Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಇಂದಿರಾಜಾನಕಿ ಎಸ್. ಶರ್ಮ ಇವರ ‘ರಾಮ ಸಾಂಗತ್ಯ’
    Article

    ಪುಸ್ತಕ ವಿಮರ್ಶೆ | ಇಂದಿರಾಜಾನಕಿ ಎಸ್. ಶರ್ಮ ಇವರ ‘ರಾಮ ಸಾಂಗತ್ಯ’

    June 17, 2024Updated:June 20, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪ್ರತಿಯೊಬ್ಬ ಭಾರತೀಯನಿಗೆ ‘ರಾಮಾಯಣ’ದ ಬಗೆಗಿನ ಒಲವು ರಕ್ತಗತವಾದದ್ದು. ಇಡೀ ಒಂದು ಆದರ್ಶ ಜೀವನಕ್ರಮಕ್ಕೇ ಅಡಿಗಲ್ಲು ಹಾಕುವಂಥ ಈ ಕಥನವು ಆತನ ಬದುಕಿನ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗೋಸ್ಕರ ಉಲ್ಲೇಖಿತವಾಗುತ್ತಲೇ ಇರುತ್ತದೆ. ಅನಂತ ಸಾಧ್ಯತೆಗಳಿರುವ ರಾಮಾಯಣದ ಸುಮಾರು ಮುನ್ನೂರರಷ್ಟು ರೂಪಗಳು ನೂರಾರು ಭಾಷೆಗಳಲ್ಲಿ ಜಗತ್ತಿನಾದ್ಯಂತ ಇವೆ ಎಂದು ಸಂಶೋಧಕರು ಹೇಳಿದ್ದಾರೆ. ಕನ್ನಡದಲ್ಲಿ ಪಂಪನಿಂದ ಮೊದಲ್ಗೊಂಡು ಕುವೆಂಪು ಅವರ ತನಕ ರಾಮಾಯಣಗಳು ರಚಿತವಾದದ್ದನ್ನು ನಾವು ನೋಡಿದ್ದೇವೆ. ತಮಿಳಿನ ಕಂಬರಾಮಾಯಣ, ಮಲೆಯಾಳದ ಅಧ್ಯಾತ್ಮ ರಾಮಾಯಣ, ಹಿಂದಿಯ ತುಳಸಿ ದಾಸ ವಿರಚಿತ ರಾಮಚರಿತಮಾನಸ ಮೊದಲಾದ ಕೃತಿಗಳು ಬಹಳ ಪ್ರಸಿದ್ಧವಾಗಿವೆ. ಗದ್ಯರೂಪದ ರಾಮಾಯಣಗಳಂತೂ ಸಾವಿರಾರು ಸಂಖ್ಯೆಯಲ್ಲಿ ಬಂದಿವೆ. ವಾಲ್ಮೀಕಿ ರಾಮಾಯಣವನ್ನು ನೆಲೆಯಾಗಿಟ್ಟುಕೊಂಡು ತಮ್ಮ ಸಾಮಾಜಿಕ ಸಂದರ್ಭಗಳಿಗೆ ತಕ್ಕುದಾದ ವ್ಯತ್ಯಾಸಗಳನ್ನು ಮಾಡಿಕೊಂಡು ಭಿನ್ನ ದೃಷ್ಟಿಕೋನಗಳಿಂದ ಭಿನ್ನ ಛಂದಸ್ಸುಗಳಲ್ಲಿ ಬರೆದ ಮಹಾಕಾವ್ಯಗಳು ಅವು.

