ಬೊಗಸೆಯಲ್ಲಿ ಸಿಕ್ಕ ಬಾಳು ಚಿಕ್ಕದಿರಬಹುದು. ಆದರೆ ಮನದಾಳದಲ್ಲಿ ತುಂಬಿಕೊಂಡ ಪ್ರೀತಿಯ ನೆನಪು ದೊಡ್ಡದಾಗಿದ್ದರೆ ಬದುಕು ಸುಂದರವಾಗಿರುತ್ತದೆ. ನಮ್ಮ ಸೌಭಾಗ್ಯಕ್ಕೆ ಸಿಕ್ಕಿದ ಪ್ರೀತಿಯನ್ನು ಕೃತಜ್ಞತೆಯೊಂದಿಗೆ ನೆನೆಯುತ್ತಿರಬೇಕು. ಅಂಥ ಸಂದರ್ಭದಲ್ಲಿ ಮುಳ್ಳುಗಳ ನಡುವೆ ನಿಂತು ನಳನಳಿಸುವ ಗುಲಾಬಿಯಂತೆ ಬದುಕಿನ ದುಗುಡಗಳ ನಡುವೆ ನೆನಪಿನಲ್ಲಿ ಬಂದು ನಿಲ್ಲುವ ವ್ಯಕ್ತಿ ಸುನಂದಾ ಬೆಳಗಾಂವಕರ.
ತನ್ನ ಏಳು ಜನ ಸೋದರ ಸೋದರಿಯರಲ್ಲಿ ಸುನಂದಾ ತನ್ನ ಬದುಕು ಬರಹಗಳಿಂದ ವಿಶಿಷ್ಟ ವ್ಯಕ್ತಿಯಾಗಿ ನಿಲ್ಲುತ್ತಾಳೆ. ಒಡಹುಟ್ಟುಗಳ ಕರೆಗೆ ಆಕೆ ಸದಾ ಓಗೊಟ್ಟವಳು. ಅವರ ನಡೆನುಡಿಗಳಲ್ಲಿ ಉತ್ತಮಿಕೆಯನ್ನು ಕಂಡಾಗ ಹಿಗ್ಗಿದವಳು. ಬದುಕು ಬರಹಗಳಲ್ಲಿ ತನ್ನ ತಂದೆತಾಯಿಯರನ್ನು ದೇವರ ಸ್ಥಾನದಲ್ಲಿಟ್ಟು ನೆನೆದವಳು. ಜೀವನವಿಡೀ ಅವರನ್ನು ಪೂಜಿಸಿದವಳು. ಪತಿ ಶ್ರೀ ಬಿಂದುಮಾಧವ ಬೆಳಗಾಂವಕರರನ್ನು ಪೊರೆದ ರೀತಿಯೂ ಅನನ್ಯ. ಬಿಂದು ಅವರ ತಾಯಿ ದಿನವೂ ಪಕ್ವಾನ್ನವನ್ನು ಮಾಡಿ ಮಗನಿಗೆ ಉಣಬಡಿಸಿದಂತೆ ಸುನಂದಾಳೂ ಪ್ರತಿದಿನ ಹಲವು ಪದಾರ್ಥಗಳನ್ನು ತಯಾರಿಸಿ ಉಣಬಡಿಸಿದ್ದನ್ನು ಕಂಡು ಹೊಗಳಿದ್ದೇನೆ. ನನಗೆ ತಿಳಿದಂತೆ ಪಾಕಶಾಸ್ತ್ರ ಚಾತುರ್ಯದಲ್ಲಿ ಆಕೆಯನ್ನು ಸರಿಗಟ್ಟುವವರು ಯಾರೂ ಇರಲಿಲ್ಲ. ಆಕೆ ತನ್ನ ಮನೆ ಮತ್ತು ಕುಟುಂಬವನ್ನು ನೋಡಿಕೊಂಡ ಬಗೆ ಅವರ್ಣನೀಯ. “ನನ್ನ ಗಂಡ ಇಪ್ಪತ್ತನಾಲ್ಕು ತಾಸು ದುಡಿದು ತಂದ ದುಡ್ಡು ನನ್ನ ಕೈಯಾಗ ಹಾಕ್ತಾರ. ನಾನೂ ಸಹ ಅಷ್ಟೇ ವಿಶ್ವಾಸದಿಂದ ಮನಿ ನೋಡಿಕೋತೀನಿ. ಮದಿವ್ಯಾಗಿ ಬಂದ ಮೇಲೆ ಒಂದ ಸಲಾನೂ ಹಾಲು ಉಕ್ಕಿಸಿಲ್ಲ. ಒಂದು ಸೂಜಿ ಚಮಚಾ ಸಹ ಕಳದಿಲ್ಲ” ಎಂದು ಆಕೆ ನನ್ನ ಬಳಿ ಹೇಳಿದಾಗ ನಾನು ಆಶ್ಚರ್ಯ ಪಟ್ಟಿದ್ದೆ. ಆಕೆ ಅಂಥ ಆದರ್ಶ ಗೃಹಿಣಿ. ಮಕ್ಕಳಾದ ಹರೀಶ, ವೈಜಯಂತಿಯರು ತೋರುವ ನಯ ವಿನಯಗಳನ್ನು ನೋಡಿದವರಿಗೆಲ್ಲ ಅವರ ಪಾಲಿಗೆ ಗುರುವಾದ ಸುನಂದಾ ಅದೆಂಥ ಮೌಲ್ಯಯುತ ಸಂಸ್ಕಾರ ನೀಡಿ ಬೆಳೆಸಿದ್ದಾರೆ ಎನಿಸುತ್ತದೆ.
ನನ್ನ ಅಕ್ಕ ಸುಲೋಚನಾ ಮತ್ತು ಸುನಂದಾ ಪ್ರೌಢಶಾಲೆಯ ಐದನೇ ಇಯತ್ತೆಯಿಂದ ಸ್ನಾತಕೋತ್ತರ ಪದವಿಯವರೆಗೆ ಜೊತೆಯಲ್ಲೇ ಕಲಿತವರಾಗಿದ್ದುದರಿಂದ ಅವರ ಸ್ನೇಹವು ಘನವಾಗಿತ್ತು. ಅಗಾಧವಾಗಿತ್ತು. ಜೋಡಿ ಹಕ್ಕಿಗಳಂತಿದ್ದ ಅವರು ಪರಸ್ಪರ ಭೇಟಿಯಾದಾಗಲೆಲ್ಲ ಬೆಳಗಾಗುವ ತನಕ ಮಾತನಾಡುತ್ತಲೇ ಇರುತ್ತಿದ್ದರು. ಒಮ್ಮೆ ಹೊಗಳುತ್ತಾ, ಮತ್ತೊಮ್ಮೆ ಬೈಯುತ್ತಾ ಏನೇನು ಮಾತನಾಡುತ್ತಿದ್ದರೋ ತಿಳಿಯದು. ಆದರೆ ನನ್ನ ಅಕ್ಕ ತೀರಿಕೊಂಡಾಗ ಸುನಂದಾ ಎಷ್ಟು ಅತ್ತಿರಬಹುದೆಂದು ಕಲ್ಪಿಸಬಲ್ಲೆ. ಆಕೆಯು ಸುನಂದಾಳಿಗೆ ವರನನ್ನು ಹುಡುಕಿ ಅನೇಕ ಆತಂಕಗಳ ನಡುವೆ ನಿಂತು ಮದುವೆ ಮಾಡಿಸಿದ್ದಳು. ಅದಕ್ಕಾಗಿ ಸುನಂದಾ, ಬಿಂದು ಎಂದೆಂದಿಗೂ ಕೃತಜ್ಞರಾಗಿದ್ದರು. ನನ್ನ ತಂದೆ ತಾಯಿ ಇಲ್ಲದಿದ್ದಾಗ ಅಕ್ಕಂದಿರಾದ ಸುನಂದಾ, ಸುಲೋಚನಾ ನನ್ನ ಮದುವೆಯನ್ನು ವ್ಯವಸ್ಥಿತವಾಗಿ ಮಾಡಿಸಿದ್ದರು. ಅಷ್ಟೇ ಅಲ್ಲ, ಅವರಿಬ್ಬರು ನನ್ನ ಮಗಳು ಸೀಮಾಳ ಮದುವೆ ಮಾಡಿಸಿದ್ದನ್ನೂ ಮರೆಯಲಾರೆ.
