ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ‘ಬ್ಯಾರಿ ಸಾಹಿತ್ಯ ಕಮ್ಮಟ’ವು ದಿನಾಂಕ 27-02-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನವಮಂಗಳೂರು ಬಂದರು ಮಂಡಳಿಯ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರುಬಾವಿ ಇವರು ಮಾತನಾಡುತ್ತಾ “ಅಕ್ಷರ ಜ್ಞಾನವಿಲ್ಲದ ಕಾಲದಲ್ಲೂ ಬ್ಯಾರಿ ಭಾಷೆಯಲ್ಲಿ ಅಲಿಖಿತ ಸಾಹಿತ್ಯವಿತ್ತು. ಅಕ್ಷರ ಜ್ಞಾನ ಪಡೆದ ಬಳಿಕ ಬ್ಯಾರಿ ಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆಯಾಗಿವೆ. ಬ್ಯಾರಿ ಭಾಷೆ ಉಳಿಸಿ ಬೆಳೆಸುವ ಸಲುವಾಗಿ ಯುವ ಪೀಳಿಗೆಯು ಬ್ಯಾರಿ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ರಚಿಸುವ ಮೂಲಕ ಬ್ಯಾರಿ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು. ಬ್ಯಾರಿ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಅಳಿವಿನಂಚಿನಲ್ಲಿರುವ ಈ ಭಾಷೆ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಸಮಕಾಲೀನರಿಂದ ನಡೆದಿದೆ. ಮುಂದಿನ ಪೀಳಿಗೆಯು ಇದನ್ನು ಬೆಳೆಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಕವಿ ಮುಹಮ್ಮದ್ ಬಡ್ಡೂರು ಮತ್ತು ಯುವ ಲೇಖಕಿ ಫಾತಿಮಾ ರಲಿಯಾ ಹೆಜಮಾಡಿ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ಬಿ.ಎ. ಮುಹಮ್ಮದ್ ಹನೀಫ್, ಸಮೀರಾ ಕೆ.ಎ., ಡಾ. ಇಸ್ಮಾಯಿಲ್ ಎನ್., ಹಂಝ ಮಲಾರ್, ಮೊಯ್ದಿನ್ ಬಾದ್‌ಷಾ ಸಂಬಾರತೋಟ ಉಪಸ್ಥಿತರಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ವಂದಿಸಿ, ಉಪನ್ಯಾಸಕಿ ಶಹಲಾ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.