    ಇತ್ತೀಚೆಗೆ ಲೇಖಕಿ ಇಂದಿರಾ ಜಾನಕಿಯವರು (ದೇರಾಜೆ ಸೀತಾರಾಮಯ್ಯನವರ ಮಗಳು) ವಾಲ್ಮೀಕಿ ರಾಮಾಯಣದ ಮೂಲ ಕಥೆಯಿಂದ ಭಿನ್ನವಲ್ಲದ ರೀತಿಯಲ್ಲಿ ‘ರಾಮ ಸಾಂಗತ್ಯ’ ಎಂಬ ಮಹಾಕಾವ್ಯವನ್ನು ರಚಿಸಿ ರಾಮಾಯಣ ಪರಂಪರೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇದಕ್ಕೆ ಮೊದಲು ಭಾಮಿನಿ ಷಟ್ಪದಿಯಲ್ಲಿ ಅನೇಕ ಕವಿತೆಗಳನ್ನು ರಚಿಸಿ ಅನುಭವವಿರುವ ಅವರು ಸಾಂಗತ್ಯ ಎಂಬ ಛಂದಸ್ಸಿನಲ್ಲಿ ಪ್ರಾಸಬದ್ಧವಾದ ನಾಲ್ಕು ಸಾಲುಗಳ ಪದ್ಯಗಳ ಮೂಲಕ ಸಂಪೂರ್ಣ ರಾಮಾಯಣವನ್ನು ಬರೆದಿದ್ದಾರೆ. ವಾಲ್ಮೀಕಿ ರಾಮಾಯಣದ ಅದೇ ಅನುಕ್ರಮಣಿಕೆಯಲ್ಲಿ ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡಗಳು ಇಲ್ಲೂ ಇವೆ. ಪಾತ್ರಗಳು, ಹೆಸರು-ಸನ್ನಿವೇಶ-ಸಂದರ್ಭಗಳಲ್ಲೂ ಏನೂ ವ್ಯತ್ಯಾಸವಿಲ್ಲ. ವಾಲ್ಮೀಕಿ ರಾಮಾಯಣವನ್ನು ಭಿನ್ನ ಛಂದಸ್ಸಿನಲ್ಲಿ ಭಿನ್ನ ಪದಗಳ ಬಳಕೆಯೊಂದಿಗೆ ಬಹಳ ಹೃದ್ಯವಾಗಿ ಮತ್ತು ಸುಂದರವಾಗಿ ಮರು ರಚನೆ ಮಾಡಿದ್ದಾರೆ . ಮಕ್ಕಳು ಕೂಡಾ ಓದಿ ಅರ್ಥ ಮಾಡಿಕೊಳ್ಳಬಹುದಾದ ಸರಳ ಶೈಲಿ ಇದರದ್ದು.

    ಮಹಾಕಾವ್ಯದ ಎಲ್ಲಾ ಗುಣಗಳನ್ನೂ ಈ ಕಾವ್ಯ ಮೈಗೂಡಿಸಿಕೊಂಡಿದೆ. ಆರಂಭದಲ್ಲಿ ಸಾಂಪ್ರದಾಯಿಕ ದೇವರ ಪ್ರಾರ್ಥನೆ, ಕಥೆಗೊಂದು ವೇದಿಕೆಯ ಸಿದ್ಧತೆ, ಅಲ್ಲಲ್ಲಿ ಪ್ರಕೃತಿಯ ಹಾಗೂ ಅಲ್ಲಿ ಕಾಣುವ ವಿವಿಧ ವಸ್ತುಗಳ ವರ್ಣನೆ, ಸ್ಥಳ -ಸನ್ನಿವೇಶಗಳ ವಿವರಗಳು, ನಾಯಕ- ಪ್ರತಿ ನಾಯಕರ ಧನಾತ್ಮಕ ಮತ್ತು ಋಣಾತ್ಮಕ ರೂಪ-ಸ್ವಭಾವಗಳ ವರ್ಣನೆ, ಯುದ್ಧ ಭೂಮಿಯ ವರ್ಣನೆ, ಕಾದಾಳುಗಳ ಶೌರ್ಯ – ಸಾಹಸಗಳ ವರ್ಣನೆಗಳನ್ನು ಇಷ್ಟು ಸ್ಫುಟವಾಗಿ ಉಲ್ಲೇಖಿಸುವುದು – ಹೀಗೆ ಎಲ್ಲವೂ ಶಿಸ್ತು ಬದ್ಧವಾಗಿ ಇವೆ.‌ ಆದರೆ ಸಣ್ಣ ಸಣ್ಣ ಅತಿ ಸೂಕ್ಷ್ಮ ವಿಷಯಗಳ ಬಗ್ಗೆಯೂ ಕವಯಿತ್ರಿ ಬಹಳಷ್ಟು ಎಚ್ಚರಿಕೆ ವಹಿಸಿದ್ದಾರೆ. ಉದಾಹರಣೆಗೆ ಪಾತ್ರಗಳ ಸ್ವಭಾವಗಳನ್ನು ಸೂಚಿಸುವ ವೇಷಭೂಷಣಗಳು, ಸನ್ನಿವೇಶಗಳಿಗೆ ಸರಿ ಹೊಂದುವ ವಾತಾವರಣದ ಸೃಷ್ಟಿ ಇತ್ಯಾದಿ. ರಾಕ್ಷಸರು ಮತ್ತು ಕಪಿಗಳ ಹೆಸರುಗಳ ವೈವಿಧ್ಯವನ್ನು ಸೂಕ್ತ ಸ್ಥಳಗಳಲ್ಲಿ ದಾಖಲಿಸಿದ್ದಂತೂ ಅದ್ಭುತ.

