ಕನ್ನಡದ ಭರವಸೆಯ ಕಾದಂಬರಿಕಾರರಲ್ಲೊಬ್ಬರಾದ ಎಂ.ಆರ್. ದತ್ತಾತ್ರಿಯವರ ‘ಸರ್ಪಭ್ರಮೆ’ ಕಾದಂಬರಿಯಲ್ಲಿ ಕಥೆಗಾರನೊಬ್ಬ ಜಗತ್ತನ್ನು ಕಾಣುವ ಬಗೆ, ಅದರಿಂದ ಬಾಳಿನ ಸುಖ ದುಃಖಗಳನ್ನು ಸೋಸುವ ರೀತಿಯನ್ನು, ಅದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ವಿವರಿಸುವ ಪ್ರಾಮಾಣಿಕ ಪ್ರಯತ್ನವಿದೆ. ಇದು ಲೌಕಿಕ ಮತ್ತು ಅಲೌಕಿಕ ಅನುಭವಗಳನ್ನು ಸರಿಸಮವಾಗಿ ಬೆಸೆದ ಕೃತಿ.
ಕತ್ತಲಲ್ಲಿ ಬಿದ್ದ ಹಗ್ಗವನ್ನು ಹಾವೆಂದು ತಿಳಿದು ಹೆದರುವ ಪ್ರಕ್ರಿಯೆಯನ್ನು ಸರ್ಪಭ್ರಮೆ ಎನ್ನುತ್ತೇವೆ. ಬದುಕಿನ ಹಾದಿಯಲ್ಲಿ ಹಾವಿನಂತಹ ಹಗ್ಗಗಳನ್ನು ಕಂಡು ಉಂಟಾದ ಭ್ರಮೆಯಿಂದ ಕಳಚಿಕೊಂಡು ಮುಂದುವರಿಯಲು ನಮ್ಮೊಳಗಿನ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದು ತನ್ನನ್ನು ತಾನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿ ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವೇ ‘ಸರ್ಪಭ್ರಮೆ’ಯ ತಿರುಳು. ಈ ಕಾದಂಬರಿಯ ಕತೆ ಮತ್ತು ನಿರೂಪಣೆಯ ಧಾಟಿಯು ಭಿನ್ನವಾಗಿದೆ. ಕನ್ನಡದಲ್ಲಿ ಈಗಾಗಲೇ ಉತ್ತಮ ಪುರುಷ ನಿರೂಪಣೆಯಲ್ಲಿ ಹಲವಾರು ಕೃತಿಗಳು ಬಂದಿದ್ದರೂ ಸಹ ಈ ಕಾದಂಬರಿಯ ವಸ್ತು ಮತ್ತು ಕಥನ ತಂತ್ರ ವಿಶಿಷ್ಟವಾಗಿದೆ.
ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸಂದೀಪನು ತನ್ನ ಕತೆಯನ್ನು ನಿರೂಪಿಸುತ್ತಾ ತಂದೆಯ ಗೆಳೆಯ ಯಾಗಿಯನ್ನು ಭೇಟಿಯಾಗಿ ಅವರ ಕತೆಯನ್ನು ಕೂಡ ತನ್ನ ಪರಿಭಾಷೆಯಲ್ಲಿ ನಿರೂಪಿಸುತ್ತಾನೆ. ಇದನ್ನು ಅವರಿಬ್ಬರ ಪ್ರತ್ಯೇಕ ಕತೆಗಳಾಗಿಯೂ ಅಥವಾ ಅವರಿಬ್ಬರ ಒಂದೇ ಕತೆಯಾಗಿಯೂ ಓದಬಹುದು. ನಡು ನಡುವೆ ನಿರೂಪಣೆಯು ಯಾಗಿ ಮತ್ತು ಸಂದೀಪ ಇಬ್ಬರ ಕಡೆಗೆ ಪ್ರತ್ಯೇಕವಾಗಿ ಕೇಂದ್ರೀಕೃತಗೊಂಡು ಮುಂದುವರಿಯುವುದು ಕಥನದ ವಿಶೇಷತೆಯಾಗಿದೆ.
