124 ಪುಟಗಳ ಈ ಕೃತಿಯಲ್ಲಿ ಮೂರು ಪ್ರತಿಭೆಗಳು ಮುಪ್ಪುರಿಗೊಂಡಿವೆ : 1. ಮಲೆಯಾಳದ ಸುಪ್ರಸಿದ್ಧ ಕಥೆಗಾರ ಎಂ. ಮುಕುಂದನ್, 2. ತಮ್ಮ ಚಲನಚಿತ್ರ ನಿರ್ದೇಶನ, ಪತ್ರಿಕೋದ್ಯಮ ಮತ್ತು ಬರಹಗಳ ಮೂಲಕ ಸಾಕಷ್ಟು ಪ್ರಸಿದ್ಧಿಗೆ ಬಂದ ಇ.ಎಂ.ಅಶ್ರಫ್, 3. ಇಪ್ಪತ್ತಕ್ಕೂ ಹೆಚ್ಚು ಮಲೆಯಾಳದ ಒಳ್ಳೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ. ಪ್ರಭಾಕರನ್.
‘ಯಮುನಾ ನದಿಯ ತೀರಗಳಲ್ಲಿ’ ಎಂಬ ಈ ಕೃತಿ ಎಂ. ಮುಕುಂದನ್ ಇವರು ಕೆಲವೊಮ್ಮೆ ತಮ್ಮ ಬಿಡುಬೀಸಾದ ನಿರೂಪಣಾ ಶೈಲಿಯಿಂದ ಓದುಗರನ್ನು ಕೆರಳಿಸಿದ ಕಾದಂಬರಿಗಳಲ್ಲಿ ಪ್ರಸ್ತಾಪಿಸಲ್ಪಟ್ಟ ವಿಚಾರಗಳ ಬಗ್ಗೆ ಇದೆ. ಇಲ್ಲಿ ಮುಖ್ಯವಾಗಿ ಚರ್ಚಿಸಲ್ಪಟ್ಟ ಕೆಲವು ಕೃತಿಗಳು ಕನ್ನಡಕ್ಕೆ ಬಂದಿಲ್ಲದಿರುವುದು ಒಂದು ಸಣ್ಣ ಕೊರತೆಯೆನ್ನಿಸಿದರೂ ಈಗಾಗಲೇ ಕನ್ನಡಕ್ಕೆ ಬಂದಿರುವ ಅವರ ಕಾದಂಬರಿಗಳಾದ ‘ಮಯ್ಯಳಿ ನದಿಯ ತೀರದಲ್ಲಿ’, ‘ದೇವರ ವಿಕರಾಳಗಳು’ ಮತ್ತು ಅನೇಕ ಸಣ್ಣ ಕಥೆಗಳ ಮೂಲಕ ಅವರು ಕನ್ನಡದ ಓದುಗರಿಗೆ ಸಾಕಷ್ಟು ಪರಿಚಿತರಾಗಿದ್ದಾರೆ ಅನ್ನುವ ಸಮಾಧಾನವೂ ಇದೆ.
