

    August 30, 2025

    ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್‌ ಒಝೇರಿಯೊ ನಿಧನ

    August 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ರಾಘವೇಂದ್ರ ಮಂಗಳೂರು ಇವರ ‘ನ್ಯಾನೋ ಕಥೆಗಳು’ 
    Article

    ಪುಸ್ತಕ ವಿಮರ್ಶೆ | ರಾಘವೇಂದ್ರ ಮಂಗಳೂರು ಇವರ ‘ನ್ಯಾನೋ ಕಥೆಗಳು’ 

    August 30, 2025No Comments10 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರಿನವರಾದ ರಾಘವೇಂದ್ರ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರು ‘ಲಾಟರಿ ಹುಡುಗ’ (ಕಥಾ ಸಂಕಲನ) ‘ಭೂಮಿ ದುಂಡಗಿದೆ’ (ಹಾಸ್ಯ ವಿಡಂಬನೆಗಳ ಸಂಗ್ರಹ) ಮತ್ತು ‘ನ್ಯಾನೋ ಕಥೆಗಳು’ (ಹನಿಗತೆಗಳ ಸಂಕಲನ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ನ್ಯಾನೋ ಕಥೆಗಳಲ್ಲಿರುವ 208 ಕತೆಗಳ ಪೈಕಿ ಕೆಲವು ರಚನೆಗಳು ಇತ್ತೀಚಿಗೆ ಬಂದ ಹನಿಗತೆಗಳ ಪೈಕಿ ವಿಶಿಷ್ಟವೆನಿಸುತ್ತವೆ.
    ಕತೆಗಾರರು ತಮ್ಮ ನಾಯಕಿಯನ್ನು ತೆಳ್ಳಗೆ, ಬೆಳ್ಳಗಿನ ಚೆಲುವೆಯರನ್ನಾಗಿ ಚಿತ್ರಿಸುವ ರೂಢಿಯಿದೆ. ಆದರೆ ‘ಒಂದು ಪ್ರೇಮ ಕಥೆ’ಯ ನಾಯಕನು ಮೂಕನೂ, ನಾಯಕಿ ಕಿವುಡಿಯೂ ಆಗಿದ್ದಾಳೆ. ಅಂಥವರ ಮನಸ್ಸಿನಲ್ಲೂ ಪ್ರೀತಿ ಪ್ರೇಮದ ಭಾವನೆಗಳಿರುತ್ತವೆ ಎಂಬುದನ್ನು ಮನಗಾಣಿಸುವಲ್ಲಿ, ಅವರು ಅಂಗವಿಕಲಾದರೂ ಮನಸ್ಸಿಗೆ ವೈಕಲ್ಯವಿಲ್ಲ ಎಂಬುದನ್ನು ಅರಿವಿಗೆ ತರುವುದರಲ್ಲಿ ಕತೆಯ ಹೆಚ್ಚುಗಾರಿಕೆಯಿದೆ.
    ಪ್ರಿಯಕರನ ಬಗ್ಗೆ ಪ್ರೇಯಸಿಯ ಹೃದಯದಲ್ಲಿ ತುಂಬಿದ ಕಾತರವು ದೇಶಕಾಲ ಪರಿಮಿತವಾದುದಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ. ಪ್ರಿಯಕರನ ಏಳಿಗೆಗಾಗಿ ತುಡಿಯುವ ಆಕೆಯ ಹೃದಯವು ಆತನ ಬದುಕು ಚೆನ್ನಾಗಿರುವುದನ್ನು ಕಂಡರೆ ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತದೆ. ಆದರೆ ಆಕೆಯ ಬದುಕಿನಲ್ಲೂ ದ್ವಂದ್ವವು ಎದುರಾಗಬಹುದು. ಯಾವುದೋ ಒಂದನ್ನು ಆಯ್ಕೆ ಮಾಡಿದುದರಿಂದಾಗಿ ತಾನು ಕಳೆದುಕೊಂಡ ಇನ್ನೊಂದರ ಬಗ್ಗೆ ಪರಿತಪಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ‘ಲಾಲ್ ಸಲಾಂ’ ಎಂಬ ಕತೆಯು ಕಾಡು ಹೊಕ್ಕು ನಕ್ಸಲೈಟ್ ಆದ ಪ್ರಿಯಕರನ ಕುರಿತು ನಿರೀಕ್ಷೆ ಮತ್ತು ನಿರಾಸೆಗಳನ್ನು ಅನುಭವಿಸುವ ಪ್ರೇಯಸಿಯ ಪರಿಸ್ಥಿತಿಯನ್ನು ಕಟ್ಟಿಕೊಡುತ್ತದೆ. ದೂರವಾಣಿಯ ಮೂಲಕ ಕರೆಯನ್ನು ಮಾಡಿದರೂ ಉತ್ತರಿಸದೆ ನಿಜ ಜೀವನದಿಂದಲೇ ‘ಕಟ್’ ಮಾಡಿದ ಗೆಳತಿ (ಫೋನ್ ಕಾಲ್), ಬೆಳಗ್ಗೆಯಿಂದ ಸಂಜೆಯವರೆಗೆ ಕರೆ ಮಾಡಿ ಬ್ಯಾಟರಿ ಡೆಡ್ ಆದರೂ ಆಸೆಯನ್ನು ಜೀವಂತವಾಗಿಟ್ಟುಕೊಂಡ ಹುಡುಗಿ (ಆಸೆ) ಪಾಸ್ವರ್ಡ್ ಬದಲಿಸಬೇಕೆಂಬ ಸಂದೇಶ ಬಂದಾಗ ಪ್ರಿಯಕರನ ಹೆಸರಿನ ಪಾಸ್ವರ್ಡನ್ನು ಬದಲಿಸಲಾರದೆ ಬ್ಯಾಂಕನ್ನೇ ಬದಲಿಸಿದ ಹೆಂಗಸು (ಪಾಸ್ವರ್ಡ್) ವಿಷಾದದ ತಂತಿಯನ್ನು ಮೀಟುತ್ತಾರೆ. ‘ಆಕೆಯೊಡನೆ ಚಾಟಿಂಗ್ ಇಲ್ಲ, ಮೆಸೇಜ್ ವಿನಿಮಯವಿಲ್ಲ. ಫೊಟೋವಂತೂ ಇಲ್ಲವೇ ಇಲ್ಲ. ಆದರೆ ಪ್ರತಿ ಪ್ರೊಫೈಲಿನ ಪಿಕ್ಚರನ್ನು ಸೇವ್ ಮಾಡಿಕೊಳ್ಳುತ್ತಾನೆ (ಮೂಕಪ್ರೇಮ – ಪುಟ 33) ಏನೋ ಹೇಳಬೇಕೆಂದುಕೊಂಡಿದ್ದರೂ ಹೇಳಲಾಗದಿರುವುದಕ್ಕೆ ಪುರಾವೆಯನ್ನು ಒದಗಿಸುವ ‘ದಿಸ್ ಮೆಸೇಜ್ ವಾಸ್ ಡಿಲೀಟೆಡ್’ ಎಂಬ ವಾಟ್ಸಾಪ್ ಸಂದೇಶಗಳು ಮನದ ಮಾತನ್ನು ಬಾಯಿಬಿಟ್ಟು ಹೇಳಲಾರದೆ ಒದ್ದಾಡುವ ಪ್ರೇಮಿಗಳ ಮೌನ ಸಂವೇದನೆಯನ್ನು