ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೆವಡಿ ಗ್ರಾಮದ ಯುವ ಕವಯತ್ರಿ ಮಧು ಕಾರಗಿ ಇವರು ಭರವಸೆಯನ್ನು ಮೂಡಿಸುವ ಯುವ ಕವಯತ್ರಿ. ಹುಟ್ಟಿನಿಂದಲೇ ಶ್ರವಣಶಕ್ತಿಗಳನ್ನು ಕಳೆದುಕೊಂಡು, ದೊಡ್ಡಮ್ಮ ಮಹದೇವನಮ್ಮವರ ಆಸರೆಯಲ್ಲಿ ಬೆಳೆದ ಅವರು ಸಾಹಿತ್ಯ ವಲಯದಲ್ಲಿ ಮಿನುಗುತ್ತಿರುವ ಜ್ಯೋತಿ. ಚೊಚ್ಚಲ ಕವನ ಸಂಕಲನ ‘ಕನಸುಗಳ ಚೀಲ’ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2021ನೇ ಸಾಲಿನ ‘ಜ್ಯೋತಿ ಪುರಸ್ಕಾರ’ ದತ್ತಿ ಪ್ರಶಸ್ತಿಗೆ ಭಾಜನರಾದ ಪ್ರತಿಭಾವಂತೆ. ಹಾವೇರಿ ಜಿಲ್ಲೆಯ ಕೆರೆಮತ್ತಿಹಳ್ಳಿಯಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನವನ್ನು ಮಾಡುವುದರ ಜೊತೆಗೆ ಅವರ ಎರಡನೇ ಕೃತಿ ‘ತೆರೆಯದ ಬಾಗಿಲು’ ಕವನ ಸಂಕಲನದ ಬಿಡುಗಡೆಯಾಗಿ ಸಾಹಿತ್ಯಾಸಕ್ತರ ಕೈ ಸೇರಿದ್ದು ಸಂತಸದ ವಿಚಾರವಾಗಿದೆ.
ನಾವು
ಭಾವನೆಗಳ ಬೀದಿಯಲ್ಲಿ
ಅನಿರೀಕ್ಷತವಾಗಿ ಭೇಟಿಯಾಗುತ್ತಿದ್ದೆವು.
ಶಿಲಾಯುಗದ ಅವಶೇಷಗಳಿಂದ
ಕಲಿಯುಗದ ವಿದ್ಯುನ್ಮಾನದವರೆಗೂ
ಚರ್ಚೆಗಳು ಜರಗುತ್ತಿದ್ದವು.
ನಮ್ಮ ಕಣ್ಣಿಗೆ ಕಾಣುವ ಐತಿಹಾಸಿಕ ವಸ್ತು ವಿಷಯಗಳು, ವೈಯಕ್ತಿಕ ನೋವು, ನಲಿವುಗಳ, ಸಿಹಿಕಹಿ ನೆನಪುಗಳು ಅನಿರೀಕ್ಷಿತವಾಗಿ ಇನ್ನೆಲ್ಲೋ ಕಂಡಾಗ ಅವುಗಳು ಕವಿಯ ಮನದಲ್ಲಿ, ಸೂಕ್ತ ಪದಗಳೊಂದಿಗೆ ಹೊಂದಿಕೊಂಡು ರೂಪು ತಾಳುವಾಗ ಹುಟ್ಟುವ ಭಾವನೆಗಳು ಕವಿತೆಯ ಜನನಕ್ಕೆ ಕಾರಣವಾಗುತ್ತವೆ.
ಹೌದು
ಹೃದಯ ಈಗಲೂ ಕೂಗಿ ಹೇಳುತ್ತದೆ
ನೀನಿಲ್ಲದೆ ನಾ ಅಪೂರ್ಣವೆಂದು
ಹೇಳಲಿ ಬಿಡು ಗೆಳೆಯ
ನಾನಿಲ್ಲವಾದಾಗ ಅದು ನಿಲ್ಲಿಸಿಬಿಡುತ್ತದೆ.
ನೀನಿದ್ದು ನಾನಿಲ್ಲದಾದಾಗಲೇ
ನನಗೆ ನಿಜವಾದ ತೃಪ್ತಿ.
ನನಗೋ ಆಗ ಮುತ್ತೈದೆಯ ಸಾವು!
ಜಗದ ಕಣ್ಣಿಗೆ ಸೌಭಾಗ್ಯವತಿ..
