ಕನ್ನಡದ ನವೋದಯ ಕಾಲದಲ್ಲಿ ಜನಪದ ಸಾಹಿತ್ಯವು ಆ ಕಾಲದ ಮನಸ್ಸನ್ನು ಸೆರೆ ಹಿಡಿದಿತ್ತು. ಭಾಷೆ ಮತ್ತು ಸತ್ವದ ದೃಷ್ಟಿಯಿಂದ ಆಂಗ್ಲ ಭಾಷೆಯ ಕಾವ್ಯದಷ್ಟೇ ಪ್ರಭಾವವನ್ನು ಬೀರಿತ್ತು. ನೆಲದ ಬದುಕಿನ ಭದ್ರ ಪರಂಪರೆಯನ್ನು ತೋರಿಸಿಕೊಟ್ಟಿತ್ತು. ಉತ್ತರ ಕರ್ನಾಟಕದಲ್ಲಿ ದ.ರಾ. ಬೇಂದ್ರೆ, ಮಧುರಚೆನ್ನ ಮತ್ತು ಆನಂದಕಂದ ಮುಂತಾದವರು ಜನಪದ ಕಾವ್ಯದಿಂದ ಪ್ರಭಾವಿತರಾಗಿದ್ದರು. ಜಾನಪದ ಸತ್ವವನ್ನು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಮಾತನ್ನು ನವೋದಯದ ನಂತರದ ತಲೆಮಾರಿಗೆ ಸೇರಿದ ಸುನಂದಾ ಬೆಳಗಾಂವಕರರ ಕವಿತೆಗಳಿಗೂ ಅನ್ವಯಿಸಬಹುದು.
ಸುನಂದಾ ಬೆಳಗಾಂವಕರರ ‘ಶಾಲ್ಮಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಧಾರವಾಡದ ಜನಜೀವನದ ಅಂಗವಾಗಿ ಮೂಡಿದ 42 ಕವನಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಕೈಕೈ ಹಿಡಿದು ನಡೆದಾಡುವ ಪುಟ್ಟ ಮಕ್ಕಳಂತಿರುವ ಪ್ರಾಸಗಳು ತಾವಾಗಿಯೇ ಬೆಳೆದು ಮೈಗೂಡಿದ್ದು ಅಲ್ಲಲ್ಲಿ ಒಪ್ಪುವ ನುಡಿಗಳು ಛಂದೋಬದ್ಧವಾಗಿ ಮೈವೆತ್ತು ಮಿಂಚುತ್ತವೆ. ರಾಗಬದ್ಧವಾಗಿ ಹಾಡಬಲ್ಲ, ಭಾವಬದ್ಧವಾಗಿ ಓದಬಲ್ಲ, ಪುಟ್ಟ ಮಕ್ಕಳಿಂದ ನೃತ್ಯರೂಪಕವಾಗಿಸಲು ಯೋಗ್ಯವಾದ ‘ನವಿಲು’, ‘ಚಾಡಿ’, ‘ನಾಗ’, ‘ಗುಬ್ಬಿ’, ‘ಚುರಮುರಿ’ ಮೊದಲಾದ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಪ್ರತಿಮೆ-ಸಂಕೇತಗಳ ಹಂಗುತೊರೆದ ಸರಳ ಅಭಿವ್ಯಕ್ತಿಯು ಇಲ್ಲಿನ ಕವಿತೆಗಳ ವೈಶಿಷ್ಟ್ಯ.
‘ಮೂಡಣ’, ‘ಸೀಗೆ ಹುಣ್ಣಿಮೆ ರಾತ್ರಿ’ ಎಂಬ ಕವನಗಳಲ್ಲಿ ಪ್ರಕೃತಿಯ ಚಿತ್ರಗಳು ಕಣ್ಣಿಗೆ ಕಟ್ಟುವಂತಿದ್ದರೆ ‘ಮುಗಿಲ ಮುತ್ತು’ ಬಾನು ಮತ್ತು ಭೂಮಿಯ ಪರಿಕಲ್ಪನೆಯನ್ನು ಇರಿಸಿಕೊಂಡು ಗಂಡು ಹೆಣ್ಣಿನ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಬದುಕಿನ ಸ್ಥಿತ್ಯಂತರ, ವೈಚಿತ್ರ್ಯಗಳನ್ನು ಪ್ರಕೃತಿಯ ವಿದ್ಯಮಾನಗಳ ಮೂಲಕ ಪ್ರತಿಬಿಂಬಿಸುವ ಕವನಗಳಲ್ಲಿ ವೈಚಾರಿಕತೆ, ಪರಿಸರ ಪ್ರಜ್ಞೆ, ಬದುಕಿನ ಸಾವು ನೋವುಗಳ ವಿವರಗಳು ಕಂಡುಬರುತ್ತವೆ. ನಿಸರ್ಗದ ಪ್ರೇರಣೆ, ಪ್ರಾಣಿಪಕ್ಷಿ ಲೋಕ, ಜನಜೀವನಗಳನ್ನೊಳಗೊಂಡ ರಚನೆಗಳಲ್ಲಿ ಆದರ್ಶಗಳು ಮಿಂಚುತ್ತವೆ. ವಾಸ್ತವತೆ ಹೊಂಚುತ್ತದೆ. ಇಲ್ಲಿ ಸೂಚ್ಯವಾದ ದನಿಗಳಿವೆ. ವಾಚ್ಯವಾದ ಸ್ವರಗಳೂ ಇವೆ.
ಇಂದ್ರಧನು ಸೋಪಾನು ಬಾನ ಭೂಮಿಗಿಳಿಸಿ
ಸಪ್ತಸ್ವರ ರಂಗ ಕಾರಂಜಿ ಚಿಮ್ಮಿಸಿ
ಹಸಿರು ಹೊಲದ ಟೋಪಿ ತೆನೆ ಸೆರಗ ಸರಿಸಿ
ಕುಸುಬಿ ಹೂವಿನ ಕುಸುರು ಕುಪ್ಪಸದಾಗ
ಹುಟ್ಯಾಳಿಲ್ಲಿ ಶಾಲ್ಮಲಿ ಕಸ್ತೂರಿ ನೆಲದಾಗ
ಇದು ನಮ್ಮ ಸೋಮೇಶ ನಿಂತ ಜಾಗ (ಶಾಲ್ಮಲಿ)
‘ಶಾಲ್ಮಲಿ’ ಎಂದರೆ ‘ಬೂರಲ’ ಎಂದರ್ಥ. ಬೂರಲ ಮರದಡಿಯಲ್ಲಿ ಹುಟ್ಟಿದ ನದಿಗೆ ಶಾಲ್ಮಲಾ ಎಂದು ಹೆಸರಿಡಲಾಗಿದೆ. ಅದನ್ನೇ ಹೆಣ್ಣಾಗಿ ಪರಿಭಾವಿಸಿ ‘ಶಾಲ್ಮಲಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಇದು ಸೃಷ್ಟಿಯ ನಿರಂತರತೆಗೆ ಸಂಕೇತವಾಗಿದೆ. ‘ಇದು ನಮ್ಮ ಸೋಮೇಶ ನಿಂತ ಜಾಗ’ ಎನ್ನುವಲ್ಲಿ ದೇವರ ಸಾನ್ನಿಧ್ಯವು ಅರಿವಿಗೆ ಬರುತ್ತದೆ.