ಸುನಂದಾ ಶ್ರೇಷ್ಠ ಬರಹಗಾರ್ತಿಯಾಗಿದ್ದಳು. ಬರಹಗಾರರಲ್ಲಿ ಇರಬೇಕಾದ ಸಂವೇದನಶೀಲ ಹೃದಯ, ಚತುರ ಭಾಷಾ ಪ್ರಯೋಗ, ಆತ್ಮೀಯವಾದ ನಿರೂಪಣ ವಿಧಾನಗಳು ಆಕೆಯನ್ನು ಜನಪ್ರಿಯ ಲೇಖಕಿಯನ್ನಾಗಿಸಿದವು. ಧಾರವಾಡದ ಭಾಷೆಯನ್ನು ವಿಶಿಷ್ಟ ಅನುಭವಗಳೊಂದಿಗೆ ಸಾಹಿತ್ಯದಲ್ಲಿ ಬಳಸಿರುವುದನ್ನು ಓದುಗರು ಮೆಚ್ಚಿಕೊಂಡಿದ್ದಾರೆ. ಧಾರವಾಡ ಸಂಸ್ಕೃತಿಯ ಸೊಬಗು ಮತ್ತು ಅಲ್ಲಿನ ಕನ್ನಡದ ಸೊಗಡನ್ನು ಮೈಗೂಡಿಸಿಕೊಂಡ ಸುನಂದಾ ಬೆಳಗಾಂವಕರರ ಪ್ರಬಂಧಗಳು, ಕತೆ ಕಾದಂಬರಿಗಳು ಸಹಜ, ಸುಂದರ ಮತ್ತು ಆತ್ಮೀಯ ನಿರೂಪಣೆಯಿಂದಾಗಿ ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣವನ್ನು ಪಡೆದಿವೆ. ಕಳೆದ ಶತಮಾನದ ಐವತ್ತು ಮತ್ತು ಅರುವತ್ತರ ದಶಕದ ಧಾರವಾಡದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಇತಿಹಾಸದ ಪಾರ್ಶ್ವನೋಟವನ್ನು ಒದಗಿಸುವಲ್ಲಿ ಸಫಲವಾಗಿವೆ.
ಯುವತಲೆಮಾರಿನ ಭರವಸೆಯ ಬರಹಗಾರರಾದ ಡಾ. ಸುಭಾಷ್ ಪಟ್ಟಾಜೆಯವರು ಬರೆದ ‘ಶ್ರೀಮತಿ ಸುನಂದಾ ಬೆಳಗಾಂವಕರ ವ್ಯಕ್ತಿತ್ವ – ಸಾಹಿತ್ಯ’ ಎಂಬ ಮೊನೋಗ್ರಾಫ್ ಮನೋಜ್ಞವಾಗಿದೆ. ಸುನಂದಾಳ ಸಮಗ್ರ ಸಾಹಿತ್ಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಓದಿ, ಗ್ರಹಿಸಿ, ಮನಸಾರೆ ಮೆಚ್ಚಿಕೊಂಡು ವಿಮರ್ಶಾತ್ಮಕವಾಗಿ ಬರೆದ ಲೇಖನಗಳು ಅರ್ಥಪೂರ್ಣವಾಗಿವೆ. ಈ ಪುಸ್ತಕಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ, ಪಟ್ಟ ಪರಿಶ್ರಮ, ಅಭಿವ್ಯಕ್ತಿ ವಿಧಾನಗಳಿಗಾಗಿ ಕನ್ನಡದ ಓದುಗರು ಅವರನ್ನು ಹಾರ್ದಿಕವಾಗಿ ಅಭಿನಂದಿಸಲೇಬೇಕು. ಪ್ರಶಸ್ತಿ, ಪುರಸ್ಕಾರಗಳನ್ನು ಕನಸಿನಲ್ಲೂ ಬಯಸದೆ, ಎಲೆಮರೆಯ ಅಲರಿನಂತೆ ಮೌನವಾಗಿ ಬರೆಯುತ್ತಿದ್ದ ಸುನಂದಾಳಂಥ ಅಪರೂಪದ ಲೇಖಕಿಯನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸಿದ ಬಗೆ ಪ್ರಶಂಸನೀಯ.