ನಾನಾಗ ಸೌಭಾಗ್ಯವತಿ!
ಒಂಟಿತನ ಕಾಡುವ ಹೃದಯದಲ್ಲಿ ಜೊತೆಗಾರನಿಲ್ಲದೆ ಪರಿಪೂರ್ಣತೆ ಇಲ್ಲ ಎಂದು ಆಡಿಕೊಳ್ಳುವ ಬಾಯಿಗಳಿಗೆ ಬೀಗ ಹಾಕುವುದಕ್ಕಾದರೂ ನನ್ನ ಬಾಳಿಗೆ ಬಾ ಎನ್ನುವ ಕೋರಿಕೆಯು ಮನಮುಟ್ಟುವಂತಿದೆ. ಇದ್ದೂ ಸತ್ತಂತೆ ಬಾಳುವದಕ್ಕಿಂತ, ನೀನು ನನ್ನ ಬದುಕಲ್ಲಿ ಬಂದರೆ ನಾನೆ ಮೊದಲು ಹೋಗುವೆ. ಆಗಲಾದರೂ ನನ್ನನ್ನು ಸೌಭಾಗ್ಯವತಿ ಎನ್ನುವರು ಎಂಬ ನುಡಿಯಲ್ಲಿ ವಿಷಾದವು ಸ್ಥಾಯಿ ಭಾವವಾಗಿದೆ. ಇವುಗಳು
ಮಾತುಗಳನ್ನು ಮೂಕವಾಗಿಸುವ ಆರ್ದ್ರ ಭಾವದ ಸಾಲುಗಳಾಗಿವೆ.
ಕತ್ತಲಾದರೂ
ಕಣ್ಣಿಗೆ ಕಾಣುವುದೆಲ್ಲ ಸತ್ಯವೇ
ಎಂದು ವಾದಿಸುವ ವ್ಯರ್ಥ ಪ್ರಯತ್ನ ಬಿಟ್ಟಿರುವೆ.
ಕಾರಣ?
ಬೆಳಕಿನ ಭ್ರಮೆಗೊಳಗಾದವರೊಂದಿಗೆ
ಸತ್ಯದ ಸಾಮೀಪ್ಯ ಸ್ವಪ್ನದ ಮಾತು!
ಬೆಳಕಿನಲ್ಲಿ ನಡೆದ ಕಹಿ ಘಟನೆಗಳನ್ನು ಕಂಡವರೇ ಕತ್ತಲಲ್ಲಿ ಸಾಗುವಾಗ, ನಾನು ಕತ್ತಲ್ಲಲ್ಲೇ ಇದ್ದು ಸತ್ಯವನ್ನು ಕುರಿತು ಮೊಂಡು ವಾದವನ್ನು ಮಾಡಿ ಸಾಧಿಸುವುದಾದರೂ ಏನು ? ಬೆಳಕು ಕಂಡವರೆಲ್ಲ ಸತ್ಯ ಹರಿಚಂದ್ರರೇ ? ನಾನು ಕತ್ತಲೊಳಗಿದ್ದರೂ ನೆಮ್ಮದಿಯಿಂದ ಇದ್ದೇನೆ ಎಂಬ ಆಶಯವನ್ನು ಬಿತ್ತರಿಸುವ ಕತ್ತಲು ಬೆಳಕಿನ ಸಂವಾದದ ಕವಿತೆ ಮೆಚ್ಚುವಂತದೆ.
ತಂಗಾಳಿ ಬೀಸಿದರೆ
ಸುಮ್ಮ ಸುಮ್ಮನೆ ನಗುತ್ತದೆ
ಒಲವಾಗಿದೆ ಈ ಧರಗೆ
ವಿಸ್ಮಯ ಕಣ್ತುಂಬಿಕೊಳ್ಳಲು
ನಿತ್ಯ ಹಾಜರಿ ನಾನು
ಸೃಷ್ಟಿ ಸೊಬಗಿನ ಸಭೆಗೆ !