ಕತೆಗಾರನಾದ ಸಂದೀಪನಿಗೆ ತನ್ನ ಬದುಕಿನ ವಿವರಗಳನ್ನು ಹೇಳುವ ಯಾಗಿ ಜೋಯಿಸನಿಗೆ ಸುಳ್ಳನ್ನು ಕಂಡುಹಿಡಿಯುವ ವಿಲಕ್ಷಣ ಶಕ್ತಿ ಇದೆ. ಎದುರಿದ್ದವರು ಸುಳ್ಳು ಹೇಳಿದರೆ ಅವನ ಮೈ ನಡುಗುತ್ತದೆ. ಇಬ್ಬರ ಜೀವನಾನುಭವಗಳು ಪೂರ್ತಿ ಬೇರೆಯಾಗಿದ್ದರೂ ಅವರ ಹಾದಿ ಒಂದು ಕಡೆ ಸೇರುತ್ತದೆ. ಯಾಗಿಯ ಕಥೆ ನ್ಯಾಯಾನ್ಯಾಯಗಳ ವಿಮರ್ಶೆಯ ನೋಟವನ್ನು ಸಂದೀಪನಿಗೆ ನೀಡುತ್ತದೆ. ಕಾದಂಬರಿಯ ಕೊನೆಯಲ್ಲಿ ಊಹಿಸಬಹುದಾದ ಅಂತ್ಯವೇ ಇದ್ದರೂ, ಬದುಕಿನ ಹಾದಿಯ ಕಲ್ಲುಮುಳ್ಳುಗಳು ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುತ್ತವೆ.
ಕಥೆಯೊಳಗೆ ಕಥೆ ಬರುವ ತಂತ್ರವನ್ನೂ, ಅದೃಶ್ಯ ಪಾತ್ರಗಳಿಂದ ಕಥೆ ಹೇಳಿಸುವ ತಂತ್ರವನ್ನೂ ನಾವು ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ನೋಡಿರುತ್ತೇವೆ. ಅಂಥ ಶೈಲಿಯನ್ನು ದತ್ತಾತ್ರಿ ಸರ್ಪಭ್ರಮೆಯಲ್ಲಿ ತಂದಿದ್ದಾರೆ. ಕಾದಂಬರಿಯೊಳಗಿನ ಕಥೆಯಾಗಿ ಬರುವ ‘ಕಮಲಾ ಮತ್ತು ಕುಞಿಕುಟ್ಟನ್ನನ ಯಕ್ಷಿಣಿ ನಾಣ್ಯ’ವು ಅಲೌಕಿಕ ಘಟನೆಗಳಿಂದ ಬೇರೆಯದೇ ಒಂದು ಕಥೆಯಾಗಿದ್ದರೂ ಸಹ ಬಹಳ ಕುತೂಹಲವಾಗಿ ಓದಿಸಿಕೊಳ್ಳುತ್ತಿತ್ತು ! ಅದು ಕಮಲಾಳ ಬದುಕಿಗೆ ಬೆಸೆದು ಕಾದಂಬರಿಗೆ ಪೂರಕವಾಗಿ ಬೆಳೆಸಿದ ರೀತಿ ಮೆಚ್ಚುವಂತಿದೆ. ಇಲ್ಲಿರುವ ಕೆಲವು ಭಾಗಗಳನ್ನು ಸ್ವತಂತ್ರ ಸಣ್ಣಕತೆಗಳಾಗಿಯೂ ಪರಿಭಾವಿಸಬಹುದು. ಕಾದಂಬರಿಯ ಪಾತ್ರಗಳನ್ನು ಇಲ್ಲಿ ಬರುವ ಉಪಕತೆಯ ಪಾತ್ರಗಳ ಜೊತೆ ಬೆಸೆಯುವ ಚಾಕಚಕ್ಯತೆಯು ಶ್ಲಾಘನೀಯವಾಗಿದೆ.