ಸೂಚಿಸುವುದರೊಂದಿಗೆ ಕಾಲಕ್ಕೆ ತಕ್ಕಂತೆ ಬದಲಾದ ಪ್ರೇಮಾಭಿವ್ಯಕ್ತಿಯ ಬಾಹ್ಯಚರ್ಯೆಗಳನ್ನು ವ್ಯಕ್ತಪಡಿಸುತ್ತವೆ. ಕಾಲಕ್ಕೆ ತಕ್ಕಂತೆ ಬದುಕು ಬದಲಿಸಬೇಕು ಎಂಬುದು ನಿಜವಾದರೂ ಧಾವಂತದ ಬದಕಿನಲ್ಲಿ ಅಂತರಂಗದ ಸೆಲೆ ಬತ್ತಿ ಹೋಗಿದೆ ಎಂಬುದಕ್ಕೆ ‘ತ್ರೀಜಿ, ಫೋರ್ಜಿ, ಫೈವ್ಜಿ. ಇಂಟರ್ನೆಟ್ ಸ್ಪೀಡ್ ಹೆಚ್ಚಾದರೂ ಆತನ ವಾಟ್ಸಪ್ ಮನವಿಗೆ ಒಂದು ತಿಂಗಳಾದರೂ ಆಕೆಯಿಂದ ಉತ್ತರ ಬರಲೇ ಇಲ್ಲ. ವಿಲ್ ಯು ಮ್ಯಾರಿ ಮಿ?” (ವಿಲ್ ಯು ? ಪುಟ 99) ಎಂಬ ಸಾಲುಗಳು ಕನ್ನಡಿಯನ್ನು ಹಿಡಿಯುತ್ತವೆ. ‘ನಾನು ಬರ್ತೇನೆ’ ಎಂದು ಮನೆಯಿಂದ ಹೊರಟವಳನ್ನು ಹೋಗಲು ಬಿಡದೆ ‘ಇನ್ನೂ ಸ್ವಲ್ಪ ಹೊತ್ತು ಇರು’ ಎಂದು ಕೇಳಿಕೊಂಡಾಗ ಆ ಮಾತಿಗಾಗಿ ಕಾಯುತ್ತಿದ್ದವಳಂತೆ ಜೀವನವಿಡೀ ಆತನ ಜೊತೆಗಿರಲು ಸಿದ್ಧಳಾದ ಪ್ರೇಯಸಿ (ಬರ್ತೇನೆ, ಹೋಗಿ ಬರ್ತೇ ನೆ) ಬೆಂಗಳೂರಿನ ಪ್ರೇಯಸಿಗೆ ಶುಭರಾತ್ರಿಯನ್ನು ಕೋರಿ ಹತ್ತು ನಿಮಿಷಗಳಲ್ಲಿ ಅಲ್ಲಿರುತ್ತೇನೆ ಎಂದು ಮಾತು ಕೊಟ್ಟು ಆಕೆಯ ಕನಸಿನಲ್ಲಿ ಬರುವ ಅಮೇರಿಕದ ಪ್ರಿಯಕರ (ಕನಸಿನಲ್ಲಿ) ಮನ ಮೆಚ್ಚಿದ ಹುಡುಗಿಯ ಉತ್ತರಪತ್ರಿಕೆಯ ಜೊತೆ ತನ್ನ ಉತ್ತರಪತ್ರಿಕೆಯನ್ನು ಇಟ್ಟು ನಿಗೂಢ ನೆಮ್ಮದಿ ಅನುಭವಿಸುವ ಹುಡುಗ (ಟಿನೇಜ್ ಲವ್) ‘ಐ ಲವ್ಯೂ’ ಎಂದಾಗ ‘ಐ ಲವ್ಯೂ 2’ ಎಂದು ಆತನನ್ನು ಒಪ್ಪಿಕೊಳ್ಳುವುದರೊಂದಿಗೆ ಆತನ ಮಗನನ್ನೂ ತನ್ನ ಮಗನಂತೆ ಸ್ವೀಕರಿಸುವ ಹೆಣ್ಣು (ಹೊಸ ಬದುಕು) ಓದುಗರ ಮನದಲ್ಲಿ ನವಿರು ಭಾವನೆಗಳನ್ನು ಎಬ್ಬಿಸುತ್ತದೆ.
    ಹತ್ತು ವರ್ಷಗಳ ಹಿಂದೆ ಪ್ರೇಯಸಿಯ ಸಲುವಾಗಿ ಆತ್ಮಹತ್ಯೆಯನ್ನು ಮಾಡಲು ಯತ್ನಿಸಿದ ಪ್ರೇಮಿಯು ಪ್ರೇಯಸಿಗೆ ಎದುರಾಗುತ್ತಾನೆ. ಆತನು ಪಕ್ಕಕ್ಕೆ ಸರಿದಾಗ ಆಕೆಯು ಮುಂದೆ ಹೋಗುತ್ತಾಳೆ. ‘ಮನಸಿಗಾದ ಗಾಯಕ್ಕೆ ಕಾಲವೇ ಔಷಧಿಯ ಮುಲಾಮು ಹಚ್ಚಿತು’ ಎಂಬ ಕತೆಗಾರರ ಮಾತಿನೊಡನೆ ಕತೆಯು ಮುಗಿಯುತ್ತದೆ. ಬದಲಾದ ಹೃದಯದಲ್ಲಿ ಕಿಂಚಿತ್ತಾದರೂ ಮಿಡಿತವಿದ್ದರೆ, ಹಿಂದಿನ ದಿನಗಳಲ್ಲಿ ಪ್ರೀತಿಸಿದ್ದು ಆಮೇಲೆ ಪ್ರೀತಿಪಾತ್ರಲ್ಲದೇ ಆದ ವ್ಯಕ್ತಿ ಅನಿರೀಕ್ಷಿತವಾಗಿ ಎದುರಾದಾಗ ಹೃದಯದಲ್ಲಿ ಮಿಂಚಿನಂತೆ ಏಳುವ ಪುಳಕದ ಜೊತೆ ಒಂಥರಾ ಸಂತಸ, ಕೋಪ, ಬೇಸರಗಳು ಹುಟ್ಟಿದರೂ, ಮರುಕ್ಷಣವೇ ಗಾಂಭೀರ್ಯಏ ಮರಳಿ ಎಲ್ಲವನ್ನು ಮರೆಸಿ ಮುಚ್ಚಿದಾಗ, ಎದೆಯಾಳದಲ್ಲಿ ಸುಳಿಯುತ್ತಿದ್ದ ಮೃದು ಭಾವನೆಗಳನ್ನು ನಿರ್ದಾಕ್ಷಿಣ್ಯವಾಗಿ ತುಳಿದು ಕಲ್ಲು ವಿಗ್ರಹದಂತೆ ನಿಲ್ಲುವಾಗ ಕರುಳಲ್ಲಿ ಕತ್ತರಿಯಾಡಿಸಿದಂತೆ ಅನುಭವಕ್ಕೆ ಬರುವ ವ್ಯಥೆಗೆ ಇಲ್ಲಿ ಸ್ಥಾನವಿಲ್ಲ. ಕಾಲವು ಎಲ್ಲ ನೋವಿಗೆ ಮದ್ದು ಹಚ್ಚುವುದು ನಿಜವಾದರೂ ಇಂಥ ಸಂದರ್ಭದಲ್ಲಿ ಕಾಣದ ಬೆರಳುಗಳು ಎದೆಯನ್ನು ಮೃದುವಾಗಿ ಕೆರೆದು ನೋಯಿಸುವುದೂ ಅಷ್ಟೇ ನಿಜ. ‘ನಿನ್ನ ಪ್ರೀತಿಯನ್ನು ತಿರಸ್ಕರಿಸಬಾರದಿತ್ತು. ಐ ಲವ್ಯೂ ಡಿಯರ್, ಲವ್ಯೂ ಸೋಮಚ್’ ಎಂದು ಪ್ರಿಯಕರನ ಸಮಾಧಿಯ ಮುಂದೆ ಶೋಕಿಸುವ ಪ್ರಿಯತಮೆಯ ಪರಿಸ್ಥಿತಿಯು ಈ ಕತೆಯ ಮಂದುವರಿದ ಅಧ್ಯಾಯದಂತಿದೆ.
    ಪ್ರೀತಿ ಪ್ರೇಮಗಳಿಗೆ ಮಾತ್ರ ಮೀಸಲಾಗಿರದ ಕತೆಗಳು ಸಾಮಾಜಿಕ ವಿಚಾರಗಳನ್ನೊಳಗೊಂಡು ಕತೆಗಾರರ ಜಾಗೃತ ಪ್ರಜ್ಞೆಗೆ ಸಾಕ್ಷಿಯಾಗುತ್ತವೆ. ಕರೋನ ಮಹಾಮಾರಿಯ ಸಂದರ್ಭದಲ್ಲಿ ತನಗೆ ಸೇವೆಯನ್ನು ಮಾಡಿ ಬದುಕಿಸಿದ ದಾದಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಹೋದವನಿಗೆ ಆಕೆಯ ಮರಣ ಹೊಂದಿದ ವಿಷಯವನ್ನು ತಿಳಿದು ಆಘಾತಕ್ಕೆ ಒಳಗಾಗುವ ಸನ್ನಿವೇಶವನ್ನು ಕತೆಯ ರೂಪಕ್ಕೆ ಇಳಿಸಿದ ರೀತಿಯು ಮನಮುಟ್ಟುವಂತಿದೆ. “ಆ ದಿನ ಥಾಂಕ್ಸ್ ಗಿವಿಂಗ್ ಡೇ. ಕರೋನ ಮಹಾಮಾರಿ ನನಗೆ ಬಂದ ಸಮಯದಲ್ಲಿ ಸೇವೆ ಮಾಡಿದ ನರ್ಸ್ ನೆನಪಾದಳು. ಬೊಕೆಯೊಂದಿಗೆ ಆಸ್ಪತ್ರೆಗೆ ಹೋದೆ. ‘ಆ ಸಿಸ್ಟರ್ ಇಲ್ಲ’ ಇನ್ನೂ ಏನೋ ಹೇಳಲು ಸಿದ್ಧರಾದರು ಸಿಬ್ಬಂದಿ. ‘ಲೊಕೇಶನ್ ಕಳಿಸಿ. ಅವರನ್ನು ಅರ್ಜೆಂಟಾಗಿ ಭೇಟಿಯಾಗಲೇ ಬೇಕು.’ ಎಂದು ಅವರಲ್ಲಿ ಮನವಿ ಮಾಡಿದೆ ಅವಸರದಿಂದ. ಕೊನೆಗೂ ಒತ್ತಾಯದಿಂದ ಲೊಕೇಶನ್ ಪಡೆದೆ. ಮ್ಯಾಪ್ ಫಾಲೊ ಮಾಡುತ್ತಾ ಬಂದೆ. ಎದುರಿಗೆ ಸ್ಮಶಾನ!” (ಪುಟ 11) ಇತರ ಲೇಖಕರ ಕೈಯಲ್ಲಿ ಸಾಮಾನ್ಯ ಮಟ್ಟಕ್ಕಿಂತ ಮೇಲೇರಲು ಸಾಧ್ಯವಿಲ್ಲದ ಈ ವಸ್ತುವು ಅತ್ಯಂತ ಚಿಕ್ಕ ಚೌಕಟ್ಟಿನಲ್ಲಿ ನಿಗದಿತ ಆರಂಭ, ನಾಟಕೀಯ ಚಲನೆ, ಕಾವ್ಯಾತ್ಮಕತೆ ಮತ್ತು ಸೊಗಸಾದ ಸನ್ನಿವೇಶ ಸೃಷ್ಟಿಯ ಮೂಲಕ ಉತ್ತಮ ಕತೆಯಾಗಿ ಓದುಗರ ಎದೆಯ ಕದವನ್ನು ತಟ್ಟುವ ರೀತಿಯು ಮಾರ್ಮಿಕವಾಗಿದೆ.
    ಬಡಿಸಿದ ಅನ್ನ ಸಾರು ಸೇವಿಸದೆ ಅದನ್ನು ತಯಾರಿಸಿದ ಅಡುಗೆಯವಳನ್ನು ಹುಡುಕುತ್ತಾ ಹೋಗುವ ತಬ್ಬಲಿ ಹುಡುಗ (ಅಮ್ಮನ ಕೈರುಚಿ) ‘ಮಗಾ ಹೇಗಿದ್ದೀಯಾ? ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಿದ್ದೀಯಾ? ರಜೆಯಲ್ಲಿ ಊರಿಗೆ ಬಾ’ ಎಂದು ಮಗನಿಗೆ ಕಳುಹಿಸಬೇಕಿದ್ದ ಸಂದೇಶ ತಪ್ಪಿ ಇನ್ನೊಬ್ಬನ ಮೊಬೈಲಿಗೆ ತಲುಪಿದಾಗ ಅನಾಥನಾಗಿದ್ದ ಆತನು ಕಣ್ಣಂಚಿನ ನೀರನ್ನು ಒರೆಸುವ ಚಿತ್ರ (ಮೆಸೇಜ್) ಹುಟ್ಟಿ ಬೆಳೆದ ಮನೆಯ ಚಿತ್ರ ಬಿಡಿಸಲು ಹೇಳಿದಾಗ ಫುಟ್ ಪಾತಿನ ಚಿತ್ರವನ್ನು ಬಿಡಿಸುವ ಹುಡುಗ (ಮನೆ) ಬರಗಾಲ ಎಂಬ ವಿಷಯದ ಬಗ್ಗೆ ಚಿತ್ರವನ್ನು ಬಿಡಿಸಲು ಹೇಳಿದಾಗ ನೇಣಿನ ಎರಡು ಕುಣಿಕೆಗಳ ಚಿತ್ರವನ್ನು ಬಿಡಿಸಿ ‘ಅಪ್ಪ- ಅಮ್ಮ’ ಎಂದು ಬರೆಯುವ ಹುಡುಗಿಯ ಪಾತ್ರಗಳು ಸಾಮಾಜಿಕ ದುರಂತಕ್ಕೆ ದನಿಯಾಗುತ್ತವೆ.
    ಕುಡಿದು ಬಂದು ಹೊಡೆದಾಗಲೆಲ್ಲ ಈರುಳ್ಳಿಗಳನ್ನು ಮುಂದೆ ಹಾಕಿಕೊಂಡು ಕೂಡುತ್ತಿದ್ದ ಅಮ್ಮನಿಂದ ತೊಡಗಿ ‘ಚಿತ್ರದ ಯಾವ ಸನ್ನಿವೇಶದಲ್ಲೂ ಪ್ರಾಣಿಗಳನ್ನು ಹಿಂಸಿಸಿಲ್ಲ. ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ’ ಎಂಬ ಸಾಲುಗಳನ್ನು ಬೆಳ್ಳಿಪರದೆಯಲ್ಲಿ ಕಂಡು ‘ನಮ್ಮಂಥ ಯುವತಿಯರ ವಿಷಯ?’ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವ, (ಪ್ರಿವ್ಯೂ ಥಿಯೇಟರ್) ಚಲನಚಿತ್ರದಲ್ಲಿ ಲೀಲಾಜಾಲವಾಗಿ ನಟಿಸಿದರೂ ಪತ್ರಿಕಾಗೋಷ್ಠಿಯ ಮುಂದೆ ‘ನಿರ್ದೇಶಕರು ನನ್ನನ್ನು ಮಗಳಂತೆ ನೋಡಿಕೊಂಡರು. ನಾಯಕ ದೇವರಂಥವನು. ಮೊದಲನೇ ಸಲವಾದರೂ ಕ್ಯಾಮರಾ ಮುಂದೆ ತಡಬಡಿಸಲಿಲ್ಲ’ ಎನ್ನಲು ಒಳಗೊಳಗೆ ಒದ್ದಾಡುವ ನಟಿ (ನಟನೆ) ಹೆಣ್ಣಿನ ಶೋಷಣೆಯನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸಿದರೆ ‘ಇಲ್ಲ. ನಾನು ಆ ಯುವತಿಯನ್ನು ನಿಜಕ್ಕೂ ಸಾಯಿಸಿಲ್ಲ. ನನ್ನನ್ನು ನಂಬಿ’ ಎಂದು ಕರೋನ ವೈರಾಣು ಗೋಳಾಡುತ್ತಿದ್ದಂತೆ ಚಿತಗಾರಕ್ಕೆ ಬಂದ ಯುವತಿಯ ಹೆಣವನ್ನು ನೋಡಿ ಯಾರಿಗೂ ಕಾಣದಂತೆ ಮೀಸೆ ತಿರುವಿದ ಗಂಡ, ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂಬ ಪತ್ರವನ್ನು ಬರೆದಿಟ್ಟು ಹುಡುಗಿ ಸತ್ತಾಗ ನೆಮ್ಮದಿಯ ಉಸಿರು ಬಿಡುವ ಆಕೆಯ ಬಾಸ್, ಪಕ್ಕದ ಮನೆಯ ಅಂಕಲ್ ಮತ್ತು ಬೀದಿ ಕಾಮಣ್ಣ, ಅತ್ಯಾಚಾರಕ್ಕೆ ಒಳಗಾಗಿ ಸತ್ತ ಮಗಳನ್ನು ಉದ್ದೇಶಿಸಿ “ಅಗ್ನಿಚಿತೆಯ ವ್ಯವಸ್ಥೆಯನ್ನು ಮಾಡಿ ಸರ್. ಹಾಗೇ ಹೂತಿಟ್ಟರೆ ಶವವನ್ನು ಕೂಡ ಬಿಡುವುದಿಲ್ಲವೇನೋ ಗಂಡುಮೃಗಗಳು” (ಪುಟ 43) ಎನ್ನುವ ಯುವತಿಯ ತಾಯಿಯ ಮಾತುಗಳು ಶೋಷಣೆಯ ವಿರಾಟ್ ಸ್ವರೂಪವನ್ನು ತೆರೆದಿಡುತ್ತವೆ. ಆದರೆ ‘ತಾಯಿ – ಮಗ’ ಎಂಬ ಕತೆಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರವನ್ನು ಮಾಡಿದ ಮಗನನ್ನು ವಶೀಲಿ ಮಾಡಿ ಶಿಕ್ಷೆಯಿಂದ ಪಾರು ಮಾಡಿದ ತಾಯಿಯು ಒಬ್ಬಳು ಸ್ತ್ರೀಯಾಗಿದ್ದುಕೊಂಡು ತನ್ನೊಳಗಿನ ಹೆಣ್ಣನ್ನು ಕೊಂದ ವಿಚಾರವು ವಾಸ್ತವದ ಇನ್ನೊಂದು ಮಗ್ಗುಲಿಗೆ ಗಮನ ಹರಿಸಲು ಪ್ರೇರಣೆಯನ್ನು ನೀಡುತ್ತದೆ.
    ಚಿನ್ನದಂಗಡಿಯಲ್ಲಿ ಸರಗಳನ್ನು ಕದಿಯಲು ಬಂದ ಕಳ್ಳನಿಗೆ ಅಲ್ಲಿ ತನ್ನ ತಾಯಿ ಅಡವಿಟ್ಟ ತಾಳಿಯನ್ನು ಕಾಣುವುದು, ಮನೆಯವರಿಗೆ ಚಿಕ್ಕಾಸೂ ಕೊಡದೆ ದುಡ್ಡು ಕೂಡಿಟ್ಟವನು ದುಬಾರಿ ಬೆಲೆಯನ್ನು ತೆತ್ತು ಅಂಗಮರ್ದನವನ್ನು ಮಾಡಿಸಿಕೊಳ್ಳುವಾಗ ತನ್ನ ಮೈಮೇಲೆ ಓಡಾಡಿದ್ದು ರಾತ್ರಿಯಲ್ಲಿ ತನಗೆ ಅನ್ನವನ್ನು ಬಡಿಸಿದ ಕೈಗಳೆಂದು ತಿಳಿಯುವುದು, ಅತ್ತೆ ಮಾವಂದಿರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವಾಗ ಮುಂದಿನ ದಿನಗಳಲ್ಲಿ ಕಾಲಕಳೆಯಲು ನಾಯಿಮರಿಗಳನ್ನು ಖರೀದಿಸುವ ಸೊಸೆಯ ಮನಸ್ಥಿತಿಯು ಬದುಕಿನ ವ್ಯಂಗ್ಯ ವೈರುಧ್ಯಗಳನ್ನು ಸೂಚಿಸುತ್ತವೆ. ಉದ್ಯೋಗ ಸಿಕ್ಕಿದಾಗ ಸ್ನೇಹಿತರು ‘ಇಪ್ಪತ್ತೈದು ಲಕ್ಷ ಸಂಬಳವೇ?’ ಎಂದು ಹುಬ್ಬೇರಿಸಿದಾಗ ‘ದಿನಕ್ಕೆ ಹನ್ನೆರಡು ಗಂಟೆ ಕೆಲಸವೇ?’ ಎಂದು ದುಃಖಿಸುವ, ದೂರದರ್ಶನದಲ್ಲಿ ನಟಿಯೊಂದಿಗೆ ಚಲನಚಿತ್ರದ ಥಳುಕು ಬಳುಕು, ಗಾಳಿಸುದ್ದಿಗಳು, ಪ್ರೇಮಸಂಬಂಧಗಳ ಬಗ್ಗೆ ಕೇಳುಗರು ದೂರವಾಣಿಯಲ್ಲಿ ಕೇಳುತ್ತಿದ್ದಂತೆ ಕೊನೆಯದಾಗಿ ‘ಊಟ ಮಾಡಿದೆಯಾ?’ ಎನ್ನುವ, ‘ಆಫೀಸಿಗೆ ಹೋಗಿ ಬರುತ್ತೇನೆ’ ಎಂಬ ಮಾತನ್ನು ಕೇಳಲು ಇಚ್ಛಿಸದೆ ಕಿವುಡು ಮೆಶೀನನ್ನು ತೆಗೆದಿಡುವ ತಾಯಿಯ ಪಾತ್ರಗಳಲ್ಲಿ ಮಾತೃ ಹೃದಯದ ವಿವಿಧ ನೆಲೆಗಳು ಕಾಣಿಸುತ್ತವೆ.
    ಇತ್ತೀಚಿಗೆ ಕೌಟುಂಬಿಕ ಮೌಲ್ಯಗಳು, ಸಮಷ್ಟಿಯ ಹಿತ ಹಿಂದೆ ಸರಿಯುತ್ತಿದ್ದು, ವ್ಯಕ್ತಿಯ ಸ್ವಾರ್ಥ, ವೈಯಕ್ತಿಕ ಹಿತ ಮಾತ್ರ ಗುರಿಯಾಗಿದ್ದಂತಿದೆ. ಸಹಜೀವನ ಮತ್ತು ಸಹಬಾಳ್ವೆಯ ಆದರ್ಶವನ್ನು ವ್ಯಕ್ತಿ ಹಿತದ ದಮನವೆಂದು ತಿಳಿಯಲಾಗುತ್ತಿರುವ ಈ ಸಂದರ್ಭದಲ್ಲಿ “ಯಾರು ಬೇಕೋ ತೀರ್ಮಾನ ಮಾಡು. ನಾನಾ ನಿನ್ನ ಕುಟುಂಬನಾ?” (ಫ್ಯಾಮಿಲಿ – ಪುಟ 44) ಎಂದು ಹೆಂಡತಿ ಚೀರಿದ್ದರಲ್ಲಿ ಅಚ್ಚರಿಯಿಲ್ಲ. ಆಕೆಗೆ ಪ್ರತ್ಯೇಕ ಗೂಡಿನ ಕನಸು ಕಾಣುವ ಹಕ್ಕಿದೆ. ಸ್ವಹಿತಾಸಕ್ತಿ ಮುಖ್ಯವೆನಿಸುವುದು ಸಹಜ. ಗಂಡನ ತಂದೆತಾಯಿಯರಿಗಾಗಿ ಆಕೆಯು ತನ್ನ ಕನಸನ್ನು ಬಲಿಗೊಡಬೇಕಾದ ಅಗತ್ಯವಿಲ್ಲ ಎಂಬ ತರ್ಕಬದ್ಧ ವಿಚಾರವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಸಂಬಂಧಗಳ ಬಿಸುಪು, ಅದು ನೀಡುವ ರಕ್ಷಣೆಯನ್ನು, ಪ್ರೀತಿ ಸೌಹಾರ್ದಗಳನ್ನು ತರ್ಕದ ಮಾತುಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಬದುಕು ಎನ್ನುವುದು ಯಾವಾಗ ಬೇಕಿದ್ದರೂ ಇಲ್ಲವಾಗುವ ಸಾಧ್ಯತೆ ಇರುವುದರಿಂದ ಪರಸ್ಪರ ಹಂಚಿಕೊಳ್ಳುವ ಕ್ಷಣಗಳು ಪ್ರೀತಿಯ ಗಳಿಗೆಗಳಾಗಿರಬೇಕು ಎಂಬ ಪ್ರಜ್ಞೆಯು ಆಕೆಯ ಗಂಡನಿಗಿರುವುದರಿಂದ “ನನ್ನ ಕುಟುಂಬದಲ್ಲಿ ನೀನು” (ಪುಟ 44) ಎಂದು ಉತ್ತರಿಸಲು, ಹೊಸತಾಗಿ ನಿರ್ಮಿಸಿದ ಅಪಾರ್ಟ್ ಮೆಂಟಿಗೆ ಹೆಂಡತಿಯ ತಂದೆ ತಾಯಿಯರಿಗಾಗಿ ಮಲಗುವ ಕೋಣೆಯನ್ನು ಕಟ್ಟುವ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ‘ಗಿಫ್ಟ್ ಐಡಿಯಾ’ ಎಂಬ ಕತೆಯ ನಾಯಕಿಯು ‘ಫ್ಯಾಮಿಲಿ’ಯ ನಾಯಕಿಯಂತೆ ಸ್ವಾರ್ಥಿಯಲ್ಲ. “ಇವತ್ತು ನನ್ನ ಹೆಂಡತಿಯ ಹುಟ್ಟುಹಬ್ಬ. ಆಕೆಯ ಸಂತಸ ಸಂಭ್ರಮ ಹೆಚ್ಚಿಸಲು ಏನಾದರೂ ಐಡಿಯಾ ಹೇಳು” (ಪುಟ 45) ಎಂದು ಆಕೆಯನ್ನು ಬಿಗಿದಪ್ಪಿಕೊಳ್ಳಲು ಯತ್ನಿಸುತ್ತಾ ಆತನು ಕೇಳಿದಾಗ ಆತನ ಪ್ರಯತ್ನವನ್ನು ವಿಫಲಗೊಳಿಸುತ್ತಾ “ಇಂದಿನಿಂದ ನಾವು ಬೇರೆಯಾಗಿ ಬದುಕೋಣ” ಎನ್ನುತ್ತಾಳೆ. ಇಬ್ಬರು ಹೆಂಗಸರ ನಿಲುವು ಪರಸ್ಪರ ಬೇರೆಯಾಗುವುದೇ ಆಗಿದ್ದರೂ, ಈಕೆಯ ಉದ್ದೇಶ ಸಕಾರಾತ್ಮಕವಾಗಿರುವಂತಿದೆ ಎನ್ನುವಂತಿದ್ದರೂ ಆಕೆಗೆ ಆತನ ದೇಹವು ಸಾಕೆನಿಸಿರುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಆತನಿಗೆ ಹೆಂಡತಿಯಿದ್ದಾಳೆ ಎಂದು ಗೊತ್ತಿದ್ದೇ ಲೈಂಗಿಕ ಸಂಬಂಧವನ್ನು ಬೆಳೆಸಿರುವ ಆಕೆಗೆ ಆ ಸಂಬಂಧವು ಶಾಶ್ವತವಲ್ಲ ಎಂದು ತಿಳಿದಿದ್ದರೂ ಆಕೆಯು ಅದರಿಂದ ಅನುಭವಿಸಿದ ನೆಮ್ಮದಿ ಸಂತಸಗಳು ಕಡಿಮೆ ಎನ್ನುವಂತಿಲ್ಲ. ಈ ಸಂಬಂಧವು ಕೊನೆಗೊಂಡಾಗ ಅವಳಿಗೆ ದುಃಖವಾಗಬಹುದಾದರೂ ಆ ನೋವನ್ನು ಆಕೆಯು ಧೈರ್ಯದಿಂದ ಎದುರಿಸಬಲ್ಲಳೇನೋ. ಆದರೆ ಗಂಡಿನ ಪಾಡೇನು ಎಂಬುದನ್ನು ಓದುಗರು ಊಹಿಸಬೇಕಾಗಿದೆ.
    ಅಪ್ಪ-ಅಮ್ಮ, ಗಂಡ-ಹೆಂಡತಿ, ಅತ್ತೆ-ಮಾವ ಈ ಸಂಬಂಧಗಳ ಮಹತ್ವವನ್ನು ಅರಿತು ಬದುಕಲು ಕಲಿತರೆ ಅದುವೇ ಸ್ವರ್ಗ. ವೃದ್ಧ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ, ಆಹಾರ ನೀರು ಕೊಡದೆ ದೈಹಿಕ ಮಾನಸಿಕವಾಗಿ ನೋಯಿಸುವ, ಹಣ ಬಲ ಮತ್ತು ಬಿಸಿರಕ್ತದ ಬಲದಲ್ಲಿ ಬದುಕುವ ಮಕ್ಕಳನ್ನು ಇಲ್ಲಿನ ಕತೆಗಳಲ್ಲಿ ಕಾಣುತ್ತೇವೆ. ‘ನನ್ನನ್ನು ತಿರಸ್ಕರಿಸಿ ಹೋದವಳ ಹೆಸರನ್ನು ಮಗಳಿಗಿಟ್ಟೆ. ಅವಳು ನನ್ನನ್ನು ತಿರಸ್ಕರಿಸಿ ತನಗಿಷ್ಟವಾದವನ ಹಿಂದೆ ಹೊರಟು ಹೋದಳು’ (ಹೆಸರು – ಪುಟ 54) ಕಣ್ಣು ಸರಿಯಿಲ್ಲದಿದ್ದಾಗ ತನಗೆ ಯಾರನ್ನೂ ನೋಡಲಾಗುತ್ತಿಲ್ಲ ಎಂದು ದುಃಖಿಸುತ್ತಿದ್ದು ಕಣ್ಣಿನ ಶಸ್ತ್ರಚಿಕಿತ್ಸೆ ಕಳೆದ ಬಳಿಕ ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ನೊಂದುಕೊಳ್ಳುವ ಮುದುಕ (ಕತ್ತಲು – ಪುಟ 96) ಕಿರಿಯರಿಗೆ ಹಿರಿಯರ ಬಗ್ಗೆ ಅಸಮಾಧಾನ, ತಿರಸ್ಕಾರಗಳನ್ನು ವ್ಯಕ್ತಪಡಿಸುತ್ತವೆ. ತಲೆಮಾರುಗಳ ಅಂತರದಿಂದಾಗಿ ಅನೇಕ ವೇಳೆ ಹಿರಿಯರ ಅನುಭವ ಸಂಪತ್ತಿನಿಂದ ಕಿರಿಯರು ವಂಚಿತರಾಗುತ್ತಾರೆ ಎನ್ನುವುದಕ್ಕೆ ‘ಅಪ್ಪಾ, ನನಗೆ ಆಡಲು ಐಪ್ಯಾಡ್, ಗೇಮ್ ಪ್ಯಾಡ್, ಮ್ಯಾಜಿಕ್ ಪ್ಯಾಡ್ ಇವೆ. ನೀವು ಚಿಕ್ಕವರಿದ್ದಾಗ ಆಡಲು ಏನಿತ್ತು?’ ಎಂದು ಪ್ರಶ್ನಿಸಿದ ಮಗನ ಬಳಿ ‘ಬಾಲ್ಯ’ ಎಂದು ತಣ್ಣಗೆ ಉತ್ತರಿಸುವ ತಂದೆ (ಬಾಲ್ಯತನ – ಪುಟ 81) ಸಾಕ್ಷಿಯಾಗುತ್ತಾರೆ. ಆದರೆ ಕತೆಗಾರರು ಏಕಪಕ್ಷೀಯ ಧಾಟಿಯನ್ನು ಬಿಟ್ಟುಕೊಟ್ಟಿದ್ದಾರೆ ಎಂಬುದಕ್ಕೆ ‘ಆಗ ಮಗ ಓದುತ್ತಿದ್ದ ಸ್ಕೂಲಿಗೆ ಪೇರೆಂಟ್ಸ್ ಮೀಟಿಂಗಿಗೆ ಹೋಗಲಿಲ್ಲ. ಈಗ ಅಪ್ಪ ಇರುತ್ತಿದ್ದ ವೃದ್ಧಾಶ್ರಮದ ಫ್ಯಾಮಿಲಿ ಗೆಟ್ಟುಗೆದರ್ಗೆ ಮಗ ಹೋಗಲಿಲ್ಲ’ (ಅಪ್ಪ ಮಗ – ಪುಟ 37) ಎಂಬ ಸಾಲುಗಳು ಆಧುನಿಕ ಬದುಕಿನ ವಾಸ್ತವವನ್ನು ವಿವರಿಸುತ್ತದೆ. ಇಪ್ಪತ್ತೈದು ವರುಷಗಳ ಬಳಿಕ ಅಮೇರಿಕದಿಂದ ಬಂದ ವ್ಯಕ್ತಿಯು ತನ್ನ ಊರಿನ ಗೆಳೆಯರನ್ನು ಭೇಟಿಯಾಗಬಹುದೆಂದುಕೊಂಡರೆ ಕಿಯಾ, ಹೊಂಡಾಯಿ, ಟಾಟಾ, ಟೊಯೊಟ ಕಾರುಗಳನ್ನು ಕಾಣುವ ಮೂಲಕ ಕತೆಯು ಬದುಕು ಯಾಂತ್ರೀಕರಣಗೊಂಡಿರುವ ಬಗೆಯನ್ನು ತೋರಿಸುತ್ತದೆ.