ಉಗಿ ಮೋಡ ಹಾರತೀ
ಮಳೆಧಾರ ಸುರಿಸತಿ
ಮಂದಪವನ ತೀಡತೀ
ನೀ ತೂಗತೀ
ಸರಿ ಸಮ ಸೃಷ್ಟಿ ತೂಗತೀ (ನೀ ತೂಗತೀ)
ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ನವೋದಯ ಕಾವ್ಯದ ಮನೋಧರ್ಮವನ್ನು ಇಲ್ಲಿ ಕಾಣಬಹುದು. ‘ನೀ ತೂಗತೀ’ ಎಂಬಲ್ಲಿ ನಿಸರ್ಗದ ತಾಯ್ತನದ ಗುಣ, ಆಕೆ ತೂಗುವ ತೊಟ್ಟಿಲೊಳಗೆ ಮನುಷ್ಯರು ಶಿಶುಗಳು ಎಂಬ ದನಿಯಿದೆ. ‘ಸರಿಸಮ ಸೃಷ್ಟಿ ತೂಗತೀ’ ಎಂಬಲ್ಲಿ ಸಮಾನತೆಯ ಪರಿಕಲ್ಪನೆಯಿದೆ. ‘ತೂಗತೀ’ ಎಂಬ ಪದದ ಶ್ಲೇಷೆಯು ಗಮನಾರ್ಹವಾಗಿದೆ.
ಕಸ್ತೂರಿ ಕಂಪಿನ ಧಾರವಾಡದ ಮಣ್ಣ
ಕುಂಕುಮ ಕೆಂಪಿನ ಬಣ್ಣ
ಬೂರಲ ವಾಲಿಯ ಬಾಲಿ ಶಾಲ್ಮಲಿ
ಹುಟ್ಟಿದ ಊರಿನ ಹುಡಿ ಮಣ್ಣ
ಏನೈತೋ ಅಣ್ಣಾ ಈ ಮಣ್ಣಾಗ? (ಧಾರವಾಡದ ಮಣ್ಣು)
ಮಾತೃಭೂಮಿಯಂತೆ ಮಾತೃಭಾಷೆಯ ಮೇಲಿನ ಪ್ರೀತಿ ಗೌರವಗಳು ಉಸಿರಾಟದಷ್ಟೇ ಸಹಜ. ನಿಸರ್ಗ, ಹುಟ್ಟೂರು, ಭಾಷೆ ಮುಂತಾದ ಪರಿಚಿತ ವಿಷಯಗಳನ್ನು ಆಯ್ದು ಆಕರ್ಷಕವಾಗಿ ನೇಯ್ದ ಕವಿತೆಯಲ್ಲಿನ ಸಾಲುಗಳು ತಮ್ಮ ತಾಯ್ನೆಲವಾದ ಧಾರವಾಡ ಮತ್ತು ಮಾತೃ ಭಾಷೆಯಾದ ಕನ್ನಡದ ಮೇಲೆ ಕವಿಗಿರುವ ಉತ್ಕಟ ಅಭಿಮಾನವನ್ನು ಎತ್ತಿ ಹಿಡಿಯುತ್ತವೆ. ದನಗಳು, ಹೂಬನಗಳು ಮಾತ್ರವಲ್ಲದೆ ಕನ್ನಡ ಕಾವ್ಯಲೋಕವನ್ನು ಬೆಳಗಿದ ಕುಮಾರವ್ಯಾಸ, ಸರ್ವಜ್ಞ, ಶಿಶುನಾಳ ಶರೀಫ, ಬೇಂದ್ರೆಯವರ ಉಲ್ಲೇಖದೊಂದಿಗೆ ಸಂಗೀತ ಲೋಕದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ಲರ ಹೆಸರು ಹೇಳಿ
ನಾವು ಕಾಲೂರಿದ ಗಟ್ಟಿ ತಂದೆ ಮಣ್ಣ
ಅನ್ನ ನೀರು ನೀಡುವ ತಾಯಿ ಮಣ್ಣ
ಅಕ್ಷರ ಅನುಭವ ಕಲಿಸಿದ ಗುರು ಮಣ್ಣ
