ಸುಮನಾ ಹೇರ್ಳೆ ಈಗಾಗಲೇ ತಮ್ಮ ಗಝಲ್, ಕವನ, ಆಧುನಿಕ ವಚನ ಹಾಗೂ ಮುಕ್ತಕಗಳ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ‘ಶ್ರೀ ಗುರು ನರಸಿಂಹ ಕಾವ್ಯಧಾರೆ’ ಇತ್ತೀಚೆಗೆ ಪ್ರಕಟವಾದ ಅವರ ವಿಶಿಷ್ಟ ಕೃತಿ. ಇಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಗುರುನರಸಿಂಹ ದೇವಸ್ಥಾನದ ಸ್ಥಳ ಪುರಾಣವನ್ನು ವಸ್ತುವಾಗಿಟ್ಟುಕೊಂಡು ಅವರು ಛಂದೋಬದ್ಧವಾಗಿ ಚೌಪದಿಯಲ್ಲಿ ರಚಿಸಿದ 300 ಪದ್ಯಗಳಿವೆ.
ಒಂದು ಮಹಾಕಾವ್ಯದ ಶೈಲಿಯಲ್ಲಿ ಆರಂಭದ ಆರು ಪದ್ಯಗಳನ್ನು ದೇವರ ಪ್ರಾರ್ಥನೆಗಾಗಿ ಅವರು ಬಳಸುತ್ತಾರೆ. ಮುಂದೆ ಸೂತಮುನಿಗಳು ಹೇಳುವ ಪರಶುರಾಮ ಕ್ಷೇತ್ರವು ಹೇಗೆ ಹುಟ್ಟಿತು ಅನ್ನುವುದರ ಕಥೆಯಿದೆ. ಅನಂತರ ಸಾಲಿಗ್ರಾಮದಲ್ಲಿ ನರಸಿಂಹನು ಬ್ರಹ್ಮ, ವಿಷ್ಣು ಮತ್ತು ಶಿವ ಸ್ವರೂಪಿಯಾಗಿ, ಸಾಲಿಗ್ರಾಮ ಶಿಲೆಯಾಗಿ ನೆಲೆಸಿರುವುದರ ಕುರಿತಾದ ವಿವರಗಳಿವೆ. ಮುಂದೆ ಕದಂಬನೆಂಬ ದೈವಸ್ವರೂಪಿ ಬಾಲಕನು ಹುಟ್ಟಿ, ಅನಂತರ ಕದಂಬ ಸಾಮ್ರಾಜ್ಯ ಸ್ಥಾಪಿಸಿ, ಶ್ರದ್ಧೆಯಿಂದ ಪರಶುರಾಮ ಕ್ಷೇತ್ರವನ್ನು ಆಳುತ್ತಾನೆ. ಅವನ ಮಗ ವಸುರಾಜನೂ ಸಮರ್ಥ ರಾಜನಾಗಿ, ಅವನ ಮಗಳು ಸುಶೀಲೆಯು ಸೂರ್ಯವಂಶದ ಹೇಮಾಂಗದನನ್ನು ಮದುವೆಯಾಗುತ್ತಾಳೆ. ಶತ್ರುಗಳ ಪಿತೂರಿಗೆ ಬಲಿಯಾಗಿ ಹೇಮಾಂಗದನು ಮರಣ ಹೊಂದಿದಾಗ ಅವನ ಮಗ ಮಯೂರವರ್ಮ ರಾಜನಾಗುತ್ತಾನೆ. ಗುರು ವಸಿಷ್ಠರ ಬೋಧನೆಯಂತೆ ಅಹಿಚ್ಛತ್ರ ಎಂಬಲ್ಲಿಂದ ಪರಶುರಾಮ ಕ್ಷೇತ್ರಕ್ಕೆ ಬ್ರಾಹ್ಮಣರನ್ನು