ಅಶ್ರಫ್ ಒಳ್ಳೆಯ ಸೃಜನಶೀಲ ಚಿಂತಕರು. ತಮ್ಮ ಸಿನಿಮಾಗಳಿಗೆ ಸ್ವತಃ ಅವರೇ ಚಿತ್ರಕಥೆಗಳನ್ನು ಬರೆಯುತ್ತಾರೆ. ಮುಕುಂದನ್ ಬಗ್ಗೆ ಅವರು ಒಂದು ಡಾಕ್ಯುಮೆಂಟರಿ ಕೂಡಾ ಮಾಡಿದ್ದಾರೆ. ಅದರಲ್ಲಿ ಅವರು ಮುಕುಂದನ್ ಕಾದಂಬರಿಗಳ ಪಾತ್ರಗಳ ಅಧ್ಯಯನ ಮಾಡಿ ಒಂದು ವಿಶಿಷ್ಟ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಅಂದರೆ ಅವರ ಕಾದಂಬರಿಗಳ ಮುಖ್ಯ ಪಾತ್ರಗಳು ತಮ್ಮ ಸೃಷ್ಟಿಕರ್ತನನ್ನು ಭೇಟಿಯಾಗಿ ತಮ್ಮ ಸಂತೋಷ-ದುಃಖ-ದುಮ್ಮಾನಗಳನ್ನು ವ್ಯಕ್ತಪಡಿಸುವ ಹಾಗೆ-ಓದುಗರು ತಮ್ಮನ್ನು ಹೇಗೆ ಸ್ವೀಕರಿಸಿದ್ದಾರೆ, ತಮ್ಮ ಜತೆಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆ, ತಮ್ಮ ಇಂದಿನ ಪರಿಸ್ಥಿತಿ ಏನು ಎಂಬುದನ್ನೆಲ್ಲ ನಿವೇದಿಸಿಕೊಳ್ಳುವ ಹಾಗೆ ವಿವರಣೆಗಳಿವೆ. ‘ಯಮುನಾ ನದಿಯ ತೀರಗಳಲ್ಲಿ’ ಅನ್ನುವ ಈ ಕೃತಿಯಲ್ಲಿ ಅವರು ಮುಕುಂದನ್ ಅವರ ಜತೆಗೂಡಿ, ನಾಲ್ಕು ದಶಕಗಳ ಹಿಂದೆ ಮುಕುಂದನ್ ದೆಹಲಿಯ ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ಕೆಲಸದಲ್ಲಿದ್ದ ಕಾಲದಲ್ಲಿ ಬರೆದಿದ್ದ ‘ದೆಹಲಿ’ ಎಂಬ ಕಥಾಸಂಕಲನ (1969), ‘ಹರಿದ್ವಾರಿಲ್ ಮಣಿಗಳ್ ಮುಳಙ್ಙುನ್ನು’ ಎಂಬ ಕಾದಂಬರಿ (1974), ಚಾಲಕನ್, ಇಂದ್ರಿಯಙ್ಙಳಿಲ್ ಶೈತ್ಯಂ’ ಮೊದಲಾದ ಕೃತಿಗಳ ರಚನೆಯ ಬಗ್ಗೆ ಮತ್ತು ನಾಲ್ಕು ದಶಕಗಳ ನಂತರ ಇಂದು ಅವುಗಳು ಸೃಷ್ಟಿಯಾದ ಸ್ಥಳಗಳಿಗೆ ಹೋದಾಗ ಅವರಿಗೆ ಏನನ್ನಿಸುತ್ತದೆ ಅನ್ನುವುದರ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯುತ್ತಾರೆ. ಇದು ಒಂದು ಸಾಹಿತ್ಯ ಸಂಚಾರವೆಂದು ಅಶ್ರಫ್ ಅವರೇ ಹೇಳಿಕೊಂಡಿದ್ದಾರೆ. ಕಾದಂಬರಿಕಾರರಿಗೆ ಇದು ಒಂದು ಮರುಪಯಣ ಹೇಗೋ ಅವರ ಎಲ್ಲ ಕಾದಂಬರಿಗಳನ್ನು ಓದಿಕೊಂಡ ಅಶ್ರಫರಿಗೂ ಇದು ಒಂದು ಮರುಪಯಣ. ತಮ್ಮ ವೈಯಕ್ತಿಕ ಅನುಭವಗಳನ್ನು ಅದ್ಭುತ ಕಾಲ್ಪನಿಕ ವಿವರಗಳ ಜತೆಗೆ ಓದುಗರಿಗೆ ದಾಟಿಸಬಲ್ಲ ಮುಕುಂದನ್ ಅವರ ದೈತ್ಯ ಪ್ರತಿಭೆ ಇಲ್ಲಿ ಅನಾವರಣಗೊಂಡಿದೆ.