    ನಡುರಸ್ತೆಯಲ್ಲಿ ಗಂಡನು ತನ್ನ ಹೆಂಡತಿಯನ್ನು ಹೊಡೆಯುವುದು ವೈಯಕ್ತಿಕ ವಿಷಯವೆಂದು ಆ ಬಗ್ಗೆ ಚಕಾರವೆತ್ತದೆ, ಗಂಡನು  ತನ್ನ ಹೆಂಡತಿಯನ್ನು ಬಿಗಿದಪ್ಪಿ ಮುದ್ದಿಸಿದಾಗ ಅವರನ್ನು ಲಜ್ಜೆಗೆಟ್ಟವರೆಂದು ಫೇಸ್ ಬುಕ್ ಮೂಲಕ ಬೈದಾಡುವ ಜನರು, ಕೊರಳವರೆಗೂ ಕುಡಿದು, ಬೆಲೆಬಾಳುವ ಕಾರನ್ನು ಅಮಾಯಕನ ಮೇಲೆ ಚಲಾಯಿಸಿ ಸಾಯಿಸಿದಾಗ ಆತನ ಸುತ್ತಲೂ ಕಪ್ಪು ಕೋಟುಗಳು ಸುತ್ತುವರೆದರೆ, ಸತ್ತವನ ಸುತ್ತ ಕಪ್ಪು ಕಾಗೆಗಳು ನೆರೆಯುವ ಸನ್ನಿವೇಶಗಳು ದುಷ್ಟಶಕ್ತಿಗಳ ಪರ ನಿಲ್ಲುವ ಜನರ ಇಬ್ಬಗೆಯ ನೀತಿಯನ್ನು ಲೇವಡಿ ಮಾಡುತ್ತವೆ. ಯಾರಾದರೂ ತನನ್ನು ಮಾತನಾಡಿಸಲಿ ಎಂದು ಚಡಪಡಿಸುತ್ತಾ ಆಸ್ಪತ್ರೆಯಲ್ಲಿ ಮಲಗಿದ ಕರೋನ ಪೀಡಿತನ ಹತ್ತಿರ ಬರುವ ಸಾಕುನಾಯಿ, ಲಾಕ್‌ಡೌನ್ ಕಾಲಾವಧಿಯಲ್ಲಿ ವ್ಯಕ್ತಿಯೊಬ್ಬನ ಕೈಯಿಂದ ಅನ್ನ ತಿಂದ ಬೀದಿನಾಯಿಗಳು ಆತನ ಅಂತ್ಯಕ್ರಿಯೆಗೆ ಬರುವ ಸನ್ನಿವೇಶಗಳು ಮೂಕಪ್ರಾಣಿಗಳ ಮನಸ್ಥಿತಿಯನ್ನು ಮಾನವೀಯ ಅಂತಃಕರಣದಿಂದ ನಿರೂಪಿಸುವುದರೊಂದಿಗೆ ಮಾನವನ ಕೃತಘ್ನತೆಯನ್ನು ಪ್ರಕಟಪಡಿಸುತ್ತವೆ. ಅನ್ನವನ್ನು ನೀಡಿದ ವ್ಯಕ್ತಿಯ ಜೊತೆಗೆ ಕೊನೆಯವರೆಗೂ ಉಳಿದುಕೊಳ್ಳುವ ನಾಯಿಯ ಸ್ವಾಮಿನಿಷ್ಠೆಯನ್ನು ಮುಂದಿಟ್ಟುಕೊಂಡು ಮಾನವರ ಗುಣನಡತೆಯನ್ನು ಟೀಕಿಸುತ್ತವೆ.
    ಬದುಕಿನ ಸ್ಥಿತ್ಯಂತರ, ವೈಚಿತ್ರ್ಯಗಳನ್ನು ಪ್ರತಿಬಿಂಬಿಸುವ ಕತೆಗಳಲ್ಲಿ ವೈಚಾರಿಕತೆ, ಬದುಕಿನ ಸಾವು ನೋವುಗಳ ವಿವರಗಳಲ್ಲಿ ಆದರ್ಶಗಳು ಮಿಂಚುತ್ತವೆ. ವಾಸ್ತವತೆ ಹೊಂಚುತ್ತದೆ. ಇಲ್ಲಿ ಸೂಚ್ಯವಾದ ದನಿಗಳಿವೆ. ವಾಚ್ಯವಾದ ಸ್ವರಗಳೂ ಇವೆ. ಪಯಣಿಸುವ ವೇಳೆಯಲ್ಲಿ ಹುಡುಗಿಯು ಒಬ್ಬ ಯುವಕನಿಗೆ ತನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟರೆ ಇನ್ನೊಬ್ಬನಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕೊಡುತ್ತಾಳೆ. ವಿಷಯವು ಪೂರ್ತಿಯಾಗಿ ಅರ್ಥವಾಗಬೇಕಿದ್ದರೆ ‘ಒಬ್ಬನು ಮನಸ್ಸನ್ನು ತಾಕಲು ಯತ್ನಿಸಿದನು. ಇನ್ನೊಬ್ಬನು ದೇಹವನ್ನು ತಾಕಲು ನೋಡಿದನು’ (ಪುಟ 12) ಎನ್ನುವ ಮೂಲಕ ಕತೆಯು ವಾಚ್ಯವಾಗುವುದು ಅನಿವಾರ್ಯವಾಗಿದೆ. ಆದರೆ ‘ಆ ದಿನ ಅಡುಗೆ ಮಾಡಲು ಸೇರಿದ ಹೆಂಗಸನ್ನು ಬಾಲಕನ ಕಣ್ಣುಗಳು ಹುಡುಕಿದವು (ಅಮ್ಮನ ಕೈರುಚಿ – ಪುಟ 17) ‘ಮೊದಲಿಂದ ಆತನಿಗೆ ಕಫ, ಅಸ್ತಮಾ, ಆಯಾಸ (ಬರ್ತ್ಡೇ 80 – ಪುಟ 27) ಟೀನೇಜ್ ಪ್ರೇಮಿ ಅಲ್ಪ ಸಂತೋಷಿ (ಟಿನೇಜ್ ಲವ್- ಪುಟ 31) ಕಣ್ಣೀರು ನಿಜ, ಈರುಳ್ಳಿ ಘಾಟು ನೆಪ (ಈರುಳ್ಳಿ – ಪುಟ 34) ಮುಂತಾದ ಸಾಲುಗಳು ಕತೆಯನ್ನು ಅನವಶ್ಯಕವಾಗಿ ವಾಚ್ಯಗೊಳಿಸುತ್ತವೆ. ತಮ್ಮ ಉದ್ದೇಶವನ್ನು ಹೇಳಿ ಬಿಡಬೇಕೆಂಬ ಆತುರವನ್ನು ಕತೆಗಾರರಿಗೆ ತಡೆಯಲು ಸಾಧ್ಯವಾಗದೆ ಹೋಗಿದೆ. ಗರ್ಭಗುಡಿಯಲ್ಲಿರುವ ದೇವರನ್ನು ತೋರಿಸಲು ಮಗನನ್ನು ಹಂತ ಹಂತವಾಗಿ ಎತ್ತುವ ಅಪ್ಪನನ್ನು ನೋಡುತ್ತಾ ‘ದೇವರು ಕಾಣಿಸುತ್ತಿದ್ದಾನೆ’ ಎನ್ನುವ ಮಗನ ಮೂಲಕ ತಂದೆಯನ್ನು ದೇವರಿಗೆ ಹೋಲಿಸುವ ‘ನನ್ನ ದೇವರು’ ಎಂಬ ಕತೆಯು ಧ್ವನಿಪೂರ್ಣವಾಗಿದ್ದರೂ ಅವುಗಳು ಪುಟ್ಟ ಹುಡುಗನ ವಯಸ್ಸಿಗೆ ಮೀರಿದ ಮಾತುಗಳಾಗಿವೆ. ಅತ್ಯಂತ ಚಿಕ್ಕ ಕತೆಗಳಲ್ಲಿ ಒಂದೇ ಒಂದು ಪದ ಬದಲಾದರೂ ಸ್ವಾರಸ್ಯ ಕೆಡುತ್ತದೆ ಎಂಬುದಕ್ಕೆ ‘ಅಂತಿಮಯಾತ್ರೆ’ಯು ಉದಾಹರಣೆಯಾಗಿದೆ. ‘ಯಾವತ್ತಾದರೂ ಒಂದು ದಿನ ದೊಡ್ಡ ವಾಹನದಲ್ಲಿ ಸಿಟಿ ತೋರಿಸ್ತೇನೆಂದು ಒಂದೆರಡು ತಿಂಗಳ ಕೆಳಗೆ ಹೆಂಡತಿಗೆ ಮಾತು ಕೊಟ್ಟಿದ್ದ ಗಂಡ. ಅಷ್ಟು ದೊಡ್ಡ ವಾಹನದಲ್ಲಿ ಗಂಡ ಹೆಂಡತಿಯರಿಬ್ಬರೇ. ಕುಳಿತ ಗಂಡ. ಬೆಡ್ ಮೇಲೆ ಮಲಗಿದ ಹೆಂಡತಿ. ಟ್ರಾಫಿಕ್ ಜಾಮಿನಿಂದಾಗಿ ಊರೆಲ್ಲ ಸುತ್ತಿಕೊಂಡು ನಿಧಾನವಾಗಿ ಸಾಗುತ್ತಿತ್ತು ವೈಕುಂಠಯಾತ್ರೆ ಎನ್ನುವ ಹೆಸರಿನ ದೊಡ್ಡ ವಾಹನ ಮುಕ್ತಿಧಾಮದತ್ತ (ಪುಟ 23) ಎಂಬಲ್ಲಿಗೆ ಮುಗಿಯುವ ಕತೆಯು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಆದರೆ ‘ತೋರಿಸ್ತೇನೆ ಊರೆಲ್ಲ’ ಎನ್ನುವ ಬದಲು ‘ಸುತ್ತಾಡಿಸ್ತೇನೆ ಸಿಟಿಯೆಲ್ಲ’ ಎಂಬ ಪದಗಳನ್ನು ಬಳಸುತ್ತಿದ್ದರೆ ಕತೆಯು ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು.
    ರಾಘವೇಂದ್ರರ ‘ನ್ಯಾನೋ ಕಥೆಗಳು’ ಹನಿಗತೆಗಳ ಸುಂದರ ಗುಚ್ಛ. ಇವುಗಳನ್ನು ಕತೆಯಂತೆ ಮಾತ್ರವಲ್ಲ ಕವಿತೆಯಂತೆ ಓದಬಹುದು. ಮೊದಲ ಓದಿಗೇ ಸುಲಭವಾಗಿ ತೆರೆದುಕೊಂಡು ಆಪ್ತವಾಗಿ ಓದಿಸಿಕೊಳ್ಳುವ ಕತೆಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಸರಳ ಅಭಿವ್ಯಕ್ತಿಯೇ ಇಲ್ಲಿನ ಕತೆಗಳ ಲಕ್ಷಣವಾಗಿದೆ. ಪ್ರೀತಿ ಪ್ರೇಮ, ಹೆತ್ತವರಿಗೆ ಮಕ್ಕಳ ಮೇಲಿರುವ ವಾತ್ಸಲ್ಯ, ಸಾಂಸಾರಿಕ ರಂಪ, ವಿವಾಹ ವಿಚ್ಛೇದನ, ದೇಶಪ್ರೇಮ, ಶೋಷಣೆ ಮುಂತಾದ ಪರಿಚಿತ ವಿಷಯಗಳನ್ನು ಆಯ್ದು ಆಕರ್ಷಕವಾಗಿ ನೇಯ್ದ ಕತೆಗಳಲ್ಲಿನ ಸಾಲುಗಳು ಸದಭಿರುಚಿಯಿಂದ ಕೂಡಿವೆ. ಬಂಧ ಸಡಿಲವಾಗದೆ, ಅರ್ಥ ಜಾಳಾಗದೆ, ಓದುಗರ ಮನಸ್ಸನ್ನು ಸೆರೆ ಹಿಡಿಯಬಲ್ಲ ಕತೆಗಳು ಬೆರಳೆಣಿಕೆಯ ಪದಗಳಿಂದ ಕೂಡಿದ್ದು ಬದುಕಿನ ಸಂಘರ್ಷ, ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುತ್ತವೆ. ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತವೆ. ಸಮಕಾಲೀನ ಪ್ರಜ್ಞೆ, ಸಮಾಜ ವಿಮರ್ಶೆ, ಸಾಂಸ್ಕೃತಿಕ ಜಾಗೃತಿ, ಸಾಮಾಜಿಕ ಸಂದೇಶ, ಆದರ್ಶವಾದ, ಹಿತೋಪದೇಶಗಳನ್ನು ಹೊಂದಿರುವ ಕತೆಗಳಲ್ಲಿ ಉದಾತ್ತ ಚಿಂತನೆಯ ಹೊಳಹುಗಳಿವೆ. ಕತೆಗಾರರು ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಕತೆಯನ್ನು ಕಟ್ಟಲು ಅಗತ್ಯವಾದ ಸಾಹಿತ್ಯ ಪರಂಪರೆಯೊಂದಿಗೆ ತಕ್ಕಮಟ್ಟಿನ ಸಂವಾದವನ್ನು ನಡೆಸಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕತೆಗಳು ಸಾಕ್ಷಿಯಾಗಿವೆ. ಅರ್ಥ ಜಾಳಾಗದೆ, ಮಾತು ಅತಿಯಾಗದೆ ಮನಸ್ಸನ್ನು ಆವರಿಸಬಲ್ಲ ಕತೆಗಳಲ್ಲಿ ಬಾಳ್ವೆಯ ನೋವು, ಕಣ್ಣೀರುಗಳನ್ನು ಕಂಡು ಕರಗುವ ಆರ್ದತೆಯನ್ನು ಕಾಣುತ್ತೇವೆ. ಬದುಕಿನ ನೋವು ನಲಿವುಗಳನ್ನು ಕುರಿತ ಚಿಂತನೆಯನ್ನು ಹೊಂದಿದ ಕತೆಗಳು ಬಾಳಿನ ಕೋಮಲ ಮುಖಗಳನ್ನಲ್ಲದೆ ವಿಕಾರ ರೇಖೆಗಳನ್ನೂ ಗುರುತಿಸುತ್ತವೆ. ಪದ ಪ್ರಯೋಗಗಳ ಹಿಡಿತ, ಅರ್ಥ ಭಾವಗಳ ಮಿಡಿತ, ಶಬ್ದಾರ್ಥಗಳ ಸಮ್ಮಿಲನದಿಂದ ಕತೆಗಳು ಓದುಗರಲ್ಲಿ ಉಲ್ಲಾಸವನನ್ನು ಮಾತ್ರ ಉಂಟುಮಾಡದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅವ್ಯವಹಾರ ಮತ್ತು ಕ್ರೌರ್ಯಗಳ ಕುರಿತು ಚಿಂತಿಸುವಂತೆ ಮಾಡುತ್ತವೆ. ಅನುಭವ, ಹೊಸ ರೀತಿಯ ಮಂಡನೆ ಮತ್ತು ಸೂಕ್ಷ್ಮ ಒಳನೋಟಗಳ ಮೂಲಕ ಸ್ಮರಣೀಯವೆನಿಸಿದ ಸೃಷ್ಟಿಗಳೇ ಹೆಚ್ಚಿನ ಸಂಖ್ಯೆಗಳಲ್ಲಿವೆ. ಇವುಗಳು ಈಗಾಗಲೇ ಓದಿದ ಕತೆಗಳ ಸಾಲಿಗೆ ಸೇರಿರುವ ರಚನೆಗಳಂತೆ ತೋರಿದರೂ ಸುಲಭವಾಗಿ ಮರೆಯುವಂಥವುಗಳಲ್ಲ. ಲೇಖಕರು ಪ್ರಯತ್ನಿಸಿದಲ್ಲಿ ಈ ಕಥಾಬೀಜಗಳನ್ನು ಸಣ್ಣಕತೆಗಳನ್ನಾಗಿ ಬೆಳೆಸಬಲ್ಲರು.
    ಕೃತಿ : ‘ನ್ಯಾನೋ ಕಥೆಗಳು’
    ಪುಸ್ತಕ ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕ : ರಾಘವೇಂದ್ರ ಮಂಗಳೂರು