ಕರೆಸಿ ಅವರು ಅಲ್ಲಿ ನೆಲೆಸುವಂತೆ ಮಾಡುತ್ತಾನೆ. ಆದರೆ ಅವನ ಎಳೆಯ ವಯಸ್ಸಿನ ಮಗ ಚಂದ್ರಾಂಗದನ ಆಡಳಿತ ಕಾಲದಲ್ಲಿ ಅವನ ಮಂತ್ರಿಗಳು ಬ್ರಾಹ್ಮಣರಿಗೆ ಅವಮಾನ ಮಾಡಿ ಅವರನ್ನು ಅಲ್ಲಿಂದ ಓಡಿಸುತ್ತಾರೆ. ಚಂದ್ರಾಂಗದನು ಬೆಳೆದು ದೊಡ್ಡವನಾದ ಮೇಲೆ ಬ್ರಾಹ್ಮಣರನ್ನು ಪುನಃ ಕರೆತಂದು ಅವರಿಗೆ 14 ಗ್ರಾಮಗಳನ್ನು ಕಲ್ಪಿಸಿ ಕೊಡುತ್ತಾನೆ. ಅವನ ಅಕಾಲ ಮರಣದ ನಂತರ ಅವನ ಎಳೆಯ ಮಗ ಲೋಕಾದಿತ್ಯನ ಕಾಲದಲ್ಲಿ ಪುನಃ ಬ್ರಾಹ್ಮಣರಿಗೆ ಮೋಸವಾಗಿ ಅವರು ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ ಲೋಕಾದಿತ್ಯನು ದೊಡ್ಡವನಾದ ಮೇಲೆ ಎಲ್ಲಾ ತಪ್ಪುಗಳನ್ನೂ ಸರಿಪಡಿಸಿ ಮಹಾನ್ ವಿದ್ವಾಂಸರಾಗಿದ್ದ ಭಟ್ಟಾಚಾರ್ಯರ ಮೂಲಕ ಸಾಲಿಗ್ರಾಮದಲ್ಲಿ ಗಣಪತಿ ಮತ್ತು ದುರ್ಗಾಪರಮೇಶ್ವರಿಯರ ಸ್ಥಾಪನೆ ಪೂಜೆ- ಹೋಮ-ಹವನಗಳು ಕಾಲಕಾಲಕ್ಕೆ ನಿಯತವಾಗಿ ನಡೆಯುವಂತೆ ವ್ಯವಸ್ಥೆ ಮಾಡುತ್ತಾನೆ. ಸಾಲಿಗ್ರಾಮದ ಸುತ್ತಮುತ್ತ ನೆಲೆಗೊಂಡ ಬ್ರಾಹ್ಮಣರು ಒಂದು ಕೂಟವಾಗಿ ಅವರಿಗೆ ಕೂಟಬ್ರಾಹ್ಮಣರೆಂದು ಹೆಸರು ಬರುತ್ತದೆ. ಹೀಗೆ ಇನ್ನೂ ನೂರಾರು ವಿವರಗಳೊಂದಿಗೆ ಕಥೆ ಸಾಗುತ್ತದೆ.
ಸ್ಥಳ ಪುರಾಣ ನಮಗೆ ಗೊತ್ತಿರುವುದೇ ಆದರೂ ಅದನ್ನು ಸುಮನಾ ಅವರು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟ ಪರಿಯೇ ಚಂದ. ಅವರು ಬಳಸುವ ಪದಗಳ ಸರಳ, ಸಹಜ, ಸೌಂದರ್ಯ ಮತ್ತು ಸೂಕ್ತತೆ ಮತ್ತು ಅಲ್ಲಲ್ಲಿ ಕಾಣುವ ಅಲಂಕಾರಗಳು ಪದ್ಯಗಳಿಗೆ ಘನತೆಯನ್ನಿತ್ತಿವೆ.