ಸತ್ತರೆ ಹೂಳಿ ಸುಡುವ ಮಣ್ಣ
ನಮಗಿಲ್ಲ ಆಧಾರ ಬಿಟ್ಟರ ಈ ಮಣ್ಣ
ಇದು ಬರೆ ಮಣ್ಣಲ್ಲೋ ಅಣ್ಣಾ
ಎನ್ನುವ ಮೂಲಕ ಭಾವನಾತ್ಮಕತೆಯ ಚರಮ ಸೀಮೆಯನ್ನು ಮುಟ್ಟುತ್ತದೆ. ಹುಟ್ಟೂರಿನ ಮೇಲೆ ತಿರಸ್ಕಾರವನ್ನು ತಾಳುವವರಿಗೆ ಸೂಕ್ತ ಉತ್ತರವನ್ನು ನೀಡುತ್ತದೆ. ಬಡ ಭಕ್ತೆ ‘ಶಬರಿ’ಯ ಎಂಜಲುಹಣ್ಣಿನ ಪ್ರಸಂಗದ ಮೂಲಕ
ಅಭಿಮಂತ್ರಿತ ಎಂಜಲಲ್ಲ
ಮಾತೆ ನಿನ್ನ ಪ್ರೇಮ
ಇದಕಿಲ್ಲ ಜಾತಿಕುಲ ಧನಧರ್ಮ
ಎಲ್ಲಿ ಭಕ್ತಿ ಅಲ್ಲಿ ಶಬರಿ ಅಲ್ಲಿ ರಾಮನಾಮ
ಎಂದು ಪ್ರಗತಿಪರವೂ ನೀತಿಬೋಧಕವೂ ಆದ ತೀರ್ಪನ್ನು ನೀಡುತ್ತಾರೆ.
ಉತ್ತರ ಕರ್ನಾಟಕದ ಜನಪದ ಗೀತಗಳ ಆಡುಮಾತಿನ ಸೆಳೆತಕ್ಕೆ ಒಳಗಾದ ಕವಿಯತ್ರಿಯು ಅಲ್ಲಿನ ಪದ ಸಂಪತ್ತು, ಪ್ರತಿಮೆಗಳು, ಪಡೆನುಡಿಗಳು, ಧ್ವನಿಶಕ್ತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪುನರ್ರದಚಿಸಿಕೊಂಡಿದ್ದಾರೆ. ಪ್ರೇಮಿಯ ರಸಿಕತನವನ್ನು ಬಣ್ಣಿಸುವ ‘ಬಳೆಗಾರ’ದಲ್ಲಿ ‘ಕೃಷ್ಣ ಕೊರವಂಜಿ’ಯ ಪ್ರಭಾವವಿದ್ದರೆ ‘ಅವ್ವನ ಕಾಗದ’ದಲ್ಲಿ ‘ಹಚ್ಚಡದ ಪದರಿನಲ್ಲಿ ಅಚ್ಚ ಮಲ್ಲಿಗೆ ಹೂವನ್ನು ತಂದು ಬಿಚ್ಚಿ ಹೆಂಡತಿಯ ಮೇಲೆ ಒಗೆಯುವ ಗಂಡ’ ಎಂಬ ಪದ ಪ್ರಯೋಗವನ್ನು ಜನಪದ ಗೀತೆಯಿಂದ ನಕಲಿಸಲಾಗಿದೆ.
ಸಹಜೀವಿಗಳನ್ನು ಕರೆದು ಪ್ರಕೃತಿಯ ಸೊಬಗನ್ನು ಹಂಚಿಕೊಂಡು ಸಂತಸಪಡುವ ಉತ್ಸಾಹವು ‘ಜೀವನ ಜೋಕಾಲಿ’, ‘ರಂಗೋಲಿ’ ‘ಕೋಲು ರನ್ನದ ಕೋಲು ಚಿನ್ನದ’, ‘ಕೋಲು ಕೋಲೆನ್ನ ಕೋಲ’, ‘ಕೋಲಾಟ ಕೊಳಲಾಟ’ ಎಂಬ ಕವನಗಳ ಸ್ಥಾಯಿ ಭಾವವಾಗಿದೆ. ಛಂದೋಲಯಗಳು ಕವಿಯತ್ರಿಯ ಉತ್ಸಾಹ, ಸಂತಸ ಮತ್ತು ಭಾವನಿರ್ಭರತೆಗಳಿಗೆ ಒಗ್ಗಿಕೊಂಡಿವೆ.