ಮಾಹೆ ಎಂಬ ಫ್ರೆಂಚ್ ಕಾಲನಿಯಾಗಿದ್ದ ಒಂದು ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದ ಮುಕುಂದನ್ ಅಲ್ಲಿದ್ದ ಫ್ರೆಂಚ್ ಶಾಲೆಯಲ್ಲಿ ಫ್ರೆಂಚ್ ಭಾಷೆ ಕಲಿತರು. ಬಾಲ್ಯವು ಬಡತನದಿಂದ ಕೂಡಿತ್ತು. ವಿದ್ಯಾಭ್ಯಾಸದ ನಂತರ ಕೆಲಸ ಹುಡುಕುತ್ತ ದೆಹಲಿಗೆ ಹೋದರು.ಯೌವನಕಾಲದಲ್ಲಿ ಕಾಮೂ, ಕಾಫ್ಕಾ, ಸಾರ್ತ್ರೆ ಮೊದಲಾದವರ ಕಾದಂಬರಿಗಳನ್ನು ಓದಿದರು. ಕಿರ್ಕೆಗಾರ್ಡ್ ಪ್ರತಿಪಾದಿಸಿದ ಅಸ್ತಿತ್ವವಾದಿ ಸಿದ್ಧಾಂತವನ್ನು ಓದಿ ಅದರಿಂದ ಪ್ರಭಾವಿತರಾದರು. ಈ ಜಗತ್ತಿನಲ್ಲಿ ಮನುಷ್ಯನ ಬದುಕಿಗೊಂದು ಅರ್ಥವಿಲ್ಲ, ಗುರಿಯಿಲ್ಲ. ಮನುಷ್ಯ ಸದಾ ಏಕಾಂಗಿ. ಪೂರ್ವನಿರ್ಧರಿತ ವಿಧಿ ಎಂಬುದಿಲ್ಲ. ಸಾರ್ವತ್ರಿಕ ಸತ್ಯ ಅನ್ನುವುದು ಇಲ್ಲ. ಅನುಭವಗಳಿಗೆ ಅಧಿಕೃತತೆ ಬೇಕೆಂದರೆ ಅದು ವ್ಯಕ್ತಿನಿಷ್ಠ ಅನುಭವವೇ ಆಗಿರಬೇಕು. ಸಮಾಜವು ಹಾಕಿದ ನಿಯಮಗಳನ್ನು ಅನುಸರಿಸಬೇಕಾದ ಅಗತ್ಯವಿಲ್ಲ. ಮನುಷ್ಯನಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆದರೆ ಮಾಡಿಕೊಂಡ ಆಯ್ಕೆಯ ಬಗ್ಗೆ ಜವಾಬ್ದಾರಿಯೂ ಇದೆ- ಎಂಬೆಲ್ಲ ವಿಚಾರಗಳು ಮುಕುಂದನ್ ಅವರ ಆರಂಭದ ಬರವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರಿದವು. ಆದ್ದರಿಂದಲೇ ಅವರ ಮೊದಲ ಕಾದಂಬರಿಗಳ ನಾಯಕ ತನ್ನ ದಾರಿಯನ್ನು ತಾನೇ ಆಯ್ದುಕೊಳ್ಳುತ್ತಾನೆ. ಭೌತಿಕ ಬದುಕಿನ ವಿಚಾರದಲ್ಲಿ ಗಡ್ಡ-ಕೂದಲುಗಳನ್ನು