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಏರ್ಯಬೀಡಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಪ್ರಶಸ್ತಿ’ ಪ್ರದಾನ
    Next Article ತುಳು ಹಾಡುಗಳ ಕಲಿಕಾ ಕಾರ್ಯಾಗಾರದಲ್ಲಿ ‘ಡೆನ್ನ ಡೆನ್ನಾನ-ಪದ ಪನ್ಕನ’ ಹಾಡು ಪ್ರಸ್ತುತಿ
    roovari

    Add Comment Cancel Reply


    Related Posts

    ‘ಚಿತ್ರಾ’ ನಾಟಕ ತಂಡದಿಂದ ‘ಚಿತ್ರಾ – 75’ ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಸೆಪ್ಟೆಂಬರ್ 15

    August 30, 2025

    ಮೈಸೂರಿನಲ್ಲಿ ‘ಸಾಹಿತ್ಯ ಚಾವಡಿ’ ಸಂವಾದ ಕಾರ್ಯಕ್ರಮ | ಆಗಸ್ಟ್ 31

    August 30, 2025

    ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್‌ ಒಝೇರಿಯೊ ನಿಧನ

    August 30, 2025

    ತುಳು ಹಾಡುಗಳ ಕಲಿಕಾ ಕಾರ್ಯಾಗಾರದಲ್ಲಿ ‘ಡೆನ್ನ ಡೆನ್ನಾನ-ಪದ ಪನ್ಕನ’ ಹಾಡು ಪ್ರಸ್ತುತಿ

    August 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.