ಸೃಷ್ಟಿ ಮತ್ತು ಸೌಂದರ್ಯದ ವಿಸ್ಮಯಗಳನ್ನು ಬಣ್ಣಿಸಲು ನಿಸರ್ಗದ ಮುಂದೆ ನಿತ್ಯ ಹಾಜರಿ ಹಾಕಲೇ ಬೇಕು. ಪ್ರಕೃತಿಯ ಪಾಠವನ್ನು ಕಣ್ಣನಗಳಲ್ಲಿ ತುಂಬಿಕೊಂಡು ತಂಗಾಳಿಯಲ್ಲಿ ಮಿಂದೇಳುತ, ಮನಸ್ಸಿಗೂ ಹೃದಯಕ್ಕೂ ಒಲವನ್ನು ಬೆಸೆಯುತ್ತ ಸಾಗಿದಾಗ ಸಂತೃಪ್ತಿಯ ಭಾವಲಹರಿ ಉದ್ಭವಿಸುವದು ಎಂಬ ಮಾತನ್ನು ಒಪ್ಪಲೇ ಬೇಕು.
ನವಮಾಸ
ಹೊರದಿದ್ದರೇನಂತೆ?
ನೋವಿನಲಿ ಹೆರದಿದ್ದರೇನಂತೆ?
ತನ್ನ ನೋವನು ಮರೆತು
ಪ್ರೀತಿ ಅಕ್ಕರೆಯ ಹಂಚುವ
ಯಾವ ಹೆಣ್ಣೂ ಬಂಜೆಯಲ್ಲ
ಹೆರಲಾರದ ಹೆಣ್ಣುಮಕ್ಕಳಿಗೆ ಬಂಜೆ ಎಂಬ ಮುದ್ರೆ ಒತ್ತಿ ದೂರ ಮಾಡುವ ಕ್ರೌರ್ಯ ನಿಜಕ್ಕೂ ಅಕ್ಷಮ್ಯ. ಮಕ್ಕಳಿಲ್ಲದ ಶಿಕ್ಷಕಿಯರು ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಪ್ರೀತಿವಾತ್ಸಲ್ಯದಿಂದ ಕಲಿಸಿ ವಿದ್ಯಾಮಾತೆ ಎನಿಸಿಕೊಳ್ಳುವುದಿಲ್ಲವೇ ? ಅನಾಥ ಮಕ್ಕಳಿಗೆ ಮಾತೃ ವಾತ್ಸಲ್ಯವನ್ನು ಕೊಟ್ಟು ಹೆತ್ತವರಿಗಿಂತಲೂ ಮಿಗಿಲೆನಿಸಿಕೊಂಡವರಿಲ್ಲವೇ ? ಪಶು ಪಕ್ಷಿಗಳು ಮತ್ತು ಮರಗಿಡಗಳನ್ನು ಪ್ರೀತಿಯಿಂದ ಪೋಷಿಸಿ ಪ್ರಕೃತಿಗೆ ಮಾತೆ ಎನಿಸಿಕೊಂಡವರಿಲ್ಲವೇ ? ಆದ್ದರಿಂದ ಯಾವ ಹೆಣ್ಣು ಬಂಜೆಯಲ್ಲ ಎನ್ನುವ ನೊಂದ ಹೆಣ್ಣಿನ ಪರವಾದ ನುಡಿಗೆ ನಾವೂ ದನಿಗೂಡಿಸಬೇಕಿದೆ.
ಮೌನವೆಂಬುದು
ಪ್ರಜ್ಞಾವಂತಿಕೆಯ
ಪ್ರತಿರೂಪವೋ ವಿನಃ
ಪಾಂಡಿತ್ಯದ ಅಭಾವವಲ್ಲ..
ಮೌನವೆನ್ನುವದು ಪಾಂಡಿತ್ಯವಲ್ಲ. ದುರಹಂಕಾರವಲ್ಲ. ಮೇಧಾವಿತ್ವವೂ ಅಲ್ಲ; ತಾಳ್ಮೆಯ ಪ್ರತಿರೂಪ. ಉದ್ವೇಗಕ್ಕೆ ಒಳಗಾಗದೆ ಮೌನದಿಂದ ಪ್ರೀತಿಗಳಿಸುವ ಶಕ್ತಿ. ಹಾಗೆಂದು ಸುಮ್ಮನಿದ್ದು ಸ್ವರ್ಗ ನುಂಗುವರು ಎನ್ನುವ ಹಂಗಿನ ಮಾತು ನಮಗೇಕೆ ?