ಬೆಳೆಸಿಕೊಳ್ಳುವುದು, ನೀಟಾಗಿ ಡ್ರೆಸ್ ಮಾಡಿಕೊಳ್ಳದಿರುವುದು, ಯಾವುದೇ ರೀತಿಯ ಶಿಸ್ತಿಲ್ಲದ ಜೀವನ, ಸದಾ ನಶೆಯಲ್ಲಿರುವುದು, ಭಂಗಿ ಸೇದುವುದು- ಮದ್ಯಪಾನ ಇತ್ಯಾದಿ ಅವನ ಪ್ರಿಯ ಹವ್ಯಾಸಗಳು. ನಾನು ಯಾರು? ಅನ್ನುವ ಬದುಕಿನ ಅರ್ಥದ ಹುಡುಕಾಟವೇ ಅಲ್ಲಿ ಮುಖ್ಯ. ‘ದೆಹಲಿ’ ಕಥೆಯ ಅರವಿಂದನ್ ಮೂಲತಃ ಪ್ರತಿಭಾವಂತ ಚಿತ್ರ ಕಲಾವಿದ. ಆದರೆ ದೆಹಲಿಯಂಥ ಮಹಾನಗರದಲ್ಲಿ ಕಲೆಯನ್ನು ಕಲೆಯಾಗಿ ಸ್ವೀಕರಿಸುವ ಮನಸ್ಥಿತಿ ಯಾರಲ್ಲೂ ಇಲ್ಲವೆನ್ನುವುದನ್ನು ಅವನು ಮನಗಾಣುತ್ತಾನೆ. ಚಿತ್ರಕಲೆಯು ಅಲ್ಲಿ ಪ್ರತಿಷ್ಠೆಯ ವಿಚಾರವಾಗಿರುತ್ತದೆ. ಅಂಥ ಕಲಾವಿದರ ಮಧ್ಯೆ ಅರವಿಂದನ ಆಸೆಗಳು ಅರಳಿಕೊಳ್ಳುವುದಿಲ್ಲ.
‘ಹರಿದ್ವಾರಿಲ್ ಮಣಿಗಳ್ ಮುಳಙ್ಙುನ್ನು’ ಕಾದಂಬರಿಯಲ್ಲಿ ಹರಿದ್ವಾರ ಎಂಬ ಮಾಂತ್ರಿಕ ಸ್ಥಳವು ತನಗೊಂದು ಹೊಸ ಬದುಕು ಕೊಟ್ಟೀತೆಂಬ ಆಶಯದಿಂದ ಕೆಲಸಕ್ಕೆ ಮೂರು ದಿನ ರಜ ಹಾಕಿ ರಮೇಶ್ ಪಣಿಕ್ಕರ್ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನು ಕಾಣುವ ಭಕ್ತಿಯ ಅಮಲು, ಗಂಗೆಯ ಸೇತುವೆಯನ್ನು ದಾಟಿ ಕಾಡನ್ನು ತಲುಪಿದಾಗ ಅಲ್ಲಿ ನಾಗಾಸಾಧುಗಳು, ಕಾಪಾಲಿಕರು ಮೊದಲಾದವರ ಒಂದು ಹೊಸ ಲೋಕ ಅವನಿಗೆ ಕಾಣಿಸುತ್ತದೆ. ಲೌಕಿಕಕ್ಕೆ ಮತ್ತೆ ಹಿಂದಿರುಗುವೆನೆಂದು ಎಣಿಸಿದ್ದ ರಮೇಶ್ ಪಣಿಕ್ಕರ್ ಅಲ್ಲೇ ಉಳಿಯುತ್ತಾನೆ. ಮುಕುಂದನ್ ಕೂಡಾ ಅಶ್ರಫ್ ಜತೆಗೆ ತಿರುಗಿ ಬರಲು ಇಷ್ಟಪಡುವುದಿಲ್ಲ ಅನ್ನುವುದು ಇಲ್ಲಿ ಗಮನಾರ್ಹ.