ಒಂದು ಸಂದರ್ಭದಲ್ಲಿ ಯಾಗಿ ಪುತಿನರ ‘ಕಣಿವೆಯ ಮುದುಕ’ ಎನ್ನುವ ಕವಿತೆಯ ಪ್ರಸ್ತಾಪ ಮಾಡುತ್ತಾರೆ. ಮಳೆಮಿಂಚಿನ ಕತ್ತಲಕಾಡಿನಲ್ಲಿ ಒಂಟಿಯಾಗಿ ನಡೆಯುವ ಒಬ್ಬ ಹುಡುಗ ಅನಿರೀಕ್ಷಿತವಾಗಿ ಭೇಟಿಯಾಗುವ ಒಬ್ಬ ಮುದುಕನನ್ನು ಅರಿತುಕೊಳ್ಳಲು ಅವನೊಂದಿಗೆ ಹೆಜ್ಜೆ ಹಾಕುತ್ತಾನೆ. ಕವಿ ಅದ್ಭುತವಾಗಿ ಕವಿತೆಯನ್ನು ಮುಗಿಸುತ್ತಾರೆ. “ನುಡಿಯು ತಿಳುಹಲು ಬಲ್ಲುದೇನ; ಮೌನ ನುಡಿದಾ ದುಗುಡವ?” ಈ ಸಂದರ್ಭದಲ್ಲಿ ಸಂದೀಪ ಮತ್ತು ಯಾಗಿಯೇ ಹುಡುಗ ಮತ್ತು ಮುದುಕನಾಗಿ ಕಾಣುತ್ತಾರೆ.
“ಬೇರೆಯವರ ಡೈರಿಯನ್ನು ಓದಬಾರದು, ಅದೆಂತಹ ನಿಬ್ಬೆರಗಿನ ಕತೆಯಾದರೂ ಸಹ. ಹಾಗೆ ಮಾಡುವುದೆಂದರೆ ಅವರ ಬದುಕಿನ ಒಂದು ತುಂಡನ್ನು ಕತ್ತರಿಸಿಕೊಂಡು ಓಡಿದಂತೆ”, “ಸಂಕಟಗಳು ಅದರಷ್ಟಕ್ಕೇ ಕತೆಯಾಗುವುದಿಲ್ಲ, ಅದೇ ಅವುಗಳನ್ನು ದಾಟಿದ್ದು ಕತೆಯಾಗುತ್ತದೆ” ಎಂಬಂತಹ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಗಣಿತ, ತತ್ತ್ವಶಾಸ್ತ್ರ, ಅಲೌಕಿಕ ಸಂವೇದನೆ ಮೊದಲಾದ ವಿಷಯಗಳ ಸುತ್ತ ಚಲಿಸುವ ‘ಸರ್ಪಭ್ರಮೆ’ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಪರಿಣಾಮಕಾರಿಯಾಗಿದೆ. ತರ್ಕಶಾಸ್ತ್ರ, ತತ್ವಶಾಸ್ತ್ರ, ವೈಚಾರಿಕತೆ, ವೈಜ್ಞಾನಿಕತೆ ಮತ್ತು ಮನಶಾಸ್ತ್ರೀಯ ವಿಶ್ಲೇಷಣೆ ಹದವಾಗಿ ಬೆರೆತ ಕತೆ ಇದು. ‘ಸರ್ಪಭ್ರಮೆ’ ಕಾದಂಬರಿ ಹೊಸತನ ಮತ್ತು ಪ್ರಯೋಗಶೀಲತೆಯಿಂದ ಗಮನ ಸೆಳೆಯುತ್ತದೆ.
ಲೇಖಕ ಎಂ.ಆರ್. ದತ್ತಾತ್ರಿ
ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.