ಉದಾಹರಣೆಗೆ ಒಂದೆರಡು ಪದ್ಯಗಳನ್ನು ನೋಡಬಹುದು :
೧. ಪರಶುರಾಮನು ಆಶ್ರಮದಿಂದ ಕಾಮಧೇನುವನ್ನು ಕದ್ದೊಯ್ದ ಕಾರ್ತವೀರ್ಯನನ್ನು ಕೊಂದು ಹೆಮ್ಮೆಯಿಂದ ತನ್ನ ಪಿತನ ಬಳಿಗೆ ಬಂದ ಸಂದರ್ಭ:
ನೃಪನನ್ನು ಸಂಹರಿಸಿ ಬಂದಿರುವ ಸುತನನ್ನು
ಕುಪಿತನಾಗುತ ತಂದೆ ಕಳಿಸಿದನು ದೂರ
ನೆಪವನ್ನು ಹೇಳದೇ ಹೊರಟ ಭಾರ್ಗವ ದೂರ
ಕಪಟವಿಲ್ಲದ ಮನವು ತಾನಾಯ್ತು ಭಾರ
೨.ರಾಜ ಹೇಮಾಂಗದನು ಮಗನಾದ ಚಂದ್ರಾಂಗದನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ಕಾಡಿಗೆ ತರಳುತ್ತಾನೆ :
ಪಟ್ಟದಲಿ ಕೂರಿಸುತ ಪುತ್ರ ಚಂದ್ರಾಂಗದನ
ಇಟ್ಟ ಸಚಿವರ ಪಡೆಯ ನೋಡಿಕೊಳಲೆಂದು
ಬಿಟ್ಟೆಲ್ಲವನು ನಡೆದ ದೊರೆಯು ವನದೆಡೆ ತಾನು
ಮೆಟ್ಟಲಾಗಿಸಿ ತಪವ ಮುಕ್ತಗೊಳಲೆಂದು
೩. ಕೊನೆಯಲ್ಲಿ ಗುರುನರಸಿಂಹನಿಗೆ ಪೊಡಮಡುತ್ತಾ:
ನಿನ್ನ ಚರಿತೆಯ ಪಾಡಿ ಪೊಗಳುವೆನು ನರಸಿಂಹ
ಮನ್ನಿಸುತ ತಪ್ಪುಗಳ ಬನ್ನವನು ಬಿಡಿಸು
ಮನ್ನಣೆಯು ಸಿಗುವಂತೆ ಮುನ್ನ ಕಾಯೋ ದೇವ
ಹೊನ್ನನೆಂದಿಗು ಕೇಳೆ ಕಂದನೊಲು ಹರಸು
ಹಾಗೆ ಹೇಳುವುದಾದರೆ, ಇಡೀ ಕೃತಿಯೆ ಇಂಥ ಸುಂದರ ಪದ್ಯಗಳಿಂದ ಸಮೃದ್ಧವಾಗಿದೆ. ಕೃತಿಯ ಕೊನೆಯಲ್ಲಿ ಎಲ್ಲ ಪದ್ಯಗಳ ಭಾವಾರ್ಥವನ್ನೂ ಅವರು ನೀಡಿದ್ದಾರೆ. ಸುಮನಾ ಹೇರ್ಳೆಯವರಿಂದ ಪರಂಪರಾಗತ ಶೈಲಿಯ ಇಂಥ ಇನ್ನಷ್ಟು ಕಾವ್ಯ ಕೃತಿಗಳು ಬರಲಿ ಎಂದು ಹಾರೈಸುವೆ.
– ಪಾರ್ವತಿ ಜಿ. ಐತಾಳ್
ಕೃತಿಯ ಹೆಸರು : ಶ್ರೀ ಗುರು ನರಸಿಂಹ ಕಾವ್ಯಧಾರೆ
ಕವಯಿತ್ರಿ : ಸುಮನಾ ಆರ್. ಹೇರ್ಳೆ
ಪ್ರ : ಹೆಚ್.ಎಸ್.ಆರ್.ಎ. ಪ್ರಕಾಶನ, ಬೆಂಗಳೂರು
ಪ್ರ.ವ. : 2025