“ಕನ್ನಡ ಮಹಿಳಾ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ ಲೇಖಕಿ ಸುನಂದಾ ಬೆಳಗಾಂವಕರರು ಕಾದಂಬರಿ ಮತ್ತು ಲಲಿತಪ್ರಬಂಧ ಕ್ಷೇತ್ರಕ್ಕೆ ‘ನಾಸು’ ಮತ್ತು ‘ಕಜ್ಜಾಯ’ದಂಥ ಕೃತಿಗಳನ್ನು ಕೊಟ್ಟಿದ್ದಾರೆ. ಆದರೂ ಅವರ ಸಾಹಿತ್ಯಕ್ಕೆ ವಿಮರ್ಶೆಯ ಮನ್ನಣೆಯು ದೊರೆತಿಲ್ಲ. ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ’, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸದ್ಯ ಅವರ ಎಲ್ಲ ಕೃತಿಗಳನ್ನು ಪ್ರಕಟಿಸಿರುವ ಅಂಕಿತ ಪುಸ್ತಕದವರು ಒಂದೇ ಒಂದು ಕಿರುಪುಸ್ತಕವನ್ನಾದರೂ ಹೊರತರದಿರುವುದು ನೋವಿನ ಸಂಗತಿ” ಎಂದು ಲೇಖಕರ ನುಡಿಯಲ್ಲಿ ಅಭಿಪ್ರಾಯಪಟ್ಟಿರುವ ಪಟ್ಟಾಜೆಯವರು ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು 2023ನೇ ಸಾಲಿನಿಂದ ಪ್ರತಿ ವರ್ಷ ಪ್ರಕಟವಾಗುವ ಕಾದಂಬರಿಗಳಲ್ಲಿ ಆಯ್ದ ಉತ್ತಮ ಕಾದಂಬರಿಯೊಂದಕ್ಕೆ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಯನ್ನು ನೀಡಲಾರಂಭಿಸಿತು. ಚೊಚ್ಚಲ ಪ್ರಶಸ್ತಿಯು ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ಭಾರತಕಥಾ’ ಕಾದಂಬರಿಗೆ ಲಭಿಸಿತು. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸುನಂದಾ ಬೆಳಗಾಂವಕರರ ಕುರಿತು ಹೊಸ ವಿಷಯಗಳನ್ನು ತಿಳಿಯುವಂತಾಯಿತು. ಆದ್ದರಿಂದ ಸಾಹಿತ್ಯ ಗಂಗಾ ಸಂಸ್ಥೆಯು ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತು ಪುಸ್ತಕವನ್ನು ಪ್ರಕಟಿಸಲು ನಿರ್ಧರಿಸಿತು. ಈಗಾಗಲೇ ಎಂಟು ಪುಸ್ತಕಗಳನ್ನು ಪ್ರಕಟಿಸಿ ತಕ್ಕಮಟ್ಟಿಗೆ ಬರವಣಿಗೆಯ ಅನುಭವವಿರುವುದರಿಂದ ಸುನಂದಾ ಬೆಳಗಾಂವಕರರನ್ನು ಕುರಿತ ಪುಸ್ತಕವನ್ನು ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಲಾಯಿತು. ಅವರ ಕೃತಿಗಳನ್ನು ಆಮೂಲಾಗ್ರವಾಗಿ ಓದತೊಡಗಿದ ಬಳಿಕ ಅವುಗಳ ಬಗ್ಗೆ ಬರೆಯಬಲ್ಲೆನೆಂಬ ಆತ್ಮವಿಶ್ವಾಸವು ಹೆಚ್ಚಿತು. ಸುನಂದಾ ಬೆಳಗಾಂವಕರರು ಲೇಖಕಿಯಾಗಿ ಎಷ್ಟು ದೊಡ್ಡವರೋ ವ್ಯಕ್ತಿಯಾಗಿಯೂ ಅಷ್ಟೇ ದೊಡ್ಡವರು. ಕನ್ನಡದ ಮಹಿಳಾ ಸಾಹಿತ್ಯದಲ್ಲಿ ಅವರಿಗೆ ಮಹತ್ವದ ಸ್ಥಾನವಿದೆ. ಇದನ್ನೆಲ್ಲ ಈ ಪುಸ್ತಕದಲ್ಲಿ ಗುರುತಿಸಿ, ಗೌರವಿಸುವ ನಮ್ರ ಪ್ರಯತ್ನವನ್ನು ಮಾಡಿದ್ದೇನೆ. ಈ ಪುಸ್ತಕವನ್ನು ಓದಿದ ನಂತರ ಓದುಗರು ನನ್ನ ಮಾತನ್ನು ಒಪ್ಪುವರೆಂಬ ನಂಬಿಕೆಯಿದೆ. ಪುಸ್ತಕವನ್ನು ಓದಿದವರಿಗೆ ಈ ಮಾತುಗಳಲ್ಲಿರುವ ತಥ್ಯ ಮನದಟ್ಟಾಗುವುದರಲ್ಲಿ ಸಂದೇಹವಿಲ್ಲ.
ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಕೊಡಲಾರಂಭಿಸಿರುವ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಯ ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಅಂಕುರಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರಿಗೆ ಸಲ್ಲುತ್ತದೆ. ವಿಕಾಸರು ಬಹಳ ಉತ್ಸಾಹದಿಂದ ಈ ಪುಸ್ತಕದ ರೂಪುರೇಷೆಗಳನ್ನು ಸಿದ್ಧಪಡಿಸಿದರೆ, ಪಟ್ಟಾಜೆಯವರು ಐದೇ ತಿಂಗಳುಗಳಲ್ಲಿ ಸುನಂದಾ ಅವರ ಸಮಗ್ರ ಸಾಹಿತ್ಯವನ್ನು ಆಮೂಲಾಗ್ರವಾಗಿ ಓದಿ, ಧಾರವಾಡ ಭಾಷೆಯ ಬನಿಯನ್ನು ಅರಿತು, ಅಚ್ಚುಕಟ್ಟಾಗಿ ಮತ್ತು ವಿಮರ್ಶಾತ್ಮಕವಾಗಿ ಪುಸ್ತಕವನ್ನು ಸಿದ್ಧಪಡಿಸಿದ್ದು ಶ್ಲಾಘನೀಯ. ಅವರ ಉತ್ಸಾಹ, ಆತ್ಮವಿಶ್ವಾಸ ಉಳಿದವರೆಲ್ಲರಿಗೂ ಮಾದರಿ.
ಕನ್ನಡದ ಮಹತ್ವದ ಸಾಹಿತಿಗಳ ಸಾಲಿನಲ್ಲಿ ನಿಲ್ಲಬಲ್ಲ ಸುನಂದಾ ಅವರ ಕೃತಿಗಳತ್ತ ಓದುಗರ ಗಮನವನ್ನು ಸೆಳೆಯುವ ಉದ್ದೇಶವು ಈ ಪುಸ್ತಕದ ಮೂಲಕ ಫಲಿಸಿದೆ. ಯುವ ಓದುಗರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾದ ‘ಸುನಂದಾ ಬೆಳಗಾಂವಕರ ವ್ಯಕ್ತಿತ್ವ – ಸಾಹಿತ್ಯ’ ಎಂಬ ಪುಸ್ತಕವು ಅವರ ಸಮಗ್ರ ಸಾಹಿತ್ಯವನ್ನು ಓದಲು ಪ್ರೇರಣೆಯನ್ನು ನೀಡುವಂತಾಗಲಿ. ಅವರ ಕೃತಿಗಳು ಮರುಓದು ಮತ್ತು ಚರ್ಚೆಯ ಮೂಲಕ ಮುನ್ನೆಲೆಗೆ ಬರುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಪುಸ್ತಕ ವಿಮರ್ಶಕಿ : ಮಾಲತಿ ಪಟ್ಟಣಶೆಟ್ಟಿ
ಲೇಖಕ ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.