    ಒಂದು ಆಧುನಿಕ ಕವಿತೆಯನ್ನೋ ಕಾವ್ಯವನ್ನೋ ರಚಿಸುವಷ್ಟು ಸುಲಭವಲ್ಲ ಮಹಾಕಾವ್ಯವನ್ನು ರಚಿಸುವುದು. ಒಂದು ವಸ್ತು ಹೊಳೆದರೆ ಅದಕ್ಕೆ ಕಾವ್ಯ ಭಾಷೆಯಲ್ಲಿ ತಕ್ಷಣ ಅಭಿವ್ಯಕ್ತಿ ನೀಡಬಹುದು. ಆದರೆ ಒಂದು ಮಹಾಕಾವ್ಯ ಬರೆಯಬೇಕಾದರೆ ಆಳವಾದ ಅಧ್ಯಯನ, ಪೂರ್ವಸಿದ್ಧತೆ, ಬದ್ಧತೆ, ಚಿಂತನೆ, ಧ್ಯಾನ ಎಲ್ಲವೂ ಬೇಕು. ಅದೂ ರಾಮಾಯಣದಂತಹ ಪ್ರಾಚೀನ ಮಹಾಕಾವ್ಯಕ್ಕೆ ಇನ್ನೊಮ್ಮೆ ರೂಪು ಕೊಡಬೇಕೆಂದರೆ ನಾವು ಆಧುನಿಕ ಭಾಷೆ-ಶೈಲಿಗಳನ್ನು ಬಳಸುವಂತಿಲ್ಲ. ಕೆಲವು ಪದಗಳ ಬಳಕೆಯಲ್ಲಿ ನಾವು ಹಿಂದಕ್ಕೆ ಹೋಗಬೇಕಾಗುತ್ತದೆ. ಯಾಕೆಂದರೆ ಕಾವ್ಯದ ಉದ್ದಕ್ಕೂ ಎದುರಾಗುವುದು ಅಂದಿನ ಕಾಲದ ವಾತಾವರಣ.‌ ಹೀಗೆ ಭಾಷೆಯ ಬಳಕೆಯಲ್ಲಿ ನಮ್ಮದಲ್ಲದ ಒಂದು ಕಾಲದಲ್ಲಿ ಸಂಚರಿಸಬೇಕು, ಆದರೆ ಒಂದು ಧ್ಯಾನಸ್ಥ ಮನಸ್ಥಿತಿ ಬೇಕು.‌ ಇಂದಿರಾ ಜಾನಕಿಯವರು ಈ ವಿಚಾರದಲ್ಲಿ ಖಂಡಿತವಾಗಿಯೂ ಗೆಲುವು ಸಾಧಿಸಿದ್ದಾರೆ.

    ಕಾವ್ಯದಲ್ಲಿ ಕಾಣುವ ಸರಳ ಸುಂದರ ಶೈಲಿಗೆ ಕೆಲವು ಉದಾಹರಣೆಗಳು ಹೀಗಿವೆ :
    ಹಾದಿಹೋಕರ ದೋಚಿ ಬದುಕಿದ ಬೇಡನ
    ಹಾದಿಯೇ ಬದಲಾಗಿ ಹೋಯ್ತು
    ವೇದಜ್ಞ ಋಷಿವರ ತಿಳಿಹೇಳಿ ನೀಡಿದ್ದ
    ಬೋಧನೆ ತಾರಕವಾಯ್ತು (ಪು.19)