ಉಪಯೋ(ಭೋ)ಗಿಸಿ ಬಿಸುಟು ಬಿಡುವ ಸಂಸ್ಕೃತಿಯನ್ನು ಹೊಂದಿದ ಆಧುನಿಕ ಸಮಾಜದೊಳಗೆ ನಿಷ್ಪಾಪಿ ಅನಾಥ ಜೀವಗಳು ಎಂಥ ಒತ್ತಡದಲ್ಲಿ ಉಸಿರಾಡುತ್ತವೆ ಎಂಬುದನ್ನು ಧ್ವನಿಸುವ ‘ಹೆಣ್ಣು ನಾಯಿ’ಯು ಹೆಣ್ಣಿನ ನಾಯಿಪಾಡಿಗೆ ಸಂಕೇತವಾಗುತ್ತದೆ. ತೆವಲು ತೀರಿಸಿಕೊಂಡ ಬಳಿಕ ಗಂಡು ಪರಾರಿಯಾಗಿದೆ. ಹುಟ್ಟಿದ ಮರಿಗಳು ಮೊಲೆ ಚೀಪುತ್ತವೆ. ನಾಯಿ ಹಸಿದಿರುವುದರಿಂದ ಹಾಲು ಒಸರುತ್ತಿಲ್ಲ. ಕೊನೆಗೆ ತಿಪ್ಪೆಗುಂಡಿಯಿಂದ ಎಂಜಲು ತಿಂದು ಮರಿಗಳಿಗೆ ಮೊಲೆಯೂಡಿಸಿ ತಾಯ್ತನದ ಸುಖವನ್ನು ಅನುಭವಿಸುತ್ತದೆ. ಹೆಣ್ಣಿನ ಬದುಕಿಗೊಡ್ಡಿದ ಈ ರೂಪಕವನ್ನು ಸ್ತ್ರೀ ಶೋಷಣೆಯ ಸಂಕೇತವಾಗಿಯೂ ಪರಿಭಾವಿಸಬಹುದು. ಇಲ್ಲಿ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನೋಭಾವವಿದ್ದರೆ ‘ಕರಿಕೆ ಹುಲ್ಲು’ ಅದರ ವಿರುದ್ಧ ನೆಲೆಯಲ್ಲಿದೆ.
ಬಿಸಿಲಿಗೆ ಬಾಯಾರಿ ಬಾಡಿ ಸಾಯದೆ
ಭೂಗರ್ಭ ಬೀಜ ಮಣ್ಣಿನಾಸರೆ ಬಿಡದೆ
ತುಳಿಸಿಕೊಂಡರೂ ತಲೆಯೆತ್ತುವ ಛಲ
ಅಂಗುಲಂಗುಲ ಬೆಳೆದು ಭೂದೇವಿ ಬೈತಲ
ತುಳಿದಷ್ಟೂ ಚಿಗುರುವ ಕ್ರಿಯೆಯು ತಮ್ಮೆದುರಿನ ಕ್ರೌರ್ಯಕ್ಕೆ ಪ್ರತಿಶಕ್ತಿಯಾಗಿ ಬೆಳೆಯುವ ಬದುಕಿನ ರೀತಿಗೆ ಸಂಕೇತವಾಗುತ್ತದೆ. ಕರಿಕೆಯನ್ನು ಭೂಮಿತಾಯಿಯ ಬೈತಲೆಯ ಗೆರೆಗೆ ಹೊಲಿಸಿದ ರೀತಿಯು ಕನ್ನಡಕ್ಕೇ ಹೊಸತು.