ಆವೇಶಕ್ಕೆ ಒಳಗಾಗದೆ, ಅವಮಾನಗಳಿಗೆ ಅಂಜದೆ ಯುಕ್ತಿಯಿಂದ ಗೆಲ್ಲುವ ಸಾಮರ್ಥ್ಯ ಮೌನಕ್ಕೆ ಇದೆ ಎಂದು ತಿಳಿಸುವ ಕವಿತೆಯು ವಿಶಿಷ್ಟ ಒಳನೋಟವನ್ನು ನೀಡುತ್ತದೆ.
ರಸಕವಿಗಳು ಅಪರಿಮಿತ ಚೆಲುವನ್ನೆಲ್ಲ
ಹೃದಯದಾಳದಿಂದ ಬಣ್ಣಿಸಿ
ಕವಿತೆ ಬರೆಯತೊಡಗಿದರು
ಬರೆಯುತ್ತಾ ಬರೆಯುತ್ತಾ
ಹೋದಂತೆ ಇವರೋ
ರವಿಕಾಣದ್ದನ್ನು ಕವಿ ಕಂಡ
ಎಂಬ ಬಿರುದನ್ನು ಧರಿಸಿದರು
ಎಷ್ಟು ವಿಚಿತ್ರವಲ್ಲವೇ
ಕವಯತ್ರಿಯಾಗಿದ್ದುಕೊಂಡು ಕವಿಗಳನ್ನು ಹಾಸ್ಯ ಮಾಡುವದು ಖಂಡನೀಯವಲ್ಲ. ಆದರೆ ಈ ವ್ಯಂಗ್ಯದ ಅಗತ್ಯವೇನು ಎಂಬುದು ಕುತೂಹಲಕಾರಿಯಾಗಿದೆ. ರವಿ ತನ್ನ ಕಾಯಕದ ಬಗ್ಗೆ ಮಾತ್ರ ಗಮನಕೊಟ್ಟ, ತನ್ನ ಬೆನ್ನು ತಾನು ತಟ್ಟಿಕೊಳ್ಳುವಂಥ ವಿಚಾರ ಮಾಡಲಿಲ್ಲ.
ರವಿಯ ಕಿರಣಗಳು ಬೀಳುವ ಸೂಕ್ಷ್ಮ ಸ್ಥಳಗಳು ಗಮನಿಸಿದ ಕವಿಯು ಸೂರ್ಯನ ನಿಷ್ಕಾಮ ಕರ್ಮವನ್ನು ಬಣ್ಣಿಸಲು ಹೋಗಿ ತನ್ನ ಕಾಯಕವನ್ನು ಮರೆತ. ರವಿ ಕಾಣದ್ದನ್ನು ಕವಿ ಬಣ್ಣಿಸಿದ ಎಂಬ ಬಿರುದು ಪಡೆದು ಖಾಲಿ ಚೀಲದಲ್ಲಿ ಪದಗಳ ಮೂಟೆ ಕಟ್ಟಿಕೊಂಡು ತಿರುಗಿದ. ನುಡಿಯ ಕೊನೆಯಲ್ಲಿ ವಿಚಿತ್ರ ಎಂಬ ಪದ ಸತ್ಯ ಅನಿಸಿತು. ಏಕೆಂದರೆ ನಿಷ್ಠೆಯಿಂದ ನಡೆದವರಿಗೆ ಅವಮಾನ ನೋವು ಜಾಸ್ತಿ. ಏನೂ ಮಾಡದೆ ಬೇರೆಯವರ ಎಂಜಲು ಉಂಡು ಎದ್ದವರು ಮಾತ್ರ ಈಗೀಗ ಗೌರವಕ್ಕೆ ಪಾತ್ರರಾಗಿದ್ದಾರೆ ಎಂಬುದು ದುಃಖ ಸತ್ಯ.
ಈ ದಿನ ಯಾವುದೂ ಇಲ್ಲ
ಆದರೆ ಅದೆಲ್ಲವೂ ಇದ್ದಲ್ಲಿಯೇ ಇದೆ.
ಖಾಲಿ ಕ್ಲಾಸ್ ರೂಮ್ ಗಳು
ಧೂಳು ಕುಳಿತ ಲೈಬ್ರರಿಗಳು
ಭಣ ಭಣವೆನ್ನುವ ಆಟದ ಮೈದಾನುಗಳು
ಇಲ್ಲಿಯೂ ಹಾಗೆಯೇ,
ಖಾಲಿತನದ ಮನಸ್ಸುಗಳು.