ತಮ್ಮ ‘ದೆಹಲಿ’ ಕಥೆಗಳಲ್ಲಿ ಮುಕುಂದನ್ ನಗರ ಜೀವನದ ಅನೇಕ ಹುಳುಕುಗಳನ್ನು ಅನಾವರಣಗೊಳಿಸುತ್ತಾರೆ. ಹಳ್ಳಿಯಲ್ಲಿ ಎಲ್ಲರಿಗೂ ಸಂಬಂಧಗಳ ಬಗ್ಗೆ ಇರುವ ಕಾಳಜಿ ನಗರಗಳಲ್ಲಿ ಇರುವುದಿಲ್ಲ ಅನ್ನುವುದನ್ನು ‘ಚಾಲಕನ್’ ಎಂಬ ಕಥೆಯಲ್ಲಿ ಕಾಣಬಹುದು. ‘ದೆಹಲಿ 81’ ಅನ್ನುವ ಕಥೆಯಲ್ಲಿ ನಗರವು ಹೇಗೆ ಸಂವೇದನಾ ಶೂನ್ಯವಾಗಿ ಬದಲಾಗಿದೆ ಅನ್ನುವುದನ್ನ ರಾಜಿಂದರ್ ಪಾಂಡೆ ಮೂಲಕ ಅವರು ಹೇಳುತ್ತಾರೆ. ರಾಜಿಂದರ್ ಪಾಂಡೆ, ಕಿಶೋರ್, ನಾನಕ್ ಚಂದ್ ಮತ್ತು ರಘುವೀರ್ ಎಂಬ ರೌಡಿಗಳು ಮಾಡುವ ಅತ್ಯಾಚಾರದ ಕೊನೆಯಲ್ಲಿ ಒಂದು ಮರಿ ಪಾರಿವಾಳವು ನಾನಕ್ ಚಂದ್ ತಲೆಯನ್ನು ಕುಟುಕುತ್ತದೆ. ಮನುಷ್ಯರ ಪ್ರತಿಕ್ರಿಯೆ ಇಲ್ಲದಿದ್ದರೂ ಪಾರಿವಾಳದ ಪ್ರತಿಕ್ರಿಯಿಸುತ್ತದೆ ಅನ್ನುವ ಸೂಚನೆ ಇಲ್ಲಿದೆ. ‘ಕ್ರಿಮಿನಲ್ ಟರ್ನ್ಡ್ ಸ್ಯಾಡಿಸ್ಟ್’ ಅನ್ನುವ ಕಥೆಯಲ್ಲಿ ಅಪರಾಧಗಳು ನಡೆಯುವಾಗ ಜನರು ಕೈಕಟ್ಟಿ ನೋಡುತ್ತ ಮೌನವಾಗಿ ನಿಲ್ಲುವ ಚಿತ್ರಣವಿದೆ.
ದೆಹಲಿಗೆ ಅಶ್ರಫ್ ಮತ್ತು ಮುಕುಂದನ್ ಹೋದಾಗ ನಗರವು ಹಿಂದಿನ ಯಾವ ಕುರುಹೂ ಇಲ್ಲದಂತೆ ಬದಲಾಗಿದೆ. ಎಲ್ಲ ಮೈದಾನಗಳೂ ಶ್ರೀಮಂತರ ವಿಹಾರ ಕೇಂದ್ರವಾಗಿವೆ. ‘ಯಮುನಾನದಿಯ ತೀರಗಳಲ್ಲಿ’ ಕೃತಿಯಲ್ಲಿ ಮುಕುಂದನ್ ಅವರ ಕಥೆ-ಕಾದಂಬರಿಗಳಿಂದ ತೆಗೆದ ಅನೇಕ ಉದ್ದರಣೆಗಳು ಮತ್ತು ಸನ್ನಿವೇಶಗಳಿವೆ. ಎಂ. ಮುಕುಂದನ್ ಅವರ ಸಾಹಿತ್ಯ ಕೃತಿಗಳ ಒಳನೋಟಗಳನ್ನು ಕೊಡುವ ಈ ಕೃತಿಯನ್ನು ಪ್ರಭಾಕರನ್ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಮರ್ಶಕಿ | ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.