ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ದಿನಾಂಕ 15 ನವೆಂಬರ್ 2024ರಂದು 12ನೇ ವರ್ಷದ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಅಂಗವಾಗಿ ‘ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣ ಭಾಷಣ ಮಾಡಿ ಪೂಂಜರ ಸಾಧನೆಗಳನ್ನು ಸ್ಮರಿಸಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ, ಯಕ್ಷಗಾನ ಅರ್ಥಧಾರಿ ಮತ್ತು ವಿಮರ್ಶಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ಕ್ಷೇತ್ರದಲ್ಲಿ ಸವ್ಯಸಾಚಿ ಎಂದು ಗುರುತಿಸಲ್ಪಟ್ಟ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿ, ಪ್ರಸಂಗಕರ್ತರಾಗಿ, ಹಿಮ್ಮೇಳ – ಮುಮ್ಮೇಳಗಳ ಸಮರ್ಥ ಕಲಾವಿದರಾಗಿ ಮೆರೆದವರು. ಅವರು ಯಕ್ಷರಂಗದಲ್ಲಿ ಸರ್ವ ಸಾಧ್ಯತೆಗಳನ್ನು ಕಂಡರಸಿದ ಶೋಧಕರು. ಮನೆಯನ್ನೇ ಗುರುಕುಲವನ್ನಾಗಿಸಿ ನೂರಾರು ಶಿಷ್ಯರ ಮೂಲಕ ತಮ್ಮ ಯೋಚನೆಗಳನ್ನೆಲ್ಲ ಸಾಕಾರಗೊಳಿಸಿದ ದೊಡ್ಡ ಸಾಹಸಿ. ಸುಮಾರು 32 ಕನ್ನಡ-ತುಳು ಪ್ರಸಂಗಗಳನ್ನು ಬರೆದ ಪೂಂಜರು ರಾಮಾಯಣದ ಉತ್ತರ ಕಾಂಡವನ್ನಾಧರಿಸಿ ರಚಿಸಿದ ‘ಮಾ ನಿಷಾದ’ ಎಂಬ ಮೌಲಿಕ ಪ್ರಸಂಗದ ಮೂಲಕ ಅಭಿನವ ವಾಲ್ಮೀಕಿ ಬಿರುದಿಗೆ ಪಾತ್ರರಾಗಿದ್ದಾರೆ. ಸ್ವತ: ಅತ್ಯುತ್ತಮ ವೇಷಧಾರಿಯಾಗಿ ಮತ್ತು ರಂಗ ನಿರ್ದೇಶಕರಾಗಿ ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಸಾರ್ವಕಾಲಿಕವಾಗಿ ಉಳಿಯುವುದು” ಎಂದವರು ನುಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ಪೂಂಜ ಉಪಸ್ಥಿತರಿದ್ದರು.
ಸಂಸ್ಮರಣಾ ಜ್ಯೋತಿ ಬೆಳಗಿ ಮಾತನಾಡಿದ ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಯವರು ಮಾತನಾಡಿ “ಕಳೆದ 12 ವರ್ಷಗಳಿಂದ ಯಕ್ಷಾಂಗಣ ಸಂಸ್ಥೆಯು ಪ್ರತಿ ನವೆಂಬರ್ ತಿಂಗಳಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಮೂಲಕ ಕನ್ನಡ ನುಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಇದರೊಂದಿಗೆ ಅಗಲಿದ ಶ್ರೇಷ್ಠ ಯಕ್ಷ ಚೇತನಗಳ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ” ಎಂದರು. ಈ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗ ಪ್ರಕಟಿಸಿದ ‘ಯಕ್ಷ ಪುರುಷೋತ್ತಮ’ ಸ್ಮೃತಿ ಸಂಪುಟವನ್ನು ದಿ. ಪೂಂಜರ ಸುಪುತ್ರ ಪರೀಕ್ಷಿತ್ ಪೂಂಜ ಮತ್ತು ಶಿಷ್ಯ ದೀವಿತ್ ಎಸ್.ಕೆ. ಪೆರಾಡಿ ಶರವು ಶಾಸ್ತ್ರಿಗಳ ಕೈಯಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು.
ಕೋಡಿಕಲ್ ಶ್ರೀ ಕುರು ಅಂಬಾ ರಾಜರಾಜೇಶ್ವರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಚೌಟ, ವಿಶ್ವಾಸ್ ಟ್ರಾನ್ಸ್ ಪೋರ್ಟ್ ಮತ್ತು ಆದರ್ಶ್ ಕನ್ಸ್ಟ್ರಕ್ಷನ್ಸ್ ಮಾಲಿಕ ಗೋಪಾಲ ಶೆಟ್ಟಿ ಅರಿಬೈಲು, ಮಹೇಶ್ ಮೋಟಾರ್ಸ್ ನ ಎ.ಕೆ. ಜಯರಾಮ ಶೇಖ, ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ ಕೂಡ್ಲು, ನಿವೃತ್ತ ಬ್ಯಾಂಕ್ ಅಧಿಕಾರಿ ರಾಜಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣದ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿ, ನಿವೇದಿತ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ವಂದಿಸಿದರು. ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಹರಿಶ್ಚಂದ್ರ ನಾಯಗ, ಪ್ರವೀಣ್ ರೈ ಎಲಿಯಾರ್ ಉಪಸ್ಥಿತರಿದ್ದರು.
ಸಪ್ತಾಹದ ಐದನೇ ದಿನದ ಕಾರ್ಯಕ್ರಮವಾಗಿ ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಇವರಿಂದ ದಿ. ಪುರುಷೋತ್ತಮ ಪೂಂಜ ವಿರಚಿತ ‘ಬಿನದ ದಾಂಪತ್ಯ’ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ರಾಜಾರಾಮ ಹೊಳ್ಳ ಕೈರಂಗಳ, ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ಹಿಮ್ಮೇಳದಲ್ಲಿ ಮಯೂರ್ ನಾಯಗ ಮಾಡೂರು, ಸ್ಕಂದ ಕೊನ್ನಾರ್, ಮನ್ವಿತ್ ಶೆಟ್ಟಿ ಇರಾ ಭಾಗವಹಿಸಿದರು. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ಗಣೇಶ್ ಕುಂಜತ್ತೂರು, ಆನಂದ ಸೌರ್ಕುಡೇಲು, ಹರಿಶ್ಚಂದ್ರ ನಾಯ್ಗ ಮಾಡೂರು, ಗಣೇಶ್ ಕಾವ ಅಂಡಾಲ ಬೀಡು, ಬಾಲಕೃಷ್ಣ ಶೆಟ್ಟಿ, ನವೀನ್ ಇರಾ, ದೀವಿತ್ ಎಸ್.ಕೆ. ಪೆರಾಡಿ ಅರ್ಥಧಾರಿಗಳಾಗಿದ್ದರು.