ಕನ್ನಡ ಕಾವ್ಯದಲ್ಲಿ ಕಂಡುಬರುವ ಆತ್ಮ ಮರುಕ, ಅನಾಥ ಪ್ರಜ್ಞೆ ಮತ್ತು ಅಂತರ್ಮುಖಿ ಭಾವಗಳನ್ನು ಕಡೆಗಣಿಸಿ, ಕವಿತೆಯ ಬಂಧವನ್ನು ಸಡಿಲಗೊಳಿಸಿ, ಲಯ ಗತಿ ಪ್ರಾಸಗಳನ್ನು ಉಳಿಸಿ, ಹಲವು ಬಗೆಯ ರೂಪಕ-ಶ್ಲೇಷೆಗಳನ್ನು ಬಳಸಿ ಬರೆದ ಸುನಂದಾ ಬೆಳಗಾಂವಕರರು ತಮ್ಮ ಕಾವ್ಯದ ನಿರೂಪಣೆಯ ಮೂಲಕ ಭಿನ್ನರೆನಿಸಿಕೊಂಡಿದ್ದಾರೆ. ಹಕ್ಕಿಗಳ ಇಂಚರಕ್ಕೆ ದನಿಯಾದ ಕವಿತೆಗಳು, ನದಿಯ ಮಂಜುಳ ನಾದಕ್ಕೆ ಮರುಳಾದ ಕವಿತೆಗಳು, ಆಗ ತಾನೇ ನಿದ್ದೆಹೋದ ಕಂದನ ನಗುವಿನಂಥ ಕವಿತೆಗಳು, ಮಾನವ ಕಲ್ಯಾಣವನ್ನು ಹಾರೈಸುವ ಕವಿತೆಗಳು ವೈವಿಧ್ಯಪೂರ್ಣವಾಗಿ ಮೂಡಿ ಬಂದಿವೆ. ಕವಿಯತ್ರಿಯು ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಕವಿತೆಯನ್ನು ಕಟ್ಟಲು ಅಗತ್ಯವಾದ ಸಾಹಿತ್ಯ ಪರಂಪರೆಯೊಂದಿಗೆ ಸೀಮಿತ ಸಂವಾದವನ್ನು ನಡೆಸಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕವಿತೆಗಳು ಸಾಕ್ಷಿಯಾಗಿವೆ. ಅರ್ಥ ಜಾಳಾಗದೆ, ಮಾತು ಅತಿಯಾಗದೆ ಮನಸ್ಸನ್ನು ಆವರಿಸಬಲ್ಲ ಕವಿತೆಗಳು ಇಲ್ಲಿವೆ. ಕಾವ್ಯಪರಂಪರೆಯ ಪರಿಚಯ ಮತ್ತು ಸಂಸ್ಕಾರಗಳಿಂದ ಪಕ್ವಗೊಂಡ ಕಾವ್ಯವು ಸುತ್ತಲಿನ ಆಗುಹೋಗುಗಳಿಗೆ ದನಿಯಾಗುವ ಸೂಕ್ಷ್ಮ ಸಂವೇದನೆಯನ್ನು ಪಡೆದುಕೊಂಡಿದೆ. ಅವರ ಮನಸ್ಸು ಪ್ರಾಸಪ್ರೀತಿಗೊಲಿದರೂ ಸೀಮಿತಮಟ್ಟದಲ್ಲಿ ಆಧುನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕಾವ್ಯದ ವಿನ್ಯಾಸವು ನವೋದಯದ ಕೊಡುಗೆಗಳೆಂಬಂತೆ ತೋರಿದರೂ ಅವುಗಳು ಕವಯತ್ರಿಯ ವಿಶಿಷ್ಟ ಅನುಭವ ಮತ್ತು ಒಳನೋಟಗಳನ್ನು ಹೊಂದಿವೆ. ಸಮಾಜವು ರೂಢಿಸಿಕೊಂಡು ಬಂದಿರುವ ಶಿಷ್ಟಾಚಾರ, ಸಾಹಿತ್ಯವು ಮೂಡಿಸಿದ ವಿಶಿಷ್ಟ ಸಂಸ್ಕೃತಿಯ ಪ್ರಭಾವ, ಪ್ರಕೃತಿಯ ಮತ್ತು ಬದುಕಿನ ಚೆಲುವನ್ನು ಕಂಡು ಅನುಭವಿಸಿ ಹಿಗ್ಗುವ ಪ್ರಸನ್ನಭಾವಗಳು ಕವಿಯತ್ರಿಯ ಚೇತನವನ್ನು ಮುನ್ನಡೆಸಿವೆ. ಬಾಳ್ವೆಯ ನೋವು, ಕಣ್ಣೀರುಗಳನ್ನು ಕಂಡು ಕರಗುವ ಆರ್ದಹೃದಯವನ್ನು ಕಾಣುತ್ತೇವೆ. ಬದುಕಿನ ನೋವು ನಲಿವುಗಳನ್ನು ಕುರಿತ ಚಿಂತನೆಯು ಕಂಡುಬರುತ್ತದೆ. ಬಾಳ್ವೆಯ ಕೋಮಲ ಮುಖಗಳನ್ನಲ್ಲದೆ ವಿಕಾರ ರೇಖೆಗಳನ್ನೂ ಗುರುತಿಸುತ್ತದೆ. ಪದಪ್ರಯೋಗಗಳ ಹಿಡಿತ, ಅರ್ಥ ಭಾವಗಳ ಮಿಡಿತ, ಶಬ್ದಾರ್ಥಗಳ ಸಮ್ಮಿಲನದಿಂದ ಕವಿತೆಗಳು ಓದುಗರಲ್ಲಿ ಉಲ್ಲಾಸವನನ್ನು ಮಾತ್ರ ಉಂಟುಮಾಡದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅವ್ಯವಹಾರ ಮತ್ತು ಕ್ರೌರ್ಯಗಳ ಕುರಿತು ಚಿಂತಿಸುವಂತೆ ಮಾಡುತ್ತಿದ್ದರೆ ಈ ಸಂಕಲನದ ಮಹತ್ವ ಹೆಚ್ಚುತ್ತಿತ್ತು. ಹೊಸ ಕಲ್ಪನೆ, ಕುಣಿಯುವ ನಡೆ, ಮಿದುವಾದ ಭಾವಗಳ ಮೂಲಕ ಮನಸ್ಸಿಗೆ ಮುದನೀಡುವ ಕವನಗಳು ಲಯಗಾರಿಕೆ ಮತ್ತು ವಿವರಗಳ ಸಂಯೋಜನೆಗಳಿಗೆ ಸೀಮಿತವಾಗದೆ ಒಂದೆರಡು ಕವಿತೆಗಳ ಮೂಲಕವಾದರೂ ಸಮಾಜದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅವ್ಯವಹಾರಗಳನ್ನು ಧ್ವನಿಸಿರುವುದು ಸಮಾಧಾನಕರ ವಿಚಾರವಾಗಿದೆ. ಕವಿತೆಗಳು ಜನಪದ ಗೀತೆಗಳು ಸಾರುತ್ತಿದ್ದ ಮೌಲ್ಯಗಳನ್ನು ರವಾನಿಸುತ್ತವೆ. ಇದು ಬದುಕಿನ ಆಳಕ್ಕೆ ಕೊಂಡೊಯ್ದು ಮೂಲಭೂತ ಸಮಸ್ಯೆಗಳ ಚಿಂತನೆಗೆ ತೊಡಗಿಸುವುದಿಲ್ಲ. ಬದುಕಿನ ಹೊಸ ಸಾಧ್ಯತೆಗಳ ಅರಿವನ್ನು ಹೆಚ್ಚಿಸುವುದಿಲ್ಲ. ಆದರೆ ಜೀವಕ್ಕೆ ಒಂದಿಷ್ಟು ಸುಖವನ್ನು ಕೊಡುವ ಕಾವ್ಯ ಎಂದಿಗೂ ವ್ಯರ್ಥವಲ್ಲ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿ ಸುನಂದಾ ಬೆಳಗಾಂವಕರ