    ರಾಘವೇಂದ್ರನ ಹೊತ್ತ ಹನುಮಂಗೆ ದನುಜೇಶ
    ತೀಕ್ಷ್ಣ ಸಾಯಕದಿಂದ ಹೊಡೆಯೆ
    ದಾನವೇಂದ್ರನ ಚಾಪ ಮಕುಟವು ಮುರಿಯಿತು
    ಶ್ರೀರಾಮ ಬಾಣವನ್ನೆಸೆಯೆ (ಪು.240)

    ಶರಣು ಬಂದವರನ್ನು ಬಿಡದೆ ಪಾಲಿಸುವಂತೆ
    ಪ್ರಭು ರಾಮಚಂದ್ರನ ಕಂಡು
    ಸಂಕಷ್ಟವನ್ನು ದೂರ ಮಾಡೆಂದು ಮೊರೆಯಿಟ್ಟ
    ವಾರ್ತೆಯನ್ನವನಿಗೆ ನೀಡು (ಪು.183)

    ಈ ಕೃತಿಯನ್ನು ಓದುವಾಗ ನಾಲ್ಕು ವರ್ಷಗಳ ಹಿಂದೆ ನನ್ನ ಪ್ರಾಥಮಿಕ ಶಾಲಾ ಗುರುಗಳಾದ ಎನ್. ತಿಮ್ಮಣ್ಣ ಭಟ್ಟರು ಕನ್ನಡಕ್ಕೆ ಅನುವಾದಿಸಿದ ತುಳಸಿ ದಾಸರ ‘ರಾಮಚರಿತಮಾನಸ’ (ತೇಜು ಪಬ್ಲಿಕೇಷನ್ಸ್) ನೆನಪಾಯಿತು. ಇಡೀ ಕೃತಿಯನ್ನು ಅವರು ಭಾಮಿನಿ ಷಟ್ಪದಿಯಲ್ಲಿ, ಅದೂ ಹಳೆಗನ್ನಡದಲ್ಲಿ ಬಹಳ ಅಂದವಾಗಿ ಅನುವಾದಿಸಿದ್ದರು. ಒಂದು ಕಾವ್ಯದ ಕಾವ್ಯರೂಪದ ಅನುವಾದವೆಂದರೆ ಅದು ಪೂರ್ತಿಯಾಗಿ ಸ್ವತಂತ್ರ ಕೃತಿ ಬರೆದಂತೆಯೇ. ‘ರಾಮ ಸಾಂಗತ್ಯ’ದಲ್ಲಿ ಎಲ್ಲ ಪದ್ಯಗಳಲ್ಲೂ ಮಾತ್ರೆಗಳನ್ನು ಇಟ್ಟುಕೊಂಡು ಪ್ರಾಸವನ್ನು ಅಳವಡಿಸಿಕೊಳ್ಳಲು ಇಲ್ಲಿ ಕವಯಿತ್ರಿಗೆ ಸಾಧ್ಯವಾಗಿಲ್ಲ. ಒಂದು ಮಹಾಕಾವ್ಯದಲ್ಲಿ ಇರಬೇಕಾದಷ್ಟು ಯಥೇಚ್ಛವಾಗಿ ಬಳಕೆಯಾಗುವ ಅಲಂಕಾರಗಳ ಮೆರುಗೂ ಇಲ್ಲಿಲ್ಲ. (ಪದ್ಯಗಳ ಸಂಖ್ಯೆಗಳನ್ನು ನಮೂದಿಸಬೇಕಾಗಿತ್ತು ಅನ್ನುವುದು ಇನ್ನೊಂದು ಕೊರತೆ). ಆದರೆ ಸಾಂಗತ್ಯದಲ್ಲಿ ರಚಿಸಿದ ಮೊದಲ ರಾಮಾಯಣವಿದು ಅನ್ನುವ ಹೆಗ್ಗಳಿಕೆ ಇದಕ್ಕಿದೆ. ಕೊನೆಯ ಪುಟದಲ್ಲಿ ಇಂದಿರಾ ಜಾನಕಿಯವರು ‘ತಪ್ಪುಗಳಾಗಿವೆ ಎಂದು ಗೊತ್ತು, ಕಾವ್ಯರಚನೆಯ ವಿಚಾರದಲ್ಲಿ ತಾನಿನ್ನೂ ಅಂಬೆಗಾಲಿಡುತ್ತಿರುವ ಮಗು’ ಎಂದು ಹೇಳಿ ಓದುಗರ ಕ್ಷಮೆ ಯಾಚಿಸುವ ಅಗತ್ಯವಿರಲಿಲ್ಲ. ಯಾಕೆಂದರೆ ತುಸು ಎಡರುಗಳಿದ್ದರೂ ಒಂದು ಹೊಸ ಶೈಲಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ‘ಮನುಷ್ಯನಾಗಿ ಹುಟ್ಟಿ ತನ್ನ ಸದ್ಗುಣ-ಸತ್ಕೃತಿಗಳಿಂದ ದೈವತ್ವಕ್ಕೇರಿ ಜನರ ಆರಾಧ್ಯ ಮೂರ್ತಿಯಾದ ಶ್ರೀರಾಮಚಂದ್ರನ’ ಬಗ್ಗೆ ಒಂದು ಹೊಸ ಕಾವ್ಯವನ್ನು ರಚಿಸಿ ಇಂದಿರಾಜಾನಕಿಯವರು ಅತ್ಯಂತ ಗುರುತರವಾದ ಒಂದು ಮಹತ್ಕಾರ್ಯವನ್ನು ಮಾಡಿದ್ದಾರೆ. ನನ್ನ ಪ್ರೌಢಶಾಲಾ ಸಹಪಾಠಿಯೂ ಗೆಳತಿಯೂ ಆದ ಆಕೆಯ ಬಗ್ಗೆ ನನಗೆ ಹೆಮ್ಮೆಯಿದೆ.

    ಕೃತಿಯ ಹೆಸರು. : ರಾಮ ಸಾಂಗತ್ಯ
    ಪ್ರಕಾರ : ಮಹಾಕಾವ್ಯ
    ಕವಯಿತ್ರಿ : ಇಂದಿರಾಜಾನಕಿ ಎಸ್. ಶರ್ಮ
    ಪ್ರಕಾಶಕರು : ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ

    ಪುಸ್ತಕ ವಿಮರ್ಶಕಿ : ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ‘ರಾಮ ಸಾಂಗತ್ಯ’ ಲೇಖಕಿಯ ಬಗ್ಗೆ :

    ಪ್ರಸಿದ್ಧ ಸಾಹಿತಿ, ತಾಳಮದ್ದಳೆ ಅರ್ಥಧಾರಿಯಾದ ದೇರಾಜೆ ಸೀತಾರಾಮಯ್ಯನವರ ಪುತ್ರಿಯಾದ ಲೇಖಕಿ ಇಂದಿರಾಜಾನಕಿ ಎಸ್. ಶರ್ಮ ಇವರು ಬಾಲ್ಯದಿಂದಲೇ ತನ್ನ ತೀರ್ಥರೂಪರ ಕೃತಿಗಳನ್ನು ಪ್ರತಿ ಮಾಡಿಕೊಡುತ್ತಾ, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ಒಲವನ್ನೂ, ವಿವಿಧ ಕಲೆಗಳಲ್ಲಿ ಪ್ರೀತಿಯನ್ನೂ ಬೆಳೆಸಿಕೊಂಡವರು. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಕನ್ನಡ ಎಂ.ಎ. ಪದವೀಧರರು. ಇವರ ‘ಕೃಷ್ಣ ಬಲರಾಮರ ಸಂವಾದ’ ಮತ್ತು ‘ಸ್ವಚ್ಛಭಾರತ’ ಕವನಗಳಿಗೆ, ‘ಕುಟುಂಬದಲ್ಲಿ ಮಹಿಳೆಯ ಪಾತ್ರ’ ಮತ್ತು ‘ಸನಾತನ ಧರ್ಮದ ಪುನುರುತ್ಥಾನಕ್ಕೆ ಆಚಾರ್ಯತ್ರಯರ ಕೊಡುಗೆ’ ಪ್ರಬಂಧಗಳಿಗೆ ಪುರಸ್ಕಾರವೂ ಲಭಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮೂಡುಬಿದಿರೆಯಲ್ಲಿ ಉದ್ಘಾಟನೆಗೊಂಡ ಸರಣಿ ತಾಳಮದ್ದಲೆ ಕಾರ್ಯಕ್ರಮ
    Next Article ತಲಪಾಡಿಯ ಶಾರದಾ ಶಾಲೆಯಲ್ಲಿ ಕನ್ನಡ ಗೀತ ಸಂಗೀತ ಕಾರ್ಯಾಗಾರ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.