ಕಲಿಯುವಾಗ ಇರುವ ಆಸಕ್ತಿ, ಗೌರವ, ಭಕ್ತಿ, ಕಲಿತ ಮೇಲೆ ಯಾಕಿಲ್ಲ ಎನ್ನುವ ಸಾಲುಗಳು ಈಗಿನ ವಾಸ್ತವಗಳನ್ನು ತಿಳಿಸುವಂತಿದೆ.
ಚಿಕ್ಕವರಿಂದ ದೊಡ್ಡವರು ಆಗುವ ತನಕ ಶಾಲೆ ಕಾಲೇಜುಗಳು ಆಟದ ಮೈದಾನಗಳಲ್ಲಿಯೆ ಆಸಕ್ತಿ ಹೆಚ್ಚಾಗಿರುತ್ತದೆ. ರೆಕ್ಕೆ ಬಂದ ಹಕ್ಕಿ ತನ್ನವರನ್ನೇ ಬಿಟ್ಟು ಹಾರಲು ಶುರುಮಾಡುತ್ತದೆ. ಬದುಕು ಎಂದರೆ ಹಾಗೆಯೇ. ನಿಂತ ನೀರಾದರೆ ಕೆಡುತ್ತದೆ. ಕೆಟ್ಟ ವಾಸನೆಯನ್ನು ಬೀರುತ್ತದೆ ಅಥವಾ ಬತ್ತಿ ಹೋಗುತ್ತದೆ. ಹರಿಯುವ ನದಿಯಾದರೆ ಹತ್ತೂರಿನ ದಾಹವನ್ನು ನೀಗಿಸುತ್ತದೆ. ಅದೇ ತರ ಮಾನವಜೀವಿಯ ಪಯಣ ಕೂಡ. ಹುಟ್ಟುವಾಗ ಏನನ್ನೂ ತರಲಿಲ್ಲ, ಹೋಗುವಾಗ ಏನೂ ಒಯ್ಯುವುದಿಲ್ಲ. ಬಿಟ್ಟ ಸ್ಥಳಗಳನ್ನು ತುಂಬುವವರಿಗೆ ಕೊನೆಗೂ ಉಳಿಯುವದು ಖಾಲಿತನ ಮಾತ್ರ.
ಕನಸುಗಳ ಕಛೇರಿಯ
ಮುಖ್ಯ ಅಧಿಕಾರಿಗಳೇ
ಬದುಕೆಂಬ ಗೆಳೆಯನ ಮೇಲೆ
ತುಂಬು ವಿಶ್ವಾಸವಿರಲಿ!
ಕನಸುಗಳ ಕಛೇರಿಯಲ್ಲಿ ಮುಖ್ಯ ಅಧಿಕಾರಿಗಳು ಭವಿಷ್ಯದ ದೃಶ್ಯಗಳನ್ನು ತೋರಿಸುವಾಗ, ಬದುಕು ಎಂಬ ಗೆಳೆಯ ತೆಗೆದುಕೊಂಡ ನಿರ್ಧಾರದ ಮೇಲೆ ಕನಸು ನನಸಾಗಿಸುವ ಯೋಚನೆಗೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿದ್ದರೆ ಗೆಲುವು ಖಚಿತ ಎನ್ನುವ ನಿಮ್ಮ ನುಡಿಗಳು ಬದುಕಿನ ಪ್ರಾಯೋಗಿಕತೆಯನ್ನು ಅರ್ಥ ಮಾಡಿಸುತ್ತವೆ.
ಮಧು ಕಾರಗಿ ಇವರ ‘ತೆರೆಯದ ಬಾಗಿಲು’ ಸಂಕಲನದ ಅರವತ್ತೆರಡು ಕವಿತೆಗಳು, ಮೌನ-ವಿರಹದ ಭಾವನೆಗಳು, ಪ್ರಕೃತಿಯ ಸೊಬಗು ಮುಂತಾದ ಪರಿಚಿತ ವಿಷಯಗಳನ್ನು ಎತ್ತಿಕೊಂಡು ರಚಿಸಿದ ಪ್ರಬುದ್ಧ ಕವಿತೆಗಳಲ್ಲಿ ಆತ್ಮಾನುಬಂಧವಿದೆ. ಇದು ಓದುಗರ ಹೃದಯದ ಬಾಗಿಲನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.
ಸಂತೋಷ ವಿ. ಪಿಶೆ ಹಾವೇರಿ